ಹನಿ ಹನಿ ಯಶಸ್ಸು ಸೇರಿ ನಿರ್ಮಾಣವಾದ ಅಪೂರ್ವ ರೆಸಾರ್ಟ್

 ದಾವಣಗೆರೆಯ ಲ್ಯಾಂಡ್ ಮಾರ್ಕ್ ಅಪೂರ್ವ ರೆಸಾರ್ಟ್‌

ಸಣ್ಣ ಸಣ್ಣ ಯಶಸ್ಸು ವ್ಯಕ್ತಿಯೊಬ್ಬನ ಆತ್ಮವಿಶ್ವಾಸ ಹೆಚ್ಚಿಸಿ ಎತ್ತರೆತ್ತರಕ್ಕೆ ಏರಲು ಹೇಗೆ ಸಹಕಾರಿ ಆಯಿತು ಎಂಬುದಕ್ಕೆ ದಾವಣಗೆರೆ ಹೊಟೇಲ್ ಉದ್ಯಮಿ ಅಣಬೇರು ರಾಜಣ್ಣ ಒಂದು ನಿದರ್ಶನ.
ಪೂಣಾ-ಬೆಂಗಳೂರು ಹೆದ್ದಾರಿಯಲ್ಲಿ ದಾವಣಗೆರೆಯ ಲ್ಯಾಂಡ್ ಮಾರ್ಕ್ ಆಗಿ ಗಮನ ಸೆಳೆಯುವ ಅಪೂರ್ವ ರೆಸಾರ್ಟ್‌ನ ರಾಜಣ್ಣ  ಕರಾವಳಿಯವರೇನೂ ಅಲ್ಲ. ಹೊಟೇಲ್ ಉದ್ಯಮ ಇವರಿಗೆ ಕೌಟುಂಬಿಕ ಬಳವಳಿಯೂ ಅಲ್ಲ. ಚಿಕ್ಕದೊಂದು ಯಶಸಸ್ಸು ಕೊಟ್ಟ ಆತ್ಮ ವಿಶ್ವಾಸ ಅವರನ್ನು ಈ ಹಂತದಲ್ಲಿ ತಂದು ನಿಲ್ಲಿಸಿದೆ.
25 ವರ್ಷ ಹಿಂದೆ :
ದಲ್ಲಾಳಿ ಮಂಡಿ/ಹತ್ತೈವತ್ತು ಎಕರೆ ಹೊಲಮನೆಯ ಗೌಡಿಕೆ ಕುಟುಂಬದ ಹಿನ್ನೆಲೆಯ ರಾಜಣ್ಣ  ಆಹಾರ ಧಾನ್ಯಗಳ ಸಗಟು ವ್ಯಾಪಾರಿಯಾಗಿ ತಮ್ಮ ವೃತ್ತಿ ಆರಂಭಿಸಿದರು. ಬಿಎ ನಂತರ ಮನೆತನದ ವ್ಯಾಪಾರದ ವಿಸ್ತಾರಕ್ಕಾಗಿ ದೇಶದ ಪ್ರಮುಖ ನಗರ ಸುತ್ತಿಕೊಂಡಿದ್ದಾಗ, ತಾವೂ ಒಂದು ಹೊಟೇಲ್ ಮಾಡುವ ಆಲೋಚನೆ ಹೊಳೆಯುತ್ತದೆ. ಇವರ ಜೀವನದ ದಿಕ್ಕು ಬದಲಿಸುವ ಸಣ್ಣ  ನಿದರ್ಶನವನ್ನು ಅವರೇ ಒಮ್ಮೆ ಹೇಳಿದರು.

‘‘ಸಗಟು ತುಂಬಿದ ಲಾರಿಯನ್ನು ಕೇರಳದಲ್ಲಿ ಹೊಟೇಲ್ ಒಂದಕ್ಕೆ ತಲುಪಿಸಲು ಹೋಗಿದ್ದೆ. ನಾನು ಇಳಿದುಕೊಂಡ ಹೊಟೇಲ್‌ಗೆ ಮಾಲು ಸರಬರಾಜು ಮಾಡಿ, ಮತ್ತೊಮ್ಮೆ ಹಣ ವಸೂಲಿಗೆ ಅಲ್ಲಿಗೆ ಹೋಗುವುದು ಆ ವ್ಯವಹಾರದ ರೀತಿ. ನಾನು ಇಳಿದುಕೊಂಡ ಹೊಟೇಲ್ ವ್ಯವಹಾರ ಮಾತ್ರ ಕ್ಯಾಶ್ ಎಂಡ್ ಕ್ಯಾರಿ !
ಆ ಹೊಟೇಲ್‌ನ ತಿಂಡಿಯ ಬಿಲ್ಲು, ಲಾಜ್ ಬಾಡಿಗೆಯನ್ನು ಮಾತ್ರ ಆಗಿಂದಾಗ್ಗೆ  ಪಾವತಿ ಮಾಡಿಬರಬೇಕಿತ್ತು.ಯಾವತ್ತೂ ಹೊಟೇಲ್ ಉದ್ಯಮದಲ್ಲಿ ಉದ್ರಿ ಇಲ್ಲ. ವಸೂಲಿಗಾಗಿ ಓಡಾಡುವ ಸಗಟು ವ್ಯಾಪಾರಕ್ಕಿಂತ ಹೊಟೇಲ್ ಉದ್ಯಮ ಆಕರ್ಷಣೆಯಾಗಿ ನನಗೆ ಕಂಡಿತು. ಅದಕ್ಕಾಗಿ ನಾನೂ ಒಂದು ಹೊಟೇಲ್ ಮಾಡಬೇಕು ಎಂದು ಅಲ್ಲಿಯೇ ತೀರ್ಮಾನಿಸಿದೆ’’
ಮಾಡಬೇಕು ಎನಿಸದ ನಂತರ ಸುಮ್ಮನೇ ಆಲೋಚಿಸುತ್ತು ಕುಳಿತುಕೊಳ್ಳುವ ಜನ ಇವರಲ್ಲ.
ದಾವಣಗೆರೆಗೆ ಬಂದವರೆ ಅನುಭವ ಮಂಟಪ ಶಾಲೆಯಲ್ಲಿ ಖಾಲಿ ಬಿದ್ದ ಕ್ಯಾಂಟೀನ್ ಒಂದನ್ನು ಗುತ್ತಿಗೆ ಹಿಡಿದು, ಪರಿಚಿತ ಹಾಗೂ ನಳಪಾಕಿ ಅಡುಗೆ ಭಟ್ಟರೊಬ್ಬರನ್ನು ಉತ್ತಮ ಸಂಬಳದೊಂದಿಗೆ ನೇಮಿಸಿ ಟಿಫಿನ್ ಸೆಂಟರ್ ಒಂದನ್ನು ಆರಂಭಿಸುತ್ತಾರೆ. ತಿಂಡಿ ತಿನಿಸುಗಳನ್ನು ತಾನು ಖುದ್ದಾಗಿ ಸವಿದು ಖುಷಿಪಟ್ಟ , ಉತ್ತಮ ಕೈರುಚಿಯ ಭಟ್ಟರನ್ನು ಅಡುಗೆಯ ಉಸ್ತುವಾರಿಗೆ ನೇಮಿಸಿದ್ದು, ಕ್ಯಾಂಟೀನ್‌ದಲ್ಲಿ  ಸ್ವಚ್ಛ ಹಾಗೂ ಶುದ್ಧತೆಗೆ ಮೊದಲ ಆದ್ಯತೆ ನೀಡಿದ್ದು  ಇವರಿಗೆ ಫಲ ಕೊಟ್ಟಿತು. ಆರು ತಿಂಗಳಲ್ಲಿ ಹಾಕಿದ ಬಂಡವಾಳ ವಾಪಸ್.
ಸಣ್ಣದೊಂದು ಕ್ಯಾಂಟೀನ್ ಸಕ್ಸಸ್ ಆಗಿದ್ದು ರಾಜಣ್ಣರ ಮೊದಲ ಯಶಸ್ಸು. ನಂತರ ಹಳೆಯ ದಾವಣಗೆರೆ, ಪಿಬಿ ರೋಡಿನಲ್ಲಿ  ಹೆಗಲು ಕೊಡುವವರಿಗಾಗಿ ಕಾಯುತ್ತಿದ್ದ  ಹೊಟೇಲ್‌ಗಳನ್ನು ಒಂದಾದ ನಂತರ ಒಂದರಂತೆ ವಹಿಸಿಕೊಂಡರು. ಹೊಸ ಆಕರ್ಷಣೆಗಳೊಂದಿಗೆ ದಾವಣಗೆರೆಯಲ್ಲಿ ಒಂದೇ ದಶಕದಲ್ಲಿ ಹೊಟೇಲ್ ಉದ್ಯಮಿಯಾಗಿ ಗುರುತಿಸಕೊಂಡರು.
 ಕೊನೆಯದಾಗಿ ಅಪೂರ್ವ ರೆಸಾರ್ಟ್‌ಗೆ ಕೈ ಹಾಕುವ ಹೊತ್ತಿಗೆ ಹದಿನೈದು ವರ್ಷದ ಅನುಭವ ಹಾಗೂ ಶತಕೋಟಿಯಷ್ಟು ಆತ್ಮ ವಿಶ್ವಾಸ ಅವರಲ್ಲಿ  ಇತ್ತು. ಅಲ್ಲದೆ ಒಂದಿಷ್ಟು ಅಸೆಟ್ ಕೂಡ ಇತ್ತು.
ಆದಾಯದಲ್ಲಿ ಬಂದ ಹಣದಲ್ಲಿ  ಊರಿಂದ ಆಚೆ ಬಾಡಾ ಕ್ರಾಸ್‌ನಲ್ಲಿ  ಒಂದಿಷ್ಟು ಜಾಗದ ಮೇಲೆ ಹೂಡಿದ್ದರು. ಇವರ ಅಂದಾಜಿನಂತೆ ಜಾಗಕ್ಕೆ ಬೇಡಿಕೆ ಬಂದಿರಲಿಲ್ಲ. ನಗರದ ದೊಡ್ಡ ದೊಡ್ಡ ಉದ್ಯಮಿಗಳಿಗೆ ಕೇಳಿಕೊಂಡರೂ ಇದರ ಖರೀದಿಗೆ ಯಾರೂ ಮುಂದೆ ಬರಲಿಲ್ಲ.  ಈ ಜಾಗವನ್ನು ಮಾರುವ ಬದಲು ಒಂದು ರೆಸಾರ್ಟ್ ಕಟ್ಟಿದರೆ ಹೇಗೆ ಎಂಬ ಆಲೋಚನೆಯೂ ಅಚಾನಕ್ಕಾಗಿ ಬರುತ್ತದೆ. ಆದರೆ ಇದೂ ಒಂದು ದೊಡ್ಡ ಸಾಹಸದ ಕೆಲಸವೇ ಆಗಿತ್ತು.
ರೆಸಾರ್ಟ್ ಕಟ್ಟುವ ಮೊದಲು ಸಾಕಷ್ಟು ಗ್ರೌಂಡ್ ವರ್ಕ್ ಮಾಡಿಕೊಂಡಿದ್ದರೂ, ಪೂಣಾ ಬೆಂಗಳೂರು ರಸ್ತೆ ಪಕ್ಕದಲ್ಲಿ ರೆಸಾರ್ಟ್ ಕಟ್ಟುವ ಮೊದಲು ದೇಶ ವಿದೇಶದ ರೆಸಾರ್ಟ್‌ಗಳಿಗೆ ಭೇಟಿ ನೀಡಿ ಅಲ್ಲಿನ ಕೊಠಡಿಗಳನ್ನು, ಅಡುಗೆ ಮನೆಯನ್ನು ಹಾಗೂ ಟಾಯ್ಲೆಟ್‌ಗಳನ್ನು ಸಂದರ್ಶಿಸಿದ್ದರು.

ಅಷ್ಟರಲ್ಲೇ ದೇಶದ ಎಲ್ಲೆಡೆಯ ಸ್ಟಾರ್ ಹೊಟೇಲ್‌ಗಳನ್ನು ಸುತ್ತಿ, ಜನರು ಯಾಕಾಗಿ ಹೊಟೇಲ್‌ಗೆ ಬರುತ್ತಾರೆ. ಏನನ್ನು ನಿರೀಕ್ಷಿಸುತ್ತಾರೆ ಎಂಬುದನ್ನೆಲ್ಲ ತಿಳಿದು ರಕ್ತಗತ ಮಾಡಿಕೊಂಡಿದ್ದರು.
ರೆಸಾರ್ಟ್ ಎಂಬ ಕನಸಿಗೆ ಅವರಲ್ಲಿ ಇದ್ದ ಬಂಡವಾಳ ಎಂದರೆ ಹೆದ್ದಾರಿ ಪಕ್ಕದಲ್ಲಿ ಒಂದಿಷ್ಟು ಖಾಲಿ ಜಾಗ, ಅದಕ್ಕಿಂತ ಹೆಚ್ಚಾಗಿ ಒಂದಾದ ಮೇಲೊಂದು ನಾಲ್ಕು ಯಶಸ್ವೀ ಹೊಟೇಲುಗಳನ್ನು ಕಟ್ಟಿದ ಆತ್ಮ ವಿಶ್ವಾಸ ಮಾತ್ರ.
ಇದೇ ಹಿನ್ನೆಲೆಯಲ್ಲಿ  ರೂಪು ಪಡೆದ ಅಪೂರ್ವ ಇದೀಗ ಪೂಣಾ ಬೆಂಗಳೂರು ಹೆದ್ದಾರಿಯ ಒಂದು ಅಪರೂಪದ ಆಯ್ಕೆಯ ತಾಣವಾಗಿದೆ. ಅಷ್ಟೇ ಸ್ವತಂತ್ರ ಹಾಗೂ ಯಶಸ್ವೀ ಉದ್ಯಮವಾಗಿದೆ.
-ಸದಾನಂದ ಹೆಗಡೆ




Related Posts
Previous
« Prev Post

1 ಕಾಮೆಂಟ್‌(ಗಳು)

ಡಿಸೆಂಬರ್ 21, 2017 ರಂದು 05:51 ಪೂರ್ವಾಹ್ನ ಸಮಯಕ್ಕೆ

ರಾಜಣ್ಣನ ಸುತ್ತಾಟವೇ ಹೊಸ ದಾರಿಯಾದ ರೀತಿ ಇತರರಿಗೂ ಮಾದರಿ... ತುಂಬಾ ಒಳ್ಳೆಯ ಬರಹ ಸರ್...

Reply
avatar