ಹೊಂಗೆ ಹೂವ ತೊಂಗಲಲ್ಲಿ ಯುಗಾದಿಯ ಝೇಂಕಾರ

ಯುಗಾದಿಯ ಝೇಂಕಾರ

ವರ ಕವಿ ಬೇಂದ್ರೆಯವರ ‘ಯುಗ ಯುಗಾದಿ ಕಳೆದರೂ..’ ಕವನವು ಒಂದು ಬಹುಶ್ರುತ ಹಾಡು. ಯುಗಾದಿ ಹಬ್ಬದಲ್ಲಿ  ಪ್ರತಿ ವರ್ಷವೂ ನಾವೆಲ್ಲ ಕೇಳಿಯೇ ಕೇಳುತ್ತೇವೆ. ಈ ವರ್ಷವೂ ಯುಗಾದಿ ಹಾಡನ್ನು  ಮತ್ತೆ ಕೇಳುವ ಪರ್ವಕಾಲ ತುಸು ಡಿಫರಂಟ್ ಆಗಿ ಬಂದಿದೆ. ಕವನದ ಒಂದು ಸಾಲನ್ನು  ಇಟ್ಟುಕೊಂಡು ಕವಿ ಕಲ್ಪನೆಯನ್ನು  ಬರಗಾಲದ ವಿಭಿನ್ನ  ವಾಸ್ತವದೊಂದಿಗೆ ಸಮೀಕರಿಸುವ ಸಣ್ಣ ಪ್ರಯತ್ನ  ಇಲ್ಲಿದೆ. ಕವನದ ಪಲ್ಲವಿ ಮುಗಿಯುತ್ತಲೇ ಬರುವ ಸಾಲುಗಳು ಹೀಗಿವೆ ನೋಡಿ...
ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ,
ಮತ್ತೆ ಕೇಳಿ ಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ.

-ಹೀಗೆ. ಕವಿ ಹೇಳುವಂತೆ ಈ ವರ್ಷವೂ ಬರದ ನಡುವೆ ಭೃಂಗದ ಸಂಗೀತ ಕೇಳಿಸುತ್ತಿದೆ.  ಯುಗಾದಿ ಹಬ್ಬದ ಕಾಲಕ್ಕೆ ಸರಿಯಾಗಿ ಎಲ್ಲೆಡೆಯ ಹೊಂಗೆ ಮರಗಳು ಚಿಗುರಿ, ಮೊಗ್ಗು ಹೂವಿನೊಂದಿಗೆ ಕಂಗೊಳಿಸುತ್ತಿವೆ ತಾನೆ ? ಅದರಲ್ಲೂ ಈ ವರ್ಷ ಹೊಂಗೆ ಮರಗಳು, ಎಲ್ಲಿಲ್ಲದ ಜೀವಕಳೆಯಿಂದ ಕಂಗೊಳಿಸುತ್ತಿವೆ ! ತರಹೇವಾರಿ ಜೇನು ಹುಳುಗಳು ಹೊಂಗೆ ಹೂವಿನ ಸಿಹಿಯನ್ನು ಹೀರುತ್ತ ಸಂಗೀತದ ಝಂಕಾರವನ್ನು ಉಂಟುಮಾಡುತ್ತಿವೆ. ಹಾಗೆ ಬರಗಾಲದಲ್ಲೂ  ಹೊಂಗೆ ಮರದಲ್ಲಿ ಯುಗಾದಿ ನವ ನವೋನ್ಮೇಷಶಾಲಿಯಾಗಿ ಮರಳಿದೆ.
ಆದರೆ ನಾವು ಆಲೋಚಿಸುವುದೇನು ? ಕಳೆದ ಬಾರಿಯೂ ಮಳೆ ಸರಿಯಾಗಿಲ್ಲ. ಅಷ್ಟೇ ಅಲ್ಲ. ವಿಪರೀತ ಬೋರ್‌ವೆಲ್ ಕೊರೆತದ ಪರಿಣಾಮ ಭೂಮಿಯಲ್ಲಿ ಅಂತರ್ಜಲ ಬತ್ತಿದೆ. ಆಹಾರ ಧಾನ್ಯಗಳು ಸಮೃದ್ಧವಾಗಿಲ್ಲ. ಸಮೃದ್ಧಿ ಇರಲಿ, ಬೆಳೆಯೇ ಬಂದಿಲ್ಲ. ಬೆಳೆ ವಿಮೆಯೂ ಬಂದಿಲ್ಲ. ಕುಡಿವ ನೀರಿಲ್ಲ. ಇದೇ ವರ್ಷ ಬೇಸಿಗೆಯ ಬಿಸಿಲು ಬೆಂಕಿಯನ್ನೇ ನಾಚಿಸುತ್ತಿದ್ದು, ಇದೊಂದು ಬಾರಿ ಅಡಕೆ ತೋಟಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸಾಹಸ. ಲಕ್ಷಾಂತರ ರೂ. ಸಾಲ ಮಾಡಿ ಕಟ್ಟಿದ ಅಡಕೆ ತೋಟ ಒಣಗುತ್ತಿದೆ. ತುಂಗಭದ್ರೆ ತಟದಲ್ಲಿ  ಭತ್ತಕ್ಕೆ ನೀರಿಲ್ಲ. ಎಂಥ ಬರಗಾಲ. ಛೆ ಎಂಥ ಸೆಕೆ.. ಎಂಬ ಹತ್ತು ಹಲವು ನಿರಾಸೆಯ ನಡುವೆಯೂ ಕವಿ ವಾಣಿಯಂತೆ, ಹೊಂಗೆ ಮಾತ್ರ ಎಲ್ಲೆಡೆ ವಿಜೃಂಭಿಸುತ್ತಿದೆ !
ನೀರಿಲ್ಲದೆ, ಅಂತರ್ಜಲ ಬತ್ತಿದರೂ ಹೊಂಗೆಯ ಈ ಪರಿಯ ಜೀವಕಳೆಯಲ್ಲಿ  ಜೀವನ ಪ್ರೀತಿಯ ಸತ್ಯವೊಂದು ಅಡಗಿರಬಹುದೇ ? ನಾವಿಂದ ಆಲೋಚಿಸ ಬೇಕಾದ ವಿಷಯ ಇದು. ನಮ್ಮ ದೈನಂದಿನ ಕ್ಷಣ ಭಂಗುರದಿಂದ ತುಸು ಆಚೆ ಬರಬೇಕು. ಯುಗಾದಿಯ ಕಾರಣಕ್ಕೆ ತುಸು ಆಚೆ ಬರಬಾರದೇ ? ಕನಿಷ್ಠ ನೀರಿನ ಪಸೆಯಲ್ಲೂ , ತನುತುಂಬಿ, ಮನ ತುಂಬಿ, ಚಿತ್ತ ಚೇತನಗಳನ್ನೆಲ್ಲ ತುಂಬಿಕೊಳ್ಳುವ ಹೊಂಗೆ ಬರದ ನಾಡಿನಲ್ಲಿ ಬದುಕು ಹೇಗಿರಬೇಕು, ಪೃಕೃತಿಯೊಂದಿಗೆ ಹೊಂದಿಕೊಂಡರೆ ಯುಗಾದಿಯ ವೈಭವ ಹೇಗೆ ಮತ್ತೆ ಆವಿರ್ಭವಸೀತು ಎಂಬುದನ್ನು  ಸಾರುತ್ತಿದೆ. ಕೇಳ್ರಪ್ಪೋ ಕೇಳಿ.. ಎನ್ನುತ್ತಿದೆ.
ಮಧ್ಯ ಕರ್ನಾಟಕದ ಈ ಭಾಗದಲ್ಲಿ ಎಲ್ಲಿ ಹೋದರೂ ಹೊಂಗೆ, ಬೇವು, ಹುಣಸೆ ಮರಗಳಿಗೆ ಕೊರತೆ ಇಲ್ಲ. ಹಾಗೆ ನೋಡಿದರೆ ಇಲ್ಲಿನ ಭೂ ಗುಣಕ್ಕೆ ಅತ್ಯಂತ ಹೊಂದುವ ಮರಗಳು ವುಗಳನ್ನು ಬಿಟ್ಟರೆ ಬೇರೆ ಇಲ್ಲ. ದೇವರ ಪೂಜೆಗೆ ಅತಿ ಶ್ರೇಷ್ಠವಾದ ಬಿಲ್ವಪತ್ರೆ ಇರಬಹದು ಹಾಗೇ ಯಕ್ಕದ ಗಿಡಗಳು. ಕಕ್ಕೆ ಮರಗಳು ಬರಗಾಲದ ಕುರಿತು ಗೊಣಗದೆ ವಿಜೃಂಬಿಸುತ್ತಿವೆ. ಮಳೆ ಇಲ್ಲದಿದ್ದರೂ ಫಲಿತಗೊಂಡು ಸಂಭ್ರಮಿಸುತ್ತವೆ. ಭೂಮಿಯ ಅತ್ಯಂತ ಕನಿಷ್ಠ ತೇವದಲ್ಲೂ , ಅತಿ ಹೆಚ್ಚು ಬಿಸಿಲುನ್ನು ಎದುರಿಸಿ  ಈ ಮರಗಳು ಹಳೆಯ ಎಲೆ ಉಕ್ಕಿಸಿ, ಜೀವಂತಿಕೆ ಪಡೆಯುವ ರೀತಿಯಲ್ಲಿ  ಪೃಕೃತಿಗೆ ಹೊಂದಿಕೊಂಡಿವೆ.
ಸುಖ ಎಲ್ಲಿದೆ, ಸಂತಸ ಎಲ್ಲಿದೆ ಎಂಬುದನ್ನು  ನಿರಂತರ ಹುಡುಕುವ ಮನುಷ್ಯನಿಗೆ ಇಲ್ಲೊಂದು ಸರಳ ಪಾಠ ಇದೆ.
ಪೃಕೃತಿಯೊಂದಿಗೆ ಬದುಕು ಅರಳಿಸಿಕೊಳ್ಳುವ ಪಾಠ. ನಮ್ಮ ಅಭಿವೃದ್ಧಿ ಕೃಷಿ ಅಥವಾ ನೀರಾವರಿ ಸಾಧ್ಯತೆಗಳು ಪ್ರಕೃತಿಯನ್ನು ಹೊಂದಿಕೊಂಡು ಇರಬೇಕು. ಭತ್ತದ ಜತೆ ಸಹಜ ಕೃಷಿಯ ಸಿರಿದಾನ್ಯ ಕೃಷಿಯನ್ನೂ ಆರಂಭಿಸುವಂತಾಗಬೇಕು. ನಿಸರ್ಗ ಸಹಜವಾಗಿ ನೀರನ್ನು ಶೇಖರಿಸಿಟ್ಟುಕೊಂಡು ಕನಿಷ್ಠ ಬಳಸಬೇಕು.
ಯಾಂತ್ರಿಕತೆಯ ಜತೆ ಒಂದಿಷ್ಟು ದೈಹಿಕ ಶ್ರಮ, ವ್ಯಾಯಾಮ ಬೇಕು. ಅಲ್ಲದೆ ಕನಿಷ್ಠ  ಹಣಕಾಸಿನ ಸಾಧ್ಯತೆಯಲ್ಲೂ  ಬದುಕುವ, ಕಾಲಕಾಲಕ್ಕೆ  ಜೀವನವನ್ನು ಹುರುಪುಗೊಳಿಸುವ ಜಾಣ್ಮೆ  ಇರಲೇ ಬೇಕು. ಕಷ್ಟಗಳು, ದೈಹಿಕ ಶ್ರಮ, ಬಿಸಿಲು ಬೇಗೆಗಳು, ಬದುಕಿನ ಉದಾಸೀನವನ್ನು, ಮನೋ ರೋಗವನ್ನು  ಉಪಶಮನಗೊಳಿಸುವ ಔಷಧ ಎಂದು ಗೃಹಿಸಬೇಕು. ನಮ್ಮ ಜೀನವಾವುಭವ ಹೊಂಗೆಯಂತೆ ಗಟ್ಟಿಯಾಗಿದ್ದರೆ ಎಲ್ಲರಿಗೂ ಯುಗಾದಿ ಸಹಜ ರೀತಿಯಲ್ಲಿ  ಹಬ್ಬವನ್ನು ಸಾಕಾರಗೊಳಿಸುತ್ತದೆ. ಎಲ್ಲರಿಗೂ ಯುಗಾದಿಯ ಶುಭ ಹಾರೈಕೆ.
-ಸದಾನಂದ ಹೆಗಡೆ

Related Posts
Previous
« Prev Post