ವಿದ್ಯಾರ್ಥಿಯ ಪ್ರಬಂಧ ಕದ್ದ ಪ್ರಾಧ್ಯಾಪಕ

ವಿದ್ಯಾರ್ಥಿಯ ಪ್ರಬಂಧ ಕದ್ದ ಪ್ರಾಧ್ಯಾಪಕ


**
ಹೈಲೈಟ್ಸ್
*ಎಂಫಿಲ್ ಪ್ರಬಂಧ ‘ಪುರಂದರ ದಾಸರ ಪ್ರತಿಮಾ ಜಗತ್ತು’
* ಕೃತಿ ಚೌರ್ಯದ ಕೃತಿ ‘ದಾಸ ಸಾಹಿತ್ಯದ ಭಾಷೆ’
*ಕೃತಿ ಚೌರ್ಯ ಮಾಡಿ ಹೊರಬಂದ ಕೃತಿಗೆ ಹಂಪಿ ವಿವಿಯ ದಾಸ ಸಾಹಿತ್ಯ ಅಧ್ಯಯನ ಪೀಠದ ಅನುದಾನ
* ಸುಮಾರು 50 ಪುಟಗಳು ಯಥಾವತ್ ನಕಲು
* ಹಸ್ತಪ್ರತಿ ರಕ್ಷಿಸಬೇಕಾದ ಪ್ರಾಧ್ಯಾಪಕರಿಂದಲೇ ಕೃತಿ ಭಕ್ಷಣೆ

***
ದಾಖಲೆ ಸಹಿತ ದೂರು ನೀಡಿದರೂ ಮೌನವಾಗಿರುವ ಕುಲಪತಿ  
ಸದಾನಂದ ಹೆಗಡೆ ಹರಗಿ
ದಾವಣಗೆರೆ : ಹಂಪಿ ಕನ್ನಡ ವಿವಿಗೆ ವಿದ್ಯಾರ್ಥಿಯೊಬ್ಬರು ತಮ್ಮ ಎಂಫಿಲ್ ಪದವಿಗಾಗಿ ಸಲ್ಲಿಸಿದ್ದ  ಪ್ರಬಂಧವನ್ನೇ ಕಳವು ಮಾಡಿ ಅದೇ ವಿವಿಯ ಹಸ್ತಪ್ರತಿ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರೊಬ್ಬರು ತಮ್ಮ ಪುಸ್ತಕವೊಂದರಲ್ಲಿ  ಯಥಾವತ್ ನಕಲು ಮಾಡಿದ್ದಾರೆ.
ವಿಶೇಷ ಎಂದರೆ ಕೃತಿ ಚೌರ್ಯದ ಬಗ್ಗೆ  ವಿದ್ಯಾರ್ಥಿ ದಾಖಲೆ ಸಮೇತ ಸ್ವತಃ ಅಲ್ಲಿನ ಕುಲಪತಿಗಳಿಗೆ ದೂರು ನೀಡಿ ಕೆಲವು  ತಿಂಗಳು ಕಳೆದರೂ ಇನ್ನೂ  ಉತ್ತರ ಬಂದಿಲ್ಲ. ಈ ನಡುವೆ ಮಾಹಿತಿ ಕಳವು ಮಾಡಿದ ಲೇಖಕರು ಪ್ರಬಂಧ ಸಿದ್ಧಪಡಿಸಿದ ಎಂಫಿಲ್ ವಿದ್ಯಾರ್ಥಿಗೆ ನೇರವಾಗಿ ಪತ್ರವೊಂದನ್ನು ಕಳುಹಿಸಿ ಪ್ರಕರಣವನ್ನೇ ಮುಚ್ಚಿಹಾಕಲು ಪ್ರಯತ್ನಿಸುವುದು ಗಮನಕ್ಕೆ ಬಂದಿದೆ.
ಕೃತಿ ಚೌರ್ಯ ಮಾಡಿದವರು ಹಂಪಿ ವಿವಿ ಹಸ್ತಪ್ರತಿ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎಸ್.ಎಸ್. ಅಂಗಡಿ. ಕಳವಾಗಿದ್ದು ಮೂಡುಬಿದಿರೆಯಲ್ಲಿ ಹಾಲಿ ಕನ್ನಡ ಪ್ರಾಧ್ಯಾಪಕರಾದ ಪ್ರವೀಣ್ ಪಿ. ಎಂಬವರ ಎಂಫಿಲ್ ಪ್ರಬಂಧ. ಈ ನಡುವೆ ಎಂಫಿಲ್ ಕೃತಿ  ಕೃತಿ ಚೌರ್ಯ ಮಾಡಿದ ಪ್ರಾಧ್ಯಾಪಕರು ವಿವಿಯ ಕುಲಸಚಿವರಿಗೆ  ಬರೆದ ಕ್ಷಮಾಪಣಾ ಪತ್ರದ ಒಂದು ಪ್ರತಿಯ ಪ್ರವೀಣ್ ಅವರಿಗೂ ಕಳುಹಿಸಿದ್ದಾರೆ.  ತನಗಾದ ಅನ್ಯಾಯದ ಬಗ್ಗೆ  ಪತ್ರ ಬರೆದ ಪ್ರವೀಣ್‌ಗೆ ವಿವರಣೆ ಕೇಳಲು ಕುಲಪತಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ  ಎನ್ನಲಾಗಿದ್ದು, ಈ ನಡುವೆ ಕುಲಸಚಿವರಿಗೆ ಬರದ ಪತ್ರದ ಪ್ರತಿ ಕಳುಹಿಸಿದ ಲೇಖಕಕರು ‘..ದಯವಿಟ್ಟು ಕ್ಷಮಿಸಿ’ ಎಂದಷ್ಟೇ ಹೇಳಿ ಪ್ರವೀಣ್‌ಅವರಿಗೆ  ಅಂಗಲಾಚಿ ಪ್ರಕರಣ ಮುಗಿಸುವ ಪ್ರಯತ್ನ ದಲ್ಲಿದ್ದಾರೆ ಎಂದು ಹಂಪಿ ವಿವಿಯಲ್ಲಿ  ಈ ಮಾಹಿತಿ ನೀಡಿದ ಮೂಲವೊಂದು ತಿಳಿಸಿದೆ.
ಇದೆಲ್ಲ ಆರಂಭವಾಗಿದ್ದು  2009ರಲ್ಲಿ. ಮೂಡುಬಿದಿರೆಯ ಕಾಲೇಜೊಂದರಲ್ಲಿ  ಹಾಲಿ ಕನ್ನಡ ಪ್ರಾಧ್ಯಾಪಕರಾಗಿರುವ ಪ್ರವೀಣ್ ಪಿ. ಅವರು 2009ರಲ್ಲಿ  ‘ಪುರಂದರ ದಾಸರ ಪ್ರತಿಮಾ ಜಗತ್ತು’ ಎಂಬ ಎಂಫಿಲ್ ಪ್ರಬಂಧವೊಂದನ್ನು ಪದವಿಗಾಗಿ ಸಲ್ಲಿಸಿದ್ದರು. ಕ್ರಮದಂತೆ ಎರಡು ಪ್ರತಿಯನ್ನು ವಿವಿಗೆ ಸಲ್ಲಿಸಿ ಒಂದನ್ನು ತನ್ನಲ್ಲಿ  ಇಟ್ಟುಕೊಂಡಿದ್ದರು. ಎಂಫಿಲ್ ಪದವಿಗೆ ಹಿರಿಯ ಸಂಶೋಧಕ ಪ್ರೊ.ಎ.ವಿ.ನಾವಡರು ಮಾರ್ಗದರ್ಶಕರಾಗಿದ್ದು, ಅದೇ ವರ್ಷ ಪ್ರವೀಣ್‌ಗೆ ಪದವಿ ಕೂಡ ದೊರಕಿತು. ಈ ನಡುವೆ 2010ರಲ್ಲಿ ಹಸ್ತಪ್ರತಿ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎಸ್.ಎಸ್.ಅಂಗಡಿ  ‘ದಾಸ ಸಾಹಿತ್ಯದ ಭಾಷೆ’ ಎಂಬ ಒಂದು ಪುಸ್ತಕವನ್ನು ಹೊರತಂದರು. ಇದನ್ನು ಹಂಪಿ ವಿವಿಯೇ ಪ್ರಕಟಿಸಿದ್ದು ಒಟ್ಟೂ 360ಪುಟಗಳ ಪುಸ್ತಕ ಇದು. ಪುರಂದರ ದಾಸ ಅಧ್ಯಯನ ಪೀಠ ಪ್ರಕಟಿಸಿದ ಈ ಕೃತಿಗೆ ಯುಜಿಸಿ ಅನುದಾನ ಕೂಡ ದೊರೆತಿದೆ. ಪುಸ್ತಕದ ಪ್ರಮುಖ ಭಾಗದಲ್ಲಿ  ಪ್ರವೀಣ್ ಅವರ ಪ್ರಬಂಧವನ್ನು ಯಥಾವತ್ತಾಗಿ ಪ್ರಕಟಿಸಿದ್ದರೂ, ಅವರ ಅನುಮತಿಯನ್ನು ಕೇಳಿಲ್ಲ, ಎಲ್ಲಿಯೂ ಅವರ ಹೆಸರು ಕೂಡ ಉಲ್ಲೇಖ ಇಲ್ಲ. ಆದರೆ ನಕಲು ಮಾತ್ರ ಹೂಬಹೂಬಾಗಿದೆ. ಪುಸ್ತಕದ ‘ದಾಸಸಾಹಹಿತ್ಯ; ಶಬ್ದಚಿತ್ರಗಳು’ ಎನ್ನುವ ಅಧ್ಯಾಯದ ಮೊದಲ ಭಾಗದಲ್ಲಿ , ಅಂದರೆ ಪುಟ 124ರಿಂದ 130 ರ ವರೆಗೆ ಹಾಗೂ ಕತಿಯ 11ನೇ ಅಧ್ಯಾಯದ ಪುಟ ಸಂಖ್ಯೆ 167ರಿಂದ 208ರ ವರೆಗೆ ಪೂರ್ತಿ ನಕಲಾಗಿದೆ. ನಕಲು ಎಷ್ಟು ತಾಜಾ ಆಗಿದೆ ಎಂದರೆ ಎಲ್ಲೋ ಒಂದೆರಡು ಪದವು ಅಕ್ಷರ ಜೋಡಣೆಯ ತಪ್ಪಿನಿಂದಾಗಿ ಬದಲಾಗಿದ್ದು ಬಿಟ್ಟರೆ ಉಳಿದೆಲ್ಲವನ್ನೂ ಯಥಾವತ್ತಾಗಿ ಪ್ರಕಟಿಸಲಾಗಿದೆ.
ಕೃತಿ ಚೌರ್ಯ ವಿಚಾರ ತುಸು ತಡವಾಗಿ ಅಂದರೆ ಕಳೆದ ವರ್ಷ ಗಮನಕ್ಕೆ ಬಂದಿದ್ದು, ಲೇಖಕರು 2015ರ ಮಾರ್ಚ್ 19ರಂದು ಹಂಪಿ ವಿವಿಯ ಕುಲಪತಿಯವರಿಗೆ ಈ ಕುರಿತು ತುರ್ತು ಕ್ರಮಕ್ಕೆ ಆಗ್ರಹಿಸಿ ಸಾಕ್ಷಾಧಾರಗಳೊಂದಿಗೆ ದೂರು ನೀಡಿದ್ದರು. ಆದರೆ ಈ ಕುರಿತು ಇನ್ನೂ ಕುಲಪತಿಗಳ ಉತ್ತರ ಬಂದಿಲ್ಲ. ಈ ನಡುವೆ ಕಳೆದ ಮೇ 30ರಂದು ಪ್ರವೀಣ್ ವಿಳಾಸಕ್ಕೆ ಪತ್ರವೊಂದು ಹೋಗಿದೆ.  ಇದರಲ್ಲಿ  ಕುಲಪತಿಗಳು ಚಿತ್ರದಲ್ಲಿಯೇ ಇಲ್ಲ. ಹೊರತಾಗಿ ಹಂಪಿ ವಿವಿಯ ಕುಲ ಸಚಿವರಿಗೆ ಲೇಖಕ ಎಸ್‌ಎಸ್.ಅಂಗಡಿ ಬರೆದ ಕ್ಷಮಾಪಣ ಪತ್ರದ ಪ್ರತಿ ನೇರವಾಗಿ ಪ್ರವೀಣ್‌ಗೆ ಕಳುಹಿಸಲಾಗಿದೆ.
ಹಸ್ತಪ್ರತಿ ಶಾಸ್ತ್ರ ವಿಭಾಗದ ವಿಭಾಗದ ಪ್ರಾಧ್ಯಾಪಕರಾದ ಎಸ್.ಎಸ್. ಅಂಗಡಿ ತಮ್ಮ ಕ್ಷಮಾಪಣಾ ಪತ್ರದಲ್ಲಿ ‘ಪ್ರವೀಣ್ ಅವರ ಪ್ರತಿಮಾಜಗತ್ತು ಎಂಫಿಲ್ ಪ್ರಬಂಧದ ಕೆಲವು ಭಾಗಗಳನ್ನು ಬಳಿಸಿಕೊಂಡಿದ್ದೇನೆ. ಅವರ ಹೆಸರು ಮತ್ತು ಕೃತಿಯನ್ನು ನಾನು ಉಲ್ಲೇಖಿಸಬೇಕಾಗಿತ್ತು.ಉಲ್ಲೇಖಿಸಲಾಗಿಲ್ಲ. ಪ್ರಮಾದವಶಾತ್ ಈ ಅಚಾತುರ್ಯ ನಡೆದಿರುವುದಕ್ಕೆ ವಿಶಾದಿಸುತ್ತೇನೆ.. ನನ್ನ ಈ ಪ್ರಮಾದಕ್ಕೆ ತಮ್ಮೆಲ್ಲರಲ್ಲಿ ಕ್ಷಮೆ ಕೋರುತ್ತೇವೆ’ ಎಂದು ಬರೆದಿದ್ದಾರೆ. ಪತ್ರದ ಪ್ರತಿಯನ್ನು ಕುಲಸಚಿವರಲ್ಲದೆ,  ಕುಲಪತಿಗಳಿಗೆ, ಪ್ರವೀಣ್ ಮತ್ತು ಅವರ ಮಾರ್ಗದರ್ಶಕರಿಗೂ ಕಳುಹಿಸಲಾಗಿದೆ. ಒಟ್ಟೂ ಪ್ರಕರಣವನ್ನು  ಇಲ್ಲಿಗೇ ಮುಗುಸುವಂತೆ ಎಂಫಿಲ್ ವಿದ್ಯಾರ್ಥಿಯ ಮನವರಿಕೆ ನಡೆದಿದೆ ಎಂದು ವಿಇ ಮೂಲಗಳು ತಿಳಿಸಿವೆ.

****
ಕೋಟ್
ವಿಚಾರ ನನ್ನ ಗಮನಕ್ಕೂ ಬಂದಿದೆ. ಪ್ರವೀಣ್ ನನ್ನ ಮಾರ್ಗದರ್ಶನದಲ್ಲೇ ಪ್ರಬಂಧವನ್ನು  ಮೊದಲು ಸಿದ್ಧಪಡಿಸಿ, ಎಂಫಿಲ್ ಪದವಿ ಪಡೆದಿದ್ದಾನೆ. ನನಗೆ ಇಬ್ಬರೂ ಪರಿಚಿತರೇ ಆಗಿದ್ದಾರೆ. ಆದರೆ ವಿದ್ವಾಂಸರಲ್ಲಿ  ಈ ಥರದ ಪ್ರವೃತ್ತಿ ಮಾತ್ರ ಖಂಡಿತ ಒಳ್ಳೆಯದಲ್ಲ. ಇದೇ ಪ್ರವೃತ್ತಿ ಮುಂದುವರಿದರೆ ಬೌದ್ಧಿಕ ಪ್ರಪಂಚಕ್ಕೆ ದೊಡ್ಡ ಅನ್ಯಾಯ.
-ಪ್ರೊ.ಎ.ವಿ. ನಾವಡ, ನಿವೃತ್ತ ಪ್ರಾಧ್ಯಾಪಕರು
****
ಕೋಟ್
ಹೀಗೊಂದು ಕೃತಿಚೌರ್ಯದ ದೂರು ಬಂದಿದೆ. ದೂರಿನ ಬಗ್ಗೆ  ವಿಸಿ ಅವರು ವಿಚಾರಣೆ ನಡೆದುತ್ತಿದ್ದಾರೆ. ಎಲ್ಲ ಪತ್ರಗಳು ಕುಲಸಚಿವರಿಗೆ ಬಂದರೂ ಅಕಾಡೆಮಿಕ್ ವಿಚಾರಗಳನ್ನು ವಿಸಿ ಅವರೇ ನಿರ್ವಹಿಸುವುದು ರೂಢಿಯಾಗಿದ್ದು  ಸದ್ಯಕ್ಕೆ  ಅವರು ಜರ್ಮನಿ ಪ್ರವಾಸದಲ್ಲಿ  ಇದ್ದಾರೆ. ಅದಕ್ಕಾಗಿ ನಾನು ಹೆಚ್ಚೇನೂ ಹೇಳುವಂತಿಲ್ಲ.
-ವಿಜಯ್ ಪುಣಚ, ಕುಲಸಚಿವರು, ಹಂಪಿ ಕನ್ನಡ ವಿವಿ


  
Read More