ಉಂಚಳ್ಳಿ ಜಲಪಾತ ಸಮೀಪ ತಲೆ ಎತ್ತಿದೆ ಚಾರೆಯ ವಿರೂಪಾಕ್ಷ ದೇವಾಲಯ

 ಉಂಚಳ್ಳಿ ಜಲಪಾತ ಸಮೀಪ ತಲೆ ಎತ್ತಿದೆ ಚಾರೆಯ ವಿರೂಪಾಕ್ಷ ದೇವಾಲಯ
 ಚಾರೆಯ ವಿರೂಪಾಕ್ಷ ದೇವಾಲಯ
ಇದು 20 ವರ್ಷದ ಹಿಂದಿನ ಮಾತು. ’ನಮ್ಮೂರ ಮಂದಾರ ಹೂವೆ’ ಸಿನಿಮಾ ಬಳಿಕ ಉಂಚಳ್ಳಿ ಜಲಪಾತ ಒಮ್ಮೆಲೆ ರಾಜ್ಯದಲ್ಲಿ ಖ್ಯಾತಿ ಪಡೆಯಿತು. ಚಾರಣ, ಕಾಡಿನ ತೋರಣ ಎರಡಕ್ಕೂ ಸಲ್ಲುವ ಈ ಪ್ರದೇಶ ಪಡ್ಡೆ ಹುಡುಗರ ಕನಸಿನ ತಾಣ.  ಹಾಗೆ ನೋಡಿದರೆ ರಾಜ್ಯದ ಐಟಿ ಕ್ರಾಂತಿ, ಕಾಡು ಮೇಡು ಸುತ್ತವ ಪ್ರವಾಸಿಗರ ಸಂಖ್ಯೆಯನ್ನೂ ಹೆಚ್ಚಿಸಿದ್ದು, ಎಲ್ಲ ಕಾಲದಲ್ಲೂ ಇಲ್ಲಿಗೆ ಪ್ರವಾಸೀ ಗುಂಪುಗಳು ಲಗ್ಗೆ ಇಡುತ್ತವೆ. ಈ ಪ್ರದೇಶದ ಹೊಸ ಆಕರ್ಷಣೆ ಚಾರೆಯ ವಿರೂಪಾಕ್ಷ ದೇವಳ. ಉಂಚಳ್ಳಿ ಜಲಪಾತದ ನಾಲ್ಕಾರು ಕಿಮೀ ವ್ಯಾಪ್ತಿಯ್ಲಲಿ ವಿಜಯ ನಗರ ಶೈಲಿಯಲ್ಲಿ  ನಿರ್ಮಾಣವಾಗಿದೆ ಈ ಶಿಲಾಮಯ ದೇಗುಲ.
ಅಘನಾಶಿನಿಯ ಹಿನ್ನೀರು, ಸ್ಥಳೀಯವಾಗಿ ಮಾಣಿ ಹೊಳೆ ಎಂದು ಇಲ್ಲಿ  ಹೆಸರುವಾಸಿ. ಹರಿದ್ವರ್ಣದ ಕಾಡು, ಹೊಳೆ ಸಾಲಿನಲ್ಲಿ  200/300 ವರ್ಷದಿಂದ ಗಟ್ಟಿಯಾಗಿ ನಿಂತ ಮಿಡಿ ಅಪ್ಪೆ ,ಬನಾಟೆ, ದೇವದಾರು ಮರಗಳಲ್ಲದೆ ಇನ್ನೂ ಕೆಲವು ಆಕರ್ಷಣೆ ಇದೆ. ಮಳೆಯ ಕಾಲದಲ್ಲಿ  ಉಂಬಳ ಎಂಬ ವಿಚಿತ್ರ ಕಾಡು ಜಂತುವೂ ಇಲ್ಲಿನ ವಾಸ್ತವ.
ಈ ಪ್ರದೇಶ ಬರುವುದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹೆಗ್ಗರಣೆ ಹೋಬಳಿಯಲ್ಲಿ. ಯಾವುದೇ ಒಂದು ನೈಸರ್ಗಿಕ ತಾಣವು ಹಿಂದುಗಳ ದೃಷ್ಟಿಯಲ್ಲಿ  ಪರಿಪೂರ್ಣ ಯಾತ್ರಾ ಸ್ಥಳ ಆಗುವುದು ಅಲ್ಲೊಂದು ದೇವಳವು ತಲೆ ಎತ್ತಿದಾಗ ಎಂಬ ಮಾತಿಗೆ ಚಾರೆಯ ವಿರೂಪಾಕ್ಷ  ದೇವಳ ಮರು ನಿರ್ಮಾಣ ಇದೀಗ ಸಾಕ್ಷಿಯಾಗಿದೆ.
ಈಶ್ವರನನ್ನು ವಿರೂಪಾಕ್ಷ ಎಂದು ಗುರುತಿಸಿ, ಗುಡಿ ನಿರ್ಮಿಸಿ ಪೂಜಿಸಿದ್ದು  ವಿಜಯ ನಗರದ ದೊರೆಗಳು. ಹಂಪಿಯ ವಿರೂಪಾಕ್ಷ ದೇವಳ ಈಗಲೂ ಕಾರಣಿಕ ಹಾಗು ಶಿಲ್ಪಕಲಾ ವೈಭವದ ಕಾರಣ ಅಪರೂಪದ್ದಾಗಿದೆ. ಚಾರೆಯಲ್ಲಿ  ಈ ಮೊದಲು ಇದ್ದ ಸಣ್ಣ ಗುಡಿಗೂ ಇಷ್ಟೇ ಇತಿಹಾಸ ಇತ್ತು.
ಇದೀಗ ದಿ. ಶಿವರಾಮ ಹೆಗಡೆ ಚಾರೆ ಆಶೆಯದಂತೆ ಮಂಗಳೂರಿನಲ್ಲಿ  ಉದ್ಯಮ ಹೊಂದಿರುವ ಉಮೇಶ್ ಹೆಗಡೆ ಚಾರೆ ಮತ್ತು ಊರವರು ವಿರೂಪಾಕ್ಷ ದೇವಳವನ್ನು ಸುಮಾರು ಐದು ವರ್ಷದ ನಿರಂತರ ಶ್ರಮದಿಂದ 4 ಕೋಟಿ ರೂ. ವೆಚ್ಚದಲ್ಲಿ ಮರು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ನಿಸಿರ್ಗ ಸಹಜ ಪ್ರವಾಸಿ ಸ್ಥಳಕ್ಕೆ ಯಾತ್ರಾ ಸ್ಥಳದ ಆಯಾಮವನ್ನೂ ನೀಡಿದ್ದಾರೆ.
ಶಿಲಾಮಯವಾದ ದೇವಳದಲ್ಲಿ  ಗರ್ಭಗುಡಿ, ಪ್ರಸಾದ ಮಂಟಪಗಳು ಹಂಪಿ ಶೈಲಿಯಲ್ಲಿ ನಿರ್ಮಾಣ ಆಗಿದ್ದರೆ, ಸುತ್ತಲೂ ರಕ್ಷಣಾತ್ಮಕವಾದ ಚಂದ್ರಶಾಲೆಯ ದೇವಳಕ್ಕೆ ದೈನಂದಿನ ಪೂಜಾ ಅನುಕೂಲವನ್ನು ಕಲ್ಪಿಸಿದೆ. ದೇವಳದ ವಿಶೇಷ ಎಂದರೆ ಎಡದಲ್ಲಿ ಇರುವ ಅನ್ನಪೂರ್ಣೇಶ್ವರಿ ಹಾಗೂ ಬಲದಲ್ಲಿ ಇರುವ ಗಣಪತಿ ಗುಡಿಗಳು. ಊರ ಹೊರಗೆ ಇರುವ ದೇವಳಕ್ಕೆ ಹೋಗಲು ಮಣ್ಭಿನ ಕಣಿವೆಯೂ ಅನನ್ಯ.
ಇಲ್ಲಿಂದ ಎರಡು ಕಿಮೀ ದೂರದಲ್ಲಿದೆ ಪಶ್ಚಿಮ ಘಟ್ಟದ ಪ್ರಖ್ಯಾತ ಝರಿಗಳಲ್ಲೊಂದಾದ ಉಂಚಳ್ಳಿ ಜೋಗ. ಅಘನಾಶಿನಿ ನದಿ ಘಟ್ಟ ಪ್ರದೇಶದಿಂದ 400 ಅಡಿ ಆಳಕ್ಕೆ ಇಲ್ಲಿ ಧುಮುಕುವ ರುದ್ರ ರಮಣೀಯ ದೃಶ್ಯ ಇಲ್ಲಿದೆ. ಅದೇ ರೀತಿ ಬುರುಡೆ ಜೋಗವೂ ಚಾರೆ ಗುಡ್ಡದ ಆಚೆ ಇದ್ದು, ಚಾರಣ ತಾಣವಾಗಿಯೂ ಇದು ಖ್ಯಾತಿ ಪಡೆದಿದೆ.

ಮಾರ್ಗ :
ಬೆಂಗಳೂರಿನಿಂದ ಉತ್ತರ ಕನ್ನಡ ಜಿಲ್ಲೆ ತಾಲೂಕು ಕೇಂದ್ರ ಸಿದಾಪುರ(350 ಕಿಮಿ). ಸಿದ್ದಾಪುರ ಬಿದ್ರಕಾನು,ಹಾರ್ಸಿಕಟ್ಟಾ, ಹೆಗ್ಗರಣೆ, ಚಾರೆ( ಉಂಚಳ್ಳಿ/ಬುರುಡೇ ಜೋಗ) (40 ಕಿಮಿ)


Read More