ನೃತ್ಯ, ಸಂಗೀತದ ಕಲಿಕೆಯು ವ್ಯಕ್ತಿತ್ವ ವಿಕಸನದ ಭಾಗ - ರಾಜಗೋಪಾಲ್ ಭಾಗವತ್


ಶಾರದಾ ಸಂಗೀತ ಮತ್ತು ನೃತ್ಯ ಕಲಾ ಶಾಲೆ ಕಳೆದ ಎರಡುವರೆ ದಶಕದಿಂದ ಸಂಗೀತ, ನೃತ್ಯ ಶಾಲೆ ನಡೆಸಿಕೊಂಡು ಬರುತ್ತಿರುವ ವಿದ್ವಾನ್ ರಾಜಗೋಪಾಲ ಭಾಗ್ವತ್  ಸಾವಿರಾರು ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ. ವಿಕ ಸಂದರ್ಶನದಲ್ಲಿ  ನೃತ್ಯ, ಸಂಗೀತ ಶಿಕ್ಷಣದ ಸೌಂದರ್ಯ ಹಾಗೂ ಸವಾಲಿನ ಬಗ್ಗೆ  ವಿವರಣೆ ನೀಡಿದ್ದಾರೆ. ಇವರ ಪತ್ನಿ ನೃತ್ಯ ವಿದುಷಿ ಪೂರ್ಣಿಮಾ ಭಾಗವತರೊಂದಿಗೆ ಸಾತ್ ನೀಡಿದ್ದಾರೆ.


* ನಿಮಗೆ ಸಂಗೀತದ ಒಡನಾಟ ಎಲ್ಲಿಂದು ಶುರುವಾಯಿತು ?
ಹುಟ್ಟಿದ್ದು ಗೋಕಾಕ ತಾಲೂಕು ಮಮ್ದಾಪುರದಲ್ಲಿ, ನಮ್ಮದು ಉಡುಪಿ ಮೂಲ. ನಮ್ಮಜ್ಜ ಭಾಗವತರು, ಮನೆಯಲ್ಲಿ  ಹಾಡುವ ಅಭ್ಯಾಸ ಆಗಿಂದಲೂ ಇತ್ತು. ತಂದೆಗೆ ಪರಂಪರೆ ಮುಂದುವರಿಕೆ ಸಾಧ್ಯವಾಗಿರಲ್ಲಿ. ಕುಟುಂಬ ದಾವಣಗೆರೆಗೆ ಬಂದಾಗ ನನಗೆ ಆರನೆ ವರ್ಷ, ಇಲ್ಲಿನ ಲಕ್ಷ್ಮೀದೇವಿ ಕುಲಕರ್ಣಿ ಅವರಲ್ಲಿ  ಸಂಗೀತ ಬಾಲಪಾಠ, ನಂತರ ಚಿತ್ರದುರ್ಗದಲ್ಲಿ ಎಚ್ ವೆಂಕಟರಾಮ್, ಶೃಂಗೇರಿ ಎಚ್.ಎಸ್. ನಾಗರಾಜ್ ಅವರಲ್ಲಿ  ಹೆಚ್ಚಿನ ಅಭ್ಯಾಸ ಮಾಡಿದೆ. ಜತೆಗೆ ಇಲ್ಲಿ  ರಾಮಕೃಷ್ಣ ಭಟ್ ಹಾಗೂ ಸಾಗರದ ಜನಾರ್ದನ ಭಟ್ ಅವರಲ್ಲಿ  ಭರತನಾಟ್ಯ ಅಭ್ಯಾಸ ಮಾಡಿದೆ ಹೀಗೆ.. ನನಗೆ ಇಬ್ಬರು ಅಕ್ಕಂದಿರು, ಅವರು ಉತ್ತರಾದಿ ಕಲಿತರೆ, ನಾನು ದಕ್ಷಿ ಣಾದಿಯಲ್ಲಿ  ಸಂಗೀತದಲ್ಲಿ  ಮುಂದುವರಿದು ವಿದ್ವತ್ ಮಾಡಿದೆ.
* ವಿದುಷಿ ಪೂರ್ಣಿಮಾ ಪರಿಚಯ ಹೇಗೆ ?
ನನ್ನ ಮದುವೆಯಲ್ಲೆ  ಪೂರ್ಣಿಮಾ ಪರಿಚಯ. ಆಗಿನ್ನೂ  ಅವರು ವಿದ್ವತ್ ಮಾಡಿರಲಿಲ್ಲ. ನನಗೆ ಮದುವೆ ವಿಚಾರ ಬಂದಾಗ ಮೊದಲ ಪ್ರಪೋಸಲ್ ಬಂದದ್ದು ಪೂರ್ಣಿಮಾ ಅವರದ್ದು. ಭರತನಾಟ್ಯ ಕಲಾವಿದೆ ಎಂಬ ಕಾರಣಕ್ಕೆ ಒಪ್ಪಿಗೆ ಆಯಿತು. ಅವರ ತಂದೆ ಚೆಳ್ಳಕೆರೆಯಲ್ಲಿ  ಸೆಟಲ್ ಆಗಿದ್ದರೂ, ತೀರ್ಥಳ್ಳಿ ಮೂಲದವರು. ಚಳ್ಳಕೆರೆಯಲ್ಲಿ  ಆರಂಭಿಕ ನೃತ್ಯಾಭ್ಯಾಸ, ನಂತರ ಕಲಾಶ್ರೀ ಸುಧಾಮೂರ್ತಿ ಅವರಲ್ಲಿ . ಆ ನಡುವೆ ಸ್ವಲ್ಪ ಗ್ಯಾಪ್ ಆಗಿ ಮದುವೆ ನಂತರ ನೃತ್ಯ ಮುಂದುವಯಿತು. ನನಗೆ ನೃತ್ಯ ಹೇಳಿಕೊಟ್ಟ ಜನಾರ್ಧನ ಅವರಲ್ಲಿ , ಬೆಂಗಳೂರಿನ ವಸಂತ ಲಕ್ಷ್ಮೀ ಅವರಲ್ಲಿ ಅಭ್ಯಾಸ ಮಾಡಿ ವಿದ್ವತ್ ಮಾಡಿಕೊಂಡರು. ಕ್ರಮೇಣ ನಾನು ನೃತ್ಯವನ್ನು ಅಲ್ಲಿಯೇ ಬಿಟ್ಟು ಸಂಗೀದಲ್ಲಿ  ತೊಡಗಿಸಿಕೊಂಡೆ. ಮದುವೆಗೆ ಮೊದಲು 1990ರಲ್ಲಿ   ಶಾರದಾ ಸಂಗೀತ ಶಾಲೆಯ ಆರಂಭವಾಗಿ ಮದುವೆ ನಂತರ 95ರಿಂದ ನೃತ್ಯ ಶಿಕ್ಷಣವನ್ನೂ  ಆರಂಭಿಸಿದೆವು.
* ನಿಮ್ಮ ಮಕ್ಕಳಲ್ಲಿ  ಪರಂಪರೆ ಹೇಗೆ ಮುಂದುವರಿದಿದೆ ?
ಒಬ್ಬ ಮಗ ವಿಶ್ವಂಭರ. ಆತ ಸಂಗೀತ ಮತ್ತು ನೃತ್ಯ ಎರಡರಲ್ಲೂ ಮುಂದುವರಿದಿದ್ದಾನೆ. ಎರಡರಲ್ಲೂ  ಸೀನಿಯರ್ ಗ್ರೇಡ್ ಮುಗಿಸಿದ್ದು, ಸಿದ್ಧಗಂಗಾದಲ್ಲಿ  ಪಿಯು ಓದುತ್ತಿದ್ದಾನೆ. ವಿದ್ವತ್ ಅಭ್ಯಾಸ ಮಾಡುತ್ತಿದ್ದಾನೆ.
* ನೃತ್ಯ, ಸಂಗೀತ, ಕಲಿಕೆಯೂ ಮಹತ್ವದ್ದು  ಎಂದು ಮನವರಿಕೆಗೆ ಪ್ರಯತ್ನ ಏನಾದರೂ ಮಾಡಿದ್ದೀರಾ ?
ನಮ್ಮಲ್ಲಿ ಕಲಿಯುವ ಮಕ್ಕಳನ್ನು ಸೇರಿಸಿ ಅವರಿಗೆ ನೃತ್ಯದ ಮಹತ್ವ ತಿಳಿಸಿದ್ದೇವೆ. ಮಕ್ಕಳ ಶಾರೀರಿಕ ಬೆಳವಣಿಗೆಯಲ್ಲಿ, ಹಾಗೆಯೇ ಮಾನಸಿಕ ಬೆಳವಣಿಗೆಯಲ್ಲಿ  ಹಾಡು ನೃತ್ಯದ ಮಹತ್ವದ ಬಗ್ಗೆ  ಪಾಠ ಕ್ರಮದಲ್ಲೇ ಹೇಳುವುದಿದೆ. ವಾರ್ಷಿಕೋತ್ಸವ ಸಂದರ್ಭ ಸಾಧಕ ಕಲಾವಿದರನ್ನು ಕರೆಸಿ ಅವರಿಂದ ಮಾರ್ಗದರ್ಶನ, ಹಾಗೆಯೇ ನಮ್ಮ ಗುರು ಜನಾರ್ದನ್ ಮೂಲಕ ಇಲ್ಲಿನ ಕೆಲವು ಶಾಲೆಯಲ್ಲಿ ನೃತ್ಯ ಸಂವೇದನೆಯ ಪಾಠ ಮಾಡಿಸಿದ್ದಿದೆ. ಮುಂದಿನ ದಿನದಲ್ಲಿ  ಚಿಕ್ಕ ಚಿಕ್ಕದಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಇದೆ.
* ಶಾರದಾ ನೃತ್ಯ ಮತ್ತು ಸಂಗೀತ ಶಾಲೆಯ ಬೆಳವಣಿಗೆ ಹೇಗಿದೆ...?
ಭಾಗವತ್ ದಂಪತಿಯ ನಟುವಾಂಗಕ್ಕೆ ವಿದ್ಯಾರ್ಥಿಗಳ ನೃತ್ಯ -photo vivek

ಕಳೆದ ಎರಡುವರೆ ದಶಕದ ಅವಯಲ್ಲಿ  ನಾವೂ ಕಲಿಯುತ್ತ, ಮಕ್ಕಳಿಗೂ ಕಲಿಸುತ್ತ  ಇಲ್ಲಿಯವರೆಗೆ ಬಂದಿದ್ದೇವೆ.  ಜತೆಗೆ ನಮ್ಮದೇ ಕಾರ್ಯಕ್ರಮ, ನಾವು ಕಲಿಸಿದ ಮಕ್ಕಳಿಗೆ ರಂಗದಲ್ಲಿ ಅವಕಾಶ, ಅವರನ್ನು ಉನ್ನತ ಶಿಕ್ಷಣಕ್ಕೆ ತಲುಪಿಸುತ್ತ ಬಂದಿದ್ದೇವೆ. ಈ ನಡುವೆ ನಮ್ಮ ಶಾಲೆಯಲ್ಲಿ  ಶಾಸ್ತ್ರೀಯ ಸಂಗೀತಕ್ಕಿಂತ ನೃತ್ಯವೇ ಹೆಚ್ಚಾಗಿ ಬೆಳೆದಿದೆ. ಕಾರಣ , ಶಾಸ್ತ್ರೀಯ ಸಂಗೀತದಲ್ಲಿ  ಜನರಿಗೆ ಒಲವು ಮೂಡಿಸುವುದು, ಆರ್ಥಿಕ ಪೋಷಕರನ್ನು  ಹುಡುಕುವುದು ಇಲ್ಲಿ  ಕಷ್ಟ. ನೃತ್ಯದಲ್ಲಿ ನಮ್ಮ ಕಲಾಶಾಲೆಯಿಂದ ನಂದನ ಪಿಬಿ. ಉನ್ನತ ಅಧ್ಯನ ಮಾಡಿ ಬೆಂಗಳೂರಿನಲ್ಲಿ  ಭರತನಾಟ್ಯ ಶಾಲೆಯನ್ನೂ ನಡೆಸುತ್ತಿದ್ದಾರೆ. ಹಾಗೇ ನಯನಾ ಪಿಬಿ.,  ಎಂ.ಜಿ., ಡಾ. ಸಂಸ್ಕೃತಿ ರಂಗಪ್ರವೇಶ ಮಾಡಿದ್ದಾರೆ. ಸಂಗೀತದಲ್ಲಿ ಅಶೋಕ್ ಅವರು ಇಲ್ಲಿಯೇ ಸಂಗೀತ ಶಿಕ್ಷಕರಾಗಿದ್ದಾರೆ.
* ಇಂದಿನ ದಿನದಲ್ಲಿ  ನೃತ್ಯ, ಸಂಗೀತದಲ್ಲಿ  ನಿರ್ದಿಷ್ಟ  ಪ್ರಕಾರವಲ್ಲದೆ, ಮಿಶ್ರ ಪ್ರಕಾರದ ಬೇಡಿಕೆ  ಹೆಚ್ಚಾಗಿದೆಯೇ ?
ಟೀವಿ ಮಾಧ್ಯಮ, ಮಕ್ಕಳ ರಿಯಾಲಿಟಿ ಶೋದಲ್ಲಿ  ಹಾಗೆ ತೋರಿಸಲಾಗುತ್ತಿದೆ. ಆದರೆ ವಾಸ್ತವ ಹಾಗಿಲ್ಲ. ಶಾಸ್ತ್ರೀಯ ಪರಂಪರೆ ಎಂಬುದು ಈ ದೇಶದ ಅಂತಃಸತ್ವ. ಮಿಶ್ರ ಪ್ರಕಾರ ಏನೇ ಇರಲಿಯಾವುದಾದರೂ ಒಂದು ಪ್ರಕಾರದಲ್ಲಿ, ನಾವು ಶಿಕ್ಷಣ ಮುಂದುವರಿಸಿದರೆ ಮಾತ್ರ ದೃಶ್ಯಕಲೆಯಲ್ಲಿ  ಏನಾದರೂ ಒಂದು ಸಾಧನೆ ಸಾಧ್ಯ. ಶಾಸ್ತ್ರೀಯ ಗುರುಗಳು ಸದಾ ಆಳವಾದ ಜಿಜ್ಞಾಸಿ ಆಗಿರಬೇಕು. ತಾವೂ ನಿರಂತರ ಅಧ್ಯಯನ, ಪ್ರಾಕ್ಟೀಸ್ ಮಾಡುತ್ತಲೇ ಇರಬೇಕು. ನಮ್ಮ ಪ್ರಮುಖ ಕಲಾವಿದರಿಗೆ ಯಾವತ್ತೂ ಅವಕಾಶ ಕಡಿಮೆ ಆಗಿಲ್ಲ. ದೇಶ ವಿದೇಶದಲ್ಲಿ  ನಿರಂತರವಾಗಿ  ಅವರು ಕಾರ್ಯಕ್ರಮ ಕೊಡುತ್ತಿದ್ದಾರೆ.
* ಮಿಶ್ರ ನೃತ್ಯ ಪ್ರಕಾರ ಹೊರತಾಗಿ ನಿರ್ದಿಷ್ಟವಾಗಿ ಭರತನಾಟ್ಯವೇ ಬೇಕೆಂದು ವಿದ್ಯಾರ್ಥಿಗಳು ನಿಮ್ಮಲ್ಲಿ ಕೇಳುವುದಿದೆಯೇ ?
ಸಾಮಾನ್ಯವಾಗಿ ಮಕ್ಕಳನ್ನು ಕಳುಹಿಸುವಾಗ ವಿಭಿನ್ನ  ಅಂದಾಜು ಇರುತ್ತದೆ. ಕೆಲವರು ಬರುತ್ತಲೇ ಯಾವಾಗ ಪರೀಕ್ಷೆ ಕಟ್ಟಿಸುತ್ತೀರಿ, ಯಾವಾಗ ಕಲಿತು ಮುಗಿಯುತ್ತದೆ ಎಂದು ಕೇಳುತ್ತಾರೆ. ನಮ್ಮಲ್ಲಿ ಸೇರಿದ ಮೇಲೆ ನೃತ್ಯವನ್ನು, ಸಂಗೀತವನ್ನು ಹೇಗೆ ಖುಷಿಯಾಗಿ ಸ್ವೀಕರಿಸಬಹದು ಎಂಬುದನ್ನು ನಾವು ತಿಳಿಸುತ್ತ ಹೋಗುತ್ತೇವೆ. ಇತ್ತೀಚೆಗೆ ನಮ್ಮ ಬಗ್ಗೆ ಒಂದು ಸ್ಪಷ್ಟತೆ ಇರುವುದಕ್ಕಾಗಿ ಫಿಲ್ಮ್ ಸಾಂಗ್, ಫಿಲ್ಮ್ ಸಾಂಗ್ ಅಥವಾ ಎಲ್ಲೋ ನಡೆಯುವ ಸ್ಪರ್ಧೆಗೆ ತಯಾರು ಮಾಡಿ ಅಂತ ನಮ್ಮಲ್ಲಿಗೆ ಬರುವುದಿಲ್ಲ. ನಮ್ಮ ಮನೆಯವರ ಟೀಚಿಂಗ್ ಮಾದರಿ ಮಕ್ಕಳಿಗೆ ಅಪ್ಯಾಯಮಾನವಾಗಿದೆ. ಹಾಗಾಗಿ ಕ್ರಮೇಣ ಈ ಪ್ರಕಾರದಲ್ಲಿ  ಜನರಿಗೂ ಗೌರವ ಉಂಟಾಗುತ್ತಿದೆ.

*ರಾಜ್ಯದಲ್ಲಿ  ಇಷ್ಟೇ ಜನಸಂಖ್ಯೆ ಇರುವ ನಗರಗಳಿಗೆ ಹೋಲಿಸಿದರೆ ದಾವಣಗೆರೆಯಲ್ಲಿ  ಭರತನಾಟ್ಯ ಮಾನ್ಯತೆ ಪಡೆದಿಲ್ಲ ಅನ್ನಿಸುತ್ತದೆ.
ಖಂಡಿತ ಹೌದು. ಪ್ರತ್ಯೇಕ ಜಿಲ್ಲೆಯಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶಾಖೆ ಬರುವ ವರೆಗೂ, ಭರತ ನಾಟ್ಯ


ಅಥವಾ ಶಾಸ್ತ್ರೀಯ ಸಂಗೀತಕ್ಕೆ ಬೆಂಬಲ ಸಿಕ್ಕಿದ್ದು ತೀರಾ ಕಡಿಮೆ. ಬೇರೆ ಕಲಾಪ್ರಕಾರಕ್ಕೆ ಸಿಗುತ್ತಿದ್ದ ಮಾನ್ಯತೆ ಶಾಸ್ತ್ರೀಯ ಪ್ರಕಾರಕ್ಕೆ ಸಿಕ್ಕಿರಲಿಲ್ಲ. ಹೊರಗಿನಿಂದ ಶಾಸ್ತ್ರೀಯ ನೃತ್ಯ ಕಲಾವಿದರನ್ನು ಕರೆಸಿದಾಗ ಆರ್ಥಿಕ ಸಹಾಯ ಕಷ್ಟ. ಕಷ್ಟಪಟ್ಟು ನಾವೇ ಹಣ ಹೊಂದಿಸಿ ಕಾರ್ಯಕ್ರಮ ಸಂಘಟಿಸಿದರೂ ಬಂದು ಕುಳಿತು ನೋಡಿ ಖುಷಿಪಡುವವರ ಸಂಖ್ಯೆಯೂ ಕಡಿಮೆ ಇತ್ತು. ಇತ್ತೀಚಿನ ದಿನಗಳಲ್ಲಂತೂ ಶಿಕ್ಷಣ ನಗರಿಯಾಗಿ ಬೆಳೆಯುತ್ತಿದ್ದು, ಅಂಕ ಆಧಾರಿತ ಶಿಕ್ಷಣದ ಧಾವಂತದಲ್ಲಿ  ಮಕ್ಕಳು ಬೆಳಗ್ಗೆ  ಎಂಟಕ್ಕೆ ಶಾಲೆಗೆ ಹೋದರೆ ರಾತ್ರಿ ಎಂಟರ ತನಕವೂ ಶಾಲೆಯಲ್ಲಿಯೇ ಇಟ್ಟುಕೊಳ್ಳುವುದಿದೆ. ಮಕ್ಕಳಿಗೆ ಪಠ್ಯೇತರ  ಚಟುವಟಿಕೆಗೆ ಅವಕಾಶವೇ ಇಲ್ಲದ ಪರಿಸ್ಥಿತಿ ಇದೆ.  ಶಾಸ್ತ್ರೀಯ ಕಲಿಕೆ ಎಂದರೆ ಇಲ್ಲಿಯೂ ಕೂಡ ಅಷ್ಟೇ ಕಷ್ಟ ಹಾಗೂ ಸಮಯವನ್ನು ಮೀಸಲಿಡಬೇಕಾಗುತ್ತದೆ.
***

 ಮಹಾನ್ ಚೇತನ ರುಕ್ಮಿಣಿದೇವಿ ಅರುಂಡೇಲ್ ಸಂಸ್ಮರಣೆ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ  ಜ.14 ರ ಸಂಜೆ  ನೃತ್ಯ ಸಮರ್ಪಣಾ 2018 ಭರತನಾಟ್ಯ ಕಾರ್ಯಕ್ರಮ.
photo:  ಭಾಗವತ್ ದಂಪತಿಯ ನಟುವಾಂಗಕ್ಕೆ ವಿದ್ಯಾರ್ಥಿಗಳ ನೃತ್ಯ -photo vivek

-ಸದಾನಂದ ಹೆಗಡೆ











Related Posts
Previous
« Prev Post

2 ಕಾಮೆಂಟ್‌(ಗಳು)

ಜನವರಿ 16, 2018 ರಂದು 05:06 ಪೂರ್ವಾಹ್ನ ಸಮಯಕ್ಕೆ

ಶ್ರೀ ರಾಜಗೋಪಾಲ್ ಭಾಗವತರ ಬಗ್ಗೆ ಓದಿ ಖುಷಿಯಾಯಿತು;ಅವರ ತಾಯಿ ಇಳಿವಯಸ್ಸಿನಲ್ಲಿ ಸಂಸ್ಕೃತ ಸಂಭಾಷಣಾ ಶಿಬಿರಾರ್ಥಿಯಾಗಿ ಉತ್ತಮವಾಗಿ ಸಮಾರೋಪ ದಲ್ಲಿ ಮಾತನಾಡಿದ್ದರು.ಪರೋಪಕಾರ,ಸಜ್ಜನಿಕೆ,ಕಾರ್ಯ ಶ್ರದ್ಧೆ ಅವರ ಕುಟುಂಬದಲ್ಲಿ ಮನೆಮಾಡಿದೆ,ಕಲಾವಿದ ರಾಗಿ ಆ ಕುಟುಂಬ ಅನುಕರಣೀಯ ಆದರಣೀಯಗೌರವಾರ್ಪಣೆ ಕಾರ್ಯಕ್ರಮ,ಯೋಗ್ಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ,.. ಅವರ ಕಾರ್ಯಗಳು ನೆನೆದಷ್ಟು ನನ್ನನ್ನು ವಿನೀತನನ್ನಾಗಿಸುತ್ತೆ.ಅಭಿನಂದನಾ ಸಹಿತ ಹಾರ್ದಿಕ ಹಾರೈಕೆಗಳು. ಎನ್.ಕಾಳೇಶ್ವರ ರಾವ್

Reply
avatar
ಜನವರಿ 17, 2018 ರಂದು 09:56 ಅಪರಾಹ್ನ ಸಮಯಕ್ಕೆ

Sangeetha mattu nruthya kshethragalige Tamma kutumba hagalirulu dudiyutthiruvudu kalaa Sarasvathi ya Haage natarajana aradhane nimma kalaasevege namma dhanyavadagalu

Reply
avatar