ಬಸವತತ್ವದ ವಿಶಾಲ ತಳಹದಿ ನನ್ನ ಆಕರ್ಷಿಸಿತು :ರಂಜಾನ್ ದರ್ಗಾ

ಬಸವತತ್ವದ ವಿಶಾಲ ತಳಹದಿ ನನ್ನ ಆಕರ್ಷಿಸಿತು :ರಂಜಾನ್ ದರ್ಗಾ

ಸದಾನಂದ ಹೆಗಡೆ, ದಾವಣಗೆರೆ
ವಿಜಾಪುರ ಮೂಲದ ರಂಜಾನ್ ದರ್ಗಾ  ಸದ್ಯ ಗುಲ್ಬರ್ಗದ ಸರ್ವಜ್ಞ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾಗಿದ್ದಾರೆ. ಭಾಷಾ ವಿಜ್ಞಾನ ಮತ್ತು ಮಾರುಕಟ್ಟೆ ನಿರ್ವಹಣೆಯಲ್ಲಿ  ಸ್ನಾತಕೋತ್ತರ ಪದವಿಧರರು. ಪತ್ರಕರ್ತರಾಗಿ 33 ವರ್ಷ ಸೇವೆ ಸಲ್ಲಿಸಿ ರಾಜ್ಯದ ನಾನಾ ಕಡೆ ಕೆಲಸ ಮಾಡಿ 2009ರಲ್ಲಿ  ನಿವೃತ್ತರಾಗಿದ್ದಾರೆ. ಒಬ್ಬ ಕವಿ, ಲೇಖಕ, ಹೋರಾಟಗಾರರಾಗಿ ಗುರುತಿಸಿಕೊಂಡಿರುವ ದರ್ಗಾ  ವಿಶೇಷ ಎಂದರೆ ಶರಣ ಸಾಹಿತ್ಯದಲ್ಲಿ ಅವರಿಗಿರುವ ಪರಿಶ್ರಮ. ವಿಭಿನ್ನ ಆಯಾಮಗಳ 25ಕ್ಕೂ ಹೆಚ್ಚು ಕೃತಿಗಳನ್ನು ಹೊರ ತಂದಿದ್ದಾರೆ.  ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ 32ಕ್ಕೂ ಹೆಚ್ಚು ಪ್ರಶಸ್ತಿ ಲಭಿಸಿವೆ. ದಾವಣಗೆರೆಯ ಆರೂಢ ದಾಸೋಹಿ ಮಾಗನೂರು ಬಸಪ್ಪ ಅವರ ಹೆಸರಿನಲ್ಲಿ ಕೊಡುವ ಪ್ರಶಸ್ತಿಗೆ  ಆಯ್ಕೆಯಾಗಿದ್ದು ಈ ಸಂದರ್ಭ ವಿಕ ಜತೆ ಸಂದರ್ಶನದಲ್ಲಿ  ಕೆಲ ಹೊಳಹು ನೀಡಿದ್ದಾರೆ.
* ನೀವೊಬ್ಬ ಮುಸ್ಲಿಂ  ಹಿನ್ನೆಲೆಯವರಾಗಿ ಬಸವಣ್ಣನವರ ನೋಡುವ ಕ್ರಮ ಹೇಗೆ ?
ನನ್ನ ಹಿನ್ನೆಲ್ಲೆ  ಅಂತಲ್ಲ. ಬಸವಣ್ಣ ಜಗತ್ತನ್ನು ನೋಡುವ ಕ್ರಮ ನನಗೆ ಹಿಡಿಸಿತು. ‘ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲ ಸಂಗನ ಶರಣರೆ ಶರಣರು’ ಎಂಬ ವಚನವನ್ನೇ ನೋಡಿ. ಶರಣ ತತ್ವ ಎಲ್ಲರನ್ನೂ, ಎಲ್ಲವನ್ನೂ ಒಳಗೊಳ್ಳುವ ವಿಶಾಲ ತಳಹದಿ ಹೊಂದಿದೆ. ಇದು ನನ್ನನ್ನು ಆಕರ್ಷಿಸಿತು. 
* ಪತ್ರಕರ್ತನಾಗಿದ್ದುಕೊಂಡು ಸಾಹಿತ್ಯ, ಚಳವಳಿಯ ಭಾಗವಾಗುವುದು ಹೇಗೆ ಸಾಧ್ಯವಾಯತು?
ಇದರಲ್ಲೂ  ಒಂದು ರೀತಿ ಬಸವ ಫಿಲಾಸಫಿ ಇದೆ. ಮೊದಲಿನಿಂದಲೂ ನನಗೆ ಕವನ ಬರೆಯುವ  ಖಯಾಲಿ. ಚಳವಳಿ ಎಂಬುದು ನಾವು ಸಾಮಾಜಿಕರಾದಾಗ ನಮ್ಮ ಆಯ್ಕೆಗಳಲ್ಲೊಂದಾಗಿರುತ್ತದೆ. ನನ್ನ ಪತ್ರಿಕೋದ್ಯಮ ವೃತ್ತಿ ಇದೆಲ್ಲದಕ್ಕೂ ಸಾಕಷ್ಟು ವಸ್ತುಗಳನ್ನು ಒದಗಿಸಿತು. ಪತ್ರಕರ್ತರಾದವರಿಗೆ ದೇಶದ ಪ್ರಧಾನ ಮಂತ್ರಿ ಕಚೇರಿಗೆ ಪ್ರವೇಶ ಅವಕಾಶ ಇರುವಂತೆ, ಮಾರನೆ ದಿನ ಸ್ಲಮ್ ವಾಸಿಗಳ ಸಮಸ್ಯೆಯನ್ನೂ ಅನಾವರಣ ಮಾಡಬಹದು. ಎಲ್ಲ ಧರ್ಮ, ಜಾತಿ ಸೇರಿ ಯಾವುದನ್ನೂ, ಏನೊಂದನ್ನೂ ವೃತ್ತಿ ನಿರತ ಪತ್ರಕರ್ತ ನಿರಾಕರಿಸಲಾಗುವುದಿಲ್ಲ. ಇಂಥ ಬಹು ಸಾಧ್ಯತೆಯ ಪತ್ರಿಕೋದ್ಯಮ ನನಗೆ ಅತ್ಯಂತ ಖುಷಿ ಕೊಟ್ಟ ವೃತ್ತಿ. ಉಳಿದ ಎರಡು ಇದಕ್ಕೆ ಪೂರಕವಾದವು. ಪತ್ರಿಕೋದ್ಯಮ ಎಂದರೆ ಒಂದು ಸಮುದ್ರ, ಸಾಹಿತ್ಯ, ಚಳವಳಿ ಸೇರಿದಂತೆ ಏನೆಲ್ಲ ನದಿಗಳು ಇದರೊಂದಿಗೆ ಸೇರುತ್ತವೆ.
*ದಾವಣಗೆರೆಯ ಮಾಗನೂರು ಬಸಪ್ಪ ಪ್ರಶಸ್ತಿ ಸಂದ ಬಗೆ ಏನನ್ನಿಸುತ್ತದೆ?
ಲಿಂ. ಮಾಗನೂರು ಬಸಪ್ಪ ಕಷ್ಟದಲ್ಲಿ , ನಿರಂತರ ಕಾಯಕದಲ್ಲಿ ಬೆಳೆದು ಉದ್ಯಮಿಯಾದವರು. ದಲಿತರು ಸೇರಿದಂತೆ ಎಲ್ಲರ ಬಗ್ಗೆ ಕೂಡ ಕಾಳಜಿ ಇಟ್ಟುಕೊಂಡವರಾಗಿದ್ದರು. ಅದೆಲ್ಲಕ್ಕಿಂತ ಹೆಚ್ಚಾಗಿ ಅವರ ಗುರುಗಳಾಗಿದ್ದ ಸಿರಿಗೆರೆ ಲಿಂ. ಶಿವಕುಮಾರ ಸ್ವಾಮೀಜಿ ವಿಚಾರ ಇವರಲ್ಲಿದೆ. ಆ ಕಾಲದಲ್ಲಿ ಶಿವಕುಮಾರಶ್ರೀ ಮಾಗನೂರು ಬಸಪ್ಪ ಅಂಥವರನ್ನು ಮುನ್ನಡೆಸಿದರು. ಅವರ ಮೇಲಿನ ಗೌರವಕ್ಕೂ ನಾನು ಪ್ರಶಸ್ತಿ ಪ್ರೀತಿಯಿಂದ ಒಪ್ಪಿದೆ.
*ನಿಮ್ಮ ದೃಷ್ಟಿಯಲ್ಲಿ  ಸಮಕಾಲೀನ ಬಿಕ್ಕಟ್ಟು ಯಾವುದು ?
ಮನುಷ್ಯ-ಮನುಷ್ಯರ ನಡುವಿನ ನಂಬಿಕೆ ಕಳೆಯುತ್ತಿರುವುದು ನಮ್ಮ ನಡುವಿನ ಅತಿದೊಡ್ಡ ಸವಾಲು ಅಥವಾ ಬಿಕ್ಕಟ್ಟು ಅಂತ ನನಗೆ ಅನ್ನಿಸುತ್ತದೆ. ಉಗ್ರವಾದ, ಕೋಮುವಾದ, ಜಾತಿವಾದಗಳು ಮನುಷ್ಯರ ನಡುವೆ ದೊಡ್ಡ ಕಂದಕ ಏರ್ಪಡಿಸುತ್ತಿವೆ.
 ನನ್ನ ಬಾಲ್ಯದ ದಿನಗಳನ್ನೇ ನೆನೆದರೆ, ನಾವೆಲ್ಲ ಎಷ್ಟೊಂದು ಸೌಹಾರ್ದವಾಗಿ ಬದುಕಿದ್ದೆವು. ನಮ್ಮ ಧಾರ್ಮಿಕ ಭಿನ್ನ ಆಚರಣೆ  ಇಟ್ಟುಕೊಂಡೇ ಪರಸ್ಪರರನ್ನು ತಲುಪಲು ಮಾರ್ಗಗಳನ್ನು ಕಂಡುಕೊಂಡಿದ್ದೆವು. ಉದಾಹರಣೆಗೆ ಹಿಂದೂಗಳ ಹಬ್ಬದಲ್ಲಿ ನಾವೆಲ್ಲ ಪ್ಗೊಳ್ಳುತ್ತಿದ್ದೆವು. ನಮ್ಮ  ಹಬ್ಬದಲ್ಲಿ  ನಮ್ಮ ಸುತ್ತಲೂ ಇರುವ ವೀರಶೈವ ಕುಟುಂಬಗಳಿಗೆ ನನ್ನ ತಾಯಿ ‘ಸೀದಾ’ ಕೊಟ್ಟು  ಬರುತ್ತಿದ್ದರು. ಸೀದಾ ಅಂದರೆ, ಗೋದಿ, ಬೆಲ್ಲ, ಬೇಳೆ ಹೀಗೆ ದಿನಸಿ ಪದಾರ್ಥಗಳು. ಅದನ್ನು ಅವರು ಪ್ರೀತಿಯಿಂದಲೇ ಸ್ವೀಕರಿಸಿ ನಮ್ಮ ಹಬ್ಬದ ಸಂಭ್ರಮವನ್ನು ತಮ್ಮಲ್ಲೂ ವಿಸ್ತರಿಸಿಕೊಳ್ಳುತ್ತಿದ್ದರು. ಹೀಗೆ ನಾವೆಲ್ಲ ಒಂದು ಎಂದು ಕಂಡುಕೊಳ್ಳಲು ನಮ್ಮ ಭಿನ್ನ ಆಹಾರ, ಆಚರಣೆಗಳ ನಡುವೆಯೂ ಮಾರ್ಗವಿತ್ತು. ಅಂಥ ಸಾಧ್ಯತೆಗಳು ಈಗ ಯಾಕೋ ನಮಗೆ ಕಾಣುತ್ತಿಲ್ಲ.
*ಪತ್ರಿಕೋದ್ಯೋಗಿಯಾಗಿ ನಿಮ್ಮ ಅಪರೂಪದ ನೆನಪೊಂದನ್ನು ಹೇಳಬಹುದಾ ?
ನಾನು ಕಾರವಾರದಲ್ಲಿ  ವರದಿಗಾರನಾಗಿದ್ದಾಗ ಅಲ್ಲಿನ ಗಾಬಿತವಾಡಾದ ಮೀನುಗಾರ ಹಳ್ಳಿಯ ಒಂದು ಘಟನೆಯ ವರದಿ ಹಾಗೂ ಪರಿಣಾಮ ಅತ್ಯಂತ ಸಾರ್ಥಕ್ಯ ಕೊಟ್ಟಿದೆ. ಒಂದು ಪಂಚತಾರಾ ಹೋಟೆಲಿನ ಹಿತಕ್ಕಾಗಿ ಬಡ ಮೀನುಗಾರರ ಜೋಪಡಿಗಳನ್ನು ಬುಡಮೇಲು ಮಾಡಲಾಗುತ್ತಿತ್ತು. ಪಂಚತಾರಾ ಹೋಟೇಲಿನ ಮಾಲೀಕನೊಂದಿಗೆ ಕೈ ಜೋಡಿಸಿದ್ದ  ಕಸ್ಟಮ್ಸ್ ಅಧಿಕಾರಿಯೊಬ್ಬ , ಆಗ ಪ್ರಚಲಿತ ಇದ್ದ  ’ಎಲ್‌ಟಿಟಿಇ ಚಟುವಟಿಕೆ ಗುಮ’್ಮವನ್ನು ಜೋಪಡಿಗೆ ಆರೋಪಿಸಿದ್ದರು.  ಇದೊಂದು ಎಲ್‌ಟಿಟಿಟಿಯ ಅಡಗುದಾಣ, ಅದಕ್ಕಾಗಿ ಅವುಗಳನ್ನು ತೆರವು ಮಾಡಬೇಕು ಎಂದು ಪ್ರಮಾಣಪತ್ರ ನೀಡಿದ ಅಧಿಕಾರಿಯ ದುರುದ್ದೇಶ ಸೇರಿ ನಾನು ವರದಿ ಮಾಡಿದೆ. ಮೀನುಗಾರರು ಹಿಂದೂ ಕಾರ್ಯಕರ್ತರು, ಅವರನ್ನು ಬೆಂಬಲಿಸಬೇಡಿ ಎಂದು ಕೆಲವರು ನನಗೆ ಹೇಳಿದರು. ವರದಿಗಾರನಿಗೆ ಬಡವನಾದವ ಹಿಂದೂ ಇರಬಹದು, ಇನ್ನಾರೇ ಇರಬಹದು. ಅವರ ಧರ್ಮ ಮಹತ್ವದ್ದಲ್ಲ ಎಂಬುದು ನನ್ನ ನಿಲುವು. ವರದಿ ಮಾಡಿದ್ದು, ಮಾತ್ರವಲ್ಲ, ಬಡವರ ಜೋಪಡಿ ರಕ್ಷಣೆಗೆ ಜಿಲ್ಲಾಧಿಕಾರಿಗೂ ಒತ್ತಾಯ ಹಾಕಿದೆ. ವರದಿ ಪರಿಣಾಮ ಕಾರ್ಯಾಚರಣೆ ನಿಂತಿತು, ಅಷ್ಟೇ ಅಲ್ಲ ಸುಳ್ಳು ಕಾರಣ ನೀಡಿದ ಐಎಎಫ್‌ಎಸ್ ಅಧಿಕಾರಿಯೊಬ್ಬ ಎರಡು ದಿನ ಕಂಬಿ ಎಣಿಸುವಂತೆ ಆಯಿತು. ತಪ್ಪೆಸಗಿದ ಐಎಫ್‌ಎಸ್ ಅಧಿಕಾರಿಯೊಬ್ಬ ಕಂಬಿ ಎಣಿಸಿದ ಘಟನೆ ದೇಶದಲ್ಲೇ ಮೊದಲು ಎಂದು ನಂತರ ನನಗೆ ತಿಳಿಯಿತು. ಇದು ಪೆನ್ನಿಗೆ ಇರುವ ಶಕ್ತಿ ಎಂದು ಈಗಲೂ ನನಗೆ ಅನ್ನಿಸುತ್ತದೆ.
Read More