ನೀಲಿ ಕಣ್ಣಿನ ಕಪ್ಪು ನಾಯಿ

ನೀಲಿ ಕಣ್ಣಿನ ಕಪ್ಪು ನಾಯಿ
ನೀಲಿ ಕಣ್ಣಿನ ಕಪ್ಪು ನಾಯಿ
****#########*****
ನಾಯಿ ಗೇಟಿನ ಆಚೆ ಇದ್ದ ಕಾರಣ ನನಗೆ ಅದರ ಕಣ್ಣನ್ನು ನೋಡಲು ಭಯ ಇರಲಿಲ್ಲ.
ಇಪ್ಪತೈದು ವರ್ಷ ಹಿಂದೆ ಕಂಡ  ಆ ನಾಯಿಯ ಕಣ್ಣು ಇನ್ನೂ ನನಗೆ ಚೆನ್ನಾಗಿ ನೆನಪಿದೆ.  ಕಪ್ಪಾದ ನಾಯಿಯ ಆ ಕಣ್ಣು  ಒಳ್ಳೆ ನೀಲಿ ವಜ್ರ ಹೊಳೆದಂತೆ ಹೊಳೆಯುತ್ತಿತ್ತು.
ಚಿಕ್ಕವಳಾಗಿದ್ದಾಗ ನನಗೆ ನಾಯಿಗಳ ಬಗ್ಗೆ  ಭಯ ಮಿಶ್ರಿತ ಕುತೂಹಲ.  ಆಚೆ ಕೇರಿಗೆ ತೊಕ್ಕಲಿಕ್ಕೆ ಹೋಗಿ ಬರುತ್ತಿದ್ದಾಗಲೆಲ್ಲ  ಆ ಮಾರ್ಗದಲ್ಲಿ ಈ  ನಾಯಿ ಮುಖಾಮುಖಿ ಆಗುತ್ತಿತ್ತು. ಗೇಟಿನ ಆಚೆಯಿಂದ ನಮ್ಮನ್ನು ನೋಡುತ್ತಿದ್ದ  ನಾಯಿಯನ್ನು ಹೊರಗಿನಿಂದಲೇ ಕಣ್ಣಲ್ಲೇ ಮಾತಾಡಿಸಿ ಹಾಯ್ ಮಾಡಿ ಬರುತ್ತಿದ್ದೆ.
 ಮನೆಯಿಂದ ತೋಪನ್ನು ದಾಟಿ, ಕೂಗಳತೆಯ ದೂರದಲ್ಲಿ  ಆಚೆ ಕೇರಿ ಮಾರ್ಗದಲ್ಲಿ  ನಾಯಿ ಕಾರಣಕ್ಕೆ ಅ ಮನೆ ಕೂಡ ನೆನಪಿದೆ. ಆಗಿನ್ನೂ ನಮ್ಮದು ಮಂಗಳೂರು ಹೆಂಚಿನ ಮನೆ.  ಕಾರಂತರ  ಆರ್‌ಸಿಸಿ ಮನೆಯಲ್ಲಿ ಬಾಡಿಗೆ ಇದ್ದ  ಅದರ ಯಜಮಾನರು, ಬಹುಶಃ ಪೋರ್ಬುಗಳು ಅನ್ಸುತ್ತೆ. ಅವರೆಲ್ಲ ಗಲ್ಫ್‌ಗೆ ವೃತ್ತಿ ಕಾರಣಕ್ಕೆ ವಲಸೆ ಹೋಗುವಾಗ, ಆ ನಾಯಿಯನ್ನು ಅಲ್ಲಿಯೇ ಬಿಟ್ಟು ಹೋಗಿಬಿಡಬೇಕೆ ? ಅದೊಂದು ಹೆಣ್ಣು ನಾಯಿ ಆಗಿದ್ದರಿಂದ ಯಾರೂ ಖಾಯಾಸ್ ಮಾಡಿರಲಿಲ್ಲ ಅನಿಸುತ್ತದೆ. ಅವರು ಹೋದ ಬಳಿಕ ಒಂದು ವಾರ ಅದು ಯಾರ ನಾಯಿಯೂ ಆಗಿರಲಿಲ್ಲ.
ಇದೇ ಹೊತ್ತಿಗೆ  ಮಹಾ ನಗರ ಪಾಲಿಕೆಯವರು ನಾಯಿಗಳನ್ನು ಹಿಡಿದು ಕೊಲ್ಲುವ ಕರ್ಯಾಚರಣೆ ಆರಂಭಿಸಿಬಿಡಬೇಕೆ. ಕೇರಳವೋ, ತಮಿಳುನಾಡೋ ಎಲ್ಲಿಂದಲೋ ಬಂದೂಕು ಹಿಡಿದು ಬಂದಿದ್ದ  ಭಯಾನಕ ವ್ಯಕ್ತಿಗಳು ನಾಯಿಗಳನ್ನು ಅಟ್ಟಾಡಿಸಿ ಕೊಲ್ಲುತ್ತಿದ್ದರು. ಮಾಲೀಕರಿಲ್ಲದ ನಾಯಿಗಳನ್ನು ನುಸಿಗಳ ಹಾಗೇ ಕೊಂದು ಹಾಕುತ್ತಿದ್ದರಂತೆ. ಈ ಕಾರ್ಯಾಚರಣೆಯಲ್ಲಿ ಕಪ್ಪು ನಾಯಿಯೂ ಉಳಿದಿರಲಿಕ್ಕಿಲ್ಲ ಎಂದು ನನಗೆ ಭಯವಾಯಿತು.
ಅಪ್ಪ ಕೂಡ ಆತಂಕ ವ್ಯಕ್ತಪಡಿಸಿದ್ದರು.
ನಮ್ಮ ವಾರ್ಡ್ ನಲ್ಲಿ ಕಾರ್ಯಾಚರಣೆ ನಡೆಸಿದ
ಸಂಜೆವೇಳೆಗೆ ನಮಗೆಲ್ಲ ಒಂದು ಅಚ್ಚರಿ ಕಾದಿತ್ತು. ಇದೀಗ ನಮ್ಮ ಬಾತ್ ರೂಮಿನ ನೀರು ಹೋಗುವ ಪಕ್ಕದಲ್ಲಿ  ಆಗ, ಇನ್ನೂ ಸಸಿ ನೆಡದೇ ದೊಡ್ಡ ತೆಂಗಿನ ಗುಳಿ ಇತ್ತು. ಅಲ್ಲಿ ಆ ಕಪ್ಪು ನಾಯಿ ಅಡಗಿಕೊಂಡು, ಬೇಟೆಗಾರರಿಂದ ಬಚಾವ್ ಆಗಿತ್ತು.
ಅದೇ ಮೊದಲು ನಮ್ಮ ಮನೆಯ ಕಂಪೌಂಡ್‌ನಲ್ಲಿ  ಕಂಡ ನಾಯಿ, ನನಗೆ ಭಯ ಹುಟ್ಟಿಸದೆ, ಅಕ್ಕರೆಯ ನಾಯಿಯಾಗಿ ಕಂಡಿತು. ಅಪ್ಪನಿಗೆ ನಾನು ಆ ನಾಯಿಯನ್ನು ತೋರಿಸಿದೆ, ಅಲ್ಲದೆ, ಇಬ್ಬರೂ ಹೋಗಿ ಮಾತಾಡಿಸಿ, ಒಂದು ದೋಸೆಯನ್ನೂ ಕೊಟ್ಟು ಬಂದೆವು.
ಅದೇ ದಿನದಿಂದ ಆ ಕಪ್ಪು ನಾಯಿ ನಮ್ಮ ಮನೆಯದಾಗಿತ್ತು.
ಅಷ್ಟಾದರೂ ತಾವು ಬೇರೆ ದೇಶಕ್ಕೆ ಹೋಗುವಾಗ ಪೊರ್ಬುಗಳು ನಾಯಿಯನ್ನು ಬಿಟ್ಟು ಹೋಗಬಾರದಿತ್ತು ಪಾಪ.
ನಿಜಕ್ಕೂ ಅದೊಂದು ಪಾಪದ ನಾಯಿ. ಯಾವತ್ತೂ ಯಾರನ್ನೂ ಕಚ್ಚಲಿಲ್ಲ. ಉಳಿದ ಹೊತ್ತು ಎಲ್ಲಿ ಇರುತ್ತಿತ್ತೋ ಗೊತ್ತಿಲ್ಲ. ಬೆಳಗ್ಗೆ  ಸಂಜೆ ನಮ್ಮ ಮನೆಗೆ, ನಾನು ಶಾಲೆ ಬಿಟ್ಟು ಬರುವಾಗ ನನ್ನನ್ನು, ತಂಗಿಯನ್ನೂ ಸ್ವಾಗತಿಸುತ್ತಿತ್ತು. ರಜೆಯ ದಿನ ನಾನು ಹೋದಲ್ಲೇ ಬರುತ್ತಿತ್ತು. ಸಮೀಪದ ಮಾರಿಗುಡಿಗೆ ಹೋದರೆ, ನಮ್ಮ ಜತೆಯೇ ಬಂದು, ನಾವು ದೇವಸ್ಥಾನದೊಳಗೆ ಹೋಗಿ, ಸುತ್ತು ಹೊಡೆದು ಬರುವ ತನಕ ಬಾಗಿಲಲ್ಲಿ ಕಾಯ್ದು ವಾಪಸ್ ನಮ್ಮ ಜತೆಗೆ ಬರುತ್ತಿತ್ತು.
ಪೊರ್ಬುಗಳ ಮನೆಯಲ್ಲಿ  ನಾಲ್ಕಾರು ವರ್ಷ ಇದ್ದರೂ, ಅದೇಕೋ ಮರಿಯನ್ನು ಇಟ್ಟಿರಲಿಲ್ಲ. ಬಹುಶಃ ಮರಿಯಾಗದಂತೆ ಔಷಧ ಕೊಟ್ಟಿದ್ದರು ಅನ್ನಿಸುತ್ತದೆ. ಮನೆಯಲ್ಲೇ ಕೂಡಿ ಇರುತ್ತಿದ್ದ ಕಾರಣ ಹೊರ ಜಗತ್ತಿನ ಸಂಬಂಧ ಇಲ್ಲದೆ ಸುರಕ್ಷಿತವಾಗಿತ್ತು.
ನಮ್ಮ  ಮನೆಯಲ್ಲಿ ನಾಯಿಗೆ ಯಾವತ್ತೂ ಸರಪಳಿ ಹಾಕಿರಲಿಲ್ಲ. ಎಲ್ಲೆಲ್ಲಿ ಹೋಗಿ ಬರುತ್ತಿತ್ತೋ ಗೊತ್ತಿಲ್ಲ. ಆದರೂ ನಮ್ಮ ಮನೆಯ ಹೊರತೂ ಇನ್ನೊಬ್ಬರಿಗೆ ಅದು ಯಾವತ್ತೂ ನಿಷ್ಟೆ ತೋರಿದ್ದಿಲ್ಲ.
ಎಲ್ಲೆಲ್ಲ ಹೋಗಿ ಏನೆಲ್ಲ ತಿಂದು ಬರುತ್ತದೆ ಎಂದು ಕೆಲವರು ಹೇಳಿದ್ದರೂ ನನಗೆ ಹಾಗೆಲ್ಲ ಅನ್ನಿಸುತ್ತಿರಲಿಲ್ಲ.. ಅಂತೂ ಕ್ರಮೇಣ ಆ ನಾಯಿ ಊರಿಗೆಲ್ಲ ನಮ್ಮ ಮನೆಯ ನಾಯಿ ಆಗಿ ಗುರುತಿಸಿಕೊಂಡಿತು.  ಪ್ರತೀ ಆರು ತಿಂಗಳಿಗೊಮ್ಮೆ ಒಂದು ವರ್ಷಕ್ಕೊಮ್ಮೆ  ಮರಿ ಇಡುವ ಕಾರ್ಯ ಮುಂದು ವರಿಸಿತು.
ಅದು ಮೊದಲ ಬಾರಿ ಮರಿ ಇಡುವಾಗ ಅದರ ಜಾಗ ಹುಡುಕುವ ಕಟಪಟೆಯನ್ನು ನಾನು ಚೆನ್ನಾಗಿ ಗಮನಿಸಿದ್ದೇನೆ. ಆಗಲೇ ಅದರ ಹೊಟ್ಟೆಯಲ್ಲಿ ಚಿಕ್ಕ ಮರಿಗಳು ಓಡಾಡುವುದನ್ನು ನಾವು ಮಕ್ಕಳೆಲ್ಲ  ಗಮನಿಸುತ್ತಿದ್ದೆವು. ಹೊರ ಬರುವ ಚಿಕ್ಕ ಚಿಕ್ಕ ಮರಿಗಳ ಬಗ್ಗೆ ನಾನು ವಿಶೇಷ ಕುತೂಹಲಿಯಾಗಿದ್ದೆ.
ಅದೊಂದು ಸಂಜೆ ನಮ್ಮ ಮನೆಯ ಕಿರು ಕಟ್ಲ ಹಿಂದೆ, ಒಂದಿಷ್ಟು ಮೃದುವಾದ ಮಣ್ಣನ್ನು ತನ್ನ ಮುಂಗಾಲಿನಲ್ಲಿ  ಅಗೆದು ರಾಶಿ ಹಾಕಿ ಅಲ್ಲೊಂದು ಪೊಟರೆಯನ್ನು  ನಿರ್ಮಿಸಿಕೊಳ್ಳುವಷ್ಟರಲ್ಲಿ  ಕತ್ತಲಾಗಿದ್ದರಿಂದ ನಾವೆಲ್ಲ, ಮನೆಯೊಳಗೆ ಸೇರಿ, ಕೈ ಕಾಲು ತೊಳೆದು,ಹಾಗೇ ಚಿಕ್ಕ ಭಜನೆಯನ್ನು ಮಾಡಿ, ಊಟ ಮಾಡಿ ಮಲಗಿ ನಾಯಿಯನ್ನು ಮರೆತೆವು..
ಬೆಳಗ್ಗೆ ಎದ್ದು, ಮನೆ ಸುತ್ತಲಿನ ಗಿಡಗಳನ್ನು ನೋಡುತ್ತ ಹಲ್ಲುಜ್ಜುವುದು ನನ್ನ ರೂಢಿ. ಹಾಗೆಯೇ ನೋಡುತ್ತ, ತಕ್ಷಣ ನಾಯಿಯ ನೆನಪಾಗಿ ಕಿರು ಕಟ್ಲಿಗೆ ಬಂದೆ.
ಅಲ್ಲಿ ಮುಖವಷ್ಟನ್ನೇ ಹೊರ ಚಾಚಿಕೊಂಡು ದಣಿದ ಕಣ್ಣಿನಿಂದ ನನ್ನನ್ನು ನೋಡಿ, ಕಿವಿ ಅಲ್ಲಾಡಿಸಿತು. ಪಕ್ಕದಲ್ಲಿ ಕುಯ್ ಕಯ್ ಎಂದು ಒಂದರ ಕುತ್ತಿಗೆಯ ಮೇಲೆ ಇನ್ನೊಂದು ಹೇರಿಕೊಂಡು ಕಣ್ಣು ಮುಚ್ಚಕೊಂಡೇ ಏನೋ ಹುಡುಕುತ್ತಿದ್ದ  ನಾಲ್ಕು ಪುಟ್ಟ ಮರಿಗಳಿದ್ದವು.
ಬೆಳಗಾಗುವಷ್ಟರಲ್ಲಿ ನಮ್ಮ ಮನೆ ಒಂದು ಬಾಳಂತಿ ಗೂಡಾಗಿ,  ಅಕ್ಕ ಪಕ್ಕದ ನನ್ನ ಸ್ನೇಹಿತರಲ್ಲ  ಬಂದು ನೋಡ ತೊಡಗಿದ್ದರು. ನಾನು ಮತ್ತು ಅಪ್ಪ ಇಬ್ಬರನ್ನು ಬಿಟ್ಟರೆ, ಉಳಿದೆಲ್ಲರಿಗೂ ಗುರ್ ಅನ್ನುತ್ತಿದ್ದ ನಾಯಿ, ನಮ್ಮ ಮೇಲೆ ಇಟ್ಟ ವಿಶ್ವಾಸಕ್ಕೆ ನನಗೆ ಒಳಗೊಳಗೇ ಖುಷಿ. ಅಂದು ಅಲ್ಲಿಗೇ ತಂದು ದೋಸೆಯನ್ನು ಎಸೆದೆವು. ಕ್ರಮೇಣ ಮರಿಗಳು ಕಣ್ಣು ಬಿಟ್ಟು, ತಾಯಿಯ ಹಾಲು ಕುಡಿಯುವುದು..ಮರಿಗಳು ಒಂದು ಎರಡು ತಿಂಗಳು ಆಗುತ್ತಲೇ, ತಾಯಿಯ ಹಿಂದೆ ಓಡುವುದು, ಪರಸ್ಪರ ಗೊರ್ ಅನ್ನುತ್ತ ಆಟ ಕುಪ್ಪಳಿಸಿ ಬಾಲ ಅಲ್ಲಾಡಿಸಿ ಆಡುವುದು..
ನಿಜಕ್ಕೂ ನಾಯಿ ಮರಿಗಳು ಬೆಳೆಯುವ ದಿನಗಳನ್ನು ನೋಡುವುದೇ ಒಂದು ಖುಷಿ. ತಾಯಿಗೆ ತಿರುಗಾಡಲು ಹೋಗಬೇಕಾದರೆ, ಮೊಲೆಯನ್ನು ಕಚ್ಚಿಕೊಂಡೇ ಓಡುವ ಮರಿಗಳು, ಅದರಲ್ಲೂ ಕೆಲವೊಂದು ಮರಿಗಳು, ಉಳಿದವುಗಳ ಪಾಲನ್ನೆಲ್ಲ ಕುಡಿದು ಟುಮ್ ಟುಮ್ ಆಗಿ ಬೆಳೆಯುವುದು.
 ಇನ್ನೂ ಏನೇನೋ ದೃಶ್ಯಗಳು !
ಅಬ್ಬ ಅವೆಷ್ಟು ಚುರುಕಾಗಿ ಇರುತ್ತವೆ!!
ಮರಿಯನ್ನು ಯಾರಾದರೂ ಒಯ್ದರೆ  ನಮ್ಮ ನಾಯಿಗೆ ಬೇಜಾರು ಆಗುತ್ತಿತ್ತೊ ಗೊತ್ತಿಲ್ಲ. ನನಗಂತೂ ಬೇಡ ಎಂದು ಅನ್ನಿಸುತ್ತಿತ್ತು. ಕೊಡುವುದು ಬೇಡವೆಂದು ನಾನು ಹಟ ಹಿಡಿದಾಗ ಅಮ್ಮ ನನಗೆ ಮತ್ತು ಅಪ್ಪನಿಗೆ ಇಬ್ಬರಿಗೂ ಸೇರಿಸಿ ಬಯ್ಯುತ್ತಿದ್ದಳು. ಯಾಕೆಂದರೆ, ಊರೆಲ್ಲ  ಕೊಳಕು ಮಾಡು ಮರಿಗಳ ಘನಂಧಾರಿ ಹೇಸಿಗೆ ಸ್ವಚ್ಛಗೊಳಿಸುವುದು ಅಮ್ಮನ ಕೆಲಸವಾಗಿತ್ತಲ್ಲ.
ಆಗಲೇ ಹೇಳಿದಂತೆ ಇಂಥ ಮರಿ ಇಡುವ ಕಾರ್ಯ, ನಂತರ ನಾಯಿ ಮರಿಗಳು ತಮಗೂ ಬೇಕು ಎಂದು, ಒಂದೆರಡನ್ನು ತೆಗೆದುಕೊಂಡು ಹೋಗುವವರು ಎಲ್ಲ ನಡೆಯುತ್ತಿತ್ತು.
ವಿಶೇಷವಾಗಿ ಟುಮ್ ಟುಮ್ ಆಗಿದ್ದ  ಮರಿಗಳನ್ನು ಅದರಲ್ಲೂ ಗಂಡು ಮರಿಗಳನ್ನು ಎಲ್ಲರೂ ಒಯ್ದು, ಮೂರು ತಿಂಗಳಲ್ಲಿ ಮರಿಗಳ ಸಂತೆ ಮುಗಿಯುತ್ತಿತ್ತು.  ಹೀಗೆ ಒಂದೆರಡು ಸೂಲುಗಳ ಹಂತದಲ್ಲಿ ಯಾರ್ಯಾರೋ ನಮ್ಮ ಮನೆಯ ನಾಯಿ ಮರಿಗಳನ್ನು ಕೊಂಡು ಹೋಗಿದ್ದರು. ಕೆಲವರು ಮುಂದಿನ ಬಾರಿ ಮರಿ ಹಾಕಿದಾಗ ನನಗೊಂದು ಬೇಕು ಎಂದು ಮುಂಗಡ ಹೇಳುತ್ತಿದ್ದರು..
 ಯಾರೂ ಕೊಂಡು ಹೋಗದ ಇನ್ನೊಂದು ಹೆಣ್ಣು ಮರಿ ನಮ್ಮ ಮನೆಯಲ್ಲೇ  ದೊಡ್ಡದಾಗಿದ್ದರೂ, ನಂತರ ಒಂದು ದಿನ ಇದ್ದಕ್ಕಿದ್ದಂತೆ ಮಾಯ ಆಗಿತ್ತು. ನಾಲ್ಕನೆ ಸೂಲಿನ ಒಂದು ಗಂಡು ಮರಿಯು ನಮ್ಮ ಮನೆಯಲ್ಲೇ ಉಳಿದು, ಒಂದು ವರ್ಷದಲ್ಲಿ  ತಾಯಿಹಗಿಂತ ದೊಡ್ಡದಾಗಿ ಬೆಳೆದು ಒಳ್ಳೆ ಲೀಡರ್ ಥರ ಕಾಣುತ್ತಿತ್ತು.
ಮರಿ ಬೆಳೆದು ನಾಯಿಯಾಗಿ ನಮ್ಮ ವಠಾರ ಆವರಿದಂತೆ ಕ್ರಮೇಣ ಬೇರೆಯದೇ ವಾತಾವರಣ. ನಂತರ ಒಂದೆರಡು ವರ್ಷ.
ಇಂಥ ನಾಯಿ ಸಂತತಿ ಅದು ಹೇಗೆ, ನಮ್ಮ , ಮನೆಯಿಂದ ತೆರವಾಯಿತೋ ಗೊತ್ತಿಲ್ಲ. ನಾನು ನೈಂತ್ ಆಗುವ ಹೊತ್ತಿಗೆ, ಆ ಕಪ್ಪು ನಾಯಿ ಇದ್ದಕ್ಕಿದ್ದಂತೆ ನಾ ಪತ್ತೆ ಆಗಿತ್ತು. ಎಲ್ಲೋ ವಾಹನಕ್ಕೆ ಸಿಕ್ಕಿ ಸತ್ತಿರಬೇಕು ಅಂದು ನಾವೆಲ್ಲ ನಿರಾಶೆ ಅನುಭವಿಸಿದ್ದರೆ, ಅದು ಹಾಗಾಗಿರಲಿಲ್ಲ.
ಪ್ರತೀ ಆರು ತಿಂಗಳಿಗೊಮ್ಮೆ ಒಂದಿಷ್ಟು ಮರಿಗಳ ಸಂತೆ,  ಮರಿಗಳೆಲ್ಲ ವಿಲೇವಾರಿ ಆದ ನಂತರ, ಮತ್ತೆ ಒಂದು ಗೋಲೆ ಗಂಡು ನಾಯಿಗಳ ಸಂತೆ ಬರುವುದು, ಅಮ್ಮನಿಗೂ ಇಷ್ಟ ಆಗುತ್ತಿರಲಿಲ್ಲ.
ಒಮ್ಮೆ ಹೀಗೆ ಆಚೆ ಕೇರಿಗೆ ಹೋದಾಗ ಅಲ್ಲೊಂದು ಮನೆಯ ಎದುರು ನಮ್ಮ ನಾಯಿ ಕಂಡಿತು. ಅಂತೂ ನಮ್ಮ ನಾಯಿ ಸತ್ತಿಲ್ಲ ಎಂದು ಖಾತ್ರಿ ಆಗಿ ನಿರಾಳನಾದೆ.. ಅಂದು ಬಾ ಎಂದು ಕರೆದರೂ ಬರಲೇ ಇಲ್ಲ.  ಇದ್ಯಾಕೆ ಹೀಗೆ ಮಾಡುತ್ತಿದೆ ಎಂದು ತಿಳಿಯಲಿಲ್ಲ. ಬಹುಶಃ ದೊಡ್ಡವನಾದ ಅದರ ಮಗ, ನಾವು ಹೆಚ್ಚು ಆತನನ್ನನು ಪ್ರೀತಿಸುವುದು, ಮಗನೇ ಹೆಚ್ಚು ತಿಂಡಿಯನ್ನು ನುಂಗಿ ತಾಯಿಗೆ ಹೆದರಿಸುವುದು ಮಾಡುತ್ತಿದ್ದ ಕಾರಣವೋ ಏನೋ ಅಂತೂ ಆ ಕಪ್ಪು ನಾಯಿ ನಮ್ಮ ಮನೆಯನ್ನು ಬಿಟ್ಟಿತ್ತು. ಕ್ರಮೇಣ ಅದರ  ಮಗ ವಠಾರದ ಲೀಡರ್ ಕೂಡ, ರಸ್ತೆ ರಾಜನಾಗಿ, ಎಲ್ಲೆಲ್ಲೋ ಕೋಳಿ ಬೇಟೆ ಆಡಲು ಹೋಗಿ ಕೈಕಾಲಿಗೆ ಪೆಟ್ಟು ತಿಂದು ಬರುತ್ತಿದ್ದ.ಯಾಕೋ ಕಪ್ಪು ನಾಯಿಯ ವಿಶ್ವಾಸವನ್ನು ಆತ ಹುಟ್ಟಿಸಲಿಲ್ಲ.
ಹಾಗೇ ಆ ನಾಯಿಯ ಕುಟುಂಬ ನಮ್ಮ ಮನೆಯಿಂದ ದೂರಸರಿದ ನಿರ್ದಿಷ್ಟ ಘಟನೆಗಳು ಇದೀಗ ನನಗೆ ಸ್ಪಷ್ಟ ನೆನಪಿಲ್ಲ.
ಬೇಸಿಗೆ ರಜೆಗೆ ಶಿರಸಿಗೆ ಹೋಗಿ ಬರುವಷ್ಟರಲ್ಲಿ ನಮ್ಮ ಮನೆಯಲ್ಲಿ ಈ ಬಗೆಯ ಸ್ಥಿತ್ಯಂತರ ಆಗುತ್ತಿತ್ತು. ಕೆಲವೊಮ್ಮೆ ಸಾಕು ಪ್ರಾಣಿಗಳ ಕುಟುಂಬದಲ್ಲಿ ಹೊಸ ಸದಸ್ಯರು ಸೇರ್ಪಡೆ ಆಗಿದ್ದರೆ, ಇನ್ನೂ ಕೆಲವೊಮ್ಮೆ ಕಣ್ಮರೆ ಆಗಿತ್ತಿದ್ದುದು ಇದೆ.
ಹಾಗೆ ಕಣ್ಮರೆಯಾದವುಗಳ ಪೈಕಿ ಕಪ್ಪು ನಾಯಿಯೂ ಒಂದು. ಕೊನೆ ತನಕ ಆ ನಾಯಿಗೆ ಹೆಸರನ್ನೇ ಇಡದೆ, ಬಣ್ಣದಿಂದ ಬಂದ ಹೆಸರಿನಿಂದಲೇ  ಗುರುತಿಸಿ ಕರೆದರೂ ಈಗಲೂ ನನ್ನ ಮನಸ್ಸಿನಿಂದ  ಕಪ್ಪು ನಾಯಿ ಆಚೆ ಹೋಗಿಲ್ಲ.
ನಿಜಕ್ಕೂ ಅದೊಂದು ನೀಲಿ ಕಣ್ಣಿನ ಕಪ್ಪು ಬಣ್ಣದ ಚಲೋ ನಾಯಿ.
Read More