ಉಚ್ಚಂಗಿದುರ್ಗ ನೋಡಲು ಇದು ಸಕಾಲ

ಉಚ್ಚಂಗಿದುರ್ಗ ನೋಡಲು ಇದು ಸಕಾಲ
ದಾವಣಗೆರೆಯಿಂದ 25 ಕಿಲೋಮೀಟರ್ ದೂರದಲ್ಲಿರುವ ಉಚ್ಚಂಗಿದುರ್ಗವು ನಿರ್ಲಕ್ಷಕ್ಕೊಳಗಾದ ಇನ್ನೊಂದು, ಪಿಕ್ನಿಕ್ ಸ್ಪಾಟ್ ‌. ಬಳ್ಳಾರಿ ಜಿಲ್ಲೆಗೆ ಸೇರುವ ಈ ಪ್ರದೇಶವು ದಾವಣಗೆರೆ ಜಿಲ್ಲೆ ಜಗಳೂರು ಶಾಸನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದೆ. ಬನವಾಸಿಯ ಕದಂಬರ ಕಾಲದ ಹಿನ್ನೆಲೆ ಹೊಂದಿರುವ ಇಲ್ಲಿನ ಕೋಟೆ, ಉತ್ಸವಾಂಬೆ ನಮಗೆ ಕರುನಾಡಿನ ಇತಿಹಾಸದ ಮಹತ್ವ ಸಾರುತ್ತವೆ. ಸಣ್ಣದಾಗಿ ಗುಡ್ಡ / ಕೋಟೆ ಹತ್ತಿ, ದೊಡ್ಡದೊಂದು ದಿಗಂತ ನೋಡುವ ಇಲ್ಲಿನ ಸಂಭ್ರಮ, ನಮ್ಮ ಸಂವೇದನೆಯನ್ನು ಹರಿತಗೊಳಿಸುವ ತಾಣ. ಕೋಟೆಯ ಕಲ್ಲುಗಳು ಸುತ್ತಲಿ ಹಸಿರು ಕವಿದ ಹುಲ್ಲು ಗಳಿಂದ ಈಗಂತೂ ಹೊಸ ಬಣ್ಣ ಪಡೆದಿದೆ. ಮಾನವ ಕಣ್ಣಿನ 576 ಮೆಗಾ ಫಿಕ್ಸೆಲ್ ಕ್ಯಾಮರಾಕ್ಕೆ ಸಮೃದ್ಧ ಫೋಕಸ್ ಕೊಡುವ ಹಸಿರು ತಿಟ್ಟ ಬೆಟ್ಟದ ಮಾಲೆಗಳು, ಮೋಡದ ಚಪ್ಪರದಲ್ಲಿ ಏನೆಲ್ಲ ಸಂಭ್ರಮವನ್ನು ಸ್ಪುರಿಸುತ್ತವೆ. ಇದನ್ನೆಲ್ಲ ಸವಿಯಲು ಜಾತ್ರೆಯ ಹೊರತಾದ ದಿನವೇ ಹೋಗಬೇಕು..ಇದು ಸಕಾಲ. ಇನ್ನು ಉತ್ಸವಾಂಬೆಯ ಕಾರಣಿಕ ಹಲವುಬಗೆಯಲ್ಲಿದೆ. ಹೊರಗೆ ಕಾಣುವ ಉತ್ಸವಾಂಬೆಗೆ, ಒಳಗೊಂದು ಶಕ್ತಿ ರೂಪ. ಬೆನ್ನಿಗೊಂದು ಪೂಜೆ, ಎಡದಲ್ಲಿ ಹಿರಿಯ ದೇವಿಗೆ ಎಡೆಯ ಸ್ಥಾನ,ಪಾಳೆಗಾರರ ಕಾಲದ ಗಂಟೆ ಸಹಿತ ಎಷ್ಟೊಂದು ನಿಗೂಢ. ಉಚ್ಚಂಗೆಮ್ಮ ನಿನ್ನಾಲುಕು ಉಧೋ.. ! ಆ ಜಾತ್ರೆ ಜಂಗುಳಿಯ ವಿಶೇಷ, ಬಲಿ, ಹರಕೆ ಎಲ್ಲವೂ ಇರಲಿ. ಆದರೆ ಅವುಗಳಿಗೊಂದು ಕ್ರಮ ಇರಲಿ ಅಲ್ಲವೇ. ಈಗ ಮೌಢ್ಯವು ಬಹುತೇಕ ತಗ್ಗಿದೆ. ಇದಕ್ಕೆ ಬೇರೊಂದು ಉದ್ದೇಶದಿಂದ ಸಂದರ್ಶಕರ ಸಂಖ್ಯೆ ಹೆಚ್ಚಬೇಕು. ಕೋಟೆಯ ಇತಿಹಾಸ ಹಾಗೂ ಪ್ರಾಕೃತಿಕ ದೃಷ್ಟಿಯಿಂದ ಇವುಗಳನ್ನು ನೋಡುವ ದೃಷ್ಟಿ ನಮ್ಮಲ್ಲಿ ತೆರೆಯಬೇಕು.. ಆರಮನೆಯ ಅವಶೇಷಗಳು, ದ್ವಾರಗಳು, ಇಂಥ ಕೋಟಯಲ್ಲಿ ಅಂದಿನವರ ಬದುಕು ಎಷ್ಟು ಸಾಹಸಮಯವಾಗಿತ್ತು.. ನಮ್ಮ ಪೂರ್ವಜರ ಕಷ್ಟ ವಸಹಿಷ್ಣುತೆ ನಮ್ಮ ಇಂದಿನ ಸ್ಟ್ರೆಸ್ ಗಳಿಗೆ ಒಂದು ರಿಲೀಫ್ ಹೇಗೆ ? ಇಂಥವುಗಳನ್ನು ಪ್ರೇಕ್ಷಕರ ಗಮನ ಸೆಳೆಯುವಂತಾಗಬೇಕು.. ಇಂಥದ್ದೊಂದು ಸ್ಪಾಟ್ ಇದ್ದರೆ ಪಾಶ್ಚಾತ್ಯ ದೇಶ ಪಡುತ್ತಿದ್ದ ಹೆಮ್ಮೆ, ಸಂಭ್ರಮ ಎಷ್ಟು ಎಂದು ಅಲ್ಲಿಗೆ ಹೋಗಿಬರುವವರು ಹೇಳಬೇಕು.. ಯಾಕೆ ನಮಗೆ ನಮ್ಮೂರು ಸುಂದರವಾಗಿ ಕಾಣುತ್ತಿಲ್ಲ ?! ನಾವೇಕೆ ನಮ್ಮ ಯಾತ್ರಾಸ್ಥಳದ ಬಗ್ಗೆ ಹೆಮ್ಮೆಪಟ್ಟು, ಸ್ವಚ್ಚವಾಗಿ ಇಡುತ್ತಿಲ್ಲ ? ಸರಿಯಾದ ಮೂತ್ರದೊಡ್ಡಿ ಇಲ್ಲ, ಸ್ವಚ್ಚತೆಯ ಕೊರತೆ, ಮುತ್ತಿಗೆ ಹಾಕುವ ಭಿಕ್ಷುಕರ ನಡುವೆಯೂ, ಖುಷಿಪಡಿಲು ಸಾಕಷ್ಟು ವಿಷಯ ಇದೆ ಎಂದಾದರೆ, ಇವೆಲ್ಲವನ್ನೂ ಸರಿಪಡಿಸಿದರೆ ನಮ್ಮ ಹೆಮ್ಮೆಗೆ ಎಣೆ ಉಂಟೆ.. ಜನಪ್ರತಿನಿಧಿಗಳ ಪ್ರಯಾರಿಟಿ ಏನು ಅಂತಲೇ ಅರ್ಥವಾಗುವುದಿಲ್ಲ. ಉಚ್ಚಂಗಿ ದುರ್ಗದ ಪಿಕ್ ನಿಕ್ ಗೆ ಇದು ಸಕಾಲ. 1- ಮಳೆಯ ಕಾರಣ ಎಲ್ಲೆಡೆ ಹಸಿರೇ ಗೋಚರಿಸುತ್ತದೆ. 2- ಕೋಟೆ ಹತ್ತಿದರೂ ದಣಿವು ಅನಿಸುವುದಿಲ್ಲ. 3- ಜಾತ್ರೆ ಸಂದರ್ಭಗಳ ರಶ್ಶು ಇಲ್ಲ. 4 - ಕೊರೊನಾ ಕಾರಣದಿಂದ ಸ್ಥಳೀಯ ಪ್ರವಾಸ ಸ್ವೀಟ್ & ಶಾರ್ಟ್ ‌. ಉಚ್ಚಂಗಿದುರ್ಗಕ್ಕೆ ಹೋಗಿ ಬನ್ನಿ..
Read More

ವಿದ್ಯಾರ್ಥಿ ನಿಲಯದ ಕೀ ಪರ್ಸನ್

ವಿದ್ಯಾರ್ಥಿ ನಿಲಯದ ಕೀ ಪರ್ಸನ್

ವಿದ್ಯಾರ್ಥಿ ನಿಲಯದ ಕೀ ಪರ್ಸನ್ - ಮಾರುತಿ
ನನ್ನ ಹಾಸ್ಟೆಲ್ ವಾಸ್ತವ್ಯದ ನೆನಪುಗಳಲ್ಲಿ ಒಂದನ್ನು ಇಲ್ಲಿ ಹೇಳುತ್ತೇನೆ...
ಧಾರವಾಡ ಕೆಎಚ್ಕೆ ಹಾಸ್ಟೆಲ್ ನಲ್ಲಿ  ಇದ್ದಾಗ  ಜೆಎಸ್ಎಸ್ ಸಮೂಹದ ವಿದ್ಯಾರ್ಥಿ ನಿಲಯಕ್ಕಾಗಿ ಅಲ್ಲೊಬ್ಬ ಮಾರುತಿ ಎಂಬ ಸಹಾಯಕ ಇದ್ದ.
ಹಗಲಿಡೀ ಕಡು ಮೌನಿಯಾಗಿರುತ್ತಿದ್ದ ಆತ ಸಂಜೆ ಕುಡಿದು ಬಂದಾಗ ಆತನ ವಾಗ್ವೈಕರಿ, ಚೀರಾಟ ನೋಡುವುದು ನಮಗೆಲ್ಲ ಒಂದು ಮನರಂಜನೆ.
1990 ರಲ್ಲಿಯೇ ಆತ 70 ವರ್ಷದ  ಸೇವಾ ನಿರತ ಹಿರಿಯ ನಾಗರೀಕ. ಆತನಿಗೆ ಅಷ್ಟೊಂದು ವಯಸ್ಸಾಗಿತ್ತೋ ಅಥವಾ ದಿನ ರಾತ್ರಿ ದ್ರವಾಹಾರ ಮಾತ್ರ (ಸರಾಯಿ) ಸೇವಿಸುತ್ತಿದ್ದ ಕಾರಣ ಅಷ್ಟೊಂದು ವಯಸ್ಸಾದಂತೆ ಕಾಣುತ್ತಿದ್ದನೋ ! ಗೊತ್ತಿಲ್ಲ.
ಮುಖವಿಡೀ ತುಂಬಿದ್ದ ಹುಲುಸಾದ ದಾಡಿ. ಹಲ್ಲುಗಳೇ ಇಲ್ಲದ ಬಾಯಿ. ಜತೆಗೆ ಬರೋಬ್ಬರಿ ಒಂದಿಂಚು ದಪ್ಪದ ಸೋಡಾ ಗ್ಲಾಸ್ ಕನ್ನಡಕ ಆತನ ಮುಖ ಲಕ್ಷಣ. ಮಾತಾಡಿದರೆ ಆ ಸಣಖು ದೇಹದ ನಾಭಿಯಿಂದಲೇ ಹೊರಡುತ್ತಿದ್ದ ಹೆಣ್ಣು ಸ್ವರ ಇನ್ನೂ ಮಾರ್ಧನಿಸುವಂತಿದೆ.
ಇಷ್ಟೊಂದು ನರಪೇತಲ ಎಂದು ಅನ್ನಿಸುವುದಿಲ್ಲವೇ ?
ನಿಜಕ್ಕೂ ಈ ವ್ಯಕ್ತಿಯಲ್ಲಿ ಏನು ಸಾಧ್ಯ ಇತ್ತು ಎಂದು ಆತನನ್ನು ನಮ್ಮ ಕೆಮೆಸ್ಟ್ರೀ ಲೆಕ್ಚರರ್ ಕಮ್  ವಾರ್ಡನ್ ಅಷ್ಟಪತ್ರಿ ಸರ್ ಇಟ್ಟುಕೊಂಡಿದ್ದರು ಎಂದು ಕುತೂಹಲ ಉಂಟಾಗುತ್ತಿತ್ತು.
ಅಷ್ಟು ಕೃಷವಾದ ದೇಹಿ.
ಆತನ ಕನ್ನಡಕ ಅವನೊಂದಿಗೆ ಅವಿನಾಭಾವ ಹೊಂದಿತ್ತು.
ಈ ಕನ್ನಡಕ ಇಲ್ಲದಿದ್ದರೆ ಆತನಿಗೆ ನಡು ಹಗಲೂ ಕೂಡ ಏನು ಅಂದರೆ ಏನೇನೂ ಕಾಣಿಸುತ್ತಿರಲಿಲ್ಲ.. !
ನಿಜ.. ಗೋಳಿ ಸೋಡಾ ಬಾಟಲಿನ ತಳದಲ್ಲಿ ಹೊಂದಿಸುವ ಗಾಜುಗಳನ್ನು ಜೋಡಿಸಿದಂತೆ ಕಾಣುತ್ತಿತ್ತು.
ರಾತ್ರಿ ಕುಡಿದ ಮೇಲೆ ತಾನು ಬಿದ್ದರೂ ಕನ್ನಡಕ ಬೀಳದಂತೆ ಇರಲು ಅವುಗಳ ಕಾಲಿಗೆ ಸೊಣಬೇ ಹುರಿಯನ್ನು ಹೆಣೆದು ಹಿಂದಕ್ಕೆ ಕಟ್ಟಿ  ಭದ್ರವಾಗಿ ಇಡುತ್ತಿದ್ದ..!
ಹಾಸ್ಟೆಲ್ ಎದುರಿಗೇ ಇತ್ತು ಅನ್ನಿಸುತ್ತದೆ ಒಂದು go down. ಅಲ್ಲಿ ಆತನಿಗೊಂದು ಶೆಡ್ ಇತ್ತು. ಮುರಿದ ಚೇರು, ಕಾಟು, ಬೆಡ್ಡು, ಬಕೆಟ್ ಸೇರಿದಂತೆ ಏನೆಲ್ಲ ಅಲ್ಲಿ ಇರುತ್ತಿತ್ತು. ವಿಶೇಷವಾಗಿ ಅಲ್ಲಿನ ಗೂಟಗಳಿಗೆ ಕೀಲಿಯ ಗೊಂಚಲುಗಳನ್ನು ತೂಗಿ ಹಾಕಲಾಗುತ್ತಿತ್ತು.
ಇಡೀ ಹಾಸ್ಟೆಲ್ ಚಾವಿಗಳ ಉಸ್ತವಾರಿಯೇ ಮಾರುತಿಗಿತ್ತು.
No doubt he was a key person.!
ಯಾರೇ ಹೊಸ ಹುಡುಗರು ಬಂದರೂ ದೊಡ್ಡದೊಂದು ಗೊಂಚಲು (ಸುಮಾರು ಐವತ್ತು) ಚಾವಿಯನ್ನು ಹಿಡಿದು ರೂಮ್ ಬಾಗಿಲು ತೆಗೆದು ಕೊಡುತ್ತಿದ್ದ.
ತಾತ್ಕಾಲಿಕವಾಗಿ ಅವನಲ್ಲಿ ಬೀಗದ ಕೈಗಳು ಎರವಲು ಸಿಗುತ್ತಿದ್ದವು. ಬಂದ ಹುಡುಗರಿಗೆ ನಿರ್ಭಾವುಕವಾಗಿ ರೂಂ ತೋರಿಸುತ್ತಿದ್ದ. ಹುಡುಗರನ್ನು ಹದ್ದು ಬಸ್ತಿಗಿಡುವ ಸಂಪೂರ್ಣ ಜವಾಬ್ದಾರಿ  ವಾರ್ಡನ್ ಅವರದ್ದಾಗಿತ್ತು.
ಊರಿಂದ ತಂದೆ ತಾಯಿಯನ್ನು, ಅಜ್ಜ ಅಜ್ಜಿಯರನ್ನು, ಕೀಟಲೆ ಮಾಡುವುದಕ್ಕೆಂದೇ ಇರುವ ತಂಗಿಯರನ್ನು ಬಿಟ್ಟು ಬರುವ ಕಾಲೇಜು ಹುಡುಗರಿಗೆ ಇವನೊಬ್ಬ ಸಾಂತಾ ಕ್ಲಾಸ್..!
ಇದೇ ಕಾರಣಕ್ಕೆ ಆತನ ಕುರಿತು ಎಲ್ಲರಿಗೂ ಪ್ರೀತಿ..ಕೆಲವೊಮ್ಮೆ ಮನೆಯಿಂದ ಬರುವ ಪಾಕಿಟ್ ಮನಿಯಲ್ಲೂ ಹತ್ತಿಪ್ಪತ್ತು ಕೊಟ್ಟು ರಾತ್ರಿ "ಮಾರುತಿ ಪ್ರತಾಪ" ನೋಡುವ ಶ್ರೀಮಂತ ದಾನಿಗಳೂ ನಮ್ಮ ಹಾಸ್ಟೆಲ್  ಸಹಪಾಟಿಗಳಾಗಿದ್ದರು.
ಗಾಳಿಗೆ ಊದಿದರೆ ಹಾರಿಸಿಕೊಂಡು ಹೋಗಬಹುದಾಗಿದ್ದ ಮಾರುತಿಯಲ್ಲಿ   ಒಂದು ಮಹಾನ್ ಶಕ್ತಿ ಇತ್ತು ಕಣ್ರಿ. ಹಾಸ್ಟೆಲ್ ನಲ್ಲಿ ಆಗೀಗ ಕಟ್ಟಿಕೊಳ್ಳುತ್ತಿದ್ದ ಚರಂಡಿ ಪೈಪನ್ನು ಸ್ವತಃ ಇಳಿದು ರಿಪೇರಿ ಮಾಡುತ್ತಿದ್ದ ಪುಣ್ಯಾತ್ಮ. ಹುಡುಗರು ಹಾಗೂ ಒಟ್ಟು ವಿದ್ಯಾರ್ಥಿ ನಿಲಯದ  ಸೇವೆ ಸಲ್ಲಿಸುವುದಕ್ಕೆ ಆತನಿಗೆ ಹೇಸಿಗೆ ಎಂಬದೇ ಇರಲಿಲ್ಲ.
ಹಾಸ್ಟೆಲ್ ವಿದ್ಯಾರ್ಥಿಗಳ ಬಗ್ಗೆ ಆತನಲ್ಲಿ  ಒಂದು ತಾಯಿ ಹೃದಯ ಇತ್ತು. ಅದನ್ನು ಸಾಬೀತು ಪಡಿಸುವ ಒಂದು ನಿದರ್ಶನ ಹೇಳುತ್ತೇನೆ.
ನಾವು ಕಾಲೇಜಿಗೆ, ಮೆಸ್ ಗೆ ಕೊನೆಗೆ ಶೌಚಾಲಯಕ್ಕೆ ಹೋಗುವಾಗಲೂ ನಮ್ಮ ರೂಮಿನ ಚಾವಿಯನ್ನು ಹಿಡಿದುಕೊಂಡೇ ಹೋಗಬೇಕಿತ್ತು.
ಭದ್ರತಾ ದೃಷ್ಟಿಯಿಂದ ಹಾಗೊಂದು ನಿಯಮವನ್ನು ಮೊದಲಿನಿಂದಲೂ ಪಾಲಿಸಲಾಗುತ್ತಿತ್ತು.
ಅದರಲ್ಲಿ ಕೆಲವು ಬಾತ್ ರೂಂ, ಟಾಯ್ಲೆಟ್ ಗಳಲ್ಲಿ  ಟವೆಲ್ ಹಾಗೂ ಚಾವಿಯನ್ನು ಇಡಲು ಮೊಳೆ ಇರುತ್ತಿರಲಿಲ್ಲ. ನಮ್ಮ ಸ್ನೇಹಿತರಂತೇ ಕಾಣುತ್ತಿದ್ದ ಕೆಲವು ತಮ್ನ ಬಾತ್ ರೂಂ ಬಹದ್ದೂರ್ ಗಿರಿ ಭಾಗವಾಗಿ  ಕಿತ್ತು ಹಾಕುತ್ತಿದ್ದರು.
ಸ್ನಾನಕ್ಕೆ ಹೋದಾಗ, ಶೌಚಾಲಯಕ್ಕೆ ಹೋದಾಗ ಕೆಲವೊಮ್ಮೆ ಕೈ ತಪ್ಪಿ  ಬೇಸಿನ್ ಗೆ ಬೀಳುತ್ತಿದ್ದ ರೂಂ ಚಾವಿ ದೊಡ್ಡ ಪಜೀತಿ ತಂದಿಡುತ್ತಿತ್ತು.
ಆ ಸಂದರ್ಭದಲ್ಲಿ ನನಗೆ ಸಹಾಯಕ್ಕೆ ಬರುತ್ತಿದ್ದ ಪುಣ್ಯಾತ್ಮ ಕೂಡ ಇದೇ ಮಾರುತಿ.
ಯಾವ ಮುಜುಗರವೂ ಇಲ್ಲದೆ ಬೇಸಿನ್ ಒಳಕ್ಕೆ ಕೈ ಹಾಕಿ
ಚಾವಿ  ತೆಗೆದುಕೊಡುತ್ತಿದ್ದ.
ಇದು ಮಕ್ಕಳಿಗೆ ಒಬ್ಬ ತಾಯಿ ಮಾತ್ರ ಮಾಡಬಹುದಾದ ಸೇವೆ ಎಂದು  ಈಗಲೂ ನನಗೆ ಅನಿಸುತ್ತದೆ.
ಬಹುಶಃ ಇದೀಗ ಬದುಕಿದ್ದರೆ ಸೆಂಚುರಿ ಬಾರಿಸುತ್ತಿದ್ದ ಮಾರುತಿ ನನಗಂತೂ ಮರೆಯಲಾಗದ ವ್ಯಕ್ತಿ.
ಜೆಎಸ್ಎಸ್ ಕಾಲೇಜಿನ ನಮ್ಮ ಬ್ಯಾಚಿನ ವಿದ್ಯಾರ್ಥಿಗಳನ್ನೆಲ್ಲ ಸೇರಿಸುವಾಗ, ಸ್ನೇಹಿತ ಶ್ರೀಕಾಂತ ಜೋಶಿ  ನನ್ನ ಸಹಪಾಠಿಗಳ ನೆನಪನ್ನು ಮಾತ್ರವಲ್ಲ ಇಂಥ ಕೆಲವು ಒಡನಾಟ ಮೆಲುಕು ಹಾಕುವಂತೆ ಮಾಡಿದ್ದಾರೆ.
-ಸದಾನಂದ ಹೆಗಡೆ

Read More