ಚಿಟ್ಟಾಣಿ ಅಜ್ಜ.. ಪದ್ಮ ಪ್ರಶಸ್ತಿ ಬಗ್ಗೆ ಅಪಾರ್ಥ ಯಾಕೆ? ಉತ್ತರ ಕನ್ನಡದ ಬಗ್ಗೆ ತಾತ್ಸಾರ ಬೇಕಿತ್ತಾ ?

ಚಿಟ್ಟಾಣಿ ಅಜ್ಜ..   ಪದ್ಮ ಪ್ರಶಸ್ತಿ ಬಗ್ಗೆ ಅಪಾರ್ಥ ಯಾಕೆ? ಉತ್ತರ ಕನ್ನಡದ ಬಗ್ಗೆ  ತಾತ್ಸಾರ ಬೇಕಿತ್ತಾ ?
ಚಿಟ್ಟಾಣಿ ಅಜ್ಜನವರ ಪಾದಾರವಿಂದಗಳಿಗೆ ನಮಸ್ಕರಿಸಿ..
ಜೀವನದಲ್ಲಿ ಹಾಗೂ ಯಕ್ಷಗಾನದಲ್ಲಿ ನೀವು ಉಪ್ಪು ತಿಂದಷ್ಟು ನಾನು ಅನ್ನ ತಿಂದಿಲ್ಲ ಎಂಬ ಸ್ಪಷ್ಟ ಅರಿವು ಇದ್ದರೂ ಅನಿವಾರ್ಯವಾಗಿ ನನ್ನ ಅಭಿಪ್ರಾಯ ಬೇಧವನ್ನು ನಿಮ್ಮಲ್ಲಿ ಹೇಳುತ್ತಿರುವೆ.
ವಯಸ್ಸಿಗೂ ಮೀರಿ ನಿಮ್ಮ ಕ್ರಿಯಾಶೀಲತೆ ನಮಗೆಲ್ಲ ಒಂದು ಆದರ್ಶ. ಇಳಿ ವಯಸ್ಸಿನಲ್ಲೂ ಆರ್ಥಿಕ ಭದ್ರತೆಗಾಗಿ ಪರದಾಡುತ್ತಲೇ ಇರುವ ನಿಮ್ಮ ಸಮಸ್ಯೆಯ ಅರಿವು ನನಗಿದೆ.
ಹಾಗೆ ನೋಡಿದರೆ ದುಡ್ಡಿನ ಕಷ್ಟ ಯಾರಿಗಿಲ್ಲ ಹೇಳಿ..
ಹೀಗಿರುವಾಗ ನೀವು ಇತ್ತೀಚೆಗೆ ಮಂಗಳಗಂಗೋತ್ರಿಯ ವೇದಿಕೆಯಲ್ಲಿ ಪರೋಕ್ಷವಾಗಿ ನಿಮ್ಮ ಗೋಳು ತೋಡಿಕೊಂಡಿದ್ದು ಸರಿ ಅನ್ನಿಸಲಿಲ್ಲ. ವಿವಿಯ ಅಂತರ್ ಕಾಲೇಜ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮ ಅದಾಗಿದ್ದರಿಂದ ನಿಮ್ಮ ದುಡ್ಡಿನ ತುಟಾಗ್ರತೆ ತೋಡಿಕೊಳ್ಳಲು ಅದು ಸರಿಯಾದ ವೇದಿಕೆಯಾಗಿತ್ತಾ.. ಆಲೋಚನೆ ಮಾಡಿ..
ನೀವು ಆಡಿದ ಮಾತನ್ನು ಮತ್ತೊಮ್ಮೆ ಪರಾಂಬರಿಸಿ ನೋಡಿ. ಈ ಕೆಳಗಿನ ಸಾಲುಗಳ ಧ್ವನಿ ಏನಿದ್ದೀತು ?
"ದೊಡ್ಡ ಪ್ರಶಸ್ತಿ ನನಗೆ ಸಿಕ್ಕಿಲ್ಲ ಎಂಬ ಕೊರಗು ನನಗೆ ಇತ್ತು. ಕೊನೆಗೂ ಪದ್ಮ ಪ್ರಶಸ್ತಿ ನನ್ನನ್ನು ಅರಸಿಕೊಂಡು ಬಂತು. ಪದ್ಮ ಪ್ರಶಸ್ತಿ ಜತೆಗೆ ನನಗೆ ಭಾರೀ ಮೊತ್ತದ ( ೫೦ ಲಕ್ಷ) ಹಣ ಸಿಕ್ಕಿತು ಎಂದೆಲ್ಲ ಸುದ್ದಿಯಾಗಿದೆ. ಆದರೆ ನನಗೆ ಸಿಕ್ಕಿದ್ದು ಕೇವಲ ಒಂದು ಸಾವಿರ ರೂಪಾಯಿ..’ ( ಪ್ರಜಾವಾಣಿ ವರದಿ)
ಅಜ್ಜಾ..
ಇಲ್ಲಿ ಪದ್ಮ ಪ್ರಶಸ್ತಿಗಳ ಬಗ್ಗೆ ನಿಮಗೆ ಇರುವ ತಪ್ಪು ತಿಳುವಳಿಕೆಯ ಗೋಚರ ಆಗಿದೆ. ಪದ್ಮ ಪ್ರಶಸ್ತಿಗಳು ನಾಗರಿಕ ಸಮಾಜಕ್ಕೆ ಸಲ್ಲಿಸಿದ ವಿಶೇಷ ಸೇವೆಗೆ ಕೊಡುವಂಥದ್ದಲ್ಲವೇ? ನಿಜಕ್ಕೂ ರಸಿಕರ ರಾಜನಾಗಿ, ನಿಮ್ಮ ಇಳಿ ವಯಸ್ಸಿನಲ್ಲೂ ಪ್ರೇಕ್ಷಕರ ಅಪೇಕ್ಷೆಯನ್ನು ಹುಸಿ ಮಾಡದೇ ಕೆಲಸ ಮಾಡುವ ನಿಮ್ಮ ಸೇವೆಯನ್ನು ಮನ್ನಿಸಿ ನೀಡಿದ ಗೌರವ ಇದು. ಅಷ್ಟೇ ಅಲ್ಲ. ನಿಮ್ಮ ಜೀವದ ಕಲೆಯಾಗಿರುವ ಯಕ್ಷಗಾನಕ್ಕೆ ಸಿಕ್ಕ ಮೊದಲ ಪದ್ಮ ಪ್ರಶಸ್ತಿಯೂ ಇದು.
ಇಂಥ ಗೌರವದೊಂದಿಗೆ ವ್ಯಕ್ತಿಗತ ಹಣಕಾಸು ವಿಚಾರ ತಳಕುಹಾಕುವುದು ಸರಿಯಾ...? ನೀವು ಪದ್ಮ ಪ್ರಶಸ್ತಿ ಮೂಲಕವೂ ಹಣ ಸಂಪಾದನೆ ಮಾಡಿದ್ದೀರಿ ಎಂದು ಯಾರೋ ಅಪ್ರಸ್ತುತ ಜನ ಏನೋ ಹೇಳಿದರು ಎಂದು ಆ ಬಗ್ಗೆ ವಿವಿ ವೇದಿಕೆಯಲ್ಲಿ ಉತ್ತರ ಹೇಳಿದ್ದು ಸರಿಯಾ ?
ನಾನೇ ಗಮನಿಸುತ್ತಿರುವಂತೆ ಪದ್ಮ ಪ್ರಶಸ್ತಿ ಬಂದ ಬಳಿಕ ನಿಮ್ಮ ಮೇಳದ ಆಟಗಳಿಗೆ ವೀಳ್ಯಗಳು ದುಪ್ಪಟ್ಟು ಆಗಿವೆ. ಇಂಥ ಸಕಾರಾತ್ಮಕ ಅಂಶವನ್ನು ನಾನು ಗಮನಿಸುತ್ತಿದ್ದೇನೆ ಅಜ್ಜಾ..!
ಅದು ಒಂದು ವಿಚಾರ ..
ಅದೇ ವೇದಿಕೆಯಲ್ಲಿ ನೀವಾಡಿದ ಇನ್ನೊಂದು ಮಾತೂ ನನಗೆ ಸರಿ ಬೀಳಲಿಲ್ಲ. ನೀವು "ನಿಮ್ಮ ಹಾಗೂ ನಮ್ಮ’ ಜಿಲ್ಲೆ- ಉತ್ತರ ಕನ್ನಡದ ಬಗ್ಗೆ ಅಷ್ಟೊಂದು ಲಘುವಾಗಿ ಜಿಲ್ಲೆಯ ಹೊರಗೆ ಆಡಬಾರದಿತ್ತು. ಉ.ಕ. ಬಗ್ಗೆ ಮಂಗಳೂರಿನಲ್ಲಿ ನೀವು ಹೇಳಿದ್ದೇನು ಎಂದು ನಿಮಗೆ ನೆನಪಿಸುವೆ. ಹೊರಗಿನ ಕಲಾವಿದರನ್ನು ಕರೆಸಿ ಅವರನ್ನು ಸನ್ಮಾನಿಸುವುದು ದ.ಕ.ದವರ ಸದ್ಗುಣಗಳಲ್ಲೊಂದು ನಿಜ.
ಅದಕ್ಕೆನೀವು ಕೃತಜ್ಞತೆ ಹೇಳಿದ ರೀತಿಯಾದರೂ ಹೇಗಿದೆ ?
"ಕಲಾವಿದರಿಗೆ ಸಮಾಜದಲ್ಲಿ ಪ್ರೋತ್ಸಾಹ ಕಡಿಮೆ.. ಉತ್ತರಕನ್ನಡ ಜಿಲ್ಲೆಯಲ್ಲಂತೂ ಇನ್ನೂ ಕಡಿಮೆ. ನನ್ನನ್ನು ಬೆಳೆಸಿದ್ದು, ದ.ಕ.ಜಿಲ್ಲೆ ಜನತೆ. ಉತ್ತರ ಕನ್ನಡದಲ್ಲಿ ಯಾವುದೇ ಕ್ಷೇತ್ರದಲ್ಲೂ ನನ್ನನ್ನು ಬಿಟ್ಟರೆ ಪದ್ಮಶ್ರೀ ಪ್ರಶಸ್ತಿ ಸಿಕ್ಕವರೇ ಇಲ್ಲ. ಕಲಾವಿದರನ್ನು ಪ್ರೋತ್ಸಾಹಿಸುವ ಮನಸ್ಥಿತಿ ಅಲ್ಲಿ ಬೆಳೆದಿಲ್ಲ.. ಉತ್ತರಕನ್ನಡದಲ್ಲೂ ಪ್ರತಿಭೆ ಗುರುತಿಸುವ, ಗೌರವಿಸುವ ಮನೋಭಾವ ಬೆಳೆಯಬೇಕು”ಎಂದೆಲ್ಲ ಹೇಳಿದ್ದೀರಿ. ( ಪ್ರಜಾವಾಣಿ ವರದಿ)
ಚಿಟ್ಟಾಣಿಯವರಂತೆ ನಾನೂ ಕೂಡ ಉತ್ತರ ಕನ್ನಡ ಜಿಲ್ಲೆ ಮೂಲದವನು. ಇದೀಗ ದಕ್ಷಿಣ ಕನ್ನಡದಲ್ಲೇ ಸೆಟಲ್ ಆಗಿದ್ದರೂ, ಉತ್ತರ ಕನ್ನಡ ಜಿಲ್ಲೆ ಬಗ್ಗೆ ಲಘುವಾಗಿ ಮಾತನಾಡಿದರೆ ನಾನು ಜಾಗೃತನಾಗುತ್ತೇನೆ. ಕೃಷಿ ಕೇಂದ್ರತ ಹಾಗೂ ಕಾಡು ಕೇಂದ್ರಿತವಾದ ಉ.ಕ. ಜಿಲ್ಲೆಯಲ್ಲಿ ನಾಗರಿಕ ಸಮಾಜದ ಸನ್ಮಾನ, ಗದ್ದಲಗಳು, ಆರ್ಥಿಕತೆ, ವ್ಯವಹಾರ ಕಡಿಮೆ ನಿಜ. ಉತ್ತರ ಕನ್ನಡವನ್ನು ಅದು ಇದ್ದ ರೀತಿಯಲ್ಲಿ ಗೃಹಿಸಿ ಗೌರವಿಸಬೇಕು. ಸಾಧ್ಯವಾದರೆ ನಾವೂ ಏನಾದರೂ ಉತ್ತಮ ಕೆಲಸ ಮಾಡಿ ಜಿಲ್ಲೆಯ ಹೆಸರನ್ನು ಮೇಲಕ್ಕೆತ್ತಬೇಕು ಅಷ್ಟೆ. ಅದನ್ನು ಬಿಟ್ಟು ಶತಮಾನಗಳ ಕಾಲದ ಆರ್ಥಿಕ ಸಮೃದ್ಧಿ ಹಾಗೂ ಶೈಕ್ಷಣಿಕ ಸಮೃದ್ಧಿಯಿಂದ ಬೆಳಗುತ್ತಿರುವ ದಕ್ಷಿಣ ಕನ್ನಡದೊಂದಿಗೆ ಹೋಲಿಸಿ ಉತ್ತರ ಕನ್ನಡದಲ್ಲಿ ಇಂಥದ್ದೆಲ್ಲ ಇಲ್ಲ ಎನ್ನುವುದು ಸರಿಯಲ್ಲ.
ಅಜ್ಜಾ..
'ನಿನ್ನ ಅಣ್ಣನಾದರೆ ಎಲ್ಲದರಲ್ಲೂ ಫಸ್ಟು, ನೀನು ಯಾತಕ್ಕೂ ಬೇಡ’ ಎಂದು ಶಾಲೆಗೆ ಹೋಗುವ ತನ್ನ ಸ್ವಂತ ಮಕ್ಕಳಲ್ಲಿ ಪಾಲಕರು ತಾರತಮ್ಯ ಮಾಡುತ್ತಾರಲ್ಲ ಹಾಗೆ ಆಯಿತು ಈ ಆಲೋಚನಾ ವಿಧಾನ ಅಜ್ಜ..ದಯವಿಟ್ಟು ಜಿಲ್ಲೆಯ ಹೊರಗೆ ಹಾಗೆಲ್ಲ ಹೇಳಬೇಡಿ.

ಚಿಕ್ಕಂದಿನಿಂದಲೂ ಚಿಟ್ಟಾಣಿ ಅಜ್ಜನ ಅಭಿಮಾನಿ ಬಳಗದ ಸದಸ್ಯ ನಾನು. ಇಳಿವಯಸ್ಸಿನಲ್ಲೂ ನಿಮ್ಮ ಕ್ರೀಯಾಶೀಲತೆಗೆ ಅಚ್ಚರಿಪಡುತ್ತೇನೆ. ಹೀಗಿದ್ದೂ ವಿಶ್ವವಿದ್ಯಾಲಯದಂಥ ವೇದಿಕೆಯಲ್ಲಿ ನೀವು ಹೀಗೆಲ್ಲ ಮಾತಾಡಬಾರದಿತ್ತು ಎಂದು ಅನ್ನಿಸಿದೆ..
ತಪ್ಪು ತಿಳಿದುಕೊಳ್ಳಬೇಡಿ ಅಜ್ಜ..
ಇತೀ ನಿಮ್ಮ ಪ್ರೀತಿಯ
-ಹರಗಿ ಸದಾನಂದ

Read More

ಅಗರಿ ರಘುರಾಮ ಭಾಗವತರ ನೆನಪುಗಳು

ಅಗರಿ ರಘುರಾಮ ಭಾಗವತರ ನೆನಪುಗಳು
ಅಪ್ಪ ಕಲಿಸಿದ ಮೊದಲ ಪಾಠ.

ಸುಮಾರು 60 ವರ್ಷಗಳ ಹಿಂದೆ ಜಗಲಿಯಲ್ಲಿ ನಡೆದ ತಾಳಮದ್ದಳೆಯೊಂದರ ದೃಶ್ಯ ಕಲ್ಪಸಿಕೊಳ್ಳಿ.
ಭಾರವಾಯಿತು ಗಧೆ. ಧೈರ್ಯ ಹಿಂಗೊಳಿಸಿತು..ಕೌರವಾದ್ಯರ ಕೊಲ್ಲಲಾರೆ.. ಎಂದು ಹೇಳುವ ಪದ್ಯವೊಂದು ಕೃಷ್ಣ ಸಂಧಾನ ಪ್ರಸಂಗದಲ್ಲಿ ಬರುತ್ತದೆ. ಬಹು ಪ್ರದರ್ಶಿತ ಯಕ್ಷಗಾನಗಳಲ್ಲಿ ಒಂದಾದ ಕೃಷ್ಣ ಸಂಧಾನದ ಈ ಪದ್ಯ ವಿಷಾದ  ಯೋಗದ ಭೀಮನ ಅಭಿವ್ಯಕ್ತಿಯಾಗಿ ಬರುವಂಥ ಪದ್ಯ.
ರಾಜ್ಯಭ್ರಷ್ಟರಾಗಿ ವಸವಾಸ ಮುಗಿಸಿ ಬರುವ ಪಾಂಡವರು ಧರ್ಮರಾಯನ ಆಶಯದಂತೆ ಕೌರವ-ಪಾಂಡವರ ನಡುವಿನ ವ್ಯಾಜ್ಯಕ್ಕೆ ಶ್ರೀ ಕೃಷ್ಣನನ್ನು ಸಂಧಾನಕಾರನಾಗಿ ಕಳುಹಿಸುವ ಸಂದರ್ಭ. ತುಂಬಿದ ಸಭೆಯಲ್ಲಿ ಸೀರೆ ಎಳೆದು ಮಾನ ಕಳೆಯಲು ಪ್ರಯತ್ನಿಸದ ಕೌರವರೊಂದಿಗೆ ಮತ್ತೆ ಸಂಧಾನ ಎಂಬುದು ದ್ರೌಪದಿಗೆ ಸ್ವಲ್ಪವೂ ಸರಿ ಕಾಣುವುದಿಲ್ಲ.  ಪಾಂಡವರಲ್ಲಿ ತನಗೆ ಅತ್ಯಂತ ಇನಿಯನಾದ ಭೀಮನಲ್ಲಿ ತನ್ನ ಮನದಾಳ ಹೇಳಿ, ಸಂಧಾನದ ವಿರುದ್ಧ ಭೂಮಿಕೆಯನ್ನು ಬಿತ್ತಲು ಪ್ರಯತ್ನಿಸುವ ಸನ್ನಿವೇಶ ತಾಳಮದ್ದಳೆ ವೀಕ್ಷರಿಗೆ ಹೊಸದಲ್ಲ.ಅದೊಂದು ವಿಶಿಷ್ಟ ದಾಂಪ್ಯ ಗೀತೆಯೂ ಹೌದು.
ಆರಂಭದಲ್ಲಿ ಭೀಮನೂ ಯುದ್ಧದ ಬಗ್ಗೆ ಉತ್ಸಾಹ ತೋರುವುದಿಲ್ಲ. ತನಗೆ ಜೀವನದಲ್ಲಿ ಕಷ್ಟ ಕಾರ್ಪಣ್ಯ ಕಂಡು ಸಾಕಾಗಿ ಹೋಗಿದೆ..ಮತ್ತೆ ಮತ್ತೆ ಯುದ್ಧದ ಬಗ್ಗೆ ಮಾತಾಡಬೇಡ.. ವನವಾಸದಲ್ಲಂತೂ ಒಂದು ದಿನವೂ ಹೊಟ್ಟೆ ತುಂಬ ಉಣ್ಣುವುದು ಸಾಧ್ಯವಾಗಲಿಲ್ಲ. ಎಲ್ಲರೂ ಒಪ್ಪಿದರೆ, ಸಂಧಾನವಾದರೆ ಏನು ಸಮಸ್ಯೆ ಎಂದಾಗ ಸಿಟ್ಟಿಗೇಳುವ ದ್ರೌಪದಿ ಎದುರು ವಿಷಾದದಲ್ಲಿ ತನ್ನ ಜೀವನದ ನೋವನ್ನು ಹೇಳುವ ಸನ್ನಿವೇಶ ಅದು.
ಈ ಹಾಡನ್ನು ಅಂದು ಯುವಕ ಅಗರಿ ರಘುರಾಮ ಭಾಗವತರು ಸಾಮಾನ್ಯ ವಿಷಾದದ ಛಾಯೆಯಲ್ಲಿ ಹಾಡುತ್ತಿದ್ದರು.
ಮಗನ ಹಾಡುವ ಶೈಲಿ ಅಲ್ಲಿಯೇ ಸಮೀಪ ಇದ್ದ ತಂದೆ, ಪ್ರಸಿದ್ಧ ಭಾಗವತ ಅಗರಿ ಶ್ರೀನಿವಾಸ ಭಾಗವತರಿಗೆ ಭಾರೀ ಸಿಟ್ಟನ್ನು ತರಿಸಿತಂತೆ.
"ಎಂಥದಯ್ಯ ನಿನ್ ಚಪ್ಪೆ ಹಾಡು. ಭೀಮನ ವಿಷಾದದಲ್ಲೂ ಒಂದಿಷ್ಟು ವೀರ ರಸ ಇರಬೇಕು. ಸಾಮಾನ್ಯರು ಅಳುವು ಬೇರೆ.. ಖಲಿ ಭೀಮನ ವಿಷಾದ ಬೇರೆ ಎಂಬ ಭಾವನೆ ಹಾಡಲ್ಲಿ ಬರಲಿ' ಎಂದು ಎಲ್ಲರ ಎದುರೇ ಮಗನಿಗೆ ಬೈದರಂತೆ. ಪ್ರತಿಯೊಂದು ಪಾತ್ರದ ಭಾವನೆಯನ್ನೂ ಭಾಗವತ ಮೊದಲು ಪದ್ಯದಲ್ಲಿ ಅಭಿವ್ಯಕ್ತಿಸಬೇಕು, ನಂತರ ಅದನ್ನು ಅರ್ಥ ರೂಪದಲ್ಲಿ ಪಾತ್ರಧಾರಿ ಮುಂದುವರಿಸಬೇಕು ಎಂಬ ತಂದೆಯ ತತ್ವವನ್ನು ಅಂದಿನಿಂದಲೇ ನಾನು ಕಲಿತೆ ಎನ್ನುತ್ತಾರೆ ರಘುರಾಮ ರಾವ್.
20 ವರ್ಷ ಹಿಂದೆ ನಿವೃತ್ತರಾಗಿ ಬಜಪೆ ಸಮೀಪ ಎಡಪದವಿನಲ್ಲಿ ಒಂದು ಅಂಗಡಿ ಹಾಕಿಕೊಂಡು ಅದರ ಗಲ್ಲೆಯಲ್ಲಿ ಕುಳಿತು ವ್ಯಾಪಾರ ಮಾಡುತ್ತ ತಮ್ಮ ಜೀವನದ ಎರಡನೆ ಇನ್ನಿಂಗ್ಸ್ ಆಡುತ್ತಿರುವ ರಘುರಾಮ ರಾವ್ ತಾನು ಜೀವನದಲ್ಲಿ ಮೊಟ್ಟ ಮೊದಲು ಮಾಡಿದ ಭಾಗವತಿಕೆಯನ್ನು ಸ್ಮರಿಸಿದ್ದು ಹೀಗೆ..
ಅಂದಿನ ಕೃಷ್ಣ ಸಂಧಾನದ ವಿಶೇಷ  ಎಂದರೆ ಅಪರೂಪಕ್ಕೆ ಅರ್ಥವನ್ನೂ ಹೇಳುತ್ತಿದ್ದ ಹಿರಿಯ ಅಗರಿ ಭಾಗವತರು ಅಂದು ಸ್ವತಃ ಭೀಮನ ಪಾತ್ರಧಾರಿಯಾಗಿದ್ದರು. ಜಾಗಟೆ ಹಿಡಿದು ಭಾಗವತಿಕೆ ಆರಂಭಿಸಿದ ಮಗನಿಗೆ ಅಲ್ಲೇ ಚುಚ್ಚಿ ತಿದ್ದಿದ್ದರು.
ಹೀಗೆ ಆರಂಭವಾಗುತ್ತದೆ ಅಗರಿ ರಘುರಾಮ ರಾಯರ ಯಕ್ಷಗಾನ ವಡನಾಟ. ನಂತರ ಸುಮಾರು 35 ವರ್ಷಗಳ ಕಾಲ ನಡೆಯುತ್ತದೆ. ಪ್ರಸಿದ್ಧ ಟೆಂಟ್ ಮೇಳಗಳಲ್ಲಿ ಒಂದಾದ ಸುರತ್ಕಲ್ ಮೇಳದ ಆರಂಭದಿಂದ ಕೊನೆಗೆ ಮೇಳ ಮುಚ್ಚುವ ತನಕವೂ ಅವರು ಇದ್ದು, ನಿವೃತ್ತಿ ನಂತರ ಮಕ್ಕಳನ್ನು ಸೇರಿಕೊಂಡು ಉದ್ಯಮದಲ್ಲಿ ತೊಡಗಿಕೊಂಡ ಕ್ರಾಂತಿಕಾರಿ ಆಲೋಚನೆಯ ಮನುಷ್ಯ.
ಯಕ್ಷಗಾನದೊಂದಿಗೆ ತೀವ್ರ ಒಡನಾಡಿ ಆಗಿದ್ದದ್ದಷ್ಟೇ ಅಲ್ಲ, ಮನೆತನದ ಕೊಡುಗೆಯಾದ ಅಗರೀ ಶೈಲಿಯನ್ನು ಸಾಗಿಸಿ ತಂದರೂ, ಇದೀಗ ಅದರಿಂದ ಸಂಪೂರ್ಣ ಆಚೆ ಬಂದಿರುವ ಬಗ್ಗೆ ಅವರಲ್ಲಿ ಸ್ವಲ್ಪವೂ ವಿಷಾದ ಕಾಣುವುದಿಲ್ಲ.
***

ನೌಕರಿ ಬಿಟ್ಟು ಬಂದರು:

ತಂದೆಯ ಪಡಿಯಚ್ಚಿನಂತೆ ಹಾಡುವುದನ್ನು ಕಲಿತರೂ, ಅಲೋಷಿಯಸ್ ಕಾಲೇಜಿನಲ್ಲಿ ಆಗಿನ ಕಾಲದಲ್ಲೇ ಎಸ್ಸೆಸೆಲ್ಸಿ ನಂತರ ಎಫ್ಎ ತನಕ ಓದಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ರಘುರಾಮ ರಾಯರನ್ನು ಮೇಳದವರು ವತ್ತಾಯ ಪೂರ್ವಕ ಕರೆದರು. ಆ ವರ್ಷ ಸುರತ್ಕಲ್ ಮೇಳಕ್ಕೆ ಭಾಗವತರೇ ಇಲ್ಲದ ಕಾರಣ ಬರುವಂತೆ ಕರೆ ಬಂದಿತು. ಹಾಗಂತ ಯಕ್ಷಗಾನ ತನ್ನನ್ನು ಪೂರ್ಣವಾಗಿ ಸಾಕೀತು ಎಂಬ ನಂಬುಗೆ ಬಾರದೆ ರಘುರಾಮ ರಾಯರು 6 ತಿಂಗಳು ಆರೋಗ್ಯ ಕಾರಣದ ರಜೆ ಹಾಕಿ ಒಂದು ತಿರುಗಾಟಕ್ಕೆ ಒಪ್ಪಿಕೊಂಡು ಮೇಳಕ್ಕೆ ಬಂದವರು. ನಂತರ ಮೇಳದವರು ಅವರನ್ನು ಬಿಡದ ಕಾರಣ ನೌಕರಿ ಬಿಟ್ಟು ಭಾಗವತಿಕೆಯನ್ನೇ ಉಪ ಜೀವನವಾಗಿ ಆಯ್ದುಕೊಂಡರು.
ಆರಂಭದಲ್ಲಿ ಪೆಟ್ರೊ ಮ್ಯಾಕ್ಸ್ ಲೈಟಿನಲ್ಲಿ, ಯಾವುದೇ ಮೈಕ್್ ಇಲ್ಲದೆ ಇಡೀ ರಾತ್ರಿ ಒಬ್ಬರೇ ಭಾಗವತರು ಆಟಗಳನ್ನು ನಿವರ್ಹಿಸುತ್ತಿದ್ದರು. ತಿರುಗಾಟದ ಸಂದರ್ಭ ಭಾಗವತಿಕೆಯ ಜತೆಗೆ ನಿವಾರ್ಹಕನ ಕೆಲವು ಜವಾಬ್ದಾರಿಗಳೂ ತನಗೆ ಇಷ್ಟವಾಗಿತ್ತು. ಆಟ ಆರಂಭ ಆಗುವ ಮೊದಲು ಗಲ್ಲಾ ಪೆಟ್ಟಿಗೆಯಲ್ಲಿ ಕುಳಿತು ಟಿಕಿಎಟ್ ಕೊಡುವುದು ಇವರ ಮುಖ್ಯ ಆಸಕ್ತಿಯಾಗಿತ್ತು. ಇಂಥ ಅನುಭವದ ಜತೆ ಆಡಳಿತದಲ್ಲಿನ ನಿಷ್ಠೆಯೂ ತನಗೆ ನಂತರ ಉದ್ಯಮ ತೂಗಿಸುವಾಗ ಅನುಕೂಲಕ್ಕೆ ಬಂತು ಎಂದು ಅವರು ಸ್ಮರಸಿಸುತ್ತಾರೆ.

****

ತಡೆಯಾಜ್ಞೆಯಿಂದಾಗಿ ರದ್ದಾದ ಆಟ.

ಟೆಂಟ್  ಮೇಳದಲ್ಲಿ ಜನರ ಆಕರ್ಷಣೆಗೆ ಪ್ರತೀ ವರ್ಷವೂ ಒಂದೊಂದು ಹೊಸ ಹೊಸ ಆಟವನ್ನು ಆಡಬೇಕಾಗಿತ್ತು. ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಶಸ್ವೀ ಆಗಿದ್ದ ಕಾಲ ಅದು. ಸುರತ್ಕಲ್ ಮೇಳದ ಯಜಮಾನ ಕಸ್ತೂರಿ ಪೈ ಅವರು ಭಾಗವತ ಅಗರಿ ಅವರಲ್ಲಿ ಕೇಳಿದಾಗ, ನಾವೂ ಆಡಿಸಬಹುದು ಎಂದು ಹೇಳಿದರು. ಪ್ರಸಿದ್ಧ ಕಲಾವಿದರಿರುವ ಸುರತ್ಕಲ್ ಮೇಳದಲ್ಲಿ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಆಡಲಾಗುವು ಎಂಬ ವಿಷಯ ಎಲ್ಲೆಡೆ ಪ್ರಚಾರ ಆಗುತ್ತಲೇ, ಆಗ ಧರ್ಮಂಸ್ಥಳ ಮೇಳದ ಮ್ಯಾನೇಜರ್ ಹಾಗೂ ಪ್ರಸಿದ್ಧ ಕಲಾವಿದ ಕುರಿಯ ವಿಠಲ ಶಾಸ್ತ್ರಿಗಳು ರಘುರಾಮ ರಾಯರನ್ನು ಭೇಟಿಯಾಗಿ "ನೋಡಿ ಅದು ನಮ್ಮ ಮೇಳದ ಆಟ. ನೀವು ಅದನ್ನು ಆಡುವುದಕ್ಕಾಗದು' ಎಂದು ಹೇಳಿದರಂತೆ. ಕಾಪಿ ರೈಟ್ ವಿಚಾರಗಳು ಆಗ ಪ್ರಚಲಿತ ಇರುವ ಕಾಲ ಅಲ್ಲದಿದ್ದರೂ, ಧರ್ಮಸ್ಥಳ ಮೇಳ ಹಾಗೂ ಸುರತ್ಕಲ್ ಮೇಳದ ನಡುವೆ ಪ್ರೇಕ್ಷಕರನ್ನು ಸೆಳೆಯುವ ವಿಚಾರದಲ್ಲಿ ತುರುಸಿನ ಸ್ಪರ್ಧೆ ಇರುವ ಕಾಲ ಅದು.ಕುರಿಯ ವಿಠಲ ಶಾಸ್ತ್ರಿಗಳ ತಾಕೀತನ್ನು ಯಜಮಾನರಲ್ಲಿ ಹೇಳುವಷ್ಟರಲ್ಲೆ ಎಲ್ಲೆಡೆ ಪ್ರಚಾರ ಆಗಿ ಬೆಳ್ಮಣ್ಣು ಮತ್ತಿತರ ಕಡೆಯಲ್ಲಿ ಆಟ ಆಡುವುದು ನಿಗದಿಯೂ ಆಗಿತ್ತು. ಅದಕ್ಕಾಗಿ ಮಂಗಳೂರಿನ ಆಗಿನ ಪ್ರಸಿದ್ಧ ವಕೀಲರೊಬ್ಬರಲ್ಲಿ ಕಸ್ತೂರಿ ಪೈಗಳು ಏನು ಮಾಡುವುದು ಎಂದು ಕೇಳಿದಾಗ, ಏನೂ ಆಗುವುದಿಲ್ಲ. ನಿಮ್ಮದು ರಿಜಿಸ್ಟರ್ಡ್ ಮೇಳ. ನೀವು ಆಡಿ ಎಂದು ಧೈರ್ಯ ಹೇಳಿದರಂತೆ.
ಅಂತೂ ಬೆಳ್ಮಣ್ಣಿನಲ್ಲಿ ಆಟಕ್ಕೆ ಸಿದ್ಧವಾಗಿ ಗಣಪತಿ ಪೂಜೆಗೆ ಸಜ್ಜಾಗುವ ಹೊತ್ತಿಗೆ ಟೆಂಟಿಗೆ ಪೊಲೀಸರು ಬಂದರು. ಅಲ್ಲದೆ ಎರಡು ವಾರದ ಅವಧಿಗೆ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಆಡದಂತೆ ಇರುವ ಜಿಲ್ಲಾಧಿಕಾರಿಯಿಂದ ತರಲಾದ ತಡೆಯಾಜ್ಞೆಯ ಪತ್ರವನ್ನೂ ಯಜಮಾನರಿಗೆ ಮತ್ತು ಭಾಗವತರಿಗೆ ವಿತರಿಸಲಾಯಿತು. ಅದಕ್ಕಾಗಿ ಅಂದು ನಿಗದಿಯಾಗಿದ್ದ ಆಟ ನಡಯಲಿಲ್ಲ. ಯಜಮಾ ಕಸ್ತೂರಿ ಪೈ ಸುಮ್ಮನಾಗಲಿಲ್ಲ. ವಾಪಸ್ ಜಿಲ್ಲಾಧಿಕಾರಿಗೆ ನೊಟೀಸು ನೀಡಿ, ಆದೇಶದಂತೆ ನಮ್ಮ ಪ್ರದರ್ಶನಕ್ಕೆ ತಡ ಉಂಟು ಮಾಡಿದ ಜಿಲ್ಲಾಡಳಿತ  ಮೇಳದ ಹದಿನೈದು ದಿನದ ಖರ್ಚನ್ನು ಭರಿಸಬೇಕು ಎಂದು ಕೋರ್ಟ್ನಲ್ಲಿ ವ್ಯಾಜ್ಯ ಹೂಡುತ್ತಾರೆ. ಇದರಿಂದ ಹೆದರಿದ ಜಿಲ್ಲಾಧಿಕಾರಿ ಧರ್ಮಸ್ಥಳದ ಹಿಂದಿನ ಹೆಗ್ಗಡೆಯವರು ಮತ್ತು ಸುರತ್ಕಲ್ ಮೇಳದ ಯಜಮಾನರ ನಡುವೆ ಸಂಧಾನ ಏರ್ಪಡಿಸುತ್ತಾರೆ. ಮೊದಲು ಹರಕೆ ಆಟವನ್ನು ಧರ್ಮಸ್ಥಳದಲ್ಲಿ ಆಡಿ, ನಂತರ ಬೇರೆಡೆ ಆಡಬೇಕು ಎಂಬ ಕಂಡೀಶನ್ ಆಧಾರದಲ್ಲಿ ಸುರತ್ಕಲ್ ಮೇಳಕ್ಕೆ ಆಟ ಆಟಡಲು ಹಸಿರು ನಿಶಾನೆ ಸಿಗುತ್ತದೆ.
ಆಟಕ್ಕೆ ಹೋದ ಸುರತ್ಕಲ್ ಮೇಳಕ್ಕೆ ಎಲ್ಲ ರೀತಿ ಉಚಿತ ವ್ಯವಸ್ಥೆ, ವೀಳ್ಯದ ದುಡ್ಡಿನೊಂದಿಗೆ ಭಾಗವತರು, ಯಜಮಾನರು ಮತ್ತು ಹಿರಿಯ ಕಲಾವಿದರಿಗೂ ಶಾಲು ಹೊದೆಸಿ ಹಿಂದಿನ ಹೆಗ್ಗಡೆಯವರು ಆಟ ಆಡಿಸಿ  ಕಳುಹಿಸಿ ಕೊಡುವ ಮೂಲಕ ವಿವಾದ ಇತ್ಯರ್ಥ ಆದ ಘಟನೆ ಇನ್ನೂ ರಘುರಾಮ ರಾಯರ ಮನಸ್ಸಿನಲ್ಲಿ ಅಚ್ಚಾಗಿ ಇದೆ.
****
ವೇದಿಕೆಯಲ್ಲಿ ಕುಸಿದ ರಾಮಯ್ಯ ರೈಗಳು

ಪ್ರಸಿದ್ಧ ಕಲಾವಿದ ಅಳಕೆ ರಾಮಯ್ಯ ರೈ ಇದ್ದಾರೆ ಎಂದರೆ, ಆಟಕ್ಕೆ ಜನರು ಆಕರ್ಷಿತರಾಗುತ್ತಿದ್ದ ಕಾಲ. ಅವರು ಮತ್ತು ಪುತ್ತೂರು ನಾರಾಯಣ ಹೆಗ್ಡೆ ಅವರನ್ನೊಳಗೊಂಡ ಸುರತ್ಕಲ್ ಮೇಳ ಒಮ್ಮೆ ಮುಂಬಯಿಗೆ ಹೋಗಿತ್ತು, ಭಾಗವತರಾಗಿ ಅಗರಿ ಸಾರಥ್ಯ.ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಮೊದಲು ಕರ್ಣ ಪರ್ವ. ನಂತರ ಗಧಾಯುದ್ಧ ಆಟ.
ಕರ್ಣ ಪರ್ವದಲ್ಲಿ ಶಲ್ಯನೊಂದಿಗಿನ ಸನ್ನಿವೇಶ ಚೆಂದ ಆಯಿತು. ನಂತರ ಅರ್ಜುನ ಕರ್ಣರ ಮುಖಾಮುಖಿಯಲ್ಲಿ ಅರ್ಧ ಭಾಗ ಕಳೆದು, ಕರ್ಣನ ರಥದ ಗಾಲಿ ಹೂತು ಹೋಗು ಹೊತ್ತಿಗೆ, ಅಭಿನಯಿಸುತ್ತಿದ್ದಾಗಲೇ ಒಮ್ಮೆ ಬಾಯಿಯನ್ನು ತೆರೆದ ರೈಗಳು ಮುಚ್ಚಲೇ ಇಲ್ಲ. ಕಳೆದ ಬಾಯಿಯನ್ನು ಮುಚ್ಚುವುದಕ್ಕೆ ಸಾಧ್ಯ  ಆಗದೆ, ಅಲ್ಲೇ ಕುಸಿದು ಕುಳಿತರು*.
ದೊಡ್ಡ ಪ್ರೇಕ್ಷಕ ವರ್ಗ ಎದುರಿಗೆ ಇದ್ದು ಸಭೆಯಲ್ಲಿ ಗಲಿಬಿಲಿ ಉಂಟಾಗುವ ಮೊದಲು ಪರದೆ ಬಿಟ್ಟು ರೈ ಗಳನ್ನು ಒಳಕ್ಕೆ ಸಾಗಿಸಲಾಯಿತು.ಒಳಗೆ ಹೋದರೂ ರೈಗಳು ಸುಧಾರಿಸಿಕೊಳ್ಳಲೇ ಇಲ್ಲ. ಗಧಾ ಪರ್ವ ಆರಂಭಿಸೋಣ ಎಂದರೆ, ಪುತ್ತೂರು ನಾರಾಯಣ ಹೆಗ್ಡೆ ಇನ್ನೂ ಬಣ್ಣ ಹಚ್ಚಿರಲಿಲ್ಲ. ಪ್ರೇಕ್ಷಕರು ಎದ್ದು ಹೋಗುವ ಮೊದಲು ರಂಗಸ್ಥಳವನ್ನು ತುಂಬುವುದಕ್ಕೆ ಏನೋ ಒಂದು ಮಾಡಬೇಕಾಗಿತ್ತು.
ತಕ್ಷಣಕ್ಕೆ  ಉತ್ತಮ ಮಾತುಗಾರನೊಬ್ಬನಿಗೆ ಸಂಜಯನ ಗವನ್ ಹಾಕಿಸಿ, ಕರ್ಣ ಪರ್ವದ ಅರ್ಜುನನಿಗೆ ಕರ್ಣಾವಸಾನದ ನಂತರ ಭೇಟಿಯಾಗುವ ಸಂಜಯನಲ್ಲಿ ನಡೆದ ಕಥೆಯನ್ನು ಹೇಳುವ ನೆಪದಲ್ಲಿ ಅರ್ಧ ತಾಸು ರಂಗಸ್ಥಳ ತುಂಬಿದ್ದಾಯಿತು. ಅಷ್ಟರಲ್ಲಿ ಸಜ್ಜಾಗಿದ್ದ ಗಧಾಯುದ್ಧ ಪಾತ್ರಧಾರಿಗಳನ್ನು ರಂಗಸ್ಥಳಕ್ಕೆ ಕರೆಸಿ ಪ್ರೇಕ್ಷಕರ ಎದುರು ಅಂದಿನ ಅಪಘಾತವನ್ನು ಮರೆ ಮಾಚಿದ ಸನ್ನಿವೇಶವನ್ನು ರಘುರಾಮ ರಾಯರು ಸ್ಮರಿಸುತ್ತಾರೆ.
*ವಿಪರೀತ ನಿದ್ದೆಗೆಡುವುದರಿಂದ ಗಲ್ಲದ ಪಕ್ಕೆಲುವಿನ ನರಗಳು ದುರ್ಬಲ ಆಗಿ ಆ... ಸಮಸ್ಯೆ ಉಂಟಾಗುತ್ತದೆ. ಕೆಲವರಿಗೆ ಲಟ್ ಎಂದು ಕಿವಿ ಪಕ್ಕದ ಎಲುಬುಗಳು ಲಟ್ ಎಂದು ಮುರಿದ ಅನುಭವವೂ ಆಗುವುದಿದೆ.
*****
ಕೌರವನನ್ನು ಸೋಲಿಸಿದ ಶೇಣಿ ಕೃಷ್ಣ

ಶೇಣಿ ಗೋಪಾಲ ಕೃಷ್ಣ ಭಟ್ಟರು ಸುರತ್ಕಲ್ ಮೇಳದಲ್ಲಿದ್ದ ಕಾಲ ಅದು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ಇಟಗಿಯಲ್ಲಿ ಕೃಷ್ಣ ಸಂಧಾನ ಆಟವನ್ನು ಅಲ್ಲಿನ ಕಾಂಟ್ರಾಕ್ಟರ್ ಒಬ್ಬರು ಏರ್ಪಡಿಸಿದ್ದರು. ಪ್ರಸಿದ್ಧ ಸಂಸ್ಕೃತ ಪಂಡಿತ ಹಾಗೂ ವಾಗ್ಮಿ ಮತ್ತು ಹವ್ಯಾಸಿ ಅರ್ಥಧಾರಿ ಬುಚ್ಚನ್ ನಾರಾಯಣ ಶಾಸ್ತ್ರಿ  ಅವರ ಬೆಂಬಲಿಗರು ಏರ್ಪಡಿಸಿದ್ದ ಆಟ. ಬೆಂಬಲಿಗ ಬೇಡಿಕೆಯಂತೆ ಶಾಸ್ತ್ರಿ ಅವರ ಕೌರವ ಮತ್ತು ಶೇಣಿ ಅವರ ಕೃಷ್ಣ. ಪ್ರೇಕ್ಷಕರ ಬೇಡಿಕೆಯಂತೆ ಬಡಗಿನ ಪ್ರಸಂಗ ಪಠ್ಯ ಹಾಗೂ ಹಿಮ್ಮೇಳವನ್ನೂ ಇಡಲಾಗಿತ್ತು. ಅಗರಿಯವರು ಪ್ರಧಾನ ಭಾಗವತನಾದರೂ ಕಾಂಟ್ರಾಕ್ಟರ್ ಕೋರಿಕೆಯಂತೆ ಚೌಕಿಯಲ್ಲಿ ಕುಳಿತಿದ್ದರು.
ಬುಚ್ಚನ್ ಶಾಸ್ತ್ರಿಗಳು ಪ್ರಖಾಂಡ ಪಂಡಿತರಾದರೂ ರಂಗದ ಅನುಭವ ಕಡಿಮೆ. ಕೃಷ ಕಾಯರಾದ ಶಾಸ್ತ್ರಿಗಳನ್ನು ಕೌರವನ ಹದಕ್ಕೆ ತರಲು ಗೋಣಿ ಚೀಲ ಸುತ್ತಿ ಅವರ ವೇಷ ಸಿದ್ಧಪಡಿಸಿ ರಂಗಕ್ಕೆ ಕಳುಹಿಸಲಾಯಿತು.
ತಮ್ಮ ಪಾಂಡಿತ್ಯಕ್ಕನುಗುಣ ಶಾಸ್ತ್ರಿಗಳು ಕೌರವನ ಪೀಠಿಕೆಯನ್ನೇ ಅರ್ಧ ತಾಸು ಹೇಳಿ ಚಪ್ಪಾಳೆ ಗಿಟ್ಟಿಸಿದ್ದರಲ್ಲದೆ,ಚೌಕಿ ಮನೆಯಲ್ಲೂ ಅವರ ಸಾಕಷ್ಟು ಬೆಂಬಲಿಗರು ಅವರ ಸಹಾಯಕ್ಕೆ ಇದ್ದರು.ಇದೆಲ್ಲ ನೋಡಿದರೆ, ಅವರ ಎದುರು ಶೇಣಿಯವರ ಕೃಷ್ಣ ಸಪ್ಪೇ ಆದೀತು ಎಂದು ಎಲ್ಲರೂ ಅಂದುಕೊಂಡಿದ್ದರು.
ಆದರೆ ನಂತರ ಆದದ್ದೇ ಬೇರೆ. ವಿರೋಧಿ ಅರ್ಥದಾರಿಯನ್ನು ಖಂಡಿಸುವಲ್ಲಿ ಪರಿಣತಿ ಹೊಂದಿದ್ದ ಶೇಣಿ, ಪ್ರತಿಯೊಂದು ಮಾತಿನಲ್ಲೂ ಕೌರವನನ್ನು ಕಟ್ಟಿ ಹಾಕಿ, ಮುಖಭಂಗ ಮಾಡಿದರು. ಅದೇ ಸಂದರ್ಭ ಶಾಸ್ತ್ರಿಗಳ ಸೈಜ್ ಹಿಗ್ಗಿಸಲು ತುಂಬಲಾಗಿದ್ದ ಗೋಣಿ ಚೀಲವೂ ಬಿಚ್ಚಿ ಹೋದ ಕಾರಣ ಅವರು ಸಿಂಹಾಸನಕ್ಕೇ ಸೀಮಿತರಾಗಿ, ಗಾಢ ಗರ್ವದಲಿ ಕುಳಿತಿರುವ ಈ ಭೂವರನು ಎಂಬ ಪದ್ಯಕ್ಕಂತೂ ಕೌರವನನ್ನು ಕೃಷ್ಣ ಹನನ ಮಾಡುವಷ್ಟು ತೊಳೆದ ಕಾರಣ, ಆಟ ಅರ್ಧಮರ್ಧದಲ್ಲೇ ಮುಗಿಸಬೇಕಾಯಿತು. ಶೇಣಿಯಿಂದ ಅವಮಾನಿತರಾಗಿ ಚೌಕಿಗೆ ಹೋದರೆ ಶಾಸ್ತ್ರಿಗಳ ವೇಷ ಕಟ್ಟಿ ಕೊಟ್ಟವರೂ ಅಲ್ಲಿ ಇರಲಿಲ್ಲ.ಇಂಥದ್ದೊಂದು ವಿಚಿತ್ರ ಆಟ ಮತ್ತೆಲ್ಲಿಯೂ ಕಾಣಲಿಲ್ಲ ಎಂದು ಅಗರಿ ಭಾಗವತರು ಸ್ಮರಿಸುತ್ತಾರೆ.

****

ಬದಲಾದ ಅಗರಿ ಬ್ರಾಂಡ್

ಇಷ್ಟೊಂದು ಹಿನ್ನೆಲೆ ಇರುವ ಅಗರಿ ರಘುರಾಮ ಭಾಗವತರು ಇತ್ತೀಚಿನ ದಶಕಗಳಲ್ಲಿ ಯಕ್ಷಗಾನದಿಂದ ದೂರ ಆಗಿದ್ದಾರೆ. ವರ್ಷಕ್ಕೊಮ್ಮೆ ಅಗರಿ ಪ್ರಶಸ್ತಿ ಸಂದರ್ಭ ಹಾಗೂ ಸುರತ್ಕಲ್  ಮಹಮ್ಮಾಯಿ ದೇವಸ್ಥಾನದಲ್ಲಿ ದಸರೆ ಸಂದರ್ಭ ಕೆಲವು ತಾಸಿಗಷ್ಟೆ ಅವರ ಯಕ್ಷಗಾನ ಸೀಮಿತ ಆಗಿದೆ. ಅವರ ಪರಂಪರೆಯ ಹಾಡುಗಳ ಧ್ವನಿ ಮುದ್ರಿಸಿ ಇಡುವುದರಲ್ಲೂ ಅವರಿಗೆ ನಂಬಿಕೆ ಇಲ್ಲ.ಶೌಚಾಲಯದ ಕಟ್ಟೆಯಲ್ಲೂ ಎಲ್ಲೋ ಒಗೆಯುವ ಭಾಗ್ಯಕ್ಕೆ ತಮ್ಮ ಪರಂಪರೆ ಹಾಡನ್ನು ಧ್ವನಿ ಮುದ್ರಣ ಮಾಡಿ ಇಡಬೇಕೆ ಎಂದು ಅವರು ಕೇಳುತ್ತಾರೆ.
ನಿಮ್ಮ ಮುಂದೆ ನಿಮ್ಮ ಪರಂಪರೆಯ ಬಗ್ಗೆ ಏನು ಹೇಳುತ್ತೀರಿ ಎಂದರೆ, ಯಾರಿಗೆ ಬೇಕಯ್ಯ ಪರಂಪರೆ ಎನ್ನುತ್ತಾರೆ. ಪರಂಪರೆ ಎಂದರೆ ಏನು ? ನಮ್ಮ ತಂದೆಯ ಹಿಂದೆ ಇದು ಯಾರಲ್ಲಿ ಇತ್ತು. ಯಕ್ಷಗಾನ ಪರಂಪರೆ, ಅಲ್ಲಿನ ದೈನೇಸಿ ಬದುಕು ನಮಗಷ್ಟೇ ಸಾಕು. ನಮ್ಮ ಪರಂಪರೆಯವರಿಗೆ ಬೇಡ ಎಂದು ಖಡಕ್ ಆಗಿ ಹೇಳುತ್ತಾರೆ.
ಅಗರಿ ಪರಂಪರೆ ಅಥವಾ ಬ್ರಾಂಡ್ - ರಘುರಾಮ ಭಾಗವತರ ಕಾಲದಲ್ಲೇ ಇಲೆಕ್ಟ್ರಾನಿಕ್ ಮಳಿಗೆಯ ರೂಪದಲ್ಲಿ ಮರು ಹುಟ್ಟು ಪಡೆದಿದೆ.ರಘುರಾಮ ರಾಯರ ನಿಷ್ಠುರತೆ ಹಾಗೂ ವ್ಯಾವಹಾರಿಕ ಶಿಸ್ತ್ತ, ಭಾಗವತಿಕೆಯ ನಾಯಕತ್ವ ಎಲ್ಲವೂ ಮಳಿಗೆಯ ರೂಪದಲ್ಲಿ ಸಾರ್ವಜನಿಕರೆದುರು ಜೀವಂತವಾಗಿ ಉಳಿದಿದೆ ಎನ್ನಿಸುತ್ತದೆ.

-ಸದಾನಂದ ಹೆಗಡೆ ಹರಗಿ
12-05-2012

Read More

keremane amruta sinchanake tiddupadi

keremane amruta sinchanake tiddupadi

(ಮೂರು ತಿಂಗಳ ಹಿಂದೆ ಮಾಡಿದ ಮೂಲ ಆಕ್ಷೇಪ ಹೀಗಿತ್ತು..
ಬ್ಲಾಗಿನ ಹಳೆಯ ಕಡತವನ್ನು ಇಲ್ಲಿ ಕಟ್ ಪೇಸ್ಟ್ ಮಾಡಿದೆ..
ಮಾಡಿದೆ..
-ಹರಗಿ )

29-2-2012
.........

ಕೆರೆಮನೆ- ಶ್ರೀಮಯ -  ಡಾ. ಜೋಶಿ -ಸಂಸ್ಮರಣೆ ಇತ್ಯಾದಿ..

ಯಕ್ಷಗಾನದಲ್ಲಿ ಹಲವು ಕಾರಣಕ್ಕೆ ಪ್ರಾಥಸ್ಮರಣೀಯವಾದ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇದರ ಅಮೃತ ಮಹೋತ್ಸವ ನೆನಪಿನಲ್ಲಿ "ಶ್ರೀಮಯ ಅಮೃತ ಸಿಂಚನ" ಎಂಬ ಸ್ಮರಣ ಸಂಚಿಕೆ ಇತ್ತೀಚೆಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ  ಬಿಡುಗಡೆ ಆಗಿದೆ. ಅದರ ವಿಶೇಷ ಎಂದರೆ  ಯಕ್ಷಗಾನದಲ್ಲಿ ಶೇಣಿ, ಸಾಮಗರ ನಂತರದ ಸಾಲಿನಲ್ಲಿ  ಎಲ್ಲ ತಿಟ್ಟಿಗೂ ಸಲ್ಲುವ  ಅರ್ಥದಾರಿ ಎಂದು ಖ್ಯಾತಿ ಪಡೆದ ಡಾ. ಎಂ.ಪ್ರಭಾಕರ ಜೋಶಿ ಅವರು ಇದನ್ನು ಸಂಪಾದಿಸಿದ್ದಾರೆ. ಅಂದಹಾಗೆ ಈ ಹಿಂದೆ ಯಕ್ಷಗಾನದಲ್ಲಿ "ಜಾಗರ' ಸೇರಿದಂತೆ ಹತ್ತಾರು ಪುಸ್ತಕಗಳನ್ನು ಹೊರತಂದಿರುವುದು, ಹಿಂದೊಮ್ಮೆ ಯಕ್ಷಗಾನ ಡಾಟ್ ಕಾಮ್ ಎಂಬ ವೆಬ್ ಸೈಟ್ ಮಾಡಿದ್ದು, ಸೇರಿದಂತೆ ಅವರ ಬಯೊಡಾಟಾವನ್ನು ಎಷ್ಟು ಬೇಕಾದರೂ ಹಿಗ್ಗಿಸಬಹುದಾದಷ್ಟು ಇದೆ. ಇಷ್ಟೊಂದು ಹಿನ್ನೆಲೆ ಇರುವವರು ತಂದ "ಅಮೃತ ಸಿಂಚನ" ಕೇವಲ ನಕಲು ಹಾಗೂ ಕೆಟ್ಟ ಸಂಪಾದನೆಗೆ ನಿದರ್ಶನ ಎಂಬದು ಬೇಸರದ ಸಂಗತಿ. ಕಾಪಿ ರೈಟ್ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದೆ ಹೊರತರಲಾದ ಪುಸ್ತಕ ಇದು. ಇದೆಲ್ಲ ನನಗೆ ನೇರವಾಗಿ ಸಂಬಂಧಿಸಿದ ಕಾರಣ ಈ ಬಗ್ಗೆ ವಿವರವಾಗಿ ಬರೆಯಬೇಕಾಯಿತು.

******

ಓರ್ವ ಪತ್ರಕರ್ತನಾಗಿ ಅಲ್ಲದೆ ಯಕ್ಷಗಾನ ಅಭಿಮಾನಿಯಾಗಿ ಡಾ. ಜೋಶಿ ನನ್ನ ಪರಿಚಿತು. ತೀರಾ ಚಿಕ್ಕ ವಯಸ್ಸಿನಲ್ಲಿ, ಸುಮಾರು 30 ವರ್ಷ ಹಿಂದೆ ನಮ್ಮೂರ ದೇವಸ್ಥಾನದ ಚಂದ್ರಶಾಲೆಯಲ್ಲಿ(ಉ.ಕ. ಜಿಲ್ಲೆ ಸಿದ್ದಾಪುರ ತಾಲೂಕು ಇಟಗಿ ರಾಮೇಶ್ವರ ದೇವಸ್ಥಾನ) ವಾಲಿವಧೆಯ ಸುಗ್ರೀವನ ಪಾತ್ರಧಾರಿಯಾಗಿ ಜೋಶಿಯವರು ನನ್ನ ಬಿತ್ತಿಯನ್ನು ಪ್ರವೇಶಿಸದರು. ಹಾಗೆ ವೃತ್ತಿ ಕಾರಣ ಮಂಗಳೂರಿಗೆ ಬಂದ ನಂತರ ಶ್ರೀ ಬಿ.ವಿ. ಸೀತಾರಾಮರ ಕರಾವಳಿ ಅಲೆಯಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸುವ ಸಂದರ್ಭ ಮೂಲ ಜೋಶಿಯವರು ನನ್ನ ಬಿತ್ತಿಯಲ್ಲಿ ಮತ್ತಷ್ಟು ಅಚ್ಚಾದರು. ನಾನು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂಬ ಕಾರಣಕ್ಕೆ ನನ್ನನ್ನು ಆಧರದಿಂದಲೇ ಕಾಣುತ್ತ, ಅವಶ್ಯ ಎನಿಸಿದಾಗ ಯಕ್ಷಗಾನ ಸೇರಿದಂತೆ ಸಾಂಸ್ಕೃತಿಕ ವಲಯದ ಹತ್ತು ಹಲವು ಗಾಸಿಪ್ ಗಳನ್ನು ವರದಿಗೆ ಗ್ರಾಸವಾಗಿ ನೀಡುತ್ತ ಜೋಶಿ ಮತ್ತಷ್ಟು ಹತ್ತಿರವಾದರು.

ನಂತರ ಎಲ್ಲೇ ಸಿಕ್ಕರೂ ಒಂದಿಷ್ಟು ಹೊತ್ತು ಮಾತಾಡುವುದು ರೂಢಿಯಾಯಿತು. ನಾನು ಮಾತಾಡುತ್ತಿದ್ದೆ ಎಂಬುದಕ್ಕಿಂತ ಅವರ ಮಾತು ಕೇಳಿಸಿಕೊಳ್ಳುವ ವ್ಯಕ್ತಿಯಾದೆ ಎನ್ನುವುದೇ ಹೆಚ್ಚು ಸೂಕ್ತ. ನಾವು ಕೆಲಸ ಮಾಡುವ ಪತ್ರಿಕೆ, ಅದರ ಪ್ರಸರಣಾ ವ್ಯವಸ್ಥೆ, ತನ್ನಂಥವರಿಗೂ ಉಚಿತವಾಗಿ ಮನೆಗೆ ಪತ್ರಿಕೆ ಹಾಕುತ್ತಿಲ್ಲ, ಯಾವುದೋ ಪತ್ರಿಕೆ ತಮ್ಮ ಅಂಕಣವನ್ನು ಹೇಳದೇ ಕೇಳದೆ ನಿಲ್ಲಿಸಿದ್ದಕ್ಕಾಗಿ ಮಾಲಕರು ಸ್ವಾರ್ಥಿಗಳು.. ಹೀಗೆ ಜನ್ಮ ಜಾಲಾಡುವುದು ಅವರ ಜಾಯಮಾನ.  ಹಲವು ವಿಚಾರಗಳು ಅಧಿಕಪ್ರಸಂಗ ವಾಗಿಯೇ ಇರುತ್ತಿದ್ದವು. ಮೋಜಾಗಿ ಕಾಣುವ ನಿದರ್ಶನವನ್ನು ಉದಾಹರಣೆ ಹೇಳುವುದಾದರೆ, ಪ್ರತಿಬಾರಿಯೂ ಸಿಕ್ಕಾಗ ಪತ್ರಕರ್ತರು ಕ್ರಿಕೆಟಿಗರ ಬಗ್ಗೆ ತಳೆಯುವ ಧೊರಣೆಯ ಬಗ್ಗೆ ಹೇಳದೆ ಜೋಶಿ ತಮ್ಮ ಮಾತಿಗೆ ಮಂಗಳ ಹೇಳುತ್ತಿರಲಿಲ್ಲ. "ಏನ್ರೀ ನೀವು ಪತ್ರಕರ್ತರು.. ಭಾರತ ಒಂದು ಮ್ಯಾಚ್ ಸೋತರೆ .. ಹೀನಾಯ ಸೋಲು ಅಂತ ಬರೀತೀರಿ.. ಪಾಪ ಹತ್ತಾರು ಮ್ಯಾಚ್ ಗೆಲ್ಲಿಸಿಕೊಟ್ಟ ಸಚಿನ್ ಒಮ್ಮೆ ರನ್ ಮಾಡದೆ ಹಿಂದಿರುಗಿದರೆ ಆತ ಸ್ವಾರ್ಥಿ ಅಂತ ಮುಲಾಜಿಲ್ಲದೆ  ಬರೀತೀರಲ್ಲ".. ಇತ್ಯಾದಿ.. ವಾಸ್ತವಿಕವಾಗಿ ನಾನು ಕ್ರೀಡಾ ಪತ್ರಕತನಲ್ಲ. ಜೋಶಿಯವರೂ ಕ್ರಕೆಟ್ ಮೂಲಕ ಸಾರ್ವಜನಿಕವಾಗಿ ಪರಿಚಿತರೂ ಅಲ್ಲ. ವಿಷಯ ಇಬ್ಬರಿಗೂ ಅಪ್ರಸ್ತುತ !

ಕಡೆಗೆ ನೋಡಲಾಗಿ ಮಂಗಳೂರಿನ ಹೆಚ್ಚಿನ ಪತ್ರಕರ್ತರು ನನ್ನ ಈ ಅನುಭವ ತಮಗೂ ಆಗಿದೆ ಎನ್ನತೊಡಗಿದರು. ಇನ್ನಷ್ಟು ಇಂಥ ಉದಾಹರಣೆ ನೀಡಿದಾಗ ತಮಾಶೆ ಎನಿಸಿತು. ಹಾಗೆಂದು ಜೋಶಿ ಬೊರ್ ಹೊಡೆಸುತ್ತಿರಲಿಲ್ಲ. ಒಂದು ಮನರಂಜನೆಯಾಗಿ ನಾನು ಇನ್ನು ಮುಂದೆಯೂ ಅವರ ಈ ವಾಚಾಳಿತನಕ್ಕೆ ಹಸಿರು ನಿಷಾನೆ ಕೊಡುತ್ತೇನೆ.

****

ಇಂಥ ಜೋಶಿಯವರು ಕೆರೆಮನೆ ಶಂಭು ಹೆಗಡೆಯವರ ನಿಕಟವರ್ತಿಯಾಗಿದ್ದರು. ಶಂಭು ಹೆಗಡೆ ಮೂರು ವರ್ಷ ಹಿಂದೆ ಅನಿರೀಕ್ಷಿತ ನಿಧನರಾದ ಸಂದರ್ಭ ನಾವೆಲ್ಲ ಮಂಗಳೂರಲ್ಲಿ ಅವರ ಸಂಸ್ಮರಣೆ ಹಮ್ಮಿಕೊಂಡೆವು. "ಕಲ್ಪದ ಕಲಾವಿದ" ಎಂಬ ಸ್ಮರಣ ಸಂಚಿಕೆಯನ್ನು ಹೊರ ತಂದೆವು. ಸಂಚಿಕೆಗೆ ನಾನೇ ಸಂಪಾದಕನಾಗಿದ್ದು, 300ಕ್ಕೂ ಹೆಚ್ಚು ಪುಟಗಳ, 80ಕ್ಕೂ ಹೆಚ್ಚು ಬರಹಗಳಿರುವ, ಬಹುವರ್ಣದ ಫೊಟೊಗಳ ದೊಡ್ಡ ಪುಸ್ತಕ  ಅದು. ಅಂತೂ ಶಂಭು ಹೆಗಡೆಯವರ ಮೇಲಿನ ಅಭಿಮಾನದಿಂದ ಅದಕ್ಕಾಗಿ ನಾನು ವ್ಯಯಿಸಿದ ತಿಂಗಳುಗಟ್ಟಲೆ ಸಮಯ ಹಾಗೂ ಒಂದಿಷ್ಟು ಖರ್ಚುಗಳು ನನ್ನ ವಯಕ್ತಿಕ ಶೃದ್ಧಾಂಜಲಿಯ ಕರ್ತವ್ಯ ಎಂದು ತಿಳಿದುಕೊಂಡೆ. ಅದರ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಡಾನ್ ಬಾಸ್ಕೊ ಹಾಲ್ ನಲ್ಲಿ ಆಗಿತ್ತು. ಸಮಿತಿಯವರ ತೀರ್ಮಾನದಂತೆ ಬಿಡುಗಡೆ ಸಮಾರಂಭದಲ್ಲಿ  ಡಾ. ಜೋಶಿ ಅತಿಥಿತಿಯಾಗಿ ವೇದಿಕೆಯಲ್ಲಿ ಬರಲಿಲ್ಲ. ಇದರಿಂದ ಕುಪಿತಗೊಂಡವರೊ ಎಂಬಂತೆ ಡಾ. ಜೋಶಿ ಕಾರ್ಯಕ್ರಮ ಸರಿ ಇಲ್ಲ, ಪುಸ್ತಕವಂತೂ "ಇಂಪ್ರೊಪೇಶನಲ್"  ಇನ್ನೊಂದಿಷ್ಟು ಕತೆ ಸೇರಿಸಿ ನನಗೆ ತಲುಪಿಸಬಹದಾದ ಹಲವರಲ್ಲಿ ಹೇಳಿದರು. ಮೇಲೆ ಹೇಳಿದ ಅಧಿಕಪ್ರಸಂಗದ ನಿದರ್ಶನವನ್ನು ಈ ವಿಷಯಕ್ಕೆ ಅನ್ವಯಿಸಿಕೊಳ್ಳಿ...

ನಾನು ಇನ್ನಷ್ಟು ಶ್ರಮ ವಹಿಸಿ ಕಚೇರಿಗೆ ಇನ್ನೂ ಒಂದೆರಡು ರಜೆ ಮಾಡಿಯಾದರೂ ಪುಸ್ತಕದ ಬಗ್ಗೆ ಕಮೆಂಟ್ ಇಲ್ಲದ ರೀತಿಯಲ್ಲಿ ಹೊರತರಬೇಕಿತ್ತು ಎಂದು ಅನ್ನಿಸಿತ್ತು.

ಶಂಭು ಹೆಗಡೆ ಕೌಟುಂಬಿಕ ಭಿನ್ನಾಭಿಪ್ರಾಯದ ಕಾರಣ ಶಿವಾನಂದ ಹೆಗಡೆ, ಅವರ ಸಹೋದರಿ ಮತ್ತು ತಾಯಿಯ ಪ್ರತ್ಯೇಕ ಮನವಿ ಮೇರೆಗೆ ಕೆಲವು ಲೇಖನಗಳನ್ನು ತೆಗೆದು ಉಳಿದ ಪುಸ್ತಕಗಳಿಗೆ ಬುಕ್ ಬೈಂಡ್ ಮಾಡಿಸಿ ನನ್ನ ಜವಾಬ್ದಾರಿ ಮುಗಿಸುವಷ್ಟರಲ್ಲಿ ಬೆವರಿಳಿದುಹೋಗಿತ್ತು. ಶಂಭು ಕುಟುಂಬದವರೂ ಅದು ಯಾಕಾಗಿ ಅಷ್ಟೊಂದು ಕಚ್ಚಾಡುತ್ತಾರೊ ದೇವರೇ ಬಲ್ಲ. ಟ್ಯಾಲೆಂಟ್ ಮತ್ತು ಜಗಳ ಒಟ್ಟೊಟ್ಟಿಗೆ ಇರುವ ವಂಶವಾಹಿ ಅದಿರಬೇಕು !

ಈ ವಿಚಾರದಲ್ಲಿ ಸಿದ್ಧಾಪುರದ ಎಂ.ಎ. ಹೆಗಡೆಯವರೂ ಕೂಡ ನನಗೆ ಕೆಲವು ಸೂಕ್ಷ್ಮಗಳನ್ನು ತಿಳಿಸಿ ಸಂಪಾದಕನಾಗಿ ಜಾಣತನದಿಂದ ಕೆಲಸ ನಿರ್ವ ಹಿಸುವುದಕ್ಕೆ ಸಹಕರಿಸಿದರು. ಪುಸ್ತಕದ ಹೆಸರಲ್ಲಿ ಶಂಭು ಹೆಗಡೆಯವರೊಟ್ಟಿಗೆ ಸಹಕಲಾವಿದರಾಗಿ ಆಟಗಳಲ್ಲಿ ಮುದ ನೀಡಿದ್ದ -ನಾನು ಗೌರವಿಸುತ್ತಿದ್ದ ಕುಂಜಾಲು ರಾಮಕೃಷ್ಣ ನಾಯಕ್ ಮತ್ತಿತರನ್ನು ಭೇಟಿಯಾಗುವ ಅವಕಾಶ ದೊರೆತಿದ್ದು ನನ್ನ ಸುಕೃತ ಎನಿಸಿತು. ಹಾಗೆ ಕೆಲವರ ಅನುಭವವನ್ನು ಅವರಲ್ಲಿಗೇ ಹೋಗಿ ಕೇಳಿಸಿಕೊಂಡು ಬಂದು ಅದಕ್ಕೆ ಬರಹರೂಪ ಕೊಟ್ಟೆ. ನನ್ನ ಹತ್ತು ಹಲವು ಕಾರ್ಯವನ್ನು ಪಕ್ಕಕ್ಕಿಟ್ಟು ಇದನ್ನೆಲ್ಲ ಮಾಡಬೇಕಾಯಿತು ಎಂದು ಪ್ರತ್ಯೇಕ ಹೇಳುವುದಿಲ್ಲ.  ನನ್ನ ಶ್ರಮ ಗುರುತಿಸಿದ ಸಹೃದಯಿ ಕೆರೆಮನೆ ಶಿವಾನಂದ ಹೆಗಡೆ ಪುಸ್ತಕವನ್ನು ಬೇರೆ ಬೇರೆ ಕಡೆಯಲ್ಲೆಲ್ಲ ಅದ್ದೂರಿಯಾಗಿ ಬಿಡುಗಡೆ ಮಾಡೋಣ ಎಂದು ಹೇಳಿದರು. ನಾನು ಅದನ್ನು ಅಪೇಕ್ಷೆಪಟ್ಟಿರಲಿಲ್ಲ. ಅವರಿಗೆ ಕೊನೆಗೆ ಸಾಧ್ಯವೂ ಆಗಲಿಲ್ಲ. ಕೊನೆಗೆ ಪರಿಸ್ಥಿತಿ ಹೇಗೆ ಬಂದಿತೆಂದರೆ ಸಂಸ್ಮರಣಾ ಸಮಿತಿಯು ಹೊರ ತಂದ ಆ ಸಂಚಿಕೆ ಕೊನೆಗೆ ಸಂಪಾದಕನಾದ ನನಗೂ ಸಿಕ್ಕಿದ್ದು  ಒಂದು ಗೌರವ ಪ್ರತಿ ಹಾಗೂ ಜೇಬು ತುಂಬ ಟೀಕೆ....!  ಸಂಸ್ಮರಣಾ ಸಮಿತಿಯ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಇದೇ ವಿಷಯ ತಿಳಿದು ತುಂಬ ಬೇಸರಪಟ್ಟುಕೊಂಡರು. ಅದೆಲ್ಲ ಇನ್ನೂ ಒಂದು ರಾಮಾಯಣ.

****

ಇಷ್ಟು ಹೇಳಿ ಇದೀಗ ಹೇಳ ಹೊರಟಿರುವ ಮುಖ್ಯ ವಿಷಯಕ್ಕೆ ಬರುತ್ತೇನೆ. ನನ್ನ ಬಗ್ಗೆ "ಇಂಪ್ರೊಫೇಶನಲ್' ಎಂದು ಜರಿದ ಜೋಶಿಯವರು ಕೆರೆಮನೆಯವರ ಇನ್ನೊಂದು ಪುಸ್ತಕ ತರುತ್ತಾರೆ ಎಂಬುದು ವಷಱದ ಹಿಂದೆಯೇ ತಿಳಿಯಿತು. ಪ್ರೊಫೆಶನಲಿಸಂ ಗೊತ್ತಿರುವಂಥ  ಜೋಶಿ ಹೊರ ತರುವ ಪುಸ್ತಕದ ಬಗ್ಗೆ ಸಹಜವಾಗಿ ನಾನು ಕುತೂಹಲಿಯಾಗಿದ್ದೆ. ಸುದೀರ್ಘ ಸಮಯದ ನಂತರ ಗಜಪ್ರಸವದಂತೆ ಇದೀಗ 100 ಪುಟದ ಶ್ರೀಮಯ ಅಮೃತ ಸಿಂಚನ ಹೊರ ಬಿದ್ದಿದೆ.. ಇದು ಇಡಗುಂಜಿ ಮೇಳದ "ಅಮೃತಮಹೋತ್ಸವ"ದ ಕುರಿತಾದ ಪುಸ್ತಕವಾಗಿದ್ದರೂ  ಶಂಭುಹೆಗಡೆ ಸಂಸ್ಮರಣೆಯ "ಕಲ್ಪದ ಕಲಾವಿದ" ಸಂಚಿಕೆಯ ಕೆಟ್ಟ ನಕಲಿನಂತೆ ಕಾಣುತ್ತಿದೆ. ಅದರಿಂದಲೇ ಹೆಚ್ಚಿನ ಬರಹವನ್ನು ಎತ್ತಿ ಹಾಕಿಕೊಳ್ಳಲಾಗಿದೆ. ವಿಜಯ ನಳಿನಿ ರಮೇಶ್, ಹೊಸತೋಟ ಭಾಗವತರು, ಎಂ.ಎ.ಹೆಗಡೆ ಇವೆಲ್ಲ ಶಂಭು ಅವರನ್ನು ನೆನಪಿಸಿ ಕಲ್ಪದ ಕಲಾವಿದಕ್ಕೆ ವಿಶೇಷವಾಗಿ ಬರೆದಿರುವಂಥದ್ದಾಗಿದೆ . ಸಂಸ್ಮರಣ ಸಂಚಿಕೆಯಲ್ಲಿ ಇರುವ ಗುರುರಾಜ್ ಬಾಪಟ್ ಶಂಭು ಅವರನ್ನು ಕೊನೆಯ ದಿನಗಳಲ್ಲಿ ಮಾಡಿದ ಅಪರೂಪದ ಸಂದರ್ಶನವನ್ನೂ ಇದರಲ್ಲಿ ಬಟ್ಟಿ ಇಳಿಸಲಾಗಿದೆ.

ಹೀಗೆ ಅಮೃತ ಸಿಂಚನದಲ್ಲಿರುವ ಇರುವ ಒಟ್ಟು 16 ಬರಹಗಳಲ್ಲಿ  ಸಂಪಾದಕೀಯ ಹೊರತುಪಡಿಸಿ ಮೂರುಕಡೆ ಜೋಶಿಯವರ ಫೋಟೊ ಯುಕ್ತ ಆರ್ಟಿಕಲ್ ಗಳು ಢಾಳಾಗಿ ಕಾಣುತ್ತಿವೆ. ಮತ್ತೂ ಒಂದಿಬ್ಬರು ಎರಡೆರಡು ಕಡೆ ಬರೆದಿದ್ದಾರೆ. ಬಹುತೇಕ 80 ಪ್ರತಿಶತ ಬರಹ ಇಲ್ಲಿ ಯಥಾಪ್ರಕಾರ ಕಲ್ಪದ ಕಾಪಿಯಾಗಿದೆ.

ಉಳಿದಂತೆ ಶಿವಾನಂದರು ತಮ್ಮ ಕಾಪಿ ರೈಟ್ ನಲ್ಲಿ ಇದ್ದ ಶ್ರೀಮಯ ಕಲಾಕೇಂದ್ರದ ಅದೇ ಫೋಟಗಳನ್ನು ಕಲ್ಪದ ಕಲಾವಿದಕ್ಕೆ ಕೊಟ್ಟಂತೆ ಇದಕ್ಕೂ ಕೊಟ್ಟಿದ್ದು, ಅವೂ ಇದೆ.

ಡಾ. ರಾಮಕೃಷ್ಣ ಜೋಶಿ ಅವರ ಇಡಗುಂಜಿ ಮೇಳ ಬರಹವೇ ಸಂಚಿಕೆಯಲ್ಲಿ ಎರಡು ಕಡೆ ಮುದ್ರಣವಾಗಿದ್ದೂ ಸಂಪಾದಕರ ಗಮನಕ್ಕೆ ಬರಲಿಲ್ಲ !

******

ನನಗೆ ಇದಾವುದರಿಂದಲೂ ಬೇಸರ ಆಗಲಿಲ್ಲ. ಆದರೆ  ಪುಸ್ತಕದ ಎಲ್ಲೂ ಕೂಡ ಕಲ್ಪದ ಕಲಾವಿದ ಸಂಚಿಕೆಯಿಂದ ಬರಹಗಳನ್ನು ಬಳಸಿಕೊಂಡಿದೆ ಎಂಬ ಬಗ್ಗೆ ಸಣ್ಣ ಉಲ್ಲೇಖವನ್ನೂ ಮಾಡಲಾಗಿಲ್ಲ.

 ********

ವಿಶೇಷ ಎಂದರೆ...

ಡಾ. ಜೋಶಿ ಸಂಪಾದಕತ್ವದ ಪುಸ್ತಕದ ಮೂರನೆ ಪುಟದಲ್ಲಿ ಕಾಪಿರೈಟ್ ಬಗ್ಗೆ ಬರೆದ ಒಕ್ಕಣೆ ಇಂತಿದೆ ; ಈ ಸಂಚಿಕೆಯಲ್ಲಿ ಬಳಸಲಾದ ಭಾವಚಿತ್ರ, ಲೇಖನ ಇತ್ಯಾದಿಯನ್ನು ಯಾವುದೇ ಉದ್ದೇಶಕ್ಕೆ ಬಳಸುವುದಿದ್ದಲ್ಲಿ ಮಂಡಳಿಯ ಪೂರ್ವಾನುಮತಿಯನ್ನು ಪಡೆಯುವುದ ಆವಶ್ಯ.!

*****

ನೀವೇ ಆಲೋಚನೆ ಮಾಡಿ... ಹೇಗಿದೆ ಜಗತ್ತು !!

ದೆವ್ವಗಳೂ ಭಗವದ್ಗೀತೆಯ ಕೋಟ್ ಮಾಡುತ್ತವೆ ಎಂಬ ವಾಕ್ಯ ನೆನಪಿಗೆ ಬರುವುದಿಲ್ಲವೇ ?

-ಸದಾನಂದ ಹೆಗಡೆ ಹರಗಿ

Read More

keremana-samsmarene..