ಆರಂಭದಲ್ಲಿ ನನಗೂ ಸ್ಟೇಜ್ ಫಿಯರ್ ಇತ್ತು..

ಆರಂಭದಲ್ಲಿ ನನಗೂ ಸ್ಟೇಜ್ ಫಿಯರ್ ಇತ್ತು..

-ಮಾತಿನ ಮಲ್ಲ ಗಂಗಾವತಿ ಪ್ರಾಣೇಶ್

ಸದಾನಂದ ಹೆಗಡೆ,ದಾವಣಗೆರೆ

ಓರ್ವ ಸಾಮಾನ್ಯ ಹಿನ್ನೆಲೆಯ ಗಂಗಾವತಿ ಪ್ರಾಣೇಶ್ ತಮ್ಮ ಹಾಸ್ಯೋತ್ಸವದಿಂದ ಜನಪ್ರಿಯತೆಯ ಪೀಕ್‌ನಲ್ಲಿ ಇದ್ದಾರೆ. ಇತ್ತೀಚೆಗೆ ಚಿತ್ರದುರ್ಗದಲ್ಲಿ ಮುರುಘಾಶ್ರೀ ಪ್ರಶಸ್ತಿ ಪಡೆದ ಬಳಿಕ ಮೊದಲ ಬಾರಿಗೆ, ಬುಧವಾರ ದಾವಣಗೆರೆಯಲ್ಲಿ ಹಾಸ್ಯೋತ್ಸವ ನಡೆಸಿಕೊಡುತ್ತಿದ್ದು, ವಿಕ ಸಂದರ್ಶನದಲ್ಲಿ ತಮ್ಮ ಆಲೋಚನೆಯನ್ನು ಹಂಚಿಕೊಂಡಿದ್ದಾರೆ.
*ಎಸ್‌ಟಿಡಿ ಬೂತ್ ಇಟ್ಟುಕೊಂಡಿದ್ದ  ಸಾಮಾನ್ಯ ಪ್ರಾಣೇಶ ಈ ಮಟ್ಟಕ್ಕೆ ಬೆಳೆದುದು ಹೇಗೆ ?
 ಕನ್ನಡ ಸಾಹಿತ್ಯದಲ್ಲಿ ನನ್ನ ಆಸಕ್ತಿ, ವಿಶೇಷವಾಗಿ ಹಾಸ್ಯ ಸಾಹಿತ್ಯ ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ಕೈಲಾಸಂ, ಬೀಚಿ ನನ್ನ ಮಾತಿನ ಸಾಹಿತ್ಯದ ಮೂಲದಲ್ಲಿದ್ದಾರೆ. ನಾನು ನನಗೆ ಮೂವರು ಗಾಡ್ ಫಾದರ್ ಎಂದು ಅಂದುಕೊಳ್ಳುತ್ತೇನೆ. ಮೊದಲು ನನ್ನ ಜೈವಿಕ ತಂದೆ ವೆಂಕೋಬರಾವ್. ಸಾಹಿತ್ಯ ಸಮೃದ್ಧಿಯನ್ನು ಬಳುವಳಿಯಾಗಿ ನೀಡಿದ ಬೀಚಿ. ಹಾಗೆ ಸಾರ್ವಜನಿಕವಾಗಿ ಸರಳತೆಯನ್ನು ಪ್ರತಿಪಾದಿಸಿದ ಡಾ.ರಾಜ್ ವ್ಯಕ್ತಿತ್ವ ನನ್ನ ಹಿಂದಿದೆ.
*ನಿಮ್ಮ ವಿನೋದ ಶೈಲಿಯ ಹಿಂದಿನ ಸೆಲೆ ಯಾವುದು?
ನನ್ನ ಶೈಲಿಯ ಹಿಂದಿರುವುದು ರಂಗಭೂಮಿ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಸಶಕ್ತ ಭಾಷೆಯ ಮೈಗೂಡಿಸಿಕೊಂಡ ವೃತ್ತಿ ರಂಗಭೂಮಿಯ ಪ್ರತಿನಿಯಾಗಿ ಮುಂದುವರಿದು ಹಾಸ್ಯ ರಸಾಯನ ನೀಡುತ್ತೇನೆ.
* ಉತ್ತರ ಕರ್ನಾಟಕದ ಭಾಷೆಯ ಪರಮ ಅಭಿಮಾನಿಯಾದ ನೀವು, ಕನ್ನಡ ಸಿನಿಮಾದಲ್ಲಿ ಇದೇ ಭಾಷೆಯನ್ನು ಗೇಲಿ ಮಾಡುವ ಸರಕಾಗಿ ಕಂಡಾಗ ಏನೆನನ್ನಿಸುತ್ತದೆ?
ನನ್ನ ನೆಲೆಯಲ್ಲಿ ಸಾಧ್ಯವಾದ ಕಡೆಯಲ್ಲೆಲ್ಲ  ನಮ್ಮ  ಭಾಷೆಯ ಮಹತ್ವ ಎತ್ತಿ ಹಿಡಿಯುತ್ತೇನೆ. ಕೆಲ ಮಟ್ಟಿನ ಭಾಷಾ ವ್ಯತ್ಯಾಸ ಇದ್ದರೂ ಎಲ್ಲರೂ ಕನ್ನಡಿರೇ ಆಗಿದ್ದಾರೆ ಎಂಬ ಆಶೆಯ ನನ್ನದು. ಬೆಂಗಳೂರು ಜನರಿಗೆ ನಾಲೇಜ್ ಜಾಸ್ತಿ, ಆ ವಿಚಾರದಲ್ಲಿ ಸ್ವಲ್ಪ ಹಿದಿರುವ ಉತ್ತರ ಕರ್ನಾಟಕದ ಜನತೆಗೆ ಒಳ್ಳೆಯ ಕಾಮನ್ ಸೆನ್ಸ್  ಇರುತ್ತೆ ಎಂಬುದು ನನ್ನ ವೈಯಕ್ತಿಕ ಅನುಭವ.
* ಸಿನಿಮಾಗಳಲ್ಲಿ  ಅಸಹ್ಯ ರೀತಿಯಲ್ಲಿ ಉತ್ತರ ಕರ್ನಾಟಕದ ಭಾಷೆಯನ್ನು ಬಿಂಬಿಸಲಾಗುತ್ತದೆ ಎಂಬ ವಿಚಾರ..
ನಿಜ. ಇದಕ್ಕೆ ನಮ್ಮ ಕಲಾವಿದರ ದೈನೇಸಿ ತನವೂ ಕಾರಣ. ನಮ್ಮ ಭಾಷೆಯನ್ನು ಕೀಳಾಗಿ ಕಾಣುವ ಪಾತ್ರ ಕೊಟ್ಟರೆ ಅದನ್ನು ಒಪ್ಪಿಕೊಳ್ಳಬಾರದು ಎಂಬುದು ನನ್ನ ನಿಲುವು. ಸಿನಿಮಾದಲ್ಲಿ ಯಾವ ಪಾತ್ರವಾದರೂ ಓಕೆ. ಒಂದು ಅವಕಾಶ ಸಿಕ್ಕರೆ ಸಾಕು ಎಂಬ ಧಾವಂತವನ್ನು ನಾವು ಬಿಡಬೇಕು. ನನ್ನ ಮಿತಿಯಲ್ಲಿ  ಇದನ್ನು ಜಾರಿಗೆ ತಂದಿದ್ದೇನೆ. ಸಿನಿಮಾದಲ್ಲಿ ಹಾಸ್ಯಾಸ್ಪದ ಪಾತ್ರ ಮಾಡುವಂತೆ ನನಗೂ ಅವಕಾಶಗಳು ಬಂದಾಗ ನಾನು ಸ್ಪಷ್ಟವಾಗಿ ನಿರಾಕರಿಸಿದ್ದೇನೆ.
*ಜಗತ್ತಿನಲ್ಲಿ ಅತ್ಯಂತ ಶಿಸ್ತಿನ, ನಿರ್ಮಲ ದೇಶಗಳನ್ನು ಅದೆಷ್ಟೊ ನೋಡಿದ್ದೀರಿ. ಅಂಥ ಸುಂದರ ದೇಶವನ್ನು ನೋಡಿ ಹಿಂತಿರುಗಿ ನಿಮ್ಮ ಊರಿಗೆ ಬರುವಾಗ ಬೆಳಬೆಳಗ್ಗೆಯೇ ರಸ್ತೆ ಪಕ್ಕದಲ್ಲಿ ಹೆಣ್ಣು-ಗಂಡು ಎಂಬ ಬೇದ ಇಲ್ಲದೆ ಚೆಂಬು ಹಿಡಿದು ಮೆರವಣಿಗೆಯಲ್ಲಿ ನಿಮ್ಮನ್ನು ಸ್ವಾಗತಿಸುವ ದೃಶ್ಯ ನೋಡಿದಾಗ ನಿಮಗೆ ಏನೂ ಅನ್ನಿಸುವುದಿಲ್ಲವೇ ?
ಇದೊಂದು ಮಹತ್ವದ ವಿಚಾರ. ರಸ್ತೆಯಲ್ಲಿ ಒಂದು ಕಸವೂ ಇಲ್ಲದ ಸುಂದರ ದೇಶಗಳನ್ನೂ ನೋಡಿದ್ದೇನೆ. ನಮ್ಮೂರಿನ ಕೊಳಕು ದೃಶ್ಯಗಳ ಪರಿಸ್ಥಿತಿಯೂ ಇದ್ದೇ ಇದೆ. ಇದು ವಾಸ್ತವವಾಗಿದ್ದು  ಇದಕ್ಕೆ ನಾನು ಹೊಂದಿಕೊಂಡಿದ್ದೇನೆ. ಹಾಗೇ ನಮ್ಮವರ ಬೇಜವಾಬ್ದಾರಿ ನನ್ನೊಳಗೆ ಕಿರಿಕಿರಿ ಉಂಟು ಮಾಡುತ್ತದೆ. ನನ್ನ ಅದೆಷ್ಟೊ ಕಾರ್ಯಕ್ರಮದಲ್ಲಿ ಬಯಲು ಚೆಂಬು ವ್ಯವಸ್ಥೆ ವಿರುದ್ಧ ಜಾಗೃತಿ ಮೂಡಿಸುತ್ತೇನೆ. ಆದರೆ ಜನ ತಕ್ಷಣ ಸುಧಾರಿಸುತ್ತಿಲ್ಲ. ಏನೂ ಮಾಡಿದ್ರೂ ಸುಧಾರಿಸುತ್ತಿಲ್ಲ . ಬಹುಶಃ ನನ್ನಂತೆ ನನ್ನ ನಂತರ ಬರುವ ಪ್ರಾಣೇಶನ ಕಾಲಕ್ಕೆ  ನಾವು ನಿರ್ಮಲ ಭಾರತ ಕಾಣಬಹುದೇನೊ ಅನ್ನಿಸುತ್ತದೆ.
* ನಿಮ್ಮ ಹಾಸ್ಯ ಬತ್ತಳಿಕೆಗೆ ಹೊಸ ಅಸ್ತ್ರ ಸೇರುವುದು ಹೇಗೆ ?
ನಾನೊಬ್ಬ  ಓದುಗ. ಸಮಯ ಸಿಕ್ಕಾಗ, ಸಿಕ್ಕ ಸಿಕ್ಕ ಪುಸ್ತಕ, ಪತ್ರಿಕೆ ಓದುತ್ತೇನೆ. ಪ್ರವಾಸದ ಸಂದರ್ಭದಲ್ಲೂ ಹಾಸ್ಯ,ಗಂಭೀರ ಸಾಹಿತ್ಯ ಲ್ಲವನ್ನೂ ಎಡೆ ಬಿಡದೆ ಓದುತ್ತಿರುತ್ತೇನೆ. ಇಂಥ ಸಂದರ್ಭದಲ್ಲೆಲ್ಲ ನನಗೆ ನನ್ನ ಕಾರ್ಯಕ್ರಮದ ಹೊಸ ಹೊಸ ಐಡಿಯಾ ಹೊಳೆಯುತ್ತದೆ.
*ಮೈಕ್ ಎದುರು ನಿಲ್ಲುತ್ತಲೇ ಕೆಲವರಿಗೆ ಮಾತೇ ಹೊರಡಲ್ಲ.. ಅವರಿಗೆ ನೀವು ನೀಡುವ ಟಿಪ್ಸ್ ಏನು ?
ಪ್ರಯತ್ನ ಸರ್. ಪ್ರಯತ್ನ ಮಾಡಿ. ಆರಂಭದಲ್ಲಿ ನನಗೂ ಸ್ಟೇಜ್ ಫಿಯರ್ ಇತ್ತು. ನಿರಂತರವಾದ ಪ್ರಯತ್ನದಿಂದ, ಓದಿನಿಂದ ನನಗೆ ಈಗ, ನನ್ನೆದುರು ಹತ್ತು ಸಾವಿರ ಜನ ಇದ್ದರೂ ತಡವರಿಸದೆ ಮಾತಾಡುವುದು ಸಾಧ್ಯವಾಗಿದೆ. ಇದು ಎಲ್ಲರಿಗೂ ಸಾಧ್ಯ.
* ನಿಮ್ಮ ಜನಪ್ರಿಯತೆಯನ್ನು ಹೇಗೆ ಸ್ವೀಕರಿಸಿದ್ದೀರಿ ?
ನಿಜ. ಒಂದು ಹಂತಕ್ಕೆ ಬೆಳೆದ ಮೇಲೆ ನಮ್ಮ ಗುಣಮಟ್ಟ  ಕಾಯ್ದುಕೊಳ್ಳುವುದು ನಿಜಕ್ಕೂ ಸವಾಲಾಗುತ್ತದೆ. ಇನ್ನೊಂದೆಡೆ ಕೆಲವೊಮ್ಮೆ ಜನಪ್ರಿಯತೆಯೇ ನನ್ನ ಖಾಸಗೀತನವನ್ನು ಕೊಂದು ಹಾಕುತ್ತದೆ. ಎಲ್ಲರಂತೆ ಹೆಂಡತಿ, ಮಕ್ಕಳೊಂದಿಗೆ ಹೊರಟರೆ ಜನ ಮುತ್ತಿಗೆ ಹಾಕಿ ತೊಂದರೆ ಆಗುವುದಿದೆ. ಅಷ್ಟೇ ಅಲ್ಲ  ಸಾಮಾಜಿಕ ಮೀಡಿಯಾದಲ್ಲಿ ಪರಿಶ್ರಮ ಇಲ್ಲದ ನನ್ನ ಹೆಸರಿನಲ್ಲಿ ಫೇಸ್ ಬುಕ್‌ನಲ್ಲಿ ಎಕೌಂಟ್‌ಗಳು ಇದ್ದು, ಏನೆಲ್ಲ ಚರ್ಚೆಗಳು ನಡೆಯುವುದು, ನನ್ನ ಹೆಸರನ್ನು ಕೀಳಾಗಿ ಮಾಡುವ ಬಗ್ಗೆ ಬೇಸರ ಇದೆ. ದಯವಿಟ್ಟು ಜನರು ಇದನ್ನು ಅರ್ಥಮಾಡಿಕೊಳ್ಳಬೇಕು.
----------
ಬಾಕ್ಸ್...
* ಇತರ ಭಾಷೆಯಲ್ಲಿ ಇದೇ ಬಗೆಯ ಹಾಸ್ಯ ಕಾರ್ಯಕ್ರಮಗಳು ನಡೆಯುವುದನ್ನು ಕೇಳಿದ್ದೀರಾ?
ಖಂಡಿತ ಇದೆ. ಹಾಗೆ ನೋಡಿದರೆ ನಾವು ಕನ್ನಡಿಗರೇ ಈ ಮಟ್ಟಿಗೆ ಹಿಂದೆ ಬಿದ್ದಿದ್ದೇವೆ. ಹಿಂದಿ, ತೆಲುಗು ಮರಾಠಿಯಲ್ಲಿ ರಾಜ ಹಾಸ್ಯ ಇದೆ. ನಮ್ಮಲ್ಲಿ ಹಾಸ್ಯ ಎಂದರೆ ಕೆಲವೊಮ್ಮೆ ಕೀಳು ಮಟ್ಟಕ್ಕೆ ಹೊರಳುವುದಿದೆ. ಹಿಂದಿಯಲ್ಲಿ ರಾಜ ಹಾಸ್ಯ ಇದ್ದು, ನಮ್ಮ ಮುಂದಿನ ಮಾರ್ಗ ಹಾಗಿರಬೇಕು.
Read More