ಮೋಡ ಕವಿದಾಗ ಖುಷಿ ಕೊಟ್ಟ ನವಿಲು ನೃತ್ಯ

ಮೋಡ ಕವಿದಾಗ ಖುಷಿ ಕೊಟ್ಟ ನವಿಲು ನೃತ್ಯ

ಚೌತಿ ಸಮಯ ಕರ್ನಾಟಕದ ಬಾನಲ್ಲಿ  ಎಲ್ಲೆಡೆ ಮೋಡದ ಛಾಯೆ. ಹಬ್ಬದ ಮಾರನೇ ಭಾನುವಾರ ದಾವಣಗೆರೆಯ ದೊಡ್ಡಪೇಟೆ ವಿನಾಯಕನ ಎದುರು ‘ಮೇಘಾವಳಿಯೊಂದು..’ ಹಾಡಿಗೆ ಯಕ್ಷಗಾನದ ನವಿಲು ನೃತ್ಯವು ಮೇಳೈಸಿದ್ದು  ಔಚಿತ್ಯವಾಗಿತ್ತು. ಇದು ಯಕ್ಷಗಾನ ಕಾರ್ತವೀರ್ಯ ಕಾಳಗದ ಒಂದು ಮಾಸ್ಟರ್ ಪೀಸ್..
’’ ಮೇಗಾವಳಿಯೊಂದು ಆಗಸದೋಳ್ ಕಂಡಾಗಲೆ ನವಿಲು ಕುಣಿಯುತಿದೆ ನೋಡಾ..’’ ಹಾಡು ಅದೆಷ್ಟೋ ವರ್ಷದಿಂದ ಜನಪ್ರಿಯವಾಗಿದೆ.  ಮೂಲ ತಿರುಮಲ ಕವಿ ರಚಿಸಿದ ಕಾರ್ತವೀರ್ಯ ರಂಗ ರೂಪದಲ್ಲಿ, ಮೇಘಾವಳಿ ವರ್ಣವು ಇದೀಗ ಭರತ ನಾಟ್ಯದಲ್ಲೂ ಬಳಕೆಯಾಗುತ್ತದೆ. ತ್ರೇತಾಯುಗದ ಕಾಲಘಟ್ಟದಲ್ಲಿ ರಾವಣನ ಸಮಬಲನಾಗಿದ್ದ  ಸಹಸ್ರ ತೋಳುಗಳ ಕಾರ್ತವೀರ್ಯ  ನರ್ಮದಾ ನದಿಯಲ್ಲಿ ತನ್ನ ಸಖಿಯರೊಂದಿಗೆ ಜಲಕ್ರೀಡೆ ಆಡುವ ಸನ್ನಿವೇಶ. ಯಕ್ಷಗಾನದ ದಂತಕಥೆ ಕಾಳಿಂಗ ನಾವಡರ ಕಾಲದಲ್ಲಿ  ಭ್ರಹ್ಮಾವರದ ಬಡಗಿನಲ್ಲಿ  ಅತ್ಯಂತ ಹಿಟ್ ಆದ ಹಾಡು ಇದು. ನಾವಡರು ಇದನ್ನು ತಮಗೆ ಹೊಂದಿಸಿ ಹಾಡುತ್ತಿದ್ದರು. ಶಾಸ್ತ್ರೀಯ ಸಂಗೀತದ ದೃಷ್ಟಿಯಿಂದ ಮೋಹನ ರಾಗದಲ್ಲಿ  ಇದನ್ನು ಪ್ರಸ್ತುತಪಡಿಸಲಾಗುತ್ತದೆ.
ಮೋಹನದ ಛಾಯೆಯಲ್ಲಿ  ಸ್ವಂತ ಶೈಲಿಯಲ್ಲಿ  ಕೊಳಗಿಯ ಭಾಗವತರು  ಹದವಾಗಿ ಹಾಡುತ್ತಿದ್ದರೆ, ನೀರಾಟ ನಿರತ ಕಾರ್ತವೀರ್ಯ ಮತ್ತು ಸಖಿಯರ ನೃತ್ಯವನ್ನು ಕಲಗದ್ದೆ  ವಿನಾಯಕ ಹೆಗಡೆ ಮತ್ತು ಸಹ ಕಲಾವಿದರು ರೋಮ್ಯಾಂಟಿಕ್ ಆಗಿ ಅಭಿನಯಿಸಿದರು. ಬಳುಕು, ವಯ್ಯಾರಕ್ಕೆ  ಎಲ್ಲಿಯೂ ಅಡಚಣೆ ಇಲ್ಲದೆ, ನಿಧಾನ ಗತಿಯಲ್ಲೂ, ಮಧ್ಯೆ ವೇಗದ ಝಲಕ್‌ಗಳು ರಮ್ಯತೆಯನ್ನು ಹೆಚ್ಚಿತು. ಸುಮಾರು ಹತ್ತು ನಿಮಿಷ  ಮೇಘಾವಳಿ ಹಾಡಲ್ಲದೆ, ಹಿಂದೆ ಹಾಗೂ ಮುಂದಿನ ನೃತ್ಯಗಳಲ್ಲೂ ಕಲಗದ್ದೆ ಗಮನ ಸೆಳೆದರು.  ಸಖಿಯರಲ್ಲಿ  ಮಹಾಬಲೇಶ್ವರ ಭಟ್ ಇಟಗಿ ತಮ್ಮ  ಹಾವ ಭಾವದಿಂದಲೇ ಗಮನ ಸೆಳೆದರು.
ಇತ್ತೀಚೆ ಹೃದಯ ಕಸಿ ಮಾಡಿಸಿಕೊಂಡ ಖ್ಯಾತ ಭಾಗವತ ಕೊಳಗಿ ಕೇಶವ ಹೆಗಡೆ, ಅಪಘಾತದಲ್ಲ  ಕಾಲಿಗೆ ಕಬ್ಬಿಣದ ಸರಳನ್ನು ಹೊಂದಿಸಿಕೊಂಡ ಕಲಗದ್ದೆ ಇಬ್ಬರೂ  ತಮ್ಮ ದೇಹದ ಮಿತಿಯನ್ನೇ ರಂಗದ ಪ್ರಬುದ್ಧತೆಗೆ ಬಳಸಿದರು ! ಸಮರ ಸನ್ನಾಹದ ಬೊಬ್ಬಿರಿತವಿಲ್ಲದೆ ರೋಮ್ಯಾಂಟಿಕ್ ಮೂಡ್‌ಗೆ ಇದು ಅತ್ಯಂತ ಪೂರಕವಾಗಿದ್ದು, ಸಂಪ್ರದಾಯ ಶೈಲಿಗೆ ಚುತಿ ಬರದಂತೆ ಮೂರು ತಾಸಿನಲ್ಲಿ ಇಡೀ ಆಟವನ್ನು ತಂಡವು ಪ್ರಸ್ತುತಪಡಿಸಿದೆ. ಮೃದಂಗ(ನರಸಿಂಹ ಹಂಡ್ರಮನೆ) ಚಂಡೆ(ಪ್ರಮೋದ್ ಯಲ್ಲಾಪುರ)ಯ ಹದವಾದ ಪೆಟ್ಟಿಗೆ, ಇಕ್ಕಟ್ಟಿನ ವೇದಿಕೆ ಮತ್ತಿತರ ಸಣ್ಣಪುಟ್ಟ ಕೊರತೆಗಳು ಮರೆಯಾದವು. ವೇದಿಕೆ ಹದವಾದ ಎತ್ತರದಲ್ಲಿ ಇದ್ದ ಕಾರಣ ನೃತ್ಯದಲ್ಲಿ ಕಾಲಿನ ಚಲನೆ ಸರಿಯಾಗಿ ಕಾಣುತ್ತಿತ್ತು.
ಯಕ್ಷಗಾನ ತಿಟ್ಟುಗಳಲ್ಲಿ ಉತ್ತರ ಕನ್ನಡದ ಬಡಗು ಶೈಲಿಯಲ್ಲಿ ನೃತ್ಯಗತಿ ನಿಧಾನಗತಿಯಿಂದಲೇ  ಆವರಿಸುತ್ತದೆ. ಯಕ್ಷಗಾನದಲ್ಲಿ ಮಾತಿನ ಪ್ರತ್ಯುತ್ಪನ್ನಮತಿತ್ವವು ಜನಜನಿತವಾಗಿದೆ. ಆ ನಿಟ್ಟಿನಲ್ಲಿ  ತೆಂಕಿನವರು ಯಾವಾಗಲೂ ಮುಂದಿದ್ದಾರೆ. ಇಲ್ಲಿ  ನೃತ್ಯದಲ್ಲೂ ಪ್ರತ್ಯುತ್ಪನ್ನಮತಿತ್ವ ಅವಶ್ಯವಾರುತ್ತದೆ ಎಂಬುದನ್ನು ಬಡಗು, ಬಡಾಬಡಗಿನವರಲ್ಲಿ  ಕಾಣುತ್ತೇವೆ. ಈ ಮಾತು ಕಾರ್ತವೀರ್ಯನನ್ನು ನೋಡಿದಾಗ ಅನ್ನಿಸಿತು. ರಂಗಸ್ಥಳಕ್ಕೆ ಬಂದ ನಂತರವೇ ಮುಖಾಮುಖಿಯಾಗುವ ಸಹ ಕಲಾವಿದರಿಗೆ ನೃತ್ಯದ ಜಾಗವನ್ನು ತಾಳಬದ್ಧವಾಗಿಯೇ ನಿರ್ದೇಶಿಸುವುದು, ಸಿಂಹಾಸನ ಅಲುಗುತ್ತದ್ದರೆ, ಅದರ ಮೇಲೆ ಯಾವ ಹೆಜ್ಜೆಯನ್ನು ಇಡಬೇಕು ಎಂಬ ಎಚ್ಚರಿಕೆ ಸೇರಿದಂತೆ, ಯಾವ ಪದ್ಯಕ್ಕೆ ಎಷ್ಟು  ನೃತ್ಯ ಎಂಬುದನ್ನೆಲ್ಲ  ಕಥಾ ಭಾಗದ ಜತೆಯೇ ಸಂವಹಿಸಿಕೊಂಡು ಕಲಗದ್ದೆ  ತಂಡದವರು ನರ್ತಿಸಿದರು. ಇತ್ತೀಚಿನ ಬಡಗಿನಲ್ಲಿ ಚಟವಾಗುತ್ತಿರುವ ಅನವಶ್ಯಕ ಅಭಿನಯಕ್ಕೆ ಕಾರ್ತವೀರ್ಯದಲ್ಲಿ  ಹೆಚ್ಚಿನ ಅವಕಾಶ ನೀಡದೆ, ಸಂಪ್ರದಾಯ ಬದ್ಧವಾಗಿ ಪ್ರಸ್ತುತಪಡಿಸಿದರು.
ಸಂಜಯ ಬೆಳಿಯೂರು ಅವರ ರಾವಣ, ಅನಂತ ಹೆಗಡೆ ಕೃತವೀರ್ಯ, ಜತೆಗೆ ನಾಗೇಂದ್ರ ಮೂರೂರು ಅವರ ಹಾಸ್ಯವೂ ನಕ್ಕು ನಲಿಸಿತು. ವಿಭೀಷಣನಾಗಿ ಪ್ರದೀಪ್ ಕಾರಂತ, ಪ್ರಹಸ್ತನಾಗಿ ವೆಂಕಟೇಶ ಹೆಗಡೆ ಓಜಗಾರು, ಇನ್ನೊಬ್ಬ ಸಖಿಯಾಗಿ ಗುರುಮೂರ್ತು ಹೆಗ್ಗೋಡು ನಿರ್ವಹಿಸಿದರು.  ಆನಂದ ಶೆಟ್ಟಿ ಹಟ್ಟಿಯಂಗಡಿ, ಶ್ರೀಕಾಂತ್ ಭಟ್ ಕಾರ್ಕಳ ಮತ್ತಿತರರು ಸಹಕರಿಸಿದರು. ದೊಡ್ಡಪೇಟೆಯ ವಿನಾಯಕ ಸೇವಾ ಸಂಘವು ಕಾರ್ಯಕ್ರಮವನ್ನು  ಏರ್ಪಡಿಸಿತ್ತು.
-ಸದಾನಂದ ಹೆಗಡೆ
Read More