Pojary urulu seveyu-soniya arogyavu

Pojary urulu seveyu-soniya arogyavu


ಸೋನಿಯಾ ಆರೋಗ್ಯವೂ, ಪೂಜಾರಿ ಉರುಳು ಸೇವೆಯೂ

ಯುಪಿಎ ಸಂಚಾಲಕಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಅವರು ಕಳೆದ ಕೆಲವು ವಾರಗಳಿಂದ ವಿದೇಶದಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರಷ್ಟೆ. ಸೋನಿಯಾ ಗಾಂಧಿಯವರ  ಆರೋಗ್ಯ ಸುಧಾರಿಸಲು ಪ್ರಾರ್ಥಿಸಿ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಕುದ್ರೋಳಿ ದೇವಸ್ಥಾನದಲ್ಲಿ ಉರುಳು ಸೇವೆಯನ್ನು ಸಲ್ಲಿಸಿದರು.
ತಲೆಯ ಮೇಲ್ಭಾಗದಲ್ಲಿ ಚಾಚಿದ ಕೈಗಳನ್ನು ಜೋಡಿಸಿಕೊಂಡು, ಮಣ್ಣು ಮಸಿಯ ಕೊಳಕಿನ ಹಂಗಿಲ್ಲದೆ ಶ್ವೇತ ವಸ್ತ್ರಧಾರಯಾಗಿದ್ದ ಪೂಜಾರಿಯವರು ಬಿರು ಮಳೆಯಲ್ಲಿ ದೇವಸ್ಥಾನದ ವಠಾರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಉರುಳುವ ಚಿತ್ರ ನೋಡಿದರೆ, ನಿಜಕ್ಕೂ ಪಾಪ ಎನ್ನಿಸುವಂತಿದೆ.
ಹಾಗೇ ಮಂಗಳೂರಿನ ಚರ್ಚುಗಳಲ್ಲಿ ನಿಷ್ಟೆಯಿಂದಲೇ ಪ್ರಾರ್ಥನೆ ಸಲ್ಲಿಸಿದರು. ಉರುಳು ಸೇವೆಯಲ್ಲಿರಬಹುದು ಅಥವಾ ಪ್ರಾರ್ಥನೆಯಲ್ಲಿರಬಹುದು ಪೂಜಾರಿಯವರ ಮುಗ್ಧತೆ ಪ್ರಶ್ನಾತೀತವೇ. ಹಾಗೇ ಸೋನಿಯಾ ಆರೋಗ್ಯ ಸುಧಾರಿಸಿ ಬರಲಿ ಎಂಬುದು ಎಲ್ಲ ಸಹೃದಯರ ಹಾರೈಕೆಯೇ ಆಗಿದೆ. ಹಾಗೆಂದು ಪೂಜಾರಿಯವರದ್ದು ವಿಶೇಷ ಹಾರೈಕೆಯಾಗಿತ್ತು ಯಾಕೆ ಎಂಬುದು ಇಲ್ಲಿನ ಪ್ರಶ್ನೆ.
ದೇವರಲ್ಲಿ ಆಳವಾದ ನಂಬುಗೆ ಹೊಂದಿರುವ ಪೂಜಾರಿಯವರು, ಸೋನಿಯಾ ಅವರ ಆರೋಗ್ಯ ರಕ್ಷಣೆಗೆ ಬೇರೆ ಮಾರ್ಗ ಕಾಣದೆ, ಅನ್ಯಥಾ ಶರಣಂ ನಾಸ್ತಿ ಎಂದು ದೇವರ ಮೊರೆ ಹೋಗಿದ್ದು ನಿಜ. ಪೂಜಾರಿಯವರ ನಡೆಯಲ್ಲಿ ಯಾವುದೇ ರಾಜಕೀಯ ನಾಟಕ ಇರಲಿಲ್ಲ. ಹಾಗೇ ಬೇರೊಬ್ಬರ ಆರೋಗ್ಯಕ್ಕಾಗಿ ಪ್ರಾರ್ಥಿಸುವುದು ವಿವಾದಾತೀತವಾಗಿ ಒಂದು ಸದ್ಗುಣ.
ಇಷ್ಟೆಲ್ಲ ಹೇಳಿಯೂ ಒಂದು ವಿಚಾರವನ್ನು ಇಲ್ಲಿ ಹೇಳಬೇಕು. ಕಾಂಗ್ರೆಸ್ ಪಕ್ಷದಲ್ಲಿ ಪರಿಯಲ್ಲಿ  ಪ್ರೀತಿಯನ್ನು  ಸೋನಿಯಾ ಗಾಂಧಿಯವರಲ್ಲಿ ತೋರಿದವರು ವಿರಳ. ಕಾಂಗ್ರೆಸ್ ಪ್ರಥಮ ಕುಟುಂಬಕ್ಕೆ  ಪಕ್ಷದಲ್ಲಿ  ಎಲ್ಲಿಲ್ಲದ ಗೌರವ ಇದೆ. ನೆಹರೂ ಕುಟುಂಬವನ್ನು  ಅದೆಷ್ಟೊ ಕಾಂಗ್ರೆಸ್ಸಿಗರ ಪ್ರತ್ಯಕ್ಷ ದೇವತಾ ಎಂದೆ ಎಣಿಸುತ್ತಾರೆ. ಅವರಲ್ಲಿ ಒಂದಿಷ್ಟು ಜನರು ಪೂಜಾರಿಯವರ ಕೆಟೆಗರಿಯವರು.
ಆದರೆ ಸ್ವಾಭಿಮಾನಿಗಳಿಗೆ ಪೂಜಾರಿ ವರ್ತನೆ ಅತಿ ಎಂದು ತೋರುತ್ತದೆ. ಇದೂ ಒಂದು ರೀತಿಯ ಆತ್ಮ ನಿರಾಕರಣೆ. ಆತ್ಮ ನಿರಾಕರಣೆಗೆ ಅಧ್ಯಾತ್ಮದಲ್ಲಿ  ಅದ್ಭುತ  ಅರ್ಥ ಇದೆ. ರಾಜರಿಗೆ, ಅಧಿಕಾರದಲ್ಲಿ  ಇರುವವರಲ್ಲಿ  ಈ ಬಗೆಯ ಆತ್ಮ ನಿರಾಕರಣೆ ಗುಲಾಮಗಿರಿಯಂತೆ ತೋರುತ್ತದೆ.
ಆದರೆ ಪೂಜಾರಿಯವರ ನೆಹರೂ ಕುಟುಂಬ ನಿಷ್ಠೆಯೇ ಹಾಗಿದೆ. ಅದಕ್ಕೆ ಕಾರಣ ಇದೆ. ಒಂದು ವೇಳೆ ನೆಹರೂ ಕುಟುಂಬ ಅಲ್ಲದಿದ್ದರೆ, ವಿಶೇಷವಾಗಿ ಇಂದಿರಾ ಗಾಂಧಿ ಅಲ್ಲದಿದ್ದರೆ ಅವರೂ ಮಂಗಳೂರಲ್ಲಿ ಒಬ್ಬ ಸಾಮಾನ್ಯ ವಕೀಲನಾಗಿರಬೇಕಿತ್ತು. ರಾಜಕೀಯ ಮೇಲಾಟದಲ್ಲಿ  ಅವರೊಬ್ಬ ಕೇಂದ್ರ ಮಂತ್ರಿಯಾಗುವುದಿರಲಿ, ಸಂಸದರಾಗುವದು ಕಷ್ಟವೇ ಇತ್ತು.
ಕುಟುಂಬ ಹಾಗೂ ಸಾಮಾಜಿಕವಾದ ಬಡ ಹಿನ್ನೆಲೆ, ಸಾಮಾಜಿಕ ಚಟುವಟಿಕೆಯಲ್ಲಿ ಸೀಮಿತ ಅನುಭವದ ಪೂಜಾರಿಯವರನ್ನು, ಗುರುತಿಸಿಯೇ ಇಂದಿರಾ ಗಾಂಧಿ ಆಯ್ಕೆ ಮಾಡಿದ್ದರು. ಇಂದಿರಾ ಜೀ ಉದ್ದೇಶಪೂರ್ವಕವಾಗಿ ಇಂಥದ್ದೊಂದು ಆಯ್ಕೆ ಮಾಡಿದ್ದೂ ಒಂದು ರಾಜಕೀಯವೇ.
ಓರ್ವ ಸಶಕ್ತ ಜಾತಿ ಹಿನ್ನೆಲೆಯ ಆದರೆ, ಸ್ವಾತಂತ್ರಾ ನಂತರ ಇನ್ನೂ ಪ್ರಾತಿನಿಧ್ಯ ಪಡೆಯದ ಜಾತಿಯ ಪ್ರತಿನಿಧಿಗಳ ಮೇಲೆ ಇಂದಿರಾ ಕಣ್ಣಿಟ್ಟಿದ್ದರು. ಕಾಂಗ್ರಿಸ್ನ ಅಂದಿನ ಪರಿಸ್ಥಿತಿಯಲ್ಲಿ  ಇಂದಿರಾ ಅವರ ಪಾರಮ್ಯ ಮೆರೆಯುವುದಕ್ಕೆ ಇದೆಲ್ಲ ಅವರಿಗೆ  ರಾಜಕೀಯ ಅನಿವಾರ್ಯ  ಕೂಡ ಆಗಿತ್ತು. ಅದು ತುರ್ತು ಪರಿಸ್ಥಿತಿ ಇಂದಿರಾಗೆ ಕಲಿಸಿದ್ದ ರಾಜಕೀಯ ಮುತ್ಸದ್ದೀತನವಾಗಿತ್ತು.
ಒಂದಿಷ್ಟು ಕೀಳರಿಮೆ ಹೊಂದಿದ್ದ ಇಂದಿರಾ ಜೀ ಪಕ್ಷಕ್ಕಿಂತ ವ್ಯಕ್ತಿ ನಿಷ್ಠೆಯನ್ನೇ   ಹೆಚ್ಚಾಗಿ ಬಯಸುತ್ತಿದ್ದರು ಎಂದು ಕಾಲದ ಇತಿಹಾಸಕಾರರು ಚಿತ್ರಿಸಿದ್ದಾರೆ.
ಎಲ್ಲೊ ಸಾಮಾನ್ಯನಲ್ಲಿ ಸಾಮಾನ್ಯನಾಗಿ ಹೋಗಿಬಿಡಬಹುದಾಗಿದ್ದ ಪೂಜಾರಿಯನ್ನು ಎತ್ತಿ ಮೇಲಕ್ಕೆ ತಂದವರು ಇಂದಿರಾ. ನಿಟ್ಟಿನಲ್ಲಿ ಅವರ ಬಗ್ಗೆ ದೈವ ಸಮಾನ ಕೃತಜ್ಞತೆ ಪೂಜಾರಿಯವರಲ್ಲಿ ಇದೆ. ಕೃತಜ್ಞತೆ ವ್ಯಕ್ತಪಡಿಸಬಹುದಾದ ಮಾರ್ಗ ಎಂದರೆ, ಸಾರ್ವಜನಿಕವಾಗಿ ಅವರ ಬಗ್ಗೆ ಇನ್ನಷ್ಟು ಗೌರವ ಹುಟ್ಟಿಸುವುದು ಮಾತ್ರವೇ. ಹೊರತಾಗಿ ಇಂದಿರಾರಂಥ ಸಶಕ್ತ ಹಿನ್ನೆಲೆಯ ರಾಜಕಾರಣಿಗಳಿಗೆ  ಪೂಜಾರಿ ಕೊಡುವುದಕ್ಕಾದರೂ ಏನಿತ್ತು?
ಇದರ ಪರಿಣಾಮ ಅದೆಷ್ಟೊ ವೇದಿಕೆಯಲ್ಲಿ ಇಂದಿರಾ ಹೆಸರು ಹೇಳಿಕೊಂಡು ಗೋಳೊ ಎಂದು ಪೂಜಾರಿ ಕೃತಜ್ಞತಾ ಕಣ್ಣೀರು ಹರಿಸುವುದಿದೆಅವರ ನಂತರ ರಾಜೀವ್ ಗಾಂಧಿಯವರನ್ನು ಇಂದಿರಾ ಕರುಳ ಕುಡಿ ಎಂಬುದಕ್ಕಾಗಿ, ಮಹಾರಾಣಿಯ ಪುತ್ರ-ರಾಜಕುಮಾರನ ಮೇಲೆ ಸಾಂಪ್ರದಾಯಿಕ ಮನಸ್ಸುಗಳಿಗೆ ಇರುವ ನಿಷ್ಠೆಯಂತೆ ಗೌರವದಿಂದ ಕಂಡಿದ್ದಾರೆ. ತಮ್ಮ ನೇತೃತ್ವದಲ್ಲಿ ನವೀಕರಣಗೊಂಡ ಕುದ್ರೋಳಿ ದೇವಳ ಉದ್ಘಾಟನೆಗೆ ರಾಜೀವ್ ಗಾಂಧಿಯವರನ್ನೇ ಆಹ್ವಾನಿಸಿದ್ದು ಇದಕ್ಕೊಂದು ನಿದರ್ಶನ. ಸಾಮಾನ್ಯವಾಗಿ ದೇವಸ್ಥಾನಗಳ ಉದ್ಘಾಟನೆಗೆ ಸ್ವಾಮಿಗಳನ್ನು ಪುಣ್ಯ ಪುರುಷರನ್ನು ಕರೆಸುವುದು ರೂಡಿ. ತಾವೇ ನಂಬಿದ ನಾರಾಯಣಗುರು ಮಠದ ಸನ್ಯಾಸಿಗಳಿಗಿಂತ ತಮ್ಮ ಸಮುದಾಯಕ್ಕೆ ಸಹಾಯ ಮಾಡಿದವರಲ್ಲಿ ಇಂದಿರಾ ಅವರು ಮಹತ್ವದ್ದಾಗಿ ಪೂಜಾರಿಗೆ ಕಂಡಿದೆ. ಹಾಗಾಗಿ ಇಂದಿರಾಜೀ ಕಾಲವಾಗಿದ್ದರಿಂದ  ಅವರ ಪುತ್ರನನ್ನು ರಾಜೀವ್ ಗಾಂಧಿಯನ್ನು ದೇವಳ ಉದ್ಘಾಟನೆಗೆ ಕರೆಸಿದರು.
ಅವರ ನಂತರ ಕುಟುಂಬದ ಮುಂಚೂಣಿಗೆ ಬಂದ ಸೋನಿಯಾ ಗಾಂಧಿ ಹಾಗೂ ರಾಹುಲ್ ಬಗ್ಗೆ ಅಷ್ಟೇ ಪ್ರಮಾಣದ ಗೌರವವನ್ನು ಪೂಜಾರಿ ಕಾಯ್ದುಕೊಂಡಿದ್ದಾರೆ. ಇದೆಲ್ಲ  ಪೂಜಾರಿಯವರ ಸಾರ್ವಜನಿಕ ಭಾಷಣವನ್ನು ಕೇಳಿದರೆ ತಿಳಿಯುತ್ತದೆ. ಪೂಜಾರಿ ಅವರ ಸಾರ್ವಜನಿಕ ಭಾಷಣದಲ್ಲಿ ಮಾತಿಗಿಂತ ಭಾವನೆಯೇ ಮಹತ್ವದ್ದಾಗಿರುತ್ತದೆ. ಭಾವನೆಯಲ್ಲಿ ಭಾಷಣದ ಸಂದರ್ಬ ಕಣ್ಣೀರು, ಕೊರಳ ಸೆರೆ ತುಂಬಿಬರುವುದು ಸಾಮಾನ್ಯ.
 ಇದೇ ತರದ ನಿಷ್ಠೆಯೇ ಅವರ ರಾಜಕೀಯ ಸ್ಥಾನಮಾನವನ್ನು ಕಾಪಾಡಿತು. ಲೋಕಸಭೆಯಲ್ಲಿ ಸೋತರೂ ರಾಜ್ಯ ಸಭೆಯಲ್ಲಿ ಅವರಿಗೆ ಸ್ಥಾನಮಾನ ದೊರೆಯಿತುಇನ್ನೂ ರಾಜಕೀಯ ಅಥವಾ ಸಾಮಾಜಿಕ ಪ್ರಾತಿನಿಧ್ಯ ದೊರೆಯದ ಸಮುದಾಯದವರ ಅಧಿಕಾರದ ಹಸಿವು ಬಡಪಟ್ಟಿಗೆ ತೃಪ್ತವಾಗುವುದಿಲ್ಲವಂತೆ.
ಇಂಥದ್ದೊಂದು ಹಸಿವು ಹಾಗೂ ಇಂದಿರಾ ಜೀ ಅವರ ಕೊಡುಗೆಯನ್ನು ಜನುಮ ಜನುಮಕ್ಕೂ ತೀರಿಸಲಾರೆ ಎಂಬ ಮುಗ್ಧ ರೂಪದಲ್ಲಿರುವ ಜೀರ್ಣಿಸಿಕೊಳ್ಳಲಾಗದ ಕೃತಜ್ಞತಾ ಭಾವವು ಪೂಜಾರಿಯವರ ಉರುಳು ಸೇವೆಯಲ್ಲಿ  ಗಮನಿಸಬೇಕಾಗಿದೆ.
ಸದಾನಂದ ಹೆಗಡೆ ಹರಗಿ
ಮಂಗಳೂರು, 31-8-2011





Read More