ಚಿಟ್ಟಾಣಿ ಅಜ್ಜ.. ಪದ್ಮ ಪ್ರಶಸ್ತಿ ಬಗ್ಗೆ ಅಪಾರ್ಥ ಯಾಕೆ? ಉತ್ತರ ಕನ್ನಡದ ಬಗ್ಗೆ ತಾತ್ಸಾರ ಬೇಕಿತ್ತಾ ?

ಚಿಟ್ಟಾಣಿ ಅಜ್ಜ..   ಪದ್ಮ ಪ್ರಶಸ್ತಿ ಬಗ್ಗೆ ಅಪಾರ್ಥ ಯಾಕೆ? ಉತ್ತರ ಕನ್ನಡದ ಬಗ್ಗೆ  ತಾತ್ಸಾರ ಬೇಕಿತ್ತಾ ?
ಚಿಟ್ಟಾಣಿ ಅಜ್ಜನವರ ಪಾದಾರವಿಂದಗಳಿಗೆ ನಮಸ್ಕರಿಸಿ..
ಜೀವನದಲ್ಲಿ ಹಾಗೂ ಯಕ್ಷಗಾನದಲ್ಲಿ ನೀವು ಉಪ್ಪು ತಿಂದಷ್ಟು ನಾನು ಅನ್ನ ತಿಂದಿಲ್ಲ ಎಂಬ ಸ್ಪಷ್ಟ ಅರಿವು ಇದ್ದರೂ ಅನಿವಾರ್ಯವಾಗಿ ನನ್ನ ಅಭಿಪ್ರಾಯ ಬೇಧವನ್ನು ನಿಮ್ಮಲ್ಲಿ ಹೇಳುತ್ತಿರುವೆ.
ವಯಸ್ಸಿಗೂ ಮೀರಿ ನಿಮ್ಮ ಕ್ರಿಯಾಶೀಲತೆ ನಮಗೆಲ್ಲ ಒಂದು ಆದರ್ಶ. ಇಳಿ ವಯಸ್ಸಿನಲ್ಲೂ ಆರ್ಥಿಕ ಭದ್ರತೆಗಾಗಿ ಪರದಾಡುತ್ತಲೇ ಇರುವ ನಿಮ್ಮ ಸಮಸ್ಯೆಯ ಅರಿವು ನನಗಿದೆ.
ಹಾಗೆ ನೋಡಿದರೆ ದುಡ್ಡಿನ ಕಷ್ಟ ಯಾರಿಗಿಲ್ಲ ಹೇಳಿ..
ಹೀಗಿರುವಾಗ ನೀವು ಇತ್ತೀಚೆಗೆ ಮಂಗಳಗಂಗೋತ್ರಿಯ ವೇದಿಕೆಯಲ್ಲಿ ಪರೋಕ್ಷವಾಗಿ ನಿಮ್ಮ ಗೋಳು ತೋಡಿಕೊಂಡಿದ್ದು ಸರಿ ಅನ್ನಿಸಲಿಲ್ಲ. ವಿವಿಯ ಅಂತರ್ ಕಾಲೇಜ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮ ಅದಾಗಿದ್ದರಿಂದ ನಿಮ್ಮ ದುಡ್ಡಿನ ತುಟಾಗ್ರತೆ ತೋಡಿಕೊಳ್ಳಲು ಅದು ಸರಿಯಾದ ವೇದಿಕೆಯಾಗಿತ್ತಾ.. ಆಲೋಚನೆ ಮಾಡಿ..
ನೀವು ಆಡಿದ ಮಾತನ್ನು ಮತ್ತೊಮ್ಮೆ ಪರಾಂಬರಿಸಿ ನೋಡಿ. ಈ ಕೆಳಗಿನ ಸಾಲುಗಳ ಧ್ವನಿ ಏನಿದ್ದೀತು ?
"ದೊಡ್ಡ ಪ್ರಶಸ್ತಿ ನನಗೆ ಸಿಕ್ಕಿಲ್ಲ ಎಂಬ ಕೊರಗು ನನಗೆ ಇತ್ತು. ಕೊನೆಗೂ ಪದ್ಮ ಪ್ರಶಸ್ತಿ ನನ್ನನ್ನು ಅರಸಿಕೊಂಡು ಬಂತು. ಪದ್ಮ ಪ್ರಶಸ್ತಿ ಜತೆಗೆ ನನಗೆ ಭಾರೀ ಮೊತ್ತದ ( ೫೦ ಲಕ್ಷ) ಹಣ ಸಿಕ್ಕಿತು ಎಂದೆಲ್ಲ ಸುದ್ದಿಯಾಗಿದೆ. ಆದರೆ ನನಗೆ ಸಿಕ್ಕಿದ್ದು ಕೇವಲ ಒಂದು ಸಾವಿರ ರೂಪಾಯಿ..’ ( ಪ್ರಜಾವಾಣಿ ವರದಿ)
ಅಜ್ಜಾ..
ಇಲ್ಲಿ ಪದ್ಮ ಪ್ರಶಸ್ತಿಗಳ ಬಗ್ಗೆ ನಿಮಗೆ ಇರುವ ತಪ್ಪು ತಿಳುವಳಿಕೆಯ ಗೋಚರ ಆಗಿದೆ. ಪದ್ಮ ಪ್ರಶಸ್ತಿಗಳು ನಾಗರಿಕ ಸಮಾಜಕ್ಕೆ ಸಲ್ಲಿಸಿದ ವಿಶೇಷ ಸೇವೆಗೆ ಕೊಡುವಂಥದ್ದಲ್ಲವೇ? ನಿಜಕ್ಕೂ ರಸಿಕರ ರಾಜನಾಗಿ, ನಿಮ್ಮ ಇಳಿ ವಯಸ್ಸಿನಲ್ಲೂ ಪ್ರೇಕ್ಷಕರ ಅಪೇಕ್ಷೆಯನ್ನು ಹುಸಿ ಮಾಡದೇ ಕೆಲಸ ಮಾಡುವ ನಿಮ್ಮ ಸೇವೆಯನ್ನು ಮನ್ನಿಸಿ ನೀಡಿದ ಗೌರವ ಇದು. ಅಷ್ಟೇ ಅಲ್ಲ. ನಿಮ್ಮ ಜೀವದ ಕಲೆಯಾಗಿರುವ ಯಕ್ಷಗಾನಕ್ಕೆ ಸಿಕ್ಕ ಮೊದಲ ಪದ್ಮ ಪ್ರಶಸ್ತಿಯೂ ಇದು.
ಇಂಥ ಗೌರವದೊಂದಿಗೆ ವ್ಯಕ್ತಿಗತ ಹಣಕಾಸು ವಿಚಾರ ತಳಕುಹಾಕುವುದು ಸರಿಯಾ...? ನೀವು ಪದ್ಮ ಪ್ರಶಸ್ತಿ ಮೂಲಕವೂ ಹಣ ಸಂಪಾದನೆ ಮಾಡಿದ್ದೀರಿ ಎಂದು ಯಾರೋ ಅಪ್ರಸ್ತುತ ಜನ ಏನೋ ಹೇಳಿದರು ಎಂದು ಆ ಬಗ್ಗೆ ವಿವಿ ವೇದಿಕೆಯಲ್ಲಿ ಉತ್ತರ ಹೇಳಿದ್ದು ಸರಿಯಾ ?
ನಾನೇ ಗಮನಿಸುತ್ತಿರುವಂತೆ ಪದ್ಮ ಪ್ರಶಸ್ತಿ ಬಂದ ಬಳಿಕ ನಿಮ್ಮ ಮೇಳದ ಆಟಗಳಿಗೆ ವೀಳ್ಯಗಳು ದುಪ್ಪಟ್ಟು ಆಗಿವೆ. ಇಂಥ ಸಕಾರಾತ್ಮಕ ಅಂಶವನ್ನು ನಾನು ಗಮನಿಸುತ್ತಿದ್ದೇನೆ ಅಜ್ಜಾ..!
ಅದು ಒಂದು ವಿಚಾರ ..
ಅದೇ ವೇದಿಕೆಯಲ್ಲಿ ನೀವಾಡಿದ ಇನ್ನೊಂದು ಮಾತೂ ನನಗೆ ಸರಿ ಬೀಳಲಿಲ್ಲ. ನೀವು "ನಿಮ್ಮ ಹಾಗೂ ನಮ್ಮ’ ಜಿಲ್ಲೆ- ಉತ್ತರ ಕನ್ನಡದ ಬಗ್ಗೆ ಅಷ್ಟೊಂದು ಲಘುವಾಗಿ ಜಿಲ್ಲೆಯ ಹೊರಗೆ ಆಡಬಾರದಿತ್ತು. ಉ.ಕ. ಬಗ್ಗೆ ಮಂಗಳೂರಿನಲ್ಲಿ ನೀವು ಹೇಳಿದ್ದೇನು ಎಂದು ನಿಮಗೆ ನೆನಪಿಸುವೆ. ಹೊರಗಿನ ಕಲಾವಿದರನ್ನು ಕರೆಸಿ ಅವರನ್ನು ಸನ್ಮಾನಿಸುವುದು ದ.ಕ.ದವರ ಸದ್ಗುಣಗಳಲ್ಲೊಂದು ನಿಜ.
ಅದಕ್ಕೆನೀವು ಕೃತಜ್ಞತೆ ಹೇಳಿದ ರೀತಿಯಾದರೂ ಹೇಗಿದೆ ?
"ಕಲಾವಿದರಿಗೆ ಸಮಾಜದಲ್ಲಿ ಪ್ರೋತ್ಸಾಹ ಕಡಿಮೆ.. ಉತ್ತರಕನ್ನಡ ಜಿಲ್ಲೆಯಲ್ಲಂತೂ ಇನ್ನೂ ಕಡಿಮೆ. ನನ್ನನ್ನು ಬೆಳೆಸಿದ್ದು, ದ.ಕ.ಜಿಲ್ಲೆ ಜನತೆ. ಉತ್ತರ ಕನ್ನಡದಲ್ಲಿ ಯಾವುದೇ ಕ್ಷೇತ್ರದಲ್ಲೂ ನನ್ನನ್ನು ಬಿಟ್ಟರೆ ಪದ್ಮಶ್ರೀ ಪ್ರಶಸ್ತಿ ಸಿಕ್ಕವರೇ ಇಲ್ಲ. ಕಲಾವಿದರನ್ನು ಪ್ರೋತ್ಸಾಹಿಸುವ ಮನಸ್ಥಿತಿ ಅಲ್ಲಿ ಬೆಳೆದಿಲ್ಲ.. ಉತ್ತರಕನ್ನಡದಲ್ಲೂ ಪ್ರತಿಭೆ ಗುರುತಿಸುವ, ಗೌರವಿಸುವ ಮನೋಭಾವ ಬೆಳೆಯಬೇಕು”ಎಂದೆಲ್ಲ ಹೇಳಿದ್ದೀರಿ. ( ಪ್ರಜಾವಾಣಿ ವರದಿ)
ಚಿಟ್ಟಾಣಿಯವರಂತೆ ನಾನೂ ಕೂಡ ಉತ್ತರ ಕನ್ನಡ ಜಿಲ್ಲೆ ಮೂಲದವನು. ಇದೀಗ ದಕ್ಷಿಣ ಕನ್ನಡದಲ್ಲೇ ಸೆಟಲ್ ಆಗಿದ್ದರೂ, ಉತ್ತರ ಕನ್ನಡ ಜಿಲ್ಲೆ ಬಗ್ಗೆ ಲಘುವಾಗಿ ಮಾತನಾಡಿದರೆ ನಾನು ಜಾಗೃತನಾಗುತ್ತೇನೆ. ಕೃಷಿ ಕೇಂದ್ರತ ಹಾಗೂ ಕಾಡು ಕೇಂದ್ರಿತವಾದ ಉ.ಕ. ಜಿಲ್ಲೆಯಲ್ಲಿ ನಾಗರಿಕ ಸಮಾಜದ ಸನ್ಮಾನ, ಗದ್ದಲಗಳು, ಆರ್ಥಿಕತೆ, ವ್ಯವಹಾರ ಕಡಿಮೆ ನಿಜ. ಉತ್ತರ ಕನ್ನಡವನ್ನು ಅದು ಇದ್ದ ರೀತಿಯಲ್ಲಿ ಗೃಹಿಸಿ ಗೌರವಿಸಬೇಕು. ಸಾಧ್ಯವಾದರೆ ನಾವೂ ಏನಾದರೂ ಉತ್ತಮ ಕೆಲಸ ಮಾಡಿ ಜಿಲ್ಲೆಯ ಹೆಸರನ್ನು ಮೇಲಕ್ಕೆತ್ತಬೇಕು ಅಷ್ಟೆ. ಅದನ್ನು ಬಿಟ್ಟು ಶತಮಾನಗಳ ಕಾಲದ ಆರ್ಥಿಕ ಸಮೃದ್ಧಿ ಹಾಗೂ ಶೈಕ್ಷಣಿಕ ಸಮೃದ್ಧಿಯಿಂದ ಬೆಳಗುತ್ತಿರುವ ದಕ್ಷಿಣ ಕನ್ನಡದೊಂದಿಗೆ ಹೋಲಿಸಿ ಉತ್ತರ ಕನ್ನಡದಲ್ಲಿ ಇಂಥದ್ದೆಲ್ಲ ಇಲ್ಲ ಎನ್ನುವುದು ಸರಿಯಲ್ಲ.
ಅಜ್ಜಾ..
'ನಿನ್ನ ಅಣ್ಣನಾದರೆ ಎಲ್ಲದರಲ್ಲೂ ಫಸ್ಟು, ನೀನು ಯಾತಕ್ಕೂ ಬೇಡ’ ಎಂದು ಶಾಲೆಗೆ ಹೋಗುವ ತನ್ನ ಸ್ವಂತ ಮಕ್ಕಳಲ್ಲಿ ಪಾಲಕರು ತಾರತಮ್ಯ ಮಾಡುತ್ತಾರಲ್ಲ ಹಾಗೆ ಆಯಿತು ಈ ಆಲೋಚನಾ ವಿಧಾನ ಅಜ್ಜ..ದಯವಿಟ್ಟು ಜಿಲ್ಲೆಯ ಹೊರಗೆ ಹಾಗೆಲ್ಲ ಹೇಳಬೇಡಿ.

ಚಿಕ್ಕಂದಿನಿಂದಲೂ ಚಿಟ್ಟಾಣಿ ಅಜ್ಜನ ಅಭಿಮಾನಿ ಬಳಗದ ಸದಸ್ಯ ನಾನು. ಇಳಿವಯಸ್ಸಿನಲ್ಲೂ ನಿಮ್ಮ ಕ್ರೀಯಾಶೀಲತೆಗೆ ಅಚ್ಚರಿಪಡುತ್ತೇನೆ. ಹೀಗಿದ್ದೂ ವಿಶ್ವವಿದ್ಯಾಲಯದಂಥ ವೇದಿಕೆಯಲ್ಲಿ ನೀವು ಹೀಗೆಲ್ಲ ಮಾತಾಡಬಾರದಿತ್ತು ಎಂದು ಅನ್ನಿಸಿದೆ..
ತಪ್ಪು ತಿಳಿದುಕೊಳ್ಳಬೇಡಿ ಅಜ್ಜ..
ಇತೀ ನಿಮ್ಮ ಪ್ರೀತಿಯ
-ಹರಗಿ ಸದಾನಂದ


Read More