ಗೀತೆಯ ಮೊದಲ ಇಂಗ್ಲೀಷ್ ಅನುವಾದಕ್ಕೆ ೨೩೦ ವರ್ಷ

ಗೀತೆಯ ಮೊದಲ ಇಂಗ್ಲೀಷ್ ಅನುವಾದಕ್ಕೆ ೨೩೦ ವರ್ಷ

-ಸದಾನಂದ ಹೆಗಡೆ ಹರಗಿ
ಭಗವದ್ಗೀತೆ ಮೊದಲ ಬಾರಿಗೆ ೧೭೮೫ರಲ್ಲಿ ಇಂಗ್ಲಿಷ್ನಲ್ಲಿ ಪ್ರಕಟವಾಯಿತು. ಅಲ್ಲಿಯ ತನಕ ತಾಳೆಗರಿ ಪೆಟ್ಟಿಗೆಯಲ್ಲಿದ್ದ ಈ ಹಿಂದೂ ಧರ್ಮಗ್ರಂಥ ಆ ಮೂಲಕ ವಿಶ್ವದೆತ್ತರದಲ್ಲಿ ಪ್ರಕಾಶನಗೊಂಡಿತು. ವ್ಯಾಪಾರಿಗಳಾಗಿ ಕೊಳ್ಳೆ ಹೊಡೆದವರು, ಧರ್ಮ ಪ್ರಚಾರಕ್ಕಾಗಿ ಇಲ್ಲಿಗೆ ಬಂದವರು ಮುಂತಾದ ಅಪವಾದಗಳನ್ನು ಹೊತ್ತ ಮಂದಿಯೇ ಇಂಥದೊಂದು ಸತ್ಕಾರ್ಯವನ್ನೂ ಅಚ್ಚುಕಟ್ಟಾಗಿ ಮಾಡಿದ್ದಾರೆ. ಆಗ ಈಸ್ಟ್ ಇಂಡಿಯಾ ಕಂಪನಿಯ ಪರವಾಗಿ ಭಾರತದ ಗವರ್ನರ್ ಜನರಲ್ ಆಗಿದ್ದ ವಾರೆನ್ ಹೇಸ್ಟಿಂಗ್ಸ್ ವಿಶೇಷ ಆಸಕ್ತಿ ವಹಿಸಿ ಗೀತೆಯನ್ನು ಪಶ್ಚಿಮಕ್ಕೆ ಪರಿಚಯಿಸಿದ. ಗೀತೆಯ ಸಾರಾಂಶವನ್ನು ತನ್ನ ಅನುಭವ ಸಾರದೊಂದಿಗೆ ಉಲ್ಲೇಖಿಸಿ, ಇಂಗ್ಲಿಷ್ ಅನುವಾದಕ್ಕೆ ಸ್ವತಃ ಮುನ್ನುಡಿ ಬರೆದು, ತನ್ನ ದೇಶದ ಜನರಿಗೆ ಇದನ್ನು ಓದುವಂತೆ ಶಿಫಾರಸು ಮಾಡಿದ. ಹೀಗೆ ಭಗವದ್ಗೀತೆ ಪಶ್ಚಿಮಕ್ಕೆ ರಾಜ ಮರ್ಯಾದೆಯೊಂದಿಗೆ ಪದಾರ್ಪಣೆಗೈದ ಘಟನೆಗೆ ಈಗ ೨೩೦ ವರ್ಷಗಳು.
ಮಂಗಳೂರಿನ ಬಾಸೆಲ್ ಮಿಷನ್ ಆರ್ಕೈವ್ನಲ್ಲಿ ಇರುವ ಅಪೂರ್ವ ಪುಸ್ತಕವೊಂದು ಇದಕ್ಕೆ ಸಾಕ್ಷಿ. ಭಗವದ್ಗೀತೆಯ ನೂರಾರು ಇಂಗ್ಲೀಷ್ ರೂಪಗಳು ಈಗ ಸಿಗುತ್ತವೆ, ನಿಜ. ಆದರೆ, ಇಲ್ಲಿರುವುದು ಗೀತೆಯ ಚೊಚ್ಚಲ ಇಂಗ್ಲಿಷ್ ಅನುವಾದದ ಪ್ರತಿ! ಬಾಸೆಲ್ ಮಿಷನ್ನ ಸಹವರ್ತಿ ಕ್ರೈಸ್ತ ಮಿಷನರಿಯಾದ ವೆಸ್ಲಿ ಮಿಷನ್ BHAGAVAT-GEETA, Dialogues of Krishna and Arjoon in Eighteen Lectures: SANSCRIT, CANAREES, AND ENGLISH,In parallell Columns) ಹೆಸರಲ್ಲಿ ಹೊರತಂದ ಸಂಪುಟದಲ್ಲಿ ಇಂಗ್ಲಿಷ್ ಅನುವಾದ ಪ್ರತಿ ಲಭ್ಯವಿದೆ. ೧೭೮೫ರ ನಂತರದ ೬೦ ವರ್ಷಗಳವರೆಗಿನ ಗೀತೆಯ ವಿಭಿನ್ನ ರೂಪಾಂತರಗಳಿರುವ ಈ ಪುಸ್ತಕ ಕಾಲದ ಹೊಡೆತಕ್ಕೆ ಸಿಲುಕಿ ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೂ ಕೆಟಿಸಿ (ಕರ್ನಾಟಕ ಥಿಯೊಲಾಜಿಕ್ ಕಾಲೇಜು) ಪತ್ರಾಗಾರದಲ್ಲಿ ಇದನ್ನು ಸಂರಕ್ಷಿಸಲಾಗಿದೆ. ಅಂದಹಾಗೆ, ಗೀತೆಯ ಮೊದಲ ಇಂಗ್ಲಿಷ್ ಅನುವಾದಕ ಚಾರ್ಲ್ಸ್  ವಿಲ್ಕನ್ಸ್.

ವಾರೆನ್ ಹೇಸ್ಟಿಂಗ್ಸ್ ಮುನ್ನುಡಿ
ಮೊಘಲರ ನಂತರ ಅಖಂಡ ಭಾರತವನ್ನು ಆಳಲು ತೊಡಗಿದ್ದು ಈಸ್ಟ್ ಇಂಡಿಯಾ ಕಂಪನಿ. ಈ ಆಡಳಿತದಲ್ಲಿ ೧೭೭೪ರಿಂದ ೧೭೮೫ರವರೆಗೆ ಭಾರತದ ಗವರ್ನರ್ ಜನರಲ್ ಆಗಿದ್ದವನು ವಾರೆನ್ ಹೇಸ್ಟಿಂಗ್ಸ್. ಆತ ಗೀತೆಯ ಈ ಅನುವಾದಕ್ಕೆ ಬರೆದಿರುವ ಸುಂದರವಾದ ಮುನ್ನುಡಿಯು ಇಂಗ್ಲೆಂಡ್ನ ಕೇಂದ್ರ ಕಚೇರಿಯಲ್ಲಿರುವ ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕರ ಮಂಡಲಿಯನ್ನು ಉದ್ದೇಶಿಸಿ ಬರೆದ ದೀರ್ಘಪತ್ರದ ರೂಪದಲ್ಲಿದೆ. ‘ಕಂಪೆನಿಯ ವ್ಯಾಪಾರೋದ್ದೇಶ, ಸಹೋದ್ಯೋಗಿ ಪರಿವಾರ, ದೇಶದ ಹಿತಾಸಕ್ತಿಗಳು, ಭಾಷೆಯನ್ನೂ ಮೀರಿ ಮಹತ್ವದ ಕೃತಿಯೊಂದನ್ನು ನಿಮ್ಮೆದುರು ಪ್ರಸ್ತಾಪಿಸಲು ಹರ್ಷವೆನಿಸುತ್ತದೆ’ ಎಂದೇ ಹೇಸ್ಟಿಂಗ್ಸ್ ತನ್ನ ಈ ಮಾತುಗಳನ್ನು ಆರಂಭಿಸಿದ್ದಾನೆ. ಪುರಾಣ, ನೈತಿಕತೆಯ ರೂಪದಲ್ಲಿ ಇರುವ ಹಿಂದೂ ಧರ್ಮದ ಈ ಸಾಹಿತ್ಯ ಭಾಗವು ಐದು ಸಾವಿರ ವರ್ಷಕ್ಕೂ ಹಳೆಯದು. ಭರತ ಖಂಡ, ಭಾರತ, ಮಹಾಭಾರತ ಇತ್ಯಾದಿಗಳ ಹಿನ್ನೆಲೆ ಹೇಳುತ್ತ, ಮಹಾಭಾರತದ ರಚನೆಕಾರರಾದ ಕೃಷ್ಣ ದ್ವೈಪಾಯನರನ್ನು ಉಲ್ಲೇಖಿಸಿ ಕುರುಕ್ಷೇತ್ರದವರೆಗಿನ ಕತೆಯ ಪಕ್ಷಿನೋಟವನ್ನೂ ಆತ ಕೊಟ್ಟಿದ್ದಾನೆ. ಮಹಾ‘ರತದ ಕಥೆಯು ಅಷ್ಟು ಹೊತ್ತಿಗಾಗಲೇ ಇಂಗ್ಲಿಷ್ಗೆ ಬಂದಿತ್ತು, ಅದರಲ್ಲಿ ಮಹತ್ವದ ಭಾಗವಾದ ಗೀತೋಪದೇಶವು ಇಂಗ್ಲಿಷ್ಗೆ ಇನ್ನೂ ಪರಿಚಯವಾಗದಿರುವ ಬಗ್ಗೆ ವ್ಯಾಪಾರಿ ಹಿನ್ನೆಲೆಯ ಈ ಅಕಾರಿ ಅಚ್ಚರಿ ವ್ಯಕ್ತಪಡಿಸಿದ್ದಾನೆ.
ಕೃಷ್ಣ, ಅರ್ಜುನರ ಹಿನ್ನೆಲೆ, ಗೀತೆಯ ಹದಿನೆಂಟು ಅ‘ಯ ಎಲ್ಲವನ್ನೂ ಉಲ್ಲೇಖಿಸಿದ ತರುವಾಯ ತಾನು ಗಮನಿಸಿದ ಭಗವದ್ಗೀತೆಯ ತಿರುಳನ್ನು ಕೂಡ ಮುನ್ನುಡಿಯಲ್ಲಿ ಸ್ಪಷ್ಟವಾಗಿ ಹೇಸ್ಟಿಂಗ್ಸ್ ಉಲ್ಲೇಖಿಸಿದ್ದಾನೆ. ಗೀತೆಯಲ್ಲಿ ಬರುವ ಚಿತ್ತಚಾಂಚಲ್ಯ ಮತ್ತು ಮನೋನಿಗ್ರಹದ ಬಗ್ಗೆ ಇಲ್ಲಿ ಆಳವಾದ ಗ್ರಹಿಕೆ ಇದೆ. ಎಲ್ಲೆಲ್ಲೋ ಹರಿದಾಡುವ ಮನಸ್ಸು, ಅದನ್ನು ಹಿಡಿದು ಒಂದೆಡೆ ಕೇಂದ್ರೀಕರಿಸುವ ಕಷ್ಟ, ಮನೋನಿಗ್ರಹದ ಸಾಧ್ಯತೆಗಳ ಬಗ್ಗೆ ಗೀತೆಯಲ್ಲಿ ಬೋಸಿರುವ ಸಾಧನೆಯ ಮಾರ್ಗಗಳು, ನಿರಂತರ ತಪಸ್ಸು ಮನಸ್ಸನ್ನು ಹೇಗೆ ಒಂದು ಶಿಸ್ತಿಗೆ ಒಳಪಡಿಸಬಲ್ಲದು ಎಂಬುದು ಈ ಮುನ್ನುಡಿಯಲ್ಲಿದೆ. ಆರೋಗ್ಯಪೂರ್ಣ ದೇಹಕ್ಕೆ ಬೇಕಿರುವ ವ್ಯಾಯಾಮದಂತೆ ಮನಸ್ಸಿಗೂ ಒಂದು ಸಂಸ್ಕಾರ ಅವಶ್ಯ. ಹೀಗೆ ಸಂಸ್ಕಾರಕ್ಕೊಳಪಟ್ಟ ಮನಸ್ಸು ಶಾಂತವಾಗಿ ಇರಬಲ್ಲದು ಎಂಬುದಕ್ಕೆ ವಾರಣಾಸಿಯ ಬೀದಿಯಲ್ಲಿ ತಾನು ಕಂಡ ‘ನಸ್ಥ ಸನ್ಯಾಸಿಯ ನಿದರ್ಶನವನ್ನೂ ಹೇಸ್ಟಿಂಗ್ಸ್ಇಲ್ಲಿ ಕೊಟ್ಟಿದ್ದಾನೆ.
 ಭಗವದ್ಗೀತೆಯ ವಿವಿಧ ನೆಲೆಗಳ ಬಗ್ಗೆ ಅನುವಾದಕ ಚಾರ್ಲ್ಸ್ ವಿಲ್ಕಿನ್ಸ್ ಮಾಡಿರುವ ಪ್ರಸ್ತಾಪವನ್ನು ಹೇಸ್ಟಿಂಗ್ಸ್ ಇದರಲ್ಲಿ ಉಲ್ಲೇಖಿಸಿದ್ದಾನೆ. ಜತೆಗೆ ವಿಲ್ಕಿನ್ಸ್ ತನಗೆ ಕಳುಹಿಸಿಕೊಟ್ಟ ಅನುವಾದದ ಪರಿಷ್ಕೃತ ಪ್ರತಿಯ ಬಗ್ಗೆಯೂ ಇದರಲ್ಲಿ ಹೇಳಿದ್ದಾನೆ. ಮಿಗಿಲಾಗಿ, ಇಂಥದೊಂದು ಪ್ರತಿ ಇಂಗ್ಲಿಷ್ ಓದುಗರಿಗೆ ಕರಾರುವಾಕ್ಕಾಗಿ ತಲುಪಬೇಕಿರುವುದು ಅತ್ಯಂತ ಅವಶ್ಯವೆಂದು ಅನುವಾದಕರಿಗೆ ಗವರ್ನರನ ಆದೇಶರೂಪಿ ಕಿವಿಮಾತೂ ಇದೆ.
 ವಿಲ್ಕಿನ್ಸ್ ಅನುವಾದಿಸಿದ ಭಗವದ್ಗೀತೆ ಇಂಗ್ಲೆಂಡ್ನಲ್ಲಿ ಬಿಡುಗಡೆ ಆಯಿತು  (ಬೈಬಲ್ನ ಇಂಗ್ಲೀಷ್ ಆವೃತ್ತಿ ಬಿಡುಗಡೆಯಾಗಿದ್ದು ೧೬೧೧ರಲ್ಲಿ) ಎಂದು ನಾವು ಸಾಹಿತ್ಯೇತಿಹಾಸದಲ್ಲಿ ಕಾಣುತ್ತೇವೆ. ಆಗ ಮುದ್ರಣ ವ್ಯವಸ್ಥೆ ಇನ್ನೂ ಭಾರತಕ್ಕೆ ಬಂದಿರಲಿಲ್ಲ. ಕಲ್ಲಚ್ಚು, ಕಾಗದ ಎಲ್ಲವೂ ಆಗ ಭಾರತೀಯರಿಗೆ ತಿಳಿಯದ ಸಂಗತಿಯಾಗಿತ್ತು. ಬಾಸೆಲ್ ಮಿಷನ್ ಪತ್ರಾಗಾರದಲ್ಲಿ ಕಾಣುವ ಗೀತೆಯು ಇಂಥ ಸಂದರ್ಭ ಪ್ರಕಟಗೊಂಡಿದ್ದು, ಇದು ಮೂಲಪ್ರತಿ ಅಥವಾ ಮರುಮುದ್ರಣವೂ ಆಗಿರಬಹುದು. ಹೇಸ್ಟಿಂಗ್ಸ್ನ ಶಿಫಾರಸಿನೊಂದಿಗೆ ಇದು ಅದ್ಭುತ ಕೃತಿಯಾಗಿ ಮೂಡಿಬಂದಿದ್ದು, ಮುಂದಿನ ಹಲವು ತಲೆಮಾರುಗಳಿಗೆ ಜಾಗತಿಕ ಮಟ್ಟದಲ್ಲಿ ಒಂದು ಆಕರ ಗ್ರಂಥವಾಯಿತು. ಗೀತೆಯ ಇಂಗ್ಲಿಷ್ ಅನುವಾದಕ್ಕೆ ಉಂಟಾದ ಬೇಡಿಕೆಯ ಜತೆಗೆ ವಿಮರ್ಶಕರ ಶಿಫಾರಸಿನಿಂದಾಗಿ ಕೆಲವೇ ಸಮಯದಲ್ಲಿ ಫ್ರೆಂಚ್, ಜರ್ಮನ್ ಮತ್ತು ರಷ್ಯನ್ ಭಾಷೆಯ ಅನುವಾದಕ್ಕೂ ಕಾರಣವಾಯಿತು ಎಂದು ವಿಮರ್ಶಕರು ಬರೆದಿದ್ದಾರೆ.

ಇದು ಗೀತೆಯ ಜಾಗತಿಕ ಸಂಪುಟ
 ಭಗವತ್ ಗೀತಾ, ಡೈಲಾಗ್ ಆಫ್ ಕೃಷ್ಣಾ ಎಂಡ್ ಅರ್ಜುನ್ ಇನ್ ಏಟೀನ್ ಲೆಕ್ಚರ್ಸ್  ಸ್ಯಾನ್ಸ್ಕ್ರಿಟ್, ಕ್ಯಾನರೀಸ್ ಆಂಡ್ ಇಂಗ್ಲೀಷ್ ಇನ್ ಪ್ಯಾರಲಲ್ ಕಾಲಮ್’ ಸಂಪುಟವು ಗೀತೆ ವಿಚಾರದಲ್ಲಿ ೧೭೮೫ ರಿಂದ ೧೮೪೫ ವರೆಗಿನ ೬೦ ವರ್ಷದ ಜಾಗತಿಕ  ಇತಿಹಾಸದ  ದಾಖಲೆ. ಸಂಪುಟದಲ್ಲಿರುವ ಮೊದಲ ಇಂಗ್ಲೀಷ್ ಆವೃತ್ತಿಯ ಬಗ್ಗೆ ಮೇಲೆ  ವಿವರಿಸಲಾಗಿದೆ. ಗೀತೆಯ ಲ್ಯಾಟಿನ್, ಜರ್ಮನ್ ಅನುವಾದ, ದೇವನಾಗರಿಯ ಶ್ಲೋಕ ರೂಪಿ ಪಠ್ಯವನ್ನೂ ಜತೆಗೆ ಕೊಡಲಾಗಿದೆ. ಗೀತೆ ಬಗ್ಗೆ  ಆ ಕಾಲದಲ್ಲಿ ಪ್ರಕಟವಾದ  ಪ್ರಬಂಧಗಳಿವೆ. ವಿಶೇಷ  ಅಂದರೆ ಇಲ್ಲಿರುವ ಗೀತೆಯ ಕನ್ನಡ ಅನುವಾದ. ಅದರಲ್ಲೂ  ಗಮನ ಸೆಳೆಯುವ ಅಂಶ ಎಂದರೆ  ಕನ್ನಡ ಅನಿವಾದವನ್ನು  ಇಂಗ್ಲೀಷ್ ಅನುವಾದ(ವಿಲ್ಕಿನ್ಸ್  ಕೃತಿ) ಜತೆ ಹೋಲಿಕೆಯೊಂದಿಗೆ ಅ‘ಯನಕ್ಕೆ ಅನುಕೂಲ ಆಗುವ ರೀತಿಯಲ್ಲಿ  ಇರುವ ಪುಟ ವಿನ್ಯಾಸ ಗಮನ ಸೆಳೆಯುತ್ತದೆ. ಮೋಡಿ ಲಿಪಿಯ ಕನ್ನಡದಲ್ಲಿ ಶ್ಲೋಕ, ಕನ್ನಡ ಅನುವಾದ ಹಾಗೂ ಅದರ ಇಂಗ್ಲೀಷ್ ಅರ್ಥವನ್ನು ಒಂದರ ಪಕ್ಕ ಒಂದರಂತೆ ಹೋಲಿಸಿ ಓದಿಕೊಳ್ಳಬಹುದಾದ ಗೀತೆಯ ಹದಿನೆಂಟು ಅಧ್ಯಾಯವಿದೆ.
ಈಗಿನ ಪ್ರಕಟಣೆಗಳಿಗೆ ಹೋಲಿಸಿದರೆ ಅತ್ಯಂತ ವಿರಳ ಆಕಾರದಲ್ಲಿ ಇದೆ. ಅಂದರೆ, ಎ೪ ಡಮ್ಮಿಯಲ್ಲಿ ಒಟ್ಟೂ  ಇರುವ ೨೦೩ ಪುಟಗಳ ಈ ಪುಸ್ತಕವು ಗೀತೆ ವಿಚಾರದ ಮಹತ್ವದ  ದಾಖಲೆ ಮಾತ್ರವಲ್ಲ. ಆ ಕಾಲದ ಭಾಷೆ, ಲಿಪಿ, ಪುಟ ವಿನ್ಯಾಸ ಹಾಗೂ ಗ್ರಂಥ ಸಂಪಾದನೆಯ ಶೈಲಿಯ ದೃಷಿಯಿಂದಲೂ ಮಹತ್ವದ್ದು. ಈ ಭಾಗಕ್ಕೆ ಮುದ್ರಣ ಯಂತ್ರಗಳನ್ನು ಪರಿಚಯಸಿದ ಖ್ಯಾತಿ ಬಾಸೆಲ್ ಮಿಶನರಿಗಳಿಗೆ ಸಲ್ಲುತ್ತಿದ್ದು, ಐತಿಹಾಸಿಕ ಕಾಲಘಟ್ಟದ ಹತ್ತು ಹಲವು ವೆ‘ಶಿಷ್ಟ್ಯಗಳು ಇಲ್ಲಿ ಕಂಡುಬರುತ್ತಿವೆ. ಮೊದಲ ಇಂಗ್ಲೀಷ್ ಹಾಗೂ ಕನ್ನಡ ಅನುವಾದ ಒಳಗೊಂಡ ಈ ಸಮಗ್ರ ಸಂಪುಟವನ್ನು ರೆ. ಜಾನ್ ಗ್ಯಾರೆಟ್ ಸಂಗ್ರಹಿಸಿದರು. ಇವರು ಕನ್ನಡ ಮಿಷನರಿಯಾಗಿ ಅಪರೂಪದ ಕೆಲಸ ಮಾಡಿದ  ಜರ್ಮನಿ ಮೂಲದ ಮಿಷನರಿ.
ಕಬ್ಬನ್ ಶಿಫಾರಸು
ಬೆಂಗಳೂರಿನಲ್ಲಿ ವೆಸ್ಲಿ ಮಿಷನ್ನ ಮುದ್ರಣಾಲಯದಲ್ಲಿ  ಸಂಪುಟ ಪ್ರಕಟಣೆ ಆಗಿದ್ದು, ಆಗ ಮೈಸೂರು ಕಮೀಷನರ್ ಆಗಿದ್ದ ಲೆಫ್ಟಿನಂಟ್ ಜನರಲ್ ಮಾರ್ಕ್ ಕಬ್ಬನ್ನ (೧೭೭೫-೧೮೬೧) ಶಿಫಾರಸು ಇದಕ್ಕಿದೆ. ಚಾರ್ಲ್ಸ್ ವಿಲ್ಕಿನ್ಸ್ನ ಇಂಗ್ಲಿಷ್ಅನುವಾದ, ಸಂಸ್ಕೃತ ಪಠ್ಯ, ಎ.ಜಿ.ಎ. ಶೇಗಲ್ ಅವರು ಲ್ಯಾಟಿನ್ಗೆ ಮಾಡಿರುವ ಅನುವಾದ, ಬ್ಯಾರನ್ ವಿಲಿಯಂ ಡೆ ಹಂಬೋಲ್ಡ್ ಜರ್ಮನಿಯ ಬರ್ಲಿನ್ ಅಕಾಡೆಮಿ ಆಫ್ ಸೈನ್ಸ್ನಲ್ಲಿ ೧೮೨೫-೨೬ರಲ್ಲಿ ಮಾಡಿದ ಎರಡು ಉಪನ್ಯಾಸದ ಪ್ರಬಂಧ  ರೂಪ, ಶ್ರೀಧರ ಸ್ವಾಮಿ ಎಂಬುವರ ಭಾಷಣದ ಪ್ರಬಂಧ ರೂಪಗಳು ಇಲ್ಲಿವೆ. ‘ಗವದ್ಗೀತೆಯ ಶ್ಲೋಕಗಳನ್ನು ಸಸ್ವರವಾಗಿ ಉಚ್ಚರಿಸುವ ಬಗೆ ಹೇಗೆ ಎಂಬುದನ್ನೂ ಇದರಲ್ಲಿ ಕೊಡಲಾಗಿದೆ. ಶ್ಲೋಕದ ಸಾಲುಗಳಲ್ಲಿ ಲಘು-ಗುರು ಸ್ವರಪ್ರಸ್ತಾರಗಳನ್ನು ಚಿತ್ರಿಸಿ ಕೊಡಲಾಗಿದೆ. ‘ರತೀಯ ದರ್ಶನದ ಬಗ್ಗೆ ಆಸಕ್ತನಾಗಿದ್ದ  ಗ್ಯಾರೆಟ್ ಗೀತೆಯನ್ನು ಸ್ವತಃ ಕನ್ನಡಕ್ಕೆ ಅನುವಾದ ಮಾಡಿ, ತಾನೇಕೆ ಇದನ್ನು ಮಾಡಿದೆ ಎಂಬುದನ್ನು ಮುನ್ನುಡಿಯಲ್ಲಿ ಸ್ಪಷ್ಟವಾಗಿ ಬರೆಯುತ್ತಾನೆ. ‘ಜಾಗತಿಕ ಮಟ್ಟದಲ್ಲಿ ಲ್ಲಿ ಇರುವ ಗ್ರಂಥಗಳಲ್ಲಿ ಅತ್ಯಂತ ಸುಂದರ, ಅಪೂರ್ವ ತತ್ವವನ್ನು ತನ್ನೊಳಗೆ ಬಚ್ಚಿಟ್ಟುಕೊಂಡ ಕಾವ್ಯ ಇದು ’ ಎಂಬ ವಿಮರ್ಶಕ  ಎ.ಜಿ.ಎ. ಶೇಗಲ್ ಮಾತನ್ನು ಉಲ್ಲೇಖಿಸಿ, ‘ಪೌರ್ವಾತ್ಯ ದೇಶದಿಂದ ಪಶ್ಚಿಮಕ್ಕೆ ದೊರೆತ ಅನರ್ಘ್ಯ ರತ್ನ ಇದು’ ಎಂದಿದ್ದಾನೆ.
ಬೇರೊಂದು ಧರ್ಮದ ಗ್ರಂಥವನ್ನು ನಿಷ್ಕಲ್ಮಶ ಭಾವದಿಂದ ಶ್ಲಾಘಿಸುವ ಗ್ಯಾರೆಟ್, ಈ ಪುಸ್ತಕವನ್ನು ಸಂಪಾದಿಸಿ ತರುವ ಉದ್ದೇಶವೇನೆಂದೂ ಸ್ಪಷ್ಟವಾಗಿ ಬರೆದಿದ್ದಾನೆ. ‘ಸಂಸ್ಕೃತ ಮೂಲದ ಭಗವದ್ಗೀತೆಯ ಕಾಲಮಾನವನ್ನು ನಿಖರವಾಗಿ ಕಂಡುಕೊಳ್ಳುವುದು ಸಾ‘ವಾದರೆ, ಇಲ್ಲಿನ ನಾಗರಿಕತೆ, ಇತಿಹಾಸ ಸೇರಿದಂತೆ ಇಡೀ ಭಾರತದ ಸ್ಪಷ್ಟ ಕಲ್ಪನೆ ನಮಗೆ ದಕ್ಕುತ್ತದೆ. ತಾಳೆಗರಿಯಲ್ಲಿ ಲಯವಿದ್ದ ಗೀತೆಯನ್ನು ೧೮೧೮ರಲ್ಲಿ ( ಎ.ಜಿ.ಎ. ಶೇಗಲ್ ನೇತೃತ್ವದಲ್ಲಿ) ಮೊಟ್ಟ ಮೊದಲ ಬಾರಿಗೆ ಜರ್ಮನಿಯ ಬಾನ್ ನಗರದ ಮುದ್ರಣಾಲಯ ಒಂದರಲ್ಲಿ ದೇವನಾಗರಿ ಲಿಪಿಯಲ್ಲೇ ಮುದ್ರಣ ಮಾಡಲಾಯಿತು. ಹೀಗೆ ಮುದ್ರಣವಾದ ಗೀತೆಯ ಪ್ರತಿಗಳು ದಕ್ಷಿಣ ‘ರತದಲ್ಲಿ ಸಿಗುತ್ತಿಲ್ಲ, ಇದನ್ನು ಮರು ಮುದ್ರಣ ಮಾಡುವ ಮೂಲಕ ಮಿಶನರಿ ಕೆಲಸಕ್ಕೂ ಒಂದು ಗೌರವ ದೊರೆತಂತೆ ಆಗುತ್ತದೆ’ ಎನ್ನುವುದು ಅವನ ಮಾತುಗಳಾಗಿವೆ.
 ಕನ್ನಡ ಸೇರಿದಂತೆ ಎಲ್ಲ ಭಾಷೆಗಳಲ್ಲಿ ಕೊಡಲಾದ ಗೀತೆಯು ಮಿಷನರಿಗಳ ಓದಿಗಾಗಿ ಎಂದು ಸ್ಪಷ್ಟವಾಗಿ ಹೇಳಿರುವ ಗ್ಯಾರೆಟ್, ‘ಗೀತೆಯನ್ನು ದೇಶೀಯ ಪಂಡಿತರು ಭಗವದ್ ವಾಣಿ ಎಂದು ನಂಬಿದ್ದು, ಈ ನಂಬಿಕೆಯ ಹಿನ್ನೆಲೆ ಮಿಷನರಿಗಳಿಗೆ ಮನವರಿಕೆ ಆಗಬೇಕು, ಅಲ್ಲದೆ ಕ್ರಿಶ್ಚಿಯಾನಿಟಿಯ ತತ್ವದ ಹಿನ್ನೆಲೆಯೊಂದಿಗೆ ಗೀತೆಯ ಹೋಲಿಕೆಗೆ ಅವಕಾಶ ಆಗಬೇಕು. ಎರಡು ಧರ್ಮಗಳ ಹೋಲಿಕೆ ಮತ್ತು ವೈರು‘ಗಳ ಅ‘ಯನಕ್ಕೆ ಇಲ್ಲಿ ಅವಕಾಶವಿದೆ. ಗೀತೆ ಅಭಿವ್ಯಕ್ತಿಸುವ ಲೈಫ್ ಎಂಡ್ ಇಮ್ಮಾರ್ಟಾಲಿಟಿಯ ಚಿಂತನೆಗೂ, ಗ್ಲೋರಿಯಸ್ ಗಾಸ್ಪೆಲ್ ಆಫ್ ಬ್ಲೆಸ್ಡ್ ಗಾಡ್ ಪಠ್ಯಕ್ಕೂ ಇರುವ ಸಾಮ್ಯವನ್ನು ನಾವು ತಿಳಿದುಕೊಳ್ಳಬೇಕು. ಗೀತೆಯ ಇಂಗ್ಲಿಷ್ ಅನುವಾದದ ಕೆಲವೇ ವರ್ಷದ ಬಳಿಕ ಬೊಂಬಾಯಿಯ ಕೆ.ಆರ್. ನೆಸ್ಸಿಟ್ ಅವರು ಮರಾಠಿಯಲ್ಲಿ ಹೊರತಂದಿರುವಂತೆ ಕನ್ನಡದಲ್ಲಿ (ಕ್ಯಾನರೀಸ್) ಗೀತೆಯನ್ನು ನಾವು ಈ ಮೂಲಕ ಹೊರತರುತ್ತಿದ್ದೇವೆ. ಪುಸ್ತಕಕ್ಕೆ ಸಾಕಷ್ಟು ಪ್ರಸಾರ ಹಾಗೂ ವಿದ್ವತ್ಪೂರ್ಣ ಗೌರವವು ದೊರಕುತ್ತದೆ’ ಎಂಬ ಆಶಯ ವ್ಯಕ್ತಪಡಿಸಿದ್ದಾನೆ.
ಬಾಕ್ಸ್
ರೆವರೆಂಡ್ ಜಾನ್ ಗ್ಯಾರೆಟ್
ಬೆಂಗಳೂರಲ್ಲಿ ಕನ್ನಡ ಮಿಷನ್ ಆರಂಭವಾದ ಸ್ವಲ್ಪ ಕಾಲದಲ್ಲಿಯೇ ಗ್ಯಾರೆಟ್ ಇಲ್ಲಿಗೆ ಬಂದ. ಈತನ ಬಗ್ಗೆ ೨೦೦೦ದಲ್ಲಿ ಕನ್ನಡ ಪುಸ್ತಕ ಪ್ರಾಕಾರ ಪ್ರಕಟಿಸಿದ, ಶ್ರೀನಿವಾಸ ಹಾವನೂರರ ‘ಹೊಸಗನ್ನಡದ ಅರುಣೋದಯ’ ಕೃತಿಯಲ್ಲೂ ಉಲ್ಲೇಖಿಸಲಾಗಿದೆ. ಆ ಕಾಲದಲ್ಲಿ ಭಾರತಕ್ಕೆ ಬಂದ ಲಂಡನ್, ಬಾಸೆಲ್ ಹಾಗೂ ವೆಸ್ಲಿಯನ್ ಮಿಷನರಿಗಳಲ್ಲಿ ಈತ ವೆಸ್ಲಿಯನ್ ಗುಂಪಿನವನು. ಗ್ಯಾರೆಟ್ ೧೮೫೬ರಲ್ಲಿ ಮೆ‘ಸೂರಿನ ಕಮಿಷನರ್ ಆಗಿದ್ದ ಲೆ.ಜ. ಕಬ್ಬನ್ ಕೆಳಗೆ ಶಿಕ್ಷಣಾಕಾರಿ ಎಂದು ನೇಮಕವಾದ.
 ಗ್ಯಾರೆಟ್ನ ಗ್ರಂಥ ರಚನೆಯು ಪಠ್ಯ ಮತ್ತು ಪ್ರಾಚೀನ ಕೃತಿ ಸಂಪಾದನೆ ಎಂದು ಎರಡು ರೀತಿಯಲ್ಲಿ ಸಾಗಿಬಂತು. ಶಿಕ್ಷಣಾಕಾರಿಯಾಗುವ ಮೊದಲೇ ಆತ ಹಲವು ಪುಸ್ತಕಗಳನ್ನು ಹೊರತಂದಿದ್ದ. ‘ಚಿಕ್ಕವರಿಗೆ ತಕ್ಕಂಥ ಪಾಠಗಳು’ ಅವನ ಕಲಿಕಾ ಪುಸ್ತಕ ಮಾಲೆಯ ಪೈಕಿ ಒಂದು. ಇಂಗ್ಲಿಷ್ ಕಲಿಯುವ ಮಕ್ಕಳ ಅ‘ಸಕ್ಕೆಂದು ಅವನು ಕೈಗೊಂಡ ಮೊತ್ತ ಮೊದಲ ಕಾರ್ಯವೆಂದರೆ ಇಂಗ್ಲಿಷ್ ಮತ್ತು ಕನ್ನಡ ಕೋಶಗಳ ಪರಿಷ್ಕರಣೆ. ೧೮೪೧ರಲ್ಲಿ ಗ್ಯಾರೆಟ್ ಕನ್ನಡ-ಇಂಗ್ಲೀಷ್ ಕೋಶವನ್ನು ಹೊರತಂದ.
ಬಹುಭಾಷಾ ಆವೃತ್ತಿಯ ‘ಗವದ್ಗೀತೆ (೧೮೪೫) ಗ್ಯಾರೆಟ್ಗೆ ಅಖಿಲ ಭಾರತ ಕೀರ್ತಿಯನ್ನು ತಂದುಕೊಟ್ಟಿತು. ಅದರ ಹೊಳಹು ಸಂಪೂರ್ಣ ಅವನದೇ ಆಗಿತ್ತು. ‘ಗವದ್ಗೀತೆ ಕುರಿತ ಅದುವರೆಗೆ ಇದ್ದ ಸಾ‘ನವನ್ನು ಬಳಸಿಕೊಂಡು ಅ‘ಸ ಮಾಡುವವರಿಗೆಉಪಯುಕ್ತ ಆವೃತ್ತಿ ಇದಾಯಿತು. ಗ್ಯಾರೆಟ್ನ ಕೊನೆಯ ಮತ್ತು ಐತಿಹಾಸಿಕ ಕೃತಿ ಎಂದರೆ Classical Dictionary of India (ಹಿಂದೂ ನಾಮಕೋಶ). ಇದರಲ್ಲಿ ಭಾರತೀಯ ಪುರಾಣಗಳು, ಗ್ರಂಥ, ಕಾವ್ಯ, ಸಾಹಿತ್ಯದ ಶಬ್ದಗಳು ವ್ಯಾಪಕವಾಗಿವೆ.
   
ಬಾಕ್ಸ್
ಬಾಸೆಲ್ ಮಿಷನ್ ಪತ್ರಾಗಾರ
ಮಂಗಳೂರಿನ ಬಲ್ಮಠದಲ್ಲಿರುವ ಬಾಸೆಲ್ ಮಿಷನ್ ಸಂಸ್ಥೆಗೆ ಶತಮಾನಗಳ ಇತಿಹಾಸವಿದೆ. ಇಲ್ಲಿರುವ ಹಳೆಯ ಪುಸ್ತಕ, ಕಡತಗಳ ಪತ್ರಾಗಾರ ಸಂಶೋ‘ಕರಿಗೆ ಚಿನ್ನದ ಗಣಿ ಇದ್ದಂತೆ. ಸುಮಾರು ಹತ್ತು ಸಾವಿರ ಮುದ್ರಿತ ದಾಖಲೆಗಳಲ್ಲದೆ, ಕನ್ನಡ, ಇಂಗ್ಲಿಷ್, ತುಳು, ಮಲೆಯಾಳಂ, ಕೊಂಕಣಿಯ ಹಳೆಯ ಹಸ್ತಪ್ರತಿಗಳು ಇಲ್ಲಿವೆ. ೧೮೫೦ರಿಂದ ಈಚಿನ ಹಳೆಯ ಆಡಳಿತ ದಾಖಲೆಗಳು, ಇತಿಹಾಸ, ಸಂಸ್ಕೃತಿ, ‘ರ್ಮದ ಪುಸ್ತಕಗಳಿವೆ. ಕನ್ನಡ-ಸಂಸ್ಕೃತಿ ಕಾರ್ಯಕ್ರಮಗಳಿಗೂ ಇದು ನಿರಂತರ ಆಶ್ರಯ ತಾಣವಾಗಿದೆ. ೧೮೪೧ರಲ್ಲಿ ಮುದ್ರಣಗೊಂಡ, ಕಿಟೆಲ್ ನಿಘಂಟಿಗಿಂತ ಮುಂಚಿನ ಕನ್ನಡ-ಇಂಗ್ಲೀಷ್ ನಿಘಂಟು, ಮೊದಲ ಕನ್ನಡ ವ್ಯಾಕರಣ ಪುಸ್ತಕ, ಮೊದಲ ಬೈಬಲ್ ಅನುವಾದ, ಮೊಟ್ಟಮೊದಲ ಕನ್ನಡ ದಿನಪತಿಕೆಯ ‘ಮಂಗಳೂರ ಸಮಾಚಾರ’ದ ಯಥಾಪ್ರತಿ ಸೇರಿದಂತೆ ಅಪೂರ್ವ ಕಡತಗಳನ್ನು ಇಲ್ಲಿಯೇ ಕುಳಿತು ನೋಡುವುದಕ್ಕೆ, ಸಂಶೋ‘ಕರಿಗೆ ಸಂಸ್ಥೆ ಅವಕಾಶ ಕಲ್ಪಿಸಿದೆ. ಇದೆಲ್ಲದರ ಪ್ರಾತಿನಿಕ ಸಂಸ್ಥೆ ಕರ್ನಾಟಕ ಥಿಯೊಲಾಜಿಕಲ್ ಕಾಲೇಜಿಗೆ ಈಗ ಹೆನಿಬಾಲ್ ಕೆಬ್ರಾಲ್ ಪ್ರಾಂಶುಪಾಲರಾಗಿದ್ದಾರೆ. ಆಸಕ್ತರು ಇಲ್ಲಿ ಕುಳಿತು ಅ‘ಯನ ಮಾಡಬಹದು. ಹೆಚ್ಚಿನ ಮಾಹಿತಿಗೆ ಕಾಲೇಜಿನ ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು: ೦೮೨೪-೨೪೨೨೮೨೯.

ಮಾಹಿತಿ ಕೃಪೆ: ಕರ್ನಾಟಕ ಥಿಯಾಲಾಜಿಕಲ್ ಕಾಲೇಜಿನ ಪತ್ರಾಗಾರ, ಬೆನೆಟ್ ಅಮ್ಮಣ್ಣ ಮತ್ತು ಪ್ರೊ|ಎ.ವಿ. ನಾವಡ.
Read More