ಯುವ ಸ್ಪೂರ್ತಿ ನಟ ಶಂಕರ ನಾಗ್

ಯುವ ಸ್ಪೂರ್ತಿ ನಟ ಶಂಕರ ನಾಗ್

ಸತ್ತಮೇಲೆ ಮಲಗೋದು ಇದ್ದೇ ಇದೆ...

ಕೆಲವು ದಶಕದಿಂದ ನಟ ಶಂಕರ ನಾಗ್ ಕನ್ನಡ ಯುವಕರ ಸಾಹಸ ಜೀವನ ಶೈಲಿಗೆ ಒಂದು ಪ್ರೇರಣೆಯಾಗಿದ್ದಾರೆ. ಮಧ್ಯ ಕರ್ನಾಟಕದ ವಿಚಾರದಲ್ಲಿ ಅವರ ಪ್ರಭಾವ ಢಾಳಾಗಿ ಕಾಣುತ್ತೇವೆ. ಇಲ್ಲಿನ ಮಣ್ಣಿಗಿರುವ ರಂಗಭೂಮಿಯ ಕಂಪು, ಸಿನಿಮಾ  ಕ್ರೇಜು ಎರಡೂ ಈ ನಟನಲ್ಲಿ  ಕಾಣಬಹುದು ಮಾತ್ರವಲ್ಲ. ದಾವಣಗೆರೆಯಲ್ಲೇ ತನ್ನ ಕೊನೆಯ ಉಸಿರನ್ನು ಎಳೆದ ಕಾರಣಕ್ಕೂ ಶಂಕರ್ ಇಲ್ಲಿನವರ ನೆಚ್ಚಿನ ನಾಯಕ ಅನ್ನಿಸಿದ್ದಾರೆ. ಸುಮಾರು ಮೂರು ದಶಕದ ಹಿಂದೆ ಸಮೀಪದ ಆನಗೋಡಿನಲ್ಲಿ ರಸ್ತೆ ಅಪಘಾತದಲ್ಲಿ  ಶಂಕರ್ ಕೊನೆಯುಸಿರು ಎಳೆದರು. ಆದರೆ ಇಂದಿಗೂ  ಅದೆಷ್ಟೋ ಸಾಮಾನ್ಯ ಹಿನ್ನೆಲೆಯ ಹುಡುಗರಿಗೆ, ಸವಾಲುಗಳ ಎದುರು ನಿಂತು ಫೈಟ್ ಮಾಡುವುದಕ್ಕೆ  ಶಂಕರ್ ಪ್ರೇರಣೆ.
ಸಾಮಾನ್ಯರ ಹೀರೋ
ಬಹುತೇಕ ಪಟ್ಟಣದಲ್ಲಿ  ರಿಕ್ಷಾ ನಿಲ್ದಾಣದಲ್ಲಿ ಶಂಕರ್ ನಾಗ್ ಇಂದಿಗೂ ಕಾಣುತ್ತಾರೆ. ದಾಡಿ ಸಹಿತದ ಇವರ ಮುಖದಲ್ಲಿ ಒಂದು ಸಿಗ್ನೇಚರ್ ನಗೆ. ನಗುವಲ್ಲ  ಅದೊಂದು ನಿರ್ಭೀತಿಯ ಭಾವದ ಅಲೆ. ಆ ಮುಖವೇ ಏನಾದರೂ ಸಾಧಿಸಬೇಕು ಎಂಬ ಹಲವು ವಾಕ್ಯಗಳನ್ನು ಹೇಳುತ್ತದೆ.  ಆಟೋದವರಿಗೆ ಇವರ ಬಗ್ಗೆ ಕ್ರೇಜ್ ಹುಟ್ಟಿಕೊಂಡಿದ್ದು, ಈ ನಟನ ‘ಅಟೋ ರಾಜ’ ಸಿನಿಮಾದ ನಂತರ. ಒಬ್ಬ ಸಾಮಾನ್ಯ ರಿಕ್ಷಾ ಚಾಲಕನಾಗಿ,  ಖಾಕಿ ಸಮವಸ್ತ್ರದಲ್ಲಿ ಜೀವನ ಆರಂಭಿಸಿ, ಬರುವ ಏನೆಲ್ಲ ಅಡೆತಡೆಗಳನ್ನು ಎದುರಿಸುವ ‘ಅಟೋ ರಾಜ’ ಕೊನೆಗೆ ಶ್ರೀಮಂತ ಹುಡುಗಿ(ಗಾಯತ್ರಿ)ಯನ್ನು ಪ್ರೀತಿಸಿ ಮದುವೆಯಾಗುವುದು ಒಂದು ರೋಚಕ ಕತೆ. ‘ನಗುವಾ ಗುಲಾಬಿ ಹೂವೆ’ ಹಾಡು ನೆನಪಿರಬಹುದಲ್ಲ. ಈ ಚಿತ್ರ ಬಿಡಗಡೆಯಾಗುತ್ತಲೇ ರಿಕ್ಷಾಗಳ ಕಣ್ಮಣಿಯಾದ ಶಂಕರ್ ಅಂದಿಗೂ ಇಂದಿಗೂ ಒಂದು ದೊಡ್ಡ ಐಕಾನ್. ಅವರ ಪ್ರೇರಣೆಯಿಂದ ಅಟೋಗಳನ್ನು ಸಂಘಟಿಸಿ ಅದೆಷ್ಟೋ ನಾಯಕರು ಹುಟ್ಟಿಕೊಂಡರು. ಹಾಗೇ ಇಲ್ಲಿ  ಶಂಕರ್ ನಾಗ್ ಹೆಸರಿನ ಅಟೋ ನಿಲ್ದಾಣಗಳಿವೆ. ರಾಜ್ಯದ ಎಲ್ಲೆಡೆಗಿಂತ ಅತಿಹೆಚ್ಚು ರಿಕ್ಷಾಗಳು ತಮ್ಮ ಬೆನ್ನಲ್ಲಿ ಶಂಕರ್ ನಾಗ್ ಅವರನ್ನು ಹೊತ್ತಿದ್ದು ಬಹಶಃ ದಾವಣಗೆರೆಯಲ್ಲಿ. ಅಷ್ಟೇ ಅಲ್ಲ, ಶಂಕರ್ ಅಭಿಮಾನಿಗಳಾಗಿ ಅದೆಷ್ಟೋ ಜನ ಸ್ಥಳೀಯ ರಾಜಕಾರಣದಲ್ಲಿ  ಮುಂದುವರಿದು ಪುರ ಪಾಲಿಕೆ, ಜಿಲ್ಲಾ  ಪಂಚಾಯಿತಿಯ ಸದಸ್ಯರಾದರು. ಒಂದಿಷ್ಟು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಸಣ್ಣ ಉದ್ಯಮ ಸ್ಥಾಪಿಸಿ ಹುಡುಗರಿಗೆ ಉದ್ಯೋಗ ನೀಡಿದ್ದಾರೆ.
ದೊಡ್ಡ ಕನಸು
ಶಂಕರ್ ನಾಗ  ಅದೆಷ್ಟೋ ಸಿನಿಮಾದಲ್ಲಿ  ಹೀರೋ ಆಗಿದ್ದರು. ತಾವೇ ನಿರ್ದೇಶಿಸಿ ಅಭಿನಯಿಸಿದರಲ್ಲದೆ, ಸಿನಿಮಾದಲ್ಲಿ  ರಾಷ್ಟ್ರ ಪ್ರಶಸ್ತಿಯನ್ನು ಪಡೆದರು. ಬೆಳ್ಳೆ ತೆರೆ, ಕಿರು ತೆರೆಯ ಹೊರತಾಗಿ, ನಿಜ ಜೀವನದಲ್ಲೂ ಅವರೊಬ್ಬ  ಕುತೂಹಲಕಾರಿ ಮನುಷ್ಯ. ಬದುಕಿದ್ದು  ಕೇವಲ 36 ವರ್ಷ ಆಗಿದ್ದರೂ, ಅಷ್ಟರಲ್ಲೇ ತಮ್ಮ ವ್ಯಕ್ತಿತ್ವದ ನೂರಾರು ಸಾಧ್ಯತೆಗಳನ್ನು ಅವರು ಸಂಶೋಸಿಕೊಂಡಿದ್ದರು. ಸಿನಿಮಾಕ್ಕೆ ಸೀಮಿತರಾಗದೆ, ರಂಗಭೂಮಿಯಲ್ಲಿ ತೊಡಗಿಕೊಂಡಿದ್ದರು. ಸಿನಿಮಾ ನಿರ್ಮಾಣ ಮಾತ್ರವಲ್ಲ , ವಿಭಿನ್ನ ಸಾಧ್ಯತೆಯ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದೆಲ್ಲದರ ಹಿಂದೆ ಅವರ ಆಲೋಚನಾ ವಿಧಾನವನ್ನು ನಾವು ಗುರುತಿಸಬೇಕು. ದಾವಣಗೆರೆ ಸೋಮೇಶ್ವರ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಸುರೇಶ್ ಆಗೀಗ ಹೇಳುವ  ಒಂದು ಮಾತು ಶಂಕರ್ ಅವರ ಆಲೋಚನಾ ವಿಧಾನವನ್ನು ಚೆನ್ನಾಗಿ ವಿವರಿಸುತ್ತದೆ.  ಶಂಕರ್ ನಾಗ್ ಸಾಹಸದ ಬಗ್ಗೆ ಒಲವು ಹೊಂದಿದ್ದ ಸುರೇಶ್,  ನಟ ಅಪಘಾತದಲ್ಲಿ ಸತ್ತ ನಂತರ ಅಂತಿಮ ದರ್ಶನವನ್ನು ಇಲ್ಲಿನ ಚಿಗಟೇರಿ ಆಸ್ಪತ್ರೆಯಲ್ಲಿ ಪಡೆದುದನ್ನು ಸ್ಮರಿಸುತ್ತಾರೆ. ಒಮ್ಮೆ ಬಿಳಿ ಹಾಳೆಯ ಮೇಲೆ ಚಿಕ್ಕದೊಂದು ರಿಕ್ಷಾ ಮತ್ತು ಸೈಕಲ್ ಬಿಡಿಸಿದ್ದ  ವಿದ್ಯಾರ್ಥಿಯನ್ನು ಕರೆದ ಶಂಕರ್ ಮಗುವಿಗೆ ಕಿವಿಮಾತು ಹೇಳುವುದನ್ನು ಸುರೇಶ್, ಸ್ಮರಿಸಿಕೊಳ್ಳುತ್ತಾರೆ. ‘‘ ಲೇ ಹುಡುಗಾ.. ಯಾಕೆ ಸೈಕಲ್, ರಿಕ್ಷಾದಲ್ಲೇ ಇದ್ದೀ, ಹೆಲಿಕ್ಯಾಪ್ಟರು, ವಿಮಾನದಂಥ ದೊಡ್ಡ ವಾಹನದ ಕನಸು ಕಾಣು. ಅವುಗಳ ಚಿತ್ರವನ್ನು ಬಿಡಿಸು’’ ಎಂದು ಹೇಳಿದ್ದರಂತೆ.
ದೇಶದ ಮೊದಲ ಪ್ರಧಾನ ಮಂತ್ರಿ ಜವಹರಲಾಲ ನೆಹರು, ಆಗಾಗ ಹೇಳುತ್ತಿದ್ದ ಮಾತು ಹೀಗೇ ಇದೆ ಕೇಳಿ.. ‘ಡ್ರೀಮಿಂಗ್ ಸ್ಮಾಲ್ ಈಸ್ ಅ ಕ್ರೈಮ್’ ಇದು ನೆಹರು ವಾಕ್ಯ. ಅಂದರೆ ದೊಡ್ಡ ದೊಡ್ಡ ಕನಸನ್ನು ಕಂಡು, ನಾವು ನಮ್ಮನ್ನು ಮುಂದಕ್ಕೆ ನೂಕಿಕೊಳ್ಳಬೇಕು ಎಂಬ ಅರ್ಥ. ಶಂಕರ್ ನಾಗ್ ಸಿನಿಮಾ ಡೈಲಾಗ್‌ನಲ್ಲಿ, ತಮ್ಮ ದೈನಂದಿನ ಹರಕತ್‌ಗಳಲ್ಲಿ ಹಾಗೆಯೇ ಬದುಕಿದವರು.
ಜೀವನದ ಪ್ರಯೋಗದಲ್ಲಿ ತನ್ನ ಅಣ್ಣ  ಅನಂತ್ ನಾಗ್‌ಗಿಂತ ಒಂದಿಷ್ಟು ಮುಂದೆ ಇರುತ್ತಿದ್ದ ಶಂಕರ, ತಮ್ಮ 30ನೇ ವಯಸ್ಸಿನಲ್ಲಿ ವರನಟ ಡಾ. ರಾಜ್ ಅವರನ್ನು ಹಾಕಿಕೊಂಡು ಒಂದು ಮುತ್ತಿನ ಕತೆ ಚಿತ್ರವನ್ನು ಮಾಡಿದರು. ಅವರ ಧೈರ್ಯವನ್ನು ಅಂದಾಜು ಮಾಡಿ. ಹಾಗೆಂದು ಶಂಕರ್ ಹುಂಬ ದೈರ್ಯದವರಾಗಿರಲಿಲ್ಲ. ಓದು, ಸಂಗೀತ, ರಂಗಭೂಮಿ, ಉದ್ಯಮಗಳಲ್ಲೂ ಸಾಕಷ್ಟು ವಿಷಯವನ್ನೂ ತಿಳಿದುಕೊಂಡಿದ್ದರು. ವೇಳೆಯನ್ನು ಎಂದೂ ವ್ಯರ್ಥ ಮಾಡುತ್ತಿರಲಿಲ್ಲ. ಹೊನ್ನಾವರದಲ್ಲಿ ಹುಟ್ಟಿ  ಪಿಯು, ಪದವಿ ಶಿಕ್ಷಣಕ್ಕೆ ಮುಂಬಯಿಗೆ ಹೋಗಿ ಅಲ್ಲಿ ಮರಾಠಿ ರಂಗಭೂಮಿ ಮೂಲಕ ತಮ್ಮ ಸಾಂಸ್ಕೃತಿಕ ಬದುಕಿಗೆ ಅಡಿಪಾಯ ಮಾಡಿಕೊಂರು. ಉತ್ತಮ ಓದುಗನಾಗಿದ್ದ  ಶಂಕರ್ ಓರ್ವ ಸ್ಕ್ರೀನ್ ಪ್ಲೇ ಬರಹಗಾರ. ದೂರದರ್ಶನದಲ್ಲಿ  ಬಿತ್ತರಗೊಂಡ ಮಾಲ್ಗುಡಿ ಡೇಸ್ ಟೆಲಿ ಸೀರಿಯಲ್ ಮೂಲಕ ಅವರು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದರು. ಇದರ ಹಿಂದೆ, ಧೈರ್ಯ, ಪರಿಶ್ರಮ, ಓದು ಎಲ್ಲವೂ ಕಾರಣವಿದೆ. ಅದಕ್ಕಾಗಿ ಜಾಣರು, ಸಾಧಕರು ಕೂಡ ಅವರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುತ್ತಿದ್ದರು.
ವಿಶೇಷ ಎಂದರೆ ಚಿತ್ರ ರಂಗದ ಸದಸ್ಯರು ಎಲ್ಲಿಗಾದರೂ ಟೂರ್ ಹೊರಟರೆ, ಆ ಬಸ್‌ನ್ನು ಶಂಕರ್ ಚಾಲನೆ ಮಾಡುತ್ತಿದ್ದರಂತೆ. ಅವರೊಬ್ಬ ಉತ್ತಮ ಚಾಲಕರಾಗಿದ್ದರು, ಕೇವಲ ವಾಹನ ಮಾತ್ರವಲ್ಲ, ಸಮುದಾಯದ ಚಾಲನ ಶಕ್ತಿಯೇ ಅವರಲ್ಲಿ ಇತ್ತು. ಓರ್ವ ಉತ್ತಮ ಚಾಲಕನ ಮಹತ್ವವನ್ನು ನಮ್ಮ ಪರಂಪರೆ ಕೃಷ್ಣ ಪರಮಾತ್ಮನಲ್ಲಿ  ಗುರುತಿಸಿದೆ ಎಂಬುದನ್ನು ಸುಮ್ಮನೇ ನೆನಪಿಸುತ್ತೇನೆ. ಮೂರು ಲೋಕವನ್ನು ಗೆದ್ದವನೆಂಬ ಖ್ಯಾತಿಯ ಅರ್ಜುನನಿಗೆ ಶ್ರೀ ಕೃಷ್ಣ  ಪರಮಾತ್ಮ ಸಾರಥಿಯಾಗಿದ್ದ ಎಂಬುದು ಮಹಾಭಾರತ ಓದಿದವರಿಗೆಲ್ಲ ಗೊತ್ತಿದೆ. ಓರ್ವ ನಾಯಕನಾಗುವುದಕ್ಕೆ  ಉತ್ತಮ ಚಾಲಕನಾಗುವ ಕಲೆಯು ಗೊತ್ತಿರಬೇಕು.
ಪ್ರೇರಣೆ ನೀಡುವ ವಾಕ್ಯ
ದಾವಣಗೆರೆಯ ರಿಕ್ಷಾ ಒಂದರ ಬೆನ್ನಲ್ಲಿ ಬರೆದ  ಶಂಕರ್ ನಾಗ್ ಸಿನಿಮಾ ಡೈಲಾಗ್ ಒಂದನ್ನು ಉಲ್ಲೇಖಿಸಿ, ಈ ಬರಹವನ್ನು ಮುಗಿಸುತ್ತೇನೆ. ’’ ಸತ್ತಮೇಲೆ ಮಲಗೋದು ಇದ್ದೇ ಇದೆ. ಎದ್ದಿದ್ದಾಗ ಏನಾದರೂ ಸಾಧಿಸು’’ ಎಂಬ ಮಾತಿನ ಉದ್ದೇಶವನ್ನು ಅರ್ಥಮಾಡಿಕೊಳ್ಳಿ. ಯುವ ಜನರಲ್ಲಿ ಸಹಜವಾದ ನಿದ್ದೆಯ ಸೆಳೆತಕ್ಕೆ ಸಣ್ಣದಾದ ಚುಚ್ಚುಮದ್ದು ಈ ವಾಕ್ಯದಲ್ಲಿದೆ. ಏಳಿರಿ.. ಎಚ್ಚರಗೊಳ್ಳಿರಿ.. ಗುರಿ ಮುಟ್ಟುವ ತನಕ ವಿಶ್ರಮಿಸಬೇಡಿ ಎಂದು ೀರ ಸನ್ಯಾಸಿ ವಿವೇಕಾನಂದ ಹೇಳಿದ ಮಾತು, ಮೇಲಿನ ಡೈಲಾಗ್‌ನಲ್ಲೂ  ಪ್ರತಿಧ್ವನಿಸುತ್ತದೆ. ಸಾಮಾನ್ಯ ವ್ಯಕ್ತಿಯೊಬ್ಬ ಬದುಕುವ ಜೀವ ಮಾನಕ್ಕಿಂತ ಅರ್ದದಷ್ಟೂ ಬದುಕಿರದಿದ್ದರೂ, ಶಂಕರ್ ನಾಗ್ ಬದುಕಿದಷ್ಟು ಕಾಲ ಮಾತ್ರ ತೀವ್ರವಾಗಿ ಬದುಕಿದರು. ದೊಡ್ಡ ದೊಡ್ಡ ಕನಸನ್ನು ಹೊತ್ತು ಅದನ್ನು ನನಸಾಗಿಸಲು ಶ್ರಮಿಸಿದರು. ಹೀಗೆ ಬದುಕುವವರು ಏನನ್ನಾದರೂ ಸಾಧಿಸಿಯೇ ಇರುತ್ತಾರೆ.
Read More