ಇವ ನಮ್ಮವ ಇವ ನಮ್ಮವ ಎನ್ನುವ ಹಗ್ಗ ಜಗ್ಗಾಟ

ಇವ ನಮ್ಮವ ಇವ ನಮ್ಮವ ಎನ್ನುವ ಹಗ್ಗ ಜಗ್ಗಾಟ
ಇತಿಹಾಸ ಮತ್ತು ವರ್ತಮಾನದ ಕಲಬೆರಕೆಯಲ್ಲಿ ರಾಜಕೀಯ ಪಕ್ಷಗಳು ನಿರ್ಮಿಸುತ್ತಿರುವ ಹೊಸ ಐಕಾನ್‌ಗಳು
-ಸದಾನಂದ ಹೆಗಡೆ
ರಾಜಕೀಯ ಪಕ್ಷಗಳು ಬಿತ್ತುವ ಕಲ್ಯಾಣ ರಾಜ್ಯದ ಕಲ್ಪನೆಗಳು ’47ರ ಸ್ವಾತಂತ್ರದಿಂದ ದೂರ ಸರಿಯುತ್ತಿರುವುದು ನಮ್ಮೆದುರು  ಢಾಳಾಗಿ ಕಾಣುತ್ತಿದೆ. ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ  ನಮಗೆ ಸ್ವಾತಂತ್ರ್ಯ, ಜನತಂತ್ರ ತಂದುಕೊಟ್ಟ ಯಾವ ಮಾದರಿಯೂ ಕಾಣುತ್ತಿಲ್ಲ. ಅಷ್ಟೇ ಅಲ್ಲ, 70ರ ದಶಕದಲ್ಲಿ  ನಡೆದ  ಎರಡನೆ ಹಂತದ ಚಳುವಳಿಯ ನಾಯಕತ್ವ ಕೂಡ ನಮಗೆ ಆದರ್ಶವಾಗಿಲ್ಲ. 70ರ ದಶಕದ ರಾಜಕೀಯ ಪಲ್ಲಟದಲ್ಲಿ  ನಾಯಕತ್ವ ವಹಿಸಿದ್ದವರು, ಅಂದರೆ ಹಿಂದುಳಿದ ನೇತಾರರಾದ ದೇವರಾಜ ಅರಸು ಅಥವಾ ಜೆಪಿ ಅವರ ಸಂಪೂರ್ಣ ಕ್ರಾಂತಿಯ ಪರಿಕಲ್ಪನೆಯ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಹೊರತಾಗಿ ಐತಿಹಾಸಿಕ ಹಾಗೂ ಪುರಾಣ ಪುರುಷರು ಇಂದಿನ ಚುನಾವಣೆಯಲ್ಲಿ  ಹೊಸ ಐಕಾನ್ ಆಗಿ ಕಾಣುತ್ತಿದ್ದಾರೆ. ಓಟಿನ ಲೆಕ್ಕಾಚಾರದಲ್ಲಿ  ಈಗಷ್ಟೆ ಮುಗಿದ ರಾಜಕೀಯ ಪಕ್ಷಗಳ ಟಿಕಟ್ ಬಟವಾಡೆಯು ಜಾತಿ, ಧರ್ಮದ ನೆಲೆಯಲ್ಲಿ  ಕಲ್ಯಾಣ ರಾಜ್ಯದ ಹೊಸ ಆದರ್ಶವನ್ನು  ಜನರ ಮುಂದೆ ಇಡುತ್ತಿವೆ. ನಮ್ಮೆದುರು ರಾಜಕೀಯ ಪಕ್ಷಗಳು ಇಡುವ ಹೊಸ ರಾಜಕೀಯ ಆದರ್ಶಗಳಲ್ಲಿ  ಕನ್ನಡ ಆಸ್ಮಿತೆಯನ್ನು ಮೆಚ್ಚಿಕೊಳ್ಳಬಹುದಾದರೂ ಅದರೊಂದಿಗೆ ಜೋಡಿಸುವ ಪಾಳೆಯಗಾರರನ್ನಲ್ಲ.
ವರುಣಾದಲ್ಲಿ  ವಾತಾವರಣ ಸರಿಯಾಗಿಲ್ಲ  ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಉತ್ತರ ಕರ್ನಾಟಕದ ಬಾದಾಮಿಯಲ್ಲೂ ನಾಮಪತ್ರ ಸಲ್ಲಿಸಿದ್ದನ್ನೇ ತೆಗೆದುಕೊಂಡರೂ ಮೇಲಿನ ವಿಚಾರ ಸ್ಪಷ್ಟವಾಗಿ ಕಾಣುತ್ತದೆ. ಮುಖ್ಯಮಂತ್ರಿಗಳು ಎರಡನೆ ಕ್ಷೇತ್ರವಾಗಿ ಬಾದಾಮಿಯನ್ನು ಆಯ್ದುಕೊಳ್ಳುವ ಹಿಂದೆ , ಕ್ಷೇತ್ರದ ಜಾತಿ ಸಮೀಕರಣ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕನ್ನಡದ ಸರ್ವಕಾಲಿಕ ಆಸ್ಮಿತೆಯಾದ ಇಮ್ಮಡಿ ಪುಲಿಕೇಶಿಯ ಕತೆಯನ್ನು  ಸಿದ್ಧರಾಮಯ್ಯ ಮರು ಆಯ್ಕೆಗೆ ಲಿಂಕ್ ಮಾಡಲಾಗುತ್ತಿದೆ. ಐದನೇ ಶತಮಾನದಲ್ಲಿ  ಕರ್ನಾಟಕ ಸೇರಿದಂತೆ ದಕ್ಷಿಣ ಭಾರತವನ್ನು ಆಳಿದ ರಾಜರಲ್ಲಿ  ಇಮ್ಮಡಿ ಪುಲಿಕೇಶಿ ಕನ್ನಡದ ಹೆಮ್ಮೆಯ ಪ್ರತೀಕ. ಬಾದಾಮಿ, ಬನವಾಸಿ, ಹಂಪಿ, ಹಳೆಬೀಡುಗಳೆಂಬ ನಾಡಿನ ಶಿಲ್ಪ ಸಂಸ್ಕೃತಿಯ ಸಾಲಿನಲ್ಲಿ  ಮೊದಲ ಹೆಸರು ಕೂಡ.
ಇಮ್ಮಡಿ ಪುಲಿಕೇಶಿ ಉತ್ತರದ ದೊರೆ ಹರ್ಷವರ್ಧನನೊಂದಿಗೆ ಸೆಣಸಿ, ಅವನ ದಂಡಯಾತ್ರೆಯನ್ನು  ತಡೆಯುತ್ತಾನೆ. ಅಂದಿನ ಹರ್ಷವರ್ಧನನ ರೂಪದಲ್ಲಿರುವ ಬಿಜೆಪಿ ನರೇಂದ್ರ ಮೋದಿಯವರ ರಾಜ್ಯ ವಿಸ್ತಾರ, ಕಾಂಗ್ರೆಸ್ ಮುಕ್ತ ಭಾರತದ ಅಭಿಯಾನವನ್ನು ಸಿದ್ಧರಾಮಯ್ಯ ಮುಂಬರುವ ಚುನಾವಣೆಯಲ್ಲಿ  ತಡೆದು ನಿಲ್ಲಿಸುತ್ತಾರೆ ಎಂದು  ಕಾಂಗ್ರೆಸ್ಸಿಗರು ಪೂರಕವಾಗಿ ಇತಿಹಾಸದ ಕತೆಯನ್ನು  ಮರು ಸೃಷ್ಟಿ ಸಿದ್ದಾರೆ. ಇಮ್ಮಡಿ ಪುಲಿಕೇಶಿ ಹಾಗೂ ಹರ್ಷವರ್ಧನರ ಜತೆ ಯುದ್ಧವಾಗಿ ನರ್ಮದಾ ನದಿಯೇ ನಮ್ಮ ರಾಜ್ಯಗಳ ಸೀಮಾರೇಖೆ ಎಂದು ಒಪ್ಪಂದ ಮಾಡಿಕೊಳ್ಳುವುದನ್ನು ನಾವೆಲ್ಲ ಇತಿಹಾಸ ಪಠ್ಯದಲ್ಲಿ ಓದಿದ್ದೇವೆ. ವಿಶೇಷ ಎಂದರೆ ಹರ್ಷವರ್ಧನನ ಕುರಿತೂ ಕೂಡ ಕನ್ನಡಿಗರಿಗೆ ಒಳ್ಳೆಯ ಅಭಿಪ್ರಾಯವೇ ಇದೆ.
ಇದು ಒಂದು ಕಾಂಗ್ರೆಸ್‌ನವರ ಕತೆಯಾದರೆ ಸಂಸದ ಶ್ರೀ ರಾಮುಲು ಅವರನ್ನು ಮೊಳಕಾಲ್ಮುರು ಹಾಗೂ ಬಾದಾಮಿ ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕೆ ಇಳಿಸಿರುವ ಹಿಂದೆ ಕೂಡ ಇಂಥದ್ದೇ ಕತೆ ಹಬ್ಬಿದೆ. ರಾಜ್ಯದಲ್ಲಿ  70ಕ್ಕೂ ಹೆಚ್ಚು  ಕ್ಷೇತ್ರಗಳಲ್ಲಿ ವಿಸ್ತರಿಸಿರುವ ವಾಲ್ಮಿಕಿ, ಬೇಡ ಅಥವಾ ನಾಯಕ ಸಮುದಾಯದ ಓಟ್ ಗುರಿಯಾಗಿಟ್ಟು ಶ್ರೀರಾಮುಲು ಅವರನ್ನು ಮುನ್ನೆಲೆಗೆ ತರಲಾಗಿದೆ. ಬಿಜೆಪಿಯಲ್ಲಿ  ಯಡಿಯೂರಪ್ಪ ಅವರ ನಂತರದ ನಾಯಕ ಎಂದು ಪ್ರಸಕ್ತ ಚುನಾವಣೆಯಲ್ಲಿ  ಶ್ರೀ ರಾಮುಲು ಅವರನ್ನು ಬಿಂಬಿಭಿಸಲಾಗಿದೆ. ಪುರಾಣ ಪುರುಷ ಶ್ರೀ ರಾಮಚಂದ್ರನನ್ನು  ತನ್ನ  ಖಾಯಂ ಆಸ್ಮಿತೆಯಾಗಿ ಗುರುತಿಸಿಕೊಂಡ ಭಾರತೀಯ ಜನತಾಪಕ್ಷ, ಕರ್ನಾಟಕದಲ್ಲಿ  ರಾಮುಲು ಅವರಲ್ಲಿ  ಇಂಥದ್ದೊಂದು ಸಾಧ್ಯತೆ ಗುರುತಿಸಿದೆ. ರಾಮಾಯಣ ಬರೆದ ವಾಲ್ಮೀಕಿಯ ಮನಸ್ಸಿನಲ್ಲಿ  ಸಹಜವಾಗಿ ರಾಮ ಇದ್ದಾನೆ. ಕರ್ನಾಟಕದ ಜಾತಿ ಸಮೀಕರಣಕ್ಕೆ ಅನುಗುಣವಾಗಿಯೂ ರಾಮನ ಆದರ್ಶ  ತಮ್ಮ ಆಯ್ಕೆಯಲ್ಲಿದೆ  ಎಂದು ಜಾಲತಾಣದಲ್ಲಿ  ಬಿಜೆಪಿ ಬೆಂಬಲಿಗರು ಪ್ರಚಾರ ಮಾಡಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ  ಸೇರುವ ಕನ್ನಡದ ದೊರೆ ಮದಕರಿ ನಾಯಕ ಹಾಗೂ ಆತನನ್ನು  ಸೋಲಿಸುವ ಟಿಪ್ಪು  ಸುಲ್ತಾನರ ನಡುವೆ ಯಾರನ್ನು  ಗೌರವಿಸಬೇಕು ಎಂಬ ವಿಚಾರದಲ್ಲೂ ರಾಜಕೀಯ ಪಕ್ಷಗಳ ಜಗಳವು ತಿಳಿದೇ ಇದೆ.  ಟಿಪ್ಪು ಸುಲ್ತಾನ್ ಕನ್ನಡ ವಿರೋಧಿ  ಎಂದು ಹೇಳುವವರು, ಸ್ವಾತಂತ್ರ ಹೋರಾಟಗಾರ ಎಂದು ಬಣ್ಣಿಸುವುದು ಮುಗಿಯದ ಚರ್ಚೆಯಾಗಿದ್ದು, ಬಿಜೆಪಿ ಅಧ್ಯಕ್ಷರು ಇತ್ತೀಚೆಗೆ ಚಿತ್ರದುರ್ಗಕ್ಕೆ ಬಂದಾಗ ಮತ್ತದೆ ವಿಚಾರವನ್ನು  ನೆನಪಿಸಿ ಹೋಗಿದ್ದಾರೆ.
ಇದೆಲ್ಲಕ್ಕಿಂತ ಮಹತ್ವದ ಚರ್ಚೆ ಎಂದರೆ ಚುನಾವಣೆ ಆರು ತಿಂಗಳ ಹಿಂದೆ ಭುಗಿಲೆದ್ದ  ಲಿಂಗಾಯ ಪ್ರತ್ಯೇಕ ಧರ್ಮದ ವಿಚಾರ. 12ನೇ ಶತಮಾನದಲ್ಲಿ  ಆಗಿಹೋದ ಧರ್ಮ ಸುಧಾರಕ, ಅನುಭಾವಿ ಇತ್ತೀಚಿನ ದಿನಗಳಲ್ಲಿ  ಒಮ್ಮೆಲೆ ರಾಜಕೀಯ ಪಕ್ಷಗಳು ಆಸ್ಮಿತೆಯಾಗಿ ಗಮನ ಸೆಳೆಯುತ್ತಿದ್ದಾರೆ. ಹಾಗೆನ್ನುವುದಕ್ಕಿಂತ ಬಸವಣ್ಣನವರನ್ನು ರಾಜಕೀಯ ಪಕ್ಷಗಳು ‘ಇವ ನಮ್ಮವ.. ಇವ ನಮ್ಮವ ..’ ಎಂದು ಎಳೆದಾಟದಲ್ಲಿ ತೊಡಗಿದ್ದಾರೆ. ಜತೆಗೆ  ರಾಜ್ಯದ ಎಲ್ಲ  ಸರಕಾರಿ ಕಚೇರಿಗಳಲ್ಲಿ  ಸಿದ್ಧರಾಮಯ್ಯ ಸರಕಾರ  ಬಸವೇಶ್ವರ ಭಾವಚಿತ್ರವನ್ನು  ಅಂಬೇಡ್ಕರ್, ಗಾಂ ಹಾಗೂ ನೆಹರೂ ಪಕ್ಕದಲ್ಲಿ  ಇರಿಸಿತು. ಜನತಂತ್ರ ಪ್ರತಿಪಾದಿಸಿದ ನಾಯಕರೊಂದಿಗೆ ಐತಿಹಾಸಿಕ ವ್ಯಕ್ತಿತ್ವಗಳನ್ನು ಜೋಡಿಸುವ ರಾಜಕೀಯ ಸ್ಥಿತ್ಯಂತರದ ಅಪರೂಪದ ನಿದರ್ಶನ ಇದು. ಇಲ್ಲಿ  ಯಾವ ರಾಜಕಾರಣಿಯೂ ಅನುಭಾವಿ ಅಥವಾ ಸಮಾಜ ಸುಧಾರಕ ಬಸವಣ್ಣರ ಆದರ್ಶ ಪಾಲಿಸುತ್ತಿಲ್ಲ. ಹೊರತಾಗಿ ಲಿಂಗಾಯತ ಅಥವಾ ಬಸವಣ್ಣನವರ ಹೆಸರಿನ ಹಿಂದೆ ಇರುವ ಬಹುದೊಡ್ಡ  ಓಟ್ ಬ್ಯಾಂಕ್ ಕೇಂದ್ರಿತ ನಡೆಗಳು ಅಷ್ಟೆ. ಕಾಂಗ್ರೆಸ್ ಈ ಚರ್ಚೆ ಆರಂಭಿಸಲು ವಿಶೇಷವಾಗಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ  ಅವರಿಂದ ಮತ ಕಸಿದುಕೊಳ್ಳುವ ಪ್ರಯತ್ನ  ಇದೆ ಎಂಬುದು ವಾಸ್ತವ ಸಂಗತಿ. ಲಿಂಗಾಯತ ಪ್ರತ್ಯೇಕತೆ ವಿಚಾರವು ಹಾಲಿ ಚುನಾವಣೆಯ ತೆರೆಮರೆಯಲ್ಲಿ  ಹೇಗೆ ಕೆಲಸ ಮಾಡಬಹದು ಎಂಬ ಕುತೂಹಲ ಇದ್ದೇ ಇದೆ.
ಹಿಂದಿನ ಚುನಾವಣೆಯು ‘ಅಹಿಂದ’ ಒಗ್ಗಟ್ಟಿನ ಫಲಶ್ರುತಿಯಾಗಿ ಮೇಲ್ನೋಟಕ್ಕೆ ಕಂಡರೂ ಆಳದಲ್ಲಿ  ಜಾತಿ ಕೇಂದ್ರಿತವಾಗಿ ದೊರೆಗಳನ್ನು ಗುರುತಿಸುವ ಪ್ರಯತ್ನ ಕಂಡಿತು. ಆ ಚುನಾವಣೆಯಲ್ಲಿ  ರಾಮುಲು ಗಿಂತ ಅವರ  ಹಿಂದಿರುವ ರೆಡ್ಡಿ ಗಳನ್ನು ಗುರಿಯಾಗಿಟ್ಟು ಸಿದ್ಧರಾಮಯ್ಯ ಚುನಾವಣೆ  ಎದುರಿಸಿದ್ದರು. ಆರು ವರ್ಷ ಹಿಂದೆ ಗಣಿಗಾರಿಕೆ ವಿರುದ್ಧ ನಡೆದ ಪಾದಯಾತ್ರೆ ಸಂದರ್ಭ 13ನೇ ಶತಮಾನದಲ್ಲಿ  ಹಕ್ಕ-ಬುಕ್ಕರು ಸ್ಥಾಪಿಸಿದ ವಿಜಯ ನಗರ ಸಾಮ್ರಾಜ್ಯವೂ ಪ್ರಸ್ತಾಪಕ್ಕೆ ಬಂದಿತ್ತು. ಹಕ್ಕ ಬುಕ್ಕರು ನಮ್ಮವರು ಹಾಗೇ ಸಿದ್ದರಾಮಯ್ಯ ಕೂಡ ಎಂದು ಗುರುತಿಸಲಾಯಿತು. ಇದೀಗ ಅದೇ ಕತೆ ಹಾಗೂ ಕಥಾ ನಾಯಕರು  ಕಾಂಗ್ರೆಸ್‌ಗೆ ಸಾಲುತ್ತಿಲ್ಲ. 
ಇನ್ನೊಂದೆಡೆ ದಕ್ಷಿಣ ಕರ್ನಾಟಕದಲ್ಲಿ  ಒಕ್ಕಲಿಗರ ಮತವನ್ನು ಹೆಚ್ಚಾಗಿ ಗಮನದಲ್ಲಿಟ್ಟ  ಬೆಂಗಳೂರನ್ನು ಕಟ್ಟಿದ ಕೆಂಪೆಗೌಡನನ್ನು ಐಕಾನ್ ಆಗಿ ಪರಿಗಣಿಸುವುದು ತಿಳಿದೇ ಇದೆ. ಹಾಗೆ ನೋಡಿದರೆ ಜೆಡಿಎಸ್ ಪಕ್ಷವು ಇತಿಹಾಸ ಹಾಗೂ ಪುರಾಣಕ್ಕಿಂತ ಮಣ್ಣಿನ ಆಸ್ಮಿತೆಯನ್ನು ಹೆಚ್ಚಾಗಿ ಇಟ್ಟುಕೊಂಡಿದ್ದು, ಅಲ್ಲಿಯೂ ಜನತಂತ್ರದ ಗಟ್ಟಿ ಮಾದರಿಗಳು ಅಷ್ಟಾಗಿ ಕಾಣುವುದಿಲ್ಲ.
ಮತ್ತೆ ಆರಂಭಿಕ ವಿಚಾರಕ್ಕೆ ಬರುವುದಾದರೆ ನಮಗೆ ಜನತಂತ್ರದ ಮಾದರಿಯನ್ನು ಮೇಲಿನ ಯಾವುದೇ ರಾಜರು ಪರಿಪೂರ್ಣವಾಗಿ ಕೊಟ್ಟಿಲ್ಲ.  ಮೇಲಿನ ಬಹುತೇಕ ಮಾದರಿಗಳು ನಮ್ಮ ಹೆಮ್ಮೆ  ಎಂಬುದು ನಿಜ. ಆಯಾ ಕಾಲದ ರಾಜ್ಯಾಡಳಿತದ ಕಲ್ಪನೆಯಲ್ಲಿ ಅವರು ಉತ್ತಮ ಆಡಳಿತ ನಡೆಸಿದ್ದಾರೆ ವಿನಃ, ಈಗಿರುವ ಜನತಂತ್ರದ ಮಾದರಿಗಳು ಅದಾವುದೂ ಆಗಿರಲಿಲ್ಲ.   ಈಗಿನಂತೆ ಲಿಖಿತ ಸಂವಿಧಾನ ಹಾಗೂ ಚುನಾವಣೆ ವ್ಯವಸ್ಥೆಗಳು ಆಗ ಇರಲೂ ಇಲ್ಲ.  ಹಾಗಾಗಿ ಜಾತಿ ಕೇಂದ್ರಿತ, ಧರ್ಮ ಕೇಂದ್ರಿತ ಐಕಾನ್‌ಗಳ ನಡುವೆ ’47ರ ಸ್ವಾತಂತ್ರದ ಆಶಯದ ವಾಸ್ತವ ನೆಲೆಗಟ್ಟಿನಲ್ಲಿಯೂ ಒಂದಿಷ್ಟು  ಚರ್ಚೆ, ಕತೆಗಳು ಹುಟ್ಟಿಕೊಳ್ಳಬೇಕಾದ ಅಗತ್ಯ ಇದೆ. ಅದೆಲ್ಲಕ್ಕಿಂತ ಹೆಚ್ಚಾಗಿ ರಾಜಕೀಯ ಪಕ್ಷಗಳು ಹರಿಬಿಡುತ್ತಿರುವ ಐತಿಹಾಸಿಕ ಹಾಗೂ ಪೌರಾಣಿಕ ಆದರರ್ಶಗಳ ಸುಳ್ಳುಗಳ ನಿಜವನ್ನು  ಜನ ಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕಾಗಿದೆ. 
****
Article published in Vijaykarnataka Editorial page-3-6-2018

Read More