ಸರಕಾರಿ ಉದ್ಯೋಗದ ಮರೀಚಿಕೆ AND ಅರಸು ಕೊಟ್ಟ‘ನಿರುದ್ಯೋಗಿ ಭತ್ಯೆ ’

ಸರಕಾರಿ ಉದ್ಯೋಗದ ಮರೀಚಿಕೆ AND ಅರಸು ಕೊಟ್ಟ‘ನಿರುದ್ಯೋಗಿ ಭತ್ಯೆ ’
ಮಂಜುನಾಥ್

ದೇವರಾಜ್ ಅರಸು
ಸರಕಾರಿ ನೌಕರಿ ಎಂಬುದು ನಮ್ಮ  ಗ್ರಾಮೀಣ ಯುವಕರಲ್ಲಿ  ಬೇರೂರಿರುವ ಭದ್ರತೆಗೆ ನಿರಂತರವಾದ ಒಂದು ಮರೀಚಿಕೆ. ಆದರೂ ಸರಕಾರಿ ನೌಕರಿಯ ಭ್ರಮೆ ನಮ್ಮನ್ನು ಬಿಟ್ಟಿಲ್ಲ. ಉದ್ಯೋಗ ಸೃಷ್ಟಿಯ ಬಗ್ಗೆ  ರಾಜಕಾರಣಿಗಳು ನಿರಂತರ ಆಶ್ವಾಸನೆ ನೀಡುತ್ತಿದ್ದರೂ, ವಾಸ್ತವ ಹಾಗಿಲ್ಲ  ಎಂಬುದಕ್ಕೆ  ಇತ್ತೀಚೆಗೆ ಉತ್ತರ ಪ್ರದೇಶದ ನಿದರ್ಶನವೊಂದು ಗಮನ ಸೆಳೆಯಿತು. ಉತ್ತರ ಪ್ರದೇಶದಲ್ಲಿ  368 ಅಟೆಂಡರ್  ಹುದ್ದೆಗೆ 23 ಲಕ್ಷ ಅರ್ಜಿ ಬಂದಿತ್ತೆಂಬುದು ದೇಶದ ನೌಕರಿ ಮಾರುಕಟ್ಟೆಯ ವಾಸ್ತವವನ್ನು ಅನಾವರಣ ಮಾಡಿದೆ.  ಇಂಥದ್ದೇ ಸಮಸ್ಯೆ ಎದುರಿಸಲು 1977ರಲ್ಲಿ  ದೇವರಾಜ್ ಅರಸು ಪದವಿಧರರನ್ನು  ಸ್ಟೈಫಂಡರಿಗಳೆಂದು ಪರಿಗಣಿಸಿ ಸರಕಾರಿ ಸೇವೆಗೆ ಸೇರಿಸಿದರು. ರಾಜ್ಯದಲ್ಲಿ  ಹತ್ತಾರು ಸಾವಿರ ಸಂಖ್ಯೆಯಲ್ಲಿದ್ದ  ಸ್ಟೈಫಂಡರಿಗಳು ಕ್ರಮೇಣ ಸರಕಾರಿ ಉದ್ಯೋಗ ಎಂಬ ಭ್ರಮೆಯಲ್ಲಿ  ಬೆಂದ ಬವಣೆಯೊಂದರ ನಿದರ್ಶನ ಇಲ್ಲಿದೆ.

***
-ಸದಾನಂದ ಹೆಗಡೆ ಹರಗಿ
 ಪ್ರಸಕ್ತ ಸಾಲಿನಲ್ಲಿ  ಬರಗಾಲ ನಮ್ಮೆದುರಿಗೆ ಇದೆ. ಆ 1977ರಲ್ಲಿ  ರಾಜ್ಯವನ್ನು ಭೀಕರ ಬರಗಾಲ ಕಾಡಿತ್ತು.  ಅದೇ ಸಂದರ್ಭ ರಾಜ್ಯದ ಸುಮಾರು ಹದಿನೈದು ಸಾವಿರ ನಿರುದ್ಯೋಗಿ ಪದವಿಧರರನ್ನು ಅರಸು ಸರಕಾರ ಸ್ಟೈಫಂಡರಿಗಳನ್ನಾಗಿ ನೇಮಕ ಮಾಡಿತು.    ಆಗಷ್ಟೇ ಪದವಿ ಮುಗಿಸಿ, ನೌಕರಿ ಎಂಬ ಬರಗಾಲ ಎದುರಿಸುತ್ತಿದ್ದ  ಹೂವಿನ ಹಡಗಲಿ ಮಾನ್ಯರಮುಸಲವಾಡದ ಮಂಜುನಾಥ್ ಎಂಬರ ಕಥೆ ಇದು. ಇದೀಗ ಖಜಾನಾಧಿಕಾರಿ ಕಚೇರಿಯಲ್ಲಿ  ಪ್ರಥಮ ದರ್ಜೆ ಸಹಾಯಕರಾಗಿರುವ ಮಂಜುನಾಥ್ ಅರಸು ನಂತರದ ರಾಜ್ಯಾಡತದಲ್ಲಿ  ನೌಕರರ ಸ್ಥಿತಿಗತಿಗೆ ಒಂದು ಸ್ಯಾಂಪಲ್ ಆಗಿ ಕಾಣುತ್ತಾರೆ. ಇನ್ನೇನು ಆರು ತಿಂಗಳಲ್ಲಿ  ನಿವೃತ್ತರಾಗಲಿರುವ ಮಂಜುನಾಥ್‌ಗೂ ಶತಮಾನದ ಸಂಭ್ರಮದ ಅರಸು ಹಾಗೂ ‘ಅಭಿನವ ಅರಸು ಸಿಎಂ  ಸಿದ್ಧರಾಮಯ್ಯ’ ಅವರಿಗೂ ಒಂದು ಸಾಮ್ಯವಿದೆ. ಮೂವರೂ ಪದವಿಯಲ್ಲಿ ವಿಜ್ಞಾನ ವಿಷಯ ಆಯ್ದುಕೊಂಡು ಸಿಬಿಝಡ್ ಕಾಂಬಿನೇಶನ್. ಸಿಬಿಝಡ್ ಓದಿದ ಹೆಚ್ಚಿನವರ ವಿಶೇಷ ಎಂದರೆ ತಮ್ಮ ಡೊಮೇನ್ ಬಿಟ್ಟು ಬೇರೆಲ್ಲೋ ಕೆಲಸ ಗಿಟ್ಟಿಸಬೇಕಾಗಿದ್ದು ಇವರ ಅನಿವಾರ್ಯ. ಆ ಪರಿಸ್ಥಿತಿ  ಅಂದಿಗೂ ಇಂದಿಗೂ ಬದಲಾಗಿಲ್ಲ.
ಅಂದು ತಾನು ಇದ್ದ ಹಳ್ಳಿಗೆ ತನಗೊಂದು ಗ್ರಾಜುವೇಟ್ ಸ್ಟೈಫಂಡರಿ ಎಂಬ ನೇಮಕಾತಿ ಪತ್ರ ಬಂದ ದಿನದ ಸಂಭ್ರಮವನ್ನು ಮಂಜುನಾಥ್ ಸ್ಮರಿಸುತ್ತಾರೆ.  ಹಾಲು ಮಾರಿ ಐದೈದು ಪೈಸೆಯನ್ನು ಉಳಿಸಿ ಮಗನನ್ನು ಓದಿಸಿದ್ದ  ತನ್ನ ತಾಯಿ ಅಂದು ಪಟ್ಟ  ಖುಷಿಯನ್ನು ಸ್ಮರಿಸಿ ಭಾವುಕರಾಗುತ್ತಾರೆ. ಸಂಬಳ ಕೇವಲ 150 ರೂ. ಎಂದು ಇದ್ದರೂ, ವಿಷಯ ಕೇಳಿ ಬರಗಾಲದ ಕಷ್ಟದಲ್ಲೂ ಕೆಂಪಕ್ಕಿಯ ಅನ್ನವನ್ನು ಮನೆಯವರೆಲ್ಲ ಖುಷಿಯಿಂದ ಉಂಡು ವಿಜಯೋತ್ಸವ ಆಚರಸಿದರಂತೆ.
ಮಾರನೆ ದಿನದಿಂದಲೇ ಸಮೀಪದ ತಹಸೀಲ್ದಾರ್  ಕಚೇರಿಯಲ್ಲಿ  ಬೆಳಗ್ಗೆ  10ರಿಂದ ಸಂಜೆ 6ರರ ತನಕ ಇವರ ಸರಕಾರಿ ನೌಕರಿ ಕಾಯಕ ಆರಂಭವಾಗುತ್ತದೆ. ಅತ್ಯಂತ ಹುರುಪಿನಿಂದಲೇ ಕಚೇರಯಲ್ಲಿ  ಓರ್ವ ಕೇಸ್ ವರ್ಕರ್  ಆಗಿ ಕೈ ಬೆರಳು ದಡ್ಡು ಗಟ್ಟುವ ತನಕ ಬರೆದು,ಬರೆದು ಸರಕಾರಿ ನೌಕರಿ ಸಕ್ಕಿದ್ದಕ್ಕೆ ಕೃತಜ್ಞತೆ ಸಲ್ಲಿಸತೊಡಗಿದೆರು. ತಿಂಗಳಾಂತ್ಯದಲ್ಲಿ  ಸಂಬಳ ಪಡೆಯುವುದಕ್ಕಾಗಿ ಜಿಲ್ಲಾ ಕೇಂದ್ರೆಕ್ಕೆ  ಹೋಗಿ ಬರುವುದಕ್ಕಾಗಿ 50 ರೂ. ಖರ್ಚಾಗಿ 100 ರೂ. ಉಳಿದಿತ್ತು. ನಂತರ ಪ್ರತಿ ತಿಂಗಳೂ ಇದೇ ಥರ. ಆ ನಡುವೆ ಇವರನ್ನು ಹೈಸ್ಕೂಲ್ ಶಿಕ್ಷಕರಾಗಿ ವರ್ಗಾಯಿಸಲಾದರೂ ಸಂಬಳ ವ್ಯತ್ಯಾಸ ಆಗಲಿಲ್ಲ. ಹಂಗಾಮಿ ನೌಕರರೆಂದು ಕರೆಯಲ್ಪಟ್ಟ  ಇವರಿಗೆ ವರ್ಷಾಂತ್ಯಕ್ಕೆ ಕೇವಲ 50 ರೂ.  ಏರಿಕೆಯಾಗುತ್ತಿದ್ದ ಕಾರಣ ಒಂದೆರಡು ವರ್ಷದಲ್ಲಿಯೇ  ಜೀವನ ನರಕವಾಗಿದ್ದರೂ, ತಮ್ಮನ್ನೂ ಕೂಡ ಒಂದು ದಿನ ಸರಕಾರ ಖಾಯಂ ಮಾಡುತ್ತದೆ ಎಂಬ ಒಂದೇ ಒಂದು ನಿರೀಕ್ಷೆ  ಇವರೆಲ್ಲ ರ ಜೀವನೋತ್ಸಾಹದ ಸೆಲೆ ಆಗಿತ್ತು.
ರಾಜ್ಯದಲ್ಲಿ  ನಿರುದ್ಯೋಗಿ ಯುವಕರನ್ನು  ಗಮನದಲ್ಲಿಟ್ಟುಕೊಂಡು ಅವರಿಗೇನಾದರೂ ಮಾಡಬೇಕು ಎಂದು ಯೋಜನೆ ಜಾರಿ ರೂಪಿಸಿದ  ಅರಸು ಬಗ್ಗೆ  ಮಂಜುನಾಥ್‌ಗೆ ಕೃತಜ್ಞತೆ ಈಗಲೂ ಇದೆ.   ಜಾಬ್ ಸೇರಿ 38 ವರ್ಷ ಪೂರೈಸಿ ಇನ್ನೇನು ನಿವೃತ್ತಿ ಹಂತಕ್ಕೆ ಬಂದಿರುವ ಇವರಿಗೆ ಸಂಬಳ ಈಗಿನ್ನೂ 18 ಸಾವಿರ ಗಡಿ ದಾಟದ ತನ್ನ ಬಗ್ಗೆ  ತೀವ್ರ ಕೊರಗೂ ಇದೆ. ಇಂದಿನ ಐಟಿ ಉದ್ಯೋಗಿಗಳ ಯುಗದಲ್ಲಿ , ಆರಂಭದಲ್ಲೇ ವರ್ಷಕ್ಕೆ  ಹತ್ತಾರು ಲಕ್ಷ ರೂ. ಪ್ಯಾಕೇಜ್ ಪಡೆದುಕೊಳ್ಳುವ ಯುವಕರ ಎದುರು ತನ್ನಿಡೀ ಜೀವನದ ಗಳಿಕೆಯೇ ನಗಣ್ಯ ಎಂದು ಮಂಜುನಾಥ್‌ಗೆ ತೋರುತ್ತಿದೆ. 58 ವರ್ಷ ಪ್ರಾಯದ ಮಂಜುನಾಥ್ ಇಂದಿಗೂ ದಾವಣಗೆರೆಯಲ್ಲಿ  ಬಾಡಿಗೆ ಮನೆಯಲ್ಲೇ ಇದ್ದಾರೆ. ಒಂದು ಸೆಕೆಂಡ್ ಹ್ಯಾಂಡ್ ಸೈಕಲ್ ತುಳಿದು ಕಚೇರಿ ದಾರಿ ಕ್ರಮಿಸುತ್ತಾರೆ. ಆರ್‌ಡಿ ಕಟ್ಟಿ  ಇತ್ತೀಚೆಗಷ್ಟೆ ಮನೆಗೆ ಒಂದು ಸಣ್ಣ ಟೀವಿಯನ್ನು ಮನೆಗೆ  ತಂದುಕೊಟ್ಟಿದ್ದಾರೆ. ಇದೆಲ್ಲ ನೋಡಿದಾಗ ‘ ಬುದ್ಧಿವಂತನಾದ ಯಾವನೂ ಸರಕಾರಿ ನೌರಿಗೆ ಆಸೆಪಡಬಾರದು. ಇಂಥ ಸರಕಾರಿ ಕೆಲಸಕ್ಕೆ ಸೇರಿ ಜೀವನ ಬರ್ಬಾದ್ ಮಾಡಿಕೊಳ್ಳಬಾರದು. ಇದು ಕೇವಲ ವೇಸ್ಟ್’ ಎಂದು ತನ್ನ ಅನುಭವ ಹೇಳುತ್ತಾರೆ. 
ಅಬ್ದುಲ್ ಕಲಾಂ ಯುವಕರಿಗೆ ಹೇಳುತ್ತಿದ್ದಂತೆ’ ನೌಕರಿಯ ಹಿಂದೆ ಬೀಳಬೇಡಿ, ಹೊರತಾಗಿ ನೀವೆ ಉದ್ಯೋಗದಾತರಾಗಿ’ ಎಂಬುದು ಇವರ ನಿಲುವು. ಆದರೆ ಇದರ ಅರಿವು ಬರುವಷ್ಟರಲ್ಲಿ ಜೀವನವೇ ಕಳೆದುಹೋಗಿತ್ತು. ಒಂದು ಕಾಲದಲ್ಲಿ  ಅತ್ಯಂತ ಕ್ರೇಜಿ ಸಂಗತಿಯಾಗಿದ್ದ  ‘ನಿರುದ್ಯೋಗ ಭತ್ಯೆ’ ಎಂಬುದು ಕೆಲವರ ಬದುಕನ್ನು  ಎಷ್ಟೊಂದು ಕಠೋರವಾಗಿ ಶಿಕ್ಷಿಸಿತು ಎಂಬುದಕ್ಕೆ ಇವರ ಮಾತಲ್ಲೇ ಕೇಳಬೇಕು. ‘ಸ್ಟೈಫಂಡರಿಗಳೆಂದರೆ 80ರ ದಶಕದಲ್ಲಿ  ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಏನೋ ಕುಲಗೌರವದ ಹೆಸರಲ್ಲಿ ಹೆಣ್ಣು  ಸಿಕ್ಕಿ  ಮದುವೆ ಆದರೂ, ಸಂಬಳ ಸಾಲದೆ ಮನೆಯಲ್ಲಿ ನಿರಂತರ ಕಷ್ಟವಾಗಿತ್ತು. ಮನೆ ನಡೆಸಲು ಮಹಿಳೆಯರ ಪರದಾಟ. ಕೆಲವು ಪದವಿಧರರು ಹಗಲಿಡಿ ಸರಕಾರಿ ಸೇವೆ ಸಲ್ಲಿಸಿ ಸಂಬಳ ಸಾಲದ್ದಕ್ಕಾಗಿ ಸಂಜೆ ನಂತರ 2 ರೂಪಾಯಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅಂತೂ ಒಂದು ಸಂಘ ಸ್ಥಾಪಸಿ ಖಾಯಂ ಸರಕಾರಿ ನೌಕರಿಗೆ ಹೋರಾಟ ಆರಂಭಿಸಿದೆವು. ನಂತರ ಬಂದ ಮಂತ್ರಿ ಮಾಗಧರಿಗೆ, ಇಲಾಖಾ ಕಾರ್ಯದರ್ಶಿಗಳಿಗೆ ಮನವಿ ಕೊಟ್ಟಿದ್ದೇ ಕೊಟ್ಟಿದ್ದು. 89 ಕೇಜಿ ತೂಕ ಇದ್ದ ಮುಖ್ಯಮಂತ್ರಿ ಒಬ್ಬರಿಗೆ ನಮ್ಮ ಸಂಘದ ವತಿಯಿಂದ ತುಲಾಭಾರವನ್ನು ಮಾಡಿಸಿಯೂ ಹೆಚ್ಚಿನ ಪ್ರಯೋಜ ಆಗಲಿಲ್ಲ. ಈ ನಡುವೆ ಭವಿಷ್ಯಕ್ಕಾಗಿನ ಸಾಮೂಹಿಕ ಹೋರಾಟಕ್ಕಾಗಿ ನಮ್ಮ ಕನಿಷ್ಠ ಗಳಿಕೆಯಲ್ಲಿಯಾ ಕ್ರೋಢೀಕರಣ ಆಗಬೇಕು. ಕೆಲವೊಮ್ಮೆ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಹಾಗಾಗುತ್ತಿತ್ತು. ಮಂತ್ರಿಗಳು ಒಪ್ಪಿದರೂ ಇಲಾಖಾ ಮಟ್ಟದಲ್ಲಿ  ನಮ್ಮ ಖಾಯಮಾತಿ ಆದೇಶ ಬರಲೇಇಲ್ಲ.  81ರ ನಂತರ ನಿರುದ್ಯೋಗಿ ಭತ್ಯೆ ಯೋಜನೆಯನ್ನು ಸರಕಾರ ರದ್ದು ಮಾಡಿದರೂ, ಆಗಲೇ ಹತ್ತೈವತ್ತು ಸಾವಿರ ಪದವೀಧರರು ಈ ಕೂಪಕ್ಕೆ ಬಿದ್ದರು.’ ಎಂದು ಮಂಜುನಾಥ್ ವಿವರಿಸುತ್ತಾರೆ.
ಈ ನೌಕರಿ ಖಾಯಂ  ಭ್ರಮೆಯಲ್ಲೇ ಕೆಲವರು ಮದುವೆ,ಹಬ್ಬ  ಇಲ್ಲದೆ ದಣಿದು ಸತ್ತು ಹೋದರು. ಗಂಡನ ಜತೆಗೆ ಬದುಕಲಾಗದೆ ಹೆಂಡತಿ ಆತ್ಮಹತ್ಯೆ ಮಾಡಿಕೊಂಡ ನಿದರ್ಶನವೂ ಇದೆ. ಅದೇ ಅವಧಿಯಲ್ಲಿ  ಜಾರಿಯಾದ ಅರಸು ಅವರ ಭೂ ಸುಧಾರಣೆ ಕಾನೂನೂ ಇಲ್ಲಿ ಪ್ರಸ್ತಾಪ ಆಗುತ್ತದೆ. ಕೆಲವು ನಿರುದ್ಯೋಗಿ ಭತ್ಯೆ ಫಲಾನುಭವಿಗಳು ಭೂ ಸುಧಾರಣೆ ಕಾರಣ ತಮ್ಮ ಕುಟುಂಬದ ಭೂಮಿಯನ್ನು ಕಳೆದುಕೊಂಡಿದ್ದರೆ, ಇನ್ನೂ ಕೆವರಿಗೆ ಭೂಮಿ ಇದ್ದರೂ ಕಾಲೇಜಿಗೆ ಹೋದ ನಂತರ ಕೃಷಿ ಮಾಡಲು ಬೆನ್ನು ಬಗ್ಗಲಿಲ್ಲ.  ಕತ್ತೆ ಗೆಯ್ದಂತೆ ಗುಮಾಸ್ತರಾಗಿ, ಮಾಸ್ತರರಾಗಿ, ಕಂದಾಯ ಇಲಾಖೆ ಖಜಾನೆಯಲ್ಲಿ  ದುಡಿಯುತ್ತ ನಮ್ಮೆಲ್ಲರ ಮನಸ್ಸೇ ಮರಗೆಟ್ಟು ಹೋಗಿತ್ತು. ಕಚೇರಿಯಲ್ಲಿ  ಸಿಕ್ಕಾಪಟ್ಟೆ ಕೆಲಸ ಹೇರುತ್ತಿದ್ದರಿಂದ ಯುಪಿಎಸ್‌ಸಿ ಥರ ಪರೀಕ್ಷಾ ತಯಾರಿಯೂ ಸರಿ ಆಗುತ್ತಿರಲಿಲ್ಲ. ಹೇಳುವುದಕ್ಕೆ  ಸರಕಾರಿ ನೌಕರಿ, ಸಂಬಳ ಕೇಳಿದರೆ ಎಲ್ಲಿಲ್ಲದ ಮುಜುಗರ. ಇದೇ ಪರಿಸ್ಥಿತಿಯಲ್ಲಿ  ಸಾವಿರಾರು ಪದವಿಧರರು ಯುಪಿಎಸ್‌ಸಿ ಪರೀಕ್ಷೆಗೆ ವಯೋಮಿತಿಯನ್ನೇ ಕಳೆದುಕೊಂಡಿದ್ದರು. ಇವರಿಗೆಲ್ಲ  ನಿರುದ್ಯೋಗ ಭತ್ಯೆ ಎಂಬುದು ಯಾವಬಗೆಯಲ್ಲಿ ಜೀವನದ ಸಂಕೋಲೆ ಆಗಿಹೋಯಿತು.
ಈ ನಡುವೆ ಸಂಘದ ವತಿಯಿಂದ ಕಷ್ಟಪಟ್ಟು ವಂತಿಗೆ ಸಂಗ್ರಹಿಸಿ ಸುಪ್ರಿಂ ಕೋರ್ಟ್‌ಗೆ ಹೋದ ಕಾರಣ 1994ರಲ್ಲಿ   ರಾಜ್ಯ ಸರಕಾರಕ್ಕೆ ಒಂದು ನಿರ್ದೇಶನ ಬಂತು. 15 ದಿನದೊಳಗೆ ಸ್ಟೈಫಂಡರಿಳನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳುವಂತೆ ಕೋರ್ಟ್ ಆದೇಶ ಸರಕಾರವನ್ನು ಮಣಿಸಿತು. ಅಂತೂ ದೀರ್ಘ ಕಾಲೀನ ಹೋರಾಟಕ್ಕೆ ಒಂದು ಅಲ್ಪ ವಿರಾಮ ಸಿಕ್ಕರೂ, ಅಷ್ಟೊಂದು ವರ್ಷದ ಸೇವಾವಧಿ ದಕ್ಕದ ಕಾರಣ, ಅತ್ಯಂತ ಕಿರಿಯ ಸಹಾಯಕರ ಸಂಬಳ 1700 ರೂ.ಗೆ ಅಂತೂ ಸರಕಾರಿ ನೌಕರಿ ಆಯಿತು.  ಹಾಗೆ ಆದೇಶ ಬರುವ ಹೊತ್ತಿಗೆ ಕೆಲವೊಬ್ಬರು 55 ವರ್ಷ ಕಳೆದು ಹಿರಿಯ ನಾಗರಿಕರ ಹುದ್ದೆ ಪಡೆದಿದ್ದರು.  ಅವರೆಲ್ಲ ತನಗಿಂತ ಅತ್ಯಂತ ಕಡಿಮೆ ವಯಸ್ಸಿನ ಹುಡುಗರ ಜತೆಗೆ,(ಆಗ ಯುಪಿಎಸ್‌ಸಿ ಪಾಸಾಗಿ ಬಂದವರಿಗಿದ್ದ ಆರಂಭಿಕ ಸಂಬಳ 3500 ರೂ.  ) ಕಡಿಮೆ ಸಂಬಳಕ್ಕೆ ಕಚೇರಿಯಲ್ಲಿ  ಏಗಬೇಕಾಯಿತು.
ಇಷ್ಟು ಹೇಳಿ ಮತ್ತೆ ತನ್ನ ಕತೆಗೆ ಮರಳಿದ ಮಂಜುನಾಥ್  ’’ ಕಡು ಬರಗಾಲದ ಅಂದಿನ ದಿನದಲ್ಲಿ  ಬಿಎಸ್‌ಸಿ ಮಿಗಿಸಿ ಬಿಎಡ್‌ಗೆ ಕನಿಷ್ಠ  500 ರೂ. ಡೊನೇಶನ್ ಕೊಡಲಾರದೆ ನಿರುದ್ಯೋಗ ಭತ್ಯೆಗೆ ಸೇರಿಕೊಂಡ ನಾನು ನನ್ನ ತಾಯಿ, ಪತ್ನಿಯ ಸಜ್ಜನಿಕೆ, ಸಹನೆ, ಪುಣ್ಯದಿಂದ  ಜೀವನದಲ್ಲಿ  ಇಷ್ಟರ ಮಟ್ಟಿಗೆ ಮಾನವಂತನಾಗಿ ಬದುಕಿದೆ. ಇದರಲ್ಲಿ  ನನ್ನ ಪತ್ನಿಯ ಸಹನೆ, ಸಹಕಾರದ ದೊಡ್ಡ ಪಾತ್ರವಿದೆ.  38 ವರ್ಷದ ನಾನು ಕೋಲಾರದಲ್ಲಿ  ಸರಕಾರಿ ನೌಕರಿಯ ಎರಡನೆ ಇನ್ನಿಂಗ್ಸ್ ಆರಂಭಿಸಿದಾಗ, ನನ್ನ ಹೆಂಡತಿ ಮಕ್ಕಳನ್ನೂ ಅಲ್ಲಿಗೆ ಕರೆಸಿಕೊಂಡೆ. 1700 ರೂನಲ್ಲಿ  ಇಡೀ ಕುಟುಂಬ ನಡೆಸುವುದೆಂದರೆ ಆಗಿನ ಕಾಲದಲ್ಲೂ  ಅತ್ಯಂತ ಸವಾಲಿನ ಸಂಗತಿಯೇ ಆಗಿತ್ತು. ಸಂಬಳ ಬಂದ ಮೊದಲ ದಿನವೇ ಇಂಥದ್ದಕ್ಕೆ ಇಂತಿಷ್ಟು ಎಂದು ವಿಂಗಡಿಸಿ, ಪ್ರತ್ಯೇಕ ಪಾಕೀಟ್‌ನಲ್ಲಿ  ಹಾಕಿ ಇಡುತ್ತಿದ್ದೆವು.  ತಿಂಗಳಿಗೆ 300 ರೂ ಅಕ್ಕಿ, ಬೇಳೆ, ಉಪ್ಪು, ಮೆಣಸಿಗೆ. ಮನೆ ಬಾಡಿಗೆ 200, ವಿದ್ಯುತ್ ಮತ್ತಿತರ ಬಿಲ್ಲು, ಮಕ್ಕಳ ಕಾನ್ವೆಂಟ್ ಫೀಸ್. ಇಷ್ಟಾಗುತ್ತಲೇ ಎಲ್ಲ ಖಾಲಿ ಆಗುತ್ತಿತ್ತು. ಮತ್ತೆ ತಿಂಗಳಿಡೀ ದುಡ್ಡಿಲ್ಲದೆ ತಳ್ಳಬೇಕು.  ಎಲ್ಲ ಕಡೆಯೂ ಹಾಗೇ.. ಪ್ರತಿಯೊಬ್ಬರಿಗೂ ಅವರ ಜೀವನ, ಅವರ ಸುಖ ಮಾತ್ರ. ನಮ್ಮ ಅಸಹಾಯಕತೆ ತಿಳಿದರೂ ಹತ್ತು ರೂ. ಕೊಡುವವರು ಯಾರೂ ಇರಲಿಲ್ಲ.  ಹೀಗೆ ಸರಕಾರಿ ನೌಕರಿಯಲ್ಲಿದ್ದೂ ಅರೆ ಹೊಟ್ಟೆ ಜೀವನ ನಡೆಸಿದ ಅಂದಿನ ಕಾಲ, ತಿಂಗಳಿಗೊಮ್ಮೆಯೂ ಹೆಂಡತಿ ಮಕ್ಕಳ ತಲೆಗೆ ಎಣ್ಣೆ ಕೊಡಿಸಲಾಗದ ಅಸಹಾಯಕತೆ. ಅಂದಿನಿಂದ ಇಂದಿನ ವರೆಗೂ ನಾವು ಹೊಟೇಲ್ ಮುಖ ನೋಡಲಿಲ್ಲ.’ ಎಂದು ತಮ್ಮ  ವ್ರತ ರೂಪಿ ಜೀವನವನ್ನು ಮಂಜುನಾಥ್ ನೆನೆಸಿಕೊಳ್ಳುತ್ತಾರೆ. ಒಂದು ವಿಶೇಷ ಎಂದರೆ ಕನಿಷ್ಟ ಆದಾಯದಲ್ಲೂ  ಇವರು ತಮ್ಮ ಮಕ್ಕಳನ್ನು ಓದಿಸಿದ್ದು. ಇವರ ಇಬ್ಬರು ಮಕ್ಕಳು ತಮ್ಮ  ಸ್ವಸಾಮರ್ಥ್ಯದಿಂದ ಇಂಜೀನೀಯರಿಂಗ್ ಓದಿದ್ದಾರೆ. ಆದರೆ ಮಂಜುನಾಥ್ ರೀತಿ ಆರ್ಥಿಕ ಮುಗ್ಗಟ್ಟು  ಎದುರಿಸುವ ವ್ರತಾಚರಣೆ ಕಲಿತುಕೊಳ್ಳದ ಹೆಚ್ಚಿನ ಸ್ಟೈಫಂಡರಿಗಳು ಏಗಲಾಗದೆ  ಏನೇನೊ ಆಗಿ ಹೋಗಿದ್ದಾರೆ.
‘ನಮ್ಮ ಕಷ್ಟವನ್ನು ಸರಿಯಾಗಿ ಗ್ರಹಿಸಿ ಉತ್ತಮವಾಗಿ ಓದಿದ ನಮ್ಮ ಮಕ್ಕಳೇ ನಮಗೆ ಇಂದಿನ ಆಸ್ತಿ. ಅಷ್ಟೇ ಅಲ್ಲ, ನಾನು ಸ್ಟೈಪಂಡರಿ ಆಗಿದ್ದಾಗ ಹೈಸ್ಕೂಲ್ ಪ್ರಾಧ್ಯಾಪಕನಾಗಿ ಒಂದಿಷ್ಟು ವರ್ಷ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಕಲಿಸಿ,  ಮೋಟಿವೇಶನ್ ಮಾಡಿ  ಒಂದಿಷ್ಟು ಜನ ವೈದ್ಯರು, ವಕೀಲರು ಆಗಿ ತಮ್ಮನ್ನು ನೆನೆಸುತ್ತಿರುವುದು ಇದೀಗ ಉಳಿದ ಜೀವನ ಖುಷಿ’ ಎನ್ನುತ್ತಾರೆ.
ಇದೆಲ್ಲದರ ನಡುವೆ ನೌಕರಿಯಲ್ಲಿ ಒಂದು ಉತ್ತಮ ಸ್ಥತಿಗತಿಗಾಗಿ ಸ್ಟೈಫಂಡರಿಗಳ ಹೋರಾಟ ಈಗಲೂ ಚಾಲೂ ಇದೆ. ಇನ್ನೇನು ನಿವೃತ್ತರಾಗುವ ತಾನು ಮತ್ತು ತನ್ನಂತೆ ಹಲವರು 7000 ರೂ. ತಿಂಗಳ ಕನಿಷ್ಟ  ಪಿಂಚಣಿಯನ್ನು ಪಡೆದು  ಅದರಲ್ಲಿ  5 ಸಾವಿರ ರೂ.ವನ್ನು  ಮನೆಯ ಬಾಡಿಗೆಗೆ ನೀಡಿದರೆ ನಾವು ಊಟಕ್ಕೇನು ಮಾಡುವುದು ಎಂಬ ಭಯ ಇದೆ.  ಮಕ್ಕಳೆಲ್ಲ ಅವರ ಶಿಕ್ಷಣಕ್ಕೆ ಮಾಡಿದ ಸಾಲದಲ್ಲಿ, ಅವರ ಜೀವನದಲ್ಲಿ ಮುಂದುವರಿಯಬೇಕಾಗುತ್ತದೆ. ಸ್ಟೈಫಂಡರಿಗಳ ಸೇವಾ ಅವಧಿಯನ್ನು ಸರಕಾರಿ ಸೇವಾ ಅವಧಿ ಎಂದು ಪರಿಗಣಿಸಲೇ ಬೇಕು. ಪಿಂಚಣಿ ರೂಪದಲ್ಲಿ  ಕನಿಷ್ಠ ಹತ್ತು ಸಾವಿರ ಸಿಗದಿದ್ದರೆ, ‘ಖಂಡಿತ ಸರಕಾರಕ್ಕೆ ಸ್ಟೈಫಂಡರಿಗಳ ಶಾಪ ತಟ್ಟುತ್ತದೆ’ ಎನ್ನುತ್ತಾರೆ ಮಂಜುನಾಥ್. ತನ್ನ ಕಾಲಾ ನಂತರ  ಅದರಲ್ಲಿಯೂ ಅರ್ಧವನ್ನು  ಪಿಂಚಣಿಯಾಗಿ ಪಡೆಯುವ ತನ್ನ ಪತ್ನಿಯ ಪರಿಸ್ಥಿತಿ ಬಗ್ಗೆ  ಹೇಳಿ ಮರುಗುತ್ತಾರೆ. ಅಲ್ಲದೆ ಮುಂದೆ ಯಾರೂ ಸರಕಾರಿ ನೌಕರಿ ಎಂಬ ಭ್ರಮೆ ಇಟ್ಟುಕೊಳ್ಳಬಾರದು ಎಂದು ಹೇಳುತ್ತಾರೆ.

*****
Read More