ಚುಂಬಕ ಚಳವಳಿ -ಕಿಸ್ ಆಫ್ ಲವ್ * ನೈತಿಕ ಪೊಲೀಸರಿಗೆ ವಿನೂತನ ಪ್ರತಿರೋಧ

ಚುಂಬಕ ಚಳವಳಿ -ಕಿಸ್ ಆಫ್ ಲವ್ * ನೈತಿಕ ಪೊಲೀಸರಿಗೆ ವಿನೂತನ ಪ್ರತಿರೋಧ


ಪ್ರೀತಿಸಬೇಡಿ ಎಂದು ಹತ್ತಾರು ವರ್ಷಗಳಿಂದ ಮಚ್ಚನ್ನು ಝಳಪಿಸುತ್ತಿರುವ ನೈತಿಕ ಪೊಲೀಸ್ ವಿರುದ್ಧ ಧೈರ್ಯ ತಾಳಿರುವ ಪ್ರೇಮಿಗಳು ಇದೀಗ ವಿನೂತನ ರೀತಿಯಲ್ಲಿ ಪ್ರತಿಭಟಿಸಿ ಗಮನ ಸೆಳೆಯುತ್ತಿದ್ದಾರೆ. ಅದಕ್ಕೆ ಅವರು ಕೊಟ್ಟುಕೊಂಡ ಹೆಸರೇ ’’ಕಿಸ್ ಆಫ್ ಲವ್’’. ವಿರೋಧದ ಉದ್ದೇಶಕ್ಕಿಂತ ಅನುಸರಿಸಿರುವ ವಿಧಾನದಿಂದಲೇ ಗಮನ ಸೆಳೆಯುತ್ತಿರುವುದು ಇದರ ಒಂದು ವಿಶೇಷ.


-ಸದಾನಂದ ಹೆಗಡೆ ಹರಗಿ

ಪ್ರತಿಭಟಿಸು ಎಂಬುದಕ್ಕೆ 1975ರಲ್ಲಿ ಕಸಾಪ ಹೊರತಂದ ಕನ್ನಡ ನಿಘಂಟಿನಲ್ಲಿ ’’ಎದುರಿಸಿ ನಿಲ್ಲು’ ಎಂಬ ಅರ್ಥವಿದೆ. ಏನಾದರೂ ಮಾಡಬೇಡ ಎಂದು ವಿನಾಕಾರಣ ಕಟ್ಟಳೆ ಹೇರಿದಾಗ ಅದನ್ನೇ ಮಾಡುತ್ತ, ಹೇಳಿದವರನ್ನೇ ಎದುರಿಸಿ ನಿಲ್ಲುವುದು ಪ್ರತಿಭಟನೆ ಎನಿಸಿಕೊಂಳ್ಳುತ್ತದೆ ಎಂಬುದು ಆ ಬಗ್ಗೆ ಇನ್ನಷ್ಟು ವಿವರ. ಪ್ರೀತಿಸಬೇಡಿ ಎಂದು ಹತ್ತಾರು ವರ್ಷಗಳಿಂದ ಮಚ್ಚನ್ನು ಝಳಪಿಸುತ್ತಿರುವ ನೈತಿಕ ಪೊಲೀಸರನ್ನು’’ಎದುರಿಸಿ ನಿಲ್ಲುವುದು’ ಇಂಥದ್ದೇ ಮನಸ್ಥಿತಿ. ಅದಕ್ಕೆ ಅವರು ಕೊಟ್ಟುಕೊಂಡ ಹೆಸರೇ ’’ಕಿಸ್ ಆಫ್ ಲವ್’’.
ವಿರೋಧ ಅಥವಾ ಎದುರಿಸಿ ನಿಂತಿರುವ ಹೈಕಳ ಉದ್ದೇಶಕ್ಕಿಂತ ಅವರು ಅನುಸರಿಸಿರುವ ವಿಧಾನದಿಂದಲೇ ಗಮನ ಸೆಳೆಯುತ್ತಿರುವುದು ಕಿಸ್ ಚಳವಳಿಯ ಒಂದು ವಿಶೇಷ. ಧರ್ಮ, ಜಾತಿಯ ಹೆಸರಿನಲ್ಲಿ ಕೊನೆಗೆ ಪ್ರತಿಷ್ಠೆಯ ನೆಪದಲ್ಲಿಯೂ ಪ್ರೇಮವನ್ನು ವಿರೋಧಿಸುವುದು ಇಂದು ನಿನ್ನೆಯದಲ್ಲ. ಸರಳ ಮಾತಿನಲ್ಲಿ ವಿರೋಧಿಸಿದರೆ ದೊಡ್ಡದೇನೂ ಆಗುವುದಿಲ್ಲ. ಅಂಥ ಸಂದರ್ಭದಲ್ಲಿ ಪ್ರೇಮವೇ ಗೆಲ್ಲುವುದು ಜಗತ್ತಿನ ನಿಯಮ. ಆದರೆ ಪ್ರೇಮಿಗಳು ಕಂಡಲ್ಲಿ, ಒಟ್ಟಿಗೆ ಹೋಗುತ್ತಿರುವ ಅಣ್ಣ ತಂಗಿಯರನ್ನೂ, ಕಚೇರಿಯ ಸಹೋದ್ಯೋಗಿಗಳನ್ನು ಬಿಡದೆ ಗುದ್ದಿ ಕೆಡಹುವ ಗೂಂಡಾಗಿರಿಯಂಥ ಹೀನಾಯ ಕತ್ಯ ಇನ್ನೊಂದಿಲ್ಲ ಎಂಬುದು ಅಸಲೀ ವಿಚಾರ.
ಚಳವಳಿ ಆರಂಭಿಸಿದ ಕೇರಳದ ಹುಡುಗರಿಗೆ, ತಾವು ಹೇಳಬೇಕಾದುದನ್ನು ಇಂಪ್ರೆಸ್ ಮಾಡಿ ಹೇಳಿದರೆ ಬಹುಕಾಲ ಮನಸ್ಸಿನಲ್ಲಿ ಉಳಿದು ಆಲೋಚನೆಗೆ ಗ್ರಾಸವಾದೀತು ಎಂಬ ಕಲ್ಪನೆಯೇನೂ ಇರಲಿಕ್ಕಿಲ್ಲ. ತನ್ನ ಸಂಗಾತಿಯ ಆಯ್ಕೆಯ ವಿಚಾರ ತನ್ನದು ಎಂದು ಹೇಳಲು ಅವರು ಅನುಸರಿಸಿದ ಮಾರ್ಗ ಇದು. ನೈತಿಕ ಪೊಲೀಸರಿಂದ ಪೆಟ್ಟು ತಿಂದ ಯುವಮನಸ್ಸಿಗೆ ತಕ್ಷಣ ಹೊಳೆದ ವಿಧಾನ, ಆ ರಾಜ್ಯದಲ್ಲಿ ಮಾಮೂಲಿ ಎಂಬಂತಿರುವ ಅದೆಷ್ಟೊ ಪ್ರತಿಭಟನೆಗಳನ್ನೂ ಮೀರಿ ದೇಶದ ಗಮನ ಸೆಳೆಯುತ್ತಿದೆ. ಆಫೀಸು, ಮನೆ ಎಂಬ ಧಾವಂತದಲ್ಲಿ ಮುಳುಗಿ ಹೋಗಿರುವ ಇಂದಿನ ಜನರ ಗಮನ ಸೆಳೆಯುವುದಕ್ಕೆ ವಿನೂತ ಶೈಲಿ ಕೂಡ ಅನಿವಾರ್ಯ ಅನ್ನಿಸುತ್ತದೆ.
ಪ್ರತಿಭಟನೆ ಶೈಲಿಯಿಂದಲೇ ಚಳವಳಿಯ ಗಂಭೀರತೆಯನ್ನು ಕೆಲವರು ಪ್ರಶ್ನಿಸಿದ್ದಾರೆ. ವ್ಯವಸ್ಥೆಯ ವಿರುದ್ಧ ಬಂಡೇಳುವ ಇಂದಿನ ಯುವಕರು ಗ್ಲ್ಯಾಮರ್ ಹಾಗೂ ಟೀವಿ ಕೇಂದ್ರಿತವಾಗಿ ಜೊಳ್ಳಾಗುತ್ತವೆ ಎಂದಿಷ್ಟೆ ಗಹಿಸಿದರೆ ಆಪ್ರಶ್ನೆ ಸರಿ. ’’ಎಂಭತ್ತು ವರ್ಷದ ಮುದುಕ ಎರಡನೆ ಕ್ಲಾಸ್‌ನ ಎಳೆ ಮ್ಯಾತೆ ಹುಡುಗಿಯನ್ನು ಹಿಚುಕಿ ರೇಪ್ ಮಾಡಬಹದು. ನಾವು ಪ್ರಾಯ ಪ್ರಬುದ್ಧರಾಗಿದ್ದೇವೆ, ಸಾಫ್ಟ್ ಟಚ್ ಎಂದರೆ ಏನು ಎಂಬ ಬಗ್ಗೆ ಸಮಾಜಕ್ಕೆ ತಿಳಿಸಲು ಪಬ್ಲಿಕ್‌ನಲ್ಲಿ ಕಿಸ್ ಕೊಟ್ಟು ಮಾನವೀಯ ಸಂವೇದನೆಯನ್ನು ಜಾಗತಿಗೊಳಿಸುವಲ್ಲಿ ತಪ್ಪೇನಿದೆ’ ಎಂದು ಕೇಳುವ ಇದೇ ಯುವಕರ ಪ್ರಶ್ನೆಗೆ ಕೇಳಿದರೆ ಉತ್ತರ ಕೊಡುವುದು ಕಷ್ಟ. ನೈತಿಕ ಪೊಲೀಸ್ ಮನಸ್ಸಿನ ಒಳಗೆ ಅಡಗಿ ಕುಳಿತಿರುವುದಾದರೂ ಏನು ? ಸಂಸ್ಕೃತಿ ಹೆಸರಲ್ಲಿ ದ್ವೇಷ, ತಾನು ಪ್ರೇಮಿಸಲಾಗದ ಅಸಹಾಯಕತೆಯಿಂದ ತನ್ನನ್ನು ಬಿಟ್ಟು ಆಕೆ ಇನ್ನ್ಯಾರನ್ನು ಪ್ರೇಮಿಸುತ್ತಾಳೆ ನೋಡುವೆ ಎಂಬ ಹತಾಶೆ, ತಾನು ಪ್ರೇಮಿಸಬಹದು, ಆದರೆ ತಂಗಿ ಮಾತ್ರ ತಾನು ಹೇಳಿದವನ್ನನ್ನೇ ಮದುವೆ ಆಗಬೇಕು ಎಂಬ ಅಣ್ಣಯ್ಯನ ಮನಃಶಾಸ್ತ್ರ. ಅದಕ್ಕೆಲ್ಲ  ಸಂಸ್ಕೃತಿ ಲೇಪ ಬಡಿಯುವ ಸಂವೇದನೆಗಿಂತ ಎಷ್ಟೋ ಪಾಲಿಗೆ ಕಿಸ್ ಚಳವಳಿ ವಾಸಿಯಲ್ಲವೇ. ಹುಡುಗ, ಹುಡುಗಿಯರು ಸ್ವಜಾತಿ, ಸ್ವಧರ್ಮದವರನ್ನು, ಅದರಲ್ಲೂ ತಂದೆ ತಾಯಿ ಅಥವಾ ಅಣ್ಣ ಆಯ್ಕೆ ಮಾಡಿದವರನ್ನೇ ಪ್ರೇಮಿಸಬೇಕು/ ಮದುವೆ ಆಗಬೇಕು ಎಂದು ಕಟ್ಟಳೆ ಹೇರುವುದು ಪ್ರಜಾತಾಂತ್ರಿ ವ್ಯವಸ್ಥೆಗೆ ಸರಿ ಹೊಂದುವುದಿಲ್ಲ. ವಿಭಿನ್ನ ಹಂತದಲ್ಲಿ ಇದೇ ನೈತಿಕ ಪೊಲೀಸ್‌ಗಿರಿ ಜಾತಿ ಧರ್ಮಗಳ ನಡುವೆ  ಗೋಡೆಯಾಗಿ ನಿಂತು  ವಧು ಕೊರತೆ, ಲಿಂಗಾನುಪಾತ ಸಮಸ್ಯೆಯನ್ನು ಸಷ್ಟಿಸುತ್ತಿದೆ.  ಪ್ರೇಮ ಅಥವಾ ವಿವಾಹದ ನಂತರ ಯಾರು ಯಾವ ಗುಂಪಿಗೆ ಸೇರಬೇಕೆಂಬ ಪುರೋಗಾಮಿ ಪ್ರಶ್ನೆಯೇ ನಮ್ಮ  ನಡುವಿನ ಪ್ರೇಮಿಗಳಿಗೆ, ಅವರ ವ್ಯಕ್ತಿಗತ ಸ್ವಾತಂತ್ರ್ಯ ಹರಣಕ್ಕೆ ಕಾರಣವಾಗಬಾರದು. ಇಂಥ ಪ್ರಶ್ನೆಯನ್ನು  ಮುಂದಿನ ಹಂತದಲ್ಲಿ ಚರ್ಚೆಗೆ ಅವಕಾಶ ಆಗಬೇಕು.    
ಸ್ಥಳೀಯವಾಗಿ ಪರ ವಿರೋಧ: ’’ಪ್ರತಿಭಟನೆಗಾಗಿ ಕಿಸ್ ಅನ್ನೋದು ಅದರ ಮೂಲ ಸಂವೇದನೆಗೆ ಅಪಚಾರ. ಇದು ಡಂಬಾಚಾರ, ಬೂಟಾಟಿಕೆಯಷ್ಟೇ ಅಲ್ಲ ಭಾರತೀಯ ಕ್ರಮವೂ ಅಲ್ಲ, ಶಿಷ್ಟಾಚಾರವೂ ಅಲ್ಲ’’ ಎನ್ನುವ ಕಟೀಲು ಆನುವಂಶೀಕ ಅರ್ಚಕ ಹರಿನಾರಾಯಣ ಆಸ್ರಣ್ಣ, ಇದೆಲ್ಲ ಪಾಶ್ಚಾತ್ಯ ಸಂಸ್ಕೃತಿ ಎಂದು ವಿರೋಧಿಸಿದ್ದಾರೆ. ಕಿಸ್ ಮೂಲಕ ಪ್ರತಿಭಟನಾ ವಿಧಾನ ನಮ್ಮ ಸಂಸ್ಕೃತಿ ಅಲ್ಲ ಎಂಬ ಬಲವಾದ ಧ್ವನಿ ಇದ್ದೇ ಇದೆ. ಇಂಥ ದಶ್ಯಗಳು ವಿದ್ಯಾರ್ಥಿಗಳು ಮತ್ತು ಯುವ ಮನಸ್ಸನ್ನು ಹಾದಿತಪ್ಪಿಸುವ ಅಪಾಯ, ಕ್ರಮೇಣ ಸಂಸ್ಕೃತಿ ತೆಳುವಾದರೆ ನಮ್ಮ ಅನನ್ಯತೆಯಾದರೂ ಏನು ಎಂಬ ಪ್ರಶ್ನೆಯೂ ಇದೆ. 
ಆದರೆ ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್ ’’ ಇದೆಲ್ಲ ಕೇವಲ ಚಪಲ ಎಂದು ಹೀಗಳೆಯಬಾರದು. ಯುವ ಮನಸ್ಸು ನೈತಿಕ ಪೊಲೀಸರ ಕ್ರೌರ್ಯವನ್ನು ವಿರೋಧಿಸಲು ತಮ್ಮದೇ ಆದ ಹೊಸ ವಿಧಾನದ ಹೋರಾಟ ರೂಪಿಸಿಕೊಂಡಿದೆ.’ ಎಂದರು. ಮಂಗಳೂರಿನಲ್ಲಂತೂ ನೈತಿಕ ಪೊಲೀಸ್‌ಗಿರಿ ಹೇಸಿಗೆ ಹುಟ್ಟಿಸಿದ್ದು ನಾವು ಅದನ್ನು ’’ಅನೈತಿಕ ಗೂಂಡಾಗಿರಿ’ ಎಂದು ತಿರಸ್ಕರಿಸಿದ್ದೇವೆ. ಹೃದಯ ಹೀನತೆಯನ್ನು ಖಂಡಿಸಿ ಕಿಸ್ ಆಫ್ ಲವ್‌ನ್ನು ಬೆಂಬಲಿಸಬೇಕು ಎಂದರು. ಕಿಸ್‌ನ್ನು ತಂದೆಗೂ, ಸಹೋದರನಿಗೂ ಕೊಡುತ್ತೇವೆ ಎಂಬುದನ್ನು ಗಹಿಸಿದಾಗ ಅದರಲ್ಲಿ ಅಶ್ಲೀಲತೆಗೂ ಮೀರಿದ ಸಂಕೇತ ಗಹಿಸಬಹದು. ಅದನ್ನೇ ತಾನು ಮುತಾಲಿಕ್ ಅವರಿಗೂ ದೂರವಾಣಿಯಲ್ಲಿ ಹೇಳಿದ್ದು, ಬೆಂಗಳೂರಿನಲ್ಲಿ ಸಂಘಟಿಸುವ ಆಂದೋಲನದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

ಚೆನ್ನೈನಂಥ ಪ್ರಮುಖ ನಗರದಲ್ಲಿ ನಡೆದ ಕಿಸ್ ಆಫ್‌ಲವ್ ಪ್ರತಿಭಟನೆಯಲ್ಲಿ ಕೇವಲ ಯುವ ಜನತೆ ಮಾತ್ರ ಭಾಗವಹಿಸರಲಿಲ್ಲ. ಹಿರಿಯ ನಾಗರಿಕರು, ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಗಹಿಣಿಯರು, ನಿವೃತ್ತ ಪೊಲೀಸ್ ಅಧಿಕಾರಿಗಳು ಅಲ್ಲಿದ್ದರು. ಪರಸ್ಪರರನ್ನು ಗೌರವಯುತವಾಗಿ ಡೀಸೆಂಟ್ ಆಗಿ ಆಲಂಘಿಸಿದ್ದೇ ಅಲ್ಲಿನ ದೃದಶ್ಯವಾಗಿತ್ತು. ಹಾಗೆಂದು ಚುಂಬಿಸುವ ದೃಶ್ಯಗಳೂ ಇದ್ದು, ಇದು ಕೇವಲ ಅದು ಮಾತ್ರವೇ ಆಗಿರಲಿಲ್ಲ. ಇಷ್ಟಕ್ಕೂ ದೇಹದ ಯಾವುದೇ ಖಾಸಗಿ ಭಾಗವನ್ನು ಅಥವಾ ಎರಡು ಮನಸ್ಸು, ದೇಹಗಳ ಖಾಸಗಿ ಕ್ರಿಯೆಯನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ವಿಧಾನವೂ ಇದೆ. ಅದಕ್ಕೆ ಹಾಗೊಂದು ಗಂಭೀರವಾದ ಮನಸ್ಥಿತಿ ಬೇಕು ಎಂಬ ವತ್ತಿನಿರತ ಮಹಿಳಾ ವೈದ್ಯರೊಬ್ಬರ ಮಾತು ಮಹತ್ವದ್ದೇ ಆಗಿದೆ. ಚಿಕಿತ್ಸಕ ದೃಷ್ಟಿ ಇಲ್ಲದೆ ಅಶ್ಲೀಲದಷ್ಟಿಯುಳ್ಳವರು ಉತ್ತಮ ವೈದ್ಯರಾಗುವುದು ಎಂದೂ ಸಾಧ್ಯವಿಲ್ಲ. ಪ್ರತಿಭಟನೆಯಾಗಿ ಕಿಸ್ ಒಂದನ್ನು ನೋಡುವಾಗ ಇಂಥದ್ದೊಂದು ಮನಸ್ಥಿತಿ ಬೇಕು ಎಂದೂ ಅವರು ಹೇಳುತ್ತಾರೆ.


ಕೊಚ್ಚಿಯಲ್ಲಿ ಆರಂಭ

* 2014 ನವೆಂಬರ್ 2ರಂದು ಕೇರಳದ ಕೊಚ್ಚಿಯಲ್ಲಿ ಚಳವಳಿಯ ಆರಂಭವಾಯಿತು. ಹತ್ತೆಂಟು ಡಜನ್ ಜೋಡಿ ಯುವಜನರು ಬೀಚ್‌ನಲ್ಲಿ ಕೈಕೈ ಹಿಡಿದು, ಆಲಂಗಿಸಿ ಕಚಗುಳಿ ಇಡುವ, ಚುಂಬಿಸಿ ಗಮನ ಸೆಳೆದರು. ಇದರಲ್ಲಿ ಭಾಗವಹಿಸಿದವರೆಲ್ಲ ಕಾಲೇಜು ಹೈಕಳೆ. ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರೇಮಿಗಳೆಂದು ಮಾನ್ಯತೆ ಪಡೆದವರೇ ಆಗಿದ್ದರು. ಆಗಲೇ ಸುದ್ದಿ ತಿಳಿದಿದ್ದ ಎಸ್‌ಡಿಪಿಐ, ಶಿವ ಸೈನಿಕರು, ಭಜರಂಗದಳ ಕಿಸ್ ಚಳವಳಿಯ ಮೇಲೆ ಎರಗಿ ಅಲ್ಲಿಯೂ ಮೆರೆದಾಟ ನಡೆಸಿದರು. ಕೊನೆಗೆ ಶಾಂತಿಭಂಗ ಹಾಗೂ ಬೀಚ್‌ನಂಥ ಸಾರ್ವಜನಿಕ ಸ್ಥಳದಲ್ಲಿ ಕಿಸ್ ಕೊಟ್ಟು ಸಾಂಸ್ಕೃತಿಕ ಮುಜುಗರಕ್ಕೆ ಕಾರಣ ಎಂದು ಕೆಲವರನ್ನು ಪೊಲೀಸರು ಬಂಧಿಸಿದರು.

ತಕ್ಷಣದ ಕಾರಣ:

*ಕಮ್ಯುನಿಸ್ಟ್‌ ಪಾರಮ್ಯದ ಕೇರಳದಲ್ಲಿ ಕಳೆದ ಹಲವು ವರ್ಷಗಳಿಂದ ನೈತಿಕ ಪೊಲೀಸ್‌ಗಿರಿ ಅಲ್ಲಲ್ಲಿ ನಡೆಯುತ್ತಿದ್ದರೂ, ಕಿಸ್ ಆಫ್ ಲವ್ ಚಳುವಳಿಗೆ ತಕ್ಷಣದ ಕಾರಣ ಆಗಿರುವುದು ಕಾಂಗ್ರೆಸ್ ಮಾಲೀಕಕತ್ವದ ಒಂದು ಟೀವಿ ವರದಿ.ಕಳೆದ ಅಕ್ಟೋಬರ್‌ನಲ್ಲಿ ಕೋಯಿಕೋಡ್‌ನ ಜನ ನಿಬಿಡ ಕೆಫೆಯೊಂದರ ಪಾರ್ಕಿಂಗ್ ತಾಣದಲ್ಲಿ ನಡೆಯುತ್ತರುವ ಪ್ರೇಮಿಗಳ ಚಟುವಟಿಕೆ. ಯುವ ಜೋಡಿಯೊಂದು ತಬ್ಬಿ ಹೊಡಿದಿರುವ ಹೊತ್ತಿನಲ್ಲಿ ಪ್ರತ್ಯಕ್ಷರಾದ ಸಂಘಟನೆಯೊಂದರ ನೈತಿಕ ಪೊಲೀಸರು ಇಬ್ಬರನ್ನು ಮೈ ಮುರಿಯುವಂತೆ ಬಡಿಯುತ್ತಿರುವ ವೀಡಿಯೋ ದಶ್ಯ ಇಡೀ ಕೇರಳದಲ್ಲಿ ಸಂಚಲನ ಮಾಡಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಕಮೆಂಟ್‌ಗಳು, ಹನ್ನೊಂದು ಲಕ್ಷ ಲೈಕ್‌ಗಳ ಮೂಲಕ ವಿರೋಧಕ್ಕೆ ಮುನ್ನುಡಿಯಾಗಿ ಸ್ಥಳ ನಿಗದಿಯಾಗುತ್ತದೆ.

ಬೆಳವಣಿಗೆ: ಕೇರಳದ ಘಟನೆ ದೇಶಾದ್ಯಂತ ಸುದ್ದಿ ಎಬ್ಬಿಸಿತು. ಚಳುವಳಿ ದೇಶದ ಪ್ರಮುಖ ನಗರಗಳಾದ ಪುಣೆ, ಮುಂಬಯಿ, ಕೊಲ್ಕತ್ತ ಮತ್ತು ರಾಜಧಾನಿ ದೆಹಲಿಯಲ್ಲೂ ನಡೆಯುತ್ತ ಮುಂದುವರದಿದೆ. ಇದೀಗ ಬೆಂಬಲಕ್ಕೆ ನಿಂತವರಲ್ಲಿ ಹಿರಿಯ ನಾಗರಿಕರು, ನಿವತ್ತ ಪೊಲೀಸರು, ಹಾಗೆಯೇ ಅದೆಷ್ಟೋ ಗ್ರಹಿಣಿಯರೂ ಸಾರ್ವಜನಿಕವಾಗಿ ಪರಸ್ಪರ ಆಲಿಂಗಿಸಿಕೊಂಡು ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ.

ಕಾನೂನು/ ಸಂಸ್ಕೃತಿ ವಿಚಾರ:
ಸಾರ್ವಜನಿಕ ಸ್ಥಳಗಳಲ್ಲಿ ಚುಂಬಿಸುವುದು ಭಾರತೀಯರಿಗೆ ಮುಜುಗರದ ವಿಚಾರ. ಇದು ಪಾಶ್ಚಾತ್ಯ ಸಂಸ್ಕೃತಿಯಾಗಿದ್ದು, ಭಾರತೀಯ ಸಂಸ್ಕೃತಿ ಇದಕ್ಕೆಲ್ಲ ಆಸ್ಪದ ಕೊಡುವುದಿಲ್ಲ ಎಂಬುದು ಇದನ್ನು ವಿರೋಧಿಸುವ ಹಿನ್ನೆಲೆಯ ಕಾರಣವಾಗಿದೆ. ಇದು ತೆಗೆದುಹಾಕುವ ವಿಚಾರ ಅಲ್ಲ. ಈ ವಿಚಾರದಲ್ಲಿ,’’ಯಾವುದೇ ಪ್ರಕರಣ ದಾಖಲಿಸಲು ಶಖ್ಯವಿಲ್ಲ’ ಎಂದು ಪ್ರಕರಣ ಒಂದರಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿರುವುದು ವಿಶೇಷ. ಹಾಗೆಂದು ಪ್ರೀತಿ ಪ್ರೇಮದ ಕಾರಣ, ಪ್ರತಿಭಟನೆಯ ಹೆಸರಲ್ಲಿ ಶಾಂತಿ ಭಂಗವಾದಲ್ಲಿ ಕಾನೂನು ತನ್ನದೇ ಮಾರ್ಗವನ್ನು ಹಿಡಿಯುತ್ತಿದ್ದು, ಕಿಸ್ ಆಫ್ ಲವ್ ಅಂಥದ್ದೇನೂ ಪ್ರಮುಖ ಸಮಸ್ಯೆಯನ್ನು ಈ ತನಕ ತಂದಿಲ್ಲ.


ಪ್ರತಿಭಟನೆಯಾಗಿ ಕಂಡ ’’ಖಾಸಗಿ’ವಿಷಯ
* ಪ್ರಾಣಿ ಹಿಂಸೆಯನ್ನು ವಿರೋಧಿಸಿ ,ಪ್ರಾಣಿಜನ್ಯ ಉಣ್ಣೆ ಬಟ್ಟೆಯನ್ನು ಕಿತ್ತೊಗೆದು ನಗ್ನವಾಗಿ ಕಾಣಿಸಿಕೊಳ್ಳುವ ಒಂದು ಚಳವಳಿ ಇದೆ. ಇದನ್ನು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಫಾರ್ ಎನಿಮಲ್ (ಪೆಟಾ)ಎಂಬ ಸಂಘಟನೆ 2007ರಿಂದ ಪ್ರತಿ ವರ್ಷವೂ ಸಂಘಟಿಸುತ್ತದೆ.
* ಯುದ್ಧವನ್ನು, ವಿಶೇಷವಾಗಿ ಗುಂಡು ಹಾಗೂ ಬಾಂಬ್‌ಗಳನ್ನು ವಿರೋಧಿಸಿ ನಗ್ನತೆ ಪ್ರದರ್ಶನ. ಲಂಡನ್‌ದಲ್ಲಿ ಇರಾಕ್ ಯುದ್ಧವೂ ಸೇರಿದಂತೆ ಹಲವು ಸಂದರ್ಭದಲ್ಲಿ  ಬಾಂಬ್ ವಿರೋಧಿಸಿ ತಮ್ಮ ಎದೆಯನ್ನು ಒಡ್ಡಿ ಪ್ರತಿಭಟನೆ ಮಾಡಿದ್ದಾರೆ. ಕೆಲವು ಸಂದರ್ಭ ನಗ್ನರಾಗಿ ಸೈಕಲ್ ತುಳಿದೂ ಪ್ರತಿಭಟನೆ ಮಾಡಿದ್ದಾರೆ.
* 2011ರಲ್ಲಿ ನ್ಯೂಯಾರ್ಕ್, ಟೊರೆಂಟೊಗಳಲ್ಲಿ ಕ್ಯಾಂಪಸ್ ಅತ್ಯಾಚಾರಗಳನ್ನು ಪ್ರತಿಭಟಿಸಿ ಅರೆಬರೆ ಬಟ್ಟೆಯೊಂದಿಗೆ ಮಹಿಳೆಯರ ಪ್ರತಿಭಟನೆ ನಡೆಯಿತು. ಪ್ರಚೋದಕ ರೀತಿಯಲ್ಲಿ ಉಡುಗೆ ತೊಟ್ಟ ಮಹಿಳೆರು ಅತ್ಯಾಚಾರಿಗಳ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದರು.
*ಕೆಲವು ವರ್ಷಗಳ ಹಿಂದೆ ಬೇಕಾಬಿಟ್ಟಿ ಶಾರ್ಕ್ ಬೇಟೆಯನ್ನು ಪ್ರತಿಭಟಿಸಿ ಅಂತಾರಾಷ್ಟ್ರೀಯ ಪ್ರಾಣಿ ಕಲ್ಯಾಣ ನಿಧಿ ಪ್ರತಿಭಟನೆಯೊಂದನ್ನು ಸಂಘಟಿಸಿತ್ತು. ಬೇಟೆಯ ಉದ್ದೇಶದಿಂದ ಮಿಲಿಯ ಗಟ್ಟಲೆ ಶಾಕ್‌‌‌ಗಳನ್ನು ಕೊಲ್ಲುವುದರ ವಿರುದ್ಧ ಮಹಿಳೆಯೊಬ್ಬರು ತನ್ನ ದೇಹಕ್ಕೆ ಸಿಲ್ವರ್ ಬಣ್ಣ(ಶಾರ್ಕನಂತೆ) ಬಳಿದು ನಿಂತು ಗಮನ ಸೆಳೆದಿದ್ದರು.
*2009ರಲ್ಲಿ ಬೆಂಗಳೂರು ಕೇಂದ್ರಿತವಾಗಿ ಪಿಂಕ್ ಚೆಡ್ಡಿ ಪ್ರತಿಭಟನೆ ನಡೆಯಿತು. ಮಂಗಳೂರಿನಲ್ಲಿ ಪಬ್ ದಾಳಿಯಿಂದ ಕುಖ್ಯಾತಿಯ ಶ್ರೀರಾಮ ಸೇನೆ ಪ್ರೇಮಿಗಳ ದಿನಕ್ಕೆ ವಿರೋಸಿ ಕಾರ್ಯಾಚರಣೆ ನಿರತವಾಗಿದ್ದನ್ನು ಪ್ರತಿಭಟಿಸಿ ಕೈಗೊಂಡ ಪ್ರತಿಭಟನೆ ಇದು. ಸಾವಿರಾರು ಪ್ರೇಮಿಗಳು ಶ್ರೀರಾಮ ಸೇನೆ ಕಚೇರಿಗೆ ಪಿಂಕ್ ಚೆಡ್ಡಿಯನ್ನು ಕಳುಹಿಸುವ ಮೂಲಕ ಪ್ರತಿಭಟಿಸಿದ್ದರು.


Read More