ನನ್ನ ಆಲೋಚನೆ ತಪ್ಪೇ ?

ನನ್ನ ಆಲೋಚನೆ ತಪ್ಪೇ ?
ಕೋಟ್ "
ಅಮೇರಿಕ ಅಧ್ಯಕ್ಷ ಬಾರಕ್ ಒಬಾಮ ಭಾಗವಹಿಸಿದ್ದ ನಮ್ಮ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ಲಕ್ಷ ಮೌಲ್ಯದ ಕೋಟುಧರಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ಕೋಟಿನಲ್ಲಿ ಬಂಗಾರದಲ್ಲಿ ಕೆತ್ತಿದ್ದ ಅವರದೇ ಹೆಸರಿನ ಉದ್ದುದ್ದದ ಸಾಲುಗಳು. ಪ್ರಧಾನಿಯವರ ಅಭಿರುಚಿಯ ಬಗ್ಗೆ ವಿಭಿನ್ನ ಅಭಿಪ್ರಾಯಗಳು ಹರಿದಾಡುತ್ತಿವೆ. ಅಪರೂಪದ ಇತಿಹಾಸಕಾರ ರಾಮಚಂದ್ರ ಗುಹಾ ಇತ್ತೀಚಿನ ತಮ್ಮ ಅಂಕಣದಲ್ಲಿ ಈ ಬಗ್ಗೆ ಸುಂದರವಾಗಿ ವಿಷ್ಲೇಶಿಸಿದರು.  ಭಾರತದಲ್ಲಿ ಯಶಸ್ವೀ ವ್ಯಕ್ತಿಗಳು ಸ್ವಲ್ಪ ಹೀಗೆಯೇ. ಹಿರಿಯ ವಿಜ್ಞಾನಿ, ಭಾರತ ರತ್ನ ಸಿಎನ್ಆರ್ ರಾವ್ ಅವರು ಬೆಂಗಳೂರಲ್ಲಿ ತಮ್ಮದೇ ಹೆಸರಿನ ರಸ್ತೆ ವೃತ್ತವನ್ನು ಉದ್ಘಾಟಿಸಿ ಖುಷಿಪಟ್ಟಿದ್ದರು. ಇದೆಲ್ಲ ಒಂದು ಥರದ ಆತ್ಮರತಿ. ಅಪಾಯಕಾರಿ ಬೆಳವಣಿಗೆ ಅಂತ ಅಲ್ಲ, ಆದರೆ ಅಷ್ಟೇನೂ ಅಭಿರುಚಿ ಅಂಥ ಅನ್ನಿಸಲಿಲ್ಲ ಎಂಬುದಾಗಿ ಗುಹಾ ವಿವರಿಸಿದ್ದರು.
**
ಬಲ್ಲಿರೇನಯ್ಯ!?
ನಿಮಗೊಂದು ವಿಷಯ ಹೇಳುವುದಕ್ಕೆ ಇದೊಂದು ಪೀಠಿಕೆ ಹಾಕಿದ್ದೇನೆ.
ಕಳೆದ ಬಾರಿ ತಮ್ಮ ಪತ್ರಿಕೆಯ 25ನೇ ಸಂಭ್ರಮ ಆಚರಿಸಿಕೊಂಡಾಗ ಯಕ್ಷಗಾನದ ಅನನ್ಯ ಪತ್ರಿಕೆ "ಬಲ್ಲಿರೇನಯ್ಯ'ನೋಡಿದಾಗಲೂ ನನಗೆ ಹೀಗೆಯೇ ಅನ್ನಿಸಿತು. ಮುಖಪುಟದಲ್ಲಿ ಸಿನಿಮಾ ನಟಿಯರಂತೆ ರಾರಾಜಿಸುವ ಸಂಪಾದಕರ ಫೋಟೊ. ಜತೆಗೆ 25 ಪಾಯಿಂಟ್ ನಲ್ಲಿ ಅವರದೇ ಹೆಸರುಳ್ಳ ಕೋಟ್.(ಪ್ರಧಾನಿಯವರಂತೆ ಬಟ್ಟೆಯ ಕೋಟಲ್ಲ, ಇದು ಅಕ್ಷರದ ಕೋಟ್!)

ಒಟ್ಟೂ 35 ಪುಟಗಳ ಪತ್ರಿಕೆಯಲ್ಲಿ ಮೂರು ಅರದ್ದೇ ಫೋಟೊ, ಇನ್ನೂ 5 ಕಡೆ ಅವರದ್ದೆ ಹೆಸರು. ಮತ್ತೆ 18 ಬಲ್ಲಿರೇನಯ್ಯದ ಹಿಂದಿನ ಸಂಚಿಕೆಗಳ ಮುಖಪುಟಗಳು.
ಪತ್ರಿಕೆಯ ಸಂಪಾದಕರು ಯಕ್ಷಗಾನ ವಲಯದಲ್ಲಿ ನನ್ನ ಸ್ನೇಹಿತರು. ಪತ್ರಿಕೆ ಮಗಚುತ್ತಲೇ ಇದನ್ನು ಹೇಳೋಣ ಎಂದು ಅನ್ನಿಸಿತು. ಒಂದು ಮೌಲಿಕ ಪತ್ರಿಕೆಯನ್ನು ರೂಪಿಸುವಾಗ ಓದುಗರೂ ಆರೋಗ್ಯಕರ ವಿಮರ್ಶೆ ಮಾಡಬೇಕು ತಾನೆ ? ಸರಿಯೊ ತಪ್ಪೊ ಗೊತ್ತಿಲ್ಲ, ಸಂಪಾದಕರಿಗೆ ಒಂದು ಎಸ್ಸೆಮ್ಮೆಸ್ ಹಾಕಿ, ಮುಖಪುಟದಲ್ಲಿ ನಿಮ್ಮ ಫೋಟೊ ನನಗೆ ಲೈಕ್ ಆಗಲಿಲ್ಲ. ಹೀಗೆ ಮುಂದುವರಿದರೆ ನನ್ನ ಚಂದಾದಾರಿಕೆಯನ್ನು ರದ್ದುಗೊಳಿಸಿ ಎಂದು ಒಗೆದೆ.
ಹ್ವಾಯ್..ಅದಕ್ಕೆ ಅವರ ಉತ್ತರ ಬರಲಿಲ್ಲ. ಯಾವ ಪ್ರಶ್ನೆಯನ್ನೂ ತನ್ನ ಮೇಲೆ ಭೋಜವಾಗಿ ಇರಸುವ ಜಾಯಮಾನವೇ ಅವರದಲ್ಲ. ಹಾಗಿದ್ದವರು ಯಾಕೆ ಉತ್ತರಿಸಲಿಲ್ಲ ಎಂದು ಅಚ್ಚರಿಯಾಯಿತು.
ನಾಲ್ಕು ದಿನಗಳ ನಂತರ ಒಂದು ಚೆಕ್ ಬಂದಿತು. ವೈದ್ಯೆಯೊಬ್ಬರು ಕಳುಹಿಸಿದ 250 ರೂ. ಚೆಕ್ ನೋಡಿ ಓ ನಮ್ಮ ದೇವಿಮಹಾತ್ಮೆ ಪುಸ್ತಕ ಪಡೆದವರು ಯಾರೊ ಒಂದು ಚೆಕ್ ಕಳುಹಿಸರಬೇಕು ಎಂದುಕೊಂಡೆ. ದೇವಿಮಹಾತ್ಮೆ ಪುಸ್ತಕದ ಬೆಲೆಯೂ ಅಷ್ಟೇ ಇರುವುದರಿಂದ ಹೀಗೆ ಗೊಂದಲವಾಯಿತು.
ಊಹೂಂ. ಇದು ಅದಾಗಿರಲಿಲ್ಲ.
ಬಲ್ಲಿರೇನಯ್ಯ ಪ್ರಕಾಶಕರು, "as your wish we cancelled your subscription. please accept' ಎಂದು ಕವರಿಂಗ್ ಲೆಟರ್ ಇಟ್ಟಿದ್ದಾರೆ.
ಬಲ್ಲಿರೇನಯ್ಯ ಸಂಪಾದಕರು ಅಪರೂಪದ ಯಕ್ಷ ಕಲಾವಿದರು. ಹಾಗೆಯೇ ಅಪರೂಪದ ಲೇಖಕ ಕೂಡ ಆಗಿದ್ದಾರೆ. ನನಗೆ ಕೆಲವು ಕಾಲದಿಂದ ಸ್ನೇಹಿತರೇ. ಇದೀಗ ಯಕ್ಷಗಾನ ಅಕಾಡೆಮಿಯ ಸದಸ್ಯರೂ ಆಗಿದ್ದಾರೆ. ಪುರಾಣ ಲೋಕದ ಬಾಲಕರ ಕುರಿತಾಗಿ ಅವರು ಬರೆದ ಪುಸ್ತಕ ನಿಜಕ್ಕೂ ಸಂಗ್ರಹಯೋಗ್ಯ.. ಯಕ್ಷಗಾನ ಇದ್ದೀತು, ತಾಳಮದ್ದಳೆ ಇದ್ದೀತು. ಒಂದೇ ಒಂದು ಮಾತೂ ಕೆಳಕ್ಕೆ ಬೀಳುವುದಕ್ಕೆ ಬಿಡದ ರೀತಿಯಲ್ಲಿ ಕೊಟ್ಟು ಕಾಣಿಸುವ ಹರಿತಮತಿ ಅವರದ್ದಾಗಿದೆ.ಯಾರಿಗೂ ಬಾಕಿ ಉಳಿಸುವುದಿಲ್ಲ.ಒಂದು ಮಾತು ಹೆಚ್ಚೇ ಕೊಟ್ಟಿರುತ್ತಾರೆ.ನನ್ನ ಚಂದಾದಾರಿಕೆಯ ಹಣ ವಾಪಸ್ ಕೊಡುವಾಗಲೂ ಹಾಗೆಯೇ, ತಾವು ಕಳುಹಿಸಿದ ಪುಸ್ತಕಗಳ ಹಣವನ್ನು ಮುರಿದುಕೊಳ್ಳದೆ ಇಕೊಳ್ಳಿ ಎಂದು ದಬಾಯಿಸಿ ನಾನು ಕೊಟ್ಟ ಮೂಲಧನವನ್ನೇ ಚೆಕ್  ರೂಪದಲ್ಲಿ ಬಿಟ್ಟಿದ್ದಾರೆ.
ಯಶಸ್ವೀ ಚರ್ಚಾಪಟುವು ಇಷ್ಟು ಶಾರ್ಫ್ ಆಗಿ ಆಲೋಚಿಸಲೇಬೇಕು. ನಾನೂ ಚಿಲ್ಲರೆ ಹಿಂದಿರುಗಿಸಲು ಕಾಯುತ್ತಿದ್ದೇನೆ !
***
ಕೊನೆಯದಾಗಿ ಒಂದು ಸೇರಿಕೆ. ದೇಶದ ನಂ 1 ವ್ಯಕ್ತಿ  ತಮ್ಮ ಕೋಟಿನಲ್ಲಿ ತನ್ನ ಹೆಸರನ್ನು ಬರೆಸಿಕೊಳ್ಳುವ ವಿಚಾರ ಬಿಡಿ. ಇತ್ತೀಚೆಗೆ  ರಾಜ್ಯ ಮಟ್ಟದ ಪತ್ರಿಕೆಗಳ ಮಾಲೀಕರು ಪತ್ರಿಕೆಯ ಮುಖಪುಟದಲ್ಲಿ ತಮ್ಮ ಫೋಟೊಗಳನ್ನು ಹಾಕಿಕೊಳ್ಳುವ ಪ್ರವೃತ್ತಿ ಬೆಳೆದಿದೆ. ಹೀಗಿರುವಾಗ ಬಲ್ಲಿರೇನಯ್ಯ ಸಂಪಾದಕಕರನ್ನು ಮಾತ್ರ ಇಕ್ಕಟ್ಟಿಗೆ ಸಿಲುಕಿಸುವುದು ಅಷ್ಟು ಸರಿ ಅನ್ನಿಸುವುದಿಲ್ಲ.
ಲೋಕವೇ ಹೀಗಿರುವಾಗ ನನ್ನ ಆಲೋಚನೆಯಲ್ಲೇ ಏನೋ ತಪ್ಪು ಎಂದು ಅನ್ನಿಸುತ್ತಿದೆ..? ಈ ತಪ್ಪನ್ನು ಮೊದಲು ಬೊಟ್ಟು ಮಾಡಿ ಗುರುತಿಸಿದಾಕೆ ನನ್ನ ಶ್ರೀಮತಿ. (ಅವರ ಜಾಗ, ಅವರ ದುಡ್ಡು, ಅವರ ಕೋಟು-ಮೋದಿಗೂ ಅನ್ವಯ- ಅವರ ಫೋಟೊ.ನಿಮಗ್ಯಾಕ್ರಿ  ನಂಜು ? ಎಂದು ನನ್ನ ಶ್ರೀಮತಿ ಪ್ರಶ್ನಿಸಿದಳು.) ನಿಮಗೂ ಹೀಗೆ ಅನ್ನಿಸಿದ್ದರೆ ನನ್ನ ಅಭ್ಯಂತರ ಇಲ್ಲ. ಹಾಗೆ ವಿಷಯ ಹೇಳಿದೆ ಅಷ್ಟೆ.

****
Read More