ಹಾಡು ಹಕ್ಕಿಗೆ ಗಾಳ ಹಾಕುವ ಪ್ರಯತ್ನ:ಪಟ್ಲ ಭಾಗವತರ ವಿವಾದದಲ್ಲಿ ಬಲಿಪಶುವಾದ ಪತ್ರಕರ್ತ


ಇತ್ತೀಚೆಗೆ ಬಲ್ಲಿರೇನಯ್ಯ ಪತ್ರಿಕೆ ಕಟೀಲು ಕ್ಷೇತ್ರದ ಅರ್ಚಕರ ಧ್ವನಿಯಲ್ಲಿ ಎತ್ತಿದ್ದ ಭಾಗವತಿಕೆ ಪಟ್ಟಿನ ಮಹತ್ವದ ಚರ್ಚೆಯೊಂದು ವ್ಯಕ್ತಿ/ಜಾತಿ ಆರಾಧನೆಯ ಅತಿರೇಕದಲ್ಲಿ ತೇಲಯತ್ತಿರುವ ಯಕ್ಷಗಾನ ರಂಗಭೂಮಿಯಲ್ಲಿ ಅತಾರ್ಕಿಕ ಅಂತ್ಯವನ್ನು ಕಂಡಿದೆ. ಹಾಗೆ ನೋಡಿದರೆ ಆ ಅರ್ಚಕರ ಧ್ವನಿ ಅವರದಷ್ಟೆ ಆಗಿರಲಿಲ್ಲ, ಅವರ ಹಿಂದೆ ಅದೇ ಅಭಿಪ್ರಾಯ ಹೊಂದಿದ ಕಟೀಲಿನ ದೊಡ್ಡ ಕಲಾವಿದರು ಮತ್ತವರ ಅಭಿಮಾನಿ ಬಳಗವನ್ನೊಳಗೊಂಡ ದೊಡ್ಡ ಗುಂಪಿನ ಧ್ವನಿ ಅದು.
ಅದೇನೆ ಇದ್ದರೂ ಇಡೀ ವಿವಾದ ಮುಚ್ಚಿ ಹಾಕಲು ತಿಪ್ಪೆಸಾರಿಸುವ ಕೆಲಸವನ್ನು ಮುಂಚೂಣಿಯಲ್ಲಿರುವ ವ್ಯಕ್ತಿಗಳೇ ಮಾಡಿದರು. ಅಂತಿಮವಾಗಿ ಬಲ್ಲಿರೇನಯ್ಯ ಪತ್ರಿಕೆಯ ಸಂಪಾದಕನೆಂಬ ಬಡಪ್ರಾಣಿಯನ್ನು ಗುದ್ದಿಹಾಕಿ, ತಾವೆಲ್ಲ ಒಂದು ಎಂದು ನಾಟಕೀಯ ರೀತಿಯಲ್ಲಿ ಒಗ್ಗಟ್ಟಿನ ಪೋಸು ನೀಡಿದ್ದಾರೆ.
ಯಕ್ಷಗಾನ ಭಾಗವತಿಕೆಯಲ್ಲಿ ಪಟ್ಟು/ಮಟ್ಟು ತಪ್ಪಿ, ಸುಗಮ ಸಂಗೀತದ ದಾರಿ ಹಿಡಿಯುತ್ತಿದೆ ಎಂಬ ಅಪವಾದ ಈಗಷ್ಟೆ ತೆಂಕುತಿಟ್ಟಿಗೆ ಕಾಲಿಟ್ಟಿದೆ. ಈ ಚರ್ಚೆಗೆ ಬಡಗಿನಲ್ಲಿ ದಶಕಗಳ ಇತಿಹಾಸವಿದ್ದು ಅಲ್ಲಿ ಈಗ ಅದೆಲ್ಲ ಸವಲಕಲಾದ ವಿಚಾರ. ಹಾಗೆ ನೋಡಿದರೆ ಪ್ರತೀ ಇಪ್ಪತ್ತೈದು ವರ್ಷಗಳಿಗೊಮ್ಮೆ ಯಕ್ಷಗಾನದ ಹಿಮ್ಮೇಳ, ಮುಮ್ಮೇಳಗಳಲ್ಲಿ ಪ್ರಮುಖ ಬದಲಾವಣೆಯನ್ನು ಕಾಣುತ್ತ ಈಗಿನ ಸ್ಥಿತಿಗೆ ಬಂದಿರುವ ಯಕ್ಷಗಾನದ ಬಗ್ಗೆ ಪ್ರತಿಯೊಬ್ಬರೂ ತಾವು ಬಾಲ್ಯದಲ್ಲಿ ನೋಡಿದ ಆಟವನ್ನೆ  ಆದರ್ಶವಾಗಿ ಇಟ್ಟುಕೊಂಡು ಮುಂದಿನ ಆಟಗಳಿಗೆ ಸರ್ಟಿಫಿಕೇಟ್ ನೀಡುವುದು ರೂಢಿ. ಕೆಲವು ಅಧಿಕಾರಸ್ಥರು ನೀಡುವ ಸರ್ಟಿಫಿಕೇಟ್ ಗಳು ಫರ್ಮಾನುಗಳ ರೀತಿಯಲ್ಲಿ ಇರುವ ಹಿನ್ನೆಲೆಯಲ್ಲಿ ಹೆಚ್ಚು ಗಮನ ಸೆಳೆಯುತ್ತವೆ.ವಿಮರ್ಶಾ ದೃಷ್ಟಿಯಲ್ಲಿ  ಉನ್ನತವಾಗಿರದಿದ್ದರೂ, ಅಧಿಕಾರಸ್ಥರ ಹಿಂದಿರುವ ಕೆಲವು ಹಿತಾಸಕ್ತಿಗಳಿಗಾಗಿ ಅವರ ಮಾತುಗಳು ಮಹತ್ವ ಪಡೆದಿರುತ್ತವೆ.
ಭಾಗವತಿಕೆ ವಿವಾದದ ಹಿನ್ನೆಲೆಯೂ ಅಷ್ಟೇ !
ಕಾಲ ಕಾಲಕ್ಕೆ ಬದಲಾವಣೆ ಆಗುತ್ತ ಬಂದಿದೆ ಎಂದಾಕ್ಷಣ ಯಕ್ಷಗಾನದಲ್ಲಿ ಬದಲಾವಣೆಗೆ ಪ್ರತಿರೋಧ ಸಲ್ಲ ಎಂದು ಇಲ್ಲಿ ಹೇಳುತ್ತಿರುವುದಲ್ಲ. ಯಕ್ಷಗಾನದಲ್ಲಿ ಭಾಗವತಿಕೆಗೆ ಅದರದ್ದೇ ಆದ ಹಿನ್ನೆಲೆ ಇದ್ದು, ತೀರಾ ತೆಳುವಾದರೆ ತನ್ನ ಅನನ್ಯತೆ ಕಳೆದುಕೊಳ್ಳುವುದು ಸಹಜ. ಆದರೆ ಹಾಗೆ ಹೇಳುವವರು ಯಾರು ? ಹೇಳಬೇಕಾದವರು ಯಾರು ? ಹೇಳುವವರ ಉದ್ದೇಶ ಕೇವಲ ಭಾಗವತಿಕೆಯೇ ? ಯಕ್ಷಗಾನವನ್ನು ಇನ್ನಷ್ಟು ಎತ್ತರಕ್ಕೆ ಒಯ್ದು ಸ್ಟಾರ್ ವ್ಯಾಲ್ಯೂ ತಂದುಕೊಂಡಿರುವವರ ಬಗ್ಗೆ  ನಂಜು ತುಂಬಿಕೊಂಡವರು, ಅವರ ಭಾಗವತಿಕೆ ಸರಿ ಇಲ್ಲ ಎಂದರೆ ಯಾರು ಕೇಳಬೇಕು ?
ಅಂಥ ಮಾತನ್ನೆಲ್ಲ ಗಂಭೀರವಾಗಿ ಪರಿಗಣಿಸಬೇಕಿಲ್ಲ.
ಹೀಗೆ ಹೇಳುತ್ತಲೇ ಒಂದು ಮಹತ್ವದ ಸಮೀಕರಣವನ್ನೂ ಇಲ್ಲಿ ಹೇಳುತ್ತೇನೆ. ಮೇಲೆ ಹೇಳಿದಂತೆ ಯಕ್ಷಗಾನವು ವೃತ್ತಿಪರತೆಗಿಂತ ಜಾತಿ ಪರತೆ, ವ್ಯಕ್ತಿಪರತೆಯ ನೆಲೆಯಲ್ಲಿ ಹೆಚ್ಚು ಜನಪ್ರಿಯ ಆಗುತ್ತಿದೆ. ಈ ವಿಚಾರದಲ್ಲಿ ನನ್ನ ವಯಕ್ತಿಕ ಅನುಭವವನ್ನು ಇಲ್ಲಿ ಹೇಳುತ್ತೇನೆ. ನಾವು ದೇವಿ ಮಹಾತ್ಮೆ ಕಾಫಿಟೇಬಲ್ ಪುಸ್ತಕ ತಂದಾಗ ಕೆಲವರು ಭಾಗವತ ಪಟ್ಲರ ಟೀಮಿನ ಆಟದ ಚಿತ್ರಗಳನ್ನು ಹಾಕಬೇಕಿತ್ತು ಎಂದು ಸಲಹೆ ನೀಡಿದರು. ಇನ್ನೂ ಕೆಲವರು ಬಲಿಪರ ಟೀಮಿನ ಚಿತ್ರಗಳನ್ನು ಬಳಸಬೇಕಿತ್ತು ಎಂದರು. ಈ ಎರಡೂ ಧ್ವನಿಗಳ ಹಿಂದೆ ಯಕ್ಷಗಾನದಲ್ಲಿ ನೆಲೆಯಾಗಿರುವ, ಜಾತಿ ಕಾರಣಕ್ಕಾಗಿ ವ್ಯಕ್ತಿಯನ್ನು ಆರಾಧಿಸುವ ಧ್ವನಿ ಇತ್ತು. ಯಾರದ್ದು ಯಾವ ಜಾತಿ ಎಂದು ನಾನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಜಾತಿ  ನೆಲೆಯಲ್ಲಿ ಯಕ್ಷಗಾನವನ್ನು ಅಥವಾ ಪುಸ್ತಕವನ್ನು ಸಂಯೋಜಿಸದೇ ಇದ್ದಲ್ಲಿ ಅನುಭವಿಸಬೇಕಾದ ಸೋಲು, ನಷ್ಟ ಎಲ್ಲರಂತೆ ನನಗೂ ಆಗಿದೆ. ಆದರೆ ಬೇಸರ ಇಲ್ಲ. ಮತ್ತೆ ವಿಷಯಕ್ಕೆ ಬರುತ್ತೇನೆ.
ಭಾಗವತರೊಬ್ಬರು ತಮ್ಮ ಅದ್ಭುತ ಪ್ರತಿಭಾವಂತಿಕೆಯ ಜತೆಗೆ ಜಾತಿ ಶಕ್ತಿ ಕೂಡ ಇದ್ದರೆ ಯಾವ ಸಿನಿಮಾ ನಟನಿಗೂ ಮತ್ಸರ ಆಗಬಲ್ಲ ಜನಪ್ರಿತೆ ಇದೀಗ ವಿವಾದದಲ್ಲಿ ಸಿಲುಕಿರುವ ಭಾಗವತರದ್ದು. ಅವರ ವಿದೇಶ ಪ್ರವಾಸಕ್ಕೆ ಶುಭ ಕೋರಿ ಶೈನ್ ಆಗುವವರು, ಅವರನ್ನು ಸನ್ಮಾನಿಸಿ ತಮ್ಮ ಖಾಲಿತನವನ್ನು ತುಂಬಿಕೊಂಡವರೆಲ್ಲ, ಅವರ ಯಕ್ಷಗಾನ ಪ್ರತಿಭೆಯನ್ನು ಗುರುತಿಸದೆ ಅವರು ನಮ್ಮ ಜಾತಿ ಎಂದು ವಿಕೃತ ಮನಸ್ಸಿನಿಂದ ಅವರನ್ನು ಆರಾಧಿಸುತ್ತಿರುವವರು- ಅವರ ಬಗ್ಗೆ ಮತ್ಸರಹೊಂದಿದವರ ಹೊಟ್ಟೆ ಉರಿಸಿದ್ದು ಬಿಟ್ಟರೆ ಒಟ್ಟೂ ಯಕ್ಷಗಾನಕ್ಕೆ ದೊಡ್ಡ ಕೊಡುಗೆ ಕೊಟ್ಟರು ಎನಿಸುವುದಿಲ್ಲ.
ನಾನು ಕೇವಲ ಯಕ್ಷಗಾನದ ಕಾರಣಕ್ಕಾಗಿ ಪಟ್ಲ ಭಾಗವತರ ಅಭಿಮಾನಿ ಎಂದು ಹೇಳಿಕೊಂಡೆ ಮೇಲಿನ ಟೀಕೆಯನ್ನು ಮಾಡುತ್ತೇನೆ. ಪಟ್ಲರ ಪ್ರಯೋಗವು ಸದ್ಯಕ್ಕಂತೂ ಯಕ್ಷಗಾನ ಒಪ್ಪಿತ ಮಿತಿಯಲ್ಲೇ ಇದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಪಟ್ಲ ಭಾಗವತರ ಕಾರಣ ಯಕ್ಷಗಾನ ಪಡೆದ ಗ್ಲ್ಯಾಮರ್, ದೇವಿ ಮಹಾತ್ಮೆಯ ದ್ವಿತೀಯಾರ್ಧದ ಆಕರ್ಷಣೆ ನನ್ನಂಥ ಅದೆಷ್ಟೋ ಯಕ್ಷಗಾನದ ಅಭಿಮಾನಿಗಳಿಗೆ ಹೆಮ್ಮೆಯ ವಿಚಾರ. ಹಾಗೆಂದು ಕಟೀಲು ಮೇಳದಲ್ಲಿ ಜಾತಿಯನ್ನೂ ಮೀರಿದ ಪ್ರತಿಭಾವಂತರಿಗೆ ಖಂಡಿತ ಬರಗಾಲ ಇಲ್ಲ. ಎಲ್ಲಿ ನೋಡಿದರಲ್ಲಿ ಪಟ್ಲರ ಸೆಟ್ಟಿಗೆ ಆಹ್ವಾನ ಮಾಡುವವರು ಇತರ ಮೇಳಗಳ ಆಟವನ್ನು ಒಮ್ಮೆ ಕಣ್ಣರಳಿಸಿ ಜಾತಿಯನ್ನೂ ಮೀರಿ ನೋಡುವಂತಾಗಲಿ ಎಂದು ನನ್ನ ಆಸೆ.
ವಿಚಾರ ಹೀಗೆಲ್ಲ ಇರುವಾಗ, ಭಾಗವತಿಕೆಯ ಲಯದ ಒಂದು ಜ್ವಲಂತ ವಿಷಯವನ್ನು ಎತ್ತಿದ ಹಿರಿಯ ವ್ಯಕ್ತಿ ಕೊನೆಗೆ ತಾನು ಹಾಗೆ ಹೇಳಿಲ್ಲ ಎಂದು ಹೇಳುವ ಹಿಂದೆ ಒಂದೇ ಪತ್ರಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸಿ ತಾನು ಸಾಚಾ ಆಗುವ ಪ್ರಯತ್ನ ಇದೆ. ಅಥವಾ ಅವರಿಗೆ ತಾನು ಹೇಳಿದ್ದನ್ನು ಬಲವಾಗಿ ಸಮರ್ಥಿಸುವ ಬಂಡವಾಳದ ಕೊರತೆ ಇದೆ.
ದೇವಳದ ಹರಕೆಯ ಆಶ್ರಯದಲ್ಲಿ ಬದುಕುವ ಯಕ್ಷಗಾನಕ್ಕೆ ಅದರ ಪೋಷಕರೇ ಕೆಲವೊಮ್ಮೆ ಸ್ವಾತಂತ್ರ್ಯ ಹರಣವನ್ನೂ ಮಾಡುವ ಅಪಾಯವನ್ನೂ ಇಲ್ಲಿ ಕಾಣಬೇಕು.ದೇವಳ, ಅರ್ಚಕ, ಯಜಮಾನರು ವೃತ್ತಿಪರರನ್ನು ನಿಯಂತ್ರಿಸುವ ಹಕ್ಕು ಪಡೆದುಬಿಡುತ್ತಾರೆ. ಅದೆಲ್ಲಕ್ಕಿಂತ ಯಕ್ಷಗಾನ ಕಲೆಗೆ ಹೊರತಾದ ದುಡ್ಡಿನ ಶಕ್ತ, ಜಾತಿ ಶಕ್ತಿ, ಜನಪ್ರಿತೆ ಕುರಿತ ಮತ್ಸರದ ವಾಸನೆ ಇರುವುದು ಯಕ್ಷಗಾನದ ಅನುದಿನದ ಸಮಸ್ಯೆ. 
ಯಕ್ಷಗಾನಂ ಗೆಲ್ಗೆ-ಪತ್ರಿಕೋದ್ಯಮಮಂ ಗೆಲ್ಗೆ ಎಂದು ನನ್ನ ಆಲೋಚನೆ ಲಹರಿಯನ್ನು ಇಲ್ಲಿಗೆ ಮೊಟಕುಗೊಳಿಸುತ್ತೇನೆ.
-ಸದಾನಂದ ಹೆಗಡೆ ಹರಗಿ



Related Posts
Previous
« Prev Post

4 ಕಾಮೆಂಟ್‌(ಗಳು)

ಮಾರ್ಚ್ 18, 2015 ರಂದು 07:58 ಪೂರ್ವಾಹ್ನ ಸಮಯಕ್ಕೆ

-Mithuna Kodethuru
ಅತ್ಯುತ್ತಮವಾದ ಚಿಂತನೆ, ಬರೆಹ. ನಿಮ್ಮ ವಾದಕ್ಕೆ ನನ್ನ ಪೂರ್ಣ ಬೆಂಬಲವಿದೆ.
ನಿಮ್ಮ ನೇರವಂತಿಕೆ ತುಂಬ ಇಷ್ಟವಾಯಿತು. (ವರ್ಕಾಡಿ ಮತ್ತು ನಿಮ್ಮ ಹಿಂದಿನ ಭಿನ್ನಾಭಿಪ್ರಾಯದ ಘಟನೆಯನ್ನು ನೆನಪಿಸಿಕೊಂಡು)

Reply
avatar