ಇವರು ತಮ್ಮ ಭಾನುವಾರಗಳನ್ನು ಬೀದಿ ಗುಡಿಸುವಲ್ಲಿ ಕಳೆಯುತ್ತಾರೆ.. !

ಇವರು ತಮ್ಮ  ಭಾನುವಾರಗಳನ್ನು ಬೀದಿ ಗುಡಿಸುವಲ್ಲಿ ಕಳೆಯುತ್ತಾರೆ.. !
ರಾಮಕೃಷ್ಠ ಮಠದ ಕಾವಿಧಾರಿಗಳ -ಸ್ವಚ್ಛ ಮಂಗಳೂರು- ಕಾರ್ಯ
ನಾಲ್ಕು ವರ್ಷ ಹಿಂದೆ ಮೊಟ್ಟ ಮೊದಲ ಬಾರಿಗೆ ‘ಸ್ವಚ್ಛ ಭಾರತ್ ಆಂದೋಲನ’ ಆರಂಭವಾದಾಗ, ಆಗ ನಗರಾಭಿವೃದ್ಧಿ ಸಚಿವರಾಗಿದ್ದ  ವೆಂಕಯ್ಯ ನಾಯ್ಡು ದೇಶದ ಎಲ್ಲ ಸಂಘ ಸಂಸ್ಥೆಗಳಿಗೆ ತಲುಪಿಸಿದಂತೆ ಮಂಗಳೂರು ರಾಮಕೃಷ್ಣ ಮಠಕ್ಕೂ ಒಂದು ಪತ್ರ ಬರೆದು ಆಂದೋಲನದಲ್ಲಿ  ಕೈ ಜೋಡಿಸುವಂತೆ ಮನವಿ ಮಾಡಿದರು. ಈ ವಿಚಾರವನ್ನು ದೇಶದ ಯಾವ ಸಂಸ್ಥೆಗಳು ಹೇಗೆ ಸ್ವೀಕರಿಸಿವೆಯೋ ಗೊತ್ತಿಲ್ಲ, ಆದರೆ ಅಂದಿನಿಂದ ಇಂದಿನವರೆಗೂ ಇದೊಂದು ತನ್ನ  ಸ್ವಂತ ಜವಾಬ್ದಾರಿ ಎಂಬ ರೀತಿಯಲ್ಲಿ  ಮಠವು ಮಾತ್ರ ಶಿರಸಾ ವಹಿಸಿ ದುಡಿಯುತ್ತಿದೆ. ಮಳೆ ಇರಲಿ, ಸೆಕೆ ಇರಲಿ ಭಾನುವಾರ ಬೆಳಗ್ಗೆ ಏಳು ಗಂಟೆಗೆ ರಾಮಕೃಷ್ಠ ಮಠದ ಕಾವಿಧಾರಿಗಳು ಒಂದಿಷ್ಟು ಯುವಕ ಯುವತಿಯರೊಂದಿಗೆ ಬೀದಿಗಳನ್ನು ಹಸನು ಮಾಡುವ ‘ಸ್ವಚ್ಛ ಮಂಗಳೂರು’ ಕಾರ್ಯಕ್ಕೆ  ಸಜ್ಜಾಗಿರುತ್ತಾರೆ.
Swami Ekagamyananda cleanig street in Magalore

ನಾಲ್ಕು ದಿನ ಮೊದಲು ನಿರ್ದಿಷ್ಟ ವಠಾರದ ಶಾಲೆ ಅಥವಾ ಸಂಘ ಸಂಸ್ಥೆಗಳಿಗೆ ತೆರಳಿ ಮಠದ ವತಿಯಿಂದ ಮಾಹಿತಿ ಕೊಡಲಾಗುತ್ತದೆ. ಆಮಂತ್ರಣ ಹಾಗೂ ದೂರವಾಣಿ ಕರೆಗಳ ಮೂಲಕ ಜನರನ್ನು ಸೇರಿಸಿ, ಭಾನುವಾರ ಬೆಳಗ್ಗೆ  7.15ಕ್ಕೆ ಮಠದ ವಾಹನ ಆ ಜಾಗಕ್ಕೆ ಬಂದಿರುತ್ತದೆ. ಕಸಬರಿಗೆ ಬುಟ್ಟಿ ಗಳೊಂದಿಗೆ ಸನ್ಯಾಸಿಗಳು ಮಠದ ಒಂದಿಷ್ಟು  ಒಡನಾಡಿಗಳು ಇಳಿಯುತ್ತಾರೆ. ಅಂದಿನ ಸ್ವಚ್ಛತಾ ರೂಪುರೇಶೆಯ ಬಗ್ಗೆ ಚಿಕ್ಕದೊಂದು ಮಾತುಕತೆ ನಡೆಸಿದ ನಂತರ ಟೀ ಶರ್ಟ್, ಗ್ಲೌಸ್ ಧರಿಸಿ ಕಸ ಗುಡಿಸುವ ಕಾಯಕ ಶುರು.
ಯಾರು ಬರಲಿ, ಬಿಡಿಲಿ ರಸ್ತೆಯ ಕಸ ಗುಡಿಸುವ ಕಾರ್ಯದಲ್ಲಿ  ಮಠದ ಒಬ್ಬರು ಸ್ವಾಮೀಜಿ ಮಾತ್ರ ಇದ್ದೇ ಇರುತ್ತಾರೆ.
 ನಾಲ್ಕಾರು ಗಲ್ಲಿಯ ಕಸವನ್ನು , ಕೊಳಚೆಯನ್ನು ಒಂದಿಷ್ಟು  ದೂರು, ದುಮ್ಮಾನದ ಮಾತು ಅಥವಾ ಭಾವನೆ ಇಲ್ಲದೆ ಎತ್ತಿ ವಾಹನಕ್ಕೆ ತುಂಬುತ್ತಾರಲ್ಲದೆ, ಪೇಂಟ್ ಬ್ರೆಶ್‌ನಲ್ಲಿ  ಅಲ್ಲಿನ ಬಸ್ ಶೆಡ್ಡು, ಮಾರ್ಗಸೂಚಿಗಳಿಗೆಲ್ಲ ಬಣ್ಣ  ಬಳಿದು, ಹತ್ತು ಗಂಟೆಯ ತನಕ ಬಂದರು ನಗರಿಯಲ್ಲಿ  ನೂರಾರು ಸ್ವಚ್ಛತಾ ಕಾರ್ಯಕರ್ತರು ಬೀದಿಯಲ್ಲಿ  ಬೆವರಿಳಿಸುತ್ತಾರೆ. ಇವರ ಸ್ವಚ್ಛತಾ ಕಾರ್ಯವನ್ನು ನೋಡುದೇ ಒಂದು ಜೀವನೋತ್ಸಾಹದ ಪುಳಕ. ಸಮಯ ಮುಗಿಯಿತೆಂದರೆ ಒಂದು ನಿಮಿಷವೂ ಅಲ್ಲಿ ನಿಲ್ಲದೆ, ಕಸವನ್ನು  ತಾವು ತಂದ ಪರಿಕರಗಳನ್ನು ವಾಹನಕ್ಕೆ ತುಂಬಿಕೊಂಡು ಅಲ್ಲಿಂದ ಎದ್ದು ಹೊರಟುಬಿಡುತ್ತಾರೆ. ಸೋಮಾರಿಗಳು ರಜಾ ದಿನದಲ್ಲಿ  ಹೆಚ್ಚು ಹೊತ್ತು ಮಲಗಿ ಕಾಲ ಹರಣ ಮಾಡಿದರೆ, ತರಹೇವಾರಿ ಸುಖಕ್ಕಾಗಿ ಪ್ಲಾನ್ ಮಾಡಿದರೆ, ಇವರು ತಮ್ಮ ಭಾನುವಾರಗಳನ್ನು  ಬೀದಿ ಗುಡಿಸುವಲ್ಲಿ  ಕಳೆಯುತ್ತಾರೆ.

 ಇಂಥ ಸ್ವಚ್ಛತಾ ಆಂದೋಲನದ ಮೂರು ವರ್ಷದ ಭಾನುವಾರಗಳು ಆಗಲೇ ಯಶಸ್ವೀಯಾಗಿ ಮುಕ್ತಾಯವಾಗಿ, ಜನರಲ್ಲಿ ಒಂದಿಷ್ಟು ಜಾಗೃತಿಯಲ್ಲಿ ಯಶಸ್ವೀ ಆಗಿದ್ದು, ಇದೀಗ ನಾಲ್ಕನೆ ವರ್ಷದ 35ನೇ ಭಾನುವಾರಕ್ಕೆ ಜೂನ್ 10 ರಂದು ಕಂಕನಾಡಿಯ ... ಸಜ್ಜಾಗಿದೆ.
ಸ್ವಚ್ಛತೆಯ ರೂವಾರಿ :
ಕಳೆದ ಎರಡು ದಶಕದಿಂದ ರಾಮಕೃಷ್ಣ ಮಠದಲ್ಲಿ  ಸನ್ಯಾಸಿ ಆಗಿರುವ ಏಕಗಮ್ಯಾನಂದ ಸ್ವಾಮೀಜಿ ಮಠದ ಸ್ವಚ್ಛತಾ ಕಾರ್ಯಕ್ರಮದ ಸಂಪೂರ್ಣ ರೂವಾರಿ. ಹಾಗೆಂದು ಅವರು ಎಲ್ಲಿಯೂ ಹೇಳುವುದಿಲ್ಲ. ತಮ್ಮೆಲ್ಲ ಕಾರ್ಯಕ್ಕೂ ಮಠದ ಅಧ್ಯಕ್ಷರಾದ ಜಿತ ಕಾಮಾನಂದ ಜೀ ಅವರಿಂದಲೇ ಪ್ರೇರಣೆ ಪಡೆದು ಕಾರ್ಯಶೀಲರಾಗುವ ಇವರೆಲ್ಲರ ದೇಹದ ಕಣ ಕಣದಲ್ಲೂ ‘ಧೀರ ಸನ್ಯಾಸಿ’ ವಿವೇಕಾನಂದರ ಪ್ರೇರಣೆ ದ್ದು ಕಾಣುತ್ತದೆ. ಆ ಮೊದಲು ಮಠದ ಕೇಡರ್‌ನಲ್ಲಿ  ಬ್ರಹ್ಮಚಾರಿಯಾಗಿ ಆತ್ಮ ರೂಪ ಚೈತನ್ಯರೆಂದು ಗುರುತಿಸಿಕೊಂಡಿದ್ದ ಅವರು, ನಾಲ್ಕು ವರ್ಷ ಹಿಂದೆ ಸನ್ಯಾಸ ದೀಕ್ಷೆ ಪಡೆದು ಏಕಗಮ್ಯಾನಂದ ರೆಂದು ಹೆಸರು ಪಡೆಯುವ ಹೊತ್ತಿಗೆ ಇವರು ಸ್ವಚ್ಛತಾ ದೀಕ್ಷೆಯನ್ನೂ ಪಡೆದಿರುವಂತೆ ತೋರುತ್ತದೆ. ಈ ತನಕ ನಡೆದ ಸುಮಾರು 150ಕ್ಕೂ ಹೆಚ್ಚು ‘ಸ್ವಚ್ಛ ಮಂಗಳೂರು’ ಕಾರ್ಯಕ್ರಮದ ಸಂಘಟನೆಯ ಎ ಟು ಝಡ್ ಎಲ್ಲವೂ ಇವರ ಹೊಣೆಗಾರಿಕೆಯಲ್ಲೇ ನಡೆದಿದೆ. ಎಲ್ಲರ ಜತೆಗೆ ಮತ್ತು ಯಾರೂ ಇಲ್ಲದ ಸಂದರ್ಭ ರಸ್ತೆಯಲ್ಲಿ  ಏಕಾಂಗಿಯಾಗಿಯೂ ಕಸ ಗುಡಿಸುವುದರಿಂದ ಹಿಡಿದು, ಜನರನ್ನು  ಸಂಘಟಿಸುವುದು, ಆರ್ಥಿಕ ಸಂಪನ್ಮೂಲ ಹೊಂದಾಣಿಕೆ, ಯುವಕರಲ್ಲಿ  ಸ್ವಚ್ಛತೆಯ ಪ್ರೇರಣೆಯ ನುಡಿ, ಜತೆಗೆ ಸ್ಥಳೀಯ  ಉದ್ಯಮಿಗಳು, ಶಾಸಕರು, ಸಂಸದರನ್ನೆಲ್ಲ ಒಳಗೊಂಡು ಕಾರ್ಯಕ್ರಮ ಸಂಘಟಿಸಿದ್ದಾರೆ. ದಣಿವಿಲ್ಲದೆ ‘ಸ್ವಚ್ಛ ಮಂಗಳೂರಿಗಾಗಿ’ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಟ್ರಾಲ್ ಆದ ವೀಡಿಯೋ
ಇವರ ಸ್ವಚ್ಛ ಮಂಗಳೂರು ಎಲ್ಲೆಡೆ ತಿಳಿದಿದ್ದು, ಮಂಗಳೂರಿನಲ್ಲಿ ವಿಕ ಸೇರಿದಂತೆ ಬಹುತೇಕ ಮಾಧ್ಯಮಗಳು ಪ್ರಚಾರ ನೀಡಿವೆ. ಆರು ತಿಂಗಳ ಹಿಂದೆ ತಾಯಿಯೊಬ್ಬಳು ತನ್ನ ಎಳೆಯ ಶಿಶುವನ್ನು ಕಟ್ಟಿಕೊಂಡು ಸ್ವಚ್ಛತಾ ಕೆಲಸದಲ್ಲಿ  ಭಾಗವಹಿಸಿದ್ದ  ವೀಡಿಯೋ  ಜಾಲತಾಣದಲ್ಲಿ ವೈರಲ್ ಆಗಿ, ದೇಶ ವುದೇಶದ ಲಕ್ಷಾಂತರ ವ್ಯಕ್ತಿಗಳು ಇದರಿಂದ ಪ್ರೇರಣೆ ಪಡೆದಿದ್ದರು. ಒಬ್ಬರಿಂದ ಒಬ್ಬರಿಗೆ ಶೇರ್ ಆಗಿ.. ಹೀಗೆ ಇದನ್ನು ಟ್ವಟ್ಟರ್‌ನಲ್ಲಿ  ಶೇರ್ ಮಾಡಿದವರಲ್ಲಿ  ಕೇಂದ್ರದ ಸಚಿವರುಗಳು, ದೇಶ ವಿದೇಶದ ಉದ್ಯಮಿಗಳು ಸ್ವಚ್ಛತೆಯ ಸ್ಪರಿಟ್‌ನ್ನು ಕೊಂಡಾಡಿದ್ದರು.
ಸ್ವಚ್ಛತೆ ವಿಚಾರದಲ್ಲಿ ಯಾವ ಆಲೋಚನೆಯನ್ನೂ , ಸಲಹೆಯನ್ನು  ಏಕಗಮ್ಯಾನಂದಜೀ ವೇಸ್ಟ್ ಮಾಡುವುದಿಲ್ಲ ಎಂಬುದಕ್ಕೆ, ಒಂದು ವರ್ಷದ ಹಿಂದೆ ದಾವಣಗೆರೆಯಲ್ಲಿ  ವಿಜಯ ಕರ್ನಾಟಕ ಹಮ್ಮಿಕೊಂಡಿದ್ದ  ಸ್ವಚ್ಛ ಭಾರತ್ ಆಂದೋಲನವೂ ಒಂದು ಸಾಕ್ಷಿ. ಕೋರಿಕೆಯ ಮೇರೆಗೆ ಮಂಗಳೂರಿನಿಂದ ದಾವಣಗೆರೆಗೂ ಬಂದು ಇಲ್ಲಿನ ಸೋಮೇಶ್ವರ ವಿದ್ಯಾಲಯದಲ್ಲಿ  ವಿಕ ‘ಸ್ವಚ್ಛ ಭಾರತ್ ಆಂದೋಲ’ನದಲ್ಲಿ  ಭಾಗವಹಿಸಿ ಇಲ್ಲಿನ ಸಾವಿರಾರು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು. ತಮ್ಮ  ಕಾರ್ಯಾಚರಣೆಯ ಬಗ್ಗೆ  ಡೆಮೋವನ್ನೂ ಕೊಟ್ಟು , ಇನ್ನೂ ಏನಾದರೂ ಇದ್ದರೆ ಕರೆಯಿರಿ ಎಂದು ಹೇಳಿ ಹೋಗಿದ್ದಾರೆ.
ಸ್ವಚ್ಛ ಮಂಗಳೂರು ಎಂಬುದು ಒಂದು ಭಾಷಣ ಕೇಂದ್ರಿತ ಕಾರ್ಯಕ್ರಮ ಅಲ್ಲ.  ಯಾರಾದರೂ ನಮ್ಮ ಮನೆಯ ಅಂಗಳ, ರಸ್ತೆಯನ್ನು ಫಲಾಪೇಕ್ಷೆ ಇಲ್ಲದೆ ಗುಡುಸಿ ಸ್ವಚ್ಛ ಮಾಡಿ ಹೋದರೆ ನಮಗೆ ಏನನ್ನಿಸುತ್ತದೆ. ಕಸ ಹಾಕಿದ್ದಕ್ಕಾಗಿ ನಮಗೇ ನಾವು ಮುಜುಗರ ಪಟ್ಟುಕೊಳ್ಳುತ್ತವೆ ಅಲ್ಲವೇ ? ಮನೆಯೊಳಗಿನ ಕಸವನ್ನು ತೆಗೆಯಲು ಸಮಯ ಇಲ್ಲದೆ ಉದಾಸೀನ ಮಾಡುವವರಿಗೆ, ಇವರೆಲ್ಲ ಊರೊಳಗಿನ ಕಸ ತೆಗೆಯಲು ಸಮಯ ಹೊಂದಿಸಿಕೊಳ್ಳುವುದಾದರೂ ಹೇಗೆ ಎಂಬ ಅಚ್ಚರಿಯನ್ನೂ ಮೂಡಿಸುತ್ತದೆ. ನಮ್ಮ ಮನೆಯ ಎದುರಿನ ಕಸ ತೆಗೆಯುವ ಮೂಲಕ ‘ಆಂದೋಲನದ’ ಹೆಸರಿನಲ್ಲಿ  ನಮ್ಮ ಸ್ವಾಭಿಮಾನ ಕೆಣಕಿದರು ಎಂದೂ ಕೆಲವರಿಗೆ ಸಿಟ್ಟೂ ಬರುತ್ತದೆ. ಇದೆಲ್ಲ ಸಾಧ್ಯತೆಯ ಮೂಲಕ ಪ್ರತಿಯೊಬ್ಬರೂ ‘ನಾವು ನಮ್ಮ  ಮನೆಯನ್ನು, ಹಾಗೆಯೇ ವಠಾರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು, ಇದು ನಮ್ಮ ಕರ್ತವ್ಯ’ ಎಂಬ ಚ್ಚರಿಕೆಯನ್ನೂ  ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
  -ಸದಾನಂದ ಹೆಗಡೆ

***

Read More