ಈ ಮನೆ ಮಾಲೀಕನದ್ದು ಸರಳ ಜೀವನ ವಿರಳ ಚಿಂತನಕ್ಕೊಂದು ನಿದರ್ಶನ !


ಸದಾನಂದ ಹೆಗಡೆ ದಾವಣಗೆರೆ
ಹೋಬಳಿ ಕೇಂದ್ರವಾದ ಮಾಯಕೊಂಡ ಉಪನಗರದಲ್ಲಿ  ಇವರನ್ನು ’ಕುಮಾರ ಶಾಸ್ತ್ರೀ’ ಎಂದೇ ಜನ ಗುರುತಿಸುತ್ತಾರೆ. ಬಸ್ ನಿಲ್ದಾಣದ ಎದುರು ಓಣಿಯಲ್ಲಿ  ಸುತ್ತಿ ಬಳಸಿ ಹೋದರೆ 110 ವರ್ಷ ಹಳೆಯದಾದ ಊರ ಹೆಂಚಿನ ಚಾಳವೊಂದಿದ್ದು, ಅದರಲ್ಲಿ ಎರಡು ರೂಮಿನ ಬಿಡಾರ ಶಾಸ್ತ್ರಿಗಳ ಮನೆ. ವರ್ಷದ ಹಿಂದೆ ಪತ್ನಿ  ರಾಜಲಕ್ಷ್ಮೀ ಶಾಸ್ತ್ರೀ ವಯೋ ಸಹಜ ಸಮಸ್ಯೆಯಿಂದ ಮೃತ್ಯುವಶವಾದರು. ಆಮೇಲೆ ಎಂಎಸ್‌ಕೆ ಶಾಸ್ತ್ರೀ ಏಕಾಂಗಿ.
ಪಕ್ಕದಲ್ಲಿ  ಇವರ ತಮ್ಮನ ಕುಟುಂಬ ಇದ್ದು, ಅವರನ್ನೂ ಅವಲಂಬಿಸದೆ ಸ್ವಯಂ ಪಾಕಿಯಾಗಿ ಬದುಕುತ್ತಿದ್ದಾರೆ. ಇವರ ಪ್ರತಿ ದಿನದ ಊಟದ ಮೆನು ಅನ್ನ, ಮೊಸರು, ಉಪ್ಪಿನಕಾಯಿ ಅಷ್ಟೆ.
ಪಕ್ಕದಲ್ಲಿ  ಅಜ್ಜನ ಕಾಲದಲ್ಲಿ ಸ್ಥಾಪಿತವಾದ ಮನೆ ದೇವರ ಗುಡಿ ಇದೆ, ಕಾಶಿಯಿಂದಲೇ ತಂದು ಸ್ಥಾಪಿಸಿದ ವಿಶ್ವನಾಥ ಗುಡಿ. ಬೆಳಗ್ಗೆ ದೇವರ ಪೂಜೆ ಮುಗಿಸಿ, ಊಟವನ್ನೂ ಮಾಡಿ ಹತ್ತು ಗಂಟೆಗೆ ರೈಲಿನ ಮೂಲಕ ದಾವಣಗೆರೆಗೆ ಹೊರಟರೆ, ವಾಪಾಸ್ ಮನೆ ಸೇರುವುದು ರಾತ್ರಿ ಹತ್ತಕ್ಕೇ.
ಹುಟ್ಟು  ಹೋರಾಟಗಾರ ಶಾಸ್ತ್ರೀಗಳಿಗೆ ಈಗ 75ರ ಹರೆಯ. ಇಬ್ಬರು ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪೂರೈಸಿ ಬೆಂಗಳೂರಲ್ಲಿ  ವೃತ್ತಿ ನಿರತರಾಗಿದ್ದು, ಮೂರನೆಯ ಮಗ ಎಂಜಿನಿಯರಿಂಗ್ ಮುಗಿಸಿ, ನೌಕರಿ ತಲಾಶೆಯಲ್ಲಿ ಬೆಂಗಳೂರಲ್ಲಿ ಸಹೋದರಿಯರೊಂದಿಗೆ ಇದ್ದಾನೆ.
ಮಾಯಕೊಂಡದಲ್ಲಿ  ಶಾಸ್ತ್ರೀಗಳ ಮನೆ.


ಹದಿನೈದು ದಿನಕ್ಕೊಮ್ಮೆ ಬೆಂಗಳೂರಿಗೆ ತಾವೇ ಹೋರಾಡಿ ಸಾಕಾರಗೊಳಿಸಿದ ರೈಲಿನಲ್ಲಿ ಬೆಂಗಳೂರಿಗೆ ಹೋಗಿ ಶನಿವಾರ-ಭಾನುವಾರ ಮಕ್ಕಳೊಂದಿಗೆ ಕಳೆದು ಬರುತ್ತಾರೆ. ಇನ್ನೇನು ಮಕ್ಕಳು ಊರಿಗೆ ಬರುವ ಸಾಧ್ಯತೆ ಕಡಿಮೆ ಎಂಬುದು ಈ ಹೊತ್ತಿನಲ್ಲಿ  ಶಾಸ್ತ್ರೀ ಅನಸಿಕೆ. ಸಹೋದರರೆಲ್ಲ ಒಪ್ಪಿದರೆ, ಪಕ್ಕದಲ್ಲಿ ಖಾಲಿ ಇರುವ ಜಾಗವನ್ನೂ ಸೇರಿಸಿ ಒಂದು ಕಲ್ಯಾಣಮಂಟಪ ಕಟ್ಟಿ ಮನೆತನದ ಗುಡಿ ನಿರ್ವಹಣೆಗೆ ಒಂದು ಸಣ್ಣ ಆದಾಯ ಮಾಡಬೇಕು. ಸದ್ಯ 500 ರೂ ಕೊಟ್ಟು  ಗುಡಿಯ ಒಳಕ್ಕೆ ಒಂದು ಟೋನರ್ ಹಾಕಿದ್ದು, ವಿದ್ಯುತ್ ಇರುವಷ್ಟು ಹೊತ್ತು ಅಲ್ಲಿ  ಎಂಎಸ್ ಸುಬ್ಬಲಕ್ಷ್ಮೀ ಹಾಡಿದ ದೇವರ ನಾಮ ಪುನರಾವರ್ತನೆ ಆಗುತ್ತದೆ.
ಹಸಿರು ಶಾಲಿನ ಬ್ರಾಂಡ್ ಶಾಸ್ತ್ರಿಗಳಿಗೆ ಅಪ್ಪನ ಪಾಲಿನ ಆಸ್ತಿಯಾಗಿ ಮಾಯಕೊಂಡ ಸಮೀಪ 2.20 ಎಕರೆ ಭೂಮಿ ಇದ್ದು, ಇಲ್ಲಿ ಈ ಬಾರಿ ಮೆಕ್ಕೆ ಜೋಳವನ್ನು ಕೃಷಿ ಮಾಡುತ್ತಿದ್ದಾರೆ.
ಊರಲ್ಲಿ ಇರುವಾಗ ಕೆಲವೊಮ್ಮೆ  ಹೊಲಕ್ಕೆ ಹೋಗುವುದು ಬಿಟ್ಟರೆ, ಅಲ್ಲಿ ಅವರು ಹೆಚ್ಚು ಗಮನ ಸೆಳೆಯವುದಿಲ್ಲ. ಆದರೆ ವಾರದಲ್ಲಿ ಪ್ರತಿ ದಿನವೂ ಇವರಿಗೆ ದಾವಣಗೆರೆಯಲ್ಲಿ ಕೆಲಸ ಇರುತ್ತದೆ. ದಾವಣಗೆರೆಯಲ್ಲಿ  ಸುತ್ತಾಡುವುದಕ್ಕೆ  ಇವರು ಒಂದು ಸೈಕಲ್ ಇಟ್ಟಿದ್ದು, ರಾತ್ರಿ ರೈಲು ಹತ್ತುವ ಮೊದಲು ಸರಕಾರಿ ನಿರೀಕ್ಷಣಾ ಗೃಹದಲ್ಲಿ ಇಟ್ಟು ಚಾವಿ ಹಾಕಿ ಹೋಗುತ್ತಾರೆ. ಈ ಮೊದಲು ರೈಲ್ವೆ ನಿಲ್ದಾಣದಲ್ಲಿ  ಇವರು ಸೈಕಲ್ ಇಡುತ್ತಿದ್ದರು, ಅಲ್ಲಿ  ಎರಡು ಸೈಕಲ್ ಕಳವು ಆಗಿದ್ದರಿಂದ ಅಲ್ಲಿ ಬಿಟ್ಟರು. ಪೊಲೀಸರೊಬ್ಬರ ಸಲಹೆಯ ಮೇರೆಗೆ ಇದೀಗ ಗೆಸ್ಟ್‌ಹೌಸ್‌ನಲ್ಲಿಟ್ಟು ಚಾವಿ ಹಾಕಿ, ತಮ್ಮ  ಆ ದಿನದ ಕಾಯಕ ಮುಗಿಸಿ ಹೊರಡುತ್ತಾರೆ.
ಮಾಯಕೊಂಡ- ದಾವಣಗೆರೆ ಓಡಾಟಕ್ಕೆ ತಿಂಗಳಿಗೆ 160 ರೂ. ಕೊಟ್ಟು ಸೀಸನಲ್ ರೈಲ್ವೆ ಪಾಸ್ ಪಡೆದುಕೊಂಡಿದ್ದಾರೆ. ಪತ್ರಿಕಾ ಪ್ರಕಟಣೆ ಸಿದ್ಧತೆ, ಜರಾಕ್ಸ್ ಮತ್ತಿತರ ಕಾರ್ಯಕ್ಕೆ ತಿಂಗಳಿಗೆ 15,000 ರೂ.ಗಳಷ್ಟು ಖರ್ಚು ಇರುತ್ತದೆ. ಅಲ್ಲದೆ ಮನೆಯಲ್ಲಿ  ದಿನವೂ ಅರ್ದ ಲೀಟರ್ ಹಾಲು ಪಡೆಯುವ ಜತೆಗೆ, ದಾವಣಗೆರೆಯಿಂದ ಹೋಗುವಾಗ ಅರ್ದ ಲೀಟರ್ ಮೊಸರು ಕೊಂಡು ಹೋಗುತ್ತಾರೆ.
ತಾವು ಕಾಯಿಸಿದ ಹಾಲಿನಲ್ಲಿ ಪಕ್ಕದಲ್ಲೇ ಇರುವ ತನಗಿಂತ ವಯಸ್ಸಾದ ಹಿರಿಯ ಮಹಿಳೆಗೆ ಅದರಲ್ಲಿ ಅರ್ಧ ಕೊಡುವುದು ಇವರ ರೂಢಿ. ತಮ್ಮನೊಂದಿಗೆ ಅಷ್ಟೇನೂ ಇವರಿಗೆ ಮಾತಿಲ್ಲ. ತಿಂಗಳಿಗೆ 2500 ರೂ. ತನಕ ಖರ್ಚು ಇವರಿಗಿದೆ.
ಆ ವರ್ಷದ ಆದಾಯದಲ್ಲಿ  ತಮ್ಮ ಖರ್ಚಿಗೆ ಏನಾದರೂ ಕೊರತೆ ಆದರೆ ಮಕ್ಕಳು ಸ್ವಲ್ಪ ಕೊಡುತ್ತಾರೆ. ಇಬ್ಬರು ಹೆಣ್ಣು ಮಕ್ಕಳು ಉತ್ತಮ ಕೆಲಸದಲ್ಲಿ ಇದ್ದು, ಅವರು ಕೊಡುತ್ತಾರೆ. ಸುಮಾರು 40 ವರ್ಷಗಳ ಇವರ ಸಾರ್ವಜನಿಕ ಜೀವನಕ್ಕೆ ಇವರು ಯಾವುದೇ ಸಂಬಳ, ಗಿಂಬಳ ಪಡೆದಿಲ್ಲ ಎಂಬುದಕ್ಕೆ ಮನೆಯೇ ಇವರ ನಿದರ್ಶನ.
ಮೂರು ಕೊಠಡಿಗಳ ಇವರ ಮನೆಯ ತುಂಬ ಎಲ್ಲವೂ ಅಸ್ತವ್ಯಸ್ತ ! ಅಲ್ಲಲ್ಲಿ ಚೆಲ್ಲಾಪಿಲ್ಲಿಯಾದ  ದಿನಪತ್ರಿಕೆಗಳು, ಗೋಡೆ ಮೇಲೆ 150ಕ್ಕೂ ಮಿಗಿಲಾದ ಸಾರ್ವಜನಿಕ ವ್ಯಕ್ತಿಗಳ ದೂರವಾಣಿ ನಂಬರ್. ಚಾಕ್‌ನಲ್ಲಿ ಬರೆದುಕೊಂಡಿರುವ ದೂರವಾಣಿ ಸಂಖ್ಯೆಯಲ್ಲಿ ಹೆಚ್ಚಿನ ಯಾವುದಕ್ಕೂ ಹೆಸರಿಲ್ಲದ ಕಾರಣ, ಶಾಸ್ತ್ರೀ ಮಾತ್ರ ಅದನ್ನು ಗುರುತಿಸಬಲ್ಲರು.
 ಹೆಣ್ಣಿಲ್ಲದ ಮನೆಯನ್ನು ಪ್ರತಿ ದಿನ ಸ್ವಚ್ಛ ಮಾಡುವುದು ಇವರಿಗೆ ಸಾಧ್ಯವಾಗುತ್ತಿಲ್ಲ. ಇಲ್ಯಾಕೆ ಇರುತ್ತೀರಿ , ಬನ್ನಿ ಬೆಂಗಳೂರಿಗೆ ಎಂದು ಮಕ್ಕಳು ಕರೆದರೆ, ದಾವಣಗೆರೆಯಲ್ಲಿ ಇನ್ನೂ ಅದೆಷ್ಟೋ ಕೆಲಸ ಇದ್ದು, ಅದು ಮುಗಿದ ಮೇಲೆ ಬರೋಣ ಎಂದು ಮುಂದೂಡುತ್ತಾರೆ. ಇವರಿಗೆ ಬೆಂಗಳೂರಿಗೆ ಹೋಗಿ ಇರಲು ಮನಸ್ಸಿಲ್ಲ !

ಶಾಸ್ತ್ರೀ ಹೋರಾಟ:

ಈ ದೇಶದ ರೈತರು ಶೋಷಿತರಾಗಿದ್ದಾರೆ. ಅವರ ಪರವಾಗಿ ಒಂದಿಷ್ಟು ಸುಶಿಕ್ಷಿತ ರೈತರು ಹೋರಾಡಬೇಕು ಎಂದು ಗಾಂೀಜಿ ಮಾತಿನಿಂದ ಪ್ರಭಾವಿತರಾಗಿ ಎಂಎಸ್‌ಕೆ ಶಾಸ್ತ್ರೀ ರೈತ ನಾಯಕರಾದರು.
ಹೊನ್ನಾಳಿಯ ರೈತ ನಾಯಕ ದಿ.ಎಚ್.ಎಸ್. ರುದ್ರಪ್ಪ ಇವರಿಗೆ ಹಸಿರು ಶಾಲಿನ ದೀಕ್ಷೆ ಕೊಟ್ಟರು. ಅಲ್ಲಿಂದಲೂ ರೈತರಿಗಾಗಿ ಹೋರಾಡುತ್ತ ಬಂದಿದ್ದಾರೆ.
ಅಪ್ಪನ ಕಾಲದ ಹಳೆಯ ಮನೆಯನ್ನೇ ಸಹೋದರರೊಂದಿಗೆ ಹಂಚಿಕೊಂಡು ಚೂರು ಪಾರು ರಿಪೇರಿ ಮಾಡಿಸಿ ಜೀವನ ಸವೆಸುತ್ತಿದ್ದಾರೆ. ಆದರೆ ದಾವಣಗೆರೆ ಪ್ರತ್ಯೇಕ ಜಿಲ್ಲೆ, ಇಲ್ಲಿನ ವಿಶ್ವ ವಿದ್ಯಾಲಯ, ಬೆಂಗಳೂರು-ದಾವಣಗೆರೆ ಇಂಟರ್ ಸಿಟಿ ರೈಲು ಹೋರಾಟದಲ್ಲಿ  ಶಾಸ್ತ್ರಿಯದ್ದು  ಪ್ರಧಾನ ಪಾತ್ರ.
1993ರಲ್ಲಿ  14 ದಿನ ಇಲ್ಲಿನ ಹೆದ್ದಾರಿ ಬಂದ್ ಮಾಡಿ, ಆಗಿನ ಪ್ರಧಾನಿ ಪಿವಿಎನ್ ಅವರನ್ನು ಭೇಟಿಯಾಗಿ ರಸಗೊಬ್ಬರ ಸಬ್ಸಿಡಿ ತಂದರು. ಹಸಿರು ಶಾಲನ್ನು ಎಂದಿಗೂ ಅಪವಿತ್ರಗೊಳಿಸಿಲ್ಲ. ಹೋರಾಟ ಇವರ ವ್ಯಸನ. ಸಾರ್ವಜನಿಕ ಹಣ ಹೋಗಲಿ, ತಮ್ಮದೇ ಆದಾಯ ಹೊಂದಿಸಿಯೂ ಒಂದು ಮನೆ ಕಟ್ಟಿಕೊಳ್ಳುವುದು ಸಾಧ್ಯವಾಗಿಲ್ಲ. ಸರಳತೆಯ ಇವರಲ್ಲಿರುವಂಥ ಹಟವೂ ವಿರಳ.

Related Posts
Previous
« Prev Post