ಹಲೋ ಒನ್‌ ಟೂತ್ರಿ ಮೈಕ್‌ ಟೆಸ್ಟಿಂಗ್‌..

ಹಲೋ ಒನ್‌ ಟೂತ್ರಿ ಮೈಕ್‌ ಟೆಸ್ಟಿಂಗ್‌..

LVK article published on 17/2/2019  
ಸದಾನಂದ ಹೆಗಡೆ
ಕಾಶಿನಾಥ್‌  ಸಿನಿಮಾ ಒಂದರಲ್ಲಿ   ಮೈಕ್‌  ಅವಾಂತರವನ್ನು  ತುಂಬ ಸುಂದರವಾಗಿ ತೋರಿಸುತ್ತಾರೆ. ಮೈಕ್‌ ಎದುರು ನಿಂತು ‘ನೀನು’ ಎಂದು ಹೇಳಿದರೆ, ಮೈಕ್‌ನಲ್ಲಿ  ‘ನಿನ್ನ್‌ ಅಪ್ಪ ’ ಎಂದು ವಾಪಸ್‌ ಬರುತ್ತದೆ. ಮೈಕ್‌ನಲ್ಲಿ  ಏನು ಹೇಳಿದರೂ ಧ್ವನಿವರ್ಧಕದಲ್ಲಿ ಅದರ ವಿರುದ್ಧವೇ ಕೇಳುತ್ತದೆ. ಸ್ಟ್ಯಾಂಡಿ ಮೈಕ್‌ ಬಿಚ್ಚಿ  ಕೈಗೆತ್ತಿಕೊಳ್ಳಲು ಹೋದಾಗ ಇಡೀ ಕಂಬವೇ ಉರುಳಿ ಬಿದ್ದು ಹೀರೋ ನಗೆಪಾಟಿಲಿಗೀಡಾಗುತ್ತಾರೆ. ಇದು ಕೇವಲ ಆ ಸಿನಿಮಾದ ದೃಶ್ಯ ಮಾತ್ರವಲ್ಲ. 
ಭಾಷಣ ಕಾರ್ಯಕ್ರಮ  ಹೇಗೋ ನಡೆದು ಗೋಗುತ್ತದೆ. ಆದರೆ ಒಳಗಿನ ಸ್ವರ ತೆಗೆದು ವಿಭಿನ್ನ ಪಿಚ್‌ಗಳಲ್ಲಿ  ಧ್ವನಿಯ ಪರಿಣಾಮ ನಿರೀಕ್ಷಿಸುವ ಸಂಗೀತಗಾರರಿಗೆ ಬಹುದೊಡ್ಡ ಸವಾಲು. ಕೆಲವರು ಮೈಕ್‌ ಕೈ ಕೊಟ್ಟಾಗ ಸಹನೆ ಕಳೆದುಕೊಂಡು ಏನæೂೕ ಒಂದಿಷ್ಟು  ಹಾಡಿ ಹೋಗುತ್ತಾರೆ. ವೇದಿಕೆಗೆ ಬಂದು, ತಾವು ತಂದ ಹಾರ್ಮೋನಿಯಂನಲ್ಲಿ  ಶ್ರುತಿ ಹೊಂದಿಸಿ, ತಬಲಾ, ಕೀ ಬೋರ್ಡ್‌, ರಿದಂ ಪ್ಯಾಡ್‌ನ ವೈಯರ್‌ ಸಂಪರ್ಕ ಸರಿ ಇದೆಯೇ ಎಂದು ಚೆಕ್‌ ಮಾಡಿ, ಸಮಸ್ಯೆ ಇದ್ದರೆ ಹೇಳಿ ಕೇಳಿ ಮಾಡಿ ಸರಿಪಡಿಸಿಕೊಳ್ಳುವವರು ಕೆಲವರಿದ್ದಾರೆ. ಅಂಥವರಲ್ಲಿ ‘ಘಮ ಘಮ ಗಮ್ಮಾಡಿಸ್ತಾವ ಮಲ್ಲಿಗೀ ’ ಖ್ಯಾತಿಯ ಸಂಗೀತಾ ಕಟ್ಟಿ  ಕೂಡ ಒಬ್ಬರು.
ಇತ್ತೀಚೆಗೆ ದಾವಣಗೆರೆಯಲ್ಲಿ  ಏರ್ಪಡಿಸಿದ್ದ  ಸಿರಿಧಾನ್ಯ ಪ್ರಚಾರ ಕಾರ್ಯಕ್ರಮದಲ್ಲಿ  ಹೀಗೆಯೇ ಆಯಿತು. ಆರಂಭಿಕ ತಡವಡ ಬಳಿಕ ‘ತಂದೆ ನೀನು ತಾಯಿ ನೀನು ’ ವಚನವನ್ನು ಹಾಡುತ್ತಲೇ ‘ಮೈಕ್‌ ಟೆಸ್ಟ್‌’ ಗೇ ಬರೋಬ್ಬರಿ 25 ನಿಮಿಷ ಹಿಡಿಯಿತು. !  ಪಲ್ಲವಿ ಮಧ್ಯೆ ‘ಔಟ್‌ ಪುಟ್‌ ಸರಿಮಾಡಿ’ ಎಂದು, ಚರಣದ ಕೊನೆಗೆ ‘ ಹಿಂದಿನ ಸ್ಪೀಕರ್‌ಗೆ ವಾಲ್ಯೂಮ್‌ ಕೊಡಿ..’ ಇನ್ನೊಮ್ಮೆ.. ಮಾನೀಟರ್‌ ಸೌಂಡ್‌ ಕಡಿಮೆ ಮಾಡ್ರಿ.. ಎನ್ನುತ್ತಲೇ ಹಾಡಿದರು. ನಡುವೆ ಸಹನೆ ಕಳೆದುಕೊಳ್ಳುವ ಪ್ರೇಕ್ಷಕರಿಗೆ ‘ರೆಕಾರ್ಡಿಂಗ್‌ ಬ್ಯಾರೆ, ಸ್ಟೇಜ್‌ ಕಾರ್ಯಕ್ರಮದ ಸಮಸ್ಯೆ ಬ್ಯಾರೆæ’ ಎಂದು  ಮನವಿ ಮಾಡಿದರು. 
ಹಾಡುಗಳ  ಕಾರ್ಯಕ್ರಮಕ್ಕೂ  ಮೈಕ್‌ ಸಮಸ್ಯೆಗೂ ಅವಿನಾಭಾವ ಸಂಬಂಧ ಎಂಬಂತಿದೆ. ಯಂತ್ರದ ವ್ಯವಸ್ಥೆ ಸರಿ ಇದ್ದರೆ ಮೈಕ್‌ ತಂತ್ರಜ್ಞರು ಸರಿ ಇರುವುದಿಲ್ಲ. ಮೈಕ್‌ ಸೆಟ್‌ ಮಾಡಿ ತಂತ್ರಜ್ಞರು ಎಲ್ಲೋ ಕುಳಿತು ಮೊಬೈಲ್‌ ನೋಡುತ್ತಿರುತ್ತಾರೆ. ಎಲ್ಲ ಕಡೆ ಬಟನ್‌ಗಳೇ ಆನ್‌ ಆಗಿರುವುದಿಲ್ಲ. ರಸಮಂಜರಿಯಲ್ಲಿ  ನಿರೂಪಕರಿಗೆ ಕೊಡುವ  ಕಾರ್ಡ್‌ ಲೆಸ್‌ ಮೈಕ್‌ಗಳಿಗೆ  ಮೊಡೆಮ್‌ ಸಿಗ್ನಲ್‌ ಸಮಸ್ಯೆ ಅಥವಾ ಬ್ಯಾಟರಿ ಸೆಲ್‌  ರೋಗಗ್ರಸ್ಥ. ಇನ್ನು ಹೊತ್ತು ಗೊತ್ತಿಲ್ಲದ ಹಮ್ಮಿಂಗ್‌ ಎಂಬುದು  ಮೈಕ್‌ ಯಂತ್ರ ಹುಟ್ಟಿದಾಗಿನಿಂದ ಇರುವ ಸಮಸ್ಯೆಇರಬೇಕು. ಅದೇನೋ ಸ್ವಾರಸ್ಯ ಹೇಳುವಾಗ ಕೊಯ್‌ಂ  ಎಂದು.. ಕುರುಕ್ಷೇತ್ರದಲ್ಲಿ  ಅಶ್ವತ್ಥಾಮ ಹತ .. ಎನ್ನುತ್ತಲೇ ಶ್ರೀ ಕೃಷ್ಣನ ಪಾಂಚಜನ್ಯ ಮೊಳಗುವ ರೀತಿಯ ಹಮ್ಮಿಂಗ್‌ ! ಆಗಾಗ ಕೇಳುಗರ ಪ್ರಾಣವನ್ನೇ ತೆಗೆಯುತ್ತದೆ.
  ಕೆಲವೆಡೆ ಸಭಾ ಭವನಗಳು ಧ್ವನಿ ನಿಯಮಕ್ಕೆ ಹೊಂದಿಕೊಳ್ಳುವುದಿಲ್ಲ.  ಮೈಕ್‌ ಸರಿ ಇದ್ದರೆ, ಸ್ಪೀಕರ್‌ ಸರಿ ಇರುವುದಿಲ್ಲ, ಎರಡೂ ಸರಿ ಇದ್ದರೆ, ಜೋಡಣೆಯ ವೈರ್‌ ಸಾಮರ್ಥ್ಯ‌ ಸಾಕಷ್ಟು ಇರುವುದಿಲ್ಲ. ಮಾರುಕಟ್ಟೆಗೆ ಒಂದಾದ ನಂತರ ಇನ್ನೊಂದು ಆವೃತ್ತಿಯ ಸುಸಜ್ಜಿತ ಮ್ಯೂಸಿಕ್‌ ಸಿಸ್ಟ್‌ಮ್‌ಗಳು ಬರುತ್ತಿದ್ದು, ಅದರ ನಿರ್ವಹಣೆ, ರಿಪೇರಿಗೆ ಇಂಜಿನೀಯರ್‌ಗಳೇ ಸಿಗುವುದಿಲ್ಲ.  ಅರ್ಧಮರ್ಧ ಓದಿದವರು ಯಾರದ್ದೋ ಮೈಕ್‌ನಲ್ಲಿ , ಯಾರದ್ದೋ ಸ್ಟೇಜ್‌ ಶೋದ  ಎರವಲು ಸಮಯದಲ್ಲಿ ಮೈಕ್‌ ರಿಪೇರಿ ಕೆಲಸದ  ತರಬೇತಿಯನ್ನು ಪಡೆದುಕೊಳ್ಳುತ್ತಾರೆ !  ವಾಹನ ಚಲಾಯಿಸುವ ಡ್ರೈವರ್‌ಗಳು, ಧ್ವನಿ ವರ್ಧಕ ಇಳಿಸು ಹತ್ತಿಸಿ ಮಾಡುವ ಕಾರ್ಮಿಕರು ಸಭಾ ಕಾರ್ಯಕ್ರಮ ಶುರುವಾಗುತ್ತಲೇ ಮೈಕ್‌ ಮಿಕ್ಸರ್‌ ಎದುರು ಬಂದು ಕುಳಿತು ಕಸುಬು ಕಲಿಯುತ್ತಾರೆ. ಎಲ್ಲ ಉದ್ಯಮಗಳಂತೆ ಮೈಕ್‌ ಉದ್ಯಮಿಗಳಿಗೆ ಬಂಡವಾಳ ರಿಟರ್ನ್‌ ಪಡೆಯುವುದೇ ಸವಾಲು. ಸಾಗಾಟ ಸಂದರ್ಭ ಯಂತ್ರಗಳು ಕೈ ಕೊಡುತ್ತವೆ. ದೊಡ್ಡ ಮೊತ್ತ ಹೇಳಿದರೆ ಸಂಘಟಕರು ಇನ್ನೊಮ್ಮೆ ಕರೆಯುವುದಿಲ್ಲ.  ಮೈಕ್‌ ಉದ್ಯಮವು ನುರಿತ ಮಾನವ ಸಂಪನ್ಮೂಲದಿಂದ ಬಳಲುತ್ತಿದ್ದು, ಹತ್ತು ಇಪ್ಪತ್ತು ವರ್ಷತಾಲೀಮು ನಡೆಸುವ ಸಂಗೀತಗಾರರಿಗೆ ನಾಲ್ಕಾರು ತಿಂಗಳು ಕೆಲಸಕ್ಕಾಗಿ ಬರುವ ಹಡ್ಡೆ ಹುಡುಗರು ಮೈಕ್‌ ತಂತ್ರಜ್ಞರಾಗಿ ಸಂಭಾಳಿಸಬೇಕಿದೆ.
ಇನ್ನು ಕಾರ್ಪೋರೇಟ್‌ ವ್ಯವಸ್ಥೆಯಲ್ಲಿ ಮೈಕ್‌ ನವರು ತಾವೇ ಕಲಾವಿದರಿಗಿಂತ ದೊಡ್ಡವರು ಎಂದು ಎಂದುಕೊಳ್ಳುತ್ತಾರೆ. ಕಲಾವಿದರಿಗೂ ಮೈಕ್‌ ತಂತ್ರಜ್ಞಾನದ ಅರಿವು ಇರುವುದಿಲ್ಲ.  ಹೀಗಾಗಿ ದೊಡ್ಡ ಕಲಾವಿದರ ಸ್ಟೇಜ್‌ ಸಂಗೀತ ಕಾರ್ಯಕ್ರಮ ಎಂದರೆ, ಮೈಕ್‌ ರಿಪೇರಿ ಶರತ್ತುಗಳು ಅನ್ವಯಿಸುತ್ತವೆ ಎಂದೇ ತಿಳಿದುಕೊಳ್ಳಬೇಕು.

-ಕೋಟ್‌-

ಮೈಕ್‌ ಹುಡುಗರಿಗೆ ಏನೂ ಗೊತ್ತೇ ಇರುವುದಿಲ್ಲ.
ಲೈವ್‌ ಸಂಗೀತ ಕಾರ್ಯಕ್ರಮದಲ್ಲಿ  ಸೌಂಡ್‌ ಇಂಜಿನೀಯರ್‌ ಹಾಕೋದು ಮಸ್ಟ್‌. ಆದರೆ ಹಾಗಾಗುತ್ತಿಲ್ಲ. ಸೌಂಡ್‌ ಸಿಸ್ಟ ಮ್‌ ಉದ್ಯಮಿಗಳು ಸೂಕ್ತ ತಂತ್ರಜ್ಞರನ್ನು  ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ. ಬಟನ್‌ ತಿರುಗಿಸುವ ಹುಡುಗರಿಗೆ ಏನೂ ಅಂದ್ರೆ ಏನೂ ಗೊತ್ತೇ ಇರುವುದಿಲ್ಲ.  ಇದೆಲ್ಲ  ಸಮಸ್ಯೆ ಬೇಡ ಎಂದು ಕೆಲವು ಜಾಣ ಹಾಡುಗಾರರು ಟ್ರ್ಯಾಕ್‌ ಹಾಕಿಕೊಂಡು ಪ್ರೇಕ್ಷಕರ ಎದುರು ಹಾಡಿದಂತೆ ಮಾಡುವ ತಪ್ಪು ಮಾರ್ಗಕ್ಕೂ ಇಳಿಯುತ್ತಿದ್ದಾರೆ.
ಈ ಸಮಸ್ಯೆಯನ್ನು  ಎಸ್‌ಪಿ ಬಾಲಸುಬ್ರಹ್ಮಣ್ಯಂ ತುಂಬ ಜಾಣತನದಿಂದ ನಿರ್ವಹಿಸುತ್ತಾರೆ. ಇತ್ತೀಚೆಗೆ ಮನ್ನಾಡೆ ಸಂಬಂಧಿಸಿದ ಕಾರ್ಯಕ್ರಮ ಒಂದರಲ್ಲಿ  ಮಾತಿನ ನಡುವೆ ಹಾಡೊಂದನ್ನು ಹಾಡಿ ತೋರಿಸಲು ನಿಂತಾಗ ಮೈಕ್‌ ಸರಿಹೊಂದಲಿಲ್ಲ. ಹಾಡೋದನ್ನು  ನಿಲ್ಲಿಸಿದ ಎಸ್‌ಪಿಬಿ, ಮೈಕ್‌ ಹುಡುಗರಿಗೆ ‘ನೋಡಪ್ಪ  ಇಕ್ಯು ತುಸು ಜಾಸ್ತಿ ಮಾಡು, ಬಾಸ್‌ ಕಡಿಮೆ ಮಾಡು’’ ಎಂದು ಹೇಳಿ ಸರಿ ಮಾಡಿಸಿಕೊಂಡು ಮತ್ತೆ ಮುಂದು ವರಿಸಿದರು. ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.
***



Read More

ಕತೆ- ಅವನು

ಕತೆ- ಅವನು

 Story by - sadananda Hegde
 ಬೂದಿ ಬಣ್ಣದ  ಇಕೊ ಸ್ಪೋರ್ಟ್ ಕಾರಿನಲ್ಲಿ  ಕೆಂಟೋನ್ಮ್ಮೆಂಟ್ ಪ್ರದೇಶದ ರಸ್ತೆಯಲ್ಲಿ  ಹೋಗುತ್ತಿದ್ದ ಸದೆಗುಡ್ಡೆ ರಾಮಚಂದ್ರನಿಗೆ  ಹುಲ್ಲುಗಾವಲಿನಲ್ಲಿ  ಜಿಂಕೆ ಬೇಟೆಗೆ ಓಡುವ ಚಿರತೆಗಳನ್ನು ನೋಡಿದಾಗಲೆಲ್ಲ  ತಾನು ಮೊದಲು ಓಡಿಸುತ್ತಿದ್ದ  ಬಜಾಜ್ ಕಬ್ ಸ್ಕೂಟರ್ ನೆನಪಾಗುತ್ತದೆ. ಒಂದೀಡಿ ಕುಟುಂಬದ ಸಂಕೇತದಂತಿರುವ ಸ್ಕೂಟರ್ಗೂ ರೋಷಕ್ಕೆ  ಇನ್ನೊಂದು ಹೆಸರಾಗಿರುವ ಚಿರತೆಗಳಿಗೂ ಎಲ್ಲಿದೆಲ್ಲಿಯ ಸಂಬಂಧಸ್ಕೂಟರ್ ಹಾಗೂ ಚಿರತೆಯ ಹೋಲಿಕೆಯಲ್ಲಿ   ಹೆಸರಾಗಲಿ, ವೇಗವಾಗಲಿ ಯಾವ ಲೆಕ್ಕಕ್ಕೂ  ಹೊಂದಿಕೆಯಾಗುವುದಿಲ್ಲ. ಆದರೂ ಸಂದರ್ಭ ಬಜಾಜ್ ಕಬ್ ನೆನಪು ಬರುವುದಕ್ಕೆ  ಕಾರಣವಿತ್ತುಕಾರಿನಲ್ಲಿ  ಸ್ಟಿಯರಿಂಗ್ ಎಡಕ್ಕೆ ಇದ್ದ  ಚಿಕ್ಕ  ಟೀವಿ ಸ್ಕ್ರೀನ್ ವೈಲ್ಡ್ ಲೈಫ್ ಚಾನೆಲ್ಲ್ಲಿ  ಕಂಡ ಚಿರತೆ ಕುಟುಂಬ ಹಳೆಯ ನೆನಪು ಮೆಲುಕಿಗೆ ಕಾರಣವಾಯಿತು. ಬೇಸಗೆಯ ದಿನದಲ್ಲಿ  ಮಧ್ಯ ಪ್ರದೇಶದ ಕುನೊ ವನ್ಯ ಜೀವಿ ಕುರುಚಲು ಕಾಡಿನಲ್ಲಿ   ಚಿರತೆ ಕುಟುಂಬದ ಕತೆ. ಅವಿತು ನಿಲ್ಲುವ ಮರಿಗಳು, ಬೇಟೆಯನ್ನು ಕಲಿಸುವ ತಾಯಿ. ತುಸುಹೊತ್ತಿನಲ್ಲಿ  ಬೆಳೆದ ಮರಿಗಳು ಕುಟುಂಬ ಬಿಟ್ಟು  ಒಂದೊಂದಾಗಿ ತಮ್ಮ  ಜೀವನದ ಹಾದಿ  ಹಿಡಿದು ಪಕ್ಕದ ಗುಡ್ಡ  ಬೆಟ್ಟಗಳಿಗೆ ಹೋಗಿ ಸೆಟ್ ಆಗುವ ಕತೆ ಅದು. ವನ್ಯ ಜೀವಿ ಚಾನೆಲ್ಗಳ ಇನ್ನೊಂದು ಖುಷಿ ಎಂದರೆ, ಅಲ್ಲಿ ವಿಪರೀತ ಮಾತು, ಹಿನ್ನೆಲೆ ಸಂಗೀತ ಇರುವುದಿಲ್ಲಕೆಂಟೋನ್ಮೆಂಟ್ ಸಾಲು ಮರಗಳು ಕಿಟಕಿ ಗಾಜಿನಲ್ಲಿ  ಒಂದಾದ ನಂತರ ಇನ್ನೊಂದು ಕಳೆದು ಹೋಗುತ್ತಿದ್ದವು.
  ಅಟೊ ಕಂಪೆನಿಯ ಡಿಸೈನರ್ಗಳು ಬೈಕ್ಗಳನ್ನು, ಕಾರುಗಳನ್ನು  ಸಿದ್ಧಪಡಿಸುವಾಗ ವೇಗವಾಗಿ ಓಡುವ ಕಾಡು ಪ್ರಾಣಿಗಳ ರೂಪ, ಆಕಾರ ಹಾಗೂ ಹೆಸರನ್ನು  ಇಡುವಲ್ಲಿಯೂ ವಿಶೇಷ ಅರ್ಥ ಇದೆ. ಬೈಕುಗಳ ಹೆಸರು ಕಬ್, ಹೊಂಡಾ ಎಂಬುದಕ್ಕಿಂತ, ವಾಹನಗಳನ್ನು ಪರಾಂಬರಿಸಿ ನೋಡಿದಾಗ ಯಾವುದಾರೂ ಒಂದು ಪ್ರಾಣಿಯ ನೆನಪಾಗುತ್ತದೆ. ಹಿಂದೆ ನಿಜ ರೂಪದ ಕುದುರೆ ಸವಾರಿ ಇದ್ದರೆ, ಇಂದು  ವಾಹನ ರೂಪಿ ಮೃಗ ಸವಾರಿ ಬಾವನೆಯನ್ನು ಮಾರುಕಟ್ಟೆ  ಬಿಂಬಿಸುತ್ತದೆಯೇ ? ಬೈಕ್ಗಳ ಹ್ಯಾಂಡಲ್, ಹೆಡ್ ಲೈಟ್ಗಳು ಕಣ್ಣು, ಕೊಂಬುಗಳ ರೀತಿಯಲ್ಲಿ ಕೋರೈಸುವ ನೋಟ, ಓಟ ಕೀಳುವ ಕಾಲುಗಳ ರೀತಿಯ ವೀಲ್ ಸಪೋರ್ಟ್ಗಳು. ಇನ್ನು ಹಾವು, ಮೊಸಳೆಗಳ ರೀತಿಯ ಸರಿಸ್ರಪಗಳ ರೀತಿಯಲ್ಲಿ  ಚಲಿಸಿ ಬರುವ ಕಾರುಗಳು, ಅವುಗಳ ಹೆಡ್ ಲೈಟನ ಕೋರೈಸುವ ಹುಬ್ಬು.
ಪಕ್ಕದ ಸೀಟ್ನಲ್ಲಿ  ಕುಳಿಯಿದ್ದ  ಡಿವೈಎಸ್ಪಿ ಶೆಟ್ಟರ್ ಚಿರತೆಗಳ ಚಲನ ವಲನದಲ್ಲಿ  ತಲ್ಲೀನರಾಗಿದ್ದರು.
‘‘ಅಪ್ಪಂದಿರ ಕಾಲದಲ್ಲಿ  ಎತ್ತಿನ ಗಾಡಿ ಇಟ್ಟಿದ್ದರೆ, ಮಕ್ಕಳು ಇದೀಗ ಕಾರುಗಳ ಮೂಲಕ ಅದೇ ಎತ್ತರದಲ್ಲಿ  ಚಲಿಸುತ್ತಾರೆ’’ ಎಂದು ಶೆಟ್ಟರ್ ಅವರನ್ನು ಮಾತಿಗೆಳೆದ  ಸದೆಗುಡ್ಡೆಗೆ ಚಿಕ್ಕ  ಟೀವಿಯ ಪರದೆಯಲ್ಲಿನ  ಚಿರತೆ  ಕತೆಯೇನೂ ಆತನ ಚಾಲನಾ ದೃಷ್ಟಿಯಿಂದ ವಿಚಲಿತ ಮಾಡಿರಲಿಲ್ಲ. ಚಾಲನೆ ಸಂದರ್ಬ ತುಸುವೇ ಮಾತಾಡುವ ಆತನಿಗೆ, ಎದುರಿನ ದೃಷ್ಟಿ ಬಿಟ್ಟರೆ ಬೇರೆ ಯಾವುದೂ ಹೆಚ್ಚಾಗಿ ಯಾವತ್ತೂ ಆವರಿಸಿಕೊಂಡಿಲ್ಲ. ಕಾರನ್ನು ತನ್ನ ವಿಸ್ತ್ರತ ದೇಹ ಎಂದು ಭಾವಿಸಿ ನಿಧಾನ ಗತಿಯಲ್ಲೇ ಚಲಾಯಿಸುತ್ತಿದ್ದ. ವರ್ಷ ಒಂದೆರಡು ಕಳೆದರೂ, ಕಾರನ್ನು ಎಲ್ಲಿಯೂ ತಾಗಿಸಿಕೊಂಡು ಬಂದಿರಲಿಲ್ಲ. ಮಿಲಿಟರಿಯವರಿಗಾಗಿ ಸಿದ್ಧಪಡಿಸಿದ ಕೆಂಟೋನ್ಮೆಂಟ್ಗಳು ಒಂದು ರೀತಿಯಲ್ಲಿ ಮನುಷ್ಯರ ಒಂದು ಪ್ರಬೇಧಕ್ಕಾಗಿ ಕಾಯ್ದಿಟ್ಟ  ಅರಣ್ಯ ಪ್ರದೇಶವೇ ಆಗಿದ್ದರೂ, ಇತ್ತೀಚೆಗೆ ಅಲ್ಲಿಯೂ ಟ್ರಾಫಿಕ್ ಸಂಖ್ಯೆ ಹೆಚ್ಚಿದೆ. ಆದರೂ ಹಳೆಯ ಕಾಲದ ದೊಡ್ಡ ದೊಡ್ಡ  ಮರಗಳನ್ನು ಬದ್ಧತೆಯಿಂದ ರಕ್ಷಿಸಿಕೊಳ್ಳಲಾಗಿದೆ. ರಾತ್ರಿವೇಳೆ ಇಲ್ಲಿಯೂ ಚಿರತೆಗಳು ಬರುತ್ತವೆ ಎಂಬುದನ್ನು ಇತ್ತೀಚೆಗೆ ಸಿಸಿ ಟೀವಿ ಫೋಟೇಜ್ ಉಲ್ಲೇಖಿಸಿ ವರದಿಗಳು ಬಂದಿವೆ..
ಕೆಂಟೋನ್ಮೆಂಟ್ ರಸ್ತೆಗಳಿಗೆ ನಾಲ್ಕಾರು ವರ್ಷಕ್ಕೊಮ್ಮೆ ಫೇವರ್ ಫಿನಿಶ್ ಮಾಡಿದರೆ ಹೆಚ್ಚು, ಕೆಲವೆಡೆ ಹಂಪ್ಸ್ಗಳು, ಒಂದೆರಡು ಕಡೆ ಕೇಬಲ್ಗಳಿಗಾಗಿ ತೋಡನ್ನು ತೆಗೆದು ನಂತರ ಮುಚ್ಚಿದ್ದರೂ ಕಾರು ಕೆಲವೊಮ್ಮೆ  ದಡಕ್ ಎಂದು ಶಬ್ದ ಮಾಡುವುದು ಬಿಟ್ಟರೆ ಉಳಿದ ಹೊತ್ತು ಎಂಜಿನ್ ಶಬ್ದಗಳು ಕೇಳದಷ್ಟು ಸಲ್ಲಿಸಾಗಿ ವಾಹನ ಚಲಿಸುತ್ತಿದೆ.  ಎಲ್ಲೂ ಜೋರಾಗಿ ದಡಬಡ ಇಲ್ಲದೆ  ಬೂದು ಬಣ್ಣದ ರಸ್ತೆಯಲ್ಲಿ  ನಿಧಾನಗತಿಯಲ್ಲಿ  ಆಚೆ ಈಚೆ ನೋಡುತ್ತ  ಹಾವಿನಂತೆ  ಕಾರು ಸರಿಯುತ್ತಿದೆ. ಅಲ್ಲಲ್ಲಿ  ಕಾಣುವ ವಿಲ್ಲಾಗಳಲ್ಲಿ  ನಿಲ್ಲಿಸಿದ್ದ ವಾಹನಗಳು, ರೋಡಿಗೆ ಮುಖಮಾಡಿ, ಮನೆಗೆ ಪ್ರಷ್ಠಭಾಗವನ್ನು ತೋರಿಕೊಂಡು ಅನ್ ಲೋಡ್ ಮಾಡುತ್ತಿರುವ ಆಪೆ ಆಟೋಗಳು.. ಎದುರಿನಿಂದ ಇಕ್ಕಟ್ಟಿನಲ್ಲಿ ಪಾಸ್ ಆಗುವ ಸೆಡಾನ್ ಕಾರುಗಳು..ಎಲ್ಲವೂ ವೈಲ್ಡ್ ಲೈಫ್ ಚಾನೆಲ್ ಪ್ರಸಾರದ  ಸಂಗಡವೇ. 
ಹಿಂದಿನಿಂದ ಯಾವುದೋ ವಾಹನ ಹಾರ್ನ್ ಹೊಡೆದಂತೆ ಭಾಸವಾಯಿತು. ಎದುರಿನವನ್ನು ಒಂದು ವೇಗದಲ್ಲಿ  ಹೋಗುತ್ತಿದ್ದರೆ, ಅದರ ಬೆನ್ನ ಹಿಂದೆ ಹೋಗುವುದು ಅಥವಾ ತೀರಾ ನಿಧಾನಗತಿಯಲ್ಲಿ ಇದ್ದರೆ ರಸ್ತೆ ತುಸು ಅಗಲ ಇದ್ದಲ್ಲಿ  ಓವರ್ ಟೇಕ್ ಮಾಡುವುದು ಸದೆಗುಡ್ಡೆಯ ರೂಢಿ ಬಿಟ್ಟರೆ ಎಲ್ಲಿಯೂ ಅನವಶ್ಯ ಹಾರ್ನ್ ಹಾಕುತ್ತಿರಲಿಲ್ಲ. ನಮ್ಮಷ್ಟಕ್ಕೆ  ನಮ್ಮ ದಾರಿಯಲ್ಲಿ  ದಾಟಿ ಹೋಗುತ್ತಿರುವುದು. ಕೆಲವೊಂದಿಷ್ಟು ಪಡ್ಡೆ ಹುಡುಗರು ಸದ್ದು ಮಾಡುತ್ತ ಎಲ್ಲ ವಾಹನಗಳನ್ನು ಓವರ್ಟೇಕ್ ಮಾಡುವುದು ಬಿಟ್ಟರೆ ಇಲ್ಲಿ  ಹೆಚ್ಚಿನವರು ಹಾಗೆಯೇ. ಹಿಂದಿನಿಂದ ಹಾರ್ನ್ ಹೊಡೆಯುತ್ತಿರುವುದೂ ಮುಚ್ಚಿದ ವಿಂಡೋದಲ್ಲೂ  ದೂರದ ಸ್ವರವಾಗಿ ಕೇಳಿಸಿತು. ಪಕ್ಕದ ಹಿಮ್ಮುಖ ಕನ್ನಡಿಯಲ್ಲಿ  ಯಾರಪ್ಪ ಇದು ಎಂದು ನೋಡಿ, ಅತ್ತ ಹೆಚ್ಚು ಗಮನ ಹರಿಸದೆ, ಕಾರನ್ನು ತುಸು ಎಡಗಡೆ ಮಾರ್ಗಕ್ಕೆ  ಎಳೆದು ಕೊಂಡು ಅದೇ ಗತಿಯಲ್ಲಿ  ಮುಂದುವರಿಯುತ್ತಿದ್ದ.  ಮತ್ತೆ ಕಿರ್‌‘ ಎನ್ನುತ್ತ  ಮುನ್ನುಗಿದ ಬೈಕ್ ಹುಡುಗ ಸದೆಗುಡ್ಡೆಯತ್ತ ಇಣಿಕಿ ಹಲ್ಲು ಗಿಂಜಿತು. ಅವನು ಪ್ರಚೋದಿಸುವ ರೀತಿಗೆ ಒಮ್ಮೆ ದೊಡ್ಡ ಕಣ್ಣಿನ ಗುದ್ದು ಹಾಕೋಣ ಎನ್ನಿಸಿತಾದರೂ, ಒಳಗೊಳಗೆ ಏನೇನನೋ ನೆನಪಾಗಿ, ಹೆಮ್ಮೆಯ ನಗು ಬಂದಿತು. ಕಾಲೇಜಿನಿಂದ ತುಸು ಬೇಗನೇ ಮನೆಗೆ ಹೋಗುವ ಧಾವಂತದಲ್ಲಿ  ಹಿಂದಿನಿಂದ  ಸದೆಗುಡ್ಡೆಯ ಕಾರ್ ಗುರುತು ಹಿಡಿದು ಸ್ನೇಹಿತನೊಂದಿಗೆ  ಉದ್ದೇಶ ಪೂರ್ವಕ ಓವರ್ ಟೇಕ್ ಮಾಡಿ ರೊಯ್ ಎಂದು ಹೋದ.
ಹುಡುಗರಿಗೆ ಕೈಯಲ್ಲಿ ಬೈಕ್ ಸಿಕ್ಕರೆ ಕಿವಿಗೆ ಗಾಳಿ ಹೊಕ್ಕಂತೆ. ಅಪ್ಪ ಅಮ್ಮ  ಒಂದಿಷ್ಟು ಜಾಗೃತೆ ವಹಿಸಬೇಕು ಅಲ್ಲವೇ ಎಂದು ಡಿವೈಎಸ್ಪಿ ಶೆಟ್ಟಣ್ಣ  ಹೇಳಿದ. ಹೌದು ಎಂದೆ. ಹಾರ್ನ ಹಾಕಿ ಮುಂದಾಗಿ ಸಾಗಿದವನ  ಬಗ್ಗೆ ಏನೂ  ಹೇಳಲು ಹೋಗಲಿಲ್ಲ.
ಡಿವೈಎಸ್ಪಿ ಶೆಟ್ಟಣ್ಣ  ಮಾತನ್ನು ಮುಂದುವರಿಸಿದರು. ಇತ್ತೀಚೆಗೆ  ತನ್ನ ಟ್ರಾಫಿಕ್ ಸಹೋದ್ಯೋಗಿ ಒಬ್ಬರು ಹೇಳಿದ ಕತೆಯನ್ನು ಪಟ್ಟೆ ಹುಡುಗರ ಬೈಕ್ ಕ್ರೇಜ್ಗಳನ್ನು, ಅವರನ್ನು ಬೆಂಬಲಿಸುವ ಶ್ರೀಮಂತ ತಂದೆತಾಯಂದಿರ ಬಗ್ಗೆ  ಹೇಳಿದರು. ಒಂದು ತಪ್ಪಿದರೆ ಎರಡು ಮಕ್ಕಳನ್ನು ಹೆರುವ ತಾಯಿ ತಂದೆಯರು ಮಿತಿ ಮೀರಿ ಪ್ರೀತಿಯಿಂದ ಮಕ್ಕಳನ್ನು ಬೆಳೆಸುತ್ತಾರೆ. ಮಕ್ಕಳು ಮನುಷ್ಯತ್ವದ ಮುಖವನ್ನೇ ಕಳೆದುಕೊಂಳ್ಳುತ್ತಾರೆ ಎಂದೆಲ್ಲ ಹೇಳಿದರು. ಇತ್ತೀಚೆಗೆ ನಗರದಲ್ಲಿ  ಪರವಾನಗಿ ಇಲ್ಲದೆ ಎನಿಫಿಲ್ಡ್  ಬೈಕ್ ಓಡಿಸುವ ಹುಡುಗರ ಉಪಟಳ ಹೆಚ್ಚಾಗಿದೆ. ಕ್ಯಾಂಟೋನ್ಮೆಂಟ್ ರಸ್ತೆಗಳಲ್ಲಿ  ವಿಪರೀತ ಶಬ್ದ ಮಾಡುತ್ತ ಜೋರಾಗಿ ಓಡಿಸಿ ಪುಟ್ಟ ಮಕ್ಕಳು ಹಾಗೂ ವಯಸ್ಸಾದವರ ಹೃದಯ ಬಡಿತ ಹೆಚ್ಚಿಸುತ್ತಾರೆ ಎಂದರು. ಎನಿಫಿಲ್ಡ್  ಬೈಕ್ಗೆ ಇರುವ ಶಬ್ಧ ಸಾಲದು ಎಂದು ಹೆಚ್ಚುವರಿಯಾಗಿ ಲೌಡ್ ಸ್ಪೀಕರ್ ಸೈಲನ್ಸರ್ ಅಳವಡಿಸುತ್ತಾರೆ !  ಹೀಗೆ ನಿಯಮ ಮೀರಿದ ೬೫ ಬೈಕ್ ಸೀಜ್ ಕಾರ್ಯಾಚರಣೆ ಮಾಡಿ, ಮಕ್ಕಳ ಪಾಲಕರನ್ನು ಠಾಣೆಗೆ ಕರೆಸಿ ವಾರ್ನ್ ಮಾಡಿದ್ದಲ್ಲದೆ, ಸೈಲನ್ಸರ್ಗಳನ್ನು  ಕಳಚಿ ಠಾಣೆಯ್ಲಿ ಇಟ್ಟಿದ್ದಾಗಿ ಹೇಳಿದರು. ಶ್ರೀಮಂತರ ಮಕ್ಕಳಿಗೆ ದುಡ್ಡಿನ ಸೊಕ್ಕು, ಪ್ರಾಣಕ್ಕೆ ಎರವಾದರೆ ಎಂಬಬೆಚ್ಚರಿಕೆ ಇರುವುದಿಲ್ಲ  ಎಂದೆಲ್ಲ ಹೇಳಿದರು ಶೆಟ್ಟಣ್ಣ. ಅಷ್ಟೇ ಅಲ್ಲ ದೇಶದ ಕಾನೂನು ನಮ್ಮ ರಕ್ಷಣೆಗೇ ಇದೆ ಎಂಬುದು ಸುಶಿಕ್ಷಿತ ಮಹಾಶಯರಿಗೆ ತಿಳಿಯುವುದಿಲ್ಲ  ಎಂದು ಚುಚ್ಚಿದರು. ನಿಮ್ಮ ಮಗ ಎಷ್ಟು ದೊಡ್ಡವನಿದ್ದಾನೆ ಶೆಟ್ಟಣ್ಣ ಎಂದು ಏಳಿದೆ. ಯಾಕೋ ಪ್ರಶ್ನೆ ಅವರಿಗೆ ಲೈಕ್ ಆಗಲಿಲ್ಲ. ಅವರಿಗಿನ್ನೂ ಮಕ್ಕಳಾಗಿಲ್ಲ ಎಂಬುದನ್ನು ಆಮೇಲೆ ತಿಳಿದುಕೊಂಡ ಸದೆಗುಡ್ಡೆ, ಪ್ರಶ್ನೆಯನ್ನೇ ಕೇಳಬಾರದಿತ್ತು ಅಂದುಕೊಂಡ. ಪೊಲೀಸ್ ವಸತಿಗ್ರಹ ಬರುತ್ತಲೇ ಶೆಟ್ಟಣ್ಣ  ಇಳಿದರು, ಅಲ್ಲದೆ ಕಾರ್ ಚೆನ್ನಾಗಿದೆ ಎಂದು ಹೇಳಲು ಮರೆಯಲಿಲ್ಲ.
ಅವನು ಬೈಕ್ ಓಡಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಘಟನೆ ಸದೆಗುಡ್ಡೆಗೆ ನೆನಪಾಯಿತು. ಪರವಾನಿಗೆ ಪಡೆಯಲು ಇನ್ನೂ ಹದಿನೆಂಟು ವರ್ಷ ತುಂಬಿಲ್ಲ. ಆದರೆ, ಅದಕ್ಕೂ ಮೊದಲೇ ಬೈಕ್  ಕಾರು, ಬೈಕು ಓಡಿಸುವಷ್ಟು  ಬೆಳೆದುಬಿಟ್ಟಿದ್ದಾನೆ. ಹುಡುಗರ ಬೈಕ್  ಪರವಾನಿಗೆ  ಕೊಡುವ ವಯೋ ಮಿತಿಯನ್ನು ಎರಡು ವರ್ಷ ತಗ್ಗಿಸಬೇಕು ಎಂದು ಅಂದೇ ಅನ್ನಿಸಿದೆ.  ಪಿಯು ಓದುವ ಹೊತ್ತಿಗೆ ಸುಮಾರು ಹದಿನಾಲ್ಕು ವರ್ಷ ಸೈಕಲ್ ಓಡಿಸಿದ ಅನುಭವ ಬೈಕ್ ಅನುಮತಿಗೆ ಸಾಲದೆ. ಸೈಕಲ್ ಓಡಿಸಲು ಅವಶ್ಯ ಇಲ್ಲದೆ ಅನುಮತಿ, ಬೈಕ್ ವಿಚಾರದಲ್ಲಿ ಇಷ್ಟೊಂದು ಕಟ್ಟು ನಿಟ್ಟು ಯಾಕೆ ?
‘‘ಬಸ್ ಊರೆಲ್ಲ ಸುತ್ತಿ ಬರುತ್ತದೆ. ಮನೆ ತಲುಪುವುದು ತುಂಬ ಹೊತ್ತಾಗುತ್ತದೆ’’ ಎಂದು ಪಿಯು ಮೊದಲ ವರ್ಷದ  ಹೇಳಿದಾಗ ಹೌದು ಅನ್ನಿಸಿತು. ಮತ್ತೆ  ನಾಲ್ಕು ತಿಂಗಳು ಸೈಕಲ್ ತುಳಿಯುವಷ್ಟರಲ್ಲಿ ಸುಸ್ತಾಗಿತ್ತುಘಿ. ಮಧ್ಯಾಹ್ನ ಊಟವಿಲ್ಲದೆ ಬುತ್ತಿಯನ್ನು ತಿಂದು ಸಂಕೆ ಆರು ಗಂಟೆಗೆ ಮನೆಗೆ ಬರುತ್ತಲೇ ಶಕ್ತಿ ಕುಂದಿದ ಬ್ಯಾಟರಿಯಾಗುತ್ತಿತ್ತು ಮುಖ. ಮನೆಯಲ್ಲೇ ಇರುವ ಬೈಕ್ ಓಡಿಸುವುದನ್ನು ಚೆನ್ನಾಗಿ ಕಲಿತಿದ್ದನಾದರೂ ಕಾಲೇಜಿನಲ್ಲಿ  ಬೈಕ್ ತರಲು ಅವಕಾಶ ಇಲ್ಲ ಎಂಬ ಕಾರಣವು ಮನೆಯವರಿಗೆ ಒಂದು ಅನುಕೂಲ. ಮತ್ತೆರಡು ತಿಂಗಳು ಮುಮದೂಡಿದ ಮೇಲೆ,  ಕೊನೆಗೆ ಕಾಲೇಜು ಪಕ್ಕದಲ್ಲೇ ಇರುವ ತನ್ನ  ಸ್ನೇಹಿತನ ಮನೆಯಲ್ಲಿ ಬೈಕ್ ನಿಲ್ಲಿಸಲು ಕೇಳಿಕೊಂಡಿದ್ದ. ಹುಡುಗರಿಗೆ ಅವಶ್ಯ ಎನಿಸಿದಾಗ ಏನೆಲ್ಲ  ಯೋಜನೆ ಹೊಳೆಯುತ್ತದೆ. ಅವಶ್ಯಕತೆಯೇ ಆವಿಷ್ಕಾರದ ತಾಯಿ. ಯಾರನ್ನಾದರೂ ಮಾತಾಡಿಸಿ ಕೆಲಸ ಮಾಡಿಸಿಕೊಳ್ಳುತ್ತಾರೆ  ಎಂಬುದಕ್ಕೆ ಸ್ನೇಹಿತನ ಮನೆಯಲ್ಲಿ ಬೈಕ್ ನಿಲ್ಲಿಸುವುದಕ್ಕೆ ಗೊತ್ತುಪಡಿಸಿಕೊಂಡಿದ್ದು  ಒಂದು ನಿದರ್ಶನ. ಬೇರೆ ಮಾರ್ಗವಿಲ್ಲದೆ ಅಪ್ಪ ಅಮ್ಮ  ಮಗನ ಬೈಕ್ ಸವಾರಿಗೆ ಒಪ್ಪಿಗೆ ಕೊಡತ್ತಾರೆ. ಮುಖ್ಯ ಮಾರ್ಗದಲ್ಲಿ ಹೋಗದೆ ಗಲ್ಲಿ, ಮೊಹಲ್ಲಾದ ಮೂಲಕ ಬೆಳಗಿನ ಹೊತ್ತು  ಕಾಲೇಜಿಗೆ  ಹೋಗುವಾಗ ಪೊಲೀಸರು ಸಿಗುತ್ತಿರಲಿಲ್ಲಘಿ, ಸಂಜೆ ಬರುವಾಗಲೂ ಅಷ್ಟೆ.
ಆದರೂ ಪರೀಕ್ಷೆ ಸಮೀಪಿಸುತ್ತಲೇ  ಒಂದು ದಿನ ಕಾಲೇಜಿನಲ್ಲಿ  ಹಾಫ್ ಡೇ  ಬಂಕ್ ಮಾಡಿ ಓದಲೆಂದು ಸ್ನೇಹಿತರು ಮೂವರು ಸೇರಿ  ಬರುತ್ತಿದ್ದಾಗ  ಪೊಲೀಸರು ಹಿಡಿದು ಹಾಕಿದರು. ‘’ಕಟ್ಟು ೩೦೦ ರೂ ದಂಡ’’ ಎಂದು ಹೇಳಿದರೆ, ಹಣ ಅಷ್ಟೊಂದನ್ನು  ಕೊಂಡು ಹೋಗಿರಲಿಲ್ಲ. ತಂದೆಗೆ ಫೋನ್ ಮಾಡಿದರೆ ಆತ ಊರಲ್ಲಿ ಇರಲಿಲ್ಲ.  ಸಂಜೆ ಮನೆಗೆ ಬಂದಾಗ ತಂದೆಗೆ ತಿಳಿಯಿತು. ಸ್ನೇಹಿತರ ತಂದೆಯೇನೋ ಒಬ್ಬ  ಪೊಲೀಸ್ ಇಲಾಖೆಯಲ್ಲಿ  ಇದ್ದ ಕಾರಣ ಬಚಾವ್ ಸಾಧ್ಯ ಆಯಿತು ಎಂದು. ಇದೀಗ  ಸದೆಗುಡ್ಡೆಗೆ  ಮಗ ಏನೋ ತನ್ನನ್ನು ದಾಟಿ ಹೋಗುತ್ತಿದ್ದಾನೆ, ಆತನ ನಿಯಂತ್ರಣ ಹಾಗೂ ರಕ್ಷಣೆ ಎರಡೂ ಸಾಧ್ಯವಾಗುತ್ತಿಲ್ಲ ಅನ್ನಿಸಿತು. ಪಕ್ಕದ ಬೆಟ್ಟ ಸೇರಿಕೊಳ್ಳುತ್ತಿರುವ ಚಿರತೆಯ ಮರಿಗಳು, ಅಥವಾ ಮರಿ ಚಿರತೆಗಳು ತಮ್ಮ ಬೇಟೆಯನ್ನು ತಾವೇ ಮಾಡಿಕೊಳ್ಳುತ್ತಿವೆ ಅನ್ನಿಸತೊಡಗಿತು.
ಅವನು ಚಿಕ್ಕವನಿದ್ದಾಗ ವಾಹನದ ಚಾವಿಗಳನ್ನು  ತೋರಿಸಿದರೆ  ಅದು ಯಾವ ಕಂಪೆನಿ, ಯಾವ ಕಾರು ಎಂದೆಲ್ಲ   ಹೇಳುತ್ತಿದ್ದ. ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ  ಕಾರುಗಳ ಲೋಗೊ ನೋಡಿ, ಮನೆಗೆ ಬರುವ ಕಾರುಗಳನ್ನೇ ಗಮನಿಸಿ ಲೋಗೊಗಳು, ಅವುಗಳ ವೇಗವನ್ನು ಪಟ ಪಟನೆ ಹೇಳಿದಾಗ  ಈಗಿನ ಮಕ್ಕಳ ವೇಗವನ್ನು ಕೊಂಡಾಡುತ್ತಿದ್ದ. ಮೊದಲು ಒಂದನೆ ತರಗತಿಯಲ್ಲಿ  ಸೈಕಲ್ ಓಡಿಸಲು ಕಲಿತಾ ಎಲ್ಲಿಲ್ಲದ  ಸಂತೋಷ ಆಗುತ್ತಿತ್ತು. ಅಪ್ಪ  ಇಲ್ಲದಾಗ  ಆತನ ಬಜಾಜ್ ಕಬ್ ಸ್ಟಾರ್ಟ್ ಮಾಡಿಕೊಂಡು ಹೋಗಿ ಕಲಿತಿದ್ದೂ  ತುಸು ಆತಂಕದೊಟ್ಟಿಗೆ  ಖುಷಿಯೇ ಆಗಿತ್ತು. ಹತ್ತಾರು ಬಾರಿ ಹೋಗಿ ಬಂದ ನಂತರ ಬೈಕ್ ಓಡಿಸುವಾಗ ಏನಾದರೂ ಹೆಚ್ಚು ಕಡಿಮೆ ಆದೀತು ಎಂಬ ಆತಂಕವೂ ಹೋಗಿತ್ತುಘಿ.  ಕೊನೆಗೆ ಒಂದು ದಿನ ತಾನು ಬೈಕ್ ತೆಗೆದುಕೊಂಡು ಕಾಲೇಜಿಗೆ ಹೋಗುತ್ತೇನೆ ಎಂದಾಗ, ಆತನನ್ನು ಲೈಸನ್ಸ್ ಇಲ್ಲ  ಎಂಬ ಒಂದು ಕಾರಣಕ್ಕೆ ತಡೆಯುವ ಪ್ರಶ್ನೆಯೇ ಎದುರಾಗಿರಲಿಲ್ಲ.
ಸದೆಗುಡ್ಡೆ ಗೆ ನೆನಪು ಇನ್ನೂ  ಆಚೆಗೆ ಹೋಯಿತು. ಇನ್ನೂ ಮೂರು ವರ್ಷ, ಮಾತು ಕಲಿಯುವ ಹೊತ್ತು. ಮಗ ಬೆಡ್ ಮೇಲೆ ಕುಳಿತು ಅವನಿಗೆ ಚಾಕೋಲೇಟ್ ಬೇಕು ಎಂದು ಅಮ್ಮನಲ್ಲಿ  ಹೇಳಿದಾಗ ಪತ್ನಿ  ಸದೆಗುಡ್ಡೆಯ ಮುಖ ನೋಡಿ ನಕ್ಕಳು. ‘‘ನಾವು ನಮ್ಮಲ್ಲೇ ಮಾತಾಡುವಾಗ ಇವನನ್ನು  ಅವನು ಅಂತೇವಲ್ಲ... ಅದನ್ನೇ ಕಲಿತಿರುವ ಇವನು ತನ್ನನ್ನೂ ಅವನು ಎನ್ನುತ್ತಿದ್ದಾನೆ’’ ಎಂದು ಜೋರಾಗಿ ನಕ್ಕು ಎತ್ತಿಕೊಂಡಿದ್ದಳು.

***



Read More