ಕಡತದಲ್ಲಿ ಕಂಡ ಶತಮಾನದ ಹಿನ್ನೋಟ

ಕಡತದಲ್ಲಿ ಕಂಡ ಶತಮಾನದ ಹಿನ್ನೋಟ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಟಗಿ, ಹೊನ್ನೆಗಟಗಿ 
ಶತಮಾನೋತ್ಸವ ಆಚರಿಸುತ್ತಿರುವ ಹೊನ್ನೆಗಟಗಿ ಶಾಲೆ ತನ್ನ ಒಡಲಲ್ಲಿ, 20ನೇ ಶತಮಾನದ ಭಾರತದ ಹಳ್ಳಿಯೊಂದರ ಇತಿಹಾಸವನ್ನೇ ಬಚ್ಚಿಟ್ಟುಕೊಂಡಿದೆ. ಬ್ರಿಟೀಷ್ ಆಡಳಿತ ಹಾಗೂ ಸ್ವತಂತ್ರ ಭಾರತದ ಶೈಕ್ಷಣಿಕ ಬೆಳವಣಿಗೆಗೆ ಇಲ್ಲಿರುವ ಕಡತಗಳು ಸಾಕ್ಷಿ. ಸುತ್ತಲಿನ ಊರುಗಳು ಶತಮಾನದ ಅವಧಿಯಲ್ಲಿ ಅನಕ್ಷರ ಪ್ರಪಂಚದಿಂದ ಸಾಕ್ಷರತೆಯ ಕಡೆಗೆ ಹೆಜ್ಜೆ ಹಾಕಲು ಇದೊಂದು ಪ್ರಮುಖ ಸೋಪಾನ. ಮಾತ್ರವಲ್ಲ ಸಾಮಾಜಿಕ, ಆರ್ಥಿಕ ಮತ್ತು ವಿಶೇಷವಾಗಿ ನೈತಿಕವಾಗಿ ನಮ್ಮ ಸಮಾಜ ಪ್ರಗತಿಯಾಗುತ್ತಿರುವುದಕ್ಕೆ ಶಾಲೆಯಲ್ಲಿ ಲಿಖಿತ ದಾಖಲೆ ಇದೆ.
ಇಟಗಿಯ ರಾಮೇಶ್ವರ ದೇವಸ್ಥಾನ
ಇದರ ಇತಿಹಾಸವನ್ನು ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಎಂದು ಎರಡು ಭಾಗವಾಗಿ ಬಣ್ಣಿಸಬಹದು.
20ನೇ ಶತಮಾನದ ಆರಂಭದಲ್ಲಿ ಅಂದರೆ ಈ ಶಾಲೆ ಸ್ಥಾಪನೆಯಾಯಿತು. ಆ ಹೊತ್ತಿಗೆ ನಮ್ಮನ್ನಾಳುತ್ತಿದ್ದವರು ಬ್ರಿಟೀಷರು. ಆಗಲೇ ದೇಶದಲ್ಲಿ ಸ್ವಾತಂತ್ರ್ಯದ ಕೂಗು ಕೇಳುತ್ತಿದ್ದ ಕಾರಣ, ತಮ್ಮ ಆಡಳಿತದಲ್ಲಿ ಅಭಿವೃದ್ಧಿಯ ರುಚಿ ಹುಟ್ಟಿಸಿ ಜನರ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿದ್ದರು. ಪಾಶ್ಚಾತ್ಯ ದೇಶದಲ್ಲಿ ಆಗಲೇ ಪ್ರಗತಿಯ ಗಾಳಿ ಬೀಸುತ್ತಿತ್ತು. ಅಲ್ಲಿನ ಶಿಕ್ಷಣ ನೀತಿಯನ್ನು ಅವರು ಭಾರತದಲ್ಲಿ ಆರಂಭಿಸಿದ್ದರು. ಅದರ ಸಣ್ಣ ಬೆಳಕೊಂದು, ನಮ್ಮ ಪುಟ್ಟ ಊರಿನ ಮೇಲೂ ಬಿದ್ದು, ಇದೀಗ ಶತಮಾನ ಆಚರಿಸುತ್ತಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಟಗಿ, ಹೊನ್ನೆಗಟಗಿ ಶಾಲೆ ಹುಟ್ಟಿತು.
ಗುಡ್ಡೆಕೊಪ್ಪದ ನಾರಾಯಣ ಭಟ್ಟರಿಗೆ ಇಟಗಿಯ ರಾಮೇಶ್ವರ ದೇವಸ್ಥಾನದ ಚಂದ್ರಶಾಲೆಯಲ್ಲಿ ಗಾವ್ಟಿ ಶಾಲೆ ಆರಂಭಿಸಲು 1913ರಲ್ಲಿ  ಬ್ರಿಟೀಷ್ ಸರಕಾರ ಅನುಮತಿ ನೀಡಿತು. ಈ ಭಾಗವು ಮುಂಬಯಿ ಪ್ರಾಂತ್ಯದದಲ್ಲಿ ಇತ್ತೆಂಬುದರ ಕುರುಹನ್ನು ಗಾಂವ್ಟಿ ಎಂಬ ಶಬ್ಧದಲ್ಲಿ ಗುರುತಿಸಬಹದು. ಗಾಂವ್ಟಿ ಇದೀಗ ಕನ್ನಡ ಶಬ್ಧವಾಗಿದ್ದರೂ, ಹಳ್ಳಿ ಎಂದು ಗುರುತಿಸುವ ಈ ಶಬ್ಧ ಮೂಲ ಮರಾಠಿ ಅಥವಾ ಹಿಂದಿ ಭಾಷೆ. ಸ್ವಾತಂತ್ರ್ಯ ಹೋರಾಟ ಸೇರಿದಂತೆ ಸಾರ್ವಜನಿಕವಾಗಿ ಕಾಣುವ ಗುಡ್ಡೆಕೊಪ್ಪ ಭಟ್ಟರ ಕುಟುಂಬದ ಕುರುಹು ಇಲ್ಲಿಂದಲೇ ಗೋಚರಿಸುತ್ತದೆ.
ಹಿಂದಿನ ಕಾಲದಲ್ಲಿ ಶಾಲೆಗೆ ಮಠ ಎಂಬ ಹೆಸರೂ ಇತ್ತು. ಮಠಗಳು, ದೇವಸ್ಥಾನದ ಆವರಣದಲ್ಲಿ ಶಾಲೆಗಳನ್ನು ನಡೆಸಲಾಗುತ್ತಿತ್ತು. ಇಟಗಿಯಲ್ಲಿದ್ದ ಗಾವ್ಟಿ ಶಾಲೆಯೂ ಹೆಚ್ಚಿನ ಸಂದರ್ಭ ದೇವಸ್ಥಾನದ ಕಟ್ಟಡದಲ್ಲೇ ನಡೆದಿದೆ. ಜೀರ್ಣಾವಸ್ಥೆಯ ಕಟ್ಟಡದಲ್ಲಿ ನಡೆಯುತ್ತಿದ್ದ ಬಗ್ಗೆ ಆ ಕಾಲದಲ್ಲಿ ಶಾಲೆಗೆ ಹೋಗುತ್ತಿದ್ದ ಹಿರಿಯರು ಸ್ಮರಿಸುತ್ತಾರೆ. ಮಳೆಗಾಲದಲ್ಲಿ ಕಂಬಳಿಯನ್ನು ಸೂಡಿಕೊಂಡು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಕೂಡ ಇತ್ತು.
ಸ್ವಾತಂತ್ರ್ಯ ಪೂರ್ವದಲ್ಲಿ ಶಾಲೆಯ ಆಡಳಿತದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಲಭ್ಯವಿರುವ ಹಳೆಯದಾದ ಕೆಲವು ಜನರಲ್ ರಿಜಿಸ್ಟರ್ ನಮೂನೆಯಲ್ಲಿ ಶಾಲೆಯಲ್ಲಿ ಓದಿದವರ ಹೆಸರನ್ನು ನಮೂದಿಸಲಾಗಿದೆ. ಇದು ಆರಂಭದಿಂದ ಇದ್ದ ರಿಜಿಸ್ಟರ್ ಆಗಿರಲಿಕ್ಕಿಲ್ಲ. ಜೀರ್ಣಾವಸ್ಥೆಯಲ್ಲಿದ್ದ ಮಾಹಿತಿಯನ್ನು ಹೊಸದೊಂದು ಪುಸ್ತಕದಲ್ಲಿ (ಸ್ವಾತಂತ್ರ್ಯಾನಂತರ)ಬರೆದಿಡಲಾಗಿದ್ದೆಂದು ತೋರುತ್ತದೆ. 1953ರಲ್ಲಿ ತಾಲೂಕು ಸ್ಕೂಲ್ ಮಾಸ್ಟರ್ ಎಂಬ ಹುದ್ದೆಯಲ್ಲಿದ್ದ ರಾ.ಪು.ಶಾನಭಾಗ್ ಎಂಬವರು ಶರಾ ಬರೆದು ಕೊಟ್ಟ ರಿಜಿಸ್ಟರ್‌ನಲ್ಲಿ ಅದಕ್ಕಿಂತ ಹಿಂದಿನ ಕೆಲವು ವರ್ಷಗಳ ಮಾಹಿತಿಯನ್ನೂ ನಮೂದಿಸಿರುವುದು ಇದಕ್ಕೊಂದು ಸಾಕ್ಷಿ. ಅಲ್ಲದೆ ಜನ್ಮ ದಿನಾಂಕ ಬರೆಯುವಾಗ ಖಚಿತವಾಗಿ ಬರೆಯಬೇಕು ಎಂದು ಹಿರಿಯ ಅಧಿಕಾರಿಗಳು ಶರಾ ಬರೆದಿರುವುದು ಕೆಲವು ಕಡೆ ಕಾಣಿಸಿದೆ. ಯಾವುದೇ ರಿಜಿಸ್ಟರ್‌ನಲ್ಲೂ ನಮೂದಿಸಿದವರ ಸಹಿಯಾಗಲಿ, ದಿನಾಂಕವಾಗಲಿ ಇಲ್ಲ. ಅದಕ್ಕಾಗಿ ಶಾಲಾ ಶಿಕ್ಷರು ಯಾರು ಎಂಬ ಬಗ್ಗೆ ದಾಖಲೆಯಲ್ಲಿ ತಿಳಿಯುವುದಿಲ್ಲ. ಆ ಕಾಲದಲ್ಲಿ ಶಾಲೆಗೆ ಹೋದ ಹೆಚ್ಚಿನವರ ಹೆಸರು ಸರಿಯಾಗಿ ಇದೆ. ಹೆಚ್ಚಿನ ಬಾಲಕಿಯರ ಹೆಸರಿನ ಮುಂದೆ "ಮನೆಗೆಲಸಕ್ಕಾಗಿ ಬಹಳ ದಿನ ಶಾಲೆಗೆ ಬರದಿರುವ ಕಾರಣ" ಎಂದು ಶಾಲೆ ಬಿಟ್ಟ ಕಾರಣವನ್ನು ನಮೂದಿಸಲಾಗಿದೆ. ಆಗ ಹೆಣ್ಣುಮಕ್ಕಳ ಸ್ಥಿತಿಗತಿಗೆ ಇದೆಲ್ಲ ಸಾಕ್ಷಿ. ರಿಜಿಸ್ಟರ್‌ಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪಿಂಚಣಿ ಕಡತ ಸಿದ್ಧಪಡಿಸುವ ನಿಮಿತ್ತ ಶಾಲೆಯ ಅತ್ಯಂತ ಹಳೆಯ ಜನ್ಮ ದಾಖಲಾತಿಯನ್ನು ಕೋರಿ ಸಲ್ಲಿಸಿದ ಅರ್ಜಿಗಳು ಸಿಗುತ್ತವೆ. ಶಾಯಿ ಪೆನ್ನಿನಲ್ಲಿ ಹಾಗೂ ಸೀಸದಲ್ಲಿ ಬರೆಯಲಾದ ಬಳ್ಳಿಯ ಬಳ್ಳಿಯಾದ ಕೈಬರಹ ಅಕ್ಷರಗಳು ಗಮನ ಸೆಳೆಯುತ್ತವೆ. ಶಾಯಿ ಪೆನ್ನಿನ ಅಕ್ಷರಗಳು ಹಲವು ಕಡೆ ಹಿಂದಿನ ಪುಟದಲ್ಲೂ ಅಚ್ಚಾಗಿ ಗೊಂದಲ ಹುಟ್ಟಿಸಿವೆ. ಇಲ್ಲಿನ ಅಕ್ಷರಗಳು ಹಳೆಯ ಮೋಡಿಯೂ ಅಲ್ಲದ, ಹೊಚ್ಚ ಹೊಸ ಮಾದರಿಯವೂ ಅಲ್ಲ. ಸಾವಧಾನ ಕ್ರಮದಲ್ಲಿ ನಡೆಯುವ ಬರವಣಿಗೆ ಪ್ರಕ್ರಿಯೆ ಒತ್ತಕ್ಷರಗಳು ಬಂದಾಗ ವೇಗೋತ್ಕರ್ಷಗೊಳ್ಳುವ ಚಿತ್ರವನ್ನು ಕಲ್ಪಿಸಿಕೊಳ್ಳಿ. ಕೆಲವು ಒತ್ತಕ್ಷರಗಳು ಇಡೀ ಸಾಲಿನಲ್ಲಿ ಎದ್ದು ಕಾಣುವಂತೆ, ಸುಬ್ರಾಯ ಹೆಸರಿನಲ್ಲಿ ಬಾ ಅಕ್ಷರಕ್ಕೆ ಅರ್ಧಚಂದ್ರಾಕೃತಿಯ ಒತ್ತಕ್ಷರವು ಇಡೀ ಶಬ್ಧಕ್ಕೆ ಪ್ರಭಾವಳಿಯ ರೀತಿಯಲ್ಲಿ ವಿಸ್ತರಿಸಿ, ಮೇಲೆ-ಕೆಳಗಿನ ಗೆರೆಗಳನ್ನೂ ಮೀರಿ ಬೆಳೆದು ತಮಾಷೆಯಾಗಿ ಕಾಣುತ್ತವೆ. ಇದೀಗ ಆ ಬಗೆಯ ಕೈ ಬರಹಗಳು ಕಾಣಲು ಸಿಗುವುದಿಲ್ಲ.
ಸ್ವಾತಂತ್ರ್ಯಾನಂತರ ಶಾಲೆಗೆ ಭವ್ಯ ಕಟ್ಟಡವೊಂದು ಸಿಕ್ಕ ಕಾರಣ ಶಾಲೆಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದು ಸಾಧ್ಯವಾಗಿದ್ದು ಗಮನಕ್ಕೆ ಬರುತ್ತದೆ. ದೇವಸ್ಥಾನದ ಆಶ್ರಯದಲ್ಲಿದ್ದ ಶಾಲೆ ಹತ್ತು ಹಲವರ ಪ್ರಯತ್ನದಿಂದ, ಒಂದು ಸ್ವತಂತ್ರ ದೇಗುಲವಾಗಿ ಎದ್ದು ನಿಂತ ಪ್ರಕ್ರಿಯೆ ಕುತೂಹಲಕರ. 1959ರಲ್ಲಿ ಹೊನ್ನೆಗಟಗಿಯಂಥ ನಾಲ್ಕಾರು ಊರುಗಳು ಸೇರುವ ಎತ್ತರ ಹಾಗೂ ಪ್ರಶಾಂತ ಸ್ಥಳದಲ್ಲಿ ಶಾಲೆಯ ಹೊಸ ಇಮಾರತು ನಿರ್ಮಾಣಗೊಂಡಿತು. ಒಂದರ್ಥದಲ್ಲಿ ಅದು ಶಾಲೆಯ ಸುವರ್ಣ ಮಹೋತ್ಸವದ ಮೈಲಿಗಲ್ಲು. ಯಾಕೆಂದರೆ 1950-60ರ ದಶಕವು ಶಾಲೆ ಸ್ಥಾಪನೆಗೊಂಡು ಸುಮಾರು ಅರ್ಧ ಶತಮಾನ ಪೂರೈಸಿದ ಸಂದರ್ಭ. ಆಗ ಮೈಸೂರು ಸರಕಾರದಲ್ಲಿ ಈ ಭಾಗದ ಶಾಸಕರಾಗಿದ್ದ ದೊಡ್ಮನೆ ರಾಮಕೃಷ್ಣ ಹೆಗಡೆ ಅಧ್ಯಕ್ಷತೆಯಲ್ಲಿ ಅಂದಿನ ಶಿಕ್ಷಣ ಮಂತ್ರಿ ಅಣ್ಣಾರಾವ್ ಗಣಮುಖಿ ಹೊಸ ಇಮಾರತ್ತನ್ನು ಉದ್ಘಾಟಿಸಿದರು. ಸರಕಾರದ ಅನುದಾನದಲ್ಲಿ ನಿರ್ಮಾಣವಾದ ಶಾಲಾ ಕಟ್ಟಡ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದ್ದ ಸ್ಥಳೀಯರಲ್ಲಿ ಹರಗಿ ಸೀತಾರಾಮ ಹೆಗಡೆ ಒಬ್ಬರು. ಉದ್ಘಾಟನೆ ಸಮಾರಂಭದ ಆಮಂತ್ರಣಪತ್ರ ಕೂಡ ಅವರ ಮನೆಯಲ್ಲಿಯೇ ದೊರೆತಿದೆ. ಒಂದರಿಂದ ನಾಲ್ಕನೆ ತರಗತಿಯ ತನಕ ಮಾತ್ರ ಇದ್ದ ಈ ಶಾಲೆಯನ್ನು 7ರ ತನಕ ವಿಸ್ತರಿಸುವ ನಿಟ್ಟಿನಲ್ಲಿ ಆಗ ಶಿಕ್ಷಕರಾಗಿದ್ದ ಸ.ನಾ. ಹೆಗಡೆ ಶ್ರಮಿಸಿದ್ದು ಗಮನಕ್ಕೆ ಬರುತ್ತದೆ. ಸ.ನಾ.ಹೆಗಡೆಯವರ ವಿಶೇಷ ಎಂದರೆ ಅವರ ಪತ್ನಿ ಕೂಡ ಶಿಕ್ಷಕರಾಗಿದ್ದರಂತೆ. ಮೊದಲು ಕ್ಯಾದಗಿಯಲ್ಲಿ ಶಿಕ್ಷಕರಾಗಿದ್ದ ಇವರು ನಂತರ ಹೊನ್ನೆಗಟಗಿಗೆ ಬಂದು ತಮ್ಮ ಸಾರ್ವಜನಿಕ ಸಂಪರ್ಕದಿಂದ ಓಡಾಡಿ ಶಾಲೆಗೆ ಬೇಕಾಗಿದ್ದ ಸರಕಾರಿ ಅನುಕೂಲತೆಯನ್ನು ಒದಗಿಸಿಕೊಟ್ಟರು.
ಆ ನಂತರ ಶಾಲೆಯು ಮಾದರಿಯ ಹಿರಿಯ ಪ್ರಾಥಮಿಕ ಶಾಲೆ/ ಈ ಭಾಗದ ಕೇಂದ್ರ ಶಾಲೆ ಎಂದು ಮಾನ್ಯತೆ ಪಡೆದು ಶಿಕ್ಷಕರ ಮಾಸಿಕ ಮೀಟಿಂಗ್‌ಗಳೂ ಇಲ್ಲಿಯೇ ನಡೆಯುತ್ತಿದ್ದವು. ಶಿಕ್ಷಕರು ಎಂದರೆ ಮೊದಲಿನಿಂದಲೂ ಗೌರವ ಎಂಬ ವಿಚಾರದಲ್ಲಿ ಎರಡು ಮಾತಿಲ್ಲ. ಶಿಕ್ಷಕಿಯರು(ಅಕ್ಕೋರುಗಳು) ಸ್ಥಳೀಯವಾಗಿ ಅನುಕೂಲ ಇರುವ ಮನೆಯಲ್ಲಿ ಉಳಿದು, ಅಥವಾ ಬಾಡಿಗೆ ಉಳಿದು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು. ತಾವು ಕಲಿಸುತ್ತಿದ್ದ ಸಾಲೆಗೆ ತಮ್ಮ ಮಕ್ಕಳನ್ನೂ ಕರೆದುಕೊಂಡು ಬರುತ್ತಿದ್ದರು. ಹೆಚ್ಚಿನ ಸಂದರ್ಭದಲ್ಲಿ ಪ್ರತಿಭಾವಂತ ಮಕ್ಕಳೆಂದರೆ ಈ ಶಿಕ್ಷಕರ ಮಕ್ಕಳೇ ಆಗಿರುತ್ತಿದ್ದುದು ಅಚ್ಚರಿಯ ವಿಷಯವೇನೂ ಅಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ತಮ್ಮ ಮಕ್ಕಳನ್ನು "ಉತ್ತಮ ಶಾಲೆ"ಯಲ್ಲಿ ಓದಿಸುವುದಕ್ಕಾಗಿ ತಾಲೂಕು ಪ್ರದೇಶದಲ್ಲಿ ಶಿಕ್ಷಕರು ಮನೆ ಮಾಡುತ್ತಿದ್ದಾರೆ. ಹಾಗಾಗಿ ಶಿಕ್ಷಕರ ಪ್ರತಿಭಾವಂತ ಮಕ್ಕಳ ಒಡನಾಟ ಉಳಿದ ವಿದ್ಯಾರ್ಥಿಗಳಿಗೆ ತಪ್ಪಿಹೋಗುತ್ತಿದೆ.
1960ರ ದಶಕದ ದಾಖಲೆಗಳು ನಮ್ಮ ಸಾಮಾಜಿಕ ಬೆಳವಣಿಗೆಯ ಹಲವು ಆಯಾಮಗಳಿಗೆ ಸಾಕ್ಷಿಯಾಗಿ ಕಾಣುತ್ತಿವೆ. ಮೊದಲಬಾರಿಗೆ ಹರಿಜನರು ಶಾಲೆಗೆ ಬರತೊಡಗಿದ್ದು, ಸೇರಿದಂತೆ ಸಮಾಜದ ಅಂಚಿನಲ್ಲಿದ್ದ ಹಲವು ಜಾತಿ ಜನಾಂಗಗಳ ವರ್ಣಮಯ ವಿದ್ಯಾರ್ಥಿ ಸಮುದಾಯದ ಕಾಣುತ್ತದೆ. ಹೆಣ್ಣುಮಕ್ಕಳು ಏಳನೇ ತರಗತಿಯಲ್ಲಿ ಉತ್ತೀರ್ಣರಾಗಿ ಪ್ರೌಢಶಾಲೆಗೆಂದು ಟಿಸಿ ಪಡೆದು ಹೋಗತೊಡಗಿದ ದಾಖಲೆ ನಮೂದಾಗಿದೆ. ಬ್ರಟೀಷ್ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು, ಏಳನೆ ತರಗತಿಯಲ್ಲಿ ಟಿ.ಸಿ.ಪಡೆದು ಹೋಗುವಾಗ ಮೊಟ್ಟ ಮೊದಲಿಗೆ ಇಂಗ್ಲೀಷಿನಲ್ಲಿ ಸಹಿ ಹಾಕಿದ್ದಾರೆ. ಭಾಷಾವಾರು ಪ್ರಾಂತ್ಯ ರಚನೆ ನಂತರ ಬಹುತೇಕ ಸಹಿಗಳು ಇಂಗ್ಲೀಷಿನಲ್ಲಿ ಇರುವುದು ನಮ್ಮ ಆಕರ್ಷಣೆಗೆ ಸಾಕ್ಷಿ.
ಶಾಲಾ ದಾಖಲಾತಿಯಲ್ಲಿ ಆರಂಭದಿಂದ ಇಲ್ಲಿಯ ವರೆಗೆ ಒಂದು ನೈತಿಕ ಸಂದೇಶ ಕಾಣುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಬಗ್ಗೆಯೂ ಆತ/ಆಕೆಯ ನಡತೆಯ ಬಗ್ಗೆ ಉಲ್ಲೇಖ ಇದ್ದು, ಉತ್ತಮ, ಸಭ್ಯ,ಚಲೋದು, ನೆಟ್ಟಗೆ ಎಂಬುದಾಗಿ ಹೆಚ್ಚಿನವರ ಹೆಸರಿನ ಎದುರಿಗೆ ಇದೆ. ಅಪರೂಪಕ್ಕೊಮ್ಮೆ ಸಾಧಾರಣ ಎಂದು ಬರೆಯಲಾಗಿದ್ದು, ಇವರು ಸ್ವಲ್ಪ ಕಿಲಾಡಿ ವಿದ್ಯಾರ್ಥಿಗಳಿದ್ದರಬೇಕು. ಆದರೆ ಯಾವ ಹೆಸರಿನ ಎದುರಿಗೂ ನಡತೆ ಕೆಟ್ಟದಾಗಿ ಇತ್ತು ಎಂದು ಬರೆದಿಲ್ಲ. ನೈತಿಕ ಶಿಕ್ಷಣದ ಬಗ್ಗೆ ಆಗೀಗ ಚರ್ಚೆಗಳು ಬರುವ ಇಂದಿನ ದಿನದಲ್ಲಿ ಇದೊಂದು ಕುತೂಹಲದ ಸಂಗತಿಯೇ ಸರಿ. ಕಳೆದ 25 ವರ್ಷ ಹಿರತುಪಡಿಸಿದರೆ, ಆರಂಭದಿಂದಲೂ ಕಡತದಲ್ಲಿ ಕೆಲವರ ಹೆಸರಿನ ಎದುರು ಕೆಂಪು ಸಾಯಿಯಲ್ಲಿ ಬರೆಯಲಾದ ಗಮನ ಸೆಳೆಯುವ ಒಂದು ಅಂಶ ಎಂದರೆ ಶುಲ್ಕದ ವಿಚಾರ. ಮೊದಲ ನಾಲ್ಕು ದಶಕದಲ್ಲಿ ಶಾಲೆಗೆ ಸೇರುವ ವಿದ್ಯಾರ್ಥಿ ಶುಲ್ಕ ಕಟ್ಟಲು ಸಮರ್ಥನೆ ಅಥವಾ ಮಾಪಿ ಬಯಸುತ್ತಾನೆಯೇ ಎಂಬುದನ್ನು ನಮೂದಿಸಲಾಗಿದೆ. ಕೆಲವರ ಹೆಸರಿನ ಎದುರು 2,3 ಅಥವಾ 4 ರೂಪಾಯಿ ತನಕ ಶುಲ್ಕ ಬಾಕಿ ಇಟ್ಟ ಬಗ್ಗೆ ಬರೆಯಲಾಗಿದೆ. ಅವರಲ್ಲಿ ಕೆಲವು ವಿದ್ಯಾರ್ಥಿಗಳು ವರ್ಷದ ನಂತರ ಬಂದು ಶುಲ್ಕ ಕಟ್ಟಿದ್ದನ್ನೂ ನಮೂದಿಸಲಾಗಿದೆ. ಆ ಕಾಲದಲ್ಲಿ ಒಂದೆರಡು ಆಣೆ ಶಾಲಾ ಶುಲ್ಕವನ್ನು ಕಟ್ಟುವುದು ನಮ್ಮ ಹಿಂದಿನ ತಲೆಮಾರಿನ ಜನರಿಗೆ ಕಷ್ಟವಾಗಿತ್ತು ಎಂಬುದೇ ಇದರ ಅರ್ಥವೆಂದು ತಿಳಿದುಕೊಳ್ಳಬೇಕು. ಇನ್ನೊಂದೆಡೆ, ಶಿಕ್ಷಕರ ಹೊಡೆತಕ್ಕೆ  ಹೆದರಿ ಶಾಲೆಯನ್ನು ಅರ್ಧವರ್ಷದಲ್ಲಿಯೇ ಬಿಡುವ ಅದೆಷ್ಟೋ ವಿದ್ಯಾರ್ಥಿಗಳು ಕೊನೆಗೆ ಟ.ಸಿ.ಪಡೆಯುವುದಕ್ಕೂ ಬರುತ್ತಿರಲಿಲ್ಲ. ಕಡತವನ್ನು ನಿರ್ವಹಿಸಬೇಕಾಗಿದ್ದ ಶಿಕ್ಷಕರು ಬಾರದ ಶುಲ್ಕದ ಬಗ್ಗೆ ಬೇಸತ್ತು ಕೊನೆಗೆ ಅವರ ಹೆಸರಿನ ಎದುರು ಬರದು ಹೀಗೊಂದು ಐತಿಹಾಸಿಕ ದಾಖಲೆಗೆ ಕಾರಣಕರ್ತರಾದರು! ಶಾಲೆಯಲ್ಲಿ ಲಭ್ಯ ಇರುವ ವಿದ್ಯಾರ್ಥಿಗಳ ದಾಖಲಾತಿ ಪಟ್ಟಿಯಲ್ಲಿ ಎಲ್ಲಿಯೂ ಕಾಟು ಹೊಡೆದಿಲ್ಲ ಎಂಬುದು ನಮ್ಮ ಶಿಕ್ಷಕರ ಶಿಸ್ತಿಗೊಂದು ನಿದರ್ಶನ. 80ರ ದಶಕದ ರಿಜಿಸ್ಟರ್‌ನಲ್ಲಿ ಸಿಕ್ಕ ಕೆಲವು ಪತ್ರದಲ್ಲಿ ಪಾಸ್‌ಪೋರ್ಟ್ ಪಡೆಯುವ ಸಲುವಾಗ ಕೆಲವರು ಏಳನೆ ತರಗತಿಯ ಕಲಿಕೆ ಪ್ರಮಾಣ ಪತ್ರಕ್ಕಾಗಿ ಶಾಲೆಗೆ ಅರ್ಜಿಸಲ್ಲಿಸಿರುವುದು. ನಮ್ಮ ದಾಖಲೆಗಳು ಎಷ್ಟೊಂದು ಮಹತ್ವದ್ದಾಗಿದ್ದು, ಇದನ್ನು ಸುಂದರವಾಗಿ ಕಾಪಿಡುವುದು ಅತ್ಯಂತ ಅವಶ್ಯವಾಗಿದೆ.
ಶಾಲಾಭಿವೃದ್ಧಿ ಸಮಿತಿಗಳು ಅಸ್ತಿತ್ವಕ್ಕೆ ಬಂದಿದ್ದು ಎರಡು ದಶಕದ ಈಚೆಗೆ. ಅಲ್ಲಿಯ ತನಕ ಸಾಲೆಗಳಲ್ಲಿ ಸ್ವಾತಂತ್ರ್ಯೋತ್ಸವ ಹಾಗೂ ವಾರ್ಷಿಕೋತ್ಸವ ಸಂದರ್ಭದಲ್ಲಿ ಪಂಚಾಯ್ತಿ ಚೇರ‌್ಮನ್ ಅತಿಥಿಯಾಗಿ ಬರುವುದು ಬಿಟ್ಟರೆ ಸ್ಥಳೀಯ ಜನಪ್ರತಿನಿಧಿಗಳು ಶಾಲಾ ಆಡಳಿತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ಇರುವ ಹಳೆಯ ಕಟ್ಟಡದ ಹಿಂಭಾಗದಲ್ಲಿ 50 ವರ್ಷ ಬಳಿಕ ಅಂದರೆ ಕಳೆದ ದಶಕದ ಕೊನೆಯಲ್ಲಿ ಹೊಸ ಕಟ್ಟಡವೊಂದು ಸರಕಾರಿ ಅನುದಾನದ ಮೂಲಕ ಕಟ್ಟಿಸಲಾಗಿದ್ದು, ಆ ಸಂದರ್ಭ ತಮ್ಮ ತಂದೆಯಂತೆ ಕಟ್ಟಡದ ಉಸ್ತುವಾರಿ ವಹಿಸಿದವರು ನಾರಾಯಣ ಮೂರ್ತಿ ಹೆಗಡೆ. ಅವರು ಆಗ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿದ್ದರು.
ಕಳೆದ ದಶಕದ ಕೊನೆಯಲ್ಲಿ ಹೊಸ ಕಟ್ಟಡ
ಶಾಲಾ ದಾಖಲೆಗಳು ಕ್ರಮವಾಗಿ ಮತ್ತು ನಿರಂತರವಾಗಿ ಸಿಗುವುದಿಲ್ಲವಾದರೂ ಒಂದು ಶತಮಾನದ ಅವಧಿಯಲ್ಲಿ ಸರಿ ಸುಮಾರು 4 ಸಾವಿರ ಮಕ್ಕಳು ಇಲ್ಲಿ ಶಿಕ್ಷಣ ಪಡೆದಿರಬಹುದು. ಇಲ್ಲಿಗೆ ಬರುತ್ತಿದ್ದ ಶಿಕ್ಷಕರು ಹಾಗೂ ಸಮೀಪದಲ್ಲೇ ಇರುವ ಫಾರೆಸ್ಟ್ ನಾಕೆಯ ಕಾರಣ ಹೊರ ಜಿಲ್ಲೆಗಳ ಸಿಬ್ಬಂದಿಗಳ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಈ ಅವಧಿಯಲ್ಲಿ ಶಾಲೆಯು ಸಣ್ಣ ಪುಟ್ಟ ಏಳು ಬೀಳನ್ನೂ ಅನುಭವಿಸಿದೆ. ಜನರ ಅನುಕೂಲಕ್ಕಾಗಿ ಸುತ್ತಲಿನ ಊರುಗಳಲ್ಲಿ ಶಾಲೆಗಳು ತಲೆ ಎತ್ತಿದ್ದರಿಂದ ಆಗಿನಷ್ಟು ವಿದ್ಯಾರ್ಥಿಗಳು ಇದೀಗ ಉಳಿದಿಲ್ಲ. ಇದು ಹೊನ್ನೆಗಟಗಿ ಶಾಲೆಯೊಂದರ ಸಮಸ್ಯೆ ಅಲ್ಲ. ಆದರೆ ಹೆಚ್ಚಿನ ಯಾವ ಶಾಲೆಗೂ ಸಾಧ್ಯವಾಗದ ಔನ್ನತ್ಯವನ್ನು ಪಡೆದಿದೆ. ಇತ್ತೀಚೆಗೆ 90ರ ದಶಕದಲ್ಲಿ ಮತ್ತೆ ಉಚ್ರಾಯ ಸ್ಥಿತಿಯಲ್ಲಿ ಬಂದ ಶಾಲೆ ಆ ಹಂತದಲ್ಲಿ ಕೈ ಬರಹ ಪತ್ರಿಕೆಯನ್ನೂ ತಂದು ಗಮನ ಸೆಳೆದಿದೆ. ಇಂಥ ಒಂದು ಶಾಲೆಯ ಹಳೆಯ ವಿದ್ಯಾರ್ಥಿ ನಾನು ಎಂಬುದು ನನಗೆ ಹೆಮ್ಮೆಯ ವಿಷಯ.
(ಶಾಲೆಯಲ್ಲಿ ಲಭ್ಯವಿದ್ದ ಹಳೆಯ ದಾಖಲೆಗಳ ಪ್ರಕಾರ ಸಿದ್ಧಪಡಿಸಲಾದ ಬರಹ ಇದು. ದಾಖಲೆ ಸಹಿತ ನೀಡಿದರೆ ಇನ್ನಷ್ಟು ಮಾಹಿತಿಯನ್ನು ಸೇರಿಸುವ ಅವಕಾಶವಿದೆ.-ಸಂ)

*****
Read More