ಹನಿ ಹನಿ ಯಶಸ್ಸು ಸೇರಿ ನಿರ್ಮಾಣವಾದ ಅಪೂರ್ವ ರೆಸಾರ್ಟ್

ಹನಿ ಹನಿ ಯಶಸ್ಸು  ಸೇರಿ ನಿರ್ಮಾಣವಾದ ಅಪೂರ್ವ ರೆಸಾರ್ಟ್
 ದಾವಣಗೆರೆಯ ಲ್ಯಾಂಡ್ ಮಾರ್ಕ್ ಅಪೂರ್ವ ರೆಸಾರ್ಟ್‌

ಸಣ್ಣ ಸಣ್ಣ ಯಶಸ್ಸು ವ್ಯಕ್ತಿಯೊಬ್ಬನ ಆತ್ಮವಿಶ್ವಾಸ ಹೆಚ್ಚಿಸಿ ಎತ್ತರೆತ್ತರಕ್ಕೆ ಏರಲು ಹೇಗೆ ಸಹಕಾರಿ ಆಯಿತು ಎಂಬುದಕ್ಕೆ ದಾವಣಗೆರೆ ಹೊಟೇಲ್ ಉದ್ಯಮಿ ಅಣಬೇರು ರಾಜಣ್ಣ ಒಂದು ನಿದರ್ಶನ.
ಪೂಣಾ-ಬೆಂಗಳೂರು ಹೆದ್ದಾರಿಯಲ್ಲಿ ದಾವಣಗೆರೆಯ ಲ್ಯಾಂಡ್ ಮಾರ್ಕ್ ಆಗಿ ಗಮನ ಸೆಳೆಯುವ ಅಪೂರ್ವ ರೆಸಾರ್ಟ್‌ನ ರಾಜಣ್ಣ  ಕರಾವಳಿಯವರೇನೂ ಅಲ್ಲ. ಹೊಟೇಲ್ ಉದ್ಯಮ ಇವರಿಗೆ ಕೌಟುಂಬಿಕ ಬಳವಳಿಯೂ ಅಲ್ಲ. ಚಿಕ್ಕದೊಂದು ಯಶಸಸ್ಸು ಕೊಟ್ಟ ಆತ್ಮ ವಿಶ್ವಾಸ ಅವರನ್ನು ಈ ಹಂತದಲ್ಲಿ ತಂದು ನಿಲ್ಲಿಸಿದೆ.
25 ವರ್ಷ ಹಿಂದೆ :
ದಲ್ಲಾಳಿ ಮಂಡಿ/ಹತ್ತೈವತ್ತು ಎಕರೆ ಹೊಲಮನೆಯ ಗೌಡಿಕೆ ಕುಟುಂಬದ ಹಿನ್ನೆಲೆಯ ರಾಜಣ್ಣ  ಆಹಾರ ಧಾನ್ಯಗಳ ಸಗಟು ವ್ಯಾಪಾರಿಯಾಗಿ ತಮ್ಮ ವೃತ್ತಿ ಆರಂಭಿಸಿದರು. ಬಿಎ ನಂತರ ಮನೆತನದ ವ್ಯಾಪಾರದ ವಿಸ್ತಾರಕ್ಕಾಗಿ ದೇಶದ ಪ್ರಮುಖ ನಗರ ಸುತ್ತಿಕೊಂಡಿದ್ದಾಗ, ತಾವೂ ಒಂದು ಹೊಟೇಲ್ ಮಾಡುವ ಆಲೋಚನೆ ಹೊಳೆಯುತ್ತದೆ. ಇವರ ಜೀವನದ ದಿಕ್ಕು ಬದಲಿಸುವ ಸಣ್ಣ  ನಿದರ್ಶನವನ್ನು ಅವರೇ ಒಮ್ಮೆ ಹೇಳಿದರು.

‘‘ಸಗಟು ತುಂಬಿದ ಲಾರಿಯನ್ನು ಕೇರಳದಲ್ಲಿ ಹೊಟೇಲ್ ಒಂದಕ್ಕೆ ತಲುಪಿಸಲು ಹೋಗಿದ್ದೆ. ನಾನು ಇಳಿದುಕೊಂಡ ಹೊಟೇಲ್‌ಗೆ ಮಾಲು ಸರಬರಾಜು ಮಾಡಿ, ಮತ್ತೊಮ್ಮೆ ಹಣ ವಸೂಲಿಗೆ ಅಲ್ಲಿಗೆ ಹೋಗುವುದು ಆ ವ್ಯವಹಾರದ ರೀತಿ. ನಾನು ಇಳಿದುಕೊಂಡ ಹೊಟೇಲ್ ವ್ಯವಹಾರ ಮಾತ್ರ ಕ್ಯಾಶ್ ಎಂಡ್ ಕ್ಯಾರಿ !
ಆ ಹೊಟೇಲ್‌ನ ತಿಂಡಿಯ ಬಿಲ್ಲು, ಲಾಜ್ ಬಾಡಿಗೆಯನ್ನು ಮಾತ್ರ ಆಗಿಂದಾಗ್ಗೆ  ಪಾವತಿ ಮಾಡಿಬರಬೇಕಿತ್ತು.ಯಾವತ್ತೂ ಹೊಟೇಲ್ ಉದ್ಯಮದಲ್ಲಿ ಉದ್ರಿ ಇಲ್ಲ. ವಸೂಲಿಗಾಗಿ ಓಡಾಡುವ ಸಗಟು ವ್ಯಾಪಾರಕ್ಕಿಂತ ಹೊಟೇಲ್ ಉದ್ಯಮ ಆಕರ್ಷಣೆಯಾಗಿ ನನಗೆ ಕಂಡಿತು. ಅದಕ್ಕಾಗಿ ನಾನೂ ಒಂದು ಹೊಟೇಲ್ ಮಾಡಬೇಕು ಎಂದು ಅಲ್ಲಿಯೇ ತೀರ್ಮಾನಿಸಿದೆ’’
ಮಾಡಬೇಕು ಎನಿಸದ ನಂತರ ಸುಮ್ಮನೇ ಆಲೋಚಿಸುತ್ತು ಕುಳಿತುಕೊಳ್ಳುವ ಜನ ಇವರಲ್ಲ.
ದಾವಣಗೆರೆಗೆ ಬಂದವರೆ ಅನುಭವ ಮಂಟಪ ಶಾಲೆಯಲ್ಲಿ ಖಾಲಿ ಬಿದ್ದ ಕ್ಯಾಂಟೀನ್ ಒಂದನ್ನು ಗುತ್ತಿಗೆ ಹಿಡಿದು, ಪರಿಚಿತ ಹಾಗೂ ನಳಪಾಕಿ ಅಡುಗೆ ಭಟ್ಟರೊಬ್ಬರನ್ನು ಉತ್ತಮ ಸಂಬಳದೊಂದಿಗೆ ನೇಮಿಸಿ ಟಿಫಿನ್ ಸೆಂಟರ್ ಒಂದನ್ನು ಆರಂಭಿಸುತ್ತಾರೆ. ತಿಂಡಿ ತಿನಿಸುಗಳನ್ನು ತಾನು ಖುದ್ದಾಗಿ ಸವಿದು ಖುಷಿಪಟ್ಟ , ಉತ್ತಮ ಕೈರುಚಿಯ ಭಟ್ಟರನ್ನು ಅಡುಗೆಯ ಉಸ್ತುವಾರಿಗೆ ನೇಮಿಸಿದ್ದು, ಕ್ಯಾಂಟೀನ್‌ದಲ್ಲಿ  ಸ್ವಚ್ಛ ಹಾಗೂ ಶುದ್ಧತೆಗೆ ಮೊದಲ ಆದ್ಯತೆ ನೀಡಿದ್ದು  ಇವರಿಗೆ ಫಲ ಕೊಟ್ಟಿತು. ಆರು ತಿಂಗಳಲ್ಲಿ ಹಾಕಿದ ಬಂಡವಾಳ ವಾಪಸ್.
ಸಣ್ಣದೊಂದು ಕ್ಯಾಂಟೀನ್ ಸಕ್ಸಸ್ ಆಗಿದ್ದು ರಾಜಣ್ಣರ ಮೊದಲ ಯಶಸ್ಸು. ನಂತರ ಹಳೆಯ ದಾವಣಗೆರೆ, ಪಿಬಿ ರೋಡಿನಲ್ಲಿ  ಹೆಗಲು ಕೊಡುವವರಿಗಾಗಿ ಕಾಯುತ್ತಿದ್ದ  ಹೊಟೇಲ್‌ಗಳನ್ನು ಒಂದಾದ ನಂತರ ಒಂದರಂತೆ ವಹಿಸಿಕೊಂಡರು. ಹೊಸ ಆಕರ್ಷಣೆಗಳೊಂದಿಗೆ ದಾವಣಗೆರೆಯಲ್ಲಿ ಒಂದೇ ದಶಕದಲ್ಲಿ ಹೊಟೇಲ್ ಉದ್ಯಮಿಯಾಗಿ ಗುರುತಿಸಕೊಂಡರು.
 ಕೊನೆಯದಾಗಿ ಅಪೂರ್ವ ರೆಸಾರ್ಟ್‌ಗೆ ಕೈ ಹಾಕುವ ಹೊತ್ತಿಗೆ ಹದಿನೈದು ವರ್ಷದ ಅನುಭವ ಹಾಗೂ ಶತಕೋಟಿಯಷ್ಟು ಆತ್ಮ ವಿಶ್ವಾಸ ಅವರಲ್ಲಿ  ಇತ್ತು. ಅಲ್ಲದೆ ಒಂದಿಷ್ಟು ಅಸೆಟ್ ಕೂಡ ಇತ್ತು.
ಆದಾಯದಲ್ಲಿ ಬಂದ ಹಣದಲ್ಲಿ  ಊರಿಂದ ಆಚೆ ಬಾಡಾ ಕ್ರಾಸ್‌ನಲ್ಲಿ  ಒಂದಿಷ್ಟು ಜಾಗದ ಮೇಲೆ ಹೂಡಿದ್ದರು. ಇವರ ಅಂದಾಜಿನಂತೆ ಜಾಗಕ್ಕೆ ಬೇಡಿಕೆ ಬಂದಿರಲಿಲ್ಲ. ನಗರದ ದೊಡ್ಡ ದೊಡ್ಡ ಉದ್ಯಮಿಗಳಿಗೆ ಕೇಳಿಕೊಂಡರೂ ಇದರ ಖರೀದಿಗೆ ಯಾರೂ ಮುಂದೆ ಬರಲಿಲ್ಲ.  ಈ ಜಾಗವನ್ನು ಮಾರುವ ಬದಲು ಒಂದು ರೆಸಾರ್ಟ್ ಕಟ್ಟಿದರೆ ಹೇಗೆ ಎಂಬ ಆಲೋಚನೆಯೂ ಅಚಾನಕ್ಕಾಗಿ ಬರುತ್ತದೆ. ಆದರೆ ಇದೂ ಒಂದು ದೊಡ್ಡ ಸಾಹಸದ ಕೆಲಸವೇ ಆಗಿತ್ತು.
ರೆಸಾರ್ಟ್ ಕಟ್ಟುವ ಮೊದಲು ಸಾಕಷ್ಟು ಗ್ರೌಂಡ್ ವರ್ಕ್ ಮಾಡಿಕೊಂಡಿದ್ದರೂ, ಪೂಣಾ ಬೆಂಗಳೂರು ರಸ್ತೆ ಪಕ್ಕದಲ್ಲಿ ರೆಸಾರ್ಟ್ ಕಟ್ಟುವ ಮೊದಲು ದೇಶ ವಿದೇಶದ ರೆಸಾರ್ಟ್‌ಗಳಿಗೆ ಭೇಟಿ ನೀಡಿ ಅಲ್ಲಿನ ಕೊಠಡಿಗಳನ್ನು, ಅಡುಗೆ ಮನೆಯನ್ನು ಹಾಗೂ ಟಾಯ್ಲೆಟ್‌ಗಳನ್ನು ಸಂದರ್ಶಿಸಿದ್ದರು.

ಅಷ್ಟರಲ್ಲೇ ದೇಶದ ಎಲ್ಲೆಡೆಯ ಸ್ಟಾರ್ ಹೊಟೇಲ್‌ಗಳನ್ನು ಸುತ್ತಿ, ಜನರು ಯಾಕಾಗಿ ಹೊಟೇಲ್‌ಗೆ ಬರುತ್ತಾರೆ. ಏನನ್ನು ನಿರೀಕ್ಷಿಸುತ್ತಾರೆ ಎಂಬುದನ್ನೆಲ್ಲ ತಿಳಿದು ರಕ್ತಗತ ಮಾಡಿಕೊಂಡಿದ್ದರು.
ರೆಸಾರ್ಟ್ ಎಂಬ ಕನಸಿಗೆ ಅವರಲ್ಲಿ ಇದ್ದ ಬಂಡವಾಳ ಎಂದರೆ ಹೆದ್ದಾರಿ ಪಕ್ಕದಲ್ಲಿ ಒಂದಿಷ್ಟು ಖಾಲಿ ಜಾಗ, ಅದಕ್ಕಿಂತ ಹೆಚ್ಚಾಗಿ ಒಂದಾದ ಮೇಲೊಂದು ನಾಲ್ಕು ಯಶಸ್ವೀ ಹೊಟೇಲುಗಳನ್ನು ಕಟ್ಟಿದ ಆತ್ಮ ವಿಶ್ವಾಸ ಮಾತ್ರ.
ಇದೇ ಹಿನ್ನೆಲೆಯಲ್ಲಿ  ರೂಪು ಪಡೆದ ಅಪೂರ್ವ ಇದೀಗ ಪೂಣಾ ಬೆಂಗಳೂರು ಹೆದ್ದಾರಿಯ ಒಂದು ಅಪರೂಪದ ಆಯ್ಕೆಯ ತಾಣವಾಗಿದೆ. ಅಷ್ಟೇ ಸ್ವತಂತ್ರ ಹಾಗೂ ಯಶಸ್ವೀ ಉದ್ಯಮವಾಗಿದೆ.
-ಸದಾನಂದ ಹೆಗಡೆ



Read More

ಹೊಸ ಮುಖದ ಬೇಡಿಕೆ ನಿರಂತರ

ಹೊಸ ಮುಖದ ಬೇಡಿಕೆ ನಿರಂತರ
ಚುನಾವಣೆಯಿಂದ ಚುನಾವಣೆಗೆ ದಿಕ್ಕು ಬದಲಿಸುವ ರಾಜಕೀಯ ಗಾಳಿ
-ಸದಾನಂದ ಹೆಗಡೆ
ಕಾರ್ಪೋರೇಟ್ ಕಂಪೆನಿಗಳು ತಮ್ಮ ಸಿಬ್ಬಂದಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ ಏರ್ಪಡಿಸಿ ನಾಯಕತ್ವ  ಪಾಠ ಹೇಳಿಕೊಡುತ್ತವೆ. ದೇಶದ ಕಾರ್ಯಾಂಗದ ಚುಕ್ಕಾಣಿಯನ್ನು ಹೊರುವ ಐಎಎಸ್ ಅಧಿಕಾರಿಗಳಿಗೆ ತರಬೇತಿ ನೀಡುವ ತಾಣಗಳಿವೆ.  ಆದರೆ ಶಾಸಕರು, ಸಂಸದರು ತಮ್ಮ ತಮ್ಮ ಕ್ಷೇತ್ರದಲ್ಲಿ ನಾಯಕರೇ ಆಗಿರುತ್ತಿದ್ದರೂ, ಅವರಿಗೆ ಎಲ್ಲಿದೆ ನಾಯಕತ್ವ ತರಬೇತಿ. ಇದೇನು ಸಣ್ಣ ಪ್ರಶ್ನೆಯಲ್ಲಘಿ, ಕರ್ನಾಟಕದಂಥ ಒಂದು ರಾಜ್ಯದಲ್ಲಿ 224 ಶಾಸಕರು ಅಥವಾ ದೇಶದಲ್ಲಿ  520 ಸಂಸದರು ತಮ್ಮ ತಮ್ಮ ಕ್ಷೇತ್ರಕ್ಕೆ ನಾಯಕರಾಗುತ್ತಾರೆ. ಅವರಿಗೆಲ್ಲಿದೆ ತರಬೇತಿ ? ಶಾಸಕರು, ಸಂಸದರಾಗುವುದು ಹೇಗೆ ? ಹಾಗೆ ನೋಡಿದರೆ ಜನಪ್ರತಿನಿಧಿ ಆಗುವವರಿಗೆ ಟಿಪ್ಸ್ ನೀಡುವ ನಾಯಕತ್ವ ಶಿಬಿರಗಳು ನಡೆಯುವುದು ಅಪರೂಪ. ಹೀಗಿರುವಾಗ ಹೊಸದಾಗಿ ರಾಜಕೀಯಕ್ಕೆ ಬರುವವರು ರಾಜಕಾರಣದ ಪಾಠ ಕಲಿಯುವುದು ಹೇಗೆ ? ರಾಜಕೀಯ ಪಕ್ಷಗಳು ವಿವಿಧ ಕ್ಷೇತ್ರಗಳಿಗೆ ಟಿಕೆಟ್ ನೀಡುವಾಗ ಅನುಸರಿಸುವ ಮಾನದಂಡ ಏನು ? ಶಾಸನ ಸಭೆ ಹಾಗೂ ಸಂಸತ್ತನ್ನು ಪ್ರವೇಶಿಸಲು ಯಾರ್ಯಾರು ಯಾವ ಮಾರ್ಗವನ್ನು ಅನುಸರಿಸಿದರು ಎಂಬ ಬಗ್ಗೆ ಇಲ್ಲಿದೆ ಒಂದು ಝಲಕ್.
************
ನ್ನಷ್ಟಕ್ಕೆ ತಾನು ಉದ್ಯಮ ಬೆಳೆಸಿಕೊಂಡಿದ್ದವನನ್ನು ಪಕ್ಷಕ್ಕೆ ಕರೆದು ಟಿಕೆಟ್ ಕೊಟ್ಟು ಎಂಎಲ್‌ಎ ಮಾಡುವುದು ಶಕ್ತಿ ರಾಜಕಾರಣದ ಟ್ರೆಂಡ್ ಆಗಿದೆ. ಮೊದಲಿನಿಂದೂ ಇದ್ದ  ಈ ರೂಢಿ ಇತ್ತೀಚೆಗೆ ಎಲ್ಲ ಪಕ್ಷಗಳ ರಾಜಕೀಯ ತಂತ್ರವಾಗಿದೆ. ಸಿನಿಮಾದಲ್ಲಿ ಜನಪ್ರಿಯತೆಯನ್ನುಘಿ, ಹಣವನ್ನು ಸಂಪಾದಿಸಿಕೊಂಡಿದ್ದವರಿಗೆ ಮಣೆ ಹಾಕುವುದಕ್ಕಿಂತ ಹೆಚ್ಚು ಉದ್ಯಮಿಗಳಿಗೆ ರಾಜಕೀಯದಲ್ಲಿ  ಮಣೆಹಾಕಲಾಗುತ್ತಿದೆ. ಇದಕ್ಕಿಂತ ಹೊಸ ಟ್ರೆಂಡ್ ಎಂದರೆ ಸನ್ಯಾಸಿಗಳನ್ನುಘಿ, ಮಠಾಧೀಶರನ್ನು ರಾಜಕಾರಣಕ್ಕೆ ಕರೆತಂದು, ಅರಿಗೆ ಟಿಕೆಟ್ ಕೊಟ್ಟು  ಜನಪ್ರತಿನಿಧಿಯಾಗಿಸುತ್ತಿರುವುದು. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗುತ್ತಲೆ ಈ ತಂತ್ರವೂ ದೇಶದಲ್ಲಿ  ಎದ್ದು ತೋರಿತು. ರಾಜ್ಯದಲ್ಲಿ  ನಮ್ಮೆದುರು ಬಂದು ನಿಂತಿರುವ ವಿಧಾನಸಭೆ ಚುನಾವಣೆಯಲ್ಲಿ ಹಲವಾರು ಮಠಾಧೀಶರೂ ಟಿಕೆಟ್ ಪಡೆದುಕೊಳ್ಳುತ್ತಿದ್ದಾರೆ ಎಂದು ಆಗಲೇ ಸುದ್ದಿಯಾಗಿದೆ.
 ಚುನಾವಣೆ ರಾಜಕಾರಣವು ಕಾಲ ಕಾಲಕ್ಕೆ ಹೊಸ ಹೊಸ ಪಟ್ಟುಗಳನ್ನು ಅಳವಡಿಸಿಕೊಳ್ಳುತ್ತ ಬಂದಿದೆ. ಪ್ರಭಾವೀ ರಾಜಕಾರಣಿಗಳು ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಟಿಕೆಟ್ ಕೊಟ್ಟು  ಜನರ ಕೌಟುಂಬಿಕ ನಿಷ್ಠೆಯನ್ನು ನಗದೀಕರಿಸುವುದರಿಂದ ರಂಭವಾಗಿ, ಸ್ವಾತಂತ್ರ್ಯಾನಂತರ ಪ್ರತೀ ದಶಕದಲ್ಲೂ ಹೊಸ ಹೊಸ ವರಸೆಗಳನ್ನು ಕಾಣುತ್ತ ಬಂದಿದ್ದೇವೆ. ಮಗನನ್ನು  ಭಾವಿ ರಾಜಕಾರಣಿಯಾಗಿ ಬೆಳೆಸುವುದು ಇದೀಗ ಆಕ್ಷೇಪಾರ್ಹ ವಿಚಾರವೇನೂ ಅಲ್ಲಘಿ. ಐದಾರು ದಶಕದಿಂದ ಇದ್ದ ಈ ಪದ್ದತಿ ಭಾರತದಲ್ಲಿ  ನಾಯಕರಾಗುವ ಒಂದು  ಪ್ರಮುಖ ಮಾರ್ಗವೇ ಸರಿ.
ನಮ್ಮೆದುರಿಗಿರುವ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳ ಇತಿಹಾಸ ಅವಲೋಕಿಸಿದಾಗ ರಾಜಕೀಯದ ವಿಭಿನ್ನ ಬಣ್ಣಗಳು, ಹೊಸ ಸಾಧ್ಯತೆಯ ನಾಯಕತ್ವಗಳು ಹುಟ್ಟಿಕೊಡಂಥ ಇತಿಹಾಸವೇ ಎದುರು ನಿಲ್ಲುತ್ತದೆ. ವಿಭಿನ್ನ ಹಂತದಲ್ಲಿ  ರಾಜಕೀಯ ಚಳವಳಿಗಳು ನಮ್ಮ ನಡುವೆ ನಾಯಕರನ್ನು ಸೃಷ್ಟಿಸಿವೆ. ರೈತ ಚಳವಳಿಗಳು, ನೀರಾವರಿ ಹೋರಾಟಗಳು ನಮ್ಮಲ್ಲಿ  ಅದೆಷ್ಟೋ ಜನ ನಾಯಕರನ್ನು ಸೃಷ್ಟಿಸಿವೆ. ಸೆಕ್ಯುಲರ್‌ವಾದ, ಹಿಂದುತ್ವ , ರಾಷ್ಟ್ರೀಯ ವಾದ, ಪ್ರಾದೇಶಿಕ ಪಕ್ಷಗಳು, ಕಮ್ಯುನಿಷ್ಟಘಿರು, ಸಮಾಜವಾದಿಗಳು, ಸಮತಾವಾದಿ ಚಳವಳಿಗಳಿಯೂ ಒಂದಿಷ್ಟು ನಾಯಕರನ್ನು ಸೃಷ್ಟಿಸಿದವು.
ರಾಜ್ಯದಲ್ಲಿ  ನಮ್ಮ ನಡುವೆ ಸಹಕಾರಿ ಹಿನ್ನೆಲೆಯ ಹತ್ತು ಹಲವು ನಾಯಕರಿದ್ದಾರೆ. ಬೆಳಗಾವಿ, ವಿಜಾಪುರ ಜಿಲ್ಲೆಗಳು ಅತಿ ಹೆಚ್ಚು ಸಹಕಾರಿ ನಾಯಕರನ್ನು ಸೃಷ್ಟಿಸಿವೆ. ಆದರೆ ಅವಿಭಜಿತ ಚಿತ್ರದುರ್ಗದಲ್ಲಿ ಸಹಕಾರಿ ಚಳುವಳಿ ಇನ್ನಷ್ಟು ನಾಯಕರನ್ನು ಸೃಷ್ಟಿಸಬೇಕಿತ್ತುಘಿ ಅನ್ನಿಸುತ್ತದೆ. ರಾಜಕೀಯವಾಗಿ ಬೆಳೆಯಲು ಇದೊಂದು ಮಾರ್ಗವಿದೆ ಎಂದು ಯುವಕರಿಗೇಕೆ ಹೊಳೆಯಲಿಲ್ಲವೋ ಗೊತ್ತಿಲ್ಲಘಿ. ಒಂದು ತಿಂಗಳ ಹಿಂದೆ ನವೆಂಬರ್ 14 ರಿಂದ 20ರ ತನಕ ದೇಶವು 63ನೇ ಸಹಕಾರಿ ಸಪ್ತಾಹ ಆಚರಿಸಿದ ಹಿನ್ನೆಲೆಯಲ್ಲಿ ಹೀಗೊಂದು ಅನಿಸಿಕೆ. ಇಂದಿಗೂ ರಾಜಕೀಯ ನಾಯಕರಾಗುವ ಹಂಬಲ ಇದ್ದವರಿಗೆ ಇದೊಂದು ಮಾರ್ಗವಾಗಿದೆ.
ಯಾವುದೇ ವ್ಯಕ್ತಿ ಕನಸು ಕಂಡ ಮಾರನೆ ದಿನ ಬೆಳಗ್ಗೆ ಒಬ್ಬ ಎಂಎಲ್‌ಎಯೋ  ಎಂಪಿಯೋ ಆಗಿಬಿಡುವುದಿಲ್ಲಘಿ. ಎಂಎಲ್‌ಎ ಎಂದಲ್ಲಘಿ, ಒಂದೇ ದಿನದಲ್ಲಿ ಯಾವ ದೊಡ್ಡ ಸಾಧನೆಯೂ ಸಾಧ್ಯವಾಗುವುದಿಲ್ಲಘಿ. ಕೊನೇ ಪಕ್ಷ ಗ್ರಾಮ ಪಂಚಾಯ್ತಿ ಸದಸ್ಯನೂ ಆಗುವುದಿಲ್ಲಘಿ. ನಾಯಕರಾಗುವುದಕ್ಕೆ ಒಂದಿಷ್ಟು ಗ್ರೌಂಡ್ ವರ್ಕ್ ಬೇಕೇ ಬೇಕು. ವ್ಯಕ್ತಿಯೊಬ್ಬ ಬಲವಾದ ಪ್ರೊಾಯ್ಲ್  ಸೃಸಿಕೊಳ್ಳಬೇಕು. ನಾಯಕತ್ವಕ್ಕೆ ಬೇಕಾಗುವ ಸಾರ್ವಜನಿಕ ಸೇವೆ, ಸಂವಹನ, ಹಣಕಾಸು ನಿರ್ವಹಣೆ ಜತೆಗೆ ಆಡಳಿತಾತ್ಮಕ ಅನುಭವಗಳು ಸಹಕಾರ ಚಳುವಳಿಯಲ್ಲಿ ಸಹಜವಾಗಿ ದೊರೆಯುತ್ತದೆ.
ಸ್ವಾತಂತ್ರ್ಯ ಹೋರಾಟ ಪ್ರಕ್ರಿಯೆಯಲ್ಲಿ  ವೃತ್ತಿ ನಿರತ ವಕೀಲರು ನಾಯಕರಾಗುತ್ತಿದ್ದರು. ಸ್ವಾತಂತ್ರ್ಯಾ ನಂತರ ಶಾಸಕರು, ಸಂಸದರಲ್ಲಿ  ಪ್ರತಿಶತ ಐವತ್ತರಷ್ಟು ಜನ ವಕೀಲರು.. ಕಾನೂನಿನ ತಿಳಿವಳಿಕೆ ಹಾಗೂ ಕ್ಲೈಂಟ್ ಸಮೂಹವೂ ಇವರ ನಾಯಕತ್ವದ ಜೀವಾಳವಾಗಿರುತ್ತಿತ್ತುಘಿ. ಇತ್ತೀಚೆಗೆ ಆ ಪ್ರಮಾಣದಲ್ಲಿ ವಕೀಲರು ರಾಜಕೀಯಕ್ಕೆ ಬರುತ್ತಿಲ್ಲಘಿ.
ಪ್ರತಿಯೊಂದು ರಾಜಕೀಯ ಪಕ್ಷವೂ  ತಮಗೆ ಬೇಕಾದ ನಾಯಕರನ್ನು ಬೆಳೆಸಲು ಯುವ ಘಟಕವನ್ನು ಸ್ಥಾಪಿಸುತ್ತ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೆ  ಯುವ ಕಾಂಗ್ರೆಸ್ ಘಟಕ ಹಾಗೂ ಎನ್‌ಎಸ್‌ಯುಐ ಮತ್ತಿತರ ಸಂಸ್ಥೆಗಳಿವೆ. ಎನ್‌ಎಸ್‌ಯುಐ ಮೂಲಕ ಬೆಳೆದ ಸಾಕಷ್ಟು ನಾಯಕರನ್ನು ಇದೀಗ ರಾಜ್ಯದಲ್ಲಿ ಕಾಣಬಹುದು. ಎಪತ್ತರ ದಶಕದಲ್ಲಿ  ಆಗಿನ ಪ್ರಧಾನಿ ಇಂದಿರಾ ಗಾಂಧಿ ವಿಧಿಸಿದ ತುರ್ತು ಪರಿಸ್ಥಿತಿ ಒಂದಿಷ್ಟು ನಾಯಕರನ್ನು ಸೃಷ್ಟಿಸಿತು. ತುರ್ತು ಪರಿಸ್ಥಿತಿಯನ್ನು ದಿಟ್ಟವಾಗಿ ವಿರೋಧಿಸಿ ಜೈಲಿಗೆ ಹೋದವರೆಲ್ಲ ನಂತರ ಅದನ್ನೇ ತಮ್ಮ ಸಾರ್ವಜನಿಕ ವ್ಯಕ್ತಿತ್ವದ ಪ್ರಮಾಣಪತ್ರವಾಗಿಸಿಕೊಂಡರು. ಜನತಾ ಪರಿವಾರ, ಬಿಜೆಪಿ ಪರಿವಾರದ ರಾಜಕಾರಣಿಗಳನ್ನು ಕೇಳಿ ನೋಡಿ.. ತುರ್ತು ಪರಿಸ್ಥಿಯಲ್ಲಿ  ತಾನು ಜೈಲಿಗೆ ಹೋಗಿ ಬಂದವ ಎಂದು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಎಂಭತ್ತರ ದಶಕದಲ್ಲಿ  ಬೆಳೆಯತೊಡಗಿದ ಭಾರತೀಯ ಜನತಾಪಕ್ಷಕ್ಕೆ ಸಂಘಪರಿವಾರ, ವಿಶೇಷವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ನಾಯಕರ ಸೃಷ್ಟಿಯ ತರಬೇತಿ ಕೇಂದ್ರವಾಯಿತು. ಇದೀಗ ಬಿಜೆಪಿಯಲ್ಲಿರುವ ಬಹುತೇಕ ನಾಯಕರು, ಆರ್‌ಎಸ್‌ಎಸ್, ಎಬಿವಿಪಿ, ಹಿಂದೂ ಜಾಗರಣ ವೇದಿಕೆ ಅಲ್ಲದೆ  ಯುವ ಮೋರ್ಚಾದ ಹಿನ್ನೆಲೆಯವರಾಗಿದ್ದಾರೆ. ಸ್ವಾತಂತ್ರ್ಯಾನಂತರ ಅತಿ ದೊಡ್ಡ ಸಂಖ್ಯೆಯಲ್ಲಿ ರಾಜಕೀಯ ನಾಯಕರನ್ನು ಸೃಷ್ಟಿಸಿದ್ದರೆ ಅದು ಕಾಂಗ್ರೆಸ್ ಮತ್ತು ಬಿಜೆಪಿಯ ಪರಿವಾರ ಸಂಘಟನೆಗಳಾಗಿವೆ. ಇದೇ ಕಾರಣಕ್ಕಾಗಿ ದೇಶದಲ್ಲಿ ಅತಿದೊಡ್ಡ ರಾಜಕೀಯ ಪಕ್ಷಗಳಾಗಿವೆ. ರಾಜಕೀಯ ನಾಯಕರಾಗಬೇಕೆನ್ನುವರು, ಮೊದಲು ಈ ಸಂಘಟನೆಗಳ ಸದಸ್ಯತ್ವ ಪಡೆಯಬೇಕಾಗುತ್ತದೆ.
ಇದಕ್ಕೂ ಹೊರತಾಗಿ ನಾಯಕರು ಸೃಷ್ಟಿಯಾಗುವ ಹಲವು ಸಾಧ್ಯೆತಗಳು ನಮ್ಮಲ್ಲಿವೆ. ಇದೀಗ ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷಘಿವು ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿ ಹೋರಾಟದಿಂದಲೇ ಸೃಷಿಯಾಯಿತು. ತಮಿಳ್ನಾಡು, ಆಂಧ್ರಪ್ರದೇಶದ ಮತದಾರರು, ತಮ್ಮ ಸಿನಿಮಾ ಪ್ರೀತಿಯ ಪರಿಣಾಮವಾಗಿ ಸಾಕಷ್ಟು ಸಂಖ್ಯೆಯ ಸಿನಿಮಾ ರಾಜಕಾರಣಿಗಳನ್ನು ಸೃಷ್ಟಿಸಿದರು. ರಂಗಭೂಮಿ ಹಾಗೂ ಸಾಹಿತ್ಯವೂ ಕೆಲವು ರಾಜಕೀಯ ನಾಯಕರನ್ನು ಸೃಷ್ಟಿಸಿದೆ. ಸಾಹಿತ್ಯವು ರಾಜಕೀಯ ನಾಯಕರನ್ನು ಸೃಷ್ಟಿಸುವುದಕ್ಕಿಂತ ಸಾಂಸ್ಕೃತಿಕ ನಾಯಕತ್ವವನ್ನು ಸೃಷ್ಟಿಸಿದೆ. ಕನ್ನಡಕ್ಕಾಗಿ ಹೋರಾಡಿದ ಅದೆಷ್ಟೋ ಜನರು ಶಾಸಕರಾಗಿದ್ದಾರೆ. ನಾಡು, ನುಡಿ ಮತ್ತು ಭಾಷೆಯ ಹಿತರಕ್ಷಣೆಯೂ ಒಂದು ನಾಯಕತ್ವವನ್ನು ಸೃಷ್ಟಿಸಬ ಹದು. ರೋಟರಿ, ಲೈನ್ಸ್‌ಗಳು ಮತ್ತು ಹಲವಾರು ಎನ್‌ಜಿಒಗಳು ನಮ್ಮೆದುರಿಗೆ ಕೆಲವು ರಾಜಕೀಯ ನಾಯಕರನ್ನು ಸೃಷ್ಟಿಸಿವೆ.

ಇದೆಲ್ಲದರ ಹೊರತಾಗಿ ಮೀಸಲಾತಿಯು ಒಂದಿಷ್ಟು ನಾಯಕತ್ವವನ್ನು ಸೃಷ್ಟಿಸಿದೆ. ಹಿಂದುಳಿದವರು, ದಮನಿತರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ  ಮೀಸಲಾತಿ ಎಂಬುದು ಒಂದು ಬಲವಾದ ಮಾರ್ಗ ಎಂದು ನಾವಿಂದು ವಿವಾದಾತೀತವಾಗಿ ಒಪ್ಪಿಕೊಂಡಿದ್ದಿದೆ. ಕ್ಷೇತ್ರವಾರು ಮೀಸಲಾತಿಗಳು ಸ್ವಾತಂತ್ರ್ಯಾನಂತರ  ಅದೆಷ್ಟೊ ಹೊಸ ವ್ಯಕ್ತಿಗಳಿಗೆ ರಾಜಕೀಯ ನೆಲೆಗಳನ್ನು ಕಲ್ಪಿಸಿದೆ. ಮಹಿಳಾ ಮೀಸಲಾತಿಯೂ ಅದೆಷ್ಟೋ ಸಂಖ್ಯೆಯಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಹಾಗೂ ಗ್ರಾಮ ಪಂಚಾಯಿಗಳ ನೆಲೆಯಲ್ಲಿ  ಅದೆಷ್ಟೋ ಮಹಿಳೆಯರು ರಾಜಕೀಯ ನಾಯಕರಾಗಿ ಬೆಳೆಯಲು ಸಾಧ್ಯವಾಯಿತು. ರಾಜಕೀಯ ಪಕ್ಷಗಳು ಇದೀಗ ಟಿಕೆಟ್ ವಿತರಣೆಯಲ್ಲಿ  ಮೀಸಲಾತಿ, ಸಾಮಾಜಿಕ ನ್ಯಾಯ ಅಥವಾ ಜಾತಿ ಸಮೀಕರಣವನ್ನು  ಚಾಣಾಕ್ಯ ರೀತಿಯಿಂದ ಬಳಸುತ್ತಿವೆ. ತಮ್ಮದು ಹಿಂದುಳಿದವರ ಪಕ್ಷಘಿ ಎಂದು ರಾಜಕೀಯದ ಬ್ರ್ಯಾಂಡ್ ಮಾಡಿಕೊಂಡು ಒಂದುಷ್ಟು ನಾಯಕರನ್ನು ಬೆಳೆಸಿದವರಿದ್ದಾರೆ. ಮೇಲ್ವರ್ಗದವರ ಪಕ್ಷವಾಗಿ, ಅಲ್ಪ ಸಂಖ್ಯಾತರು, ಬಹು ಸಂಖ್ಯಾತರಲ್ಲಿ ರಾಜಕೀಯ ನೆಲೆಯನ್ನು ಕಂಡುಕೊಳ್ಳುವುದು, ಏನೆಲ್ಲ ಸಾಧ್ಯತೆಯಿಂದ ನಾಯಕತ್ವದ ಕಸರತ್ತು ಜನತಂತ್ರದ ಮಾರ್ಗದಲ್ಲಿ ನಡೆದಿದೆ. ಜಾತಿ ಸಂಘಟನೆಗಳ ನಾಯಕರು, ನಿವೃತ್ತ ಸರಕಾರಿ ಅಧಿಕಾರಿಗಳು, ದೊಡ್ಡ ಪ್ರಮಾಣದಲ್ಲಿ ಸರಕಾರಿ ಗುತ್ತಿಗೆದಾರರು ಕೊನೆಗೆ ಗೂಂಡಾಗಿರಿ ಹಾಗೂ ವಿಭಿನ್ನ ನೆಲೆಯ ಮತೀಯ ವಾದಗಳೂ ನಮ್ಮಲ್ಲಿ ರಾಜಕೀಯ ನಾಯಕರನ್ನು ಸೃಷ್ಟಿಸಿದೆ. ದೇಶದಲ್ಲಿ  ಜನ ನಾಯಕರನ್ನುಘಿ, ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರ ಜನರಲ್ಲಿಯೇ ಇರುವುದರಿಂದ ಜಾಗೃತ ಮತದಾರರು ಉತ್ತಮ ನಾಯಕತ್ವವನ್ನೇ ಸೃಷ್ಟಿಸುತ್ತಾರೆ ಎಂಬುದು ಪ್ರತಿಯೊಬ್ಬ ನಾಯಕರೂ ತಿಳಿಯಬೇಕಾದ  ವಿಚಾರ. ಯಾವುದೇ ಹಿನ್ನೆಲೆಯಿಂದ ಆಯ್ಕೆಯಾದರೂ ಅವರು ಸಂವಿಧಾನದ ಮಾರ್ಗದರ್ಶನದಂತೆ ಕಾರ್ಯ ನಿರ್ವಹಿಸಬೇಕಾಗುತ್ತದೆ.
Read More

ಕಾಲಿಯಾನಲ್ಲಿದೆ ಕಾರ್ಪೋರೇಟ್ ಪಾಠ !

ಕಾಲಿಯಾನಲ್ಲಿದೆ ಕಾರ್ಪೋರೇಟ್ ಪಾಠ !


ಈತ ಕಾಲಿಯಾ ಗೋಸಾಯಿ. ದಾವಣಗೆರೆ ಶಾಮನೂರು ರಿಂಗ್  ರೋಡಿನಲ್ಲಿ  ಕೈಮಾಡಿ ಕಾರ್ ನಿಲ್ಲಿಸಿದ. ಕೈಯಲ್ಲಿ ಒಂದು ಕಬ್ಬಿಣದ ಪಟ್ಟಿ, ಅದನ್ನು ಕಾಯಿಸಲು ಡಬ್ಬಿಯ ಸಿಗಡಿ. ಸಿಗಡಿಯು ಅಗ್ನಿಹೋತ್ರಿಗಳ ಮನೆಯ ಅರ್ಣವದಂತೆ ಯಾವಾಗಲೂ ಉರಿಯುತ್ತಿರುತ್ತದೆ. ಅತ್ಯಂತ ಕಡಿಮೆ ಹೂಡಿಕೆಯಲ್ಲಿ ಮೂರು ಹೆಣ್ಣು ಮಕ್ಕಳು ಸೇರಿ ಐವರ ಕುಟುಂಬದ ನೋಗವನ್ನು ಎಳೆಯುವ ಕಾರ್ ರಿಪೇರಿ ಮೆಕ್ಯಾನಿಕ್ ಕೆಲಸ ಇವನದ್ದು.
ಸಣ್ಣ ಚೌಕಾಶಿ ಬಳಿಕ ಟ್ರಾಫಿಕ್ ಸಂದಿಯಲ್ಲಿ ಸಿಕ್ಕಿ ಕಿತ್ತುಹೋದ ಕಾರಿನ ಎರಡು ಬಂಪರ್ ರಿಪೇರಿಗೆ 200 ರೂ.ಗೆ ಸೆಟಲ್ ಆಗಿ ತಕ್ಷಣ ಕೆಲಸ ಸ್ಟಾರ್ಟ ಮಾಡಿದ. ಅಲ್ಲಿಯೇ ಅಕ್ಕಪಕ್ಕದಲ್ಲಿದ್ದ  ಪ್ಲೈಉಡ್ ಹಾಗೂ ಕಟ್ಟಿಗೆ ಕಾಗದದ ಚೂರು ಸೇರಿಸಿ ಬೆಂಕಿಯಲ್ಲಿ  ಕಬ್ಬಿಣ ಬಿಸಿ ಮಾಡಿ, ಕಿತ್ತು ಬಂದ ಮೂಲೆಗೆ ಮೊಳೆ ಹೊಡೆದು ತೀಡಲು ಆರಂಭಿಸಿದ.
ಈ ಜನರು ಮೊದ ಮೊದಲು ಊರೂರು ಸುತ್ತಿ  ಪ್ಲಾಸ್ಟಿಕ್ ಬಕೆಟ್ ರಿಪೇರಿಗೆ ಮಾಡುತ್ತಿದ್ದರಂತೆ. ಹತ್ತು ವರ್ಷದ ಹಿಂದೆ ಊರೂರು 
ಸುತ್ತಿಕೊಂಡು ಒಡೆದ ಬಕೆಟ್‌ಗಳಿಗೆ ಸುಂದರವಾಗಿ  ತೇಪೆ ಹಾಕಿ ಸರಿಮಾಡುತ್ತಿದ್ದರು. ಯೂಸ್ ಎಂಡ್ ಥ್ರೋ ಜಮಾನದಲ್ಲಿ ಈಗ ಯಾವನೂ ಇವರನ್ನು ಬಕೆಟ್ ರಿಪೇರಿಗೆ ಕರೆಯುತ್ತಿಲ್ಲ. ಒಮ್ಮೆ ಬಕೆಟ್ ಒಡೆದರೆ ಅದು ಕಸದ ಬುಟ್ಟಿಯನ್ನು ಸೇರುತ್ತದೆ. ಆದರೆ ಆ ನೈಪುಣ್ಯತೆಯೊಂದಿಗೆ ಮೊಳೆ ಜೋಡಣೆಯ ಹೆಚ್ಚಿನ ಸ್ಕಿಲ್ ಕಲಿತು ಅಟೊ ಇಂಡಸ್ಟ್ರೀಯಲ್ಲಿ ಇವರು  ಕೆಲಸ ಕಂಡುಕೊಂಡಿದ್ದಾರೆ. ಬದಲಾದ ವೃತ್ತಿ ಚಿತ್ರದ ಬಲಿಪಶುಗಳಾಗದೆ, ಹೊಸ ರೀತಿಯಲ್ಲಿ ಬೇಡಿಕೆ ಪಡೆಯುತ್ತಿದ್ದಾರೆ. 
ಗೋಸಾಯಿ ಎಂಬುದು ಈ ಭಾಗಕ್ಕಂತೂ ಒಂದು ಅಲೆಮಾರಿ ಜನಾಂಗ. ತನ್ನ ಭಾಷೆಯೂ ಗೋಸಾಯಿ ಎಂದು ಆತ ಹೇಳುತ್ತಾನೆ. ಕನ್ನಡ ಬರುತ್ತದೆ. ಮಕ್ಕಳು ಕನ್ನಡ ಶಾಲೆಗೆ ಹೋಗುತ್ತಾರೆ. ಕಳೆದ 20 ವರ್ಷದಿಂದ ಇಲ್ಲಿ ಇದ್ದಾರೆ. ಹಳೆ ದಾವಣಗೆರೆಯ ದುಗ್ಗಮ್ಮನ ಗುಡಿಯ ಸಮೀಪ ಇವರದೊಂದು ಗಲ್ಲಿಯೆ ಇದ್ದುಘಿ, ರಿಪೇರಿಯೇ ಇವರ ಕೆಲಸ. ಜೀವನ ನಿರ್ವಹಣೆ ಇವರಿಗೆ ಕಷ್ಟವೇ ಅಲ್ಲ.
‘‘ಸಮೀಪದ ಹರಿಹರ, ಹಾವೇರಿ, ಹುಬ್ಬಳ್ಳಿ, ದೆಹಲಿ, ಚಂಡೀಗಢ, ಕಾಶ್ಮೀರ್‌ದ ತನಕ ಎಲ್ಲೆಡೆ  ನಮ್ಮವರು ಇದ್ದಾರೆ’’  ಬೆಂಗಳೂರಲ್ಲೂ  ವಿಜಯ ನಗರ, ಅಲಸೂರು ಎಲ್ಲ  ಹೆಸರು ಹೇಳಿದ ಕಾಲಿಯಾ. ಎಲ್ಲೆಡೆ ರಸ್ತೆಯಲ್ಲಿ ಓಡಾಡಿಕೊಂಡು ಕಾರ್ ಬಂಪರ್ ರಿಪೇರಿ, ಬೆಂಡ್ ತಡಗೆಯುವುದನ್ನು ಈ ಜನ ಮಾಡುತ್ತಾರೆ. ತಾವು ಲಕ್ಷ್ಮೀ ಆರಾಧಕರು ದಾವಣಗೆರೆಯಲ್ಲಿಯೂ ತಾವು ಆರಾಧಿಸುವ ಲಕ್ಷ್ಮೀ ಗುಡಿ, ಗೋಸಾಯಿಗಲ್ಲಿ ಇರುವ ಬಗ್ಗೆ ಹೇಳಿದ. ಇಷ್ಟು ಕತೆ ಹೇಳುವಷ್ಟರಲ್ಲಿ ರಿಪೇರಿ ಕೆಲಸವೂ ಮುಗಿದು ಪೇಮೆಂಟ್ ಪಡೆದು ಹೋದ ಕಾಲಿಯಾ ಗೋಸಾಯಿ ಉದ್ಯೋಗವು ಒಂದು ರೀತಿಯಲ್ಲಿ  ನೈಪುಣ್ಯತೆ, ಒನ್ನೊಂದು ಅರ್ಥದಲ್ಲಿ ಸೇಲ್ಸ್. ಗ್ರಾಹಕರನ್ನು ಕರೆದು, ನಯವಾಗಿ ಅವರಿಗೆ ಮನವರಿಕೆ ಮಾಡಬೇಕು. ಕೊಳಕು ಬಟ್ಟೆ ಈತನ ಯೂನಿಾರಮ್. ತಂತಿಗಳನ್ನುಘಿ, ನೆಟ್‌ಗಳನ್ನು ತಿರುವಿ ಬೆರಳುಗಳೂ ಕಬ್ಬಿಣದಷ್ಟು ಒರಟಾಗಿವೆ. ಕಾರ್ ಮೆಕಾನಿಕ್‌ಗಳ ಹಾಗೆ ಮನೆಗೆ ಹೋಗಿ ಯೂನಿಾರ್ಮ್, ಟ್ರಂಕ್ ಒಂದೆಡೆ ಇಟ್ಟು  ಸ್ನಾನ ಮಾಡಿ ಪಾಶ್ ಆಗುತ್ತಾನೆ.
‘ಸಾಬ್’ ಎಂದೇ ಮಾತಾಡಿಸುವುದು ಈತನ ಭಾಷೆ.  ಹಾಗೆಯೇ ಅಪ್ಪಟ ವ್ಯವಹಾರದ ಘಾಟಿ ಮನುಷ್ಯ. ಇವರು ಮಾಡುವ ಕೆಲಸದ ಗುಣಮಟ್ಟ  ಬಗ್ಗೆ ಕೆಲವು ಅಭಿಪ್ರಾಯ ಇದೆ. ದುಬಾರಿ ಅಲ್ಲಘಿ, ತಕ್ಷಣ ಮಾಡಿಕೊಡುತ್ತಾರೆ ಎಂಬು ದಲ್ಲದೆ,  ದುಬಾರಿ ಕಾರಿಗೆ ಬೇಕಾದ ನಯ ನಾಜೂಕು ಇವರಲ್ಲಿ ಇಲ್ಲ ಎಂಬುದಾಗಿಯೂ ಕೆಲವು ಅಭಿಪ್ರಾಯ ಇದೆ. ಯಾವೊಬ್ಬನೂ ಮುಂದೆ ತನ್ನ ಮಗ ಇಂಥ ವೃತ್ತಿ ನಿರತನಾಗಲಿ ಎಂದುಕೊಳ್ಳುವುದಿಲ್ಲ ನಿಜ. 
ಆದರೆ ಬದಲಾವಣೆಗೆ ಹೊಂದಿಕೊಳ್ಳುವ ಇವರ ಜಾಣ್ಮೆ, ಮಲ್ಟಿ ಸ್ಕಿಲ್, ಮೂಲ ವೃತ್ತಿಯಿಂದ ತುಸು ಬದಲಾಗಿ ಬದಲಾವಣೆಗೆ ಹೊಂದಿಕೊಂಡು ಯಶಸ್ವೀ  ಜೀವನೋಪಾಯ ಕಂಡುಕೊಳ್ಳಬೇಕು ಎಂಬ ನೀತಿ ಪಾಠಕ್ಕೆ ಮಾತ್ರಿ ಇವರು ಉತ್ತಮ ನಿದರ್ಶನ. ಅಷ್ಟಕ್ಕೂ ಬೆಂಗಳೂರು, ಮುಂಬೈ, ವಾಷಿಂಗ್‌ಟನ್‌ಗಳಲ್ಲಿ  ಕಾರ್ಪೊರೇಟ್ ಕಂಪೆನಿಗಳು, ಸ್‌ಟಾ ವೇರ್ ಉದ್ಯಮವೂ ರೆಸಾರ್ಟ್‌ಗಳಲ್ಲಿ  ತಮ್ಮ ಸಿಬ್ಬಂದಿಗೆ ಇದನ್ನೇ ಪಾಠ ಮಾಡುತ್ತವೆ ತಾನೆ.
-ಸದಾನಂದ ಹೆಗಡೆ





Read More

ಯುವ ಸ್ಪೂರ್ತಿ ನಟ ಶಂಕರ ನಾಗ್

ಯುವ ಸ್ಪೂರ್ತಿ ನಟ ಶಂಕರ ನಾಗ್

ಸತ್ತಮೇಲೆ ಮಲಗೋದು ಇದ್ದೇ ಇದೆ...

ಕೆಲವು ದಶಕದಿಂದ ನಟ ಶಂಕರ ನಾಗ್ ಕನ್ನಡ ಯುವಕರ ಸಾಹಸ ಜೀವನ ಶೈಲಿಗೆ ಒಂದು ಪ್ರೇರಣೆಯಾಗಿದ್ದಾರೆ. ಮಧ್ಯ ಕರ್ನಾಟಕದ ವಿಚಾರದಲ್ಲಿ ಅವರ ಪ್ರಭಾವ ಢಾಳಾಗಿ ಕಾಣುತ್ತೇವೆ. ಇಲ್ಲಿನ ಮಣ್ಣಿಗಿರುವ ರಂಗಭೂಮಿಯ ಕಂಪು, ಸಿನಿಮಾ  ಕ್ರೇಜು ಎರಡೂ ಈ ನಟನಲ್ಲಿ  ಕಾಣಬಹುದು ಮಾತ್ರವಲ್ಲ. ದಾವಣಗೆರೆಯಲ್ಲೇ ತನ್ನ ಕೊನೆಯ ಉಸಿರನ್ನು ಎಳೆದ ಕಾರಣಕ್ಕೂ ಶಂಕರ್ ಇಲ್ಲಿನವರ ನೆಚ್ಚಿನ ನಾಯಕ ಅನ್ನಿಸಿದ್ದಾರೆ. ಸುಮಾರು ಮೂರು ದಶಕದ ಹಿಂದೆ ಸಮೀಪದ ಆನಗೋಡಿನಲ್ಲಿ ರಸ್ತೆ ಅಪಘಾತದಲ್ಲಿ  ಶಂಕರ್ ಕೊನೆಯುಸಿರು ಎಳೆದರು. ಆದರೆ ಇಂದಿಗೂ  ಅದೆಷ್ಟೋ ಸಾಮಾನ್ಯ ಹಿನ್ನೆಲೆಯ ಹುಡುಗರಿಗೆ, ಸವಾಲುಗಳ ಎದುರು ನಿಂತು ಫೈಟ್ ಮಾಡುವುದಕ್ಕೆ  ಶಂಕರ್ ಪ್ರೇರಣೆ.
ಸಾಮಾನ್ಯರ ಹೀರೋ
ಬಹುತೇಕ ಪಟ್ಟಣದಲ್ಲಿ  ರಿಕ್ಷಾ ನಿಲ್ದಾಣದಲ್ಲಿ ಶಂಕರ್ ನಾಗ್ ಇಂದಿಗೂ ಕಾಣುತ್ತಾರೆ. ದಾಡಿ ಸಹಿತದ ಇವರ ಮುಖದಲ್ಲಿ ಒಂದು ಸಿಗ್ನೇಚರ್ ನಗೆ. ನಗುವಲ್ಲ  ಅದೊಂದು ನಿರ್ಭೀತಿಯ ಭಾವದ ಅಲೆ. ಆ ಮುಖವೇ ಏನಾದರೂ ಸಾಧಿಸಬೇಕು ಎಂಬ ಹಲವು ವಾಕ್ಯಗಳನ್ನು ಹೇಳುತ್ತದೆ.  ಆಟೋದವರಿಗೆ ಇವರ ಬಗ್ಗೆ ಕ್ರೇಜ್ ಹುಟ್ಟಿಕೊಂಡಿದ್ದು, ಈ ನಟನ ‘ಅಟೋ ರಾಜ’ ಸಿನಿಮಾದ ನಂತರ. ಒಬ್ಬ ಸಾಮಾನ್ಯ ರಿಕ್ಷಾ ಚಾಲಕನಾಗಿ,  ಖಾಕಿ ಸಮವಸ್ತ್ರದಲ್ಲಿ ಜೀವನ ಆರಂಭಿಸಿ, ಬರುವ ಏನೆಲ್ಲ ಅಡೆತಡೆಗಳನ್ನು ಎದುರಿಸುವ ‘ಅಟೋ ರಾಜ’ ಕೊನೆಗೆ ಶ್ರೀಮಂತ ಹುಡುಗಿ(ಗಾಯತ್ರಿ)ಯನ್ನು ಪ್ರೀತಿಸಿ ಮದುವೆಯಾಗುವುದು ಒಂದು ರೋಚಕ ಕತೆ. ‘ನಗುವಾ ಗುಲಾಬಿ ಹೂವೆ’ ಹಾಡು ನೆನಪಿರಬಹುದಲ್ಲ. ಈ ಚಿತ್ರ ಬಿಡಗಡೆಯಾಗುತ್ತಲೇ ರಿಕ್ಷಾಗಳ ಕಣ್ಮಣಿಯಾದ ಶಂಕರ್ ಅಂದಿಗೂ ಇಂದಿಗೂ ಒಂದು ದೊಡ್ಡ ಐಕಾನ್. ಅವರ ಪ್ರೇರಣೆಯಿಂದ ಅಟೋಗಳನ್ನು ಸಂಘಟಿಸಿ ಅದೆಷ್ಟೋ ನಾಯಕರು ಹುಟ್ಟಿಕೊಂಡರು. ಹಾಗೇ ಇಲ್ಲಿ  ಶಂಕರ್ ನಾಗ್ ಹೆಸರಿನ ಅಟೋ ನಿಲ್ದಾಣಗಳಿವೆ. ರಾಜ್ಯದ ಎಲ್ಲೆಡೆಗಿಂತ ಅತಿಹೆಚ್ಚು ರಿಕ್ಷಾಗಳು ತಮ್ಮ ಬೆನ್ನಲ್ಲಿ ಶಂಕರ್ ನಾಗ್ ಅವರನ್ನು ಹೊತ್ತಿದ್ದು ಬಹಶಃ ದಾವಣಗೆರೆಯಲ್ಲಿ. ಅಷ್ಟೇ ಅಲ್ಲ, ಶಂಕರ್ ಅಭಿಮಾನಿಗಳಾಗಿ ಅದೆಷ್ಟೋ ಜನ ಸ್ಥಳೀಯ ರಾಜಕಾರಣದಲ್ಲಿ  ಮುಂದುವರಿದು ಪುರ ಪಾಲಿಕೆ, ಜಿಲ್ಲಾ  ಪಂಚಾಯಿತಿಯ ಸದಸ್ಯರಾದರು. ಒಂದಿಷ್ಟು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಸಣ್ಣ ಉದ್ಯಮ ಸ್ಥಾಪಿಸಿ ಹುಡುಗರಿಗೆ ಉದ್ಯೋಗ ನೀಡಿದ್ದಾರೆ.
ದೊಡ್ಡ ಕನಸು
ಶಂಕರ್ ನಾಗ  ಅದೆಷ್ಟೋ ಸಿನಿಮಾದಲ್ಲಿ  ಹೀರೋ ಆಗಿದ್ದರು. ತಾವೇ ನಿರ್ದೇಶಿಸಿ ಅಭಿನಯಿಸಿದರಲ್ಲದೆ, ಸಿನಿಮಾದಲ್ಲಿ  ರಾಷ್ಟ್ರ ಪ್ರಶಸ್ತಿಯನ್ನು ಪಡೆದರು. ಬೆಳ್ಳೆ ತೆರೆ, ಕಿರು ತೆರೆಯ ಹೊರತಾಗಿ, ನಿಜ ಜೀವನದಲ್ಲೂ ಅವರೊಬ್ಬ  ಕುತೂಹಲಕಾರಿ ಮನುಷ್ಯ. ಬದುಕಿದ್ದು  ಕೇವಲ 36 ವರ್ಷ ಆಗಿದ್ದರೂ, ಅಷ್ಟರಲ್ಲೇ ತಮ್ಮ ವ್ಯಕ್ತಿತ್ವದ ನೂರಾರು ಸಾಧ್ಯತೆಗಳನ್ನು ಅವರು ಸಂಶೋಸಿಕೊಂಡಿದ್ದರು. ಸಿನಿಮಾಕ್ಕೆ ಸೀಮಿತರಾಗದೆ, ರಂಗಭೂಮಿಯಲ್ಲಿ ತೊಡಗಿಕೊಂಡಿದ್ದರು. ಸಿನಿಮಾ ನಿರ್ಮಾಣ ಮಾತ್ರವಲ್ಲ , ವಿಭಿನ್ನ ಸಾಧ್ಯತೆಯ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದೆಲ್ಲದರ ಹಿಂದೆ ಅವರ ಆಲೋಚನಾ ವಿಧಾನವನ್ನು ನಾವು ಗುರುತಿಸಬೇಕು. ದಾವಣಗೆರೆ ಸೋಮೇಶ್ವರ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಸುರೇಶ್ ಆಗೀಗ ಹೇಳುವ  ಒಂದು ಮಾತು ಶಂಕರ್ ಅವರ ಆಲೋಚನಾ ವಿಧಾನವನ್ನು ಚೆನ್ನಾಗಿ ವಿವರಿಸುತ್ತದೆ.  ಶಂಕರ್ ನಾಗ್ ಸಾಹಸದ ಬಗ್ಗೆ ಒಲವು ಹೊಂದಿದ್ದ ಸುರೇಶ್,  ನಟ ಅಪಘಾತದಲ್ಲಿ ಸತ್ತ ನಂತರ ಅಂತಿಮ ದರ್ಶನವನ್ನು ಇಲ್ಲಿನ ಚಿಗಟೇರಿ ಆಸ್ಪತ್ರೆಯಲ್ಲಿ ಪಡೆದುದನ್ನು ಸ್ಮರಿಸುತ್ತಾರೆ. ಒಮ್ಮೆ ಬಿಳಿ ಹಾಳೆಯ ಮೇಲೆ ಚಿಕ್ಕದೊಂದು ರಿಕ್ಷಾ ಮತ್ತು ಸೈಕಲ್ ಬಿಡಿಸಿದ್ದ  ವಿದ್ಯಾರ್ಥಿಯನ್ನು ಕರೆದ ಶಂಕರ್ ಮಗುವಿಗೆ ಕಿವಿಮಾತು ಹೇಳುವುದನ್ನು ಸುರೇಶ್, ಸ್ಮರಿಸಿಕೊಳ್ಳುತ್ತಾರೆ. ‘‘ ಲೇ ಹುಡುಗಾ.. ಯಾಕೆ ಸೈಕಲ್, ರಿಕ್ಷಾದಲ್ಲೇ ಇದ್ದೀ, ಹೆಲಿಕ್ಯಾಪ್ಟರು, ವಿಮಾನದಂಥ ದೊಡ್ಡ ವಾಹನದ ಕನಸು ಕಾಣು. ಅವುಗಳ ಚಿತ್ರವನ್ನು ಬಿಡಿಸು’’ ಎಂದು ಹೇಳಿದ್ದರಂತೆ.
ದೇಶದ ಮೊದಲ ಪ್ರಧಾನ ಮಂತ್ರಿ ಜವಹರಲಾಲ ನೆಹರು, ಆಗಾಗ ಹೇಳುತ್ತಿದ್ದ ಮಾತು ಹೀಗೇ ಇದೆ ಕೇಳಿ.. ‘ಡ್ರೀಮಿಂಗ್ ಸ್ಮಾಲ್ ಈಸ್ ಅ ಕ್ರೈಮ್’ ಇದು ನೆಹರು ವಾಕ್ಯ. ಅಂದರೆ ದೊಡ್ಡ ದೊಡ್ಡ ಕನಸನ್ನು ಕಂಡು, ನಾವು ನಮ್ಮನ್ನು ಮುಂದಕ್ಕೆ ನೂಕಿಕೊಳ್ಳಬೇಕು ಎಂಬ ಅರ್ಥ. ಶಂಕರ್ ನಾಗ್ ಸಿನಿಮಾ ಡೈಲಾಗ್‌ನಲ್ಲಿ, ತಮ್ಮ ದೈನಂದಿನ ಹರಕತ್‌ಗಳಲ್ಲಿ ಹಾಗೆಯೇ ಬದುಕಿದವರು.
ಜೀವನದ ಪ್ರಯೋಗದಲ್ಲಿ ತನ್ನ ಅಣ್ಣ  ಅನಂತ್ ನಾಗ್‌ಗಿಂತ ಒಂದಿಷ್ಟು ಮುಂದೆ ಇರುತ್ತಿದ್ದ ಶಂಕರ, ತಮ್ಮ 30ನೇ ವಯಸ್ಸಿನಲ್ಲಿ ವರನಟ ಡಾ. ರಾಜ್ ಅವರನ್ನು ಹಾಕಿಕೊಂಡು ಒಂದು ಮುತ್ತಿನ ಕತೆ ಚಿತ್ರವನ್ನು ಮಾಡಿದರು. ಅವರ ಧೈರ್ಯವನ್ನು ಅಂದಾಜು ಮಾಡಿ. ಹಾಗೆಂದು ಶಂಕರ್ ಹುಂಬ ದೈರ್ಯದವರಾಗಿರಲಿಲ್ಲ. ಓದು, ಸಂಗೀತ, ರಂಗಭೂಮಿ, ಉದ್ಯಮಗಳಲ್ಲೂ ಸಾಕಷ್ಟು ವಿಷಯವನ್ನೂ ತಿಳಿದುಕೊಂಡಿದ್ದರು. ವೇಳೆಯನ್ನು ಎಂದೂ ವ್ಯರ್ಥ ಮಾಡುತ್ತಿರಲಿಲ್ಲ. ಹೊನ್ನಾವರದಲ್ಲಿ ಹುಟ್ಟಿ  ಪಿಯು, ಪದವಿ ಶಿಕ್ಷಣಕ್ಕೆ ಮುಂಬಯಿಗೆ ಹೋಗಿ ಅಲ್ಲಿ ಮರಾಠಿ ರಂಗಭೂಮಿ ಮೂಲಕ ತಮ್ಮ ಸಾಂಸ್ಕೃತಿಕ ಬದುಕಿಗೆ ಅಡಿಪಾಯ ಮಾಡಿಕೊಂರು. ಉತ್ತಮ ಓದುಗನಾಗಿದ್ದ  ಶಂಕರ್ ಓರ್ವ ಸ್ಕ್ರೀನ್ ಪ್ಲೇ ಬರಹಗಾರ. ದೂರದರ್ಶನದಲ್ಲಿ  ಬಿತ್ತರಗೊಂಡ ಮಾಲ್ಗುಡಿ ಡೇಸ್ ಟೆಲಿ ಸೀರಿಯಲ್ ಮೂಲಕ ಅವರು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದರು. ಇದರ ಹಿಂದೆ, ಧೈರ್ಯ, ಪರಿಶ್ರಮ, ಓದು ಎಲ್ಲವೂ ಕಾರಣವಿದೆ. ಅದಕ್ಕಾಗಿ ಜಾಣರು, ಸಾಧಕರು ಕೂಡ ಅವರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುತ್ತಿದ್ದರು.
ವಿಶೇಷ ಎಂದರೆ ಚಿತ್ರ ರಂಗದ ಸದಸ್ಯರು ಎಲ್ಲಿಗಾದರೂ ಟೂರ್ ಹೊರಟರೆ, ಆ ಬಸ್‌ನ್ನು ಶಂಕರ್ ಚಾಲನೆ ಮಾಡುತ್ತಿದ್ದರಂತೆ. ಅವರೊಬ್ಬ ಉತ್ತಮ ಚಾಲಕರಾಗಿದ್ದರು, ಕೇವಲ ವಾಹನ ಮಾತ್ರವಲ್ಲ, ಸಮುದಾಯದ ಚಾಲನ ಶಕ್ತಿಯೇ ಅವರಲ್ಲಿ ಇತ್ತು. ಓರ್ವ ಉತ್ತಮ ಚಾಲಕನ ಮಹತ್ವವನ್ನು ನಮ್ಮ ಪರಂಪರೆ ಕೃಷ್ಣ ಪರಮಾತ್ಮನಲ್ಲಿ  ಗುರುತಿಸಿದೆ ಎಂಬುದನ್ನು ಸುಮ್ಮನೇ ನೆನಪಿಸುತ್ತೇನೆ. ಮೂರು ಲೋಕವನ್ನು ಗೆದ್ದವನೆಂಬ ಖ್ಯಾತಿಯ ಅರ್ಜುನನಿಗೆ ಶ್ರೀ ಕೃಷ್ಣ  ಪರಮಾತ್ಮ ಸಾರಥಿಯಾಗಿದ್ದ ಎಂಬುದು ಮಹಾಭಾರತ ಓದಿದವರಿಗೆಲ್ಲ ಗೊತ್ತಿದೆ. ಓರ್ವ ನಾಯಕನಾಗುವುದಕ್ಕೆ  ಉತ್ತಮ ಚಾಲಕನಾಗುವ ಕಲೆಯು ಗೊತ್ತಿರಬೇಕು.
ಪ್ರೇರಣೆ ನೀಡುವ ವಾಕ್ಯ
ದಾವಣಗೆರೆಯ ರಿಕ್ಷಾ ಒಂದರ ಬೆನ್ನಲ್ಲಿ ಬರೆದ  ಶಂಕರ್ ನಾಗ್ ಸಿನಿಮಾ ಡೈಲಾಗ್ ಒಂದನ್ನು ಉಲ್ಲೇಖಿಸಿ, ಈ ಬರಹವನ್ನು ಮುಗಿಸುತ್ತೇನೆ. ’’ ಸತ್ತಮೇಲೆ ಮಲಗೋದು ಇದ್ದೇ ಇದೆ. ಎದ್ದಿದ್ದಾಗ ಏನಾದರೂ ಸಾಧಿಸು’’ ಎಂಬ ಮಾತಿನ ಉದ್ದೇಶವನ್ನು ಅರ್ಥಮಾಡಿಕೊಳ್ಳಿ. ಯುವ ಜನರಲ್ಲಿ ಸಹಜವಾದ ನಿದ್ದೆಯ ಸೆಳೆತಕ್ಕೆ ಸಣ್ಣದಾದ ಚುಚ್ಚುಮದ್ದು ಈ ವಾಕ್ಯದಲ್ಲಿದೆ. ಏಳಿರಿ.. ಎಚ್ಚರಗೊಳ್ಳಿರಿ.. ಗುರಿ ಮುಟ್ಟುವ ತನಕ ವಿಶ್ರಮಿಸಬೇಡಿ ಎಂದು ೀರ ಸನ್ಯಾಸಿ ವಿವೇಕಾನಂದ ಹೇಳಿದ ಮಾತು, ಮೇಲಿನ ಡೈಲಾಗ್‌ನಲ್ಲೂ  ಪ್ರತಿಧ್ವನಿಸುತ್ತದೆ. ಸಾಮಾನ್ಯ ವ್ಯಕ್ತಿಯೊಬ್ಬ ಬದುಕುವ ಜೀವ ಮಾನಕ್ಕಿಂತ ಅರ್ದದಷ್ಟೂ ಬದುಕಿರದಿದ್ದರೂ, ಶಂಕರ್ ನಾಗ್ ಬದುಕಿದಷ್ಟು ಕಾಲ ಮಾತ್ರ ತೀವ್ರವಾಗಿ ಬದುಕಿದರು. ದೊಡ್ಡ ದೊಡ್ಡ ಕನಸನ್ನು ಹೊತ್ತು ಅದನ್ನು ನನಸಾಗಿಸಲು ಶ್ರಮಿಸಿದರು. ಹೀಗೆ ಬದುಕುವವರು ಏನನ್ನಾದರೂ ಸಾಧಿಸಿಯೇ ಇರುತ್ತಾರೆ.
Read More

ಮೋಡ ಕವಿದಾಗ ಖುಷಿ ಕೊಟ್ಟ ನವಿಲು ನೃತ್ಯ

ಮೋಡ ಕವಿದಾಗ ಖುಷಿ ಕೊಟ್ಟ ನವಿಲು ನೃತ್ಯ

ಚೌತಿ ಸಮಯ ಕರ್ನಾಟಕದ ಬಾನಲ್ಲಿ  ಎಲ್ಲೆಡೆ ಮೋಡದ ಛಾಯೆ. ಹಬ್ಬದ ಮಾರನೇ ಭಾನುವಾರ ದಾವಣಗೆರೆಯ ದೊಡ್ಡಪೇಟೆ ವಿನಾಯಕನ ಎದುರು ‘ಮೇಘಾವಳಿಯೊಂದು..’ ಹಾಡಿಗೆ ಯಕ್ಷಗಾನದ ನವಿಲು ನೃತ್ಯವು ಮೇಳೈಸಿದ್ದು  ಔಚಿತ್ಯವಾಗಿತ್ತು. ಇದು ಯಕ್ಷಗಾನ ಕಾರ್ತವೀರ್ಯ ಕಾಳಗದ ಒಂದು ಮಾಸ್ಟರ್ ಪೀಸ್..
’’ ಮೇಗಾವಳಿಯೊಂದು ಆಗಸದೋಳ್ ಕಂಡಾಗಲೆ ನವಿಲು ಕುಣಿಯುತಿದೆ ನೋಡಾ..’’ ಹಾಡು ಅದೆಷ್ಟೋ ವರ್ಷದಿಂದ ಜನಪ್ರಿಯವಾಗಿದೆ.  ಮೂಲ ತಿರುಮಲ ಕವಿ ರಚಿಸಿದ ಕಾರ್ತವೀರ್ಯ ರಂಗ ರೂಪದಲ್ಲಿ, ಮೇಘಾವಳಿ ವರ್ಣವು ಇದೀಗ ಭರತ ನಾಟ್ಯದಲ್ಲೂ ಬಳಕೆಯಾಗುತ್ತದೆ. ತ್ರೇತಾಯುಗದ ಕಾಲಘಟ್ಟದಲ್ಲಿ ರಾವಣನ ಸಮಬಲನಾಗಿದ್ದ  ಸಹಸ್ರ ತೋಳುಗಳ ಕಾರ್ತವೀರ್ಯ  ನರ್ಮದಾ ನದಿಯಲ್ಲಿ ತನ್ನ ಸಖಿಯರೊಂದಿಗೆ ಜಲಕ್ರೀಡೆ ಆಡುವ ಸನ್ನಿವೇಶ. ಯಕ್ಷಗಾನದ ದಂತಕಥೆ ಕಾಳಿಂಗ ನಾವಡರ ಕಾಲದಲ್ಲಿ  ಭ್ರಹ್ಮಾವರದ ಬಡಗಿನಲ್ಲಿ  ಅತ್ಯಂತ ಹಿಟ್ ಆದ ಹಾಡು ಇದು. ನಾವಡರು ಇದನ್ನು ತಮಗೆ ಹೊಂದಿಸಿ ಹಾಡುತ್ತಿದ್ದರು. ಶಾಸ್ತ್ರೀಯ ಸಂಗೀತದ ದೃಷ್ಟಿಯಿಂದ ಮೋಹನ ರಾಗದಲ್ಲಿ  ಇದನ್ನು ಪ್ರಸ್ತುತಪಡಿಸಲಾಗುತ್ತದೆ.
ಮೋಹನದ ಛಾಯೆಯಲ್ಲಿ  ಸ್ವಂತ ಶೈಲಿಯಲ್ಲಿ  ಕೊಳಗಿಯ ಭಾಗವತರು  ಹದವಾಗಿ ಹಾಡುತ್ತಿದ್ದರೆ, ನೀರಾಟ ನಿರತ ಕಾರ್ತವೀರ್ಯ ಮತ್ತು ಸಖಿಯರ ನೃತ್ಯವನ್ನು ಕಲಗದ್ದೆ  ವಿನಾಯಕ ಹೆಗಡೆ ಮತ್ತು ಸಹ ಕಲಾವಿದರು ರೋಮ್ಯಾಂಟಿಕ್ ಆಗಿ ಅಭಿನಯಿಸಿದರು. ಬಳುಕು, ವಯ್ಯಾರಕ್ಕೆ  ಎಲ್ಲಿಯೂ ಅಡಚಣೆ ಇಲ್ಲದೆ, ನಿಧಾನ ಗತಿಯಲ್ಲೂ, ಮಧ್ಯೆ ವೇಗದ ಝಲಕ್‌ಗಳು ರಮ್ಯತೆಯನ್ನು ಹೆಚ್ಚಿತು. ಸುಮಾರು ಹತ್ತು ನಿಮಿಷ  ಮೇಘಾವಳಿ ಹಾಡಲ್ಲದೆ, ಹಿಂದೆ ಹಾಗೂ ಮುಂದಿನ ನೃತ್ಯಗಳಲ್ಲೂ ಕಲಗದ್ದೆ ಗಮನ ಸೆಳೆದರು.  ಸಖಿಯರಲ್ಲಿ  ಮಹಾಬಲೇಶ್ವರ ಭಟ್ ಇಟಗಿ ತಮ್ಮ  ಹಾವ ಭಾವದಿಂದಲೇ ಗಮನ ಸೆಳೆದರು.
ಇತ್ತೀಚೆ ಹೃದಯ ಕಸಿ ಮಾಡಿಸಿಕೊಂಡ ಖ್ಯಾತ ಭಾಗವತ ಕೊಳಗಿ ಕೇಶವ ಹೆಗಡೆ, ಅಪಘಾತದಲ್ಲ  ಕಾಲಿಗೆ ಕಬ್ಬಿಣದ ಸರಳನ್ನು ಹೊಂದಿಸಿಕೊಂಡ ಕಲಗದ್ದೆ ಇಬ್ಬರೂ  ತಮ್ಮ ದೇಹದ ಮಿತಿಯನ್ನೇ ರಂಗದ ಪ್ರಬುದ್ಧತೆಗೆ ಬಳಸಿದರು ! ಸಮರ ಸನ್ನಾಹದ ಬೊಬ್ಬಿರಿತವಿಲ್ಲದೆ ರೋಮ್ಯಾಂಟಿಕ್ ಮೂಡ್‌ಗೆ ಇದು ಅತ್ಯಂತ ಪೂರಕವಾಗಿದ್ದು, ಸಂಪ್ರದಾಯ ಶೈಲಿಗೆ ಚುತಿ ಬರದಂತೆ ಮೂರು ತಾಸಿನಲ್ಲಿ ಇಡೀ ಆಟವನ್ನು ತಂಡವು ಪ್ರಸ್ತುತಪಡಿಸಿದೆ. ಮೃದಂಗ(ನರಸಿಂಹ ಹಂಡ್ರಮನೆ) ಚಂಡೆ(ಪ್ರಮೋದ್ ಯಲ್ಲಾಪುರ)ಯ ಹದವಾದ ಪೆಟ್ಟಿಗೆ, ಇಕ್ಕಟ್ಟಿನ ವೇದಿಕೆ ಮತ್ತಿತರ ಸಣ್ಣಪುಟ್ಟ ಕೊರತೆಗಳು ಮರೆಯಾದವು. ವೇದಿಕೆ ಹದವಾದ ಎತ್ತರದಲ್ಲಿ ಇದ್ದ ಕಾರಣ ನೃತ್ಯದಲ್ಲಿ ಕಾಲಿನ ಚಲನೆ ಸರಿಯಾಗಿ ಕಾಣುತ್ತಿತ್ತು.
ಯಕ್ಷಗಾನ ತಿಟ್ಟುಗಳಲ್ಲಿ ಉತ್ತರ ಕನ್ನಡದ ಬಡಗು ಶೈಲಿಯಲ್ಲಿ ನೃತ್ಯಗತಿ ನಿಧಾನಗತಿಯಿಂದಲೇ  ಆವರಿಸುತ್ತದೆ. ಯಕ್ಷಗಾನದಲ್ಲಿ ಮಾತಿನ ಪ್ರತ್ಯುತ್ಪನ್ನಮತಿತ್ವವು ಜನಜನಿತವಾಗಿದೆ. ಆ ನಿಟ್ಟಿನಲ್ಲಿ  ತೆಂಕಿನವರು ಯಾವಾಗಲೂ ಮುಂದಿದ್ದಾರೆ. ಇಲ್ಲಿ  ನೃತ್ಯದಲ್ಲೂ ಪ್ರತ್ಯುತ್ಪನ್ನಮತಿತ್ವ ಅವಶ್ಯವಾರುತ್ತದೆ ಎಂಬುದನ್ನು ಬಡಗು, ಬಡಾಬಡಗಿನವರಲ್ಲಿ  ಕಾಣುತ್ತೇವೆ. ಈ ಮಾತು ಕಾರ್ತವೀರ್ಯನನ್ನು ನೋಡಿದಾಗ ಅನ್ನಿಸಿತು. ರಂಗಸ್ಥಳಕ್ಕೆ ಬಂದ ನಂತರವೇ ಮುಖಾಮುಖಿಯಾಗುವ ಸಹ ಕಲಾವಿದರಿಗೆ ನೃತ್ಯದ ಜಾಗವನ್ನು ತಾಳಬದ್ಧವಾಗಿಯೇ ನಿರ್ದೇಶಿಸುವುದು, ಸಿಂಹಾಸನ ಅಲುಗುತ್ತದ್ದರೆ, ಅದರ ಮೇಲೆ ಯಾವ ಹೆಜ್ಜೆಯನ್ನು ಇಡಬೇಕು ಎಂಬ ಎಚ್ಚರಿಕೆ ಸೇರಿದಂತೆ, ಯಾವ ಪದ್ಯಕ್ಕೆ ಎಷ್ಟು  ನೃತ್ಯ ಎಂಬುದನ್ನೆಲ್ಲ  ಕಥಾ ಭಾಗದ ಜತೆಯೇ ಸಂವಹಿಸಿಕೊಂಡು ಕಲಗದ್ದೆ  ತಂಡದವರು ನರ್ತಿಸಿದರು. ಇತ್ತೀಚಿನ ಬಡಗಿನಲ್ಲಿ ಚಟವಾಗುತ್ತಿರುವ ಅನವಶ್ಯಕ ಅಭಿನಯಕ್ಕೆ ಕಾರ್ತವೀರ್ಯದಲ್ಲಿ  ಹೆಚ್ಚಿನ ಅವಕಾಶ ನೀಡದೆ, ಸಂಪ್ರದಾಯ ಬದ್ಧವಾಗಿ ಪ್ರಸ್ತುತಪಡಿಸಿದರು.
ಸಂಜಯ ಬೆಳಿಯೂರು ಅವರ ರಾವಣ, ಅನಂತ ಹೆಗಡೆ ಕೃತವೀರ್ಯ, ಜತೆಗೆ ನಾಗೇಂದ್ರ ಮೂರೂರು ಅವರ ಹಾಸ್ಯವೂ ನಕ್ಕು ನಲಿಸಿತು. ವಿಭೀಷಣನಾಗಿ ಪ್ರದೀಪ್ ಕಾರಂತ, ಪ್ರಹಸ್ತನಾಗಿ ವೆಂಕಟೇಶ ಹೆಗಡೆ ಓಜಗಾರು, ಇನ್ನೊಬ್ಬ ಸಖಿಯಾಗಿ ಗುರುಮೂರ್ತು ಹೆಗ್ಗೋಡು ನಿರ್ವಹಿಸಿದರು.  ಆನಂದ ಶೆಟ್ಟಿ ಹಟ್ಟಿಯಂಗಡಿ, ಶ್ರೀಕಾಂತ್ ಭಟ್ ಕಾರ್ಕಳ ಮತ್ತಿತರರು ಸಹಕರಿಸಿದರು. ದೊಡ್ಡಪೇಟೆಯ ವಿನಾಯಕ ಸೇವಾ ಸಂಘವು ಕಾರ್ಯಕ್ರಮವನ್ನು  ಏರ್ಪಡಿಸಿತ್ತು.
-ಸದಾನಂದ ಹೆಗಡೆ
Read More

ಹೊಂಗೆ ಹೂವ ತೊಂಗಲಲ್ಲಿ ಯುಗಾದಿಯ ಝೇಂಕಾರ

ಹೊಂಗೆ ಹೂವ ತೊಂಗಲಲ್ಲಿ  ಯುಗಾದಿಯ ಝೇಂಕಾರ
ಯುಗಾದಿಯ ಝೇಂಕಾರ

ವರ ಕವಿ ಬೇಂದ್ರೆಯವರ ‘ಯುಗ ಯುಗಾದಿ ಕಳೆದರೂ..’ ಕವನವು ಒಂದು ಬಹುಶ್ರುತ ಹಾಡು. ಯುಗಾದಿ ಹಬ್ಬದಲ್ಲಿ  ಪ್ರತಿ ವರ್ಷವೂ ನಾವೆಲ್ಲ ಕೇಳಿಯೇ ಕೇಳುತ್ತೇವೆ. ಈ ವರ್ಷವೂ ಯುಗಾದಿ ಹಾಡನ್ನು  ಮತ್ತೆ ಕೇಳುವ ಪರ್ವಕಾಲ ತುಸು ಡಿಫರಂಟ್ ಆಗಿ ಬಂದಿದೆ. ಕವನದ ಒಂದು ಸಾಲನ್ನು  ಇಟ್ಟುಕೊಂಡು ಕವಿ ಕಲ್ಪನೆಯನ್ನು  ಬರಗಾಲದ ವಿಭಿನ್ನ  ವಾಸ್ತವದೊಂದಿಗೆ ಸಮೀಕರಿಸುವ ಸಣ್ಣ ಪ್ರಯತ್ನ  ಇಲ್ಲಿದೆ. ಕವನದ ಪಲ್ಲವಿ ಮುಗಿಯುತ್ತಲೇ ಬರುವ ಸಾಲುಗಳು ಹೀಗಿವೆ ನೋಡಿ...
ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ,
ಮತ್ತೆ ಕೇಳಿ ಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ.

-ಹೀಗೆ. ಕವಿ ಹೇಳುವಂತೆ ಈ ವರ್ಷವೂ ಬರದ ನಡುವೆ ಭೃಂಗದ ಸಂಗೀತ ಕೇಳಿಸುತ್ತಿದೆ.  ಯುಗಾದಿ ಹಬ್ಬದ ಕಾಲಕ್ಕೆ ಸರಿಯಾಗಿ ಎಲ್ಲೆಡೆಯ ಹೊಂಗೆ ಮರಗಳು ಚಿಗುರಿ, ಮೊಗ್ಗು ಹೂವಿನೊಂದಿಗೆ ಕಂಗೊಳಿಸುತ್ತಿವೆ ತಾನೆ ? ಅದರಲ್ಲೂ ಈ ವರ್ಷ ಹೊಂಗೆ ಮರಗಳು, ಎಲ್ಲಿಲ್ಲದ ಜೀವಕಳೆಯಿಂದ ಕಂಗೊಳಿಸುತ್ತಿವೆ ! ತರಹೇವಾರಿ ಜೇನು ಹುಳುಗಳು ಹೊಂಗೆ ಹೂವಿನ ಸಿಹಿಯನ್ನು ಹೀರುತ್ತ ಸಂಗೀತದ ಝಂಕಾರವನ್ನು ಉಂಟುಮಾಡುತ್ತಿವೆ. ಹಾಗೆ ಬರಗಾಲದಲ್ಲೂ  ಹೊಂಗೆ ಮರದಲ್ಲಿ ಯುಗಾದಿ ನವ ನವೋನ್ಮೇಷಶಾಲಿಯಾಗಿ ಮರಳಿದೆ.
ಆದರೆ ನಾವು ಆಲೋಚಿಸುವುದೇನು ? ಕಳೆದ ಬಾರಿಯೂ ಮಳೆ ಸರಿಯಾಗಿಲ್ಲ. ಅಷ್ಟೇ ಅಲ್ಲ. ವಿಪರೀತ ಬೋರ್‌ವೆಲ್ ಕೊರೆತದ ಪರಿಣಾಮ ಭೂಮಿಯಲ್ಲಿ ಅಂತರ್ಜಲ ಬತ್ತಿದೆ. ಆಹಾರ ಧಾನ್ಯಗಳು ಸಮೃದ್ಧವಾಗಿಲ್ಲ. ಸಮೃದ್ಧಿ ಇರಲಿ, ಬೆಳೆಯೇ ಬಂದಿಲ್ಲ. ಬೆಳೆ ವಿಮೆಯೂ ಬಂದಿಲ್ಲ. ಕುಡಿವ ನೀರಿಲ್ಲ. ಇದೇ ವರ್ಷ ಬೇಸಿಗೆಯ ಬಿಸಿಲು ಬೆಂಕಿಯನ್ನೇ ನಾಚಿಸುತ್ತಿದ್ದು, ಇದೊಂದು ಬಾರಿ ಅಡಕೆ ತೋಟಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸಾಹಸ. ಲಕ್ಷಾಂತರ ರೂ. ಸಾಲ ಮಾಡಿ ಕಟ್ಟಿದ ಅಡಕೆ ತೋಟ ಒಣಗುತ್ತಿದೆ. ತುಂಗಭದ್ರೆ ತಟದಲ್ಲಿ  ಭತ್ತಕ್ಕೆ ನೀರಿಲ್ಲ. ಎಂಥ ಬರಗಾಲ. ಛೆ ಎಂಥ ಸೆಕೆ.. ಎಂಬ ಹತ್ತು ಹಲವು ನಿರಾಸೆಯ ನಡುವೆಯೂ ಕವಿ ವಾಣಿಯಂತೆ, ಹೊಂಗೆ ಮಾತ್ರ ಎಲ್ಲೆಡೆ ವಿಜೃಂಭಿಸುತ್ತಿದೆ !
ನೀರಿಲ್ಲದೆ, ಅಂತರ್ಜಲ ಬತ್ತಿದರೂ ಹೊಂಗೆಯ ಈ ಪರಿಯ ಜೀವಕಳೆಯಲ್ಲಿ  ಜೀವನ ಪ್ರೀತಿಯ ಸತ್ಯವೊಂದು ಅಡಗಿರಬಹುದೇ ? ನಾವಿಂದ ಆಲೋಚಿಸ ಬೇಕಾದ ವಿಷಯ ಇದು. ನಮ್ಮ ದೈನಂದಿನ ಕ್ಷಣ ಭಂಗುರದಿಂದ ತುಸು ಆಚೆ ಬರಬೇಕು. ಯುಗಾದಿಯ ಕಾರಣಕ್ಕೆ ತುಸು ಆಚೆ ಬರಬಾರದೇ ? ಕನಿಷ್ಠ ನೀರಿನ ಪಸೆಯಲ್ಲೂ , ತನುತುಂಬಿ, ಮನ ತುಂಬಿ, ಚಿತ್ತ ಚೇತನಗಳನ್ನೆಲ್ಲ ತುಂಬಿಕೊಳ್ಳುವ ಹೊಂಗೆ ಬರದ ನಾಡಿನಲ್ಲಿ ಬದುಕು ಹೇಗಿರಬೇಕು, ಪೃಕೃತಿಯೊಂದಿಗೆ ಹೊಂದಿಕೊಂಡರೆ ಯುಗಾದಿಯ ವೈಭವ ಹೇಗೆ ಮತ್ತೆ ಆವಿರ್ಭವಸೀತು ಎಂಬುದನ್ನು  ಸಾರುತ್ತಿದೆ. ಕೇಳ್ರಪ್ಪೋ ಕೇಳಿ.. ಎನ್ನುತ್ತಿದೆ.
ಮಧ್ಯ ಕರ್ನಾಟಕದ ಈ ಭಾಗದಲ್ಲಿ ಎಲ್ಲಿ ಹೋದರೂ ಹೊಂಗೆ, ಬೇವು, ಹುಣಸೆ ಮರಗಳಿಗೆ ಕೊರತೆ ಇಲ್ಲ. ಹಾಗೆ ನೋಡಿದರೆ ಇಲ್ಲಿನ ಭೂ ಗುಣಕ್ಕೆ ಅತ್ಯಂತ ಹೊಂದುವ ಮರಗಳು ವುಗಳನ್ನು ಬಿಟ್ಟರೆ ಬೇರೆ ಇಲ್ಲ. ದೇವರ ಪೂಜೆಗೆ ಅತಿ ಶ್ರೇಷ್ಠವಾದ ಬಿಲ್ವಪತ್ರೆ ಇರಬಹದು ಹಾಗೇ ಯಕ್ಕದ ಗಿಡಗಳು. ಕಕ್ಕೆ ಮರಗಳು ಬರಗಾಲದ ಕುರಿತು ಗೊಣಗದೆ ವಿಜೃಂಬಿಸುತ್ತಿವೆ. ಮಳೆ ಇಲ್ಲದಿದ್ದರೂ ಫಲಿತಗೊಂಡು ಸಂಭ್ರಮಿಸುತ್ತವೆ. ಭೂಮಿಯ ಅತ್ಯಂತ ಕನಿಷ್ಠ ತೇವದಲ್ಲೂ , ಅತಿ ಹೆಚ್ಚು ಬಿಸಿಲುನ್ನು ಎದುರಿಸಿ  ಈ ಮರಗಳು ಹಳೆಯ ಎಲೆ ಉಕ್ಕಿಸಿ, ಜೀವಂತಿಕೆ ಪಡೆಯುವ ರೀತಿಯಲ್ಲಿ  ಪೃಕೃತಿಗೆ ಹೊಂದಿಕೊಂಡಿವೆ.
ಸುಖ ಎಲ್ಲಿದೆ, ಸಂತಸ ಎಲ್ಲಿದೆ ಎಂಬುದನ್ನು  ನಿರಂತರ ಹುಡುಕುವ ಮನುಷ್ಯನಿಗೆ ಇಲ್ಲೊಂದು ಸರಳ ಪಾಠ ಇದೆ.
ಪೃಕೃತಿಯೊಂದಿಗೆ ಬದುಕು ಅರಳಿಸಿಕೊಳ್ಳುವ ಪಾಠ. ನಮ್ಮ ಅಭಿವೃದ್ಧಿ ಕೃಷಿ ಅಥವಾ ನೀರಾವರಿ ಸಾಧ್ಯತೆಗಳು ಪ್ರಕೃತಿಯನ್ನು ಹೊಂದಿಕೊಂಡು ಇರಬೇಕು. ಭತ್ತದ ಜತೆ ಸಹಜ ಕೃಷಿಯ ಸಿರಿದಾನ್ಯ ಕೃಷಿಯನ್ನೂ ಆರಂಭಿಸುವಂತಾಗಬೇಕು. ನಿಸರ್ಗ ಸಹಜವಾಗಿ ನೀರನ್ನು ಶೇಖರಿಸಿಟ್ಟುಕೊಂಡು ಕನಿಷ್ಠ ಬಳಸಬೇಕು.
ಯಾಂತ್ರಿಕತೆಯ ಜತೆ ಒಂದಿಷ್ಟು ದೈಹಿಕ ಶ್ರಮ, ವ್ಯಾಯಾಮ ಬೇಕು. ಅಲ್ಲದೆ ಕನಿಷ್ಠ  ಹಣಕಾಸಿನ ಸಾಧ್ಯತೆಯಲ್ಲೂ  ಬದುಕುವ, ಕಾಲಕಾಲಕ್ಕೆ  ಜೀವನವನ್ನು ಹುರುಪುಗೊಳಿಸುವ ಜಾಣ್ಮೆ  ಇರಲೇ ಬೇಕು. ಕಷ್ಟಗಳು, ದೈಹಿಕ ಶ್ರಮ, ಬಿಸಿಲು ಬೇಗೆಗಳು, ಬದುಕಿನ ಉದಾಸೀನವನ್ನು, ಮನೋ ರೋಗವನ್ನು  ಉಪಶಮನಗೊಳಿಸುವ ಔಷಧ ಎಂದು ಗೃಹಿಸಬೇಕು. ನಮ್ಮ ಜೀನವಾವುಭವ ಹೊಂಗೆಯಂತೆ ಗಟ್ಟಿಯಾಗಿದ್ದರೆ ಎಲ್ಲರಿಗೂ ಯುಗಾದಿ ಸಹಜ ರೀತಿಯಲ್ಲಿ  ಹಬ್ಬವನ್ನು ಸಾಕಾರಗೊಳಿಸುತ್ತದೆ. ಎಲ್ಲರಿಗೂ ಯುಗಾದಿಯ ಶುಭ ಹಾರೈಕೆ.
-ಸದಾನಂದ ಹೆಗಡೆ
Read More