ವಿದ್ಯಾರ್ಥಿ ನಿಲಯದ ಕೀ ಪರ್ಸನ್


ವಿದ್ಯಾರ್ಥಿ ನಿಲಯದ ಕೀ ಪರ್ಸನ್ - ಮಾರುತಿ
ನನ್ನ ಹಾಸ್ಟೆಲ್ ವಾಸ್ತವ್ಯದ ನೆನಪುಗಳಲ್ಲಿ ಒಂದನ್ನು ಇಲ್ಲಿ ಹೇಳುತ್ತೇನೆ...
ಧಾರವಾಡ ಕೆಎಚ್ಕೆ ಹಾಸ್ಟೆಲ್ ನಲ್ಲಿ  ಇದ್ದಾಗ  ಜೆಎಸ್ಎಸ್ ಸಮೂಹದ ವಿದ್ಯಾರ್ಥಿ ನಿಲಯಕ್ಕಾಗಿ ಅಲ್ಲೊಬ್ಬ ಮಾರುತಿ ಎಂಬ ಸಹಾಯಕ ಇದ್ದ.
ಹಗಲಿಡೀ ಕಡು ಮೌನಿಯಾಗಿರುತ್ತಿದ್ದ ಆತ ಸಂಜೆ ಕುಡಿದು ಬಂದಾಗ ಆತನ ವಾಗ್ವೈಕರಿ, ಚೀರಾಟ ನೋಡುವುದು ನಮಗೆಲ್ಲ ಒಂದು ಮನರಂಜನೆ.
1990 ರಲ್ಲಿಯೇ ಆತ 70 ವರ್ಷದ  ಸೇವಾ ನಿರತ ಹಿರಿಯ ನಾಗರೀಕ. ಆತನಿಗೆ ಅಷ್ಟೊಂದು ವಯಸ್ಸಾಗಿತ್ತೋ ಅಥವಾ ದಿನ ರಾತ್ರಿ ದ್ರವಾಹಾರ ಮಾತ್ರ (ಸರಾಯಿ) ಸೇವಿಸುತ್ತಿದ್ದ ಕಾರಣ ಅಷ್ಟೊಂದು ವಯಸ್ಸಾದಂತೆ ಕಾಣುತ್ತಿದ್ದನೋ ! ಗೊತ್ತಿಲ್ಲ.
ಮುಖವಿಡೀ ತುಂಬಿದ್ದ ಹುಲುಸಾದ ದಾಡಿ. ಹಲ್ಲುಗಳೇ ಇಲ್ಲದ ಬಾಯಿ. ಜತೆಗೆ ಬರೋಬ್ಬರಿ ಒಂದಿಂಚು ದಪ್ಪದ ಸೋಡಾ ಗ್ಲಾಸ್ ಕನ್ನಡಕ ಆತನ ಮುಖ ಲಕ್ಷಣ. ಮಾತಾಡಿದರೆ ಆ ಸಣಖು ದೇಹದ ನಾಭಿಯಿಂದಲೇ ಹೊರಡುತ್ತಿದ್ದ ಹೆಣ್ಣು ಸ್ವರ ಇನ್ನೂ ಮಾರ್ಧನಿಸುವಂತಿದೆ.
ಇಷ್ಟೊಂದು ನರಪೇತಲ ಎಂದು ಅನ್ನಿಸುವುದಿಲ್ಲವೇ ?
ನಿಜಕ್ಕೂ ಈ ವ್ಯಕ್ತಿಯಲ್ಲಿ ಏನು ಸಾಧ್ಯ ಇತ್ತು ಎಂದು ಆತನನ್ನು ನಮ್ಮ ಕೆಮೆಸ್ಟ್ರೀ ಲೆಕ್ಚರರ್ ಕಮ್  ವಾರ್ಡನ್ ಅಷ್ಟಪತ್ರಿ ಸರ್ ಇಟ್ಟುಕೊಂಡಿದ್ದರು ಎಂದು ಕುತೂಹಲ ಉಂಟಾಗುತ್ತಿತ್ತು.
ಅಷ್ಟು ಕೃಷವಾದ ದೇಹಿ.
ಆತನ ಕನ್ನಡಕ ಅವನೊಂದಿಗೆ ಅವಿನಾಭಾವ ಹೊಂದಿತ್ತು.
ಈ ಕನ್ನಡಕ ಇಲ್ಲದಿದ್ದರೆ ಆತನಿಗೆ ನಡು ಹಗಲೂ ಕೂಡ ಏನು ಅಂದರೆ ಏನೇನೂ ಕಾಣಿಸುತ್ತಿರಲಿಲ್ಲ.. !
ನಿಜ.. ಗೋಳಿ ಸೋಡಾ ಬಾಟಲಿನ ತಳದಲ್ಲಿ ಹೊಂದಿಸುವ ಗಾಜುಗಳನ್ನು ಜೋಡಿಸಿದಂತೆ ಕಾಣುತ್ತಿತ್ತು.
ರಾತ್ರಿ ಕುಡಿದ ಮೇಲೆ ತಾನು ಬಿದ್ದರೂ ಕನ್ನಡಕ ಬೀಳದಂತೆ ಇರಲು ಅವುಗಳ ಕಾಲಿಗೆ ಸೊಣಬೇ ಹುರಿಯನ್ನು ಹೆಣೆದು ಹಿಂದಕ್ಕೆ ಕಟ್ಟಿ  ಭದ್ರವಾಗಿ ಇಡುತ್ತಿದ್ದ..!
ಹಾಸ್ಟೆಲ್ ಎದುರಿಗೇ ಇತ್ತು ಅನ್ನಿಸುತ್ತದೆ ಒಂದು go down. ಅಲ್ಲಿ ಆತನಿಗೊಂದು ಶೆಡ್ ಇತ್ತು. ಮುರಿದ ಚೇರು, ಕಾಟು, ಬೆಡ್ಡು, ಬಕೆಟ್ ಸೇರಿದಂತೆ ಏನೆಲ್ಲ ಅಲ್ಲಿ ಇರುತ್ತಿತ್ತು. ವಿಶೇಷವಾಗಿ ಅಲ್ಲಿನ ಗೂಟಗಳಿಗೆ ಕೀಲಿಯ ಗೊಂಚಲುಗಳನ್ನು ತೂಗಿ ಹಾಕಲಾಗುತ್ತಿತ್ತು.
ಇಡೀ ಹಾಸ್ಟೆಲ್ ಚಾವಿಗಳ ಉಸ್ತವಾರಿಯೇ ಮಾರುತಿಗಿತ್ತು.
No doubt he was a key person.!
ಯಾರೇ ಹೊಸ ಹುಡುಗರು ಬಂದರೂ ದೊಡ್ಡದೊಂದು ಗೊಂಚಲು (ಸುಮಾರು ಐವತ್ತು) ಚಾವಿಯನ್ನು ಹಿಡಿದು ರೂಮ್ ಬಾಗಿಲು ತೆಗೆದು ಕೊಡುತ್ತಿದ್ದ.
ತಾತ್ಕಾಲಿಕವಾಗಿ ಅವನಲ್ಲಿ ಬೀಗದ ಕೈಗಳು ಎರವಲು ಸಿಗುತ್ತಿದ್ದವು. ಬಂದ ಹುಡುಗರಿಗೆ ನಿರ್ಭಾವುಕವಾಗಿ ರೂಂ ತೋರಿಸುತ್ತಿದ್ದ. ಹುಡುಗರನ್ನು ಹದ್ದು ಬಸ್ತಿಗಿಡುವ ಸಂಪೂರ್ಣ ಜವಾಬ್ದಾರಿ  ವಾರ್ಡನ್ ಅವರದ್ದಾಗಿತ್ತು.
ಊರಿಂದ ತಂದೆ ತಾಯಿಯನ್ನು, ಅಜ್ಜ ಅಜ್ಜಿಯರನ್ನು, ಕೀಟಲೆ ಮಾಡುವುದಕ್ಕೆಂದೇ ಇರುವ ತಂಗಿಯರನ್ನು ಬಿಟ್ಟು ಬರುವ ಕಾಲೇಜು ಹುಡುಗರಿಗೆ ಇವನೊಬ್ಬ ಸಾಂತಾ ಕ್ಲಾಸ್..!
ಇದೇ ಕಾರಣಕ್ಕೆ ಆತನ ಕುರಿತು ಎಲ್ಲರಿಗೂ ಪ್ರೀತಿ..ಕೆಲವೊಮ್ಮೆ ಮನೆಯಿಂದ ಬರುವ ಪಾಕಿಟ್ ಮನಿಯಲ್ಲೂ ಹತ್ತಿಪ್ಪತ್ತು ಕೊಟ್ಟು ರಾತ್ರಿ "ಮಾರುತಿ ಪ್ರತಾಪ" ನೋಡುವ ಶ್ರೀಮಂತ ದಾನಿಗಳೂ ನಮ್ಮ ಹಾಸ್ಟೆಲ್  ಸಹಪಾಟಿಗಳಾಗಿದ್ದರು.
ಗಾಳಿಗೆ ಊದಿದರೆ ಹಾರಿಸಿಕೊಂಡು ಹೋಗಬಹುದಾಗಿದ್ದ ಮಾರುತಿಯಲ್ಲಿ   ಒಂದು ಮಹಾನ್ ಶಕ್ತಿ ಇತ್ತು ಕಣ್ರಿ. ಹಾಸ್ಟೆಲ್ ನಲ್ಲಿ ಆಗೀಗ ಕಟ್ಟಿಕೊಳ್ಳುತ್ತಿದ್ದ ಚರಂಡಿ ಪೈಪನ್ನು ಸ್ವತಃ ಇಳಿದು ರಿಪೇರಿ ಮಾಡುತ್ತಿದ್ದ ಪುಣ್ಯಾತ್ಮ. ಹುಡುಗರು ಹಾಗೂ ಒಟ್ಟು ವಿದ್ಯಾರ್ಥಿ ನಿಲಯದ  ಸೇವೆ ಸಲ್ಲಿಸುವುದಕ್ಕೆ ಆತನಿಗೆ ಹೇಸಿಗೆ ಎಂಬದೇ ಇರಲಿಲ್ಲ.
ಹಾಸ್ಟೆಲ್ ವಿದ್ಯಾರ್ಥಿಗಳ ಬಗ್ಗೆ ಆತನಲ್ಲಿ  ಒಂದು ತಾಯಿ ಹೃದಯ ಇತ್ತು. ಅದನ್ನು ಸಾಬೀತು ಪಡಿಸುವ ಒಂದು ನಿದರ್ಶನ ಹೇಳುತ್ತೇನೆ.
ನಾವು ಕಾಲೇಜಿಗೆ, ಮೆಸ್ ಗೆ ಕೊನೆಗೆ ಶೌಚಾಲಯಕ್ಕೆ ಹೋಗುವಾಗಲೂ ನಮ್ಮ ರೂಮಿನ ಚಾವಿಯನ್ನು ಹಿಡಿದುಕೊಂಡೇ ಹೋಗಬೇಕಿತ್ತು.
ಭದ್ರತಾ ದೃಷ್ಟಿಯಿಂದ ಹಾಗೊಂದು ನಿಯಮವನ್ನು ಮೊದಲಿನಿಂದಲೂ ಪಾಲಿಸಲಾಗುತ್ತಿತ್ತು.
ಅದರಲ್ಲಿ ಕೆಲವು ಬಾತ್ ರೂಂ, ಟಾಯ್ಲೆಟ್ ಗಳಲ್ಲಿ  ಟವೆಲ್ ಹಾಗೂ ಚಾವಿಯನ್ನು ಇಡಲು ಮೊಳೆ ಇರುತ್ತಿರಲಿಲ್ಲ. ನಮ್ಮ ಸ್ನೇಹಿತರಂತೇ ಕಾಣುತ್ತಿದ್ದ ಕೆಲವು ತಮ್ನ ಬಾತ್ ರೂಂ ಬಹದ್ದೂರ್ ಗಿರಿ ಭಾಗವಾಗಿ  ಕಿತ್ತು ಹಾಕುತ್ತಿದ್ದರು.
ಸ್ನಾನಕ್ಕೆ ಹೋದಾಗ, ಶೌಚಾಲಯಕ್ಕೆ ಹೋದಾಗ ಕೆಲವೊಮ್ಮೆ ಕೈ ತಪ್ಪಿ  ಬೇಸಿನ್ ಗೆ ಬೀಳುತ್ತಿದ್ದ ರೂಂ ಚಾವಿ ದೊಡ್ಡ ಪಜೀತಿ ತಂದಿಡುತ್ತಿತ್ತು.
ಆ ಸಂದರ್ಭದಲ್ಲಿ ನನಗೆ ಸಹಾಯಕ್ಕೆ ಬರುತ್ತಿದ್ದ ಪುಣ್ಯಾತ್ಮ ಕೂಡ ಇದೇ ಮಾರುತಿ.
ಯಾವ ಮುಜುಗರವೂ ಇಲ್ಲದೆ ಬೇಸಿನ್ ಒಳಕ್ಕೆ ಕೈ ಹಾಕಿ
ಚಾವಿ  ತೆಗೆದುಕೊಡುತ್ತಿದ್ದ.
ಇದು ಮಕ್ಕಳಿಗೆ ಒಬ್ಬ ತಾಯಿ ಮಾತ್ರ ಮಾಡಬಹುದಾದ ಸೇವೆ ಎಂದು  ಈಗಲೂ ನನಗೆ ಅನಿಸುತ್ತದೆ.
ಬಹುಶಃ ಇದೀಗ ಬದುಕಿದ್ದರೆ ಸೆಂಚುರಿ ಬಾರಿಸುತ್ತಿದ್ದ ಮಾರುತಿ ನನಗಂತೂ ಮರೆಯಲಾಗದ ವ್ಯಕ್ತಿ.
ಜೆಎಸ್ಎಸ್ ಕಾಲೇಜಿನ ನಮ್ಮ ಬ್ಯಾಚಿನ ವಿದ್ಯಾರ್ಥಿಗಳನ್ನೆಲ್ಲ ಸೇರಿಸುವಾಗ, ಸ್ನೇಹಿತ ಶ್ರೀಕಾಂತ ಜೋಶಿ  ನನ್ನ ಸಹಪಾಠಿಗಳ ನೆನಪನ್ನು ಮಾತ್ರವಲ್ಲ ಇಂಥ ಕೆಲವು ಒಡನಾಟ ಮೆಲುಕು ಹಾಕುವಂತೆ ಮಾಡಿದ್ದಾರೆ.
-ಸದಾನಂದ ಹೆಗಡೆ


Related Posts
Previous
« Prev Post

1 ಕಾಮೆಂಟ್‌(ಗಳು)

ಮಾರ್ಚ್ 4, 2022 ರಂದು 01:38 ಅಪರಾಹ್ನ ಸಮಯಕ್ಕೆ

Lucky Casino Resort & Spa - JMT Hub
Lucky Casino Resort & Spa, Reno NV - 서산 출장안마 Use our links to get the 포천 출장안마 best offers, coupons 익산 출장샵 and more 성남 출장샵 for Lucky Casino Resort 안양 출장샵 & Spa.

Reply
avatar