ಬಹುತೇಕ ಯಶಸ್ವೀ ವ್ಯಕ್ತಿಗಳ ಗುಣ ಇದು

ಮೊದಲು ಪಾಠ ನಂತರ ಆಟ !
*******************
ಅದು 1960ನೇ ಇಸವಿ. ಸ್ಟ್ಯಾನ್‌ಫೋರ್ಡ್ ವಿವಿಯ ಪ್ರೊಫೆಸರ್ ಆಗಿದ್ದ  ವಾಲ್ಟರ್ ಮೈಕೆಲ್ ಎಂಬವರು  ಮನಶ್ಯಾಸ್ತ್ರ  ಸಂಬಂ ಕೆಲವು ಮಹತ್ವದ ಅಧ್ಯಯನ ಆರಂಭಿಸುತ್ತಾರೆ.
ಅವುಗಳ ಪೈಕಿ 4 ರಿಂದ 6 ವಯೋಮಾನದ ನೂರು ವಿದ್ಯಾರ್ಥಿಗಳ ಮೇಲೆ ಕೈಗೊಂಡ ಪ್ರಯೋಗವೂ ಒಂದು. ವಾಲ್ಟರ್ ಮತ್ತು ಅವರ ತಂಡ ಅಂದು ಹೊರ ಹಾಕಿದ ಸತ್ಯವು ವ್ಯಕ್ತಿಯೊಬ್ಬನ ಆಹಾರ ಸೇವನೆ, ಕಾರ್ಯಕ್ಷಮತೆ ಮತ್ತು ಆತನ ಜೀವನದ ಯಶಸ್ಸಿನ ನಡುವೆ ಇರುವ ಅಂತರ್ ಸಂಬಂಧವನ್ನು ಅತ್ಯಂತ ಸಮರ್ಥವಾಗಿ ವಿವರಿಸುತ್ತದೆ. ಹಾಗಾದರೆ ಅಂದು ನಡೆದ ಸಂಶೋಧನೆ ಏನು, ಮಿಗಿಲಾಗಿ ಅದರಿಂದ ನಮಗೇನು ಪ್ರಯೋಜನ ಎಂಬ ಬಗ್ಗೆ ಹೊರಳೋಣ.
ಮಾರ್ಷ್ಮಾಲೋ ಮಿಠಾಯಿ ಪ್ರಯೋಗ :
ಮಕ್ಕಳನ್ನೆಲ್ಲ ಒಂದು ಕೊಠಡಿಗೆ ಕರೆಸಿ, ಅವರ ಡೆಸ್ಕ್ ಎದುರು ಒಂದು ಮಾರ್ಷ್ಮಾಲೋ ಮಿಠಾಯಿ ಇಡುವ ವಾಲ್ಟರ್ ಮಕ್ಕಳೆದುರು ಒಂದು ಸವಾಲನ್ನು ಇಟ್ಟಿದ್ದ.
'' ನೋಡಿ ಮಕ್ಕಳೆ.. ಪ್ರತಿಯೊಬ್ಬರ  ಎದುರೂ ಒಂದು ಮಾರ್ಷ್ಮಾಲೋ ಮಿಠಾಯಿ ಇಟ್ಟಿದ್ದೇನೆ ಅಲ್ವಾ..? ನಿಮಗೆಲ್ಲ ಬಾಯಿಯಲ್ಲಿ ನೀರೂರಿಬಹದು ತಾನೆ. ನಾನು ಕೆಲವು ಕಾಲ ನಿಮ್ಮನ್ನಷ್ಟೇ ಬಿಟ್ಟು ಆಚೆ ಹೋಗಿರುತ್ತೇನೆ. ಮಿಠಾಯಿಯನ್ನು ನೀವು ತಿನ್ನಬಹುದು. ತಿನ್ನದೆಯೂ ಇರಬಹದು. ನಿಮ್ಮಲ್ಲಿ ಯಾರು ಮಾರ್ಷ್ಮಾಲೋ ಮಿಠಾಯಿ ತಿನ್ನದೇ ಹಾಗೇ ಉಳಿಸಿಕೊಂಡಿರುತ್ತೀರಲ್ಲ.. ಅವರಿಗೆ ಮಾತ್ರ ಮತ್ತೆ ಬಂದಾಗ ಮತ್ತೊಂದನ್ನು ಬಹುಮಾನವಾಗಿ ಕೊಡುತ್ತೇನೆ. ಯಾರು ಮಿಠಾಯಿ ತಿಂದು ಹಾಕುತ್ತೀರಲ್ಲ. ಅವರಿಗೆ ಇನ್ನೊಂದು ಮಿಠಾಯಿ ಇಲ್ಲ  ನೆನಪಿರಲಿ.'' ಎಂದು ಹೇಳಿ ಆಚೆ ಹೋಗಿರುತ್ತಾನೆ.
ಇಲ್ಲಿದ್ದ  ಸವಾಲು ಸರಳವಾಗಿತ್ತು. ತಕ್ಷಣ ತಿಂದವರಿಗೆ ಒಂದೇ ಮಿಠಾಯಿ..ತಿನ್ನದೇ ಉಳಿಸಿಕೊಳ್ಳುವ ಸಹನೆ ಪರೀಕ್ಷೆಯಲ್ಲಿ  ಗೆದ್ದವರಿಗೆ ಎರಡು !
ಹದಿನೈದು ನಿಮಿಷ ಮಕ್ಕಳನ್ನು ರೂಮ್ ನಲ್ಲಿಯೇ ಬಿಟ್ಟು ಆಚೆ ಹೋಗಿರುತ್ತಾನೆ ವಾಲ್ಟರ್.
ಕೊಠಡಿಯಲ್ಲಿ ಮಾರ್ಷ್ಮಾಲೋ ಮಿಠಾಯಿ ಎದುರು ಕುಳಿತ ಮಕ್ಕಳ ಆ ಹದಿನೈದು ನಿಮಿಷದ ಸಿಸಿಟಿವಿ ಫೂಟೇಜ್ ಏನಾದರೂ ಇದ್ದರೆ, ಹೇಗಿದ್ದೀತು ಊಹಿಸಿಕೊಳ್ಳಿ. ಖಂಡಿತವಾಗಿಯೂ ನಗು ಬರಿಸುವ, ಚಿಕ್ಕ ಮನರಂಜನೆಯ ಸರಕು ಅದಾಗಿರುತ್ತದೆ. ಮಕ್ಕಳೆದುರು ಅವರಿಷ್ಟದ ಚಾಕೋಲೇಟ್ ಇಟ್ಟು ತಿನ್ನಬಾರದು ಎಂದು ಹೇಳಿ ಆಚೆ ಬಂದರೆ ಅವರ ಮುಖದ ಹಲ್ ಚಲ್‌ಗಳು ಹೇಗಿದ್ದೀತು ಮತ್ತೆ ? ವಾಲ್ಟರ್ ಹೋಗಿದ್ದೇ ತಡ ಕೆಲವರು ಗಬಕ್ ಎಂದು ಮಿಠಾಯಿಯನ್ನು ನುಂಗಿ ಹಾಕಿದರು. ಕೆಲವರು ಕಷ್ಟಪಟ್ಟು ಒಂದೆರಡು ನಿಮಿಷ ಬಾಯಿ ಚಪಲ ನಿಯಂತ್ರಿಸಿಕೊಂಡರೂ, ಐದು ನಿಮಿಷದ ನಂತರ ಮಿಠಾಯಿ ಎತ್ತಿ ಬಾಯಿಯಲ್ಲಿ  ಇಟ್ಟುಕೊಂಡರು. ಬಹುತೇಕ ಮಕ್ಕಳು ಮಿಠಾಯಿಗೆ ಶರಣಾದರೂ, ಅವರಲ್ಲಿ  ನಾಲ್ಕಾರು ಮಕ್ಕಳು ಮಾತ್ರ ಗಟ್ಟಿ ಮನಸ್ಸು ಮಾಡಿ ಹದಿನೈದು ನಿಮಿಷದ ತನಕ ಹಾಗೆಯೇ ಉಳಿಸಿಕೊಂಡು ಇನ್ನೊಂದನ್ನು ಬಹುಮಾನವಾಗಿ ಪಡೆದರು.
ಪ್ರಯೋಗದ ಆಧಾರದಲ್ಲಿ 1972ರಲ್ಲಿ ವಾಲ್ಟರ್ ಪ್ರಕಟಿಸಿದ ಇದು ಮಾರ್ಷ್ಮಾಲೋ ಮಿಠಾಯಿ ಪ್ರಯೋಗ ಎಂದು ವಿಶ್ವ ವಿಖ್ಯಾತವಾಗಿದೆ. ಪ್ರಯೋಗದ ಮತ್ತಷ್ಟು ಕುತೂಹಲದ ಅಂಶಗಳು ಕೆಲವು ವರ್ಷದ ನಂತರ ಕಾಣತೊಡಗಿದವು.
ವರ್ಷಗಳು ಉರುಳಿದಂತೆ ಮಿಠಾಯಿ ಪ್ರಯೋಗ ಎದುರಿಸಿದ ಮಕ್ಕಳು ಬೆಳೆದು ದೊಡ್ಡವರಾಗುತ್ತಾರೆ. ಪ್ರತಿಯೊಬ್ಬರ ಚಲನ ವಲನವನ್ನೂ, ಸಾಧನೆಯನ್ನೂ ವಾಲ್ಟರ್ ದಾಖಲಿಸಿ, ವರೆಗೆ ಹಚ್ಚಿದಾಗ ಅಚ್ಚರಿಯ ಸಂಗತಿಗಳು ಕಂಡುಬರುತ್ತವೆ.
15 ನಿಮಿಷ ಮಿಠಾಯಿಯನ್ನು  ತಿನ್ನದೆ ಗಟ್ಟಿತನ ತೋರಿ ಎರಡನೆ ಮಿಠಾಯಿ ಗೆದ್ದ  ಮಕ್ಕಳ ಶೈಕ್ಷಣಿಕ ಸಾಧನೆ ಅತ್ಯುತ್ತಮವಾಗಿರುತ್ತದೆ. ಮಾದಕ ವಸ್ತುಗಳತ್ತ ಆಕರ್ಷಣೆ, ದಡೂತಿ ಸಮಸ್ಯೆ ಇವರಲ್ಲಿ ಅಷ್ಟಾಗಿ ಕಾಣುವುದಿಲ್ಲ, ಹೊರತಾಗಿ ಒತ್ತಡ ಎದುರಿಸುವ ಕಾರ್ಯಕ್ಷಮತೆ, ಸಾಮಾಜಿಕ ಹೊಂದಾಣಿಕೆ ಗುಣ ತೋರುತ್ತಾರೆ. ಒಟ್ಟಾರೆ ಹೇಳುವುದಾದರೆ, ಅವರು ಜೀವನದಲ್ಲಿ ಮುಂದೆ ಬಂದಿರುತ್ತಾರೆ.
ನಂತರದ ನಲವತ್ತು ವರ್ಷಗಳ ಅವಗೆ ಇವರ ಕೆರಿಯರ್ ಗ್ರಾಫ್ ದಾಖಲಿಸಿದಾಗಲೂ, ಕಂಡು ಬರುವ ಅಂಕಿ ಅಂಶಗಳು, ಅಂದು ಮಿಠಾಯಿ ತಿನ್ನುವಲ್ಲಿ ಸಂಯಮ ಪ್ರದರ್ಶಿಸಿ ಇನ್ನೊಂದನ್ನು ಗೆದ್ದವರು ಎಲ್ಲಿ ಹೋದರೂ ಏನೋ ಒಂದು ಸಾಧನೆಯನ್ನು ತೋರಿದ್ದು ವಿಶೇಷ. ಅಂದರೆ, ಖುಷಿ, ಮೋಜಿನ ವಿಚಾರದಲ್ಲಿ ಮಾನಸಿಕ ಸಂಯಮ ಜೀವನದಲ್ಲಿ ಯಶಸ್ಸಿಗೆ ಅತ್ಯಂತ ನಿರ್ಣಾಯಕ ಎಂಬುದು ಪ್ರಯೋಗ ಹೊರಹಾಕಿದ  ಒಂದು ವಾಕ್ಯದ ಸಂದೇಶ. ಇನ್ನೊಂದೆಡೆ ಮಿಠಾಯಿ ಸಿಗುತ್ತಲೇ ಬರಗೆಟ್ಟು ತಿಂದವರ ಕತೆಯೂ ಕುತೂಹಲಕರವಾಗಿತ್ತು. ಇವರಲ್ಲಿ ಹಲವರು ಕುಡುಕರು, ಮಾದಕ ವಸ್ತುಸೇವನೆ, ದಿವಾಳಿಕೋರತನ, ದಡೂತಿ ಸಮಸ್ಯೆಯಿಂದ ಜೀವನದ ಹದ ತಪ್ಪಿರುವುದಕ್ಕೆ ನಿದರ್ಶನರಾಗುತ್ತಾರೆ.
ನಮ್ಮ ಸುತ್ತ ಗಮನಿಸಿದಾಗಲೂ ಇದಕ್ಕೆ ಹತ್ತಾರು ನಿದರ್ಶನ ಸಿಗುತ್ತದೆ. ಸಣ್ಣ ಉದಾಹರಣೆಯನ್ನೇ ಕೊಡುವುದಾದರೆ, ನೀವು ಈ ಕ್ಷಣ ಟೀವಿ ನೋಡುವುದನ್ನು ಬಿಟ್ಟು , ಹೋಮ್ ವರ್ಕ್ ಕೈಗೆತ್ತುಕೊಂಡರೆ ನಿಮ್ಮ ಒಂದು ಕೆಲಸ/ಕಲಿಕೆ ಮುಗಿದಿರುತ್ತದೆ. ನಿಮ್ಮ ಕಲಿಕೆ ಅಷ್ಟರ ಮಟ್ಟಿಗೆ ಸುಧಾರಿಸುತ್ತದೆ.
ಬಾಯಿ ಚಪಲಕ್ಕೆ ಬಿದ್ದು, ಬೀದಿಯಲ್ಲಿ  ಸಿಗುವ ಎಣ್ಣೆ ಕರಕಲುಗಳನ್ನು ಗಳಪುವುದಕ್ಕಿಂತ ಮನೆಗೆ ಹೋಗುವ ತನಕ ಕಾಯುವ ಸಹನೆ ಇದ್ದರೆ, ಹೆಚ್ಚು ಆರೋಗ್ಯಕರ ತಿಂಡಿ ತಿನಿಸು ತಿಂದು ನಿಮ್ಮ ಆರೋಗ್ಯವನ್ನು ನಿಮ್ಮ ಕೈ ಯಲ್ಲಿ  ಟ್ಟುಕೊಳ್ಳಬಹದು.
ಬೆಳಗ್ಗೆ ಎದ್ದು, ದಿನವೂ ಹತ್ತು ಸೂರ್ಯ ನಮಸ್ಕಾರ ಹೆಚ್ಚಾಗಿ ಮಾಡುವ ಸಹನೆ ರೂಢಿಸಿಕೊಂಡರೆ, ನಿಮ್ಮ  ಆರೋಗ್ಯ ನಿಮ್ಮ ಕೈಯಲ್ಲಿ  ಇರುತ್ತದೆ. ಹೆಚ್ಚು ಲವಲವಿಕೆಯಲ್ಲಿ ಇರುತ್ತೀರಿ.
ಹೀಗೆ .. ಇದಕ್ಕೆ ಸಾಕಷ್ಟು ನಿದರ್ಶನ ಹೇಳುತ್ತಲೇ ಹೋಗಬಹುದು.
ತಾತ್ಕಾಲಿಕ ಪ್ರಲೋಬನೆಗಳಿಗೆ ಬಲಿಯಾಗುವ ಬದಲು, ಶಿಸ್ತಿನ ಸಾಧನೆಯ ಮಾರ್ಗ ಅನುಸರಿಸಿದವನು ಜೀವನದಲ್ಲಿ ಯಶಸ್ಸು ತಾನಾಗಿಯೇ ಬರುತ್ತದೆ. ‘ಯಶಸ್ವೀ ಮಾರ್ಗದಲ್ಲಿ ಮೋಜು ಮಸ್ತಿಗೆ ಅವಸರ ಇಲ್ಲ ’ ಎಂಬ ಮಾತಿನ ಅರ್ಥವೇ ಇದು. ಇದನ್ನೇ ಇಂಗ್ಲೀಷಿನಲ್ಲಿ ಡಿಲೇಡ್ ಗ್ರೇಟಿಫಿಕೇಶನ್ ಅನ್ನುತ್ತಾರೆ. ಇಲ್ಲೊಂದು ಅಚ್ಚರಿಯ ವಿಚಾರ ನಮ್ಮ ಮನಸ್ಸಿಗೆ ಬರುತ್ತದೆ. ಕೆಲವು ಮಕ್ಕಳು ಹುಟ್ಟಾ  ಸಹನಶೀಲರಾಗಿದ್ದವರು ಮಾತ್ರ, ಕೈಗೆತ್ತಕೊಂಡ ಕೆಲಸದಲ್ಲಿ ಯಶಸ್ಸು ಸಾಸುವುದು ಸಾಧ್ಯವೇ ? ಅಥವಾ ಈ ಮಹತ್ವದ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದಕ್ಕೇನಾದರೂ ಅವಕಾಶ ಇದೆಯೇ ?
' ಮೊದಲು ಸಜ, ಆ ನಂತರ ಮಜ' ಎಂಬುದಾಗಿ ಮನಸ್ಸು ಗಟ್ಟಿಗೊಳಿಸುವ ನಮ್ಮ  ಅಂತಃಶಕ್ತಿ ಸಾಧ್ಯವಾಗುವುದು ಹೇಗೆ ?
ಇದನ್ನು ಕಂಡುಕೊಳ್ಳಲು ರೊಚೆಸ್ಟರ್ ವಿವಿ ಸಂಶೋಧಕರು ಮಾಷ್ಮ್ಮೆರ್ಲ್ಲೋ ಮಿಠಾಯಿ ಪ್ರಯೋಗದಲ್ಲಿ   ತುಸು ಬದಲಾವಣೆ ಮಾಡಿಕೊಂಡು ಮತ್ತೆ ಕೈಗೆತ್ತಿಕೊಳ್ಳುತ್ತಾರೆ. ಈ ಬಾರಿ ಮಾರ್ಷ್ಮಾಲೋ ಮಿಠಾಯಿ ಇಡುವ ಮೊದಲಿಗೆ ಮಕ್ಕಳಲ್ಲಿ ಎರಡು ಗುಂಪನ್ನು ಮಾಡುತ್ತಾರೆ. ಅವರಲ್ಲಿ ಮೊದಲ ಗುಂಪಿನ ಮಕ್ಕಳಿಗೆ ಮಿಠಾಯಿ ಜನತೆಗೆ ಕ್ರೆಯಾನ್ ಪೆಟ್ಟಿಗೆಯನ್ನು ಇಟ್ಟು, ತಿನ್ನದೇ ಇಟ್ಟುಕೊಂಡರೆ  ದೊಡ್ಡ ಕ್ರೆಯಾನ್ ಕೊಡುವುದಾಗಿ ಹೇಳುತ್ತಾರೆ. ಆದರೆ ಗೆದ್ದವರಿಗೆ ತಕ್ಷಣ ಹೇಳಿದಂತೆ ಬಹುಮಾನ ಕೊಡುವುದೇ ಇಲ್ಲ.  ಅದೇ ರೀತಿ ಇನ್ನೊಮ್ಮೆ ಇದೇ ಮಕ್ಕಳಿಗೆ ಮಿಠಾಯಿ ಜತೆಗೆ ಸ್ಟಿಕರ್ ಇಟ್ಟು  ತಿನ್ನದೇ ಇಟ್ಟುಕೊಂಡವರಿಗೆ ದೊಡ್ಡ ಸ್ಟಿಕ್ಕರ್ ಕೊಡುವುದಾಗಿ ಹೇಳಿದರೂ, ಅದನ್ನೂ  ಈಡೇರಿಸದೆ, ಸಣ್ಣದನ್ನೇನನ್ನೊ ಕೊಟ್ಟು  ಮಾತಿಗೆ ತಪ್ಪುತ್ತಾರೆ. ಒಟ್ಟಾರೆ  ತುಸು ಅಪನಂಬಿಕೆಯ ವಾತಾವರಣ ಉಂಟು ಮಾಡುತ್ತಾರೆ.
ಇನ್ನೊಂದು ಗುಂಪಿಗೂ ಹೀಗೇ ಪ್ರಯೋಗವನ್ನು ಮಾಡಿದರೂ, ಗೆದ್ದವರಿಗೆ ಇಟ್ಟ  ಬಹುಮಾನದಲ್ಲಿ  ಮೊದಲು  ಹೇಳಿದ್ದಕ್ಕಿಂತ ಒಳ್ಳೆಯ ಬಹುಮಾನ ಕೊಟ್ಟು ಹುರಿದುಂಬಿಸಲಾಗುತ್ತದೆ. ಉದಾಹರಣೆಗೆ ಒಂದು ಕ್ರೆಯಾನ್ ಪೆಟ್ಟಿಗೆ ಬಹುಮಾನ ಘೋಷಿಸಿದರೂ ಗೆದ್ದವರಿಗೆ ಎರಡು ಕ್ರೆಯಾನ್ ಪೆಟ್ಟಿಗೆ ಕೊಡುವುದು.. ಹೀಗೆ.
ಇದರ ಪರಿಣಾಮ ಏನಿರಬಹದು ಎಂದು ನೀವೇ ಊಹಿಸಬಹದು. ಅಪನಂಬಿಕೆ ಪ್ರಯೋಗದ ಗುಂಪಿನ ಮಕ್ಕಳಿಗೆ ಸಂಶೋಧಕರ ಮಾತನ್ನು ಗೌರವಿಸುವುದಕ್ಕೆ ಕಾರಣವೇ ಇರಲಿಲ್ಲ. ಅದಕ್ಕಾಗಿ ಎರಡನೆ ಬಾರಿ ತಮಗೇನೋ ಸಿಕ್ಕೀತು ಎಂಬ ಭರವಸೆ ಇಲ್ಲದೆ ಕಾರಣ, ಮಕ್ಕಳೂ ಸಿಕ್ಕ ಮಿಠಾಯಿ ತಿನ್ನುವುದನ್ನೂ ಬಿಟ್ಟು  ತಮ್ಮ ಸಹನೆ ಪರೀಕ್ಷೆಯ ಸವಾಲನ್ನೇ ಸ್ವೀಕರಿಸುವುದಿಲ್ಲ..
ಆದರೆ ಎರಡನೆ ಗುಂಪಿನಲ್ಲಿ ಮಕ್ಕಳಲ್ಲಿ ಸಂಶೋಧಕರ ಬಗ್ಗೆ ಸಕಾರಾತ್ಮಕ ಧೋರಣೆ ಉಂಟಾಗಿರುತ್ತದೆ. ಪ್ರತಿ ಬಾರಿಯೂ ಕೊಟ್ಟ ಭರವಸೆಯನ್ನು ಈಡೇರಿಸಿದ್ದ ಕಾರಣ ಇವರ ತುಡಿತ ಬೇರೆಯೇ ಇತ್ತು. 1) ಬಹುಮಾನಕ್ಕಾಗಿ ಕಾಯುವುದು ಅರ್ಥಪೂರ್ಣ ಎನ್ನಿಸಿತ್ತು 2) ನಾನೂ ಸಹನೆಯಿಂದ ಕಾಯ್ದು  ಗೆಲುವನ್ನು ಸಾಸಬಲ್ಲೆ ಎಂಬ ಆತ್ಮ ವಿಶ್ವಾಸವೂ ಇತ್ತು.  ಪರಿಣಾಮವಾಗಿ ಎರಡನೆ ಗುಂಪಿನ ಸಹನಾಶಕ್ತಿ ಮೊದಲಿನ ಗುಂಪಿಗಿಂತ ನಾಲ್ಕು ಪಟ್ಟು ಹೆಚ್ಚಾಗಿತ್ತು.
ಅಂದರೆ ಮಗುವೊಂದರ ಸಹನ ಶಕ್ತಿ ಎಂಬುದು ಹುಟ್ಟಿದಾಕ್ಷಣ ಬರುವಂಥದ್ದಲ್ಲ, ಹೊರತಾಗಿ ವ್ಯವಸ್ಥಿತ ವಾತಾವರಣದಲ್ಲಿ ಇದನ್ನು ಮಕ್ಕಳಲ್ಲಿ ರೂಢಿಸುವುದು ಸಾಧ್ಯ ಎಂದಾಯಿತಲ್ಲವೇ. ನಿಜ. ಮಗುವಿನಲ್ಲಿ ಆತ್ಮ ವಿಶ್ವಾಸ ಬಿತ್ತುವಲ್ಲಿ ಆತನಿಗೆ ನೀಡುವ ಶೈಕ್ಷಣಿಕ ವಾತಾವರಣ ಅತ್ಯಂತ ಮುಖ್ಯವಾಗುತ್ತದೆ. ಕೆಲವೇ ನಿಮಿಷದ ಪ್ರಯೋಗವು ಮಕ್ಕಳಲ್ಲಿನ ನಂಬಿಕೆ ಅಥವಾ ಅಪನಂಬಿಕೆಯ ವಾತಾವರಣ ಅವರ ಚಟುವಟಿಕೆಯ ದಿಕ್ಕನ್ನೇ ಬದಲಿಸಿತಲ್ಲವೇ.
ಮೇಲಿನ ಪ್ರಯೋಗದಿಂದ ನಾವಾಗಲಿ, ನೀವಾಗಲಿ ಕಲಿಯಬಹುದಾದ ಪಾಠ ಏನು ?
'ಮೊದಲು ಪಾಠ ಆಮೇಲೆ ಆಟ' ಎಂಬ ತತ್ವದಲ್ಲಿ ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸುವುದಾದರೂ ಹೇಗೆ ?
ಇದಕ್ಕೂ ಮೊದಲು ನಾವು ಒಂದು ವಿಷಯವನ್ನು ಇಲ್ಲಿ ಸ್ಪಷ್ಟ ಪಡಿಸಬೇಕಾಗುತ್ತದೆ.ಒಂದಿಲ್ಲೊಂದು ಕಾರಣಕ್ಕೆ ಮಾರ್ಷ್ಮಾಲೋ ಮಿಠಾಯಿ ಪ್ರಯೋಗವು ಇದೀಗ ಜಗತ್ಪ್ರಸಿದ್ಧವಾಗಿದೆ. ಎಲ್ಲೆಡೆ ಇದರ ಮಾಹಿತಿಗಳು ಸಿಗುತ್ತವೆ. ಹಾಗೆ ನೋಡಿದರೆ, ಇದೊಂದು ಸರಳ ಅಧ್ಯಯನ.
ನಮಗೆಲ್ಲ ಗೊತ್ತು ಮಾನವನ ಬದುಕು ಮಾತ್ರ ಅತ್ಯಂತ ಸಂಕೀರ್ಣವಾದುದು ತಾನೆ. ಹಾಗೇ ಮನುಷ್ಯನ ವರ್ತನೆ ಒಬ್ಬರಿಂದ ಒಬ್ಬರಿಗೆ ತೀರಾ ಭಿನ್ನವಾಗಿದ್ದು, ಅವರ ಅನುಭವ, ಸಂವೇದನೆಗಳೇ ಭಿನ್ನವಾಗಿರುತ್ತವೆ. ಐದು ವರ್ಷದ ಹುಡುಗ ಮಾಷ್ಮ್ಮೆರ್ಲ್ಲೋ ಮಿಠಾಯಿ ಪ್ರಯೋಗದಲ್ಲಿ ಗೆದ್ದವನೇ ಇಡೀ ಜೀವನವನ್ನೇ ಗೆದ್ದುಬಿಡುತ್ತಾನೆ ಎಂಬುದು ಸತ್ಯದ ಸತ್ಯಂತ ಸರಳ ಪರಿಭಾಷೆಯಾದೀತು. ಯಾರೊಬ್ಬರ ಜೀವನವೂ ಆ ರೀತಿಯಲ್ಲಿ ಸರಳ ಸಾಧನಾ ಪಥ ಆಗಿರುವುದೇ ಇಲ್ಲ.
ಆದರೆ..
ಮೇಲಿನ ಅಧ್ಯಯವು ಕೆಲವು ಕನಿಷ್ಠ ಸತ್ಯವನ್ನು ನಮ್ಮ ಮುಂದೆ ಪ್ರಸ್ತುತಪಡಿಸಿದೆ. ಜೀವನದ ಯಾವುದೇ ಹಂತದಲ್ಲಿ, ಸಣ್ಣ ಪುಟ್ಟ ಕೆಲಸದಲ್ಲೂ ನಿಮಗೆ ಯಶಸ್ಸು ಬೇಕು ಎಂದಾದರೆ, ಮನಸ್ಸನ್ನು ಆಚೆ ಈಚೆ ಹರಿಬಿಡದೆ ಅಥವಾ ಸುಲಭದ ದಾರಿಗೆ ಹೊರಳದೆ ಹಿಡಿದ ಕೆಲಸವನ್ನು ಮುಗಿಸುವ ಹಟದಲ್ಲಿ ಶ್ರಮಿಸಬೇಕು ಎಂಬುದಂತೂ ಸತ್ಯ. ಅಲ್ಲೂ  ಕೈ ಕೆಸರಾದ ನಂತರ, ಬಾಯಿ ಮೊಸರು ಎಂಬ ನಾಣ್ನುಡಿ ಅನುಷ್ಠಾನ ಆಗಬೇಕು.
ಈ ತನಕದ ನಿಮ್ಮ ಸಾಧನೆ ಗಮನಿಸಿದಾಗ ನೀವೊಬ್ಬ  ಛಲಗಾರನಲ್ಲ ಎಂದು ಅನ್ನಿಸುತ್ತಿದ್ದರೂ, ಈ ಕ್ಷಣದಲ್ಲೂ  ನಿರ್ಧರಿಸುದರೂ ನಿಮ್ಮನ್ನು ನೀವು ತರಬೇತುಗೊಳಿಸುವುದಕ್ಕೆ ಅವಕಾಶ ಇದ್ದೇ ಇದೆ. ವಿಷಯ ಇಷ್ಟೇ, ನೀವು ನಿಮ್ಮಲ್ಲಿ ಸಣ್ಣ ಸಣ್ಣ ಬದಲಾವಣೆ ಹೆಜ್ಜೆಯನ್ನು ಅಳವಡಿಸಿಕೊಂಡು ಮುನ್ನುಗ್ಗಬೇಕು. ಮಕ್ಕಳ ಶಿಕ್ಷಣದ ವಿಚಾರದಲ್ಲೂ ಹಾಗೇಯೇ, ನಂಬುಗೆಯ ವಾತಾವರಣ ನಿರ್ಮಿಸಿದರೆ ಮಕ್ಕಳ  ಸಾಧನೆಯಲ್ಲಿ ಸುಧಾರಣೆ ಕಾಣುವುದು ಸಾಧ್ಯವಾಗುತ್ತದೆ.
ಅಂದರೆ ಜಿಮ್‌ಗೆ ಹೋಗಿ ಯಾವುದೇ ವಯಸ್ಸಿನಲ್ಲೂ ತ್ರಿ ಪ್ಯಾಕ್, ಸಿಕ್ಸ್ ಪ್ಯಾಕ್ ಮಾಂಸ ಖಂಡವನ್ನು ಬೆಳೆಸಿಕೊಳ್ಳುವಂತೆ, ನಮ್ಮ ಮನಸ್ಸಿಗೂ ಒಂದು ತರಬೇತಿಯಿಂದ ಮತ್ತೆ  ಕೆಲಸದಲ್ಲಿ ಸಂಯಮ, ಪರಿಶ್ರಮದಲ್ಲಿ ನಂಬಿಕೆಯನ್ನು  ಹುಟ್ಟಿಸಿಕೊಳ್ಳುವುದು ಸಾಧ್ಯವಿದೆ. ಅಷ್ಟೇ ಸಣ್ಣ ಸಣ್ಣ ಗುರಿಯನ್ನು ನಿಗದಿ ಮಾಡಿ, ಸಾಸಿ ಖುಷಿ ಕಾಣುವಂತೆ ತರಬೇತಿ ರೂಪಿಸಿಕೊಳ್ಳಬೇಕಾಗುತ್ತದೆ. 1) ಉತ್ತಮ ಫಲಿತಾಂಶಕ್ಕಾಗಿ ತುಸು ಕಾಯೋಣ 2) ನನಗೂ ಸಾಧನೆಯ ಸಾಮರ್ಥ್ಯ ಇದ್ದೇ ಇದೆ ಎಂಬ ಮನಸ್ಥಿತಿಯನ್ನು ತಂದುಕೊಳ್ಳುವುದು ಸಾಧ್ಯವಿದೆ. ಅದಕ್ಕೆ ಕೆಳಗಿನ ನಾಲ್ಕು ಹೆಜ್ಜೆಯನ್ನು ರೂಢಿಸಿಕೊಳ್ಳಬೇಕು.
1) ಅತ್ಯಂತ ಸಣ್ಣ ರೀತಿಯಲ್ಲಿ  ಆರಂಭಿಸಬೇಕು.
2) ಹೊಸ ಕೆಲಸವು ಅತ್ಯಂತ ಸುಲಭವಾಗಿದ್ದಲ್ಲಿ, ನೀವು ಉದಾಸೀನ ಮಾಡುವ ಪ್ರಶ್ನೆ  ಏಳುವುದಿಲ್ಲ.
3)ದಿನವೂ ಶೇಕಡಾ ಒಂದರಷ್ಟು ಸುಧಾರಣೆ ಕಂಡುಕೊಳ್ಳಬೇಕು.
4) ಮಾರನೇ ದಿನ ಮತ್ತೆ ಪ್ರಯತ್ನ ಮಾಡಬೇಕು.
5) ನಿರಂತರತೆಯನ್ನು ಇಟ್ಟುಕೊಳ್ಳಲು ಕೆಲವು ತಂತ್ರಗಳಿವೆ. ಅವನ್ನು ರೂಢಿಸಿಕೊಳ್ಳಬೇಕು.
6) ಯಾವುದೇ ಕೆಲಸವನ್ನು ವಿಳಂಬ ಮಾಡದೆ, 2 ನಿಮಿಷದಲ್ಲಿ ಆರಂಭಿಸುವ ಮಾರ್ಗ ಕಂಡುಕೊಳ್ಳಿ.


-ಮೂಲ : ಜೇಮ್ಸ್ ಕ್ಲಿಯರ್, ವರ್ತನಾ ತರಬೇತುದಾರ.
ಅನುವಾದ : ಸದಾನಂದ ಹೆಗಡೆ



Related Posts
Previous
« Prev Post