ಮಳೆ ಮಾರುಕಟ್ಟೆಯಲ್ಲಿ ಅಂಕಿ ಸಂಕಿಗಳ ಸುಳಿವಿಲ್ಲ

 ಕಳೆದ ವರ್ಷ ಅದ್ಯಾವ ಪರಿ ಬರಗಾಲ ಬಂದಿತ್ತು ಎಂಬುದು ಇತ್ತೀಚಿನ ಬಿರುಮಳೆಯಲ್ಲಿ  ನಮಗೆ ನೆನಪೇ ಆಗುತ್ತಿಲ್ಲ. ಅದಕ್ಕೂ ಹಿಂದಿನ ಎರಡು ವರ್ಷಗಳೂ ತೃಪ್ತಿಕರ ಮಳೆಯೇನೂ ಆಗಿರಲಿಲ್ಲ.  ರಾಜ್ಯದ ಒಣ ಬೇಸಾಯದ ಜಿಲ್ಲೆಯಲ್ಲಿ ಒಂದಾದ ನಂತರ ಒಂದರಂತೆ ನಿರಂತರವಾಗಿ ಮೂರು ನಾಲ್ಕು ವರ್ಷ ಬರಗಾಲವೇ ಆಗಿ, ಅಂತೂ ಈ ವರ್ಷ ತುಸು ಮಳೆ ಬೀಳುತ್ತಿದೆ.
ಮಳೆ ಹೊಯ್ಯದ ವರ್ಷ ಅಂತರ್ ಜಲ ಕುಸಿದು ಬೋರ್ ವೆಲ್‌ಗಳೂ ಬರಿದಾಗುತ್ತವೆ. ಟ್ಯಾಂಕರ್‌ಗಳಲ್ಲಿ  ನೀರು ಸರಬರಾಜು ಸಮಸ್ಯೆ, ಕನಿಷ್ಠ  ನೀರು ಬಳಸುವ ನಿಟ್ಟಿನಲ್ಲಿ ಜಾಗೃತಿ, ಜನ ಜಾನುವಾರುಗಳ ಬವಣೆ, ಕನಿಷ್ಠ ನೀರಿನ ಕೃಷಿ ಪ್ರಯೋಗದ ಕತೆಗಳು, ಭೂಮಿಯ ತಾಪಮಾನ ಏರುತ್ತಿರುವ ಅಪಾಯವೂ ಚರ್ಚೆಗೆ ಬಂದವು. ಮಳೆಗಾಗಿ ದೇವಸ್ಥಾನಗಳಲ್ಲಿ  ಪೂಜೆ, ಕೊನೆಗೆ ಕತ್ತೆಗಳ ಮೆರವಣಿಗೆಯೂ ನಡೆದವು. ಜಪ್ಪಯ್ಯ ಅಂದರೂ ಮಳೆ ಬರಲಿಲ್ಲ. ಕಾಡು ಕಡಿದ ಕಾರಣವೇ ಬರಗಾಲ ಬರುತ್ತಿದೆ ಎಂದು ಎಲ್ಲೆಡೆ ವನಮಹೋತ್ಸವ ಆಚರಿಸಿ ಭಾಷಣ, ಚಿಂತನ ಮಂಥನವೂ ನಡೆಯಿತು..
ಅಂತೂ ಈ ವರ್ಷ ಮಳೆ ಬಂದಿದೆ. ವನಮಹೋತ್ಸವಗಳು ಹೆಚ್ಚು ಸದ್ದು ಮಾಡುತ್ತಿಲ್ಲ. ನೀರು ಇಂಗಿಸುವ ಕುರಿತು ಜಾಗೃತಿಯ ಮಾತೇ  ಇಲ್ಲ. ಮಳೆಯ ರಭಸಕ್ಕೆ ಜನರೆಲ್ಲ ತಮ್ಮಷ್ಟಕ್ಕೆ  ಮುಸುಕೆಳೆದು ಒಳಕ್ಕೆ ಸೇರಿಕೊಂಡುಬಿಟ್ಟಿದ್ದಾರೆ.
ಬರ ವೈರಾಗ್ಯವು ನಮಗೇನು ಹೊಸದಲ್ಲ. ಬರಗಾಲ ಎದುರಿಸಿದ ಇತ್ತೀಚಿನ ದಶಕದ ರಾಜ್ಯ ಸರಕಾರಗಳು, ಅವುಗಳ ಯೋಜನೆಗಳು ನಮ್ಮ ನೆನಪಿನಿಂದ ಮಾಸಿಲ್ಲ.  ಬಯಲು ಸೀಮೆಯ  ಇತಿಹಾಸ ಗಮನಿಸಿದರೆ ನೂರು ವರ್ಷದಲ್ಲಿ 70 ವರ್ಷ ಸರಿಯಾಗಿ ಮಳೆಯಾಗದ ಬಗ್ಗೆಯೇ  ಸರಕಾರಿ ದಾಖಲೆಯಲ್ಲಿ  ಉಲ್ಲೇಖ ಇದೆ. ಅದಕ್ಕಾಗಿಯೇ ದೊಡ್ಡ ದೊಡ್ಡ ಕೆರೆ ಕಟ್ಟಿಸಿದ ಸಂತರೂ ಇಲ್ಲಿದ್ದಾರೆ.

ರಾಜ್ಯದಲ್ಲೇ ಅತ್ಯಂತ ಕಡಿಮೆ ಮಳೆ ಎಂಬ ಖ್ಯಾತಿಯ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಎರಡು ಬೃಹತ್ ಕೆರೆಗಳಿಂದ ಹೆಸರಾಗಿದೆ. ತಿಪ್ಪೆ ರುದ್ರಸ್ವಾಮಿ ಎಂಬ ಅನುಭಾವಿಗಳು ನಾಲ್ಕಾರು ಶತಮಾನಗಳ ಹಿಂದೆ ಕಟ್ಟಿಸಿದ ಕೆರೆ ಇದಾಗಿದ್ದು, ಅಲ್ಲಿನ ದೊಡ್ಡ ಕೆರೆ ಇತ್ತೀಚಿನ ಇತಿಹಾಸದಲ್ಲೇ  ಸರಿಯಾಗಿ ನೀರು ಕಂಡಿಲ್ಲ. ಇನ್ನೊಂದು ವಿಶೇಷ ಎಂದರೆ ನಾಯಕನಹಟ್ಟಿ ಕೆರೆಯಲ್ಲಿಯೇ ಅದೆಷ್ಟೋ ಬೋರ್ ವೆಲ್‌ಗಳನ್ನು ಕೊರೆದರೂ ಕಳೆದ ವರ್ಷ ನೀರು ಕಾಣಿಸುವುದು ಸಾಧ್ಯವಾಗಿರಲಿಲ್ಲ !
ಮೈಸೂರು ಒಡೆಯರ ಕಾಲದಲ್ಲಿ  ನಿರ್ಮಿಸಲಾದ ಅತ್ಯಂತ ಸುಂದರ ತಾಣ, ಮಾರಿ ಕಣಿವೆಯ ವಿವಿ ಸಾಗರ ಆಣೆಕಟ್ಟಿಗೆ ಹತ್ತಾರು ವರ್ಷಕ್ಕೊಮ್ಮೆ ನೀರು ಹರಿದು ತುಂಬಿಕೊಳ್ಳುವುದು ಬಿಟ್ಟರೆ, ಲಿಂಗನಮಕ್ಕಿ , ಕೃಷ್ಣರಾಜ ಸಾಗರದಂತೆ  ಪ್ರತಿ ವರ್ಷವೂ ನೀರು ತುಂಬುವ ಪ್ರಶ್ನೆಯೇ ಇಲ್ಲ .
ಪುರಾಣ ಕತೆಯನ್ನು ಆಧರಿಸಿದ ಗಿರೀಶ್ ಕಾರ್ನಾಡರು ರಚಿಸಿದ ‘ಅಗ್ನಿ ಮತ್ತು ಮಳೆ’ ನಾಟಕದಲ್ಲಿ ಬೇರೆ ನೆಲೆಯಲ್ಲಿ ಇದೇ ಬವಣೆಯನ್ನು ಚಿತ್ರಿಸಲಾಗಿದೆ. ಹತ್ತು ವರ್ಷಗಳ ನಂತರ ಮಳೆ ಸುರಿದು ಇಳೆ ತಂಪಾಗುವ ದೃಶ್ಯದೊಂದಿಗೆ ನಾಟಕ ರೋಮಾಂಚನ ರೀತಿಯಲ್ಲಿ  ಮುಕ್ತಾಯ ಆಗುತ್ತದೆ.
ಹೀಗೆ ಮಳೆ ಬಂದು ಬರ ಸುಖಾಂತ್ಯವಾಗುತ್ತಲೇ  ಎಲ್ಲ ಸಂಕಷ್ಟವನ್ನೂ ಜನರು ಮರೆತು ಬೇಸಾಯ, ಮದುವೆ ಸಮಾರಂಭದಲ್ಲಿ  ಬಿಸಿ ಆಗಿಬಿಡುತ್ತಾರೆ. ಮತ್ತೆ ಬರಗಾಲ ಬಂದಾಗಲೇ ಅವರು ಎಚ್ಚೆತ್ತುಕೊಳ್ಳುವುದು. ಕೃಷಿಯಲ್ಲಿ ತೊಡಗಿದ ಹಳ್ಳಿಗಳ ಜನ ಸಾಮಾನ್ಯರ ವಿಚಾರ ಹೀಗೆಯೇ ಇರುತ್ತದೆ. ಆದರೆ ಪಂಡಿತರು ಹತ್ತೈವತ್ತು ವರ್ಷಗಳ ಅಂಕಿ ಸಂಕಿಗಳನ್ನು ಇಟ್ಟುಕೊಂಡು ಒಂದಿಷ್ಟು ಸಾರ್ವಕಾಲಿಕ ಸತ್ಯವನ್ನು ಗೃಹಿಸಿ, ಆ ನಿಟ್ಟಿನಲ್ಲಿ  ತಮ್ಮ  ಬದುಕಿನ ಬವಣೆಗೆ ಸಾಂತ್ವನ ರೂಪಿಸಿಕೊಳ್ಳುವ, ಹಸನು ಮಾಡಿಕೊಳ್ಳುವ ಪದ್ದತಿ ನಮ್ಮೆದುರಿಗೇ ಇದೆ.
ಉದಾಹರಣೆಗೆ ಶೇರು ಮಾರುಕಟ್ಟೆ  ಹಾಗೂ ರಿಯಲ್ ಎಸ್ಟೇಟ್ ವಿಚಾರವನ್ನೇ ತೆಗೆದುಕೊಳ್ಳಿ. ಶೇರು ಮಾರುಕಟ್ಟೆ  ಏರಿಳಿತವು ಒಂದು ಕಟು ವಾಸ್ತವ. ಹಾಗೆ ನೋಡಿದರೆ ಇದೊಂದು ವ್ಯವಸ್ಥಿತ ಜೂಜು ಇದ್ದಂತೆ.  ಇದನ್ನು ಒಪ್ಪಿಕೊಂಡು, ರಿಸ್ಕ್ ತೆಗೆದುಕೊಂಡವನೇ ಜಾಣ ಎಂದು ಮಾರುಕಟ್ಟೆ ಪಂಡಿತರು ಹೇಳುತ್ತಾರೆ. ಮಾರುಕಟ್ಟೆ ಪ್ರತೀ ಏಳೂವರೆ ವರ್ಷಕ್ಕೊಮ್ಮೆ  ಒಂದು ಏರಿಳಿತದ ಚಕ್ರವನ್ನು ಪೂರೈಸುತ್ತದೆ. ಈ ಚಕ್ರದ ಏರಿಳಿತದ ಕ್ರಮದಲ್ಲಿ ನಾವು ಹಣಕಾಸಿನ ಆಟ ಆಡುವುದನ್ನು ಕಲಿತುಕೊಳ್ಳಬೇಕು. ರಿಸ್ಕ್ ಎಲ್ಲಿರುತ್ತದೊ ಅದಕ್ಕೆ  ಪರಿಹರವೂ ಇರುತ್ತದೆ. ಶೇರು ಪೇಟೆಯ ಈ ಏರಿಳಿತದ ಪ್ರವಾಹದೊಂದಿಗೆ, ಹುಷಾರಿನೊಂದಿಗೆ ಯಾರು ಹಣವನ್ನು ಹೂಡುತ್ತಾರೊ ಅವರು ಇಲ್ಲಿ ಈಜಿ ಜಯಿಸಬಹದು, ಹಣ ಗಳಿಸಬಹದು ಎಂದು ಹೇಳಲಾಗುತ್ತದೆ.

ಬಹುತೇಕ ನಗರದಲ್ಲಿ ನಡೆಯುವ ಶೇರುಪೇಟೆ ಹಾಗೂ ಮ್ಯೂಚುವಲ್ ಫಂಡ್ ಹೂಡಿಕೆಯ ಕಾರ್ಯಾಗಾರದಲ್ಲಿ  ಐವತ್ತು ವರ್ಷದ ಶೇರು ವಹಿವಾಟಿನ ಏರಿಳಿತದ ಮಾಹಿತಿ ಕೊಡಲಾಗುತ್ತದೆ. ನಿದರ್ಶನ ಸಹಿತ ಪವರ್ ಪಾಯಿಂಟ್ ಪ್ರೊಗ್ರಾಮ್‌ಗಳನ್ನು ಸಿದ್ಧಪಡಿಸಿ  ಶೇರು ಕೃಷಿ ಹಾಗೂ ನಮ್ಮ ಹೂಡಿಕೆ ಅವಕಾಶದ ಬಗ್ಗೆ  ಪ್ರೇರಣಾ ಶಿಬಿರವನ್ನು ನಡೆಸಲಾಗುತ್ತದೆ. ರಿಯಲ್ ಎಸ್ಟೇಟ್ ವಿಚಾರದಲ್ಲೂ  ಅದರ ಏರಿಳಿಕೆಯ ಚಕ್ರವು ಉದ್ದಿಮೆ ವಲಯದಲ್ಲಿ  ತಿಳಿದಿದೆ.
ಶೇರು ಅಥವಾ ರಿಯಲ್ ಎಸ್ಟೇಟ್ ಎರಡನ್ನೂ ಸೇರಿಸಿ ಅಂದಾಜು ಅವಲಂಬಿತರ ಪಟ್ಟಿ ಮಾಡಿದರೂ ಭಾರತದ ಜನಸಂಖ್ಯೆಯ ಶೇಕಡಾ ಐದಕ್ಕಿಂತ ಹೆಚ್ಚು ಜನರ ಜೀವನಾಧಾರ ಅಲ್ಲಿ  ಇರುವುದಿಲ್ಲ. ಆದರೆ, ಶೇರುಪೇಟೆಯ ಚಲನವಲನ, ಏರು ಪೇರು ಹೇಳುವ ಅಂಖಿಸಂಖಿಗಳ ಅಭೂತಪೂರ್ವ ಕಣಜವೇ ಕಳೆದ ಐವತ್ತು ವರ್ಷದಿಂದ ಸಂಚಯ ಮಾಡಲಾಗಿದೆ. ಕೇವಲ ಐವತ್ತು ಎಪ್ಪತ್ತು ವರ್ಷದ ಶೇರು ಪೇಟೆ ಇತಿಹಾಸದ  ಬಗ್ಗೆ  ಸಾವಿರಾರು ಪಾಂಡಿತ್ಯ ಪೂರ್ಣ ಚಿಂತನೆ ಇದೆ.
ಆದರೆ ದೇಶದ ಶೇಕಡಾ 60ಕ್ಕೂ ಹೆಚ್ಚು ಜನರು ಆಶ್ರಯಿಸಿರುವ ಕೃಷಿಯ ಬಗ್ಗೆ , ನೂರಕ್ಕೆ ನೂರು ಜನರೂ ಅವಲಂಬಿಸಿರುವ ಕುಡಿಯುವ ನೀರಿನ ವಿಚಾರದಲ್ಲೂ ಸಾಕಷ್ಟು ಸಂಶೋಧನೆಗಳು, ಅಂಕಿಸಂಖಿಗಳು ಸಿಗುವುದಿಲ್ಲ. ಆಯಾ ಭಾಷೆಯ  ಶತಮಾನದ ಸಾಹಿತ್ಯ ನೋಟ ಎಂದು ಪ್ರಚಲಿತ ಇರುವಂತೆ, ಶತಮಾನದ ಮಳೆಯ ನೋಟ ಎಂಬ ಒಂದು ಶೀರ್ಷಿಕೆ ಗ್ರಾಂಥಾಲಯದಲ್ಲಿ ಹುಡುಕುವುದು ಕಷ್ಟ.

ಮಾರುಕಟ್ಟೆ  ವಲಯದಲ್ಲಿ ನಡೆದ ಸಂಶೋಧನೆ ಪ್ರಾಕೃತಿಕ  ಅಸಮತೋಲನ, ಕೃಷಿ ಅದರಲ್ಲೂ  ವಿಶೇಷವಾಗಿ ಅತಿವೃಷ್ಠಿ , ಅನಾವೃಷ್ಟಿಯ ಚಕ್ರದ ಬಗ್ಗೆ  ಮಾಹಿತಿಗಳೇ ವಿರಳ. ಸಂಶೋಧನೆಗಳು ಆಗಿದ್ದರೂ ವಿವಿ ಮಟ್ಟದಲ್ಲಿ ಉಳಿದಿವೆಯೇ ಹೊರತೂ ಜನ ಸಾಮಾನ್ಯರ, ಸರಕಾರ ಅಥವಾ ಶಾಸಕಾಂಗದ ತನಕವಂತೂ ಬಂದಿಲ್ಲ. ಬಹುತೇಕ ಕೃಷಿಕರು ಈ ಬಗ್ಗೆ ಕುತೂಹಲಿಗಳೂ ಅಲ್ಲ. ಮಾನ್ಸೂನ್ ಮಾರುತಕ್ಕೂ, ಮುಂಗಾರಿಗೂ ಸಂಬಂಧ ಏನು, ಮಳೆ ಭವಿಷ್ಯಗಳು ವೈಜ್ಞಾನಿಕವಾಗಿದ್ದರೂ, ಯಾಕೆ ಕರಾರುವಾಕ್ಕಾಗಿರುವುದಿಲ್ಲ  ಎಂಬ ಹಲವಾರು ಉತ್ತರಿಸಲಾಗದ ಪ್ರಶ್ನೆಯೇ ಇದೆ. ಭಾರತೀಯ ಶೇರು ಪೇಟೆಯ ಮೇಲೆ ಜಾಗತಿಕ ಮಾರುಕಟ್ಟೆ ಪರಿಣಾಮದ ಚಿಂತನೆ ನಡೆಯುವಂತೆ ಜಾಗತಿಕ ಮಳೆ ವಾಡಿಕೆಯು ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಇಂದಿಗಂತೂ ಅತ್ಯಂತ ತುರ್ತಿನ ವಿಚಾರವೇ ಆಗಿದೆ. ಇದರ ಬದಲು, ನಾವು ಶತಮಾನದ ಹಿಂದಿನ ಅಳತೆ ಅಂದಾಜಿನಲ್ಲೇ ಬದುಕಿ ಕೃಷಿಯನ್ನು ಮಾಡುತ್ತಿದ್ದೇವೆ. ಈಗಲೂ ಯುಗಾದಿ ದಿನ ಪಂಚಾಂಗ ಓದುವವರು  ಹೇಳುವ ಆ ವರ್ಷದ ಮಳೆ ಭವಿಷ್ಯ, ಜಾತ್ರೆಯ  ಕಾರಣಿಕ ನುಡಿಯಲ್ಲಿ  ಅತಿವೃಷ್ಟಿ  ಹಾಗೂ ಅನಾವೃಷ್ಟಿ ಕುರಿತಾದ ಅಡ್ಡಗೋಡೆಯ ದೀಪಗಳೇ ನಮ್ಮ ರೈತರನ್ನು ಮುನ್ನಡೆಸುತ್ತಿವೆ. ಐದು, ಹತ್ತು ಅಥವಾ ಹದಿನೈದು ವರ್ಷದ ಅವಧಿಯಲ್ಲಿ  ಮಳೆಯ ಗತಿಯನ್ನು ಅಂದಾಜು ಹೇಳುವ ಅಂಕಿ ಸಂಖಿಯ ಮಾಹಿತಿ ಕಣಜ ಅಥವಾ ಥಿಯರಿಗಳು ಪ್ರಚಲಿತ ಆಗಬೇಕು. ಹಾಗಾದರೆ  ರೈತರ ಬಿತ್ತನೆ ಹಾಗೂ ಬೆಳೆಯ ಆಯ್ಕೆ ಜತೆಗೆ  ಕುಡಿವ ನೀರಿನ ಕುರಿತ ಮುನ್ನೆಚ್ಚರಿಕೆಗೆ ಅನುಕೂಲ ಆಗಬಹುದು.
-ಸದಾನಂದ ಹೆಗಡೆ



Related Posts
Previous
« Prev Post