ಕಾರ್ಪೋರೇಟ್ ನಿರ್ವಹಣೆ ಕೂಡ ವಿಶಿಷ್ಟ ರೀತಿ ಅಷ್ಟಾವಧಾನ



ಸದಾನಂದ ಹೆಗಡೆ ದಾವಣಗೆರೆ
ಕಬ್ಬಿನಾಲೆ ವಸಂತ ಭಾರದ್ವಾಜ್ ಸಾಹಿತಿ, ವಿದ್ವಾಂಸರಾಗಿ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರು. ಯಕ್ಷಗಾನ ಅರ್ಥದಾರಿಯಾಗಿ, ಅಕಾಡೆಮಿ ಸದಸ್ಯರಾಗಿಯೂ ನಿರ್ವಹಿಸಿದ ಭಾರದ್ವಾಜ್ ಅಷ್ಟಾವಧಾನಿಯಾಗಿ ಹೆಸರು ಮಾಡಿದ್ದಾರೆ. ಬ್ಯಾಂಕ್ ನೌಕರಿಯಿಂದ ವಿಆರ್‌ಸ್ ಪಡೆದು ಮೈಸೂರಲ್ಲಿ  ವಾಸಿಸುತ್ತಾರೆ. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಕಲಾಕುಂಚ ಕನ್ನಡ ಕುವರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ  ಭಾಗವಹಿಸಿದ ನಂತರ, ವಿಕ ಕಚೇರಿಗೆ ಭೇಟಿ ನೀಡದ್ದರು. ಈ ಸಂದರ್ಭ ಅವಧಾನಕಲೆ ಹಾಗೂ ಇತ್ತೀಚೆಗೆ ಚರ್ಚೆಯಲ್ಲಿರುವ ಕಾರ್ಪೋರೇಟ್ ನಿರ್ವಹಣಾ ಕಲೆಯ ನಡುವಿನ ಅಂತರ್ ಸಂಬಂಧ ಕುರಿತು ಮಾತನಾಡಿದ್ದಾರೆ.
* ಅವಧಾನವನ್ನು ಸಮಕಾಲೀನ ಮ್ಯಾನೇಜರ್‌ಗಳು ತಮ್ಮ  ಮಲ್ಟಿಟಾಸ್ಕಿಂಗ್ ಸವಾಲುಗಳಿಗೆ ಹೇಗೆ ಅನ್ವಯಿಸಿಕೊಳ್ಳಬಹುದು ?
ನಾನೂ ಓರ್ವ ಮ್ಯಾನೇಜರ್ ಆಗಿದ್ದವ. ಆದರೆ ಅವಧಾನವನ್ನು ಮಾತ್ರ ಪ್ರತ್ಯೇಕ ಕಲೆ ಎಂದೇ ಗ್ರಹಿಸಿಕೊಂಡು ಮಾಡುತ್ತ ಬಂದೆ. ನಿಜ, ಅವಧಾನ ಕಲೆಯನ್ನು ಮ್ಯಾನೇಜರ್‌ಗಳು ತಮ್ಮ ನಿರ್ವಹಣಾ ಸವಾಲುಗಳಿಗೆ ಅಳವಡಿಸಿಕೊಳ್ಳುವ ಅವಕಾಶ ಇದೆ. ಹಾಗೆ ನೋಡಿದರೆ, ನಮ್ಮಲ್ಲಿ  ಗೃಹಿಣಿಯರು ವಾಸ್ತವ ಬದುಕಿನಲ್ಲಿ  ಅವಧಾನಿಗಳಾಗಿದ್ದಾರೆ. ಅಡುಗೆ ಮಾಡುತ್ತಲೇ ರೇಡಿಯೋ ಕೇಳುತ್ತಾರೆ,ಟೀವಿ ನೋಡುತ್ತಾರೆ. ಮಧ್ಯೆ ಮಕ್ಕಳ ತಂಟೆ, ಯಜಮಾನನ ಪ್ರಶ್ನೆಗಳನ್ನು ಸಹನಶೀಲರಾಗಿ ನಿರ್ವಹಿಸುತ್ತಿರುತ್ತಾರೆ. ಮಹಿಳೆಯರಲ್ಲಿ  ಏಕಕಾಲದಲ್ಲಿ ಕೆಲವು ಕೆಲಸವನ್ನು ನಿರ್ವಹಿಸುವ ಕಲೆ ರಕ್ತಗತವಾಗಿ ಬಂದಿದೆ.  ಆದರೆ ನಾನು ಮಾಡುವ ಅಷ್ಟಾವಧಾನವು ಸಾಹಿತ್ಯ, ಸಾರಸ್ವತ ಲೋಕವನ್ನು  ಜಾಣ್ಮೆಯಿಂದ ರಂಜಿಸುವುದಕ್ಕೆ  ಸೀಮಿತವಾಗಿರುತ್ತದೆ.
* ಅಷ್ಟಾವಧಾನ ಸಂದರ್ಭ ನಿಮ್ಮ ಮನಸ್ಥಿತಿ ಹಗಿರುತ್ತದೆ ?
ನಾಟಕದಲ್ಲಿ, ಯಕ್ಷಗಾನದಲ್ಲಿ  ನಾವು ಪಾತ್ರನಿರ್ವಹಿಸುವ ರೀತಿಯಲ್ಲಿಯೇ ಅವಧಾನಿಯಾಗಿಯೂ ನಾನು ಓರ್ವ ಪಾತ್ರಿಯಾಗಿರುತ್ತೇನೆ. ಓದಿದ ಎಲ್ಲವನ್ನೂ ನೆನಪಿಸಿಕೊಂಡು ಪ್ರಶ್ನೆ ಕೇಳುವವರನ್ನು, ಆ ಕ್ಷಣದ ಸನ್ನಿವೇಶವನ್ನು ಸಮರ್ಥವಾಗಿ ನಿರ್ವಹಿಸಲು ನಾನು ಮಾನಸಿಕವಾಗಿ ಸಿದ್ಧವಾಗಿರುತ್ತೇನೆ. ನನ್ನ ಓದಿನ ಅನುಭವದ ಜತೆ ಆತ್ಮವಿಶ್ವಾಸದ ಪಾರಾಕಾಷ್ಟೆಯನ್ನೂ ಆ ವೇದಿಕೆಯಲ್ಲಿ  ತಂದುಕೊಂಡಿರುತ್ತೇನೆ. ಅಷ್ಟಾವಧಾನದ ಪಾತ್ರಿಯಾಗಿ ನನ್ನ ಮೆದುಳಿಗೆ ದುಪ್ಪಟ್ಟು  ರಕ್ತ ಸಂಚಾರ ಆಗುತ್ತಿರುತ್ತದೆ. ನನ್ನೆದುರಿಗೆ ಇರುವವವರು ಯಾರೇ ಇದ್ದರೂ, ಅವರ ಪ್ರಶ್ನೆಗೆ ಪರಮಾವಧಿ ಜಾಣ್ಮೆಯಲ್ಲಿ ಉತ್ತರಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಸಿಕೊಂಡಿರುತ್ತೇನೆ. ಆ ಮಟ್ಟಿಗೆ ಅದೊಂದು ಆವೇಶ. ಇಂಥ ಮನಸ್ಥಿತಿ  ಅವಧಾನಿಗೆ ಎಷ್ಟೊಂದು ಶಕ್ತಿ ಕೊಡುತ್ತದೆ ಎಂದರೆ  ಎಂಥ ಕನ್ನಡ ಪಂಡಿತರನ್ನೂ ತಲೆಕೆಳಗು ಮಾಡುತ್ತೇವೆ. ಜಾಗಟೆಯ ಗದ್ದಲದ ನಡುವೆಯೂ ಕೊಟ್ಟ ವಿಷಯದ ಮೇಲೆ ನಿರ್ದಿಷ್ಟ  ಮಾತ್ರೆಯ ಕವನ ಹೊಸೆಯುತ್ತಲೇ, ಅಪ್ರಸ್ತುತ ಪ್ರಸಂಗಿಯ ಪ್ರಶ್ನೆಗೆ ಸುಂದರವಾಗಿ ಉತ್ತರಿಸಿ ಪ್ರೇಕ್ಷಕರ ಮನ ಗೆಲ್ಲುವುದು ಸಾಧ್ಯವಾಗುತ್ತದೆ.
* ಅವಧಾನದ ಈ ಆವೇಶ ಅಥವಾ ಮನೋಭಾವ ಬಿಡಿಯಾಗಿ ಚಿತ್ರಿಸಲು ಸಾಧ್ಯವೇ ?
ಮನೋಭಾವದ ಹಿಂದೆ ಎಎಸ್‌ಕೆ ಎಂಬ ಮೂರು ಇಂಗ್ಲೀಷ್ ಅಕ್ಷರದ ತತ್ವ ಇರುವುದನ್ನು  ನಾನು ಇಲ್ಲಿ  ವಿವರಿಸಬಲ್ಲೆ. ಎ ಅಂದರೆ ಎ್ಯಟ್ಟಿಟ್ಯೂಡ್ ಅಂದರೆ ಧೋರಣೆ. ಎಸ್ ಎಂದರೆ ಸ್ಕಿಲ್ ಅಂದರೆ ಜಾಣ್ಮೆ ಹಾಗೂ ಮೂರನೆಯ ಅಕ್ಷರ ಕೆ ಎಂದರೆ ನಾಲೇಜ್ ಅಂದರೆ ಜ್ಞಾನ. ಅವಧಾನ ಮಾಡುವರು ಸಾಹಿತ್ಯದ ತೀವ್ರ ಓದುಗರಾಗಿರಲೇಬೇಕು. ಜ್ಞಾನದ ಭಂಡಾರವೇ ಅವರಲ್ಲಿ ಇರಬೇಕು. ಜ್ಞಾನ ಹಾಗೂ ಜೀವನಾನುಭವವನ್ನು ಜೋಡಿಸಿ ತಕ್ಷಣವೇ ಹೊಸೆಯುವ ಜಾಣ್ಮೆಯೂ ಬೇಕು. ಇದಕ್ಕೆಲ್ಲ ಪೂರಕವಾಗಿ ನಾನೊಬ್ಬ ಅವಧಾನಿ, ಉತ್ತರಿಸಲೇಬೇಕು ಎಂಬ  ಮಾಡು ಇಲ್ಲವೇ ಮಡಿ ಎಂಬ ಬಲವಾದ ಧೋರಣೆ ಇರಲೇಬೇಕು.* ಇದನ್ನು ಸಮಕಾಲೀನ ಮ್ಯಾನೇಜರ್‌ಗಳು ಹೇಗೆ ಅಳವಡಿಸಿಕೊಳ್ಳಬಹದು.
ಅವಧಾನ ವೇದಿಕೆಯಲ್ಲಿ  ಯಾವಾಗಲೂ ಇರುವುದು ದೊಡ್ಡ ದಣಿವಿನ ಕೆಲಸ. ಅವಧಾನದ ಯಥಾವತ್ತನ್ನು  ಮ್ಯಾನೇಜರ್ ಒಬ್ಬ  ದಿನದ ಎಲ್ಲ  ಹೊತ್ತಲ್ಲೂ  ತನ್ನಲ್ಲಿ ಆಹ್ವಾನಿಸಿಕೊಂಡು ತನ್ನೆದುರಿಗೆ ಬರುವ ಸವಾಲನ್ನು ಎದುರಿಸುವುದು ಪ್ರಾಯೋಗಿಕವಾಗಿ ಸರಿ ಅನ್ನಿಸುವುದಿಲ್ಲ. ಅವಶ್ಯವೂ ಇಲ್ಲ. ಅದರ ಬದಲು ಅವಧಾನದಲ್ಲಿ ಸಮಸ್ಯಾ ಪೂರಣ ಎಂಬ ಒಂದು ವಿಭಾಗ ಇದೆ. ಅದನ್ನು ಅನುಸರಿಸಿದರೆ  ಏಕಕಾಲಕ್ಕೆ ಬರುವ ಎಲ್ಲ  ಸಮಸ್ಯೆಯನ್ನೂ ನಾವು ನಿರ್ವಹಿಸುವುದು ಸಾಧ್ಯ. ಹಾಗೆ ನೋಡಿದರೆ ಮ್ಯಾನೇಜಿಂಗ್ ಕೂಡ ಒಂದು ಅವಧಾನವೇ.
* ಮ್ಯಾನೇಜರ್ ಅಥವಾ ನಿರ್ವಾಹಕರಿಗೆ   ನಿಮ್ಮ ಕಿವಿಮಾತೇನು ?
ನಿರ್ವಹಣೆ ಕೂಡ ಒಂದು ಕಲೆ. ಇಲ್ಲಿ ಕೇವಲ ಜ್ಞಾನ ಮಾತ್ರ ಸಾಲುವುದಿಲ್ಲ. ಯಾವುದೇ ಒಬ್ಬ ವ್ಯಕ್ತಿ ಪರಿಪೂರ್ಣ ಜ್ಞಾನಿ ಆಗುರಿವುದು ಕಷ್ಟ. ಆದರೆ ಜ್ಞಾನಿಯಂತೆ ಕಾಣಿಸಿಕೊಳ್ಳುವುದು, ಜ್ಞಾನ ಆಗಮನಕ್ಕೆ  ಮುಕ್ತವಾಗಿರುವುದು ಅತ್ಯಂತ ಮುಖ್ಯವಾಗಿರುತ್ತದೆ. ಕ್ಷಣ ಕ್ಷಣಕ್ಕೆ ಸನ್ನಿವೇಶಗಳು ಬದಲಾದರೂ, ನಾವು ವಿಚಲಿತರಾಗದೆ ಎದುರಿಸಲು ಸಜ್ಜಾಗಿರಬೇಕು. ನಾವು ಜಾಗೃತರಾಗಿರಲು ಸವಾಲುಗಳೂ ನಮಗೆ ಅವಶ್ಯ ಎಂಬುದನ್ನು ನಾವು ನಂಬಿರಬೇಕು.    
ಅಷ್ಟಾವಧಾನಿ  ಕಬ್ಬಿನಾಲೆ ವಸಂತ ಭಾರದ್ವಾಜ್

Related Posts
Previous
« Prev Post