keremana-samsmarene..



ಕೆರೆಮನೆ- ಶ್ರೀಮಯ -  ಡಾ. ಜೋಶಿ -ಸಂಸ್ಮರಣೆ ಇತ್ಯಾದಿ..

ಯಕ್ಷಗಾನದಲ್ಲಿ ಹಲವು ಕಾರಣಕ್ಕೆ ಪ್ರಾಥಸ್ಮರಣೀಯವಾದ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇದರ ಅಮೃತ ಮಹೋತ್ಸವ ನೆನಪಿನಲ್ಲಿ "ಶ್ರೀಮಯ ಅಮೃತ ಸಿಂಚನ" ಎಂಬ ಸ್ಮರಣ ಸಂಚಿಕೆ ಇತ್ತೀಚೆಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ  ಬಿಡುಗಡೆ ಆಗಿದೆ. ಅದರ ವಿಶೇಷ ಎಂದರೆ  ಯಕ್ಷಗಾನದಲ್ಲಿ ಶೇಣಿ, ಸಾಮಗರ ನಂತರದ ಸಾಲಿನಲ್ಲಿ  ಎಲ್ಲ ತಿಟ್ಟಿಗೂ ಸಲ್ಲುವ  ಅರ್ಥದಾರಿ ಎಂದು ಖ್ಯಾತಿ ಪಡೆದ ಡಾ. ಎಂ.ಪ್ರಭಾಕರ ಜೋಶಿ ಅವರು ಇದನ್ನು ಸಂಪಾದಿಸಿದ್ದಾರೆ. ಅಂದಹಾಗೆ ಈ ಹಿಂದೆ ಯಕ್ಷಗಾನದಲ್ಲಿ "ಜಾಗರ' ಸೇರಿದಂತೆ ಹತ್ತಾರು ಪುಸ್ತಕಗಳನ್ನು ಹೊರತಂದಿರುವುದು, ಹಿಂದೊಮ್ಮೆ ಯಕ್ಷಗಾನ ಡಾಟ್ ಕಾಮ್ ಎಂಬ ವೆಬ್ ಸೈಟ್ ಮಾಡಿದ್ದು, ಸೇರಿದಂತೆ ಅವರ ಬಯೊಡಾಟಾವನ್ನು ಎಷ್ಟು ಬೇಕಾದರೂ ಹಿಗ್ಗಿಸಬಹುದಾದಷ್ಟು ಇದೆ. ಇಷ್ಟೊಂದು ಹಿನ್ನೆಲೆ ಇರುವವರು ತಂದ "ಅಮೃತ ಸಿಂಚನ" ಕೇವಲ ನಕಲು ಹಾಗೂ ಕೆಟ್ಟ ಸಂಪಾದನೆಗೆ ನಿದರ್ಶನ ಎಂಬದು ಬೇಸರದ ಸಂಗತಿ. ಕಾಪಿ ರೈಟ್ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದೆ ಹೊರತರಲಾದ ಪುಸ್ತಕ ಇದು. ಇದೆಲ್ಲ ನನಗೆ ನೇರವಾಗಿ ಸಂಬಂಧಿಸಿದ ಕಾರಣ ಈ ಬಗ್ಗೆ ವಿವರವಾಗಿ ಬರೆಯಬೇಕಾಯಿತು.
******
ಓರ್ವ ಪತ್ರಕರ್ತನಾಗಿ ಅಲ್ಲದೆ ಯಕ್ಷಗಾನ ಅಭಿಮಾನಿಯಾಗಿ ಡಾ. ಜೋಶಿ ನನ್ನ ಪರಿಚಿತು. ತೀರಾ ಚಿಕ್ಕ ವಯಸ್ಸಿನಲ್ಲಿ, ಸುಮಾರು 30 ವರ್ಷ ಹಿಂದೆ ನಮ್ಮೂರ ದೇವಸ್ಥಾನದ ಚಂದ್ರಶಾಲೆಯಲ್ಲಿ(ಉ.ಕ. ಜಿಲ್ಲೆ ಸಿದ್ದಾಪುರ ತಾಲೂಕು ಇಟಗಿ ರಾಮೇಶ್ವರ ದೇವಸ್ಥಾನ) ವಾಲಿವಧೆಯ ಸುಗ್ರೀವನ ಪಾತ್ರಧಾರಿಯಾಗಿ ಜೋಶಿಯವರು ನನ್ನ ಬಿತ್ತಿಯನ್ನು ಪ್ರವೇಶಿಸದರು. ಹಾಗೆ ವೃತ್ತಿ ಕಾರಣ ಮಂಗಳೂರಿಗೆ ಬಂದ ನಂತರ ಶ್ರೀ ಬಿ.ವಿ. ಸೀತಾರಾಮರ ಕರಾವಳಿ ಅಲೆಯಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸುವ ಸಂದರ್ಭ ಮೂಲ ಜೋಶಿಯವರು ನನ್ನ ಬಿತ್ತಿಯಲ್ಲಿ ಮತ್ತಷ್ಟು ಅಚ್ಚಾದರು. ನಾನು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂಬ ಕಾರಣಕ್ಕೆ ನನ್ನನ್ನು ಆಧರದಿಂದಲೇ ಕಾಣುತ್ತ, ಅವಶ್ಯ ಎನಿಸಿದಾಗ ಯಕ್ಷಗಾನ ಸೇರಿದಂತೆ ಸಾಂಸ್ಕೃತಿಕ ವಲಯದ ಹತ್ತು ಹಲವು ಗಾಸಿಪ್ ಗಳನ್ನು ವರದಿಗೆ ಗ್ರಾಸವಾಗಿ ನೀಡುತ್ತ ಜೋಶಿ ಮತ್ತಷ್ಟು ಹತ್ತಿರವಾದರು.
ನಂತರ ಎಲ್ಲೇ ಸಿಕ್ಕರೂ ಒಂದಿಷ್ಟು ಹೊತ್ತು ಮಾತಾಡುವುದು ರೂಢಿಯಾಯಿತು. ನಾನು ಮಾತಾಡುತ್ತಿದ್ದೆ ಎಂಬುದಕ್ಕಿಂತ ಅವರ ಮಾತು ಕೇಳಿಸಿಕೊಳ್ಳುವ ವ್ಯಕ್ತಿಯಾದೆ ಎನ್ನುವುದೇ ಹೆಚ್ಚು ಸೂಕ್ತ. ನಾವು ಕೆಲಸ ಮಾಡುವ ಪತ್ರಿಕೆ, ಅದರ ಪ್ರಸರಣಾ ವ್ಯವಸ್ಥೆ, ತನ್ನಂಥವರಿಗೂ ಉಚಿತವಾಗಿ ಮನೆಗೆ ಪತ್ರಿಕೆ ಹಾಕುತ್ತಿಲ್ಲ, ಯಾವುದೋ ಪತ್ರಿಕೆ ತಮ್ಮ ಅಂಕಣವನ್ನು ಹೇಳದೇ ಕೇಳದೆ ನಿಲ್ಲಿಸಿದ್ದಕ್ಕಾಗಿ ಮಾಲಕರು ಸ್ವಾರ್ಥಿಗಳು.. ಹೀಗೆ ಜನ್ಮ ಜಾಲಾಡುವುದು ಅವರ ಜಾಯಮಾನ.  ಹಲವು ವಿಚಾರಗಳು ಅಧಿಕಪ್ರಸಂಗ ವಾಗಿಯೇ ಇರುತ್ತಿದ್ದವು. ಮೋಜಾಗಿ ಕಾಣುವ ನಿದರ್ಶನವನ್ನು ಉದಾಹರಣೆ ಹೇಳುವುದಾದರೆ, ಪ್ರತಿಬಾರಿಯೂ ಸಿಕ್ಕಾಗ ಪತ್ರಕರ್ತರು ಕ್ರಿಕೆಟಿಗರ ಬಗ್ಗೆ ತಳೆಯುವ ಧೊರಣೆಯ ಬಗ್ಗೆ ಹೇಳದೆ ಜೋಶಿ ತಮ್ಮ ಮಾತಿಗೆ ಮಂಗಳ ಹೇಳುತ್ತಿರಲಿಲ್ಲ. "ಏನ್ರೀ ನೀವು ಪತ್ರಕರ್ತರು.. ಭಾರತ ಒಂದು ಮ್ಯಾಚ್ ಸೋತರೆ .. ಹೀನಾಯ ಸೋಲು ಅಂತ ಬರೀತೀರಿ.. ಪಾಪ ಹತ್ತಾರು ಮ್ಯಾಚ್ ಗೆಲ್ಲಿಸಿಕೊಟ್ಟ ಸಚಿನ್ ಒಮ್ಮೆ ರನ್ ಮಾಡದೆ ಹಿಂದಿರುಗಿದರೆ ಆತ ಸ್ವಾರ್ಥಿ ಅಂತ ಮುಲಾಜಿಲ್ಲದೆ  ಬರೀತೀರಲ್ಲ".. ಇತ್ಯಾದಿ.. ವಾಸ್ತವಿಕವಾಗಿ ನಾನು ಕ್ರೀಡಾ ಪತ್ರಕತನಲ್ಲ. ಜೋಶಿಯವರೂ ಕ್ರಕೆಟ್ ಮೂಲಕ ಸಾರ್ವಜನಿಕವಾಗಿ ಪರಿಚಿತರೂ ಅಲ್ಲ. ವಿಷಯ ಇಬ್ಬರಿಗೂ ಅಪ್ರಸ್ತುತ !
ಕಡೆಗೆ ನೋಡಲಾಗಿ ಮಂಗಳೂರಿನ ಹೆಚ್ಚಿನ ಪತ್ರಕರ್ತರು ನನ್ನ ಈ ಅನುಭವ ತಮಗೂ ಆಗಿದೆ ಎನ್ನತೊಡಗಿದರು. ಇನ್ನಷ್ಟು ಇಂಥ ಉದಾಹರಣೆ ನೀಡಿದಾಗ ತಮಾಶೆ ಎನಿಸಿತು. ಹಾಗೆಂದು ಜೋಶಿ ಬೊರ್ ಹೊಡೆಸುತ್ತಿರಲಿಲ್ಲ. ಒಂದು ಮನರಂಜನೆಯಾಗಿ ನಾನು ಇನ್ನು ಮುಂದೆಯೂ ಅವರ ಈ ವಾಚಾಳಿತನಕ್ಕೆ ಹಸಿರು ನಿಷಾನೆ ಕೊಡುತ್ತೇನೆ.
****
ಇಂಥ ಜೋಶಿಯವರು ಕೆರೆಮನೆ ಶಂಭು ಹೆಗಡೆಯವರ ನಿಕಟವರ್ತಿಯಾಗಿದ್ದರು. ಶಂಭು ಹೆಗಡೆ ಮೂರು ವರ್ಷ ಹಿಂದೆ ಅನಿರೀಕ್ಷಿತ ನಿಧನರಾದ ಸಂದರ್ಭ ನಾವೆಲ್ಲ ಮಂಗಳೂರಲ್ಲಿ ಅವರ ಸಂಸ್ಮರಣೆ ಹಮ್ಮಿಕೊಂಡೆವು. "ಕಲ್ಪದ ಕಲಾವಿದ" ಎಂಬ ಸ್ಮರಣ ಸಂಚಿಕೆಯನ್ನು ಹೊರ ತಂದೆವು. ಸಂಚಿಕೆಗೆ ನಾನೇ ಸಂಪಾದಕನಾಗಿದ್ದು, 300ಕ್ಕೂ ಹೆಚ್ಚು ಪುಟಗಳ, 80ಕ್ಕೂ ಹೆಚ್ಚು ಬರಹಗಳಿರುವ, ಬಹುವರ್ಣದ ಫೊಟೊಗಳ ದೊಡ್ಡ ಪುಸ್ತಕ  ಅದು. ಅಂತೂ ಶಂಭು ಹೆಗಡೆಯವರ ಮೇಲಿನ ಅಭಿಮಾನದಿಂದ ಅದಕ್ಕಾಗಿ ನಾನು ವ್ಯಯಿಸಿದ ತಿಂಗಳುಗಟ್ಟಲೆ ಸಮಯ ಹಾಗೂ ಒಂದಿಷ್ಟು ಖರ್ಚುಗಳು ನನ್ನ ವಯಕ್ತಿಕ ಶೃದ್ಧಾಂಜಲಿಯ ಕರ್ತವ್ಯ ಎಂದು ತಿಳಿದುಕೊಂಡೆ. ಅದರ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಡಾನ್ ಬಾಸ್ಕೊ ಹಾಲ್ ನಲ್ಲಿ ಆಗಿತ್ತು. ಸಮಿತಿಯವರ ತೀರ್ಮಾನದಂತೆ ಬಿಡುಗಡೆ ಸಮಾರಂಭದಲ್ಲಿ  ಡಾ. ಜೋಶಿ ಅತಿಥಿತಿಯಾಗಿ ವೇದಿಕೆಯಲ್ಲಿ ಬರಲಿಲ್ಲ. ಇದರಿಂದ ಕುಪಿತಗೊಂಡವರೊ ಎಂಬಂತೆ ಡಾ. ಜೋಶಿ ಕಾರ್ಯಕ್ರಮ ಸರಿ ಇಲ್ಲ, ಪುಸ್ತಕವಂತೂ "ಇಂಪ್ರೊಪೇಶನಲ್"  ಇನ್ನೊಂದಿಷ್ಟು ಕತೆ ಸೇರಿಸಿ ನನಗೆ ತಲುಪಿಸಬಹದಾದ ಹಲವರಲ್ಲಿ ಹೇಳಿದರು. ಮೇಲೆ ಹೇಳಿದ ಅಧಿಕಪ್ರಸಂಗದ ನಿದರ್ಶನವನ್ನು ಈ ವಿಷಯಕ್ಕೆ ಅನ್ವಯಿಸಿಕೊಳ್ಳಿ...
ನಾನು ಇನ್ನಷ್ಟು ಶ್ರಮ ವಹಿಸಿ ಕಚೇರಿಗೆ ಇನ್ನೂ ಒಂದೆರಡು ರಜೆ ಮಾಡಿಯಾದರೂ ಪುಸ್ತಕದ ಬಗ್ಗೆ ಕಮೆಂಟ್ ಇಲ್ಲದ ರೀತಿಯಲ್ಲಿ ಹೊರತರಬೇಕಿತ್ತು ಎಂದು ಅನ್ನಿಸಿತ್ತು.
ಶಂಭು ಹೆಗಡೆ ಕೌಟುಂಬಿಕ ಭಿನ್ನಾಭಿಪ್ರಾಯದ ಕಾರಣ ಶಿವಾನಂದ ಹೆಗಡೆ, ಅವರ ಸಹೋದರಿ ಮತ್ತು ತಾಯಿಯ ಪ್ರತ್ಯೇಕ ಮನವಿ ಮೇರೆಗೆ ಕೆಲವು ಲೇಖನಗಳನ್ನು ತೆಗೆದು ಉಳಿದ ಪುಸ್ತಕಗಳಿಗೆ ಬುಕ್ ಬೈಂಡ್ ಮಾಡಿಸಿ ನನ್ನ ಜವಾಬ್ದಾರಿ ಮುಗಿಸುವಷ್ಟರಲ್ಲಿ ಬೆವರಿಳಿದುಹೋಗಿತ್ತು. ಶಂಭು ಕುಟುಂಬದವರೂ ಅದು ಯಾಕಾಗಿ ಅಷ್ಟೊಂದು ಕಚ್ಚಾಡುತ್ತಾರೊ ದೇವರೇ ಬಲ್ಲ. ಟ್ಯಾಲೆಂಟ್ ಮತ್ತು ಜಗಳ ಒಟ್ಟೊಟ್ಟಿಗೆ ಇರುವ ವಂಶವಾಹಿ ಅದಿರಬೇಕು !

ಈ ವಿಚಾರದಲ್ಲಿ ಸಿದ್ಧಾಪುರದ ಎಂ.ಎ. ಹೆಗಡೆಯವರೂ ಕೂಡ ನನಗೆ ಕೆಲವು ಸೂಕ್ಷ್ಮಗಳನ್ನು ತಿಳಿಸಿ ಸಂಪಾದಕನಾಗಿ ಜಾಣತನದಿಂದ ಕೆಲಸ ನಿರ್ವ ಹಿಸುವುದಕ್ಕೆ ಸಹಕರಿಸಿದರು. ಪುಸ್ತಕದ ಹೆಸರಲ್ಲಿ ಶಂಭು ಹೆಗಡೆಯವರೊಟ್ಟಿಗೆ ಸಹಕಲಾವಿದರಾಗಿ ಆಟಗಳಲ್ಲಿ ಮುದ ನೀಡಿದ್ದ -ನಾನು ಗೌರವಿಸುತ್ತಿದ್ದ ಕುಂಜಾಲು ರಾಮಕೃಷ್ಣ ನಾಯಕ್ ಮತ್ತಿತರನ್ನು ಭೇಟಿಯಾಗುವ ಅವಕಾಶ ದೊರೆತಿದ್ದು ನನ್ನ ಸುಕೃತ ಎನಿಸಿತು. ಹಾಗೆ ಕೆಲವರ ಅನುಭವವನ್ನು ಅವರಲ್ಲಿಗೇ ಹೋಗಿ ಕೇಳಿಸಿಕೊಂಡು ಬಂದು ಅದಕ್ಕೆ ಬರಹರೂಪ ಕೊಟ್ಟೆ. ನನ್ನ ಹತ್ತು ಹಲವು ಕಾರ್ಯವನ್ನು ಪಕ್ಕಕ್ಕಿಟ್ಟು ಇದನ್ನೆಲ್ಲ ಮಾಡಬೇಕಾಯಿತು ಎಂದು ಪ್ರತ್ಯೇಕ ಹೇಳುವುದಿಲ್ಲ.  ನನ್ನ ಶ್ರಮ ಗುರುತಿಸಿದ ಸಹೃದಯಿ ಕೆರೆಮನೆ ಶಿವಾನಂದ ಹೆಗಡೆ ಪುಸ್ತಕವನ್ನು ಬೇರೆ ಬೇರೆ ಕಡೆಯಲ್ಲೆಲ್ಲ ಅದ್ದೂರಿಯಾಗಿ ಬಿಡುಗಡೆ ಮಾಡೋಣ ಎಂದು ಹೇಳಿದರು. ನಾನು ಅದನ್ನು ಅಪೇಕ್ಷೆಪಟ್ಟಿರಲಿಲ್ಲ. ಅವರಿಗೆ ಕೊನೆಗೆ ಸಾಧ್ಯವೂ ಆಗಲಿಲ್ಲ. ಕೊನೆಗೆ ಪರಿಸ್ಥಿತಿ ಹೇಗೆ ಬಂದಿತೆಂದರೆ ಸಂಸ್ಮರಣಾ ಸಮಿತಿಯು ಹೊರ ತಂದ ಆ ಸಂಚಿಕೆ ಕೊನೆಗೆ ಸಂಪಾದಕನಾದ ನನಗೂ ಸಿಕ್ಕಿದ್ದು  ಒಂದು ಗೌರವ ಪ್ರತಿ ಹಾಗೂ ಜೇಬು ತುಂಬ ಟೀಕೆ....!  ಸಂಸ್ಮರಣಾ ಸಮಿತಿಯ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಇದೇ ವಿಷಯ ತಿಳಿದು ತುಂಬ ಬೇಸರಪಟ್ಟುಕೊಂಡರು. ಅದೆಲ್ಲ ಇನ್ನೂ ಒಂದು ರಾಮಾಯಣ.
****
ಇಷ್ಟು ಹೇಳಿ ಇದೀಗ ಹೇಳ ಹೊರಟಿರುವ ಮುಖ್ಯ ವಿಷಯಕ್ಕೆ ಬರುತ್ತೇನೆ. ನನ್ನ ಬಗ್ಗೆ "ಇಂಪ್ರೊಫೇಶನಲ್' ಎಂದು ಜರಿದ ಜೋಶಿಯವರು ಕೆರೆಮನೆಯವರ ಇನ್ನೊಂದು ಪುಸ್ತಕ ತರುತ್ತಾರೆ ಎಂಬುದು ವಷಱದ ಹಿಂದೆಯೇ ತಿಳಿಯಿತು. ಪ್ರೊಫೆಶನಲಿಸಂ ಗೊತ್ತಿರುವಂಥ  ಜೋಶಿ ಹೊರ ತರುವ ಪುಸ್ತಕದ ಬಗ್ಗೆ ಸಹಜವಾಗಿ ನಾನು ಕುತೂಹಲಿಯಾಗಿದ್ದೆ. ಸುದೀರ್ಘ ಸಮಯದ ನಂತರ ಗಜಪ್ರಸವದಂತೆ ಇದೀಗ 100 ಪುಟದ ಶ್ರೀಮಯ ಅಮೃತ ಸಿಂಚನ ಹೊರ ಬಿದ್ದಿದೆ.. ಇದು ಇಡಗುಂಜಿ ಮೇಳದ "ಅಮೃತಮಹೋತ್ಸವ"ದ ಕುರಿತಾದ ಪುಸ್ತಕವಾಗಿದ್ದರೂ  ಶಂಭುಹೆಗಡೆ ಸಂಸ್ಮರಣೆಯ "ಕಲ್ಪದ ಕಲಾವಿದ" ಸಂಚಿಕೆಯ ಕೆಟ್ಟ ನಕಲಿನಂತೆ ಕಾಣುತ್ತಿದೆ. ಅದರಿಂದಲೇ ಹೆಚ್ಚಿನ ಬರಹವನ್ನು ಎತ್ತಿ ಹಾಕಿಕೊಳ್ಳಲಾಗಿದೆ. ವಿಜಯ ನಳಿನಿ ರಮೇಶ್, ಹೊಸತೋಟ ಭಾಗವತರು, ಎಂ.ಎ.ಹೆಗಡೆ ಇವೆಲ್ಲ ಶಂಭು ಅವರನ್ನು ನೆನಪಿಸಿ ಕಲ್ಪದ ಕಲಾವಿದಕ್ಕೆ ವಿಶೇಷವಾಗಿ ಬರೆದಿರುವಂಥದ್ದಾಗಿದೆ . ಸಂಸ್ಮರಣ ಸಂಚಿಕೆಯಲ್ಲಿ ಇರುವ ಗುರುರಾಜ್ ಬಾಪಟ್ ಶಂಭು ಅವರನ್ನು ಕೊನೆಯ ದಿನಗಳಲ್ಲಿ ಮಾಡಿದ ಅಪರೂಪದ ಸಂದರ್ಶನವನ್ನೂ ಇದರಲ್ಲಿ ಬಟ್ಟಿ ಇಳಿಸಲಾಗಿದೆ.
ಹೀಗೆ ಅಮೃತ ಸಿಂಚನದಲ್ಲಿರುವ ಇರುವ ಒಟ್ಟು 16 ಬರಹಗಳಲ್ಲಿ  ಸಂಪಾದಕೀಯ ಹೊರತುಪಡಿಸಿ ಮೂರುಕಡೆ ಜೋಶಿಯವರ ಫೋಟೊ ಯುಕ್ತ ಆರ್ಟಿಕಲ್ ಗಳು ಢಾಳಾಗಿ ಕಾಣುತ್ತಿವೆ. ಮತ್ತೂ ಒಂದಿಬ್ಬರು ಎರಡೆರಡು ಕಡೆ ಬರೆದಿದ್ದಾರೆ. ಬಹುತೇಕ 80 ಪ್ರತಿಶತ ಬರಹ ಇಲ್ಲಿ ಯಥಾಪ್ರಕಾರ ಕಲ್ಪದ ಕಾಪಿಯಾಗಿದೆ.
ಉಳಿದಂತೆ ಶಿವಾನಂದರು ತಮ್ಮ ಕಾಪಿ ರೈಟ್ ನಲ್ಲಿ ಇದ್ದ ಶ್ರೀಮಯ ಕಲಾಕೇಂದ್ರದ ಅದೇ ಫೋಟಗಳನ್ನು ಕಲ್ಪದ ಕಲಾವಿದಕ್ಕೆ ಕೊಟ್ಟಂತೆ ಇದಕ್ಕೂ ಕೊಟ್ಟಿದ್ದು, ಅವೂ ಇದೆ.
ಡಾ. ರಾಮಕೃಷ್ಣ ಜೋಶಿ ಅವರ ಇಡಗುಂಜಿ ಮೇಳ ಬರಹವೇ ಸಂಚಿಕೆಯಲ್ಲಿ ಎರಡು ಕಡೆ ಮುದ್ರಣವಾಗಿದ್ದೂ ಸಂಪಾದಕರ ಗಮನಕ್ಕೆ ಬರಲಿಲ್ಲ !
******
ನನಗೆ ಇದಾವುದರಿಂದಲೂ ಬೇಸರ ಆಗಲಿಲ್ಲ. ಆದರೆ  ಪುಸ್ತಕದ ಎಲ್ಲೂ ಕೂಡ ಕಲ್ಪದ ಕಲಾವಿದ ಸಂಚಿಕೆಯಿಂದ ಬರಹಗಳನ್ನು ಬಳಸಿಕೊಂಡಿದೆ ಎಂಬ ಬಗ್ಗೆ ಸಣ್ಣ ಉಲ್ಲೇಖವನ್ನೂ ಮಾಡಲಾಗಿಲ್ಲ.

 ********
ವಿಶೇಷ ಎಂದರೆ...
ಡಾ. ಜೋಶಿ ಸಂಪಾದಕತ್ವದ ಪುಸ್ತಕದ ಮೂರನೆ ಪುಟದಲ್ಲಿ ಕಾಪಿರೈಟ್ ಬಗ್ಗೆ ಬರೆದ ಒಕ್ಕಣೆ ಇಂತಿದೆ ; ಈ ಸಂಚಿಕೆಯಲ್ಲಿ ಬಳಸಲಾದ ಭಾವಚಿತ್ರ, ಲೇಖನ ಇತ್ಯಾದಿಯನ್ನು ಯಾವುದೇ ಉದ್ದೇಶಕ್ಕೆ ಬಳಸುವುದಿದ್ದಲ್ಲಿ ಮಂಡಳಿಯ ಪೂರ್ವಾನುಮತಿಯನ್ನು ಪಡೆಯುವುದ ಆವಶ್ಯ.!
*****
ನೀವೇ ಆಲೋಚನೆ ಮಾಡಿ... ಹೇಗಿದೆ ಜಗತ್ತು !!
ದೆವ್ವಗಳೂ ಭಗವದ್ಗೀತೆಯ ಕೋಟ್ ಮಾಡುತ್ತವೆ ಎಂಬ ವಾಕ್ಯ ನೆನಪಿಗೆ ಬರುವುದಿಲ್ಲವೇ ?

-ಸದಾನಂದ ಹೆಗಡೆ ಹರಗಿ


Related Posts
Previous
« Prev Post