ಭಾಷಣ ಅಂದ್ರೆ ಬೋರ್..

ಸಮಯ ಇಲ್ಲದಿದ್ದರೂ ಜನರು ಪುರುಸೊತ್ತು ಮಾಡಿಕೊಂಡು ಕ್ರಕೆಟ್ ನೋಡಿ ಖುಷಿ ಪಡ್ತಾರೆ. ಮನೆ ಕೆಲಸ ಬೇಗ ಮುಗಿಸಿಕೊಂಡು ತಮಗೆ ಬೇಕಾದ ಟೀವಿ ಸೀರಿಯಲ್ ನೋಡುವುದಕ್ಕೆ ಮಹಿಳೆಯರು ಪ್ಲ್ಯಾನ್ ಮಾಡಿಕೊಳ್ಳುತ್ತಾರೆ. ಆದರೆ ದುಡ್ಡು ಕೊಡ್ತೀವಿ, ಊಟ ಕೊಡ್ತೀವಿ..ಬಂದು ನಮ್ಮ ಭಾಷಣ ಸ್ವಲ್ಪ ಕೇಳಿ ಎಂದು ಗೋಗರೆದರೂ ಜನ ಬರಲ್ಲ.
ಇದು ರಾಜಕೀಯ ಸಭೆ ಸಮಾರಂಭದ ಸಮಸ್ಯೆ ಅಷ್ಟೇ ಅಲ್ಲ. ಸಾಮಾನ್ಯ ಕಾರ್ಯಕ್ರಮಗಳಲ್ಲಿಯೂ ಭಾಷಣ ಶುರುವಾಯಿತು ಎಂದರೆ ಜನ ಎದ್ದು ಹೊರಡುತ್ತಾರೆ. ಭಾಷಣಕಾರರಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿ ಬಾಕಿ ಉಳಿದ ನೂರೆಂಟು ಕೆಲಸಗಳ ನೆಪ ಹೇಳಿ ಜಾಗ ಖಾಲಿ ಮಾಡುತ್ತಾರೆ. ಏನಿದರ ಮರ್ಮ ? ಜನರಿಗೆ ಭಾಷಣ ಅಂದರೆ ಯಾಕಿಷ್ಟು ಬೇಸರ ? ಭಾಷಣಕಾರರ ಬಗ್ಗೆ ಯಾಕಿಷ್ಟು ಅಲರ್ಜಿ ?
ಇದು ಕೇವಲ ಕನ್ನಡ, ಕರ್ನಾಟಕ ಎಂದಲ್ಲ, ಹೊರತಾಗಿ ಇದೂ ಒಂದು ಜಾಗತಿಕ ಸಮಸ್ಯೆ.
ಹಿಂದೆ ಭಾಷಣ ಕೇಳುವುದಕ್ಕಾಗಿ ಜನರು ಟಿಕೆಟ್ ಶುಲ್ಕ ಕೊಟ್ಟು ಹೋಗುವುದಿತ್ತಂತೆ. ಕವಿ ಬೇಂದ್ರೆಯವರ ಭಾಷಣ ಕೇಳಲು ಜನ ಎಲ್ಲೆಲ್ಲಿಂದೆಲ್ಲ ಬರುತ್ತಿದ್ದರಂತೆ. ಮರಾಠಿ ಸಾಹಿತಿ ಪು.ಲ.ದೇಶಪಾಂಡೆ ಅವರ ಭಾಷಣಕ್ಕೆ ಜನ ಟಿಕೆಟ್ ಖರೀದಿಸಿ ಹೋಗುತ್ತಿದ್ದರು ಎಂಬುದೇ ಅವರ ಭಾಷಣದ ಜನಪ್ರಿಯತೆ ಹೇಳುತ್ತದೆ. ಹೊಂ ರೂಲ್ ಲೀಗ್ ಸ್ಥಾಪಿಸಿದ್ದ ಅನಿ ಬೆಸೆಂಟ್ ಯೂರೋಪ್ ನಲ್ಲಿ ತಮ್ಮ ಭಾಷಣದಿಂದ ಗಳಿಸಿದ ಹಣವನ್ನು ಭಾರತದಲ್ಲಿ ಸಮಾಜ ಕಾರ್ಯಕ್ಕೆ ಬಳಸುತ್ತಿದ್ದರು ಎಂದು ದಾಖಲೆಗಳು ಹೇಳುತ್ತಿವೆ. ಆದರೆ ಇದೀಗ ಎಲ್ಲ ಉಲ್ಟಾ.
ತಮ್ಮದೂ ಏನೋ ಕೆಲಸ ಆಗಬೇಕು ಎಂಬ ಕಾರಣಕ್ಕೆ, ಸಂಘಟಕರ ಮುಲಾಜಿಗೆ ಬಿದ್ದು ಎಲ್ಲೊ ಒಂದಿಷ್ಟು ಭಾಷಣ ಕೇಳುಗರು ಸಿಗುತ್ತಾರೆ ಬಿಟ್ಟರೆ ಸಾವಱಜನಿಕ ಕಾರ್ಯಕ್ರಮಗಳಲ್ಲಿ ಭಾಷಣಕ್ಕೆ ಇದೀಗ ಬೆಲೆಯೇ ಇಲ್ಲ.
ವ್ಯಕ್ತಿಯೊಬ್ಬ ತನ್ನ ಅಭಿಪ್ರಾಯವನ್ನು ಗುಂಪಿಗೆ ತಿಳಿಸುವ ಪ್ರಾತಿನಿಧಿಕ ಕಾರ್ಯವು ಯಾಕೆ ಮಹತ್ವ ಕಳೆದುಕೊಳ್ಳುತ್ತಿದೆ. ಜನರಿಗೆ ವಿಷಯ ತಿಳಿದುಕೊಳ್ಳಲು ಅನುಕೂಲಕರ ಇತರ ಮಾರ್ಗ ಹೆಚ್ಚಿರುವುದು ಕಾರಣವೇ ? ಹೆಚ್ಚಿನ ಭಾಷಣಗಳಲ್ಲಿ ತಿಳಿದುಕೊಳ್ಳುವಂಥದ್ದು ಏನೂ ಇಲ್ಲದಿರುವುದು ಕಾರಣವೇ ? 
ಭಾಷಣ ಎಂದರೆ ಮೂಗು ಮುರಿಯುವ ಪರಿಸ್ಥಿತಿ ಬಂದಿದ್ದಾದರೂ ಯಾಕಿರಬಹುದು ? ಹೆಚ್ಚುತ್ತಿರುವ ಭಾಷಣಕಾರರು ಕಾರಣ ಇರಬಹುದೇ ? ನಿಜ. ಜನರಿಗೆ ಏನೋ ಬೇಕು ಎಂಬ ಸದುದ್ದೇಶಕ್ಕಿಂತ, ತಮ್ಮ ವಸ್ತುಗಳನ್ನು ಮಾರುವ ಮಾರಾಟಪ್ರತಿನಿಧಿಗಳು, ತಮ್ಮ ಬಗ್ಗೆ ಪ್ರಚಾರ ಮಾಡಿ ಬೋರ್ ಹುಟ್ಟಿಸುವವರು ಭಾಷಣಕಾರರಾಗಿ ಬರುತ್ತಿರುವುದು ಸಮಸ್ಯೆಯ ಒಂದು ಮೂಲ. ತನ್ನ ಭಾಷಣಕ್ಕೆ ಹೆಚ್ಚು ಜನರನ್ನು ಕರೆಸಿಕೊಂಡು ವಿರೋಧಿಗಳೆದುರು ಬಲ ಪ್ರದರ್ಶನವೂ ರಾಜಕೀಯ ಪಕ್ಷಗಳ ಒಂದು ದಾಳ. ಇನ್ನು  ತಮ್ಮ ಮನಸ್ಸಿನ ಭಾರ ಇಳಿಸಿಕೊಳ್ಳಲು, ಯಾರದ್ದೋ ವಿರುದ್ಧ ದ್ವೇಷ ತೀರಿಸಿಕೊಳ್ಳಲು, ತಮ್ಮ ಮನಸ್ಸಿನ ವಿರೂಪಕ್ಕೆ ಭಾಷಣದಲ್ಲಿ ಅಭಿವ್ಯಕ್ತಿ ಕಂಡುಕೊಳ್ಳುವವರು ಸಮಸ್ಯೆಯ ಮೂಲ.
ಇಂಥ 'ಸ್ವ-ಅರ್ಥ'ದ  ಭಾಷಣಕಾರರು ಕಾರ್ಯಕ್ರಮ ಸಂಘಟಕರಿಗೆ ದುಡ್ಡುಕೊಡುವುದಕ್ಕೂ ಸಿದ್ಧ. ಪ್ರಚಾರ ಪ್ರಿಯರು ಸಾಂಸ್ಕೃತಿಕ ಕಾರ್ಯಕ್ರಮಗಳ ಪೋಷಕರೂ ಆಗಿದ್ದಾರೆ.
ಹಲವರಿಗೆ ಆರ್ಥಿಕ ಉದ್ದೇಶ ಇರುವುದಿಲ್ಲ. ಹೊರತಾಗಿ ಸಾಮಾಜಿಕವಾಗಿ ತಾನೂ ಒಬ್ಬ ಜನ (ಸೋಷಿಯಲ್ ಗ್ರೇಟಿಫಿಕೇಶನ್), ಜನರು ತನ್ನ ಬಗ್ಗೆ ನಾಲ್ಕು ಒಳ್ಳೆಯ ಮಾತು ಆಡಬೇಕು ಎಂಬುದಕ್ಕೆ ಭಾಷಣ ಮಾಡುವುದೇ, ಮುಖ್ಯ ಅತಿಥಿಗಳಾಗುವುದೇ ಏಕೈಕ ಮಾರ್ಗ ಎಂದು ತಪ್ಪು ತಿಳಿದುಕೊಂಡಿರುವುದು ಕಾರಣ. ಈ ಮಟ್ಟಿಗೆ ಭಾಷಣ ಎಂದರೆ ಓಡಿ ಹೋಗುವ ಜನರಲ್ಲಿ ಯಾವ ತಪ್ಪೂ ಇಲ್ಲ.


ಬಾಕ್ಸ್
ಬೋರಾಗಲು ಕಾರಣ
* ಒಂದು ತಾಸು ಕೇಳಿದರೂ ಒಂದು ಆಕರ್ಷಕ ಅಂಶ ಇರುವುದಿಲ್ಲ.
* ಕೇಳುಗರ ಬೇಡಿಕೆ ತಿಳಿಯದೆ ಉದ್ದಕ್ಕೆ ಹೇಳುತ್ತ ಹೋಗುವುದು.
* ಸಮಸ್ಯೆ ತರುವ ಮೈಕ್ ವ್ಯವಸ್ಥೆ.ಕಿರಿಕಿರಿಯಾಗುವ ಸ್ವರ.
* ಭಾಷಣಕಾರರ ಅಸಭ್ಯ ಹಾವಭಾವ. ಮಾತುಗಳು.
* ಭಾಷೆಯ ಅಸ್ಪಷ್ಟತೆ, ಲಾಲಿತ್ಯದ ಕೊರತೆ.
* ಬೋರಾಗುವಷ್ಟು ಉದ್ದದ ಭಾಷಣ. ಅತಿಯಾದ ಆತ್ಮಪ್ರಶಂಸೆ.
* ತಯಾರಿ ಇಲ್ಲದೆ ಭಾಷಣ ಮಾಡುವುದು.
* ಹತ್ತು ವರ್ಷದಿಂದ ಒಂದೇ ಭಾಷಣ ಹೋದಲ್ಲೆಲ್ಲ ಪುನರಾರ್ವತನೆ.


ಪರಿಹಾರ ಏನು ?
*ನಾವು ಭಾಷಣ ಯಾರಿಗೆ ಮಾಡುತ್ತೇವೆ ಎಂಬ ಎಚ್ಚರ.
*ಸೂಕ್ತ ಪೂರ್ವ ತಯಾರಿ. ಚಿಕ್ಕದಾಗಿ ಹೇಳುವುದನ್ನು ಕಲಿಯುವುದು.
* ಮೈಕ್ ಚಪಲದ ಹಿಂದಿನ ಕೊಳಕನ್ನು ಅರ್ಥಮಾಡಿಕೊಳ್ಳುವುದು.
* ಮಾತಿಗಿಂತ ಕೃತಿ ಮುಖ್ಯ ಎಂಬುದನ್ನು ಅರಿಯುವುದು.
*ಉತ್ತಮ ಭಾಷಣದ ತರಬೇತಿ ಪಡೆಯುವುದು.
*ಜನರನ್ನು ರಂಜಿಸುವ ಉದ್ದೇಶದ ಭಾಷಣ ಕಲೆ ಕರತಗ ಮಾಡಿಕೊಳ್ಳುವುದು ( ಗಂಗಾವತಿ ಪ್ರಾಣೇಶ ನೆನಪಿಸಿಕೊಳ್ಳಿ.)
* ನಮ್ಮ ಎದುರು ಇರುವವರು ದಡ್ಡರಲ್ಲ ಎಂಬ ಎಚ್ಚರ.

-ಸದಾನಂದ ಹೆಗಡೆ ಹರಗಿ

Related Posts
Previous
« Prev Post