"ಮದ್ರಾಸಿ ಲೋಗ್‌'ಆಗುವ ಕನ್ನಡಿಗರು



ಇತ್ತೀಚೆಗೆ ಕಲರ್ಸ್‌ ಹಿಂದಿ ವಾಹಿನಿಯಲ್ಲಿ  ನಡೆದ "ಇಂಡಿಯಾಸ್‌ ಗಾಟ್‌ ಟ್ಯಾಲೆಂಟ್‌' ಸ್ಪರ್ಧೆಯಲ್ಲಿ ಕರ್ನಾಟಕದ ಇಬ್ಬರು ಕಲಾವಿದರು ಅಂತಿಮ ಹಂತದ ತನಕ ಬಂದಿದ್ದರು. ಜಾನಪದ ಹಾಗೂ  ಯಕ್ಷಗಾನ ರಂಗಭೂಮಿ ಸೊಗಡಿನೊಂದಿಗೆ ಜಾದೂ ಕಾರ್ಯಕ್ರಮ ನೀಡುವ ಮೂಲಕ ಖ್ಯಾತಿ ಪಡೆದಿರುವ ಮಂಗಳೂರು ಮೂಲದ ಕುದ್ರೊಳಿ ಗಣೇಶ್‌  ಅವರಲ್ಲಿ  ಒಬ್ಬರು. ತಮ್ಮ ಅಪರೂಪದ ಪ್ರದರ್ಶನದಿಂದ ಗಣೇಶ್‌ ಸ್ಫರ್ಧೆಯ ಜಜ್‌ಗಳು ಹಾಗೂ ಅಖಿಲ ಭಾರತ ಮಟ್ಟದ ಪ್ರೇಕ್ಷಕರನ್ನು ಗಮನಸೆಳೆಯುವುದರಲ್ಲಿ ಯಶಸ್ವಿ ಆಗಿರುವುದು ನಿಜ. ಆದರೆ ಕರ್ನಾಟಕದ ಹೊರಗಿನ ಪ್ರೇಕ್ಷಕರಿಗೆ ಇವರೊಬ್ಬ  "ಮದ್ರಾಸಿ' ಎಂಬ ರೀತಿಯಲ್ಲಿ  ಪರಿಚಯಿಸಲ್ಪಟ್ಟಿದ್ದು ಮಾತ್ರ ದುರದೃಷ್ಟಕರ.

ಪಂಜಾಬಿ ತಂದೆ ಹಾಗೂ ತಮಿಳು ತಾಯಿಯನ್ನು ಹೊಂದಿರುವ  ಚಿತ್ರನಟಿ ಇಶಾ ಡಿಯೋಲ್‌ ಗಣೇಶ್‌ ಅವರ ಪ್ರದರ್ಶನ ಚೆನ್ನಾಗಿದೆ ಎಂಬುದನ್ನು ತಮಿಳಿನಲ್ಲಿ  ಪ್ರಶಂಸಿಸಿ ತಮಿಳು ಹಾಗೂ  ತುಳು ಒಂದೆ ಎಂದು ತಮ್ಮ ಶಿಕ್ಷಣದ ಮಿತಿಯನ್ನು ತೋರಿದರು. ಹಾಗೇ ತನ್ನ ರಾ.ವನ್‌ ಚಿತ್ರದ ಪ್ರಚಾರದ ಉದ್ದೇಶದೊಂದಿಗೆ  ಕೊನೆಯ ದಿನ ಇದೇ ಕಾರ್ಯಕ್ರಮಕ್ಕೆ ಬಂದಿದ್ದ ಶಾರೂಖ್‌ ಖಾನ್‌  ಕೂಡ ಗಣೇಶ್‌ ಅವರನ್ನು ಚೆನ್ನೈ ಮೂಲದ ವ್ಯಕ್ತಿ ಎಂಬಂತೆ ಬಿಂಬಿಸಿದರು. ಇವೆರಡೂ ಸಂದರ್ಭದಲ್ಲಿ  ಚಿತ್ರ ನಟರು ತಮ್ಮ ಬೌದ್ಧಿಕ ಮಿತಿಯನ್ನು ಪ್ರದರ್ಶಿಸಿದರು ಎಂಬುದು ಒಂದು ವಿರಣೆಯಾದರೆ ಗಣೇಶ್‌ ಕೂಡ ಈ ಬಗ್ಗೆ ಸ್ಪಷ್ಟನೆ ಕೊಡದೆ ನಕ್ಕು ಸುಮ್ಮನಾಗಿದ್ದು  ಗಮನಿಸಬೇಕಾದ ಅಂಶ. ಹಿಂದಿ ಪ್ರೇಕ್ಷರೇ ಹೆಚ್ಚಿರುವ ಕಲರ್ಸ್‌ ವಾಹಿನಿಯಲ್ಲಿ  ತನ್ನ ಮೂಲದ ಬಗ್ಗೆ  ಹೇಳುವುದಕ್ಕೆ ಎಲ್ಲೊ ಆಳದಲ್ಲಿ  ಅನವಶ್ಯಕ ಅಳುಕು ಕುದ್ರೋಳಿ ಗಣೇಶ್‌ ಅವರಲ್ಲಿ ಇದ್ದಂತೆ ತೋರುತ್ತಿದೆ. ಪಂಚ ದ್ರಾವಿಡ ಭಾಷೆಗಳಲ್ಲೊಂದಾಗಿರುವ ತುಳು ಕರ್ನಾಟಕ ಮೂಲದ್ದು ಎಂಬುದಾಗಿ ಸ್ಪಷ್ಟನೆ ಕೊಡುವ ಗೋಜಿಗೆ ಗಣೇಶ್‌ ಮುಂದಾಗಿಲ್ಲ.  ಸ್ಪಷ್ಟನೆ ಕೊಡುವುದಕ್ಕೆ ಗಣೇಶ್‌ಗೆ ಅವಕಾಶವೂ ಆಗಲಿಲ್ಲ  ಎಂಬ ವಾದವಿದ್ದರೂ ಬಹುಸಂಸ್ಕೃತಿಯ ನಮ್ಮ ದೇಶದಲ್ಲಿ  ಬಹಳಷ್ಟು  ಪ್ರೇಕ್ಷಕರಿರುವ ರಾಷ್ಟ್ರೀಯ ಮಟ್ಟದ ಟೀವಿ ವಾಹಿನಿಯಲ್ಲಿ  ಆದ ಅಚಾತುರ್ಯ, ಸಣ್ಣ ಪುಟ್ಟ ಸಂಸ್ಕೃತಿಗೆ ಆಗಿರುವ ಅನ್ಯಾಯ ಇದು ಎಂಬುದು ನಿಜ.

ಇದೇ ರೀತಿ ಘಟನೆ ಮೈಸೂರು ದಸರಾ ಕಾರ್ಯಕ್ರಮದಲ್ಲೂ ಆಗಿದೆ. ಮೈಸೂರು ದಸರಾ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ವರದಿ ಮಾಡಿದ ಹೆಚ್ಚಿನ ಕನ್ನಡ ಟೀವಿ ವಾಹಿನಿಗಳು ಸ್ಯಾಕ್ಸೊಫೋನ್‌ ಕಾರ್ಯಕ್ರಮ ನೀಡಿದ ಎಂ. ಎಸ್‌. ಲಾವಣ್ಯ ಹಾಗೂ ಸುಬ್ಬಲಕ್ಷ್ಮೀ ಸಹೋದರಿಯರನ್ನು ಚೆನ್ನೈ ಮೂಲದವರು ಎಂದು ಪರಿಚಯಿಸಿವೆ. ವಾಸ್ತವ ಸಂಗತಿ ಎಂದರೆ ಇವರಿಬ್ಬರೂ ಮಂಗಳೂರು ಮೂಲದವರು. ಇಲ್ಲಿ  ಟೀವಿ ವಾಹಿನಿಯವರ ತಪ್ಪು ತಿಳಿವಳಿಕೆಯೋ ಅಥವಾ ಸ್ವತಃ ಕಲಾವಿದರೇ ಆ ರೀತಿಯ ವಿಳಾಸ ತಿಳಿಸುವುದಕ್ಕೆ ಅಪೇಕ್ಷಿಸಿದ್ದರೊ ಗೊತ್ತಿಲ್ಲ.

ಇತ್ತೀಚೆಗೆ ನಾಲ್ಕಾರು ವರ್ಷದಿಂದ ಚೆನ್ನೈನಲ್ಲಿ ಹೆಚ್ಚಿನ ಶಿಕ್ಷಣ ಕಲಿಯುತ್ತಿದ್ದು, ಅಲ್ಲಿ ನೆಲೆಸಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ  ದಶಕ ಅವಧಿಯಲ್ಲಿ  ಮೃದಂಗ ಕಲಾವಿದರಾದ ಎಂ. ಆರ್‌. ಸಾಯಿನಾಥ್‌ ಈ ಸಹೋದರಿಯರ ತಂದೆ. ಸಾಯಿನಾಥ್‌ ಕೂಡ  ಇದೇ ಕಾರ್ಯಕ್ರಮದಲ್ಲಿ  ಇದ್ದರು. ಮಂಗಳೂರಿನಲ್ಲೇ ಹುಟ್ಟಿದ ಸಹೋದರಿಯರು ಆರಂಭಿಕ ಕಾರ್ಯಕ್ರಮಗಳನ್ನು ಮಂಗಳೂರು ಹಾಗೂ ಮೈಸೂರಿನಲ್ಲೇ  ನೀಡಿದರೂ  ಇದೀಗ ಚೆನ್ನೈನವರಾಗಿದ್ದಾರೆ !

ವೃತ್ತಿಪರವಾಗಿ ಮಹತ್ವಾಕಾಂಕ್ಷೆ ಹೊಂದಿರುವ  ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರೆಲ್ಲ  ತಾವು ಕನ್ನಡಿಗರು ಅಥವಾ ಕರ್ನಾಟಕದವರು ಎಂದುಕೊಳ್ಳುವುದಕ್ಕಿಂತ ತಮಗೆ ತಮಿಳು ಬರುತ್ತದೆ, ತಾವು ಚೆನ್ನೈನವರು ಎಂದೇ ಹೇಳಿಕೊಳ್ಳುವುದಕ್ಕೆ ಇಷ್ಟಪಡುವುದು ಹೊಸ ಸಂಗತಿಯಲ್ಲ. ಆಗಲೆ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಕನ್ನಡ ಮೂಲದ ಕರ್ನಾಟಕ ಶಾಸ್ತ್ರೀಯ ಸಂಗೀತ  ಕೆಲವು ಕಲಾವಿದರು ತಮ್ಮ ಹೆಸರಿನ ಮುಂದೆ "ಚೆನ್ನೈ' ಎಂದು ಹಾಕಿಕೊಳ್ಳುತ್ತಾರೆ. ಕರ್ನಾಟಕ ಸಂಗೀತದ ಪಿತಾಮಹ ಪುರಂದರ ದಾಸರು ಎಂದು ಹೇಳಲಾಗುತ್ತದೆಯಾದರೂ, ಕರ್ನಾಟಕದ  ಸಂಗೀತಗಾರರಿಗೆ ತಾವು ಕರ್ನಾಟಕದವರು ಎಂದು ಹೇಳಿಕೊಳ್ಳುವುದಕ್ಕೆ ಕೀಳರಿಮೆ.

ಇದೇ ರೀತಿ ಹಲವು ನಿದರ್ಶನ ನೀಡಬಹುದು. ೨೦೦೮ರಲ್ಲಿ ಬೂಕರ್‌ ಪ್ರಶಸ್ತಿ ಪಡೆದ  ಇಂಗ್ಲೀಷ್‌ ಲೇಖಕ ಅರವಿಂದ ಅಡಿಗ ಮಂಗಳೂರಿನವರು, ಕನ್ನಡಿಗರು ಎಂದು ನಾವು ಗುರುತಿಸುತ್ತೇವೆ. ಅರವಿಂದರ ಅಜ್ಜ  ಕೆ.ಎಸ್‌. ಅಡಿಗ ಪ್ರತಿಷ್ಟಿತ ಕರ್ಣಾಟಕ ಬ್ಯಾಂಕ್‌ನ  ಸಂಸ್ಥಾಪಕರಲ್ಲಿ, ಅರವಿಂದರ ತಾಯಿ ಚೆನ್ನೈವರಾಗಿದ್ದರೂ, ಈತ ಬಾಲ್ಯದಲ್ಲಿ  ಓದಿದ್ದು ಮಂಗಳೂರಿನ ಸೇಂಟ್‌ ಅಲೋಷಿಯಸ್‌ ಕಾಲೇಜಿನಲ್ಲಿ  ಎಂಬುದು ಕರ್ನಾಟಕದವರು ಹೆಮ್ಮೆ. ಆದರೆ ಬೂಕರ್‌ ಪ್ರಶಸ್ತಿ ಪಡೆದ "ವೈಟ್‌ ಟೈಗರ್‌' ಕಾದಂಬರಿಯ ಮೊದಲ ಪುಟದಲ್ಲಿ  ಅರವಿಂದ ಅಡಿಗ ಚೆನ್ನೈನವರು ಎಂಬುದಾಗಿ ಪರಿಚಯಿಸಲಾಗಿದೆ.

ಅಂತಾರಾಷ್ಟ್ರೀಯ ಖ್ಯಾತಿಯ ಹಾರ್ಪರ್‌ ಕೊಲಿನ್‌ ಮುದ್ರಣಾಲಯ ಅರವಿಂದ ಅಡಿಗರನ್ನು  ಪರಿಚಯಿಸುವಾಗ ಅವರ ಕರ್ನಾಟಕದ ಮೂಲವನ್ನೇ ಉಲ್ಲೇಖಿಸಿಲ್ಲ, ಆ ಬಗ್ಗೆ  ಅಡಿಗರೂ  ಪ್ರಕಾಶಕರಿಗೆ ತಿಳಿಸಿದಂತಿಲ್ಲ. ಯಾಕೆಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ  ಕನ್ನಡಕ್ಕಿಂತ ತಮಿಳಿಗಿರುವ ಮಾರುಕಟ್ಟೆ  ದೊಡ್ಡದು  ಎಂಬ ಉದ್ದೇಶ ಇದ್ದಂತೆ ತೋರುತ್ತದೆ.

ಇಲ್ಲಿ  ಟೀವಿ ವಾಹಿನಿಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಬೆಳದರೂ ಕರ್ನಾಟಕದವರು ಎಂದು ಹೇಳಿಕೊಳ್ಳುವುದಕ್ಕೆ ಇಷ್ಟಪಡದ ಕನ್ನಡಿಗರನ್ನಷ್ಟೇ ದೂರಿದರೆ ಸಮಸ್ಯೆ ಪರಿಹಾರ ಆಗುವುದಿಲ್ಲ. .

ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವ ಕನ್ನಡಿಗರಿಗೆ ಪ್ರಾದೇಶಿಕತೆ ಕೆಲವೊಮ್ಮೆ ತೊಡಕಾಗುತ್ತದೆ ಎಂಬುದು ನಿಜ. ಕರ್ನಾಟಕದ ಪಾರಂಪರಿಕ ಶಕ್ತಿಯನ್ನು ಹೀರಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಕನ್ನಡಿಗರಲ್ಲಿ  ನಾಡು ನುಡಿಯ ಬಗೆಗಿನ ಕೀಳರಿಮೆ ತೊಡೆದು, ಸ್ವಾಭಿಮಾನ ಬೆಳೆಸುವ ನಿಟ್ಟಿನಲ್ಲೂ  ಪ್ರಯತ್ನ ನಡೆಯಬೇಕಾದ ತುರ್ತು ಕಾಣುತ್ತಿದೆ. ಕರ್ನಾಟಕವನ್ನು ಮೀರಿ ಬೆಳೆಯುವ ವ್ಯಕ್ತಿಗಳಿಗೆ ನಾವು ಪ್ರೋತ್ಸಾಹಿಸುತ್ತಲೇ ಅವರಲ್ಲಿನ ಕೀಳರಿಮೆಯನ್ನು ತೊಡೆದುಹಾಕುವ ವಿದಾಯಕ ಕೆಲಸ ಆಗಬೇಕಿದೆ. ಆ ಮೂಲಕ ನಾಡು ನುಡಿಯನ್ನು ಬೆಳೆಸಬೇಕಾಗಿದೆ.

-ಸದಾನಂದ ಹೆಗಡೆ ಹರಗಿ

Related Posts
Previous
« Prev Post